Homeಪುಸ್ತಕ ವಿಮರ್ಶೆತಿಚ್ ನ್ಹಾತ್ ಹಾನ್ ’ಮನೋಮಗ್ನತೆಯ ಹರಿಕಾರ’ನಿಗೆ ವಿದಾಯ

ತಿಚ್ ನ್ಹಾತ್ ಹಾನ್ ’ಮನೋಮಗ್ನತೆಯ ಹರಿಕಾರ’ನಿಗೆ ವಿದಾಯ

- Advertisement -
- Advertisement -

ತಮ್ಮನ್ನು ತಾವು ವಿಶ್ವ ಮಾನವನೆಂದೇ ಸಾರಿಕೊಂಡಿದ್ದ ಜಗತ್ತಿನಾದ್ಯಂತ ಪ್ರಭಾವ ಬೀರಿದ್ದ ಬೌದ್ಧ ಭಿಕ್ಕು ಹಾಗೂ ಜೆನ್ ಮಾಸ್ಟರ್ ತಿಚ್ ನ್ಹಾತ್ ಹಾನ್ ಅವರು ಜನವರಿ 22ರಂದು ತಮ್ಮ 95ನೇ ವಯಸ್ಸಿನಲ್ಲಿ ತೀರಿಕೊಂಡರು. ವಿಯೆಟ್ನಾಂ ದೇಶದವರಾದ ಈ ಮಹಾನ್ ಆಧ್ಯಾತಿಕ ಗುರು ದೇಶ ವಿದೇಶಗಳ ಗಡಿಗಳನ್ನು ಮೀರಿ ಅಸಂಖ್ಯಾತ ಜನರ ಹೃದಯದಾಳದಲ್ಲಿ ಅಕ್ಕರೆ, ಅಭಿಮಾನ, ಗೌರವ ಪಡೆದಿದ್ದರು. ಮನುಷ್ಯ ಲೋಕವನ್ನು ಆವರಿಸಿಕೊಂಡಿರುವ ದ್ವೇಷ, ವೈರತ್ವ, ಹಿಂಸೆ ಹಾಗೂ ಯುದ್ಧವನ್ನು ನಿರಾಕರಿಸುತ್ತಲೇ ಬಂದಿದ್ದರು. ಪ್ರೀತಿ, ಸಹೋದರತೆ ಹಾಗೂ ಅಹಿಂಸೆಯೇ ಮನುಷ್ಯರ ಮೂಲ ಗುಣಗಳಾಗಬೇಕೆಂದು ಹಂಬಲಿಸಿದವರು. ಈ ತತ್ವಗಳನ್ನು ಬಾಳಿ ತೋರಿಸಿದ್ದಾರೆ. ಎರಡು ಸಾವಿರದ ಐನೂರು ವರ್ಷಗಳ ಹಿಂದೆ ಸಮಾನತೆಯ ಸಾಕಾರಕ್ಕಾಗಿ ಭೂಮಿಯ ಮೇಲೆ ನಡೆದಾಡಿದ ಬುದ್ಧನಂತೆಯೇ ಬದುಕಿದವರು. ಬುದ್ಧನ ಹೆಜ್ಜೆಗಳಲ್ಲಿ ನಡೆದು ಕಾರುಣ್ಯ ಹಾಗೂ ಮೈತ್ರಿಯನ್ನು ಮೈಗೂಡಿಸಿಕೊಂಡಿದ್ದ ತಿಚ್ ನ್ಹಾತ್ ಹಾನ್ ಅವರು ತಮ್ಮ ಬದುಕಿನುದ್ದಕ್ಕೂ ಆಧ್ಯಾತ್ಮಿಕ ಶ್ರೀಮಂತಿಕೆಗಾಗಿ, ಸಮಾನತೆಗಾಗಿ, ನೆಮ್ಮದಿಗಾಗಿ, ವಿಶ್ವ ಶಾಂತಿಗಾಗಿ ಹೋರಾಟವನ್ನು ನಡೆಸಿದವರೇ ಆಗಿದ್ದಾರೆ.

ಇಂದಿನ ಟಿವಿ ಚಾನೆಲ್ಲುಗಳಲ್ಲಿ ಸರ್ವ ಸಮಸ್ಯೆಗಳಿಗೂ ಬಾಯಿ ಮಾತಿನಿಂದಲೇ ಪರಿಹಾರ ನೀಡುವ ನಕಲಿ ಆಧ್ಯಾತ್ಮಿಕ ಗುರುಗಳಂತೆ ತಿಚ್ ನ್ಹಾತ್ ಹಾನ್ ಅವರು ಎಂದಿಗೂ ಕಾಣಿಸಿಕೊಂಡವರಲ್ಲ. ಜನಪ್ರಿಯತೆಗಾಗಿ ಹಾತೊರೆದವರಲ್ಲ. ಎಂಟನೆಯ ವಯಸ್ಸಿನಲ್ಲಿಯೇ ಬುದ್ಧನ ಚಿತ್ರವನ್ನು ಕಂಡು ಆಕರ್ಷಿತರಾಗಿ ಬೌದ್ಧ ಸಂನ್ಯಾಸವನ್ನು ಸ್ವೀಕರಿಸಿದವರು. ಹಿರಿಯ ಬೌದ್ಧ ಭಿಕ್ಕುಗಳ ಸೇವೆಯನ್ನು ಮಾಡುತ್ತಲೇ ಸಂನ್ಯಾಸದ ಕಠಿಣ ಹಾದಿಯನ್ನು ಕ್ರಮಿಸಿದರು. ನಿರಂತರವಾದ ಧ್ಯಾನ ಹಾಗೂ ಅಧ್ಯಯನಗಳಿಂದ ಪ್ರಭಾವಿ ಸಂನ್ಯಾಸಿಯಾಗಿ ಬೆಳೆದರು. ಆದರೆ ಈ ಮಾರ್ಗ ಅವರ ಪಾಲಿಗೆ ಅಷ್ಟು ಸುಲಭದ್ದಾಗಿರಲಿಲ್ಲ. ವಿಯೆಟ್ನಾಂನಲ್ಲಿ ಪದೇ ಪದೇ ಜರುಗುತ್ತಿದ್ದ ಯುದ್ಧಗಳು, ಆಕ್ರಮಣಗಳು, ನಿರಂಕುಷ ಪ್ರಭುತ್ವದ ದುರಾಡಳಿತ-ಇವುಗಳಿಂದ ದೇಶದಲ್ಲಿ ಬಡತನ, ಹಸಿವು, ಸಾವು ನೋವುಗಳು ಉಲ್ಬಣಿಸುತ್ತಿದ್ದವು. ಇವುಗಳನ್ನು ಕಣ್ಣಾರೆ ನೋಡಿದರೂ ಈ ಸಮಸ್ಯೆಗಳಿಂದ ವಿಘಟಿತರಾಗಲಿಲ್ಲ. ತಮ್ಮ ಆಳವಾದ ಧ್ಯಾನದ ಮೂಲಕ ಇಂತಹ ಬಿಕ್ಕಟ್ಟುಗಳಿಗೆ ಪರಿಹಾರಗಳನ್ನು ಕಂಡುಕೊಂಡರು. ಪರ್ಯಾಯ ಯೋಜನೆಗಳನ್ನು ರೂಪಿಸಿದರು. ಬೌದ್ಧ ಮಂದಿರಗಳಿಂದ ಹೊರ ಬಂದು ವಿಯೆಟ್ನಾಂನಲ್ಲಿ ಸಾಮಾಜಿಕ ಕಾರ್ಯಕರ್ತರಾಗಿ ಬೀದಿಗಿಳಿದರು. ಶಾಂತಿ ಸೌಹಾರ್ದತೆಗಾಗಿ ದೇಶದ ಉದ್ದಗಲಕ್ಕೂ ಸಂಚರಿಸಿದರು. ಬೌದ್ಧ ಸಂನ್ಯಾಸಿಗಳನ್ನು ಸಂಘಟಿಸಿದರು. ಹಲವು ಬಗೆಯ ವಿರೋಧಗಳ ನಡುವೆಯೂ ಮಾನವತಾವಾದಿಯಾಗಿ ರೂಪುಗೊಂಡರು.

ಕೆಲವು ವರ್ಷಗಳ ಹಿಂದೆ ಪುಸ್ತಕದಂಗಡಿಯೊಂದರಲ್ಲಿ ಆಕಸ್ಮಿಕವಾಗಿ ತಿಚ್ ನ್ಹಾತ್ ಹಾನ್ ಅವರ ಪುಸ್ತಕವು ನನ್ನ ಕಣ್ಣಿಗೆ ಬಿತ್ತು. ಇವರ ಬೋಧನೆಯು ಪರಮಹಂಸ, ರಮಣ, ಸ್ವಾಮಿ ವಿವೇಕಾನಂದ, ಜಿಡ್ಡು ಕೃಷ್ಣಮೂರ್ತಿ, ಓಶೋ ಇವರುಗಳಿಗಿಂತ ಭಿನ್ನವಾಗಿ ತೋರಿತು. ಅವರ ಪುಸ್ತಕವು ಆಧ್ಯಾತ್ಮಿಕ ಬೋಧನೆ ಎಂದು ಅನ್ನಿಸಲಿಲ್ಲ. ನಮ್ಮದೇ ಜೀವನದ ಸಮಸ್ಯೆಗಳನ್ನು ಸಾವಧಾನ ಚಿತ್ತದಿಂದ ಅವಲೋಕಿಸುತ್ತಲೇ ಅವುಗಳಿಂದ ಹೊರ ಬರುವ ವಿಧಾನಗಳನ್ನು ಸರಳವಾಗಿ ಮಂಡಿಸಿತ್ತು. ದೈನಂದಿನ ಸಮಸ್ಯೆಗಳಿಂದ ಪಲಾಯನವಲ್ಲ; ಅವುಗಳ ವಿರುದ್ಧ ಹೋರಾಟವೂ ಅಲ್ಲ; ಅವುಗಳ ಆಳಕ್ಕೆ ಇಳಿದು ಹೊಣೆಗಾರಿಕೆಯನ್ನು ಹೊರುವುದು ಹೇಗೆ ಎಂಬುದರ ವಿವರಣೆ, ವಿಶ್ಲೇಷಣೆಗಳ ಕಥನವದು. ಕಾಲಾಂತರದಲ್ಲಿ ಅವರ ಹಲವು ಪುಸ್ತಕಗಳು ನನ್ನಲ್ಲಿ ಸಂಗ್ರಹವಾದವು. ಹೀಗೆ ನಾನು ತಿಚ್ ನ್ಹಾತ್ ಹಾನ್ ಅವರ ಪುಸ್ತಕಗಳ ಖಾಯಂ ಓದುಗನಾದೆ. ಅವರ ಎರಡು ಪುಸ್ತಕಗಳನ್ನು ಕೂಡ ಕನ್ನಡಕ್ಕೆ ಅನುವಾದಿಸಿದೆ.

ತಿಚ್ ನ್ಹಾತ್ ಹಾನ್ ಅವರು ನೂರಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವು ಜಗತ್ತಿನ ನಲವತ್ತಕ್ಕೂ ಹೆಚ್ಚಿನ ಭಾಷೆಗಳಿಗೆ ಅನುವಾದಗೊಂಡಿವೆ. ವೈವಿಧ್ಯಮಯ ವಿಷಯಗಳನ್ನು ಕುರಿತು ಬರೆದಿದ್ದಾರೆ. ಧ್ಯಾನಶೀಲತೆ, ಮನೋಮಗ್ನತೆ (ಮೈಂಡ್‌ಫುಲ್‌ನೆಸ್), ಮಾನಸಿಕ ನೆಮ್ಮದಿ, ನೈತಿಕತೆ, ಪ್ರಾಮಾಣಿಕತೆ, ಪಾರದರ್ಶಕತೆಯಂತಹ ಮನುಷ್ಯನ ಅಂತರಂಗ ಕೇಂದ್ರಿತ ಸಂಗತಿಗಳನ್ನು ಕುರಿತು ಬರೆದಿದ್ದಾರೆ. ನೋವು, ವೇದನೆಗಳಿಂದ, ದುರಾಸೆಗಳಿಂದ ಮುಕ್ತರಾಗುವುದು, ಇನ್ನೊಬ್ಬರ ದುಃಖದಲ್ಲಿ ಪಾಲ್ಗೊಳ್ಳುವುದು ಹಾಗೂ ಬದುಕಿನಲ್ಲಿ ನೆಮ್ಮದಿಯನ್ನು ಕಂಡುಕೊಳ್ಳುವುದು-ಇವು ತಿಚ್ ನ್ಹಾತ್ ಹಾನ್ ಅವರ ಪುಸ್ತಕಗಳ ವಿಷಯಗಳಾಗಿವೆ. ಅವರು ಮಾತಿಗಿಂತ ಮೌನಕ್ಕೆ ಹೆಚ್ಚಿನ ಒತ್ತನ್ನು ನೀಡಿದರು. ಕಳೆದುಹೋದ ಭೂತಕಾಲಕ್ಕಿಂತ ವರ್ತಮಾನದ ಈ ಕ್ಷಣಗಳಲ್ಲಿ ಬದುಕುವುದರ ಬಗ್ಗೆಯೇ ವ್ಯಾಪಕವಾಗಿ ಬರೆದಿದ್ದಾರೆ. ಇದನ್ನು ಅನುಷ್ಠಾನಕ್ಕೆ ತರುವ ಸಲುವಾಗಿ ’ನಡಿಗೆಯೊಂದಿಗೆ ಧ್ಯಾನ’ ಎಂಬ ಕ್ರಿಯಾಯೋಜನೆಯನ್ನು ಜನಪ್ರಿಯಗೊಳಿಸಿದರು.

ತಿಚ್ ನ್ಹಾತ್ ಹಾನ್ ಅವರು ಬರೆದಿರುವ ಪುಸ್ತಕಗಳಲ್ಲಿ ’ಮಿರ್‍ಯಾಕಲ್ ಆಫ್ ಮೈಂಡ್‌ಫುಲ್‌ನೆಸ್’, ’ದಿ ಹಾರ್ಟ್ ಆಫ್ ದಿ ಬುದ್ಧಾಸ್ ಟೀಚಿಂಗ್’, ’ಪೀಸ್ ಬಿಗಿನ್ಸ್ ಹಿಯರ್’, ’ಲಿವಿಂಗ್ ಬುದ್ಧ ಲಿವಿಂಗ್ ಕ್ರೈಸ್ಟ್’, ’ದಿ ಹಾರ್ಟ್ ಆಫ್ ಅಂಡರ್‌ಸ್ಟ್ಯಾಂಡಿಂಗ್’, ’ಅಟ್ ಹೋಮ್ ಇನ್ ದಿ ವರ್ಲ್ಡ್’ ಹಾಗೂ ’ಓಲ್ಡ್ ಪಾಥ್ ವೈಟ್ ಕ್ಲೌಡ್ಸ್’ ಮುಖ್ಯವಾಗಿವೆ. ಇವುಗಳಲ್ಲಿ ಅವರಿಗೆ ’ಮಿರ್‍ಯಾಕಲ್ ಆಫ್ ಮೈಂಡ್‌ಫುಲ್‌ನೆಸ್’ ಎಂಬ ಕಿರುಪುಸ್ತಕವು ತುಂಬಾ ದೊಡ್ಡ ಪ್ರಮಾಣದಲ್ಲಿ ಜನಪ್ರೀತಿಯನ್ನು ತಂದುಕೊಟ್ಟಿತು. ’ಮನೋಮಗ್ನತೆ’ (ಮೈಂಡ್‌ಫುಲ್‌ನೆಸ್) ಎಂಬ ಪರಿಕಲ್ಪನೆಯನ್ನು ಪ್ರವರ್ಧಮಾನಕ್ಕೆ ತರುವುದರ ಮೂಲಕ ಅದಕ್ಕೊಂದು ವಿಶಾಲವಾದ
ಅರ್ಥವ್ಯಾಪ್ತಿಯನ್ನು ದೊರಕಿಸಿಕೊಟ್ಟರು. ನಮ್ಮ ಮನಸ್ಸು ಒಂದೋ ಈಗಾಲೇ ಕಳೆದು ಹೋದ ಭೂತಕಾಲದ ಹಿಂದೆ ಓಡುತ್ತದೆ; ಇಲ್ಲವಾದರೆ ಬಾರದಿರುವ ಭವಿಷ್ಯತ್ತಿನ ಭ್ರಮೆಯಲ್ಲಿ ವಿಹರಿಸುತ್ತದೆ. ಮನೋಮಗ್ನತೆ ಎಂದರೆ ನಾವು ತೊಡಗಿರುವ ಕ್ರಿಯೆಯ ಜೊತೆಯಲ್ಲಿಯೇ ನಾವಿದ್ದೇವೆ ಎಂಬ ಎಚ್ಚರ. ಒಂದು ಕಪ್ ಚಹಾ ಕುಡಿಯುವಾಗಲೂ ಚಹಾ ಕುಡಿಯುತ್ತಿದ್ದೇವೆ ಎನ್ನುವ ಎಚ್ಚರ ಜಾಗೃತವಾಗಿರಬೇಕು. ಹಾಗೆಯೇ ಪಾತ್ರೆ ತೊಳೆಯುವಾಗ, ಅಡುಗೆ ಮಾಡುವಾಗ, ಓದುವಾಗ, ವಾಯುವಿಹಾರ ಮಾಡುವಾಗ-ಯಾವುದೇ ಕೆಲಸದಲ್ಲಿ ತೊಡಗಿದಾಗಲೂ ಮನೋಮಗ್ನತೆ ಇರಲೇಬೇಕಾಗುತ್ತದೆ. ಇಂತಹ ಜಾಗೃತತೆಯಲ್ಲಿಯೇ ಆಧ್ಯಾತ್ಮಿಕ ಉನ್ನತಿಯಿದೆ ಎಂಬುದೇ ತಿಚ್ ನ್ಹಾತ್ ಹಾನ್ ಅವರ ಬದುಕು ಬರಹಗಳ ಆಶಯ ಮತ್ತು ತಿರುಳಾಗಿದೆ. ಈ ಕಾರಣಕ್ಕಾಗಿಯೇ ಅವರನ್ನು ’ಫಾದರ್ ಆಫ್ ಮೈಂಡ್‌ಫುಲ್‌ನೆಸ್’ ಎಂದೇ ಕರೆಯಲಾಗಿದೆ.

ಇವರು ಬುದ್ಧನ ಚಿಂತನೆಗಳಿಗೆ ಹೊಸ ವ್ಯಾಖ್ಯಾನ ನೀಡಿದರು. ತಾರ್ಕಿಕವಾದ ವಾದ-ವಾಗ್ವಾದ ಹಾಗೂ ಸೈದ್ಧಾಂತಿಕ ಚರ್ಚೆಗಳಿಗೆ ಇಳಿಯುವುದಿಲ್ಲ. ಲೋಕದ ಜನರ ಬದುಕು ಯಾವುದರಿಂದ ಹಸನಾಗುತ್ತದೆ ಎಂಬುದರ ಬಗ್ಗೆಯೇ ಧ್ಯಾನಿಸಿದವರು. ’ಓಲ್ಡ್ ಪಾಥ್ ವೈಟ್ ಕ್ಲೌಡ್ಸ್’ ಕೃತಿಯು ಬುದ್ಧನ ಜೀವನವನ್ನು ಅತ್ಯಂತ ನವಿರಾಗಿ ನಿರೂಪಿಸುತ್ತದೆ. ಬುದ್ಧನನ್ನು ನಮ್ಮ ಕಾಲದ ಸಮಸ್ಯೆ, ಬಿಕ್ಕಟ್ಟುಗಳಿಗೆ ಮದ್ದನ್ನು ಕೊಡುವ ಸಾಮಾಜಿಕ ವೈದ್ಯನೆಂದು ಪರಿಭಾವಿಸುತ್ತಾರೆ. ಬುದ್ಧನ ಸಕಲ ಜೀವಕೇಂದ್ರಿತ ಮಾನವೀಯ ಮೌಲ್ಯಗಳು ಕಣ್ಮರೆಯಾಗಿ ಹೋಗದಂತೆ ಮಾಡಿದ್ದಾರೆ. ಈ ಮೌಲ್ಯಗಳು ನಮ್ಮ ಬದುಕಿನಲ್ಲಿ ಹಾಸುಹೊಕ್ಕಾಗಿರುವಂತೆ ಎಚ್ಚರವನ್ನು ಮೂಡಿಸುತ್ತವೆ. ಈ ಪುಸ್ತಕಗಳ ಮಾರಾಟದಿಂದ ಬರುವ ದುಡ್ಡನ್ನು ವಿಯೆಟ್ನಾಂ ದೇಶದ ಬಡ ಮಕ್ಕಳ ಶಿಕ್ಷಣಕ್ಕೆ ವಿನಿಯೋಗಿಸಲಾಗುತ್ತದೆ. ನಿರಾಶ್ರಿತರ ಜೀವನದ ಭದ್ರತೆಗಾಗಿಯೂ ವ್ಯಯ ಮಾಡಲಾಗುತ್ತದೆ.

1960ರ ದಶಕದಲ್ಲಿ ವಿಯೆಟ್ನಾಂ ದೇಶವು ಯುದ್ಧದಲ್ಲಿ ತೊಡಗುವುದನ್ನು ತಿಚ್ ನ್ಹಾತ್ ಹಾನ್ ಅವರು ಸೌಮ್ಯವಾಗಿಯೇ ವಿರೋಧಿಸಿದರು. ಅದೇ ಸಂದರ್ಭದಲ್ಲಿ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಅವರನ್ನು ಭೇಟಿಯಾಗಿ ಮಾನವಕುಲದ ನಾಶಕ್ಕೆ ಕಾರಣವಾಗುವ ಯುದ್ಧವನ್ನು ವಿರೋಧಿಸುವಂತೆ ಒತ್ತಾಯಿಸುತ್ತಾರೆ. ಆಗ ಮಾರ್ಟಿನ್ ಲೂಥರ್ ಕಿಂಗ್ ಮಾಧ್ಯಮಗಳ ಮುಂದೆ ಅಮೆರಿಕಾದ ಯುದ್ಧ ನೀತಿಯನ್ನು ಖಂಡಿಸುತ್ತಾರೆ. ಈ ಭೇಟಿಯು ತಿಚ್ ನ್ಹಾತ್ ಹಾನ್ ಹಾಗೂ ಮಾರ್ಟಿನ್ ಲೂಥರ್ ಅವರನ್ನು ಒಳ್ಳೆಯ ಸ್ನೇಹಿತರನ್ನಾಗಿಸುತ್ತದೆ. ಈ ಸ್ನೇಹವು ಎಷ್ಟು ಗಾಢವಾಗಿತ್ತೆಂದರೆ ಮಾರ್ಟಿನ್ ಲೂಥರ್ ಕಿಂಗ್ ಅವರು ತಿಚ್ ನ್ಹಾತ್ ಅವರಿಗೆ ನೊಬೆಲ್ ಪುರಸ್ಕಾರ ನೀಡುವಂತೆ ನೊಬೆಲ್ ಸಮತಿಗೆ ಪತ್ರವನ್ನು ಬರೆಯುತ್ತಾರೆ. ಆದರೆ ಇಲ್ಲಿಯವರೆಗೂ ಅವರಿಗೆ ನೊಬೆಲ್ ಪುರಸ್ಕಾರ ದೊರಕಲಿಲ್ಲ.

ತಿಚ್ ನ್ಹಾತ್ ಹಾನ್ ಅವರು ತನ್ನ ದೇಶವು ಯುದ್ಧದಂತಹ ಮಾರಣಹೋಮದಲ್ಲಿ ನಿರತವಾಗುವುದನ್ನು ಪ್ರತಿಭಟಿಸಿದ್ದರಿಂದ ವಿಯೆಟ್ನಾಂ ದೇಶದ ಸರ್ಕಾರವು ಕುಪಿತಗೊಳ್ಳುತ್ತದೆ. ಹಾನ್ ಅವರನ್ನು ದೇಶದಿಂದಲೇ ಗಡಿಪಾರು ಮಾಡುವ ಶಿಕ್ಷೆಯನ್ನು ನೀಡುತ್ತದೆ. ಇದರಿಂದ ನಿರಾಶ್ರಿತರಾಗುವ ಹಾನ್ ಅವರು ಹಲವು ದೇಶಗಳ ಆಶ್ರಯವನ್ನು ಹಂಬಲಿಸುತ್ತಾರೆ. ಇವರ ಜೊತೆಯಲ್ಲಿ ನೂರಾರು ಜನ ನಿರಾಶ್ರಿತರಾಗಿ ಅಲೆಯಬೇಕಾಗುತ್ತದೆ. ಇಂತಹ ಸನ್ನಿವೇಶದಲ್ಲಿ ಧೃತಿಗೆಡದ ಹಾನ್ ಅವರು ತಮ್ಮ ಸಹಚರರೊಂದಿಗೆ ಕೊನೆಯಲ್ಲಿ ಫ್ರಾನ್ಸ್ ದೇಶದಲ್ಲಿ ನೆಲೆಯನ್ನು ಪಡೆಯುತ್ತಾರೆ. ಅಲ್ಲಿಯೇ ಅಂತಾರಾಷ್ಟ್ರೀಯ ಖ್ಯಾತಿಯನ್ನು ಪಡೆದ “ಪ್ಲಮ್ ವಿಲೇಜ್” ಅನ್ನು ಸ್ಥಾಪಿಸುತ್ತಾರೆ. ಅಲ್ಲಿ ಪ್ಲಮ್ ಸಸಿಗಳನ್ನು ನೆಡುತ್ತಾರೆ; ಸಹಚರರನ್ನು ಕೃಷಿಯಲ್ಲಿ ತೊಡಗಿಸಿ ಸ್ವಾವಲಂಬಿಗಳನ್ನಾಗಿ ಮಾಡುತ್ತಾರೆ. ಮನೋಮಗ್ನತೆಯ ಧ್ಯಾನ ಶಿಬಿರಗಳನ್ನು ಏರ್ಪಡಿಸುತ್ತಾರೆ. ಇದರಿಂದ ಬರುವ ಹಣವನ್ನು ತಮ್ಮ ದೇಶದ ಬಡ ಮಕ್ಕಳ ಹಸಿವನ್ನು ನೀಗಿಸಲು ಹಾಗೂ ಶಿಕ್ಷಣ ಪಡೆಯಲು ಕಳಿಸುತ್ತಾರೆ. ಈ “ಪ್ಲಮ್ ವಿಲೇಜ್” ವಿಶ್ವ ಶಾಂತಿ ಹಾಗೂ ಸಹೋದರತೆಯ ಕೇಂದ್ರವಾಗುತ್ತದೆ. ಅವರು ಇಲ್ಲಿಂದಲೇ ನೂರಾರು ಪುಸ್ತಕಗಳನ್ನು ಬರೆದರು.

ತಿಚ್ ನ್ಹಾತ್ ಹಾನ್ ಅವರು ಯುರೋಪಿನ ಅನೇಕ ದೇಶಗಳಿಗೆ ಹೋಗಿ ’ಮನೋಮಗ್ನತೆ’ಯ ಮಹತ್ವವನ್ನು ಸಾರುವ ಲೆಕ್ಕವಿಲ್ಲದಷ್ಟು ಉಪನ್ಯಾಸಗಳನ್ನು ನೀಡಿದ್ದಾರೆ. ಮನೋಮಗ್ನತೆಯ ಧ್ಯಾನ ಶಿಬಿರಗಳನ್ನು ನಡೆಸಿದ್ದಾರೆ. ಅಮೆರಿಕಾದಲ್ಲಿ ಅತಿ ಹೆಚ್ಚು ಬಾರಿ ಮಾತಾಡಿದ್ದಾರೆ. ಮುತ್ಸದ್ಧಿ ರಾಜಕಾರಣಿ ಕೆ.ಆರ್. ನಾರಾಯಣನ್ ಅವರು ಭಾರತದ ಉಪರಾಷ್ಟ್ರಪತಿಯಾಗಿದ್ದ ಅವಧಿಯಲ್ಲಿ ತಿಚ್ ನ್ಹಾತ್ ಅವರನ್ನು ಭಾರತೀಯ ಸಂಸತ್ತಿನಲ್ಲಿ ಮಾತನಾಡಲು ಆಹ್ವಾನಿಸಲಾಗಿತ್ತು. ಅವರು ಸಂಸತ್ತಿನ ಸದಸ್ಯರನ್ನು ಉದ್ದೇಶಿಸಿ ದೇಶದ ಸಮಸ್ಯೆಗಳನ್ನು ಚರ್ಚಿಸುವಾಗ ನಡೆಯುವ ಜಗಳ, ಆರೋಪ, ಪ್ರತ್ಯಾರೋಪ ಹಾಗೂ ಕೋಪಿಸಿಕೊಳ್ಳುವುದನ್ನು ಸ್ವಯಂ ನಿಯಂತ್ರಿಸಿಕೊಳ್ಳಲು ಕೊಂಚ ಕಾಲ ಮನೋಮಗ್ನತೆಯಿಂದ ಧ್ಯಾನಿಸುವುದನ್ನು
ಕುರಿತು ಮಾತಾಡಿದ್ದರು. ಭಾರತಕ್ಕೆ ಹಲವು ಸಲ ಭೇಟಿನೀಡಿದ್ದರು. ಕರ್ನಾಟಕಕ್ಕೂ ಬಂದಿದ್ದರು.

ವಿಯೆಟ್ನಾಂ ದೇಶದ ಕಮ್ಯುನಿಸ್ಟ್ ಸರ್ಕಾರವು ತಿಚ್ ನ್ಹಾತ್ ಹಾನ್ ಅವರು ಸಂನ್ಯಾಸವನ್ನು ಸ್ವೀಕರಿಸಿದ್ದ ಲಾಮ್ ಡೊಂಗ್‌ನಲ್ಲಿರುವ ಜೆನ್ ಮಂದಿರವನ್ನು 2009ರಲ್ಲಿ ಮುಚ್ಚಿತು. ಆದರೆ ವಿಯೆಟ್ನಾಂ ಸರ್ಕಾರವು 2018ರಲ್ಲಿ ಅವರನ್ನು ತಮ್ಮ ಸ್ವದೇಶಕ್ಕೆ ಬಂದು ನೆಲೆಸುವಂತೆ ವಿನಂತಿಸಿಕೊಂಡಿತು. ಹಲವು ದಶಕಗಳ ದೀರ್ಘಕಾಲದವರೆಗೆ ತಮ್ಮ ದೇಶದಿಂದ ಹೊರಗಿದ್ದ ತಿಚ್ ನ್ಹಾತ್ ಹಾನ್ ಅವರು 2018ರಲ್ಲಿ ತಮ್ಮ ತಾಯ್ನಾಡಿಗೆ ಮರಳುತ್ತಾರೆ. ತಮ್ಮ ಕೊನೆಯ ದಿನಗಳನ್ನು ವಿಯೆಟ್ನಾಂನಲ್ಲಿಯೇ ಕಳೆಯುತ್ತಾರೆ. ಅವರು 2021ರಲ್ಲಿ ಕೂಡ ಒಂದು ಪುಸ್ತಕವನ್ನು ಬರೆದಿದ್ದರು. ಸಾಯುವ ದಿನದವರೆಗೂ ಕ್ರಿಯಾಶೀಲರಾಗಿದ್ದ ಅವರು ತಾನು ಬರಿ ವಿಯೆಟ್ನಾಂ ದೇಶಕ್ಕೆ ಸೇರಿದವರಲ್ಲ; ವಿಶ್ವವೇ ತನ್ನ ಮನೆ ಎಂದು ಹೇಳಿಕೊಂಡಿದ್ದಾರೆ. ಅದರಂತೆಯೇ ವಿಶ್ವಮಾನವರಾಗಿ ಸಾರ್ಥಕವಾಗಿ ಬದುಕಿ ಹೋಗಿದ್ದಾರೆ. ಅವರ ಬದುಕು ಹಾಗೂ ಚಿಂತನೆಗಳು ಜಗತ್ತಿಗೆ ಮಾದರಿಯಾಗಿವೆ.

ಡಾ. ಸುಭಾಷ್ ರಾಜಮಾನೆ

ಡಾ. ಸುಭಾಷ್ ರಾಜಮಾನೆ
ಬೆಂಗಳೂರಿನ ಯಲಹಂಕ ಪದವಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರು. ಕನ್ನಡ, ಇಂಗ್ಲಿಷ್, ಮರಾಠಿ ಭಾಷೆಗಳನ್ನು ಬಲ್ಲ ಇವರು, ಸಿನಿಮಾ ಮತ್ತು ಸಾಹಿತ್ಯ ವಿಮರ್ಶೆಯಲ್ಲಿ ತೊಡಗಿಸಿಕೊಂಡಿದ್ದಾರೆ.


ಇದನ್ನೂ ಓದಿ: ‘gandhi’s assassin’: ಇತಿಹಾಸದ ತಾಯಿ ಸತ್ಯದ ಶೋಧನೆಯಲ್ಲಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...