ಅಮೆರಿಕದ ಅಧ್ಯಕ್ಷ ಡೋನಾಲ್ಡ್ ಟ್ರಂಪ್‌ರವರ ಅಪ್ಪಟ ಅಭಿಮಾನಿಯಾಗಿದ್ದ, ಟ್ರಂಪ್ ಕೊರೊನಾ ಸೋಂಕಿಗೆ ಒಳಗಾದ ನಂತರ ಅವರ ಶೀಘ್ರ ಚೇತರಿಕೆಗಾಗಿ ಪ್ರತಿನಿತ್ಯ ಪ್ರಾರ್ಥನೆ, ವ್ರತ ಮತ್ತು ಉಪವಾಸ ಮಾಡುತ್ತಿದ್ದ ತೆಲಂಗಾಣದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಭಾನುವಾರ ನಿಧನರಾಗಿದ್ದಾರೆ.
ತೆಲಂಗಾಣದ ಮೆಡಕ್‌ನ ನಿವಾಸಿಯಾದ ರೈತ ಬುಸ್ಸಾ ಕೃಷ್ಣರಾಜು ಟ್ರಂಪ್‌ಗೆ ಕೊರೊನಾ ಸೋಂಕು ತಗುಲಿದ ನಂತರ ಆಘಾತಕ್ಕೊಳಗಾಗಿದ್ದರು. ಅವರಿಗಾಗಿ ಮೌನ ವ್ರತ, ಪೂಜೆಯೊಂದಿಗೆ ಉಪವಾಸ ಸಹ ಆರಂಭಿಸಿದ್ದರು ಎಂದು ಅವರ ನಿಕಟವರ್ತಿಗಳು ತಿಳಿಸಿದ್ದಾರೆ.
ಇದೇ ವ್ಯಕ್ತಿ ಈ ಹಿಂದೆಯೇ ಆರು ಅಡಿ ಎತ್ತರದ ಡೋನಾಲ್ಡ್ ಟ್ರಂಪ್ ಪ್ರತಿಮೆ ಸ್ಥಾಪಿಸಿ ನಿತ್ಯ ಪೂಜೆ ಮಾಡುವು ಮೂಲಕ ಗಮನಸೆಳೆದಿದ್ದರು. ಇವರು ಟ್ರಂಪ್‌ರವರ ಅಪ್ಪಟ ಭಕ್ತ, ಅಭಿಮಾನಿಯಾಗಿದ್ದರು ಎಂದು ಅವರ ಸ್ನೇಹಿತರು ತಿಳಿಸಿದ್ದಾರೆ.

ಕಳೆದ ನಾಲ್ಕು ದಿನಗಳಿಂದ ಯಾರೊಂದಿಗೂ ಮಾತನಾಡದೇ, ಯಾವುದೇ ಆಹಾರ ಸೇವಿಸದೇ ಪ್ರಾರ್ಥನೆಯಲ್ಲಿ ನಿರತನಾಗಿದ್ದ ಬುಸ್ಸಾ ಕೃಷ್ಣರಾಜುರವರಿಗೆ ಹೃದಯಾಘಾತ ಸಂಭವಿಸಿ ಮರಣ ಹೊಂದಿದ್ದಾರೆ.
ಇನ್ನೊಂದೆಡೆ ಟ್ರಂಪ್ ಕೊರೊನಾದಿಂದ ಚೇತರಿಸಿಕೊಂಡಿದ್ದಾರೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ.
ಇದನ್ನೂ ಓದಿ: ಅಮೆರಿಕಾ ಅಧ್ಯಕ್ಷ ಟ್ರಂಪ್ ಮತ್ತು ಪತ್ನಿ ಮೆಲೆನಿಯಾಗೆ ಕೊರೊನಾ ಪಾಸಿಟಿವ್


