ಸಂಗೀತ ನಿರ್ದೇಶಕ ರಾಜನ್ ವಿಧಿವಶ
PC: Udayavani

ಖ್ಯಾತ ಸಂಗೀತ ನಿರ್ದೇಶಕ ರಾಜನ್ (85) ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ. ಸ್ಯಾಂಡಲ್​ವುಡ್​ನ ಟಾಪ್ ಸಂಗೀತ ನಿರ್ದೇಶಕ ಜೋಡಿಯಾಗಿದ್ದ ರಾಜನ್-ನಾಗೇಂದ್ರ ಸೋದರರ ಪೈಕಿ ಅವರು ಹಿರಿಯರಾಗಿದ್ದರು. ಭಾನುವಾರ (ಅ.11) ರಾತ್ರಿ 11 ಗಂಟೆಗೆ ಸ್ವಗೃಹದಲ್ಲಿ ನಿಧನರಾಗಿದ್ದಾರೆ.

ಕನ್ನಡ ಚಲನಚಿತ್ರರಂಗಕ್ಕೆ ರಾಜನ್–ನಾಗೇಂದ್ರ ಜೋಡಿ ನೀಡಿದ ಕೊಡುಗೆ ಅನನ್ಯವಾದುದು. ಈ ಇಬ್ಬರ ಸಂಗೀತ ನಿರ್ದೇಶನದಲ್ಲಿ ಕನ್ನಡವಷ್ಟೇ ಅಲ್ಲದೇ ತೆಲುಗು, ತಮಿಳು ಭಾಷೆಗಳಲ್ಲಿಯೂ ಅತಿ ಮಧುರವಾದ ಗೀತೆಗಳು ಮೂಡಿ ಬಂದಿವೆ. ನಾಗೇಂದ್ರ ಅವರು ಈ ಹಿಂದೆಯೇ ತೀರಿಕೊಂಡಿದ್ದಾರೆ.

ಹೆಬ್ಬಾಳದ ಚಿತಾಗಾರದಲ್ಲಿ ಇಂದು ಅಂತ್ಯಕ್ರಿಯೆ ನೆರವೇರಿಸೋದಾಗಿ ರಾಜನ್​ರ ಪುತ್ರ ಅನಂತ್ ಮಾಹಿತಿ ನೀಡಿದ್ದಾರೆ. ಇವರು ಒಬ್ಬ ಪುತ್ರ ಹಾಗೂ ಒಬ್ಬ ಪುತ್ರಿಯನ್ನು ಅಗಲಿದ್ದಾರೆ.

ಇದನ್ನೂ ಓದಿ: ಗಾನ ಗಾರುಡಿಗ ಎಸ್ ಪಿ ಬಾಲಸುಬ್ರಹ್ಮಣ್ಯಂ ಇನ್ನಿಲ್ಲ!

ಸುಮಾರು 400ಕ್ಕೂ ಹೆಚ್ಚು ಸಿನಿಮಾಗಳಿಗೆ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಕನ್ನಡದ ಸುಮಾರು 300, ತೆಲುಗಿನ 100 ಹಾಗೂ ತಮಿಳಿನಲ್ಲೂ ಹಲವು ಚಿತ್ರಗಳಿಗೆ ಅವರು ಸಂಗೀತ ನಿರ್ದೇಶನ ಮಾಡಿದ್ದರು.

ಮೂಲತಃ ಮೈಸೂರಿನವರಾದ ರಾಜನ್‌–ನಾಗೇಂದ್ರ ಜೋಡಿ, ಕನ್ನಡ ಚಿತ್ರರಂಗದ ಸಂಗೀತ ಲೋಕವನ್ನು 1950 ರಿಂದ ಸುಮಾರು ನಾಲ್ಕೂವರೆ ದಶಕಗಳ ಕಾಲ ಆಳಿದವರು. ನಾಗೇಂದ್ರ ಅವರು ತಂದೆ ಮತ್ತು ತಾಯಿಯಿಂದ ಹಾಡುವುದನ್ನು ಕಲಿತಿದ್ದರು. ರಾಜನ್ ಅವರು‌ ಪಿಟೀಲು, ವೀಣಾ ವಾದನದಲ್ಲಿ ಪರಿಣತಿ ಗಳಿಸಿಕೊಂಡಿದ್ದರು.

ಈ ಜೋಡಿ ಕನ್ನಡದಲ್ಲಿ ಎರಡು ಕನಸು, ಶ್ರೀನಿವಾಸ ಕಲ್ಯಾಣ, ಬಯಲು ದಾರಿ, ನಾ ನಿನ್ನ ಮರೆಯಲಾರೆ, ಬಂಗಾರದ ಹೂವು, ಗಂಧದಗುಡಿ, ಹೊಂಬಿಸಿಲು, ಮೇಯರ್‌ ಮುತ್ತಣ್ಣ, ಗಾಳಿಮಾತು, ಚಲಿಸುವ ಮೋಡಗಳು,ನ್ಯಾಯವೇ ದೇವರು, ಭಾಗ್ಯವಂತರು, ಗಿರಿಕನ್ಯೆ, ಚಂದನದ ಗೊಂಬೆ ಸೇರಿದಂತೆ 300ಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಿದೆ.

ಹಿರಿಯ ಸಂಗೀತ ನಿರ್ದೇಶಕರ ನಿಧನಕ್ಕೆ ಗಣ್ಯರು ಕಂಬನಿ ಮಿಡಿದಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ’ಹೆಸರಾಂತ ಹಿರಿಯ ಸಂಗೀತ ನಿರ್ದೇಶಕ ಶ್ರೀ ರಾಜನ್ ಅವರು ನಿಧನರಾದ ಸುದ್ದಿ ತೀವ್ರ ಶೋಕವನ್ನುಂಟು ಮಾಡಿದೆ. ತಮ್ಮ ಸಹೋದರ ನಾಗೇಂದ್ರಪ್ಪ ಅವರೊಂದಿಗೆ ‘ರಾಜನ್‌-ನಾಗೇಂದ್ರ’ ಹೆಸರಿನಲ್ಲಿ ಜಂಟಿಯಾಗಿ ಅನೇಕ ಜನಪ್ರಿಯ, ಯಶಸ್ವಿ ಕನ್ನಡ ಚಿತ್ರಗಳಿಗೆ ಸಂಗೀತ ನೀಡಿದ್ದ ರಾಜನ್ ಅವರ ನಿಧನದಿಂದ ಕನ್ನಡ ಚಿತ್ರರಂಗ ಅನಾಥವಾಗಿದೆ’ ಎಂದು ಸಂತಾಪ ಸೂಚಿಸಿದ್ದಾರೆ.

’ಚಿತ್ರರಸಿಕರು ಎಂದಿಗೂ ಮರೆಯಲಾರದ ತಮ್ಮ ನೂರಾರು ಸುಮಧುರ ಗೀತೆಗಳ ಮೂಲಕ ಶ್ರೀ ರಾಜನ್ ಅವರು ಸದಾ ನೆನಪಿನಲ್ಲಿರುತ್ತಾರೆ. ಶ್ರೀ ರಾಜನ್ ಅವರ ಆತ್ಮಕ್ಕೆ ಚಿರಶಾಂತಿಯನ್ನು ಪ್ರಾರ್ಥಿಸುತ್ತೇನೆ. ಅವರ ಕುಟುಂಬದವರಿಗೆ ಮತ್ತು ಅಭಿಮಾನಿಗಳಿಗೆ ನೋವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಕೋರುತ್ತೇನೆ’ ಎಂದಿದ್ದಾರೆ.

ಬಹುಭಾಷಾ ನಟ ಸಾಯಿಕುಮಾರ್‌ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸಂತಾಪ ಸೂಚಿಸಿದ್ದಾರೆ. ’ನಿಮ್ಮ ಸುಮಧುರ ರಾಗ ಸಂಯೋಜನೆ ಮೂಲಕ ನೀವೆಂದಿಗೂ ಜೀವಂತವಾಗಿರುತ್ತಿರಿ’ ಎಂದಿದ್ದಾರೆ.


ಇದನ್ನೂ ಓದಿ: ಗಾನ ಗಂಧರ್ವ ಎಸ್ ಪಿ ಬಾಲಸುಬ್ರಹ್ಮಣ್ಯಂ ನಿಧನಕ್ಕೆ ಗಣ್ಯರ ಕಂಬನಿ

Donate

ಈ ಲೇಖನ, ಈ ವೆಬ್‌ಸೈಟ್ ನಿಮಗೆ ಇಷ್ಟವಾಯಿತೇ? ನಿಮ್ಮ ಬೆಂಬಲ ಇದಕ್ಕೆ ಅಗತ್ಯ.

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

+ posts