ಮಾರ್ಚ್ 12 ರಂದು ಗಾಜಿಯಾಬಾದ್‌ನ ದಾಸನ ದೇವಿ ಮಂದಿರದ ಬಳಿ ಅಪ್ರಾಪ್ತ ಮುಸ್ಲಿಂ ಬಾಲಕನನ್ನು ಭೀಕರವಾಗಿ ಥಳಿಸಿದ್ದು ದೇಶಾದ್ಯಂತ ಆಘಾತವನ್ನುಂಟು ಮಾಡಿದೆ. ಆದರೆ ದೇವಾಲಯದ ಕಟ್ಟಾ ಹಿಂದುತ್ವವಾದಿ ನಾಯಕ ಯತಿ ನರಸಿಂಗಾನಂದ್ ಸರಸ್ವತಿ ತಮ್ಮ ಅನುಯಾಯಿ ಮಾಡಿದ ಕೃತ್ಯವನ್ನು ಹೊಗಳಿದ್ದಾರೆ. ’ಅತಿಕ್ರಮಣಕಾರನಿಗೆ ಸೂಕ್ತ ಉತ್ತರ ನೀಡಿದ್ದಾರೆ’ ಎಂದು ಆರೋಪಿ ಶೃಂಗಿ ನಂದನ್ ಯಾದವ್‌ನನ್ನು ಶ್ಲಾಘಿಸಿದ್ದಾರೆ.
ಅಪ್ರಾಪ್ತ ಬಾಲಕನ ಮೇಲೆ ನಡೆದ ಕ್ರೂರ ಹಲ್ಲೆಗೆ ಪ್ರತಿಕ್ರಿಯಿಸಿರುವ ಯತಿ ನರಸಿಂಗಾನಂದ್ ಸರಸ್ವತಿ, ಹಲ್ಲೆ ಮಾಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ತಮ್ಮ ಅನುಯಾಯಿಗಳು ತಾನು ನೀಡಿದ ತರಬೇತಿಯನ್ನು ಪಾಲಿಸಿದ್ದಾರೆ ಎಂದಿದ್ದಾರೆ.
ಫೆಬ್ರವರಿ 2020 ರ ದೆಹಲಿ ಗಲಭೆಯಲ್ಲಿಯು ಸರಸ್ವತಿ ಮುಸ್ಲಿಮರ ವಿರುದ್ಧ ಹಿಂದೂ ಸಮುದಾಯದವರಲ್ಲಿ ಪದೇ ಪದೇ ಜನಾಂಗೀಯ ದ್ವೇಷ ಬಿತ್ತಿದ್ದರು, ಇದರಿಂದಾಗಿ 50 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ದಿ ವೈರ್ ವರದಿ ಮಾಡಿದೆ.
ಇದನ್ನೂ ಓದಿ: ಉತ್ತರಪ್ರದೇಶ: ದೇವಾಲಯದಲ್ಲಿ ನೀರು ಕುಡಿದ ಮುಸ್ಲಿಂ ಬಾಲಕನ ಮೇಲೆ ಕ್ರೂರ ಹಲ್ಲೆ- ಆರೋಪಿಯ ಬಂಧನ
ಆರೋಪಿ ಶೃಂಗಿ ನಂದನ್ ಯಾದವ್ ಬಾಲಕನನ್ನು ಥಳಿಸಿ, ಆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದರು. ವಿಡಿಯೋದಲ್ಲಿ ಆ ಮಗುವಿಗೆ ತನ್ನ ಹೆಸರನ್ನು ಕೇಳುತ್ತಿರುವುದು ಕಂಡುಬಂದಿದೆ. ಅದಕ್ಕೆ ಮಗು ತನ್ನ ಹೆಸರು ಆಸಿಫ್ ಎಂದು ಹೇಳಿದ್ದು, ನೀರು ಕುಡಿಯಲು ದೇವಾಸ್ಥಾನಕ್ಕೆ ಹೋಗಿದ್ದೆ ಎಂದು ಉತ್ತರಿಸಿದೆ. ಅದಕ್ಕೆ ಕುಪಿತಗೊಂಡ ಆರೋಪಿ ಅಮಾನುಷವಾಗಿ ಥಳಿಸಿದ್ದಾನೆ, ಕಾಲಿನಲ್ಲಿ ಒದ್ದಿದ್ದಾನೆ ಮತ್ತು ಕೈಮುರಿಯಲು ಯತ್ನಿಸಿರುವುದನ್ನು ಕಾಣಬಹುದು.
ಆರೋಪಿ ಶೃಂಗಿ ನಂದನ್ ಯಾದವ್ ಸರಸ್ವತಿಯ ಅನುಯಾಯಿಯಾಗಿದ್ದು, ಬಾಲಕನ ಮೇಲೆ ಹಲ್ಲೆ ನಡೆಸಿದ್ದನ್ನು ಸೋಷಿಯಲ್ ಮೀಡಿಯಾದಲ್ಲಿ ಬಲಪಂಥೀಯ ಗುಂಪುಗಳು ಹೊಗಳಿವೆ.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಸರಸ್ವತಿ, “ಒಂದು ನಿರ್ದಿಷ್ಟ ಅಲ್ಪಸಂಖ್ಯಾತ ಸಮುದಾಯದ ಅತಿಕ್ರಮಣದಾರರಿಗೆ ಸೂಕ್ತ ಉತ್ತರವನ್ನು ನೀಡಲು ನಾನು ನನ್ನ ಅನುಯಾಯಿಗಳಿಗೆ ಉತ್ತಮ ತರಬೇತಿ ನೀಡಿದ್ದೇನೆ. ಶುಕ್ರವಾರ (ಮಾರ್ಚ್ 12) ಅವರು ನನ್ನ ಸೂಚನೆಗಳನ್ನು ಅನುಸರಿಸಿಯೇ ಮಾಡಿದ್ದಾರೆ’ ಎಂದಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ಉಲ್ಲೆಖಿಸಿದೆ.
“ನಾವು ದೇವಾಲಯದ ದ್ವಾರದ ಹೊರಗೆ ಅಲ್ಪಸಂಖ್ಯಾತ ಸಮುದಾಯದ ಜನರಿಗೆ ಇಲ್ಲಿ ಪ್ರವೇಶಿಸಲು ಅನುಮತಿ ಇಲ್ಲ ಎಂದು ಸೂಚನಾ ಫಲಕ ಹಾಕಿದ್ದೇವೆ. ಇದು ಈ ಪ್ರದೇಶದ ಎಲ್ಲರಿಗೂ ತಿಳಿದಿದೆ. ಆದರೂ ಈ ಹುಡುಗ ನೀರು ಕುಡಿಯುವ ನೆಪದಲ್ಲಿ ಪ್ರವೇಶಿಸಿದ್ದಾನೆ” ಎಂದಿದ್ದಾರೆ.
ಪ್ರಕರಣದಲ್ಲಿ ಶೃಂಗಿ ನಂದನ್ ಯಾದವ್ ಮತ್ತು ಸರಸ್ವತಿಯ ಇನ್ನೊಬ್ಬ ಅನುಯಾಯಿಯನ್ನು ಗಾಜಿಯಾಬಾದ್ ಪೊಲೀಸರು ಬಂಧಿಸಿದ್ದಾರೆ. ಅಪ್ರಾಪ್ತ ಬಾಲಕ ತನ್ನ ಮನೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾನೆ. ಬಾಲಕನ ತಲೆ, ತೋಳು ಮತ್ತು ತೊಡೆಗೆ ಎಕ್ಸರೆ ಮಾಡಲಾಗಿದ್ದು, ಇಡೀ ರಾತ್ರಿ ನೋವಿನಿಂದ ನರಳುತ್ತಾನೆ ಎಂದು ಬಾಲಕನ ತಂದೆ ತಿಳಿಸಿದ್ದಾರೆ.
ಇದನ್ನೂ ಓದಿ: ಪ್ರಪಾತಕ್ಕಿಳಿದ ಉತ್ತರ ಪ್ರದೇಶ ಪರಿಸ್ಥಿತಿ: ಮಗಳ ತಲೆ ಕಡಿದು ರಸ್ತೆಯಲ್ಲಿ ಪ್ರದರ್ಶಿಸಿದ ಕ್ರೂರ ತಂದೆ



ಈ ಸ್ವಾಮೀಜಿಗೆ ಕಾನೂನಿನ ಅಡಿಯಲ್ಲಿ ಶಿಕ್ಷೆ ಆಗಬೇಕು.