Homeಕರ್ನಾಟಕಕರ್ನಾಟಕ ಕೇಂದ್ರಿತ ಮಾದರಿ ರಾಷ್ಟ್ರೀಯತೆ ಮತ್ತು ರಾಜಕೀಯಕ್ಕೆ ಕಾಲ ಪಕ್ವವಾಗಿದೆ: ಎ.ನಾರಾಯಣ

ಕರ್ನಾಟಕ ಕೇಂದ್ರಿತ ಮಾದರಿ ರಾಷ್ಟ್ರೀಯತೆ ಮತ್ತು ರಾಜಕೀಯಕ್ಕೆ ಕಾಲ ಪಕ್ವವಾಗಿದೆ: ಎ.ನಾರಾಯಣ

ಹಿಂದೂಗಳೇ ಬಹುಸಂಖ್ಯೆಯಲ್ಲಿ ಇದ್ದರೂ ಹಿಂದೂ ಧರ್ಮದ ಹೆಸರಿನಲ್ಲಿ ಒಂದು ರಾಜಕೀಯ ಪಕ್ಷ ಕಟ್ಟಲು ಇಷ್ಟು ಸಮಯ ಬೇಕಾಯಿತು ಎಂದರೆ ಕನ್ನಡಿಗರೇ ಇದ್ದ ಒಂದು ರಾಜ್ಯದಲ್ಲಿ ಕನ್ನಡ ಭಾಷೆಯ ಸುತ್ತ ಒಂದು ರಾಜಕೀಯ ಕಟ್ಟಲು ಈವರೆಗೆ ಸಾಧ್ಯವಾಗಿಲ್ಲ ಎನ್ನುವುದರಲ್ಲಿ ಆಶ್ಚರ್ಯವೇನೂ ಇಲ್ಲ.

- Advertisement -
- Advertisement -

ಕೆಲವೊಮ್ಮೆ ಕೆಲವು ವಾದಗಳು, ಆಗ್ರಹಗಳು, ಸಲಹೆಗಳು ಇತ್ಯಾದಿಗಳೆಲ್ಲಾ ಹಳಸಲು ಎನ್ನುವಷ್ಟು ಪುನಾರಾವರ್ತನೆ ಆಗಿರುತ್ತವೆ. ಹಾಗೆ ಹಳಸಲಾಗಿದೆಯೋ ಎನ್ನುವಷ್ಟರ ಮಟ್ಟಿಗೆ ಮತ್ತೆ ಮತ್ತೆ ಕಳೆದ ನಾಲ್ಕು ದಶಕಗಳಲ್ಲಿ ಕರ್ನಾಟಕದಲ್ಲಿ ಕೇಳಿಬಂದ ಒಂದು ಆಗ್ರಹವೆಂದರೆ ಕರ್ನಾಟಕಕ್ಕೆ ಕರ್ನಾಟಕದ್ದೇ ಆದ ಒಂದು ರಾಜಕೀಯ ಪಕ್ಷ ಬೇಕು ಎನ್ನುವುದು. ಅಥವಾ ಕನ್ನಡ ಭಾಷೆಯ ಆಧಾರದಲ್ಲಿ ಹೊಸ ರಾಷ್ಟ್ರೀಯತೆಯೊಂದನ್ನು ಸಂವಿಧಾನದ ಗೆರೆಮೀರದೇ ಬೆಳೆಸಬೇಕು ಎನ್ನುವುದು.

ಇದು ಹಳೆಯ ಬೇಡಿಕೆ ನಿಜ. ಆದರೆ, ತೀರಾ ಹಸಿದವರಿಗೆ ಹಳಸಲಾದದನ್ನು ಕೂಡಾ ತಿರಸ್ಕರಿಸುವಷ್ಟು ಸ್ವಾತಂತ್ರ್ಯ ಇರುವುದಿಲ್ಲ. ಕರ್ನಾಟಕಕ್ಕೆ ಈಗ ಅಂತಹ ಒಂದು ಹಸಿವಿನ ಅರಿವಾಗಬೇಕಾದ ಕಾಲ. ಯಾಕೆಂದರೆ, ಧರ್ಮಾಧಾರಿತ ರಾಷ್ಟ್ರೀಯತೆಯ ಹೆಸರಿನಲ್ಲಿ, ಪ್ರಬಲ ಕೇಂದ್ರ ಸರ್ಕಾರವೊಂದನ್ನು ಪ್ರತಿಷ್ಠಾಪಿಸುವ ಹೆಸರಿನಲ್ಲಿ ಕರ್ನಾಟಕದ ಅನ್ನದ ಬಟ್ಟಲನ್ನು ಹಲವು ರೀತಿಯಲ್ಲಿ ಬರಿದುಗೊಳಿಸುವ ಕೆಲಸ ಯಥೇಚ್ಛವಾಗಿ ಈಗ ನಡೆಯುತ್ತಿದೆ. ಹಲವು ವರ್ಷಗಳಿಂದ ಕಾಣಿಸುತ್ತಾ ಬಂದಿರುವ ಮಲತಾಯಿ ಧೋರಣೆ, ಕಡೆಗಣನೆ, ವಿವಿಧ ರೀತಿಯ ಹೇರಿಕೆಗಳು, ಅವಮಾನಗಳು ಇತ್ಯಾದಿಗಳೆಲ್ಲಾ ಇತ್ತೀಚೆಗಿನ ದಿನಗಳಲ್ಲಿ ಮತ್ತೂ ಮತ್ತೂ ಹೆಚ್ಚಾಗುತ್ತಿವೆ. ಹಾಗಿದ್ದರೂ, ಕರ್ನಾಟಕ ಕೇಂದ್ರಿತ ರಾಜಕೀಯ ಶಕ್ತಿಯೊಂದನ್ನು ಕಟ್ಟಬೇಕು ಅಂತ ಕರ್ನಾಟಕದ ಜನರಿಗೆ ಯಾಕೆ ಅನ್ನಿಸುತ್ತಿಲ್ಲ? ಹಸಿವು ಆಗಬೇಕಾದ ಕಾಲಕ್ಕೆ ಅದು ಅನುಭವಕ್ಕೆ ಬರುವುದಿಲ್ಲ ಎಂದಾದರೆ ಅದೊಂದು ರೋಗ ಲಕ್ಷಣ ಎಂದು ಅರ್ಥ. ಇದಕ್ಕೆ ಮದ್ದರೆಯದಿದ್ದರೆ, ಕರ್ನಾಟಕ ಇನ್ನಷ್ಟೂ ಕೃಶವಾಗಲಿದೆ. ಈ ಕ್ಷೀಣತೆ ಏಕಾಏಕಿ ರಾಜ್ಯದ ಭೌತಿಕ, ಆರ್ಥಿಕ ಸ್ಥಿತಿಯನ್ನು ಬಾಧಿಸದೆ ಇರಬಹುದು. ಸದ್ಯಕ್ಕೆ ಘಾಸಿಯಾಗುವುದು ರಾಜ್ಯದ ಸ್ವಾಭಿಮಾನಕ್ಕೆ. ಇಡೀ ದಕ್ಷಿಣ ಭಾರತದಲ್ಲೇ ದೆಹಲಿಯ ದೊರೆಗಳಿಗೆ ಹಲವು ರೀತಿಯಲ್ಲಿ ಕಪ್ಪ ಒಪ್ಪಿಸಿ ಕೈಕಟ್ಟಿ ನಿಲ್ಲುವ ದೈನೇಸಿ ಸಾಮಂತನ ಸ್ಥಿತಿಯನ್ನು ಕರ್ನಾಟಕ ಮನಸಾ ಒಪ್ಪಿಕೊಂಡು ಮುಂದುವರಿದದ್ದೇ ಆದರೆ ಅದರ ದುಷ್ಪರಿಣಾಮ ಜನಜೀವನದ ಎಲ್ಲಾ ಆಯಾಮಗಳಿಗೂ ತಟ್ಟಲಿದೆ. ಇವೆಲ್ಲವೂ ರಾಜ್ಯವನ್ನು ಬಹುಕಾಲ ಬಾಧಿಸಲಿವೆ.

ಕರ್ನಾಟಕಕ್ಕೇ ಕರ್ನಾಟಕದ್ದೇ ಆದ ರಾಜಕೀಯ ಶಕ್ತಿಯೊಂದು ಬೇಕು ಮತ್ತು ಅದನ್ನು ಕರ್ನಾಟಕದ ಪ್ರಾದೇಶಿಕ ಹಿತಾಸಕ್ತಿಯ ಸುತ್ತ ಕಟ್ಟಬೇಕು ಎನ್ನುವ ಹಳೆಯ ಆಗ್ರಹದ ವಿಷಯಕ್ಕೆ ಮತ್ತೆ ಬರೋಣ. ಈ ಆಗ್ರಹ ನ್ಯಾಯೋಚಿತವೂ, ಸಮಯೋಚಿತವೂ ಆಗಿದೆ ಎನ್ನುವುದರಲ್ಲಿ ಯಾರಿಗೂ ಅನುಮಾನವಿಲ್ಲ. ಹಾಗಿರುವಾಗ ಈ ಆಗ್ರಹ ಸಮಗ್ರ ಜನತೆಯ ಆಗ್ರಹವಾಗದೆ ಕೇವಲ ಕೆಲವೇ ಚಿಂತಕರ ಬರಹಗಳಲ್ಲಿ ಮಾತ್ರ ಯಾಕೆ ಉಳಿದಿದೆ? ರಾಜಕೀಯದ ಅಂಚಿನಲ್ಲಿ ವ್ಯವಹರಿಸುವ ಕೆಲವೇ ಕೆಲವು ಉತ್ಸಾಹಿಗಳ ಭಾಷಣಗಳಿಗಷ್ಟೇ ಯಾಕೆ ಈ ಆಗ್ರಹ ಸೀಮಿತವಾಗಿದೆ? ಇದು ಇಡೀ ಕನ್ನಡ ಸಮೂಹದ ಆಗ್ರಹವಾಗಿ ಯಾಕೆ ರೂಪುಗೊಂಡಿಲ್ಲ? ಎಷ್ಟು ಕಾಲ ಕರ್ನಾಟಕ ಕೇಂದ್ರಿತ ರಾಜಕೀಯದ ದಾಹ ಇಡೀ ಕನ್ನಡ ಜನಸಮೂಹದ ದಾಹ ಆಗುವುದಿಲ್ಲವೋ ಅಷ್ಟು ಕಾಲ ಈ ಆಗ್ರಹ ಕೇವಲ ಸೈದ್ಧಾಂತಿಕ ನೆಲೆಯಲ್ಲೇ ಉಳಿಯುತ್ತದೆ.

ಹಾಗಾದರೆ ಇಂತಹದ್ದೊಂದು ವ್ಯಾಪಕ ಜನಾಗ್ರಹವನ್ನು ಸೃಷ್ಟಿಸಲು ಸಾಧ್ಯವಿಲ್ಲ ಎನ್ನುವುದು ಕನ್ನಡಿಗರ ಮನಸ್ಥಿತಿಯೇ? ಹೌದು ಎಂದಾದಲ್ಲಿ ಈ ಮನಸ್ಥಿತಿಯನ್ನು ಬದಲಾಯಿಸಬೇಕಾದ ಕಾಲ ಬಂದಿದೆ. ಕರ್ನಾಟಕ ಕೇಂದ್ರಿತ ರಾಜಕೀಯ ಶಕ್ತಿಯೊಂದರ ಉಗಮಕ್ಕೆ ಸಾವಿರ ತೊಡಕುಗಳು ಇರಬಹುದು. ಹಾಗಂತ ಆ ತೊಡಕುಗಳನ್ನು ನಿವಾರಿಸಲು ಸಾಧ್ಯವೇ ಇಲ್ಲ ಎನ್ನುವ ಅಭಿಪ್ರಾಯವನ್ನು ಯಾರಾದರೂ ಹೊಂದಿದ್ದರೆ ಅದೂ ಸರಿಯೆನಿಸುವುದಿಲ್ಲ. ಯಾರೋ ಹೇಳಿದ ಮಾತೊಂದು ನೆನಪಾಗುತ್ತಿದೆ. ‘ರಾಜಕೀಯ ಎನ್ನುವುದು ಸಾಧ್ಯತೆಗಳ ಕಲೆ’ ಅಂತ. Politics is the Art of the Possible.

ರಾಜ್ಯ ಮಟ್ಟದಲ್ಲಿ, ಭಾಷಾ ಕೇಂದ್ರಿತ ರಾಷ್ಟ್ರೀಯತೆಯನ್ನು ಹುಟ್ಟುಹಾಕುವುದು ರಾಷ್ಟ್ರದ ಹಿತಾಸಕ್ತಿಗೆ ಮಾರಕ ಎಂದು ಒಂದು ಅಭಿಪ್ರಾಯವನ್ನು ಸ್ವಾತಂತ್ರ್ಯ ಬಂದಾಗಿನಿಂದಲೂ ಹುಟ್ಟು ಹಾಕಲಾಗಿದೆ. ಕರ್ನಾಟಕದ ಜನ ಈ ಅಭಿಪ್ರಾಯವನ್ನು ಬೇರೆ ಬೇರೆ ಕಾರಣಗಳಿಗಾಗಿ ಹೆಚ್ಚು ನಂಬಿದ್ದು ಕೂಡಾ ದಕ್ಷಿಣ ರಾಜ್ಯಗಳ ಪೈಕಿ ಈ ರಾಜ್ಯದಲ್ಲಿ ಪ್ರಾದೇಶಿಕ ರಾಜಕೀಯವೊಂದು ನೆಲೆಗೊಳ್ಳದೆ ಇರಲು ಕಾರಣವಾಗಿರಬಹುದೋ ಏನೋ. ಸ್ಥಳೀಯ ರಾಷ್ಟ್ರೀಯತೆಯನ್ನು ಹುಟ್ಟುಹಾಕುವುದು ಭಾರತದ ಸಮಗ್ರ ರಾಷ್ಟ್ರೀಯತೆಗೆ ಮಾರಕ ಎನ್ನುವ ಅಭಿಪ್ರಾಯವೇ ತಪ್ಪು. ವಾಸ್ತವದಲ್ಲಿ ಇಂತಹ ವಿವಿಧ ರಾಷ್ಟ್ರೀಯತೆಗಳು ಸಮ್ಮಿಲನಗೊಂಡೇ ಭಾರತೀಯ ರಾಷ್ಟ್ರೀಯತೆ ಇರಬೇಕು ಎನ್ನುವುದು ಸಂವಿಧಾನದ ಆಶಯ. ಆದುದರಿಂದ ಯಾವುದೇ ಕಾರಣಕ್ಕೂ ಭಾಷಾ ಕೇಂದ್ರಿತ, ರಾಜ್ಯಮಟ್ಟದ ರಾಷ್ಟ್ರೀಯತೆ ಸಂವಿಧಾನಕ್ಕೆ ವಿರೋಧಿಯಲ್ಲ. ಬದಲಿಗೆ, ಈಗ ಆಗುತ್ತಿರುವಂತೆ ಒಂದು ದೇಶ, ಒಂದು ಭಾಷೆ, ಒಂದು ಪಕ್ಷ, ಒಂದು ಧರ್ಮ, ಒಂದು ರಾಷ್ಟ್ರ ಎನ್ನುವ ರೀತಿಯಲ್ಲಿ ರಾಷ್ಟ್ರೀಯತೆಯನ್ನು ಕಟ್ಟಲು ಕೆಲವರು ಹೊರಟಿರುವುದು ದೇಶವಿರೋಧಿಯೂ, ಸಂವಿಧಾನ ವಿರೋಧಿಯೂ, ಕನ್ನಡ ವಿರೋಧಿಯೂ ಆದ ನಡವಳಿಕೆ.

ಭಾರತ ದೇಶ ರಾಜ್ಯಗಳಿಂದ ಆಗಿರುವ ದೇಶವೇ ಹೊರತು ಇಲ್ಲಿ ದೇಶದಿಂದಾಗಿ ರಾಜ್ಯಗಳಾಗಿಲ್ಲ ಎನ್ನುವುದು ಚಾರಿತ್ರಿಕ ವಾಸ್ತವ. ಆದರೆ ಈ ಸತ್ಯಕ್ಕೆ ವಿರುದ್ಧವಾದ ಒಂದು ರಾಷ್ಟ್ರೀಯತೆಯನ್ನು ಹುಟ್ಟುಹಾಕಿ ಕೆಲವರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯಗಳ ನಡುವೆ ಒಂದು ರೀತಿಯ ಗೌರವಯುತ ಹೊಂದಾಣಿಕೆ ಇದ್ದಷ್ಟು ಕಾಲ ಸ್ಥಳೀಯತೆಯನ್ನು ಬಿಟ್ಟು ಕಟ್ಟಿದ ರಾಷ್ಟ್ರೀಯತೆ ಒಂದು ದೊಡ್ಡ ಸಮಸ್ಯೆ ಅಂತ ಯಾರಿಗೂ ಅನ್ನಿಸಲಿಲ್ಲ. ಈಗ ಹಾಗಲ್ಲ. ರಾಷ್ಟ್ರೀಯ ಪಕ್ಷವೊಂದು ತನ್ನ ಸೈದ್ಧಾಂತಿಕ ಮೂಗಿನ ನೇರಕ್ಕೆ ಎಲ್ಲವನ್ನೂ ಮುರಿದು ಕಟ್ಟಲು ಹೊರಟಿರುವ ಸ್ಥಿತಿಯಲ್ಲಿ ಕರ್ನಾಟಕದಂತಹ ರಾಜ್ಯಗಳು ತೀವ್ರವಾದ ಅಸಡ್ಡೆಗೆ ಮತ್ತು ಅನ್ಯಾಯಕ್ಕೆ ಒಳಗಾಗಿವೆ. ಸಾಂವಿಧಾನಿಕವಾಗಿ ಬರಬೇಕಾಗಿರುವ ತೆರಿಗೆಯ ಪಾಲಿನ ನಿರಾಕರಣೆಯಿಂದ ಹಿಡಿದು, ಕನ್ನಡದ ಮೇಲೆ ಹಿಂದಿಯ ಪಾರಮ್ಯ ಹೇರುವಷ್ಟರ ಮಟ್ಟಿಗೆ ಈ ರಾಜ್ಯವಿರೋಧಿ ಧೋರಣೆ ಮುಂದುವರಿದಿದೆ. ಎಲ್ಲವನ್ನೂ ಇಲ್ಲಿ ಮತ್ತೊಮ್ಮೆ ಪುನರಾವರ್ತಿಸುವ ಅಗತ್ಯ ಇಲ್ಲ. ಇಷ್ಟೆಲ್ಲಾ ಆದರೂ ಕರ್ನಾಟಕ ಕೇಂದ್ರಿತ ರಾಜಕೀಯವೊಂದು ಜನಮನದಲ್ಲಿ ಯಾಕೆ ಜಾಗೃತವಾಗುವುದಿಲ್ಲ ಎನ್ನುವ ಪ್ರಶ್ನೆಯನ್ನು ಮಾತ್ರ ಈಗ ಗಂಭೀರವಾಗಿ ಮತ್ತೊಮೆ ಕೇಳಬೇಕಿದೆ.

ಇತಿಹಾಸವನ್ನು ನೋಡಿದರೆ ಒಂದಂಶ ಸ್ಪಷ್ಟವಾಗುತ್ತದೆ. ಈ ದೇಶದಲ್ಲಿ ಯಾವ ಪ್ರಜ್ಞೆಯೂ ತನ್ನಿಂದ ತಾನೇ ಜಾಗೃತವಾಗಿದ್ದು ಅಂತ ಇಲ್ಲ. ಈಗಿನ ಹಿಂದೂ ರಾಷ್ಟ್ರೀಯತೆಯ ತತ್ವವನ್ನು ಜನಮನದಲ್ಲಿ ಬಿತ್ತಲು ಸ್ವಾತಂತ್ರ್ಯ ಬಂದು ಸುಮಾರು ಏಳು ದಶಕಗಳಷ್ಟು ಕಾಲಾವಧಿ ಬೇಕಾಯಿತು ಎನ್ನುವುದನ್ನು ಮರೆಯಬಾರದು. ಹಿಂದೂಗಳೇ ಬಹುಸಂಖ್ಯೆಯಲ್ಲಿ ಇದ್ದರೂ ಹಿಂದೂ ಧರ್ಮದ ಹೆಸರಿನಲ್ಲಿ ಒಂದು ರಾಜಕೀಯ ಪಕ್ಷ ಕಟ್ಟಲು ಇಷ್ಟು ಸಮಯ ಬೇಕಾಯಿತು ಎಂದರೆ ಕನ್ನಡಿಗರೇ ಇದ್ದ ಒಂದು ರಾಜ್ಯದಲ್ಲಿ ಕನ್ನಡ ಭಾಷೆಯ ಸುತ್ತ ಒಂದು ರಾಜಕೀಯ ಕಟ್ಟಲು ಈವರೆಗೆ ಸಾಧ್ಯವಾಗಿಲ್ಲ ಎನ್ನುವುದರಲ್ಲಿ ಆಶ್ಚರ್ಯವೇನೂ ಇಲ್ಲ. ಕೊನೆಗೂ ಹಿಂದೂ ರಾಷ್ಟ್ರೀಯತೆಯನ್ನು ಈ ದೇಶದಲ್ಲಿ ನೇರಾನೇರವಾದ ಮಾರ್ಗದಲ್ಲಿ ಸಾಗಿ ಕಟ್ಟಿದ್ದಲ್ಲ. ಏನೇನೋ ಮುರಿದು ಅದನ್ನು ಕಟ್ಟಲಾಯಿತು. ಹಲವಾರು ಸುಳ್ಳು-ಮಿಥ್ಯೆಗಳನ್ನು ಹುಟ್ಟುಕಾಕುವ ಮೂಲಕ ಅದನ್ನು ಕಟ್ಟಲಾಯಿತು. ಕೃತಕವಾದ ವೈರಿ ಸಮೂಹವೊಂದನ್ನು ಸೃಷ್ಟಿಸುವ ಮೂಲಕ ಅದನ್ನು ಕಟ್ಟಲಾಯಿತು. ಎಲ್ಲದಕ್ಕಿಂತ ಮುಖ್ಯವಾಗಿ ಅಪಾರವಾದ ತಾಳ್ಮೆಯ ಮೂಲಕ ಅದನ್ನು ಕಟ್ಟಲಾಯಿತು. ಇದನ್ನೆಲ್ಲಾ ಇಲ್ಲಿ ಹೇಳಿದ್ದು ಕನ್ನಡ ರಾಷ್ಟ್ರೀಯತೆಯನ್ನು ಜಾಗೃತಗೊಳಿಸುವುದಕ್ಕೂ ಈ ರೀತಿಯ ವಾಮಮಾರ್ಗ ಹಿಡಿಯಬೇಕು ಎಂದು ಸೂಚಿಸುವುದಕ್ಕಲ್ಲ. ಬದಲಾಗಿ ಹಿಂದೂ ರಾಷ್ಟ್ರೀಯತೆಯನ್ನು ದೇಶವ್ಯಾಪಿಯಾಗಿ ಈಗಿನ ಪ್ರಮಾಣಕ್ಕಾದರೂ ಹರಡುವ ಕೆಲಸ ಸಂಬಂಧಪಟ್ಟವರಿಗೆ ಸಲೀಸಾಗಿ ಏನೂ ಇರಲಿಲ್ಲ ಎನ್ನುವ ವಿಷಯವನ್ನು ಮನಗಾಣಿಸಲು.

ಕನ್ನಡದ ಸುತ್ತ ರಾಷ್ಟ್ರೀಯತೆಯನ್ನು ಕಟ್ಟುವ ಕೆಲಸವೂ ಇಂತಹಾ ಅಪಾರ ಪರಿಶ್ರಮವನ್ನು ಬೇಡುತ್ತದೆ. ಮಾತ್ರವಲ್ಲ ಅದಕ್ಕೊಂದು ಕಾರ್ಯತಂತ್ರವನ್ನು ಆವಿಷ್ಕರಿಸುವ ಅಗತ್ಯವೂ ಇದೆ. ಹಾಗಂತ ಹಿಂದೂ ರಾಷ್ಟ್ರೀಯವಾದಿಗಳು ಮಾಡಿದಂತೆ ಮಿಥ್ಯೆಗಳನ್ನು, ಸುಳ್ಳುಗಳನ್ನು ಮತ್ತು ಹಿಂಸೆಯನ್ನು ಬೆರೆಸಿ ಹೆಣೆದ ಕಾರ್ಯತಂತ್ರ ಕರ್ನಾಟಕದಲ್ಲಿ ಭಾಷಾ ಕೇಂದ್ರಿತ ರಾಷ್ಟ್ರೀಯತೆ ಕಟ್ಟಲು ಮಾದರಿಯಾಗಬಾರದು. ಸುಳ್ಳಿನಿಂದ ಕಟ್ಟಿದ ಯಾವುದೂ ಸುದೀರ್ಘವಾಗಿ ಬಾಳಲಾರದು. ಕನ್ನಡ-ಕರ್ನಾಟಕದ ಪರಿಕಲ್ಪನೆಯ ಸುತ್ತ ಹುಟ್ಟುಹಾಕಬೇಕಾದ ರಾಷ್ಟ್ರೀಯತೆ ಮತ್ತು ರಾಜಕೀಯ ಶಕ್ತಿಯನ್ನು 21ನೆಯ ಶತಮಾನದ ಅಗತ್ಯಗಳಿಗೆ ತಕ್ಕಂತೆ, ಮಾನವೀಯ ಮಾರ್ಗಗಳ ಮೂಲಕ ರೂಪಿಸುವ ತಂತ್ರಗಾರಿಕೆಯೊಂದನ್ನು ಹೆಣೆಯಬೇಕು. ಇಂತಹ ಹೃದಯ ಮತ್ತು ಮಿದುಳುಗಳಿಗಾಗಿ ಕನ್ನಡದ ಮಣ್ಣು ಕಾಯುತ್ತಿದೆ. ಈ ಹಿಂದೆ ಕರ್ನಾಟಕದಲ್ಲಿ ಮಾಡಿದ ಇಂತಹ ಪ್ರಯತ್ನಗಳೆಲ್ಲಾ ವಿಫಲವಾಗಿದೆ ಅಂತ ಕೆಲವರು ಆಗಾಗ ಹೇಳುವುದಿದೆ. ಇದು ಕೂಡಾ ತಪ್ಪು ಅಭಿಪ್ರಾಯ. ಹಿಂದೆ ಯಾವತ್ತೂ ಪ್ರಾದೇಶಿಕ ರಾಷ್ಟ್ರೀಯತೆಯೊಂದನ್ನು ಹುಟ್ಟುಹಾಕುವ ಕೆಲಸ ಕರ್ನಾಟಕದಲ್ಲಿ ಗಂಭೀರವಾಗಿ ನಡೆಯಲೇ ಇಲ್ಲ. ಇದನ್ನು ಈಗಾಗಲೇ ಹಲವರು ಹಲವು ವೇದಿಕೆಗಳಲ್ಲಿ ಸ್ಪಷ್ಟಪಡಿಸಿದ್ದಾರೆ.

ನೆರೆಯ ತಮಿಳುನಾಡಿನಲ್ಲಿ ದ್ರಾವಿಡ ಚಳವಳಿಗಳ ಮೂಲಕ ಹುಟ್ಟಿಕೊಂಡ ಯಶಸ್ವಿ ಪ್ರಾದೇಶಿಕ ರಾಜಕೀಯ, ಆಮೇಲೆ ಜಾತೀಯತೆ ಜಾಡಿನಲ್ಲಿ ಸಾಗಿ, ಸಿನೆಮಾ ತಾರೆಯರ ವರ್ಚಸ್ಸನ್ನು ಅವಲಂಬಿಸಿ ಈಗ ಕವಲು ದಾರಿಯಲ್ಲಿ ನಿಂತಿದೆ. ಆಂಧ್ರಪ್ರದೇಶದಲ್ಲೂ ವರ್ಚಸ್ವೀ ಸಿನೆಮಾ ನಟನೊಬ್ಬ ರಾಷ್ಟ್ರೀಯ ಪಕ್ಷಗಳಿಂದ ತೆಲುಗು ಅಭಿಮಾನಕ್ಕೆ ಧಕ್ಕೆಯಾಗಿದೆ ಎಂಬ ಸಂಗತಿಯನ್ನು ಮುಂದಿರಿಸಿ ಪ್ರಾದೇಶಿಕ ರಾಜಕೀಯವನ್ನು ಹುಟ್ಟುಹಾಕಿ ಯಶಸ್ವಿಯಾದರೂ ಅದೂ ಈಗ ಕವಲು ದಾರಿಯಲ್ಲಿದೆ. ಕಾರಣ ಅದು ಅತ್ತ ಸಂಪೂರ್ಣ ಪ್ರಾದೇಶಿಕ ರಾಜಕಾರಣವೂ ಆಗದೆ ಇತ್ತ ಪೂರ್ತಿ ವ್ಯಕ್ತಿ ಕೇಂದ್ರಿತ ರಾಜಕಾರಣವೂ ಆಗದೆ ಬೆಳೆದದ್ದು. ಹುಟ್ಟುಹಾಕಿದ ವ್ಯಕ್ತಿಯ ಆಚೆಗೆ ಅಲ್ಲಿನ ಪ್ರಾದೇಶಿಕ ರಾಜಕೀಯ ಉಳಿಯಿತಾದರೂ ಈಗ ಅದು ಹೆಚ್ಚು ವ್ಯಕ್ತಿ ಕೇಂದ್ರಿತವಾಗುವ ಹಾದಿಯಲ್ಲಿದೆ. ಪ್ರಾದೇಶಿಕ ರಾಷ್ಟ್ರೀಯ ಪ್ರಜ್ಞೆ ಎನ್ನುವುದು ಅಲ್ಲಿ ಗೌಣವಾಗುತ್ತಿದೆ.

ಇನ್ನು ತೆಲಂಗಾಣದ ಕತೆಯೂ ಅಷ್ಟೇ. ಅಲ್ಲಿ ಪ್ರಾದೇಶಿಕ ಪಕ್ಷ ಹುಟ್ಟಿಕೊಂಡದ್ದು ಮತ್ತು ಅಧಿಕಾರ ಹಿಡಿದದ್ದು ಪ್ರತ್ಯೇಕ ತೆಲಂಗಾಣದ ಬೇಡಿಕೆಯೊಂದಿಗೆ. ಹೊಸ ರಾಜ್ಯ ಉದಯವಾದ ನಂತರ ಇನ್ನೆಷ್ಟು ಕಾಲ ಆ ಪಕ್ಷ ಬಾಳಲಿದೆ ಎನ್ನುವ ಪ್ರಶ್ನೆ ಅಲ್ಲಿಯೂ ಇದೆ. ಯಾಕೆಂದರೆ, ಅಲ್ಲೂ ಪ್ರಾದೇಶಿಕ ರಾಜಕೀಯ ಒಂದು ಸಮಗ್ರ ಪ್ರಜ್ಞೆಯಾಗದೆ ಒಬ್ಬ ವ್ಯಕ್ತಿಯ ಸುತ್ತ ಗಿರಕಿಹೊಡೆಯುತ್ತಿದೆ. ಮೂರೂ ಕಡೆ ಬಿಜೆಪಿ ಹೊಂಚು ಹಾಕುತ್ತಿದೆ. ತನ್ನ ಸುತ್ತಣ ರಾಜ್ಯಗಳಲ್ಲಿ ಹೀಗೆಲ್ಲಾ ಆಗುತ್ತಿರುವುದನ್ನು ಕರ್ನಾಟಕ ಸುಮ್ಮನಿದ್ದು ಸಂಯಮದಿಂದ ಗಮನಿಸುತ್ತಿದೆ. ಈ ಎಲ್ಲಾ ಪ್ರಯೋಗಗಳಿಂದ ಪಾಠ ಕಲಿತು, ತನ್ನದೇ ಆದ ಮಾದರಿ ಪ್ರಾದೇಶಿಕ ರಾಜಕೀಯದ ಉಗಮಕ್ಕೆ ಕರ್ನಾಟಕ ಈಗಲಾದರೂ ಸಾಕ್ಷಿಯಾಗುವುದು ರಾಜ್ಯದ ಹಿತಾಸಕ್ತಿಯ ದೃಷ್ಟಿಯಿಂದ ಹೇಗೆ ಅಗತ್ಯವೋ ಹಾಗೆಯೇ ದೇಶದ ಸಂವಿಧಾನವನ್ನು ಸಂರಕ್ಷಿಸುವ ದೃಷ್ಟಿಯಿಂದಲೂ ಅಗತ್ಯವಾಗಿದೆ.

ಎ ನಾರಾಯಣ

(ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದಲ್ಲಿ ರಾಜಕೀಯ ತತ್ವಶಾಸ್ತ್ರ, ಭಾರತದ ರಾಜಕೀಯ, ಕಾನೂನು ಮತ್ತು ಆಡಳಿತ ಹಾಗೂ ಭಾರತದಲ್ಲಿ ಆಡಳಿತದ ಸವಾಲುಗಳು ವಿಷಯವನ್ನು ಬೋಧಿಸುವ ನಾರಾಯಣ ಅವರು ಕನ್ನಡದ ಹಲವು ಪತ್ರಿಕೆಗಳಲ್ಲಿ ಸಕ್ರಿಯವಾಗಿ ಪ್ರಚಲಿತ ವಿದ್ಯಮಾನಗಳ ಬಗ್ಗೆ ಲೇಖನಗಳನ್ನು ಬರೆಯುತ್ತಿರುವ ಸ್ವತಂತ್ರ ಚಿಂತಕ.)


ಇದನ್ನೂ ಓದಿ: ಕನ್ನಡದಲ್ಲಿ ಬ್ಯಾಂಕಿಂಗ್ ಪರೀಕ್ಷೆ: ಮಾತು ತಪ್ಪಿದ ಕೇಂದ್ರ ಸರ್ಕಾರ – ಟಿ.ಎಸ್.ನಾಗಾಭರಣ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...