Homeಮುಖಪುಟಬುಡಕಟ್ಟು ಹಾಲಕ್ಕಿ ಒಕ್ಕಲಿಗರನ್ನು ಎಸ್‌‌ಟಿಗೆ ಸೇರಿಸಲು ಅಡ್ಡಗಾಲು ಹಾಕುತ್ತಿರುವುದು ಯಾರು?

ಬುಡಕಟ್ಟು ಹಾಲಕ್ಕಿ ಒಕ್ಕಲಿಗರನ್ನು ಎಸ್‌‌ಟಿಗೆ ಸೇರಿಸಲು ಅಡ್ಡಗಾಲು ಹಾಕುತ್ತಿರುವುದು ಯಾರು?

ಹಾಲಕ್ಕಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿದರೆ ಮಂದೊಂದು ದಿನ ಉತ್ತರ ಕನ್ನಡ ಲೋಕಸಭಾ ಕ್ಷೇತ್ರ ಪರಿಶಿಷ್ಟರಿಗೆ ಮೀಸಲಾಗುತ್ತದೆಂಬ ಭೀತಿ ಬಲಾಡ್ಯ ಜಾತಿ ಶಕ್ತಿಗಳನ್ನು ಕಾಡುತ್ತಿದೆಯೆಂಬ ಚರ್ಚೆ ನಡೆದಿದೆ.

- Advertisement -
- Advertisement -

ಸಹ್ಯಾದ್ರಿ ತಪ್ಪಲಲ್ಲಿರುವ ಉತ್ತರ ಕನ್ನಡದ ಪ್ರಾಕೃತಿಕ ಸೊಬಗಿಗೆ ಮೆರಗು ನೀಡಿರುವ ಆದಿವಾಸಿ ಹಾಲಕ್ಕಿ ಒಕ್ಕಲಿಗ ಸಮುದಾಯ ಮುಖ್ಯವಾಹಿನಿಗೆ ಬರಲಾಗದೆ ತೊಂದರೆಪಡುಡುತ್ತಿದೆ. ಆಧುನಿಕ ಸ್ಪರ್ಧೆಯಲ್ಲಿ ಬಲಾಢ್ಯರೊಂದಿಗೆ ಪೈಪೋಟಿ ನಡೆಸಲಾಗದೆ ತೀರಾ ಹಿಂದುಳಿದಿರುವ ಈ ಬುಡಕಟ್ಟು ಜನಾಂಗದವರು ತಮ್ಮನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿ ಮುಂದುವರಿಕೆಗೆ ಅನುಕೂಲ ಕಲ್ಪಿಸುವಂತೆ ಬೇಡಿಕೆಯಿಟ್ಟು ಎರಡು ದಶಕಗಳೇ ಆಗಿಹೋಗಿದೆ. ಆದರೆ ಉತ್ತರ ಕನ್ನಡದ ಎಂಪಿ, ಎಂ.ಎಲ್‌.ಎ., ಮಂತ್ರಿಗಳ ಉದಾಸೀನ, ಇಚ್ಛಾ ಶಕ್ತಿಯ ಕೊರತೆಯಿಂದ ಹಾಲಕ್ಕಿ ಒಕ್ಕಲಿಗ ಸಮುದಾಯ ಅವಜ್ಞೆಗೀಡಾಗಿದೆ.

ಕಾರವಾರದ ಕಾಳಿ ನದಿಯಿಂದ ಹೊನ್ನಾವರದ ಶರಾವತಿ ನದಿ ತನಕದ ಕರಾವಳಿಯ ನಾಲ್ಕು ತಾಲೂಕುಗಳಾದ ಕಾರವಾರ, ಅಂಕೋಲಾ, ಕುಮಟಾ ಮತ್ತು ಹೊನ್ನಾವರದ ಕಾಡಿನಲ್ಲಿ ಬದುಕು ಕಟ್ಟಿಕೊಂಡಿರುವ ಹಾಲಕ್ಕಿ ಒಕ್ಕಲಿಗರು ಸರಿಸುಮಾರು ಒಂದೂವರೆ ಲಕ್ಷದಷ್ಟಿದ್ದಾರೆ. 7 ಸೀಮೆಗಳಲ್ಲಿ ಅಂದರೆ ಸುಮಾರು 169 ಹಳ್ಳಿಗಳಲ್ಲಿರುವ ಹಾಲಕ್ಕಿಗಳ ವಿಶಿಷ್ಟ ಉಡುಗೆ-ತೊಡುಗೆ, ಸಂಸ್ಕೃತಿ- ಸಂಪ್ರದಾಯ, ಕಲೆ-ಕಸಬು ಕಂಡರೆ ಎಂಥವರಿಗೂ ಇದೊಂದು ಬುಡಕಟ್ಟು ಸಮುದಾಯವೆಂಬುದು ನಿಸ್ಸಂಶಯವಾಗಿ ಖಾತ್ರಿಯಾಗುತ್ತದೆ. ಆದರೆ ಕುಲಶಾಸ್ತ್ರೀಯ ಅಧ್ಯಯದಿಂದಲೇ ಹಾಲಕ್ಕಿಗಳು ಬುಡಕಟ್ಟು ಮಂದಿಯೆಂಬುದು ಸಾಬೀತಾಗಿದ್ದರೂ ಆಳುವವರಿಗೆ ಮಾತ್ರ ಪರಿಶಿಷ್ಟ ಪಂಗಡಕ್ಕೆ ಸೇರಿಸಲಾಗಿಲ್ಲ!

PC : The Economic Times (ಮಾರ್ಗರೆಟ್ ಆಳ್ವ)

ಹಲವು ಮುಖ್ಯ ಮಂತ್ರಿಗಳು, ಮಂತ್ರಿಗಳು, ಸಂಸದರು, ಶಾಸಕರುಗಳ ಬಳಿ ಎಡತಾಕಿ ಮನವಿಗಳನ್ನು ಕೊಟ್ಟು ಸುಸ್ತಾಗಿರುವ ಹಾಲಕ್ಕಿಗಳೀಗ ಬೀದಿಗಿಳಿದು ಹೋರಾಡಬೇಕಾಗಿ ಬಂದಿದೆ. ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯವಾಗಿ ತೀರಾ ಹಿಂದುಳಿದಿರುವ ಹಾಲಕ್ಕಿ ಸುಮುದಾಯದ ಹಲವು ಕುಟುಂಬಗಳಿಗೆ ಸೂರು ಕಟ್ಟಿಕೊಳ್ಳಲು ಕೂಡ ಒಂದು ಗುಂಟೆ ಜಾಗವಿಲ್ಲ. ಉತ್ತರ ಕನ್ನಡದ ಸಾಕ್ಷರತೆ ಶೆ.76ರಷ್ಟಿದೆ. ಆದರೆ ಹಾಲಕ್ಕಿಗಳ ಸಾಕ್ಷರತೆ ಪ್ರಮಾಣ ಶೇ.10 ಮಾತ್ರ! ಮೀಸಲಾತಿ ವ್ಯವಸ್ಥೆಯಲ್ಲಿ ಪ್ರ ವರ್ಗ-1ರಲ್ಲಿ ಸೇರಿಸಲ್ಪಟ್ಟಿರುವ ಹಾಲಕ್ಕಿಗಳಿಗೆ ಘನ ಘೋರ ಅನ್ಯಾಯ ಮಾಡಲಾಗಿದೆ ಎಂಬುದು ಸರ್ವವಿಧಿತ. ಪ್ರವರ್ಗ-1ರಲ್ಲಿರುವ ಪ್ರಬಲ ಜಾತಿಯ ಜನರೊಂದಿಗೆ ಅವಕಾಶಗಳಿಗಾಗಿ ಬಡಿದಾಡುವ ತ್ರಾಣ ಈ ಮುಗ್ದ ಸಮುದಾಯಕ್ಕಿಲ್ಲ. ಕೃಷಿ ಮತ್ತು ಕೃಷಿ ಕೂಲಿಗಳಾದ ಹಾಲಕ್ಕಿಗಳಿಗೆ ನಿರಂತರವಾಗಿ ಆಳುವವರು ಅನ್ಯಾಯ ಮಾಡುತ್ತಲೇ ಬಂದಿದ್ದಾರೆ. 25 ವರ್ಷದಿಂದ ತಮಗೆ ಮೀಸಲಾತಿಯಲ್ಲಾಗಿರುವ ವಂಚನೆ ಸರಿಪಡಿಸುವಂತೆ ಪರಿಪರಿಯಾಗಿ ಬೇಡುತ್ತಿದ್ದರು ಬದ್ಧತೆಯಿಂದ ಸ್ಪಂದಿಸುತ್ತಿಲ್ಲ.

ಇದನ್ನೂ ಓದಿರಿ: ಉತ್ತರ ಕನ್ನಡಕ್ಕೆ ಏಮ್ಸ್ ಆದರೂ ಕೊಡಿ; ಸಾಮಾಜಿಕ ಜಾಲತಾಣದಲ್ಲಿ ಹಕ್ಕೊತ್ತಾಯ

ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸುತ್ತಿರುವ ಪದ್ಮಶ್ರೀ ಸುಕ್ರಿ ಗೌಡರು. ಹಾಲಕ್ಕಿ ನಿಯೋಗ

ಹಾಲಕ್ಕಿ ಒಕ್ಕಲಿಗ ಮುಖಂಡರು ಜಿಲ್ಲೆಯನ್ನು ಬಹುಕಾಲ ಮಂತ್ರಿಯಾಗಿ ಆಳಿದ ಆರ್.ವಿ.ದೇಶಪಾಂಡೆಯವರನ್ನು ಪದೇ ಪದೇ ಭೇಟಿಯಾಗಿ ತಮ್ಮನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಪ್ರಯತ್ನಿಸುವಂತೆ ಒತ್ತಡ ಹಾಕಹತ್ತಿದ್ದರು. ಹಾಗಾಗಿ 2002ರಲ್ಲಿ ಅಂದಿನ ಜಿಲ್ಲಾ ಉಸ್ತುವಾರಿ ಮಂತ್ರಿ ದೇಶಪಾಂಡೆಯವರು ಹಾಲಕ್ಕಿಗಳ ಬೇಡಿಕೆಯತ್ತ ಗಮನ ಹರಿಸಬೇಕಾಗಿ ಬಂತು. ಒಂಚೂರು ಆಸಕ್ತಿಯಿಂದ ಹಾಲಕ್ಕಿಗಳತ್ತ ಪ್ರಮಾಣಿಕವಾಗಿ ಗಮನಹರಿಸಿದಿದ್ದೆಂದರೆ ಸ್ಥಳೀಯ ಸಂಸದೆಯಾಗಿದ್ದ ಮಾರ್ಗರೆಟ್ ಆಳ್ವ ಒಬ್ಬರೇ. ಆನಂತರ ರಾಜ್ಯ ಸರ್ಕಾರ ಹಾಲಕ್ಕಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿವಂತೆ ಶಿಫಾರಸು ಮಾಡಿತ್ತು. ಆದರೆ ಸಂಸದ ಅನಂತಕುಮಾರ್ ಹೆಗಡೆಯವರ ನಿರಾಸಕ್ತಿಯಿಂದ ದಿಲ್ಲಿಯಲ್ಲಿ ಕಡತ ಮುಂದಕ್ಕೆ ಹೋಗದೆ ಧೂಳುತ್ತಿನ್ನುತ ಕೂತಿದೆ ಎಂಬ ಅಳಲು ಹಾಲಕ್ಕಿ ಸಮುದಾಯಲ್ಲಿದೆ.

ಈಗ ಹಾಲಕ್ಕಿ ಮುಂದಾಳುಗಳು ಸಂಸದ ಹೆಗಡೆಯವರ ಬೆನ್ನುಬಿದ್ದಿದ್ದಾರೆ. ಹೆಗಡೆ ಒಂದೊಂದೇ ಸಬೂಬು ಹೇಳಿ ಕಾಲಹರಣ ಮಾಡುತ್ತಿದ್ದಾರೆಂದು ಹೆಸರು ಹೇಳಲಿಚ್ಚಿಸದ ಹಾಲಕ್ಕಿ ಹಿರಿಯರೊಬ್ಬರು ‘ನಾನು ಗೌರಿ.ಕಾಂ’ ನೊಂದಿಗೆ ಮಾತನಾಡುತ್ತ ಬೇಸರಿಸಿದರು. ಕಳೆದ ವರ್ಷ ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ಮಂತ್ರಿಯನ್ನು ಬೇಟಿ ಮಾಡಿಸುವೆನೆಂದು ಸಂಸದ ಹೆಗಡೆಯವರು ಹಾಲಕ್ಕಿ ಮುಖಂಡರಿಗೆ ಹೇಳಿದ್ದರಂತೆ. ಹಾಲಕ್ಕಿಗಳ ನಿಯೋಗ ವಿಮಾನ ಟಿಕೆಟ್ ತೆಗೆದು ಪ್ರಯಾಣಕ್ಕೆ ಸಿದ್ದವಾಗಿತ್ತು. ಆದರೆ ಅದೇ ಸಮಯದಲ್ಲಿ ಚೀನಾದಲ್ಲಿ ಕೊರೊನಾ ಶುರುವಾಗಿತ್ತು. ಇದೆ ನೆಪ ಮಾಡಿ ಹಾಲಕ್ಕಿ ನಿಯೋಗಕ್ಕೆ ದಿಲ್ಲಿಗೆ ಬರುವುದು ಬೇಡವೆಂದು ಸಂಸದರು ಹೇಳಿದರಂತೆ! ಹಾಲಕ್ಕಿ ಹೋರಾಟಗರರು ಸಂಸದರಿಗೆ ಪೋನಾಯಿಸುತ್ತಲೇ ಇದ್ದಾರೆ. ಸದ್ಯ ಕೊರೊನಾ ಹಾವಳಿಯಿರುವುದರಿಂದ ದಿಲ್ಲಿಗೆಲ್ಲ ಬರುವುದು ಬೇಡ; ಕರ್ನಾಟಕದವರೆ ಕೇಂದ್ರದಲ್ಲಿ ಸಾಮಾಜಿಕ ನ್ಯಾಯ ಸಬಲೀಕರಣ ಇಲಾಖೆಗೆ ಸಹಾಯಕ ಮಂತ್ರಿ[ನಾರಾಯಣಸ್ವಾಮಿ] ಆಗಿದ್ದಾರೆ. ಅವರನ್ನು ಬೆಂಗಳೂರಲ್ಲೇ ಭೇಟಿ ಮಾಡಿಸುತ್ತೇನೆ ಎಂದು ಈಗ ಸಂಸದರು ಹೇಳುತ್ತಿದ್ದಾರಂತೆ.

PC : Prajavani (ಅನಂತಕುಮಾರ್ ಹೆಗಡೆ)

ಹಾಲಕ್ಕಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಪ್ರಸ್ತಾವನೆ ಪ್ರಕ್ರಿಯೆ ಪಾರ್ಲಿಮೆಂಟಲ್ಲಿ ಮಂಡಿಸಿ ಒಪ್ಪಿಗೆ ಪಡೆಯುವ ಹಂತಕ್ಕೆ ಬಂದಿದೆ. ಸಂಸದ ಹೆಗಡೆ ಸ್ವಲ್ಪ ಮುತುರ್ವಜಿ ವಹಿಸಿದರೆ ತಮ್ಮ ಬಹುದಿನದ ಕನಸು ನನಸಾಗುತ್ತದೆಯೆಂದು ಹಾಲಕ್ಕಿ ಹೋರಾಟದ ಮುಂಚೂಣಿಯಲ್ಲಿರುವವರು ಹೇಳುತ್ತಾರೆ. ತಮ್ಮ ಬೇಡಿಕೆ ಈಡೇರದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಹೋರಾಟ ಮಾಡುತ್ತೇವೆಂದು ಹಾಲಕ್ಕಿ ನೇತಾರರು ಎಚ್ಚರಿಕೆ ಕೊಟ್ಟಿದ್ದಾರೆ. ಹಾಲಕ್ಕಿ ಸಮುದಾಯದ ಜಾನಪದ ಕೋಗಿಲೆ ಖ್ಯಾತಿಯ ಸುಕ್ರಿ ಗೌಡ ತಮ್ಮ ಶೋಷಿತ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸದಿದ್ದರೆ ತನಗೆ ಬಂದಿರುವ ಪದ್ಮಶ್ರೀ ಪ್ರಶಸ್ತಿ ಮರುಳಿಸಿ ಈ ಇಳಿವಯಸ್ಸಿನಲ್ಲಿ ಹೋರಾಟಕ್ಕೆ ಧುಮುಕಲು ಸಿದ್ದರೆಂದು ಹೇಳುತ್ತಿದ್ದಾರೆ! ಹಾಲಕ್ಕಿಗಳ ಮೀಸಲಾತಿ ಹೋರಾಟ ಜೋರಾಗುವ ಎಲ್ಲ ಲಕ್ಷಣಗಳೀಗ ಗೋಚರಿಸುತ್ತದೆ.

ಸಾಮಾಜಿಕ ನ್ಯಾಯ ತತ್ವದಂತೆ ಪರಿಶಿಷ್ಟ ಪಂಗಡಕ್ಕೆ ಸೇರುವ ಸಕಲ ಅರ್ಹತೆಯಿರುವ ಹಾಲಕ್ಕಿ ಒಕ್ಕಲಿಗರನ್ನು ವಂಚಿಸುತ್ತಿರುವುದರ ಹಿಂದೆ ಮೇಲು ವರ್ಗದ ಪಟ್ಟಭದ್ರ ರಾಜಕೀಯ ಹಿತಾಸಕ್ತಿ ಅಡಗಿದೆಯೆಂಬ ಭಾವನೆ ಉತ್ತರ ಕನ್ನಡದಲ್ಲಿದೆ. ಹಾಲಕ್ಕಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿದರೆ ಮಂದೊಂದು ದಿನ ಉತ್ತರ ಕನ್ನಡ ಲೋಕಸಭಾ ಕ್ಷೇತ್ರ ಪರಿಶಿಷ್ಟರಿಗೆ ಮೀಸಲಾಗುತ್ತದೆಂಬ ಭೀತಿ ಬಲಾಡ್ಯ ಜಾತಿ ಶಕ್ತಿಗಳನ್ನು ಕಾಡುತ್ತಿದೆಯೆಂಬ ಚರ್ಚೆ ನಡೆದಿದೆ.


ಇದನ್ನೂ ಓದಿ: ಉತ್ತರ ಕನ್ನಡ: ಹೆಬ್ಬಾರ್‌ರ ಯಲ್ಲಾಪುರದಿಂದ ಸ್ಪರ್ಧೆಗೆ ದೇಶಪಾಂಡೆ ಮಗ ಸಜ್ಜು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಂತರ್ಜಾತಿ ವಿವಾಹ; ಹೈದರಾಬಾದ್‌ನಲ್ಲಿ ಮತ್ತೊಬ್ಬ ಯುವಕನ ಕೊಲೆ | Naanu Gauri

ಅಂತರ್ಜಾತಿ ವಿವಾಹ; ಹೈದರಾಬಾದ್‌ನಲ್ಲಿ ಮತ್ತೊಬ್ಬ ಯುವಕನ ಕೊಲೆ

0
ಹೈದರಾಬಾದ್‌ನ ಜನನಿಬಿಡ ಬೇಗಂ ಬಜಾರ್ ಪ್ರದೇಶದಲ್ಲಿ ಶಸ್ತ್ರಸಜ್ಜಿತ ವ್ಯಕ್ತಿಗಳು 21 ವರ್ಷದ ಯುವಕನನ್ನು ಅಂತರ್ಜಾತಿ ವಿವಾಹವಾದ ಕಾರಣಕ್ಕಾಗಿ ಇರಿದು ಕೊಂದಿರುವ ಘಟನೆ ಮೇ 20ರ ಶುಕ್ರವಾರದ ಸಂಜೆ ನಡೆದಿದೆ ಎಂದು ನ್ಯೂಸ್ ಮಿನಿಟ್...