ಕೊಪ್ಪಳದ ಗಂಗಾವತಿ ತಾಲೂಕಿನ ಸಾಣಾಪುರ ಕೆರೆ ಬಳಿ ಸ್ಥಳೀಯ ಹೋಮ್ ಸ್ಟೇ ಮಾಲಕಿ ಮತ್ತು ಇಸ್ರೇಲಿ ಯುವತಿ ಮೇಲೆ ಅತ್ಯಾಚಾರವೆಸಗಿ, ಅವರ ಜೊತೆಗಿದ್ದ ಯುವಕನನ್ನು ಕೊಲೆಗೈದ ಪ್ರಕರಣದ ಮೂವರು ಅಪರಾಧಿಗಳಿಗೆ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿ ಆದೇಶಿಸಿದೆ.
ಗಂಗಾವತಿಯ ಸಾಯಿನಗರದ ಮಲ್ಲೇಶ (ಹಂದಿ ಮಲ್ಲ), ಸಾಯಿ (ಚೈತನ್ಯ ಸಾಯಿ) ಮತ್ತು ಶರಣಪ್ಪ (ಶರಣು ಬಸವರಾಜ್) ಶಿಕ್ಷೆಗೆ ಒಳಗಾದ ಅಪರಾಧಿಗಳು.
ಈ ಮೂವರೂ ದೋಷಿಗಳು ಎಂದು ಫೆ.6ರಂದು ನ್ಯಾಯಾಲಯ ಘೋಷಿಸಿತ್ತು. ಶಿಕ್ಷೆ ಪ್ರಮಾಣ ಇಂದು (ಫೆ.16, 2026) ಪ್ರಕಟಿಸುವುದಾಗಿ ತಿಳಿಸಿತ್ತು.
ಪ್ರಕರಣದ ಹಿನ್ನೆಲೆ : 2025ರ ಮಾರ್ಚ್ 6ರಂದು ರಾತ್ರಿ ಇಸ್ರೇಲ್ ಮಹಿಳೆ, ಒಡಿಶಾ ಮೂಲದ ಆಕೆಯ ಸ್ನೇಹಿತ ಮತ್ತು ಸ್ಥಳೀಯ ಹೋಂ ಸ್ಟೇ ಮಾಲಕಿ ತುಂಗಭದ್ರಾ ಎಡದಂಡೆ ಕಾಲುವೆ ಬಳಿ ನಕ್ಷತ್ರ ವೀಕ್ಷಣೆ ಮಾಡುತ್ತಿದ್ದಾಗ ಅಪರಾಧಿಗಳು ದಾಳಿ ಮಾಡಿದ್ದರು. ಇಸ್ರೇಲ್ ಮಹಿಳೆ ಮತ್ತು ಹೋಂ ಸ್ಟೇ ಮಾಲಕಿ ಮೇಲೆ ಅತ್ಯಾಚಾರವೆಸಗಿದ್ದರು. ಅವರ ಜೊತೆಗಿದ್ದ ಸ್ನೇಹಿತನನ್ನು ಕಾಲುವೆಗೆ ತಳ್ಳಿ ಕೊಲೆ ಮಾಡಿದ್ದರು.
ಈ ಘಟನೆ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.


