ಇಂದು ನವದೆಹಲಿಯಲ್ಲಿ ಉತ್ತರ ಕನ್ನಡದ ಹಾಲಕ್ಕಿ ಬುಡಕಟ್ಟಿನ ತುಳಸಿ ಗೌಡರಿಗೆ ರಾಷ್ಟ್ರಪತಿಗಳು ಪದ್ಮ ಪುರಸ್ಕಾರ ನೀಡಿ ಗೌರವಿಸಲಿದ್ದಾರೆ. ಇದರೊಂದಿಗೆ ಉತ್ತರ ಕನ್ನಡ ಜಿಲ್ಲೆಗೆ ಮೂರು ಪದ್ಮಶ್ರೀ ಪ್ರಶಸ್ತಿ ದೊರಕಿದಂತಾಗುತ್ತದೆ. ಇದು ಜಿಲ್ಲೆಯಲ್ಲಿ ಹೆಮ್ಮೆ-ಸಂಭ್ರಮ ಉಂಟುಮಾಡಿದೆ. ವಿಶೇಷವೆಂದರೆ ಇದರಲ್ಲಿ ಯಕ್ಷಗಾನದ ಮೇರು ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆ ಬಿಟ್ಟರೆ ಉಳಿದೆರಡು ಪದ್ಮಶ್ರೀ ಜಿಲ್ಲೆಯ ಹೆಮ್ಮೆಯ ಅಸ್ಮಿತೆಯಂತಿರುವ ಹಾಲಕ್ಕಿ ಒಕ್ಕಲಿಗ ಬುಡಕಟ್ಟು ಸಮುದಾಯದ ಶ್ರಮ ಸಂಸ್ಕೃತಿಯ ಮಹಿಳೆಯರಿಬ್ಬರ ಅರಸಿ ಬಂದಿದೆ!
ಅದೇ ರೀತಿಯಾಗಿ ಇಂದು ಅಕ್ಷರ ಸಂತ ಎಂದು ಕರೆಸಿಕೊಂಡ ದಕ್ಷಿಣ ಕನ್ನಡದ ಹರೇಕಳ ಹಾಜಬ್ಬನವರಿಗೆ ದೆಹಲಿಯಲ್ಲಿ ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಚಿಟ್ಟಾಣಿಯವರಿಗೆ 2012ರಲ್ಲಿ ಪದ್ಮ ಪುರಸ್ಕಾರದಿಂದ ಗೌರವಿಸಲಾಗಿತ್ತು. ಹಾಲಕ್ಕಿ ಬುಡಕಟ್ಟು ಸಮುದಾಯದ ಸುಕ್ರಜ್ಜಿ (ಸುಕ್ರಿ ಬೊಮ್ಮ ಗೌಡ)ರವರಿಗೆ 2017ರಲ್ಲಿ ಪದ್ಮಶೀ ಪ್ರಶಸ್ತಿ ಬಂದಾಗ ಇಡೀ ಜಿಲ್ಲೆಯಲ್ಲಿ ಸಡಗರ ತುಂಬಿತ್ತು. ಇದೊಂದು ಯಾವ ಲಾಬಿ-ಶಿಫಾರಸ್ಸು ಇಲ್ಲದೆ ನೈಜ ಪ್ರತಿಭೆಗೆ ಸಂದ ಗೌರವ! ಸುಕ್ರಜ್ಜಿಯನ್ನು ಜಿಲ್ಲೆಯ ದಶದಿಕ್ಕಿಗೆ ಕರೆದು ಸನ್ಮಾನಿಸಲಾಗಿತ್ತು. ಜಾನಪದ ಹಾಡುಗಳ ಕಣಜವೆಂಬ ಖ್ಯಾತಿಯ ಸುಕ್ರಜ್ಜಿಯ ನಾಲಿಗೆಯಲ್ಲಿ 5000ಕ್ಕಿಂತ ಹೆಚ್ಚು ಹಾಡುಗಳಿವೆ. ಇದನ್ನು ಕಾರವಾರದ ಆಕಾಶವಾಣಿ ನಿಲಯ ಅಖಿಲ ಭಾರತ ರೇಡಿಯೋ ಧ್ವನಿ ಮುದ್ರಣ ಯೋಜನೆಯಲ್ಲಿ ದಾಖಲಿಸಿಟ್ಟಿದೆ. ಕರ್ನಾಟಕ ಜಾನಪದ ಅಕಾಡಮಿ ಸುಕ್ರಜ್ಜಿಯವರ ಹಾಡುಗಳ ಪುಸ್ತಕ ಹೊರತಂದಿದೆ. ಸುಕ್ರಿ ಗೌಡರಿಗೆ 1999ರಲ್ಲಿ ಜಾನಪದಶ್ರೀ ಪ್ರಶಸ್ತಿ ಬಂದಾಗ ಅವರು ನಾಡಿನ ಹೆಮ್ಮೆಯ ಅಜ್ಜಿಯೆಂದು ಲಂಕೇಶ್ ಪತ್ರಿಕೆ ಬರೆದಿತ್ತು. ಅಂದಿನಿಂದ ಸುಕ್ರಿ ಗೌಡರು ನಾಡಿನ ಜಾನಪದ, ಸಾಮಾಜಿಕ ಲೋಕದ ಅಜ್ಜಿಯೆಂದೇ ಗುರುತಿಸಲ್ಪಟ್ಟರು. ಸಾರಾಯಿ ವಿರೋಧಿ ಆಂದೋಲನವೇ ಮುಂತಾದ ಸಾಮಾಜಿಕ ಹೋರಾಟದಲ್ಲಿ ಸಕ್ರಿಯರಾಗಿದ್ದರು.
ಈಗ ಪದ್ಮಶ್ರೀ ಸ್ವಿಕರಿಸುತ್ತಿರುವ ಅಂಕೋಲೆಯ ತುಳಸಿ ಗೌಡರು ಆರೇಳು ದಶಕದಿಂದ ಪ್ರತಿ ವರ್ಷ 30 ಸಾವಿರ ಸಸಿಗಳನ್ನು ನೆಟ್ಟು ಪೋಷಿಸುತ್ತ ಬಂದಿದ್ದಾರೆ. 72 ವರ್ಷದ ತುಳಸಜ್ಜಿ ವನದೇವತೆಯೆಂದೇ ಜನಜನಿತರಾಗಿದ್ದಾರೆ! ಕೇಂದ್ರ ಸರ್ಕಾರದ ಪ್ರಿಯದರ್ಶಿನಿ ವೃಕ್ಷ ಮಿತ್ರ ಪ್ರಶಸ್ತಿ, ರಾಜೋತ್ಸವ ಪ್ರಶಸ್ತಿ ಸಹ ತುಳಸಜ್ಜಿಗೆ ಸಂದಿವೆ. ಪ್ರಶಸ್ತಿ ಸ್ವೀಕರಿಸಲು ದಿಲ್ಲಿಗೆ ತೆರಳಿರುವ ಅವರನ್ನು ಅಂಕೋಲೆ ಜನರು ಖರ್ಚಿಗೆಂದು ಹಣ ಸಂಗ್ರಹಿಸಿ ಕೊಟ್ಟು, ಸನ್ಮಾನಿಸಿ ಸಡಗರದಲ್ಲಿ ಬೀಳ್ಕೊಟ್ಟಿದ್ದಾರೆ.
ದಿಲ್ಲಿಗೆ ಹೋಗಲೆಂದು ಜನರು ಕೂಡಿಸಿ ಕೊಟ್ಟಿರುವ 1 ಲಕ್ಷ 16 ಸಾವಿರ ರೂಗಳಲ್ಲಿ ಒಂದಿಷ್ಟನ್ನು ಅನಾರೋಗ್ಯದಲ್ಲಿರುವ ಜಾನಪದ ಕೋಗಿಲೆ ಸುಕ್ರಜ್ಜಿಯ ಆಸ್ಪತ್ರೆ ಖರ್ಚಿಗೆಂದು ತುಳಸಜ್ಜಿ ಕೊಟ್ಟಿದ್ದಾರೆ. ಈ ಮಾನವೀಯ ಕಳಕಳಿ ಜಿಲ್ಲೆಯ ಹೃದಯವನ್ನು ಆರ್ದ್ರವಾಗಿಸಿದೆ! ಇದಕ್ಕಿಂತ ದೊಡ್ಡ ಮನುಷ್ಯತ್ವ ಇನ್ನೇನಿದೆ? ಹಾಲಕ್ಕಿ ಬುಡಕಟ್ಟು ಸಮುದಾಯಕ್ಕೆ ಪರಿಶಿಷ್ಟ ಪಂಗಡ ಮೀಸಲಾತಿ ಒದಗಿಸುವಂತೆ ಸುಕ್ರಜ್ಜಿ, ತುಳಸಜ್ಜಿ ಆದಿಯಾಗಿ ಆ ಜನಾಂಗದವರು ದಶಕಗಳಿಂದ ಹೋರಾಡಿತ್ತಿದ್ದಾರೆ. ಈಗಲಾದರೂ ಹಾಲಕ್ಕಿಗಳು ಹೆಚ್ಚಿರುವ ಕಾರವಾರ ಹಾಗೂ ಕುಮಟಾ ಕ್ಷೇತ್ರದ ಶಾಸಕರಾದ ರೂಪಾಲಿ ನಾಯ್ಕ್ ಮತ್ತು ದಿನಕರ ಶೆಟ್ಟಿ ಸಂಸದ ಅನಂತಕುಮಾರ್ ಹೆಗಡೆ ಮೇಲೆ ಒತ್ತಡ ಹಾಕಿ ಇಚ್ಚಾ ಶಕ್ತಿ ತೋರಿಸುವರಾ ಎಂದು ಕಾದು ನೋಡಬೇಕಾಗಿದೆ.
ಇದನ್ನೂ ಓದಿ: ಬುಡಕಟ್ಟು ಹಾಲಕ್ಕಿ ಒಕ್ಕಲಿಗರನ್ನು ಎಸ್‌ಟಿಗೆ ಸೇರಿಸಲು ಅಡ್ಡಗಾಲು ಹಾಕುತ್ತಿರುವುದು ಯಾರು?


