“ಅ” ಅಕ್ಷರದಿಂದ ಆರಂಭವಾಗಿ “ನಿ” ಅಕ್ಷರದಿಂದ ಕೊನೆಗೊಳ್ಳುವ ಹೆಸರಿನ ವ್ಯಕ್ತಿ ಇಂದು- ಪ್ರಧಾನಿ, ಹಣಕಾಸು ಮಂತ್ರಿ ಮತ್ತು ದೇಶಕ್ಕೇ ಟೋಪಿ ಹಾಕುತ್ತಿರುವುದರ ಬಗ್ಗೆ ತೃಣಮೂಲ ಕಾಂಗ್ರೆಸ್ ಸದಸ್ಯೆ ಮೊಹುವಾ ಮೊಯಿತ್ರಾ ಲೋಕಸಭೆಯಲ್ಲಿ ಮಾಡಿದ ಭಾಷಣದ ಮುಖ್ಯಾಂಶಗಳು ಇಲ್ಲಿವೆ. ಅವು ಬಹುತೇಕ ಅವರ ಮಾತುಗಳಲ್ಲೇ ಇವೆ.
ಗೌರವಾನ್ವಿತ ಸಭಾಧ್ಯಕ್ಷರೇ ಮತ್ತು ಸಹೋದ್ಯೋಗಿಗಳೇ, ನಾನಿಂದು ಮಾನನೀಯ ರಾಷ್ಟ್ರಪತಿಯವರ ಭಾಷಣದ ಕುರಿತ ಚರ್ಚೆಯಲ್ಲಿ ಭಾಗವಹಿಸಲು ನನ್ನ ಪಕ್ಷವಾದ ತೃಣಮೂಲ ಕಾಂಗ್ರೆಸ್ ಪರವಾಗಿ ನಿಂತಿದ್ದೇನೆ.
ಜರ್ಮನ್ ತತ್ವಶಾಸ್ತ್ರಜ್ಞ ಆರ್ಥರ್ ಶಾಪೆನ್‌ಹೋಅರ್ (Arthur Schopenhauer) ಒಂದು ಸಲ ಬರೆದಿದ್ದರು: ’ಪ್ರತಿಯೊಂದು ಸತ್ಯವೂ ಮೂರು ಹಂತಗಳನ್ನು ದಾಟಿ ಬರುತ್ತದೆ: ಮೊದಲನೆಯದಾಗಿ ಅದನ್ನು ಉಡಾಫೆಯಿಂದ ಗೇಲಿ ಮಾಡಲಾಗುತ್ತದೆ. ಎರಡನೆಯದಾಗಿ ಅದನ್ನು ಹಿಂಸಾತ್ಮಕವಾಗಿ ವಿರೋಧಿಸಲಾಗುತ್ತದೆ. ಮೂರನೆಯದಾಗಿ ಅದನ್ನು ನಿರಾಕರಿಸಲಾಗದ ಸತ್ಯವೆಂದು ಒಪ್ಪಿಕೊಳ್ಳಲಾಗುತ್ತದೆ’.
ವಿಶ್ವದಾದ್ಯಂತ ಸಂಸತ್ತುಗಳಲ್ಲಿ ಚರ್ಚೆಗಳು ನಡೆಯುತ್ತವೆ. ಬ್ರಿಟಿಷ್ ಸಂಸತ್ತು ಕೆಲವು ಮಹಾನ್ ಚರ್ಚೆಗಳಿಗೆ ಸಾಕ್ಷಿಯಾಗಿದೆ. ಮಹತ್ವದ ವಿಷಯಗಳಲ್ಲಿ ನಡೆಯುವ ಎಲ್ಲಾ ಚರ್ಚೆಗಳು ಕೆಲವು ಸದಸ್ಯರಿಗೆ ಹಿತಕರವಾಗಿರದೆ ಇರಿಸುಮುರಿಸು ಉಂಟುಮಾಡಬಹುದು. ನಮ್ಮ ಸಂಸತ್ತು ಕೂಡಾ ಇಂತಹ ಅನೇಕ ಚರ್ಚೆಗಳನ್ನು ಕಂಡಿದೆ: ಕೆಲವು ಸೌಹಾರ್ದಯುತ ಮತ್ತು ಕೆಲವು ಅಷ್ಟೊಂದು ಸೌಹಾರ್ದವಲ್ಲದ ಚರ್ಚೆಗಳು. ಆದರೂ, ಜನರಿಂದ ಚುನಾಯಿತರಾದ ಸದಸ್ಯರು ಯಾವುದೇ ಭಯ ಅಥವಾ ಯಾರ ಪರವಾಗಿಯೂ ಇಲ್ಲದೆ ತಮ್ಮ ಮನಸ್ಸಿನಲ್ಲಿರುವ ಅಭಿಪ್ರಾಯಗಳನ್ನು ಮಂಡಿಸಿ, ಚರ್ಚೆಗಳಲ್ಲಿ ಭಾಗವಹಿಸಬಹುದಾದ ಪವಿತ್ರ ಸ್ಥಳವಾಗಿ ನಮ್ಮ ಸಂಸತ್ತು ಬಹುತೇಕ ಉಳಿದುಕೊಂಡಿತ್ತು.
ಆದರೆ ಇಂದು- ನಾನಿನದನ್ನು ಭಾರವಾದ ಹೃದಯದೊಂದಿಗೆ ಹೇಳಬೇಕಾಗಿದೆ: ಈಗ ನಮ್ಮ ಲೋಕಸಭೆಯಲ್ಲಿ ಸದಸ್ಯರು ಏನನ್ನು ಹೇಳಬಹುದು ಎಂಬುದಕ್ಕಿಂತ ಏನನ್ನು ಹೇಳಬಾರದು ಎಂಬುದೇ ಮಹತ್ವದ್ದಾಗಿ ಪರಿಣಮಿಸಿದೆ. ಹೇಳಬಹುದಾದ ವಿಷಯಗಳಿಗಿಂತ ನಾವು ಹೇಳಬಾರದ ವಿಷಯಗಳ ಪಟ್ಟಿ ದೊಡ್ಡದಾಗಿದೆ. ಕೆಲವು ವಿಷಯಗಳನ್ನು ಪ್ರಸ್ತಾಪಿಸಿದ ಕೂಡಲೇ, ಪ್ರತಿಪಕ್ಷಗಳ ಸದಸ್ಯರು ಶಿಬಿರದಲ್ಲಿ ತರಬೇತಿ ಪಡೆದವರಂತೆ ನಮ್ಮ ಬಾಯಿಮುಚ್ಚಿಸಲು ಗದ್ದಲ ಎಬ್ಬಿಸುತ್ತಾರೆ. ನಾವು ಚೀನಾ ಎನ್ನುವಂತಿಲ್ಲ, ನಾವು ಪೆಗಸಸ್ ಎನ್ನುವಂತಿಲ್ಲ, ನಾವು ಮೋರ್ಬಿ ಎನ್ನುವಂತಿಲ್ಲ, ನಾವು ರಫೇಲ್ ಎನ್ನುವಂತಿಲ್ಲ, ಕೆಲವು ಸಲ ನಾವು ಮೋದೀಜಿ ಎಂದೂ ಹೇಳುವಂತಿಲ್ಲ. ಈ ರೀತಿಯ ಅತಿರೇಕಗಳ ಕಾರಣದಿಂದಾಗಿಯೇ ನಾವು ಪ್ರತಿಪಕ್ಷಗಳ ಸದಸ್ಯರು ಪ್ರತೀ ದಿನ ಎಂಬಂತೆ ಸಭಾತ್ಯಾಗ ಮಾಡಬೇಕಾಗಿ ಬಂದಿದೆ. ನಾವು ಸ್ವಲ್ಪ ಬಲವಾಗಿ ಮಾತನಾಡುವಂತಿಲ್ಲ, ನಾವು ಸ್ವಲ್ಪ ಜೋರಾಗಿ ಮಾತನಾಡುವಂತಿಲ್ಲ. ತಕ್ಷಣವೇ ಆಳುವ ಪಕ್ಷದ ಸದಸ್ಯರು ಒಟ್ಟಾಗಿ ಗದ್ದಲವೆಬ್ಬಿಸಿ ರಾಕ್ಷಸಿ ಬಲದಿಂದ ನಮ್ಮ ಬಾಯಿಮುಚ್ಚಿಸುತ್ತಾರೆ. ಭ್ರಷ್ಟಾಚಾರ ಮತ್ತು ಕ್ರೋನಿ ಕ್ಯಾಪಿಟಲಿಸಂ ದೇಶಕ್ಕೆ ತಗುಲಿರುವ ಬಹುದೊಡ್ಡ ಶಾಪಗಳಾಗಿವೆ. (ಕ್ರೋನಿ ಕ್ಯಾಪಿಟಲಿಸಂ ಎಂದರೆ ಶ್ರೀಮಂತ ವರ್ಗ ಮತ್ತು ಆಳುವವರ ನಡುವಿನ ಅಪವಿತ್ರ ಮೈತ್ರಿಯಿಂದ ನಡೆಯುವ ಬಂಡವಾಳಶಾಹಿ – ಅನುವಾದಕ).
(ಅವರ ಮಾತುಗಳು ನಿಜವೆಂದು ಸಾಬೀತುಪಡಿಸುವ ರೀತಿಯಲ್ಲಿ ಆಳುವ ಪಕ್ಷದ ಸದಸ್ಯರು ಗದ್ದಲ ಎಬ್ಬಿಸಲು ಆರಂಭಿಸುತ್ತಾರೆ. ಗದ್ದಲದ ನಡುವೆಯೇ ಮೊಯಿತ್ರಾ- ರಾಷ್ಟ್ರಪತಿಯವರು ತನ್ನ ಭಾಷಣದಲ್ಲಿ ಹೇಳಿದ ಮಾತುಗಳನ್ನು ಉಲ್ಲೇಖಿಸುತ್ತಾರೆ.)
“ಪ್ರಾಮಾಣಿಕತೆಯು ನಮ್ಮ ಪ್ರಜಾಪ್ರಭುತ್ವ ಮತ್ತು ಸಾಮಾಜಿಕ ನ್ಯಾಯಕ್ಕೆ ಅತೀ ಮುಖ್ಯವಾಗಿದೆ ಎಂಬ ಅಭಿಪ್ರಾಯವನ್ನು ಸರಕಾರ ಹೊಂದಿದೆ. ಅದಕ್ಕಾಗಿಯೇ ಇತ್ತೀಚಿನ ಕೆಲ ವರ್ಷಗಳಲ್ಲಿ ಭ್ರಷ್ಟಾಚಾರದ ವಿರುದ್ಧ ಎಡೆಬಿಡದ ಹೋರಾಟ ನಡೆಯುತ್ತಿದೆ. ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಪ್ರಾಮಾಣಿಕರಿಗೆ ಗೌರವಾರ್ಹ ಸ್ಥಾನ ಸಿಗಬೇಕು.” (ಗದ್ದಲ ಹೆಚ್ಚಾಗುತ್ತದೆ). ನಾನು ಇಲ್ಲಿ ಗೌರವಾನ್ವಿತ ರಾಷ್ಟ್ರಪತಿಯವರ ಭಾಷಣವನ್ನು ಉಲ್ಲೇಖಿಸುತ್ತಿದ್ದೇನೆ. ನೀವು ಚಪ್ಪಾಳೆ ತಟ್ಟಲು ಬಯಸುವ ಅದೇ ರಾಷ್ಟ್ರಪತಿಯವರ ಮಾತುಗಳು ಇವು… “ನಮ್ಮ ದೇಶದಲ್ಲಿ ಸಾಮಾಜಿಕ ಪ್ರಜ್ಞೆ ಹೆಚ್ಚುತ್ತಿರುವ ಹೊತ್ತಿನಲ್ಲಿ ಭ್ರಷ್ಟಾಚಾರಿಗಳಿಗೆ ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಸ್ಥಾನ ಇರಬಾರದು….” ಗೌರವಾನ್ವಿತ ರಾಷ್ಟ್ರಪತಿಯವರು ಈ ಮಾತುಗಳಿಂದ ತನ್ನ ಭಾಷಣವನ್ನು ಮುಗಿಸುತ್ತಾರೆ: “ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತವಿಲ್ಲದೇ ನಮ್ಮ ಕರ್ತವ್ಯ ಪಥದಲ್ಲಿ ನಡೆದು, ದೇಶ ನಿರ್ಮಾಣದ ಈ ಮಹಾಯಜ್ಞದಲ್ಲಿ ಭಾಗವಹಿಸುವುದರ ಮೂಲಕ ನಮ್ಮ ಸಾಂವಿಧಾನಿಕ ಕರ್ತವ್ಯವನ್ನು ಪೂರೈಸೋಣ.”
ಸನ್ಮಾನ್ಯ ಸಭಾಧ್ಯಕ್ಷರೇ, ನಾನು ಈ ಸದನದ ಜವಾಬ್ದಾರಿಯುತ ಸದಸ್ಯೆಯಾಗಿ, ಜನರಿಂದ ಚುನಾಯಿತ ಪ್ರತಿನಿಧಿಯಾಗಿ ಹೇಳುತ್ತಿದ್ದೇನೆ; ನೀವೆಲ್ಲರೂ ಬೊಬ್ಬೆಹಾಕಿದರೂ, ಎಷ್ಟೇ ಬೊಬ್ಬೆ ಹಾಕಿದರೂ, ಧೈರ್ಯದಿಂದ ಕೆಲವು ಸತ್ಯಗಳನ್ನು ಸದನದ ಮುಂದಿಡುವುದರ ಮೂಲಕ ನಾನು ನನ್ನ ಕರ್ತವ್ಯಪಥದಲ್ಲಿ ನಡೆದು, ದೇಶ ನಿರ್ಮಾಣದ ನನ್ನ ಮಹಾಯಜ್ಞದಲ್ಲಿ ಭಾಗವಹಿಸುತ್ತೇನೆ. ಭಾರತದಲ್ಲಿ ಇಂದು ಅತ್ಯಂತ ಪ್ರಸಿದ್ಧವಾಗಿರುವ ವ್ಯಕ್ತಿಯ ಬಗ್ಗೆ ನಾನು ಇಂದು ಮಾತನಾಡುತ್ತೇನೆ. ನಮ್ಮ ದುರದೃಷ್ಟಕ್ಕೆ ಆ ವ್ಯಕ್ತಿ ಪ್ರಧಾನಿ ಮೋದಿಯವರಲ್ಲ. “ಅ” ಅಕ್ಷರದಿಂದ ಆರಂಭವಾಗಿ “ನಿ” ಅಕ್ಷರದಿಂದ ಕೊನೆಗೊಳ್ಳುವ ಹೆಸರಿರುವ ವ್ಯಕ್ತಿ. ಆ ವ್ಯಕ್ತಿ ಆಡ್ವಾಣಿ ಅಲ್ಲವೆಂದು ನಮಗೆ ಗೊತ್ತಿದೆ. ಆ ವ್ಯಕ್ತಿಯನ್ನು ನಾನು ಈ ಭಾಷಣದ ಉದ್ದೇಶಕ್ಕಾಗಿ “ಮಿಸ್ಟರ್ ಎ” ಎಂದೂ, ಆತನ ಕಂಪೆನಿಯನ್ನು “ಎ ಕಂಪೆನಿ” ಎಂದೂ ಕರೆಯುತ್ತೇನೆ. ಒಬ್ಬಳು ಇನ್‌ವೆಸ್ಟ್‌ಮೆಂಟ್ ಬ್ಯಾಂಕರ್ ಆಗಿ, ದೇಶದ ಎಲ್ಲಾ ಕೈಗಾರಿಕೋದ್ಯಮಗಳು ಬೆಳೆಯಬೇಕೆಂದು ನಾನು ಬಯಸುತ್ತೇನೆ. ಆದರೆ, ಒಬ್ಬರು ಸಂಸದರು ಹಿಂದೆ ಹೇಳಿದಂತೆ- ಬೆಳೆಯಬೇಕಾಗಿರುವುದು ವಂಚಕರಾದ ಉದ್ಯಮಿಗಳಲ್ಲ. ಮಾನ್ಯ ಸಭಾಧ್ಯಕ್ಷರು ನನಗೆ ಯಾವಾಗಲೂ ಕೋಪಗೊಳ್ಳಬಾರದೆಂದು ಹೇಳುತ್ತಿರುತ್ತಾರೆ. ನಾನು ಇದನ್ನು ಹೇಳುವಾಗ ಕೋಪದಿಂದ ಹೇಳುವುದಿಲ್ಲ. ನಾನು ಸತ್ಯವನ್ನು ಮಾತ್ರ ಹೇಳುತ್ತೇನೆ. ನಾನೊಂದು ಟೋಪಿಯನ್ನು ತಂದಿದ್ದೇನೆ.
(ಮೊಯಿತ್ರಾ ಒಂದು ಟೋಪಿಯನ್ನು ಹೊರತೆಗೆಯುತ್ತಾರೆ. ಆಗ, ನಿಮ್ಮ ಪಕ್ಷಕ್ಕೆ ಮಾತನಾಡಲು ಕೇವಲ ೧೨ ನಿಮಿಷಗಳು ಮಾತ್ರ ಇವೆ ಎಂದು ನಾನು ನೆನಪಿಸಬೇಕು ಎಂದು ಸಭಾಧ್ಯಕ್ಷರು ಹೇಳುತ್ತಾರೆ. ತಕ್ಷಣವೇ ಆಳುವ ಪಕ್ಷದ ಸದಸ್ಯರು ಭಾರೀ ಗದ್ದಲ ಎಬ್ಬಿಸುತ್ತಾರೆ. ಸಭಾಧ್ಯಕ್ಷರ ಮನವಿಯನ್ನೂ ಲೆಕ್ಕಿಸುವುದಿಲ್ಲ. ಗದ್ದಲದ ನಡುವೆಯೇ ಮೊಯಿತ್ರಾ ಮಾತು ಮುಂದುವರಿಸುತ್ತಾರೆ.)
ಆ ವ್ಯಕ್ತಿ ನಮ್ಮ ಮಹಾನ್ ದೇಶಕ್ಕೆ ಇಂತದ್ದೇ ಟೋಪಿಯನ್ನು ತೊಡಿಸಿದ್ದಾರೆ. ಮಾನ್ಯ ಪ್ರಧಾನಿಯವರೇ, ಅವರು ನಿಮಗೆ ಟೋಪಿ ಹಾಕಿದ್ದಾರೆ. ಈಗ ನಾನು ಈ ಟೋಪಿಯನ್ನು ಧರಿಸುತ್ತೇನೆ.. (ದಯವಿಟ್ಟು ಹಾಗೆ ಮಾಡಬೇಡಿ ಎಂದು ಸಭಾಧ್ಯಕ್ಷರು ಹೇಳುತ್ತಿದ್ದಂತೆ ಗದ್ದಲ ಇನ್ನೂ ಹೆಚ್ಚಾಗುತ್ತದೆ.)
ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆಯೊಂದಿಗೆ ನನ್ನ ರಾಜಕೀಯ ಇನ್ನಿಂಗ್ಸ್ ಮುಕ್ತಾಯಗೊಳ್ಳಬಹುದು: ಸೋನಿಯಾ ಗಾಂಧಿ
ವ್ಯಾಪಾರದ ನಿಯಮಗಳ ಪ್ರಕಾರ ಯಾವುದೇ ಕಂಪೆನಿಯು ತನ್ನ ಆಸ್ತಿಗಿಂತ ಹೆಚ್ಚಿನ ಗುಣಕಗಳಲ್ಲಿ (multiples), ಅದೂ ಸಾಲದ ಹಣದಲ್ಲಿ ವ್ಯವಹರಿಸುವಂತಿಲ್ಲ. ಮೂಲ ಸೌಕರ್ಯದಲ್ಲಿ ವ್ಯವಹರಿಸುವ ಯಾವುದೇ ಕಂಪೆನಿಯು ಟೆಂಡರ್ ಮೂಲಕ ವ್ಯಾಪಾರವನ್ನು ಪಡೆಯುತ್ತದೆ. ಮೂಲ ಸೌಕರ್ಯ ನಿರ್ಮಾಣವಾದ ಬಳಿಕ ಅದರ ನಿರ್ವಹಣೆಗೆ ಅಲ್ಪಪ್ರಮಾಣದ ಶುಲ್ಕ ಪಡೆಯುತ್ತದೆ. ವ್ಯಾಪಾರದಲ್ಲೂ ನಿಯಂತ್ರಿತ ಲಾಭವನ್ನು ಪಡೆಯುತ್ತದೆ. ಎಲ್ಲವೂ ಸರಿಯಾಗಿ ನಡೆದರೆ ಅದು 5ರಿಂದ 15 ಶೇಕಡಾ ಲಾಭ ಪಡೆಯುತ್ತದೆ. ಆದರೆ, “ಎ ಕಂಪೆನಿ”ಯ ಗುಣಕಗಳು ಎಲ್ಲಾ ಮಿತಿಗಳನ್ನು ಮೀರಿದೆ. ಗೂಗಲ್, ಮೈಕ್ರೋಸಾಫ್ಟ್, ಅಮೆಜಾನ್‌ನಂತಹ ಕಂಪೆನಿಗಳಿಗೂ ಇದು ಸಾಧ್ಯವಾಗುವುದಿಲ್ಲ. ರಷ್ಯಾದ ಕಂಪೆನಿಯೊಂದು ಪ್ರಮುಖ ಭಾರತೀಯ ತೈಲ ಉದ್ಯಮ ಒಂದರಿಂದ ರಿಫೈನರಿಯನ್ನು ವಶಪಡಿಸಿಕೊಂಡರೆ, ಅದು ಭಾರತದ ಮೇಲಿನ ದಾಳಿ ಅಲ್ಲವೆ? ಮುಂಬಯಿಯ ವಿದ್ಯುತ್ ಕಂಪೆನಿಯನ್ನು ಕತಾರ್‌ನ ಹಣದಿಂದ ವಶಕ್ಕೆ ತೆಗೆದುಕೊಂಡರೆ, ಅದು ಭಾರತದ ಮೇಲಿನ ದಾಳಿಯಲ್ಲವೆ? ದೇಶದ ಹೆಮ್ಮೆಯು ಒಬ್ಬ ವ್ಯಕ್ತಿಯ ಸಂಪತ್ತಿನ ಮೇಲೆ ನಿಂತಿರುವುದಿಲ್ಲ. ಅದು ದೇಶದ ಸಾಂಸ್ಥಿಕ ಸಂರಚನೆಯ ಸದೃಢತೆಯ ಮೇಲೆ ನಿಂತಿರುತ್ತದೆ.
(ಈ ಹೊತ್ತಿಗೆ ಆಳುವ ಪಕ್ಷದ ಸದಸ್ಯರ ಗದ್ದಲ ಹೆಚ್ಚಾಗುತ್ತದೆ. ಒಬ್ಬ ಸದಸ್ಯರಂತೂ ಬೊಬ್ಬೆ ಹಾಕಿ ಅಡ್ಡಿಪಡಿಸುತ್ತಾರೆ. ಮೊಯಿತ್ರಾ ನೇರವಾಗಿ ಸಭಾಧ್ಯಕ್ಷರ ಕರ್ತವ್ಯವನ್ನು ನೆನಪಿಸುತ್ತಾರೆ.)
ಸಾರ್, ನಾನು ನಿಮಗೆ ಸಭಾಧ್ಯಕ್ಷರ ಕರ್ತವ್ಯವನ್ನು ನೆನಪಿಸುತ್ತೇನೆ. ಆ ಸಭ್ಯ ಮನುಷ್ಯರನ್ನು ಕುಳಿತುಕೊಳ್ಳುವಂತೆ ಹೇಳಿ. ಸದಸ್ಯರಿಗೆ ಮುಕ್ತವಾಗಿ ಮಾತನಾಡಲು ಅವಕಾಶ ನೀಡುವುದು ಸಭಾಧ್ಯಕ್ಷರ ಕರ್ತವ್ಯದ ವ್ಯಾಪ್ತಿಯಲ್ಲಿ ಬರುತ್ತದೆ. ಅವರು ಸುಮ್ಮನಿರದಿದ್ದರೆ, ಮಾರ್ಷಲ್ ಕರೆಸಿ ಹೊರಹಾಕಿ.
(ಸಭಾಧ್ಯಕ್ಷರು ತಾಳ್ಮೆ ಕಳೆದುಕೊಂಡು, ಕುಳಿತುಕೊಳ್ಳುವಂತೆ ಆ ಸದಸ್ಯರಿಗೆ ಮತ್ತೆ ಮತ್ತೆ ಹೇಳಿ, ಹೀಗೆ ಮಾತಾಡಲು ಅಡ್ಡಿಪಡಿಸಿದರೆ ನಿಮ್ಮನ್ನು ಅಮಾನತು ಮಾಡಬೇಕಾಗುತ್ತದೆ ಎಂದು ಕಟುವಾಗಿ ಎಚ್ಚರಿಕೆ ನೀಡುತ್ತಾರೆ. ಆಳುವ ಪಕ್ಷದ ನಾಯಕರು ಆ ಸದಸ್ಯರಿಗೆ ಸರಿಯಾಗಿ ವರ್ತಿಸಲು ಹೇಳಿ. ಇದು ಸರಿಯಾದ ವರ್ತನೆಯಲ್ಲ. ನೀವು ಈ ರೀತಿಯಲ್ಲಿ ಅಡ್ಡಿಪಡಿಸುವಂತಿಲ್ಲ ಎನ್ನುತ್ತಾರೆ. ಸಭಾಧ್ಯಕ್ಷರು ಚೆನ್ನಾಗಿ ತರಾಟೆಗೆ ತೆಗೆದುಕೊಂಡ ಮೇಲೆ ಗದ್ದಲ ನಿಲ್ಲುತ್ತದೆ. ಮೊಯಿತ್ರಾ ಮಾತು ಮುಂದುವರಿಸುತ್ತಾರೆ.)
ನಾನು ವಾಲ್‌ಸ್ಟ್ರೀಟ್‌ನ ಶೇರು ವ್ಯವಹಾರಸ್ಥರ ಆರೋಪಗಳಿಗೆ ಹೋಗುವುದಿಲ್ಲ. ನಾನು ೨೦೧೯ರಿಂದಲೂ ಇದೇ ಸದನದಲ್ಲಿ ಈ ಕುರಿತು ಮಾತನಾಡುತ್ತಾ ಬಂದಿದ್ದೇನೆ. ಸದನದ ಕಡತಗಳಲ್ಲಿ ಅವು ದಾಖಲಾಗಿರುವುದನ್ನು ನೋಡಬಹುದು. ನಾನು ’ಸೆಬಿ’ (SEBI) ಮುಂತಾದ ಹಲವು ಸಂಸ್ಥೆಗಳು ಮತ್ತು ಹಣಕಾಸು ಸಚಿವರಿಗೆ ಮತ್ತೆಮತ್ತೆ ದೂರು ನೀಡಿದ್ದೇನೆ. ಆದರೂ ಈ ಕುರಿತು ತನಿಖೆ ನಡೆಸಿಲ್ಲ ಎಂದರೆ, ಅದು ಈ ದೇಶದ ತನಿಖಾ ಸಂಸ್ಥೆಗಳಿಗೆ ನಾಚಿಕೆಯ ಸಂಗತಿ. ಅದು ಇಡೀ ದೇಶಕ್ಕೇ ನಾಚಿಕೆಯ ಸಂಗತಿ. ಈಗ ಜಾಗತಿಕವಾಗಿ ಆರೋಪಗಳು ಕೇಳಿಬಂದ ನಂತರವಷ್ಟೇ ಎಲ್ಲರೂ ಎಚ್ಚೆತ್ತಿದ್ದಾರೆ. ನಾನು ಮತ್ತೆಮತ್ತೆ ಇದನ್ನು ಹೇಳುತ್ತಿರುವಾಗ ಯಾರೂ ಕೇಳಿಸಿಕೊಳ್ಳಲಿಲ್ಲ.

ಮಾನ್ಯ ಪ್ರಧಾನಿಯವರೇ, ಆ ವ್ಯಕ್ತಿ ನಿಮಗೆ ಟೋಪಿ ಹಾಕಿದ್ದಾರೆ. ಜಾಗತಿಕವಾಗಿ ದೇಶಗಳ ಮುಖ್ಯಸ್ಥರಿಗೆ ಟೋಪಿ ಹಾಕಿದ್ದಾರೆ. ಅವರು ನಿಮ್ಮ ವಿದೇಶ ಪ್ರವಾಸಗಳ ವೇಳೆ ನಿಮ್ಮ ನಿಯೋಗಗಳ ಜೊತೆಗೆ ಬರುತ್ತಾರೆ. ವಿದೇಶಿ ಸರಕಾರಗಳ ಮುಖ್ಯಸ್ಥರು ಭಾರತಕ್ಕೆ ಬಂದಾಗ ಅವರನ್ನು ನೇರವಾಗಿ ಭೇಟಿ ಮಾಡುತ್ತಾರೆ. ಭಾರತವೆಂದರೆ, ಪ್ರಧಾನಿ, ಪ್ರಧಾನಿ ಎಂದರೆ ತಾನೇ ಎಂದು ಜಗತ್ತಿಗೆ ಬಿಂಬಿಸುತ್ತಾರೆ. ಪ್ರಧಾನಿಯನ್ನು ನಿಯಂತ್ರಿಸುವ ರಿಮೋಟ್ ಕಂಟ್ರೋಲ್ ತಾನೇ, ತನ್ನನ್ನು ಖುಷಿಪಡಿಸಿದರೆ, ಪ್ರಧಾನಿಯನ್ನು ಖುಷಿ ಪಡಿಸಿದಂತೆ ಎಂದು ನಂಬಿಸುತ್ತಾರೆ…..
ಮಾನ್ಯ ಹಣಕಾಸು ಸಚಿವರೇ, ಅವರು ನಿಮಗೂ ಟೋಪಿ ಹಾಕಿದ್ದಾರೆ. ಅವರು ಶೇರುಗಳನ್ನು ಬಿಡುಗಡೆ ಮಾಡುವಾಗ, ಅದರ ವಿವರಗಳನ್ನು ನೀಡುವುದಕ್ಕೆ ತಾವು ಕಾನೂನು ಪ್ರಕಾರ ಬದ್ಧರಲ್ಲ ಎಂದು ಹೇಳುತ್ತಿದ್ದಾರೆ. ಬಂದರು ಮತ್ತು ವಿಮಾನ ನಿಲ್ದಾಣಗಳನ್ನು ವಶಕ್ಕೆ ತೆಗೆದುಕೊಳ್ಳಲು ನೇರವಾಗಿ ಗೃಹ ಸಚಿವಾಲಯದಿಂದ ಭದ್ರತಾ ಅನುಮತಿ ಪಡೆದುಕೊಳ್ಳುತ್ತಾರೆ. ವಿದೇಶಿ ಹೂಡಿಕೆ ಖಾತೆಯಲ್ಲಿ ಆರು ಮಾರಿಷಸ್ ಮೂಲದ ಶೆಲ್ (ನಕಲಿ/ಟೊಳ್ಳು) ನಿಧಿಗಳ ಮೂಲಕ 42,000 ಕೋಟಿ ರೂ.ಗಳನ್ನು ಈ ಗುಂಪಿನ ಕಂಪೆನಿಗಳಲ್ಲಿ ತೊಡಗಿಸಲಾಗಿದೆ. ಈ ಕಂಪೆನಿಗಳು ಒಂದೇ ವಿಳಾಸ, ಒಂದೇ ಕಂಪೆನಿ ಕಾರ್ಯದರ್ಶಿ, ಅದೇ ನಿರ್ದೇಶಕರುಗಳು ಮುಂತಾದ ಸಮಾನತೆಗಳನ್ನು ಹೊಂದಿವೆ. ಈ ಕುರಿತು ತಕ್ಷಣ ತನಿಖೆ ನಡೆಯಬೇಕು. ನಾನು ಇದನ್ನು 2019ರಿಂದಲೂ ಈ ಸದನದಲ್ಲಿ ಹೇಳುತ್ತಿದ್ದೇನೆ. ಇದಕ್ಕೆ ಹೆಚ್ಚುವರಿಯಾಗಿ ವಿದೇಶಗಳಲ್ಲಿ ಇರುವ ಶೇ.40ರಷ್ಟು ಶೆಲ್ ಕಂಪೆನಿಗಳ ಮೂಲಕ ಬಿಲಿಯನ್‌ಗಟ್ಟಲೆ ಹಣವನ್ನು ಸಂಗ್ರಹಿಸಿ, ಆತನ ಗುಂಪಿನ ಇಷ್ಟದ ಕಂಪೆನಿಗಳಲ್ಲಿ ತೊಡಗಿಸಲಾಗಿದೆ. ಈ ವ್ಯವಹಾರಗಳ ಕುರಿತು ಯಾವುದೇ ಮೂರನೇ ಪಾರ್ಟಿ ಮಾಹಿತಿಯನ್ನು ಈ ತನಕ ಬಹಿರಂಗಪಡಿಸಲಾಗಿಲ್ಲ. ಮಾಧ್ಯಮ ವರದಿಗಳ ಪ್ರಕಾರ ಈ ನಿಧಿಗಳನ್ನು ಚೌ ಚು ಲಿನ್ ಎಂಬ ಚೀನೀ ರಾಷ್ಟ್ರೀಯ ಮತ್ತು ಈ ವ್ಯಕ್ತಿಯ ಸಹೋದರ ನಿರ್ವಹಿಸುತ್ತಿದ್ದಾರೆ. ಈ ವ್ಯಕ್ತಿಯ ಆಸ್ತಿಯು ಒಂಬತ್ತು ಬಿಲಿಯನ್ ಡಾಲರ್ ಇದ್ದದ್ದು, ಅಷ್ಟು ಬೇಗನೇ ತೊಂಬತ್ತು ಬಿಲಿಯನ್ ಡಾಲರ್ ಆಗಿರುವುದು ಹೇಗೆ? “ಮಿಸ್ಟರ್ ಎ”ಯ ಸಹೋದರನಿಗೆ ಈ ಕಂಪೆನಿಗಳಲ್ಲಿ ಅಧಿಕೃತ ಹುದ್ದೆ ಇಲ್ಲ, ಆದುದರಿಂದ ಆ ವ್ಯಕ್ತಿಯ ವ್ಯವಹಾರಕ್ಕೆ ತಾನು ಬಾಧ್ಯ ಅಲ್ಲ, ಎಂದು ಈ ಗುಂಪು ಹೇಳಿದೆ. ಹೀಗಿರುವಾಗ ಈ ಕಂಪೆನಿಗಳಲ್ಲಿ ಆ ವ್ಯಕ್ತಿ ಕಾನೂನು ಬದ್ಧವಾಗಿ ಇಷ್ಟು ಪ್ರಮಾಣದ ಹಣ ತೊಡಗಿಸುವುದು ಹೇಗೆ ಸಾಧ್ಯ? ಮಾನ್ಯ ಹಣಕಾಸು ಸಚಿವರೇ, ಈ ವ್ಯಕ್ತಿ ನಿಮಗೆ ಟೋಪಿ ತೊಡಿಸುತ್ತಿದ್ದಾರೆ. ಈ ಕುರಿತು “ಸೆಬಿ” ತನಿಖೆ ನಡೆಯುತ್ತಿದೆ ಎಂದು ನಿಮ್ಮ ಸಚಿವಾಲಯದವರು ಇಲ್ಲೇ ನನಗೆ ತಿಳಿಸಿದ್ದರು. ಈ ತನಿಖೆ ಪೂರ್ಣವಾಗದೆ, ಈ ಗುಂಪಿಗೆ ಮತ್ತೆ 20,000 ಕೋಟಿ ರೂ.ಗಳ ಅಂತಾರಾಷ್ಟ್ರೀಯ ಸಾರ್ವಜನಿಕ ಹೂಡಿಕೆ ಎತ್ತಲು ಅನುಮತಿ ಹೇಗೆ ನೀಡಲಾಯಿತು? ದೇಶದ ಅತ್ಯುನ್ನತ ನ್ಯಾಯಾಲಯವು ತನ್ನನ್ನು ಮುಕ್ತಗೊಳಿಸಿದೆ ಎಂದು “ಎ ಕಂಪೆನಿ”ಯು ಹೇಳಿಕೆ ನೀಡಿದೆ. ಯಾವ ನ್ಯಾಯಾಲಯ ಅದು, ಯಾವ ದೇಶದ ನ್ಯಾಯಾಲಯ? ಇದರಲ್ಲಿ “ಸೆಬಿ”ಯ ಶಾಮೀಲಾತಿ ಏನು? ಯಾಕೆ “ಸೆಬಿ” ಮೌನವಾಗಿದೆ? ಕಂಪೆನಿಗಳ ಇನ್‌ಸೈಡರ್ ಟ್ರೇಡಿಂಗ್, ಶಾರ್ಟ್ ಸೆಲ್ಲಿಂಗ್ ಮುಂತಾದ ಶೇರು ಅಕ್ರಮಗಳು ಮತ್ತು ಕಾರ್ಪೊರೆಟ್ ಆಡಳಿತದ ನಿಯಂತ್ರಣಕ್ಕೆ ಇರುವ “ಸೆಬಿ”ಯ ನಿಯಂತ್ರಣ ಮಂಡಳಿಯಲ್ಲಿ “ಮಿಸ್ಟರ್ ಎ”ಯ ಮಗನ ಮಾವನಿಗೆ ಸ್ಥಾನ ಹೇಗೆ ಕೊಡಲಾಯಿತು? (ಪ್ರತಿಪಕ್ಷಗಳ ಸದಸ್ಯರು ಶೇಮ್ ಶೇಮ್, ಹೇಗೆ ಹೇಗೆ ಎಂದು ಕೂಗುತ್ತಾರೆ.) ಡಿಆರ್‌ಐ, ಕಸ್ಟಮ್ಸ್, ಇಡಿ, ಆದಾಯ ತೆರಿಗೆ ಇಲಾಖೆ ಇವೆಲ್ಲಾ ಏನು ಮಾಡುತ್ತಿವೆ? ಇದು ಅತ್ಯಂತ ಉನ್ನತ ಮಟ್ಟದ ಮೋಸ. ಒಬ್ಬ ವ್ಯಕ್ತಿಗೆ ಎಲ್‌ಐಸಿ, ಎಸ್‌ಬಿಐ ಮತ್ತು ಇತರ ಸಾರ್ವಜನಿಕ ರಂಗದ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳನ್ನು ಮನಬಂದಂತೆ ಬಳಸಿ, ಬೇಕಾದಂತೆ ಹಣ ಪಡೆಯಲು ಅವಕಾಶ ಹೇಗೆ ನೀಡಲಾಯಿತು? ಎಲ್‌ಐಸಿಯ 36,000 ಕೋಟಿ ರೂ. ಈಗಾಗಲೇ ಈ ಗುಂಪಿನಲ್ಲಿ ಹೂಡಿಕೆಯಾಗಿದ್ದು ಅದು ಅಪಾಯದಲ್ಲಿದೆ. ಆತನ ಕಂಪೆನಿಗಳು ಎಸ್‌ಬಿಐಗೆ 27,000 ಕೋಟಿ ರೂ. ಸಾಲ ಮರುಪಾವತಿ ಮಾಡದೆ ಬಾಕಿ ಇಟ್ಟಿವೆ. ಹೀಗಿರುವಾಗ ಆತನಿಗೆ ಮತ್ತೆ 20,000 ಕೋಟಿ ರೂ.ಗಳ ಸಾರ್ವಜನಿಕ ಹೂಡಿಕೆ ಎತ್ತಲು ಅವಕಾಶ ಹೇಗೆ ನೀಡಲಾಯಿತು?

ಇದನ್ನೂ ಓದಿ: ‘ಸರ್ಕಾರ ವಿರೋಧಿ ಕಾವ್ಯಕ್ಕೆ ಅವಕಾಶವಿಲ್ಲ’: ರೇಖ್ತಾ ಸಾಂಸ್ಕೃತಿಕ ಉತ್ಸವದಿಂದ ಹಿಂದೆ ಸರಿದ ಕವಿ ವಾಜಪೇಯಿ
ಮಾನ್ಯ ನಾಗರಿಕ ವಿಮಾನಯಾನ ಸಚಿವರೇ, ಆ ವ್ಯಕ್ತಿ ನಿಮಗೂ ಟೋಪಿ ಹಾಕಿದ್ದಾರೆ. ಯಾವುದೇ ಸಾರ್ವಜನಿಕ ಆಸ್ತಿಯನ್ನು ಮಾರಾಟ ಮಾಡುವಾಗ ಪಾರದರ್ಶಕ ಟೆಂಡರ್ ಮೂಲಕ ಮಾಡುವುದಾಗಿ ಮಾನ್ಯ ಹಣಕಾಸು ಸಚಿವರು ಹೇಳಿಕೊಳ್ಳುತ್ತಾರೆ. ಆದರೆ, “ಎ ಕಂಪೆನಿ”ಗೆ ಕೆಲವು ವಿಮಾನ ನಿಲ್ದಾಣಗಳನ್ನು ನೀಡುವಾಗ ಹಾಗೆ ಮಾಡಲಾಗಿಲ್ಲ, ಇಲ್ಲವೇ ನಾಲ್ಕು ಸಂದರ್ಭಗಳಲ್ಲಿ ಟೆಂಡರ್ ನಿಯಮಗಳನ್ನು ತಿರುಚಲಾಗಿದೆ.
(ಆಗ, ಸಭಾಧ್ಯಕ್ಷರು ಮಧ್ಯಪ್ರವೇಶ ಮಾಡಿ, ಸದನದಲ್ಲಿ ಹಾಜರಿರದ ವ್ಯಕ್ತಿಯ ಕುರಿತು ಇಂತಾ ಗಂಭೀರ ಆರೋಪಗಳನ್ನು ಮಾಡಬಾರದೆಂದು ಹೇಳುತ್ತಾರೆ. ತಾನು ಯಾವುದೇ ವ್ಯಕ್ತಿಯ ಹೆಸರನ್ನು ಎತ್ತಿಲ್ಲ ಮತ್ತು ತಾನು ಎತ್ತಿರುವ ಪ್ರಶ್ನೆ ಗಂಭೀರ ಸಾರ್ವಜನಿಕ ಹಿತಾಸಕ್ತಿ ಉಳ್ಳದ್ದು ಎಂದು ಮೊಯಿತ್ರಾ ಉತ್ತರಿಸುತ್ತಾರೆ.)
ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು ಬೇರೆಯವರು ಟೆಂಡರ್ ಮೂಲಕ ಪಡೆದ ಮೂರು ವಿಮಾನ ನಿಲ್ದಾಣಗಳ ಹಸ್ತಾಂತರವನ್ನು ವಿಳಂಬ ಮಾಡಿತು. ಮುಂಬಯಿ ವಿಮಾನ ನಿಲ್ದಾಣವನ್ನು ನಿರ್ಮಾಣ ಮಾಡಿದ ಜಿವಿಕೆಯು ಉತ್ತಮ ಕೆಲಸ ಮಾಡಿತ್ತು. ಆದರೆ, ಅದರ ಕಚೇರಿಗಳ ಮೇಲೆ ಇಡಿ ದಾಳಿ ನಡೆಯಿತು. ಸಿಬಿಐ ಕೇಸು ದಾಖಲಿಸಿತು. ಕೊನೆಗೆ ಜಿವಿಕೆಯು ವಿಮಾನ ನಿಲ್ದಾಣದಲ್ಲಿ 56 ಶೇಕಡಾ ಶೇರುಗಳನ್ನು “ಎ ಕಂಪೆನಿ”ಗೆ ಹಸ್ತಾಂತರಿಸಿತು. ಈ ರೀತಿಯಲ್ಲಿ ಟೋಪಿ ತೊಡಿಸುವುದು ಮುಂದುವರಿದಿದೆ.
ಮಾನ್ಯ ನೌಕಾಯಾನ ಸಚಿವರೇ, ಅವರು ನಿಮಗೂ ಟೋಪಿ ಹಾಕಿದ್ದಾರೆ. ಮಹಾರಾಷ್ಟ್ರದಲ್ಲಿ ಪ್ರಭಾವ ಹೊಂದಿರುವ ಅವರು, ವರ್ಷಗಳಿಂದ ಮುಂಬಯಿ ಬಂದರಿನಲ್ಲಿ ಡ್ರೆಜ್ಜಿಂಗನ್ನು (ಹೂಳೆತ್ತುವುದು) ತಡೆದಿದ್ದಾರೆ. ಅಲ್ಲಿಗೆ ಬರುವ ಹಡಗುಗಳ ಸಂಖ್ಯೆ ಕಡಿಮೆಯಾಗಿ, ತನ್ನ ಬಂದರುಗಳಿಗೆ ಬರಬೇಕು ಎಂದು. ಪರಾದೀಪ್ ಬಂದರಿನಲ್ಲಿಯೂ ಇಂಧನ ಟರ್ಮಿನಲ್‌ಗೆ ತಡೆಯೊಡ್ಡಿ ಇದನ್ನೇ ಮಾಡಿದ್ದಾರೆ.
(ಈ ಸಮಯದಲ್ಲಿ ಸಭಾಧ್ಯಕ್ಷರು ನಿಮ್ಮ ಸಮಯ ಮುಗಿದಿದೆ ಎಂದು ಹೇಳುತ್ತಾರೆ. ತನ್ನ ಮಾತಿಗೆ ತಡೆ ಒಡ್ಡಿದುದರಿಂದ, ತನಗೆ ಇನ್ನೂ ಮೂರು ನಿಮಿಷ ಕಾಲಾವಕಾಶ ನೀಡಬೇಕೆಂಬ ಮೊಹಿತ್ರಾ ಮನವಿಯನ್ನು ಸಭಾಧ್ಯಕ್ಷರು ಒಪ್ಪುತ್ತಾರೆ.)
ಮಾನ್ಯ ಪೆಟ್ರೋಲಿಯಂ ಸಚಿವರೇ, ಆ ವ್ಯಕ್ತಿ ನಿಮಗೂ ಟೋಪಿ ಹಾಕಿದ್ದಾರೆ. ಸಾರ್ವಜನಿಕ ರಂಗದ ತೈಲ ಕಂಪೆನಿಗಳಾದ ಒಎನ್‌ಜಿಸಿ ಮತ್ತು ಗೈಲ್ (GAIL) 46,000 ಕೋಟಿ ರೂ.ಗಳ 20 ವರ್ಷಗಳ ಗುತ್ತಿಗೆಯನ್ನು ಯಾವುದೇ ಟೆಂಡರ್ ಇಲ್ಲದೇ ಆತನಿಗೆ ನೀಡುವಂತೆ ಆಟವಾಡಲಾಗಿದೆ. ಮಾನ್ಯ ಇಂಧನ ಸಚಿವರೇ, ಅವರು ನಿಮಗೂ ಟೋಪಿ ತೊಡಿಸಿದ್ದಾರೆ, ತೀರದಾಚೆಯ ಇತರ ಸಂಸ್ಥೆಗಳನ್ನು ಹಿಂಡಿ, ಕೋಟ್ಯಂತರ ರೂ. ಮೌಲ್ಯದ ವಿದೇಶಿ ಕಲ್ಲಿದ್ದಲನ್ನು ವಿದ್ಯುತ್ ಉತ್ಪಾದನಾ ಘಟಕಗಳಿಗೆ ಮಾರುತ್ತಿದ್ದಾರೆ.
ಭಾರತವು ವಿಶ್ವದ ಮೂರನೇ ದೊಡ್ಡ ಆರ್ಥಿಕತೆಯಾಗಲು ಹೊರಟಿರುವ ಹೊತ್ತಿನಲ್ಲಿ ಅದಕ್ಕೆ ಕ್ರೋನಿ ಕ್ಯಾಪಿಟಲಿಸಂನ ಕೊಳಕು ವಾಸನೆ ಹೊಡೆಸಲು ಆತನಿಗೆ ಅವಕಾಶ ನೀಡಬಾರದು. ಈ ಕುರಿತು ವಿವರವಾದ ತನಿಖೆ ನಡೆಸಬೇಕು. ಮೂಲ ಸೌಕರ್ಯಗಳ ಬಗ್ಗೆ ಚಿಂತಿಸಬೇಕಾದ ಅಗತ್ಯವಿಲ್ಲ. ಅವುಗಳನ್ನು ವಹಿಸಿಕೊಂಡು ನಿರ್ವಹಿಸಬಲ್ಲ ಸಮರ್ಥ ಮತ್ತು ಗೌರವಾರ್ಹ ವಿಶ್ವದರ್ಜೆಯ ಭಾರತೀಯ ಸಂಸ್ಥೆಗಳು ನಮ್ಮಲ್ಲಿವೆ. ಬಿಜೆಪಿಯವರು, ಚಡ್ಡಿಗಳು ಎಲ್ಲರೂ ಕೇಳುತ್ತಿದ್ದಾರೆ: ಮೊಹುವಾ ಹಿಂದೆ ಯಾರಿದ್ದಾರೆ? ಅಮೆರಿಕನ್ ಹೂಡಿಕೆ ಕಂಪೆನಿಗಳು, ಚೀನಾ ಇತ್ಯಾದಿ ಎಲ್ಲಾ ರೀತಿಯ ಸುದ್ದಿಗಳನ್ನು ಹರಡುತ್ತಿದ್ದಾರೆ. ಮೊಹುವಾ ಹಿಂದೆ ಯಾರೂ ಇಲ್ಲ; ಮೊಹುವಾ ಹಿಂದೆ ಸತ್ಯವಿದೆ.
ಕನ್ನಡದಲ್ಲಿ ನಿರೂಪಣೆ:
ನಿಖಿಲ್ ಕೋಲ್ಪೆ


