Homeಪುಸ್ತಕ ವಿಮರ್ಶೆ‘gandhi’s assassin’: ಇತಿಹಾಸದ ತಾಯಿ ಸತ್ಯದ ಶೋಧನೆಯಲ್ಲಿ

‘gandhi’s assassin’: ಇತಿಹಾಸದ ತಾಯಿ ಸತ್ಯದ ಶೋಧನೆಯಲ್ಲಿ

- Advertisement -
- Advertisement -

(ಈ ಲೇಖನದಲ್ಲಿ ಹೊಸ ಬರಹವನ್ನು ಪ್ರಯೋಗಿಸಲಾಗಿದೆ. ಮಹಾಪ್ರಾಣಗಳ ಬಳಕೆಯನ್ನು ಕಡಿತಗೊಳಿಸಲಾಗಿದೆ)

ಫ್ಯಾಸಿಸಂ ಕುರಿತು ಬರೆಯುತ್ತಾ ಇತಿಹಾಸಕಾರ ಸ್ನೈಡರ್ ’ಫ್ಯಾಸಿಸಂ ಸತ್ಯವನ್ನು ಹೇಳುವುದಿಲ್ಲ. ಫ್ಯಾಸಿಸ್ಟ್ ಆಡಳಿತದಲ್ಲಿ ನಿನ್ನ ದಿನನಿತ್ಯದ ಬದುಕು ಮುಖ್ಯವಲ್ಲ. ನೀನು ಯೋಚಿಸಿದ, ಅರ್ಥ ಮಾಡಿಕೊಂಡ ಸಂಗತಿಗಳು ಮುಖ್ಯವಲ್ಲ. ಎಲ್ಲಾ ಸಂಗತಿಗಳು ಮಿಥ್ಯೆ… ನಾವು ಸತ್ಯೋತ್ತರ ಕುರಿತು ಮಾತನಾಡುವಾಗ ಅದು ಹೊಸದು ಎಂಬಂತೆ ಭಾವಿಸಿದ್ದೇವೆ. ಅದೊಂದು ಅಪ್ರಸ್ತುತ ಎಂದು ನಂಬಿದ್ದೇವೆ…. ನಮಗೆ ಸಂಗತಿಗಳ ಕುರಿತು ಮಾಹಿತಿ ಲಬ್ಯತೆ ಇಲ್ಲದೇ ಹೋದರೆ ನಾವು ಒಬ್ಬರನೊಬ್ಬರು ನಂಬುವುದಿಲ್ಲ. ವಿಶ್ವಾಸವಿಲ್ಲದಿದ್ದರೆ ಕಾನೂನು ಇರುವುದಿಲ್ಲ. ಕಾನೂನು ಇಲ್ಲದೆ ಪ್ರಜಾಪ್ರಭುತ್ವವೂ ಉಳಿಯುವುದಿಲ್ಲ…’ ಎನ್ನುತ್ತಾನೆ. ಇಲ್ಲಿ ಸಂಗತಿ ಮತ್ತು ಸತ್ಯ ಎರಡೂ ಸದಾ ನುಣುಚಿಕೊಳ್ಳುತ್ತವೆ. ನಿರ್ದಿಷ್ಟ ಸಂಗತಿಗಳ ಕುರಿತು ಸತ್ಯವನ್ನು ಹೇಳಬೇಕೆಂದರೆ ಮೊದಲು ಆ ಸಂಗತಿಗಳ ಕುರಿತು ವಿಶ್ವಾಸ ಮೂಡಿಸಬೇಕು. ಆದರೆ ಆ ವಿಶ್ವಾಸಗಳು ಕಾಲಾನುಕ್ರಮದಲ್ಲಿ ಬದಲಾಗುತ್ತಿರುತ್ತವೆ. ಇತಿಹಾಸವನ್ನು ಅಗೆದು ಅಲ್ಲಿನ ಘಟನೆಗಳನ್ನು ವರ್ತಮಾನದಲ್ಲಿ ಮಂಡಿಸುವಾಗ ಈ ಸಂಗತಿಗಳು ಮತ್ತು ಅದನ್ನು ವಿಶ್ಲೇಷಿಸುವವರು ವಿಶ್ವಾಸ ಉಳಿಸಿಕೊಂಡಿರಬೇಕು. ಆಗ ಹೇಳುವುದು ನಿಜ ಎನ್ನುವ ಭರವಸೆ ಮೂಡುತ್ತದೆ. ಆದರೆ ವಿಶ್ವಾಸ ಉಳಿಸಿಕೊಳ್ಳುವುದು ಹೇಗೆ? ಇಂತಹ ತರ್ಕಗಳಿಗೆ ಸಮಜಾಯಿಷಿ ಕೊಡಲು ಸತ್ಯೋತ್ತರ ಕಾಲ ಎಂಬ ಚಿಂತನೆ ಸೃಷ್ಟಿಯಾಗಿದೆಯೇ?

ಇತ್ತೀಚೆಗೆ ಪ್ರಕಟಗೊಂಡ ಪತ್ರಕರ್ತ ಧೀರೇಂದ್ರ.ಕೆ.ಝಾ ಬರೆದ ‘gandhi’s assassin’ ಪುಸ್ತಕವನ್ನು ಓದಿದಾಗ ಮೇಲಿನ ಪ್ರಶ್ನೆಗಳು ಕಾಡುತ್ತವೆ. 30, ಜನವರಿ 1948ರಂದು ಗಾಂಧಿಯವರ ಕೊಲೆಯ ಹಿಂದಿನ ವಿದ್ಯಾಮಾನಗಳು, ಆಯಾಮಗಳನ್ನು 75 ವರ್ಷಗಳ ನಂತರ 30, ಜನವರಿ 2022ರಂದು ಕಾಲಘಟ್ಟದಲ್ಲಿ ಮಂಡಿಸುವ ಈ ಕೃತಿಯು ಸಿದ್ದಾಂತ, ವ್ಯಕ್ತಿ ಮತ್ತು ಸತ್ಯದ ಕುರಿತು ಅನೇಕ ವಿಷಯಗಳನ್ನು ಹೇಳುತ್ತದೆ. ಈಗಾಗಲೇ ಗಾಂಧಿಯವರ ಹತ್ಯೆಯ ಕುರಿತು ಹತ್ತಾರು ಪುಸ್ತಕಗಳು ಪ್ರಕಟಗೊಂಡಿವೆ. ಚರ್ಚೆಯಾಗಿವೆ. ಸ್ವತಃ ಹಂತಕ ಗೋಡ್ಸೆ ಬರೆದ ’ನಾನೇಕೆ ಗಾಂಧಿಯನ್ನು ಕೊಂದೆ’ ಎನ್ನುವ ಪುಸ್ತಕವೂ ಪ್ರಕಟಗೊಂಡಿದೆ ಮತ್ತು ಈಗ ಅದನ್ನು ಆಧರಿಸಿ ಸಿನಿಮಾ ಸಹ ತಯಾರಾಗಿ ಬಿಡುಗಡೆಗೆ ಸಿದ್ಧವಾಗಿದೆ. ಧೀರೇಂದ್ರ ಅವರು ಸಹ ಈ ಪುಸ್ತಕ ಬರೆಯಲು ಸುಮಾರು ನೂರಕ್ಕೂ ಹೆಚ್ಚಿನ ಆಕರ ಕೃತಿಗಳನ್ನು ಆಧರಿಸಿದ್ದಾರೆ. 52 ಪುಟಗಳಲ್ಲಿ ಅವುಗಳ ಪಟ್ಟಿಯನ್ನು ಕೊಟ್ಟಿದ್ದಾರೆ. ಹಾಗಿದ್ದಲ್ಲಿ ಈ ಕೃತಿ ಹೊಸದೇನನ್ನು ಹೇಳುತ್ತದೆ ಎನ್ನುವ ಪ್ರಶ್ನೆ ಮೂಡುತ್ತದೆ.

ಧೀರೇಂದ್ರ.ಕೆ.ಝಾ

ಲೇಖಕರ ಮಾತು ಎನ್ನುವ ಹಿನ್ನುಡಿಯಲ್ಲಿ ಬರೆಯುತ್ತಾ ಧೀರೇಂದ್ರ ಅವರು ’ವಿಚಾರಣೆಯ ಸಂದರ್ಭದಲ್ಲಿ ಗೋಡ್ಸೆ ತಾನು ಆರೆಸ್ಸಸ್ ತೊರೆದು ಹಿಂದೂ ಮಹಾಸಭಾ ಪಕ್ಷವನ್ನು ಸೇರಿಕೊಂಡಿದ್ದೇನೆ ಎಂದು ಸುಳ್ಳು ಹೇಳುತ್ತಾನೆ… ಗಾಂಧಿ ಹತ್ಯೆಗೆ ತಾನೊಬ್ಬನೆ ಜವಾಬ್ದಾರ ಎನ್ನುವ ಹೇಳಿಕೆ ಕೊಡುತ್ತಾನೆ… ಇದನ್ನು ಆರೆಸ್ಸಸ್ ಬಳಸಿಕೊಂಡು ತನಗೂ ಗಾಂಧಿ ಹತ್ಯೆಗೂ ಸಂಬಂಧವಿಲ್ಲ ಎಂದು ನುಣಿಚಿಕೊಳ್ಳುತ್ತಲೇ ಬಂದಿದೆ… ಇದನ್ನು ಆಧರಿಸಿ ಅನೇಕರು ಇತಿಹಾಸವನ್ನು ತಿರುಚಿದ್ದಾರೆ.. ಸುಳ್ಳುಗಳನ್ನು ಪ್ರಚಾರ ಮಾಡಿದ್ದಾರೆ.. ಆದರೆ ಲಭ್ಯವಿರುವ ದಾಖಲೆಗಳು ಬೇರೆಯದೇ ಕತೆಯನ್ನು ಹೇಳುತ್ತವೆ. ನಾನು ಈ ದಾಖಲೆಗಳನ್ನು ಪರಾಮರ್ಶಿಸಿ ಈ ಪುಸ್ತಕವನ್ನು ಬರೆದಿರುವೆ. ಗಾಂಧಿ ಹತ್ಯೆಯ ವಿಚಾರಣೆಯ ಸಂದರ್ಭದಲ್ಲಿ ಮಾರ್ಚ್ 1948ರ ಮೊದಲನೆ ವಾರದಲ್ಲಿ ಗೋಡ್ಸೆ ಒಂದು ಹೇಳಿಕೆ ಕೊಡುತ್ತಾನೆ. ಆದರೆ ಈ ಹತ್ಯೆ ಕುರಿತು ಬರೆದಿರುವವರು ಗೋಡ್ಸೆಯ ಈ ಹೇಳಿಕೆಯನ್ನು ನಿರ್ಲಕ್ಷ್ಯ ಮಾಡಿದ್ದಾರೆ. ನನ್ನ ಸಂಶೋದನೆಯಿಂದ ಕಂಡುಕೊಂಡ ಸತ್ಯವೆಂದರೆ ಆ ಹೇಳಿಕೆಯಲ್ಲಿ ಗೋಡ್ಸೆ ತಾನು ಆರೆಸ್ಸಸ್ ತೊರೆದಿಲ್ಲವೆಂದೂ ಮತ್ತು ಏಕಕಾಲದಲ್ಲಿ ನಾನು ಆರೆಸ್ಸಸ್ ಮತ್ತು ಹಿಂದೂ ಮಹಾಸಭಾ ಎರಡೂ ಸಂಘಟನೆಗಳ ಜೊತೆಗೆ ಕೆಲಸ ಮಾಡುತ್ತಿದ್ದೆ ಎಂದು ಹೇಳಿದ್ದಾನೆ. ಹಾಗಿದ್ದ ಪಕ್ಷದಲ್ಲಿ ಈ ಹೇಳಿಕೆಯ ದಾಖಲೆಗಳು ಎಲ್ಲಿವೆ? ಇದನ್ನು ಸಂಶೋದಿಸುತ್ತಾ ಹೊರಟ ನನಗೆ ಅನೇಕ ಸತ್ಯ ಸಂಗತಿಗಳು ದೊರಕುತ್ತಾ ಹೋದವು…’ ಎಂದು ವಿವರಿಸುತ್ತಾರೆ

ಆರೆಸ್ಸಸ್- ಮೋದಿ ಜೋಡಿ ಅಧಿಕಾರದಲ್ಲಿರುವ ಈ ಸರ್ವಾಧಿಕಾರದ ಸಂದರ್ಭದಲ್ಲಿ ಈ ಇತಿಹಾಸವನ್ನು ಉತ್ಖನನ ಮಾಡುವುದು, ಅದನ್ನು ಒಂದು ಪ್ರಾತಿನಿಧಿಕವಾಗಿ ನೋಡದೆ ಹುಗಿದು ಹೋದ ನಿಜ ಸಂಗತಿಗಳ ಪುನರ್‌ವ್ಯಾಖ್ಯಾನ ಎಂದು ಮನದಟ್ಟು ಮಾಡಿಸುವುದು ತುಂಬಾ ಕಷ್ಟದ ಕೆಲಸವಾಗಿದೆ. ದೇಶದ್ರೋಹಿಯಾಗುವ ಸಾದ್ಯತೆಗಳಿವೆ. ಅದರೆ ಇತಿಹಾಸ ಮತ್ತು ಸತ್ಯದ ಸಂಶೋದನೆಯಲ್ಲಿರುವ ದೀರೇಂದ್ರ ಅವರಿಗೆ ಇದರ ಅರಿವಿದೆ. ಒಂದೆಡೆ ಅಂಬೇಡ್ಕರ್ ಅವರು ಸತ್ಯವನ್ನು ಇತಿಹಾಸದ ತಾಯಿ ಎಂದು ಹೇಳುತ್ತಾರೆ. ಆದರೆ ಯಾವುದೇ ಸಾಧನೆಯಿಲ್ಲದ, ಸಂವಿಧಾನ ವಿರೋಧಿ ಕ್ರಿಯೆಗಳಿಗೆ ಕುಖ್ಯಾತಿಯಾದ ಮತ್ತು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಇತಿಹಾಸವಿಲ್ಲದ ಆರೆಸ್ಸಸ್‌ಗೆ ಸುಳ್ಳನ್ನು ಬಿತ್ತುತ್ತಲೇ ಗೋಬೆಲ್ಸ್ ತಂತ್ರ ಬಳಸಿಕೊಂಡು ತಾನು ಮತ್ತು ತನ್ನ ಸಿದ್ದಾಂತವು ಚಲಾವಣೆಯಲ್ಲಿರಬೇಕಾದ ಅನಿವಾರ್ಯತೆಯಿದೆ. ಇದಕ್ಕಾಗಿ ಸದಾಕಾಲವೂ ಸುಳ್ಳನ್ನು ಉತ್ಪಾದಿಸುವುದು ಮತ್ತು ಪುರಾಣದ ಹಾಗೂ ಚರಿತ್ರೆಯ ಜನಪ್ರಿಯ ವ್ಯಕ್ತಿಗಳನ್ನು ತನ್ನ ಸಿದ್ದಾಂತಗಳೊಂದಿಗೆ ಜೀರ್ಣಿಸಿಕೊಳ್ಳಲು ಯತ್ನಿಸುವುದು ಅದರ ನಿತ್ಯದ ಕಾಯಕವಾಗಿದೆ. ಗ್ರಾಮ್ಶಿಯು ’ಇತಿಹಾಸವು ಆಳುವ ವರ್ಗಗಳು ಪ್ರಯೋಗಿಸುವ ಹತಾರ’ ಎನ್ನುತ್ತಾನೆ. ಈಗ ಅದಿಕಾರದಲ್ಲಿರುವ ಆರೆಸ್ಸಸ್ ಇತಿಹಾಸವನ್ನು ತಿರುಚಿ ಅದನ್ನು ಆಯುಧವಾಗಿ ಪ್ರಯೋಗಿಸುತ್ತಿದೆ. ಮತ್ತು ಇಂದು ಭಾರತವನ್ನು ನರಮೇಧತನದ ವ್ಯವಸ್ಥೆಗೆ ತಂದು ನಿಲ್ಲಿಸಿದೆ. ಇತಿಹಾಸವನ್ನು ಸದಾ ಗೊಂದಲದ ಗೂಡಾಗಿಸುವುದು ಅದರ ಮೊದಲ ಆದ್ಯತೆ. ಗೊಂದಲ ಹೆಚ್ಚಿದಷ್ಟು ಅದನ್ನು ವಿವಾದಗೊಳಿಸುವುದು ಸುಲುಭವಾಗುತ್ತದೆ. ಆರೆಸ್ಸಸ್ ಕಳೆದ 80 ವರ್ಷಗಳಿಂದ ಶಿಕ್ಷಣ, ಸಂಸ್ಕೃತಿ ಮತ್ತು ರಾಜಕೀಯವನ್ನು ಬಳಸಿಕೊಂಡು ಇತಿಹಾಸದ ಸಂಗತಿಗಳನ್ನು ಪರ-ವಿರೋಧದ ಚರ್ಚೆಯಾಗಿಸುವಲ್ಲಿ ಯಶಸ್ವಿಯಾಗಿದೆ. ಮುಖ್ಯವಾಗಿ ಭೂತಕಾಲವನ್ನು ವರ್ತಮಾನದಲ್ಲಿ ಉತ್ಪಾದಿಸುತ್ತಿದೆ. ಈ ಮೂಲಕ ತನ್ನ ಭವಿಷ್ಯವನ್ನು ಗಟ್ಟಿಗೊಳಿಸಿಕೊಳ್ಳುತ್ತಿದೆ ಮತ್ತು ಆರೆಸ್ಸಸ್ ಸದೃಢವಾದಷ್ಟೂ ಭಾರತವು ನರಮೇಧತನದ ಆಡೊಂಬಲವಾಗಿರುತ್ತದೆ.

ಮಹಾತ್ಮ ಗಾಂಧಿ

ಇಂತಹ ಬಿಕ್ಕಟ್ಟಿನ ಸನ್ನಿವೇಶದಲ್ಲಿ ಧೀರೇಂದ್ರ ಝಾ ಅವರು ‘gandhi’s assassin’ ಪುಸ್ತಕದ ಮೂಲಕ ಸತ್ಯಶೋಧನೆಯ ದಾರಿಯಲ್ಲಿ ಹೆಜ್ಜೆ ಹಾಕಿದ್ದಾರೆ. ಗಾಂಧಿಯನ್ನು ಹತ್ಯೆ ಮಾಡಿದ ಚಿತ್ಪಾವನ ಬ್ರಾಹ್ಮಣ ನಾಥೂರಾಂ ಗೋಡ್ಸೆಯ ಬದುಕನ್ನು ಕೇಂದ್ರವಾಗಿಟ್ಟುಕೊಂಡು ಈ ಹತ್ಯೆಗೂ ಆರೆಸ್ಸಸ್‌ಗೂ ಇರುವ ನಂಟಿನ ಸತ್ಯವನ್ನು ಅನಾವರಣ ಮಾಡಿದ್ದಾರೆ. ಈ ಅನಾವರಣದ ಪ್ರಕ್ರಿಯೆಯು ಸಂಕೀರ್ಣವಾದ ಸಂಗತಿಗಳನ್ನು ಒಳಗೊಂಡಿದೆ. ಒಂದು ಘಟನೆಯು ಮತ್ತೊಂದು ಘಟನೆಯೊಂದಿಗೆ ತಳಕು ಹಾಕಿಕೊಂಡಿರುತ್ತದೆ. ಅದರ ಸಿಕ್ಕುಗಳನ್ನು ಬಿಡಿಸುತ್ತಾ ಸತ್ಯವನ್ನು ಶೋಧಿಸಿರುವ ದೀರೇಂದ್ರ ಝಾ, ಒಂದು ಮಹತ್ವದ ಕೃತಿಯನ್ನು ನಮಗೆ ಕೊಟ್ಟಿದ್ದಾರೆ. ಇದನ್ನು ಸುಲಭಗೊಳಿಸಿ ಹೇಳಬೇಕೆಂದರೆ ಕಳೆದ ಶತಮಾನದ ಇಪ್ಪತ್ತರ ದಶಕದ ಕಡೆಯ ಭಾಗದಲ್ಲಿ ತನ್ನ ಇಪ್ಪತ್ತರ ವಯಸ್ಸಿನಲ್ಲಿ ಸಂಘ ಪರಿವಾರಕ್ಕೆ ಕುತೂಹಲದಿಂದ ಪ್ರವೇಶಿಸುವ ನಾಥೂರಾಂ ಗೋಡ್ಸೆ, ಮೂವತ್ತರ ದಶಕದ ಕೊನೆಯ ಘಟ್ಟದಲ್ಲಿ, ಆರೆಸ್ಸಸ್‌ನ ಹಿಂದೂ ರಾಷ್ಟ್ರ ಸಿದ್ದಾಂತದ ಪ್ರಯೋಗಗಳ ಅದ್ಯಯನದ ವಿದ್ಯಾರ್ಥಿಯಾಗುತ್ತಾನೆ. ಅದರ ಎಲ್ಲಾ ಪಟ್ಟುಗಳನ್ನು ಕಲಿಯುತ್ತಾನೆ. ನಲವತ್ತರ ದಶಕದ ಹೊತ್ತಿಗೆ ಆರೆಸ್ಸಸ್-ಹಿಂದೂ ಮಹಾಸಭಾದ ಹಿಂದುತ್ವ ರಾಜಕಾರಣ ಪ್ರಯೋಗದ ಮುಖ್ಯ ಪಾತ್ರದಾರಿಯಾಗುವ
ಗೋಡ್ಸೆ 30, ಜನವರಿ 1848ರಂದು ದೇಶದ ಮೊದಲ ಭಯೋತ್ಪಾದಕನಾಗಿ ಇತಿಹಾಸದಲ್ಲಿ ದಾಖಲಾಗುತ್ತಾನೆ.

ಇಲ್ಲಿ ಪರದೆಯ ಮೇಲೆ ಪಾತ್ರಧಾರಿಗಳಾಗಿ ಹಿಂದೂ ಮಹಾ ಸಭಾ, ಗೋಡ್ಸೆ, ನಾರಾಯಣ ಅಪ್ಟೆ ಮತ್ತು ಕರ್ಕರೆ, ಮದನ್ ಲಾಲ್ ಪೌವ ಮುಂತಾದವರು ಮಾತ್ರ ಕಂಡು ಬರುತ್ತಾರೆ. ಇದರ ನಿರ್ಮಾಪಕರಾದ ಆರೆಸ್ಸಸ್ ಕತೆ, ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ ವಿ.ಡಿ.ಸಾವರ್ಕರ್ ತೆರೆಯ ಹಿಂದೆ ಉಳಿದುಕೊಳ್ಳುತ್ತಾರೆ ಇದು ನಿಜಘಟನೆಯಾಗಿರುವುದರಿಂದ ವಿಚಾರಣೆಯ ಸಂದರ್ಭದಲ್ಲಿ ತೆರೆಯ ಹಿಂದಿರುವವರಿಗೂ ಮತ್ತು ತೆರೆಯ ಮೇಲಿನ ಪಾತ್ರಧಾರಿಗಳಿಗೂ ಸಂಬಂದ ಕಲ್ಪಿಸುವಲ್ಲಿ ವಿಫಲರಾಗುವುದರಿಂದ ಈ ನಿರ್ಮಾಪಕ ಮತ್ತು ನಿರ್ದೇಶಕರು ಕೊಲೆ ಆರೋಪದಿಂದ ಖುಲಾಸೆಯಾಗುತ್ತಾರೆ. ಪತ್ರಕರ್ತ ದೀರೇಂಧ್ರ ಝಾ ಈ ಖುಲಾಸೆಯ ಕುರಿತು ಅನುಮಾನಗೊಂಡು 80 ವರ್ಷಗಳ ಹಿಂದಿನ ಇತಿಹಾಸದ ಗಣಿಯನ್ನು ಬಗೆದು ಎಲ್ಲಾ ದಾಖಲೆಗಳನ್ನು ಸಂಶೋದನೆ ಮಾಡಿ 1910ರಲ್ಲಿ ಜನಿಸಿದ ಗೋಡ್ಸೆಯ ಜೀವನದಿಂದ ಮೊದಲುಗೊಂಡು ನಂತರದ ನಲವತ್ತು ವರ್ಷಗಳ ಆ ಹಿಂದುತ್ವವಾದಿ ಸಂಘಟನೆಗಳ ಚಟುವಟಿಕೆಗಳನ್ನು ಎಳೆಎಳೆಯಾಗಿ ಬಿಚ್ಚಿಡುತ್ತಾರೆ. ಕಡೆಗೂ ಕೊಲೆಗಾರನನ್ನು ರೂಪಿಸಿದ ಆರೆಸ್ಸಸ್, ಹಿಂದೂ ಮಹಾಸಭಾ ಮತ್ತು ಗೋಡ್ಸೆ, ನಾರಾಯಣ ಅಪ್ಟೆಯವರ ಗಾಡ್‌ಫಾದರ್ ವಿ.ಡಿ.ಸಾವರ್ಕರ್ ಸಹ ಗಾಂಧಿ ಹತ್ಯೆಯ ಭಾಗಿದಾರರು ಎಂಬುದು ಓದುಗನಿಗೆ ಮನದಟ್ಟಾಗುತ್ತದೆ. ಮುಖ್ಯವಾಗಿ ಇದು ಬಹುಸಂಖ್ಯಾತ ಭಾರತೀಯರಿಗೂ ಅರಿವಾಗಬೇಕಾಗಿದೆ. ಅದೂ ಈ ನರಮೇಧತನದ ಕಾಲದಲ್ಲಿ.

‘gandhi’s assassin’ ಪುಸ್ತಕವನ್ನು ಓದಿದಾಗ ಮಹಾರಾಷ್ಟ್ರದ ಚಿತ್ಪಾವನ್ ಬ್ರಾಹ್ಮಣ ಕುಟುಂಬಗಳನ್ನು ಒಂದು ಸುತ್ತು ಹಾಕಿ ಬಂದ ಅನುಭವವಾಗುತ್ತದೆ. ಆರೆಸ್ಸಸ್ ಮತ್ತು ಹಿಂದೂ ಮಹಾಸಭಾದ ಮುಕ್ಕಾಲು ಪಾಲು ಸ್ವಯಂಸೇವಕರು ಮಹಾರಾಷ್ಟ್ರದ ಸಾಂಗ್ಲಿ, ಪುಣೆ, ಅಹಮ್ಮದ್ ನಗರ, ಬಾಂಬೆಗಳ (ಮುಂಬೈ) ಚಿತ್ಪಾವನ ಬ್ರಾಹ್ಮಣ ಜಾತಿಯಿಂದ ಬಂದವರು. ಸಂಘ ಪರಿವಾರದ ನಾಯಕರು ಭಾರತದಲ್ಲಿ ಬ್ರಾಹ್ಮಣರ ಆ ಗತಕಾಲದ ವೈಭವವನ್ನು ಪುನರ್ ಸ್ಥಾಪಿಸುವ ಕನಸು ಕಾಣುತ್ತಾ ಇದರ ಅನುಷ್ಠಾನಕ್ಕೆ ಹಿಂದೂ ರಾಷ್ಟ್ರದ ಕಲ್ಪನೆಯನ್ನು ತೇಲಿಬಿಟ್ಟರು. ಬ್ರಾಹ್ಮಣರ ಪುನರುಜ್ಜೀವನದ ಗುರಿಗೆ ಸ್ವಯಂಸೇವಕರನ್ನು ಸೆಳೆಯಲು ಮುಸ್ಲಿಂರನ್ನು ಶತ್ರುಗಳಾಗಿ ಸೃಷ್ಟಿಸಿದರು. ಮತ್ತು 1920, 30, 40ರ ದಶಕದ ಆ ರಾಜಕೀಯ ಬೆಳವಣಿಗೆಗಳು, ಕಾಂಗ್ರೆಸ್ ಪಕ್ಷದ ಸ್ವಾತಂತ್ರ್ಯ ಹೋರಾಟ, ಮುಸ್ಲಿಂ ಲೀಗ್ ಮತ್ತು ಮುಖ್ಯವಾಗಿ ಗಾಂಧಿ ಇವರೆಲ್ಲರೂ ಆರೆಸ್ಸಸ್ ಮತ್ತು ಹಿಂದೂ ಮಹಾಸಭಾದ ದ್ವೇಷವೆಂಬ ಈ ವಿಷಬಿತ್ತನೆಗೆ ಪೂರಕವಾಗಿ ಬಳಕೆಯಾದರು. ಇದನ್ನು ಧೀರೇಂದ್ರ ಅವರು ಅತ್ಯಂತ ಸಮರ್ಥವಾಗಿ ಮತ್ತು ಸರಳ ಭಾಷೆಯಲ್ಲಿ ವಿವರಿಸಿದ್ದಾರೆ. ಇಡೀ ಪುಸ್ತಕದಲ್ಲಿ ಭಾಷೆಯು ಎಲ್ಲಿಯೂ ತನ್ನ ಘನತೆ ಕಳೆದುಕೊಂಡಿಲ್ಲ.

ಇತಿಹಾಸವನ್ನು ಮತ್ತೆಮತ್ತೆ ಅಗಿಯುವಾಗ ಅಗತ್ಯವಾದ ಸ್ಥಿತಪ್ರಜ್ಞೆಯಿಂದ ವ್ಯಾಖ್ಯಾನಿಸಿದ್ದಾರೆ. ವ್ಯಕ್ತಿ ನಿಂದನೆಯ ಪ್ರಚೋದನೆಗೂ ಒಳಗಾಗದೆ ಸಮತೂಕದ ನಿರೂಪಣೆಯನ್ನು ಸಾಧಿಸಿದ್ದಾರೆ. ಚಿತ್ಪಾವನ ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದ ಗೋಡ್ಸೆ ಹಂತಕನಾಗಿ ತಯಾರಾಗಿದ್ದು ಮತ್ತು ಆತನ ಭಾರತದ ಕುರಿತಾದ ಕಲ್ಪನೆ ಈ ಕೃತಿಯ ಕೇಂದ್ರವಾಗಿದ್ದರೂ ಇಡೀ ಕಾಲಘಟ್ಟದಲ್ಲಿ ಆರೆಸ್ಸಸ್ ಸರ್ವಾಂತರಯಾಮಿ ಆಗಿರುವುದನ್ನು ದಾಖಲೆಗಳ ಸಮೇತ ವಿಶ್ಲೇಷಣೆ ಮಾಡಿದ್ದಾರೆ. ಹಂತಕ ನಾಥೂರಾಂ ಗೋಡ್ಸೆ ಆರೆಸ್ಸಸ್‌ನ್ನು ತೊರೆದಿರಲಿಲ್ಲ ಎಂಬ ಸತ್ಯವನ್ನು ಬಿಚ್ಚಿಟ್ಟಿದ್ದಾರೆ. ಲೇಖಕರ ಸಾಮಾನ್ಯ ತಿಳಿವಳಿಕೆಯಿಂದಾಗಿ ಈ ಕೃತಿಯು ರೋಚಕ ಕಥನವಾಗುವ ಅಪಾಯದಿಂದ ಸಹ ಪಾರಾಗಿದೆ. ಇಲ್ಲಿ ಕೊಲೆಗಾರ ಗೋಡ್ಸೆ ಮತ್ತು ಆತನ ಸಹಚರ ನಾರಾಯಣ ಅಪ್ಟೆ ಇವರಿಬ್ಬರ ವ್ಯಕ್ತಿತ್ವವನ್ನು ಮನೋವೈಜ್ಞಾನಿಕ ದೃಷ್ಟಿಯಿಂದ ವಿಶ್ಲೇಷಣೆ ಮಾಡಿರುವುದು ‘gandhi’s assassin’ ಕೃತಿಯ ವಿಶೇಷ.

‘gandhi’s assassin’ ಕೃತಿಯಲ್ಲಿ ’ತಂತ್ರ’ ಮತ್ತು ’ಒಳಸಂಚು’ ಎಂದು ಎರಡು ಭಾಗಗಳಿವೆ. ಮೊದಲ ಭಾಗ ’ತಂತ್ರ’ದಲ್ಲಿ ನಾಥೂ, ಸಾವರ್ಕರ್ ವರ್ಸಸ್ ಗಾಂಧಿ, ಬಾಂಬೆಯ ಬ್ರಾಹ್ಮಿನ್ಸ್, ಸಂಘ ಮತ್ತು ಸಭಾ, ರಾಮಚಂದ್ರ ನಾಥೂರಾಂ ಆಗಿದ್ದು, ಒಂದು ಸೈನ್ಯ ಮತ್ತು ಒಂದು ದಿನಪತ್ರಿಕೆ, ಮನೋಲೈಂಗಿಕತೆಯ ಯಾತನೆ, ’ಗಾಂಧಿ’, ಆತ್ಮಹತ್ಯೆ ಮಾಡಿಕೊಳ್ಳಿ ಎಂಬ ಅಧ್ಯಾಯಗಳಿವೆ. ಎರಡನೇ ಭಾಗ ’ಒಳಸಂಚು’ವಿನಲ್ಲಿ ಕಾರ್ಯ ಯೋಜನೆ, ಅಲಿಬಿ, ಪೂರ್ವ ಪರಿಶೀಲನೆ, ಸರಳ ಮನಸ್ಸಿನ ಬೇಟೆಗಾರ, ತನ್ನ ಗನ್ ಪತ್ತೆಹಚ್ಚಿದ ಗೋಡ್ಸೆ, ಚಳಿಗಾಲದ ಸಂಜೆಯನ್ನು ಧ್ವಂಸಗೊಳಿಸಿದ ಗುಂಡೇಟು, ತನಿಖೆಗಳು, ಹಂತಕನ ವಿಚಾರಣೆ ಮತ್ತು ನೇಣುಗಂಬ ಎನ್ನುವ ಅದ್ಯಾಯಗಳಿವೆ

ಮೊದಲ ಭಾಗದ ನಾಥು ಅಧ್ಯಾಯದಲ್ಲಿ ಗೋಡ್ಸೆಯ ಹುಟ್ಟು ಮತ್ತು ಆತನ ಕುಟುಂಬ ಹಾಗೂ ಅದಕ್ಕೆ ಪೂರಕವಾಗಿ ಆ ಕಾಲದ ಮಹಾರಾಷ್ಟ್ರದ ಚಿತ್ಪಾವನ ಬ್ರಾಹ್ಮಣರ ವಿವರಗಳಿವೆ. ಮತ್ತು ಅದೇ ಸಂದರ್ಭದಲ್ಲಿ ಗಾಂಧಿ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಮರಳಿ ಬಂದು ನಡೆಸಿದ ಚಂಪಾರಣ್ ಸತ್ಯಾಗ್ರಹ ಮತ್ತು ಅಸಹಕಾರ ಚಳವಳಿಯ ವಿವರಗಳಿವೆ. ಅಸಹಕಾರ ಚಳವಳಿಯನ್ನು ಮಧ್ಯದಲ್ಲಿಯೇ ಸ್ಥಗಿತಗೊಳಿಸುವ ಗಾಂಧಿಯವರ ನಿರ್ಧಾರ ಹೇಗೆ, ತನ್ನ ಸಿದ್ದಾಂತಗಳಿಗೆ ಅವಶ್ಯಕವಾದ ಸ್ವಯಂಸೇವಕರನ್ನು ರೂಪಿಸಿಕೊಳ್ಳಲು ಆರೆಸ್ಸಸ್‌ಗೆ ಸಹಾಯಕವಾಯಿತು ಎಂದು ವಿವರಿಸಿದ್ದಾರೆ. ಎರಡನೆಯ ಅಧ್ಯಾಯದಲ್ಲಿ ಅಂಡಮಾನ್ ಜೈಲಿನಲ್ಲಿರುವ ದಿನಗಳಿಗೂ ಮುಂಚಿನ ಸಾವರ್ಕರ್ ಮತ್ತು ಬ್ರಿಟಿಷರಿಗೆ ಕ್ಷಮಾಪಣೆ ಪತ್ರಗಳನ್ನು ಬರೆದು ದಯಾಬಿಕ್ಷೆ ಮೂಲಕ ಬಿಡುಗಡೆಯಾದ ನಂತರದ ಹಿಂದುತ್ವವಾದಿ ಸಾವರ್ಕರ್ ಕುರಿತು ವಿಶ್ಲೇಷಣೆ ಮಾಡಿದ್ದಾರೆ. ತನ್ನ ಹದಿಹರೆಯದಲ್ಲಿ ದೇಶಭಕ್ತನಾಗಿದ್ದ ಸಾವರ್ಕರ್ ನಂತರ ಕಟ್ಟರ್ ಮುಸ್ಲಿಂ ದ್ವೇಷಿಯಾಗಲು ಕಾರಣಗಳೇನು ಎಂದು ಹುಡುಕಿದ್ದಾರೆ. ಆದರೆ ಉತ್ತರಗಳು ದೊರಕಿಲ್ಲ. ದೊರಕುವುದೂ ಇಲ್ಲ. ಏಕೆಂದರೆ ತನ್ನ ಪ್ರತಿಯೊಂದು ನಡೆ ಮತ್ತು ನುಡಿಯನ್ನು ಎಚ್ಚರಿಕೆಯಿಂದ ಲೆಕ್ಕಾಚಾರ ಮಾಡಿ ಪೂರ್ವ ನಿಯೋಜಿತವಾಗಿ ದಾಳ ಉರುಳಿಸುವ ಸಾವರ್ಕರ್ ಜನಾಂಗೀಯ ದ್ವೇಷವನ್ನು ಬಿತ್ತಿ ಬೆಳೆದ ನಂತರವೂ ಇಂದು ಭಾರತರತ್ನ ಪ್ರಶಸ್ತಿಗೆ ಚರ್ಚೆಯಾಗುತ್ತಿರುವುದು ಅನೇಕ ಆಯಾಮಗಳನ್ನು ಸೂಚಿಸುತ್ತದೆ.

ಇಲ್ಲಿ ಲೇಖಕರು ಸಾವರ್ಕರ್ ಅವರ ಆಕರ್ಷಕ ವ್ಯಕ್ತಿತ್ವ, ಯುವಕರನ್ನು ಅದರಲ್ಲಿಯೂ ಚಿತ್ಪಾವನ್ ಬ್ರಾಹ್ಮಣ ಯುವಕರನ್ನು ಹಿಂದೂ ಧರ್ಮದ ರಕ್ಷಣೆ ಮತ್ತು ಹಿಂದೂ ರಾಷ್ಟ್ರದ ಸ್ಥಾಪನೆಯ ಸಿದ್ದಾಂತದ ಮೂಲಕ ಸೆಳೆಯುತ್ತಿದ್ದ ವೈಖರಿಯನ್ನು ವಿವರಿಸಿದ್ದಾರೆ. ಕುತೂಹಲವೆಂದರೆ ಈ ಯುವಕರಲ್ಲಿ ದ್ವೇಷವನ್ನು ಬಿತ್ತಿ ಕೆರಳಿಸುತ್ತಿದ್ದ ಸಾವರ್ಕರ್ ಸ್ವತಃ ತಾನು ಮಾತ್ರ ಶಾಂತಸ್ವರೂಪಿಯಾಗಿ ಸದಾ ಹಿನ್ನಲೆಯಲ್ಲಿ ಉಳಿದುಕೊಂಡು ತಮ್ಮ ಉದ್ದೇಶವನ್ನು ಸಾದಿಸಿಕೊಳ್ಳುತ್ತಿದ್ದರು. ಎಲ್ಲಿಯೂ ಪ್ರಭುತ್ವದ ಕಣ್ಣಿಗೆ ಅಪರಾಧಿಯಾಗಿ ದಾಖಲು ಸಮೇತ ಸಿಗದಂತೆ ಎಚ್ಚರ ವಹಿಸುತ್ತಿದ್ದರು. ತಾವು ಬಲಿಪಶುಗಳಾಗುವುದು ಗೊತ್ತಿದ್ದರೂ ಆ ಚಿತ್ಪಾವನ ಬ್ರಾಹ್ಮಣ ಯುವಕರು ಸಾವರ್ಕರ್ ಅವರನ್ನು ಆರಾಧಿಸುವ ಆ ವೈಚಿತ್ರ್ಯಗಳನ್ನು ಲೇಖಕರು ಅಚ್ಚರಿಯ ದನಿಯಲ್ಲಿ ಬರೆದಿದ್ದಾರೆ. ಸ್ವತಃ ತಾನೇ ಹುಟ್ಟು ಹಾಕಿದ ಹಿಂದೂ ರಾಷ್ಟ್ರದಳ ಸಂಘಟನೆಯ ಕಾರ್ಯಚಟುವಟಿಕೆಗಳಲ್ಲಿ ಬಹಿರಂಗವಾಗಿ ಬಾಗವಹಿಸದೆ ಅದನ್ನು ನೇಪಥ್ಯದಲ್ಲಿ ನಿಯಂತ್ರಿಸುತ್ತಿರುವುದನ್ನು ಕಂಡು ಯುವಕ ಗೋಡ್ಸೆ ಕುಪಿತನಾಗಿ ಸಾವರ್ಕರ್‌ಗೆ ಪತ್ರ ಬರೆಯುತ್ತಾನೆ. ಆದರೆ ಇದು ತಾತ್ಕಾಲಿಕ ಮಾತ್ರ. ಮರಳಿ ಅವರ ಭಕ್ತನಂತೆ ವರ್ತಿಸುತ್ತಾನೆ. ಕಡೆಗೂ ಗಾಂಧಿಯನ್ನು ಕೊಂದು ಅದರ ಅಪರಾಧವನ್ನು ತಾನು ಮಾತ್ರ ಹೊರುತ್ತಾನೆ. ಇಂತಹ ಕುತೂಹಲಕರ ಸಂಗತಿಗಳು ಈ ಪುಸ್ತಕದ ಉದ್ದಕ್ಕೂ ಕಂಡುಬರುತ್ತವೆ.

ಮುಂದಿನ ಅಧ್ಯಾಯಗಳಲ್ಲಿ ಬಾಂಬೆ ಪ್ರಾಂತದ ಚಿತ್ಪಾವನ ಬ್ರಾಹ್ಮಣರು ಮತ್ತು ಅವರು ಆರೆಸ್ಸಸ್‌ನ್ನು ಕಟ್ಟಿ ಬೆಳೆಸಿದ್ದು, ಆರೆಸ್ಸಸ್ ಮತ್ತು ಹಿಂದೂ ಮಹಾಸಭಾದ ನಡುವಿನ ಸಂಬಂದಗಳು ಮತ್ತು ಸ್ವಯಂಸೇವಕರು, ಚಿಂತಕರು, ಶಿಕ್ಷಕರನ್ನು ಕೊಡುಕೊಳ್ಳುವಿಕೆಯ ಮೂಲಕ ಪರಸ್ಪರ ಸೌಹಾರ್ದ ಗೆಳೆತನ ಉಳಿಸಿಕೊಂಡಿರುವ ಆ ವಿದ್ಯಾಮಾನಗಳನ್ನು ವಿವರಿಸಲಾಗಿದೆ. ಈ ಕಾಲಘಟ್ಟದಲ್ಲಿ ಲಿಮಯೆ, ಎಸ್.ಎಚ್. ದೇಶಪಾಂಡೆ, ವೈದ್ಯ, ಜಮನ್‌ದಾಸ್ ಮೆಹ್ತಾ, ವಾಸುದೇವ್ ಬಲವಂತ್ ಗೋಗಟೆ ಮುಂತಾದ ಚಿತ್ಪಾವನ ಬ್ರಾಹ್ಮಣರು ಆರೆಸ್ಸಸ್ ಮತ್ತು ಹಿಂದೂ ಮಹಾಸಭಾವನ್ನು ಕಟ್ಟಿ ಬೆಳೆಸಿದ ವಿವರಗಳಿವೆ. ಗೋಡ್ಸೆಯ ಜಿಗ್ರಿ ದೋಸ್ತ ನಾರಾಯಣ ಅಪ್ಟೆಯ ವ್ಯಕ್ತಿತ್ವದ ದಟ್ಟವಾದ ವಿವರಗಳು ಕುತೂಹಲಕಾರಿಯಾಗಿವೆ. ವ್ಯಕ್ತಿತ್ವದಲ್ಲಿ ಉತ್ತರ ಮತ್ತು ದಕ್ಷಿಣ ದ್ರುವಗಳಂತಿರುವ ಗೋಡ್ಸೆ ಮತ್ತು ಅಪ್ಟೆ ನೇಣುಗಂಬಕ್ಕೇರುವವರೆಗೂ ಆತ್ಮೀಯ ಸ್ನೇಹಿತರಾಗಿರುತ್ತಾರೆ. ಇವರಿಬ್ಬರ ವ್ಯಕ್ತಿ ಚಿತ್ರಣವನ್ನು ಒಂದು ಸಂವಾದಿ ಸ್ವರೂಪದಲ್ಲಿ ಬರೆದಿದ್ದಾರೆ. ಹಿಂದೂ ಮಹಾಸಾಭಾದ ಹಿಂದೂ ರಾಷ್ಟ್ರೀಯ ಮಿಲಿಟಿಯಾ ಸೇನೆ, ಗೋಡ್ಸೆ ಮತ್ತು ಅಪ್ಟೆ ಸೇರಿ ನಡೆಸುವ ’ಆಗ್ರಣಿ’ ದಿನಪತ್ರಿಕೆ ಮತ್ತು ಹಿಂದೂ ರಾಷ್ಟ್ರದಳ ಆ ಎರಡು ದಶಕಗಳಲ್ಲಿ ಮಹಾರಾಷ್ಟ್ರದ ಸುತ್ತಲೂ ಹಿಂದೂ ರಾಷ್ಟ್ರದ ಹವಾ ಹುಟ್ಟಿಸಿರುವುದರ ಕುರಿತು ಬರೆದಿದ್ದಾರೆ. 1929ರಲ್ಲಿ ಒಬ್ಬ ಕುತೂಹಲಿ ಚಿತ್ಪಾವನ ಬ್ರಾಹ್ಮಣ ಯುವಕನಾಗಿದ್ದ ಗೋಡ್ಸೆ 1940ರ ಹೊತ್ತಿಗೆ ಗಾಂಧಿ ದ್ವೇಷಿಯಾಗಿ ಬದಲಾಗುವ ಆ ಹತ್ತು ವರ್ಷಗಳಲ್ಲಿ ಆರೆಸ್ಸಸ್ ಮತ್ತು ಹಿಂದೂ ಮಹಾಸಭಾದ ಪಾತ್ರಗಳನ್ನು ವಿವರಿಸಲಾಗಿದೆ.

ಎರಡನೆ ಭಾಗದಲ್ಲಿ ಗಾಂಧಿ ಹತ್ಯೆಯ ಉದ್ದೇಶವನ್ನು ದೃಡನಿಶ್ಚಯ ಮಾಡಿಕೊಂಡ ಗೋಡ್ಸೆ ಮತ್ತು ಅಪ್ಟೆ ಅದನ್ನು ಕಾರ್ಯಗತಗೊಳಿಸುವ ಕಾರ್ಯಯೋಜನೆಗಳನ್ನು ವಿವರಿಸಲಾಗಿದೆ. ನಂತರ 30, ಜನವರಿ 1948ರ ದುರ್ಘಟನೆ ಮುಂಚಿನ ದಿನಗಳು ಮತ್ತು ಆ ದಿನದ ಘಟನೆಗಳ ವಿವರಣೆಗಳು ಆಸಕ್ತಿದಾಯಕವಾಗಿವೆ. ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಹದಿಹರೆಯದ ಯುವಕರ ಮನಸ್ಥಿತಿ ಮತ್ತು ಅವರ ದ್ವಂದ, ನಿರೀಕ್ಷೆಗಳನ್ನು ಮತಾಂಧ ಸಂಘಟನೆಗಳು ಬಳಸಿಕೊಳ್ಳುವ ಆ ಪ್ರಕ್ರಿಯೆ ಇಂದಿಗೂ ಒಂದು ಎಚ್ಚರಿಕೆಯ ಪಾಠದಂತಿದೆ. ಹೀಗಾಗಿ ‘gandhi’s assassin’ ಕೃತಿಯು ಸಮಕಾಲೀನ ಸಂದರ್ಭಕ್ಕೂ ಪ್ರಸ್ತುವಾಗುತ್ತದೆ. ಏಕೆಂದರೆ ಗೋಡ್ಸೆ ಮತ್ತು ಅಪ್ಟೆ ಜನಾಂಗೀಯ ದ್ವೇಷಿಗಳಾಗಿ ರೂಪುಗೊಳ್ಳುತ್ತಿರುವ ಆ ಕಾಲದಲ್ಲಿ ಅದರ ಪಾಲುದಾರನಾಗಿದ್ದ ಆರೆಸ್ಸಸ್ ಇನ್ನೂ ಕಲಿಕೆ ಮತ್ತು ಅದರ ಪ್ರಯೋಗದ ಹಂತದಲ್ಲಿತ್ತು. ಗಟ್ಟಿಯಾದ ನೆಲೆಗೆ ತಡಕಾಡುತ್ತಿತ್ತು. ವಿಷಬೀಜಗಳ ತಯಾರಿಕೆಯ ಹಂತದಲ್ಲಿತ್ತು. ಅದರ ಬಿತ್ತನೆಗೆ ಮಣ್ಣು ಪರೀಕ್ಷೆ ಮತ್ತು ಅದನ್ನು ಉಳುಮೆಗೆ ಸಿದ್ದಪಡಿಸುವ ಗಡಿಬಿಡಿಯಲ್ಲಿತ್ತು. ಅಂತಹ ಪ್ರಾಥಮಿಕ ಹಂತದಲ್ಲಿದ್ದಾಗಲೇ ಆ ಸಂಘಟನೆ ಬೆಳೆಸಿದ ಯುವಕರು ಗಾಂಧಿಯವರ ಹತ್ಯೆ ಮಾಡಿದರು. ಇದೆಲ್ಲವೂ ನಡೆದು 73 ವರ್ಷಗಳಾಗಿವೆ. ಆರೆಸ್ಸಸ್ ಇಂದು ಭಾರತದ ಅತ್ಯಂತ ಪ್ರಭಾವಶಾಲಿ ಮತ್ತು ಲಕ್ಷಾಂತರ ಸ್ವಯಂಸೇವಕರನ್ನು ಹೊಂದಿದ ಸಂಘಟನೆಯಾಗಿದೆ. ತನ್ನ ಸಿದ್ದಾಂತಗಳ ಪ್ರಯೋಗಗಳಿಂದ ಇಂದು ಭಾರತವನ್ನು ಅಸಹಿಷ್ಣತೆಯ, ಜನಾಂಗ ದ್ವೇಷದ ದೇಶವನ್ನಾಗಿಸಿದೆ. ಇದನ್ನು ಮುಖಾಮುಖಿಯಾಗುವುದು ಹೇಗೆ?

30, ಜನವರಿ 1948ರಂದು ಈ ನೆಲದ ಮೊದಲ ಭಯೋತ್ಪಾದನೆಯ ಕೃತ್ಯದ ಮೂಲಕ 77 ವಯಸ್ಸಿನ ಕೃಶ ದೇಹವನ್ನು ನೆಲಕ್ಕುರುಳಿಸಿದ ಆ ಸಿದ್ದಾಂತವು ಆ ಗುಂಡೇಟಿನ ಮೂಲಕ ಒಂದು ಹೇಳಿಕೆಯನ್ನು ಪ್ರಕಟಿಸಿತು. ತನ್ನ ಉದ್ದೇಶವನ್ನು ಸ್ಪಷ್ಟಪಡಿಸಿತು. ಸಹಬಾಳ್ವೆ, ಸಹಿಷ್ಣತೆ, ಜಾತ್ಯತೀತತೆ ಮೇಲೆ ಯುದ್ದವನ್ನೇ ಸಾರಿತು. ಈಗ 75 ವರ್ಷಗಳ ನಂತರ ಮತ್ತೆ 30 ಜನವರಿ 2022ರ ಹೊಸ್ತಿಲಲ್ಲಿದ್ದೇವೆ.

 

ಅಂದು ಆ ಮತಾಂಧತೆಯ ಹೇಳಿಕೆ ಇಂದು ದಿನನಿತ್ಯದ ಸುದ್ದಿಯಾಗಿದೆ. ಅಂದಿನ ಕೆಲವೇ ಸಂಘಟನೆಗಳ ಉದ್ದೇಶವು ಇಂದು ಪ್ರಭುತ್ವದ ನೀತಿಯಾಗಿದೆ. ಭಾರತವು ನರಮೇಧತನದ ಅಂಚಿನಲ್ಲಿದೆ. ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ‘gandhi’s assassin’ ಕೃತಿಯು ಅನೇಕ ಕಾರಣಗಳಿಗೆ ಮಹತ್ವದ ಮತ್ತು ಪ್ರಸ್ತುತವಾಗುವ ಕೃತಿಯಾಗಿದೆ. ನಮಗೆ ಎಚ್ಚರಿಕೆಯ ಗಂಟೆಯಂತಿದೆ.

ಇತಿಹಾಸದಲ್ಲಿ ಆಟವಾಡಿದವರೇ ವರ್ತಮಾನದಲ್ಲಿಯೂ ಆಟವಾಡುತ್ತಿದ್ದಾರೆ ಎಂದು ಮುನ್ಸೂಚನೆ ಕೊಡುತ್ತಿದೆ. ಗಾಂಧಿಯ ಹತ್ಯೆಯು ಅದರ ಕೊಲೆಗಾರರಲ್ಲಿ ಯಾವುದೇ ಮನಃಪರಿವರ್ತನೆ ತರಲಿಲ್ಲ. ಅವರು ಮತ್ತಷ್ಟು ದೃಢಚಿತ್ತರಾಗಿದ್ದರು. ನಾಥೂರಾಂ ಗೋಡ್ಸೆಯ ಸಹೋದರ ಗೋಪಾಲ ಗೋಡ್ಸೆ ಅದನ್ನು ಸಮರ್ಥಿಕೊಳ್ಳುತ್ತೆಲೇ ಇದ್ದ. ಇಂದು ಗೋಡ್ಸೆ ಮರಳಿ ಗೋರಿಯಿಂದ ಎದ್ದು ಬಂದಿದ್ದಾನೆ. ಆತನ ಪರವಾಗಿ ಹಿಂದೂ ಮಹಾಸಭಾ ಮತ್ತೆ ಚಾಲ್ತಿಗೆ ಬರತೊಡಗಿದೆ. ಈ ಗೋಡ್ಸೆ ಸಂತತಿಗಳು ಮುಸ್ಲಿಂರ ಹತ್ಯಾಕಾಂಡಕ್ಕೆ ಬಹಿರಂಗವಾಗಿ ಕರೆ ಕೊಡುತ್ತಿದ್ದಾರೆ. ನಮ್ಮ ಮುಂದಿರುವ ದಾರಿಗಳೇನು ಎನ್ನುವುದು ಭವಿಷ್ಯದ ಹುಡುಕಾಟವಾದರೆ ‘gandhi’s assassin’ ಕೃತಿಯು ಈ ಹುಡುಕಾಟಕ್ಕೆ ಭೂತಕಾಲದಿಂದ ನಾವು ಕಲಿಯಬೇಕಾದ ಪಾಠಗಳನ್ನು ತಿಳಿಸಿಕೊಡುತ್ತಿದೆ.

ಬಿ. ಶ್ರೀಪಾದ ಭಟ್

ಬಿ. ಶ್ರೀಪಾದ ಭಟ್
ವೃತ್ತಿಯಲ್ಲಿ ಇಂಜಿನಿಯರ್ ಆದ ಬಿ.ಶ್ರೀಪಾದ್ ಭಟ್ ಹಿರಿಯ ಚಿಂತಕ, ಬರಹಗಾರ. ಹಲವು ಸಾಮಾಜಿಕ ಚಳವಳಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಸಮಾಜದ ಆಗುಹೋಗುಗಳಿಗೆ ನಿರಂತರ ಸ್ಪಂದಿಸುವ ಇವರು ಸಮಾನ ಶಿಕ್ಷಣಕ್ಕಾಗಿ ಹೋರಾಟದಲ್ಲಿ ತೊಡಗಿಸಿಕೊಂಡಿದ್ದಾರೆ.


ಇದನ್ನೂ ಓದಿ: “ಕೇಳುವಿರೇನು ನೀವು ನಾ ಹುಚ್ಚನಾದದ್ದು ಹೇಗೆಂದು?”- ಖಲೀಲ್ ಗಿಬ್ರಾನ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

3 COMMENTS

  1. ಘೋಡ್ಸೆ ಎಲ್ಲಿದ್ದ ಏನು ಮಾಡ್ತಿದ್ದ ಅಂತ ಹೇಳಿದ್ದೀರ, ಆದರೆ ಯಾಕೆ ಗಾಂಧೀನ ಕೊಂದ?? ಗಾಂಧಿ ಮೇಲೆ ಯಾಕೆ ಸಿಟ್ಟು??
    RSS ಅಂತ ಹೇಳ್ತಿರಲ್ಲ, ಅವರಿಗೆ ಮುಸ್ಲಿಮರ ಮೇಲೆ ಯಾಕೆ ಸಿಟ್ಟು??
    ವಿಭಜನೆ ಯಾವ ಆಧಾರದ ಮೇಲೆ ಆಯ್ತು??
    ದೇಶ ಪ್ರೇಮ ಇದ್ದಿದ್ರೆ ಗಾಂಧಿ ವಿಭಜನೆ ಮಾಡ್ತಿರಲಿಲ್ಲ… ಮಾಡಿದ ಮೇಲೆ ಮುಸ್ಲಿಂ ಯಾಕೆ ಇಲ್ಲೇ ಉಳಿದುಬಿಟ್ರು??
    ಜಾತ್ಯತೀತ ಅನ್ನೋ ಬೂಟಾಟಿಕೆ ಬಿಟ್ಟು ಹಿಂದೂ ರಾಷ್ಟ್ರ ಮಾಡೋದು ಕಲಿರಿ ಭಟ್ಟರೇ

  2. ನಾವು ಭಾರತೀಯರು ನಮ್ಮದು ವಿವಿಧತೆಯಲ್ಲಿ ಏಕತೆ ಇರುವ ರಾಷ್ಟ್ರ . ಎಲ್ಲ ಧರ್ಮಗಳೂ ಒಂದೇ ಎಂದು ಬದುಕಬೇಕು, ಯಾಕ್ ನೀವು ಹಿಂದೂ ರಾಷ್ಟ್ರ ಅಂತ ಹೇಳ್ಬೇಕು ಒತ್ತಾಯ ಮಾಡ್ತೀರಾ, ಭಟ್ರು ಗೂಡ್ಸೆ ಹಾಗೂ ಸಾವರ್ಕರ್ ರವರು ಆರೆಸ್ಸೆಸ್ ಜೊತೆ ಯಾವ ರೀತಿ ಸಂಬಂಧ ಹೊಂದಿದ್ದರು ಎಂದು ಬಹಳ ಅರ್ಥಪೂರ್ಣವಾಗಿ ತಮ್ಮ ಲೇಖನದಲ್ಲಿ ಬರೆದಿದ್ದಾರೆ.ಭಟ್ರೇ ಸತ್ಯಾಸತ್ಯತೆಯನ್ನು ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು.

  3. 77 ಮುದಿ ವಯಸ್ಸಿನ ಗಾಂಧಿಯ ದೇಹವನ್ನು ಮೂರು ಗುಂಡೇಟು ಹೊಡೆದು ಕೊಂದರೆ ಗಾಂಧೀಯ ಸಿದ್ದಾಂತಕ್ಕೆ ದಿನ ನಿತ್ಯ RSS,ಸಂಘಪರಿವಾರ ಗುಂಡೇಟು ಹೊಡೆಯುತ್ತಿದೆ,ಇದರ ವಿರುದ್ದ ಸತ್ಯ ಪಸರಿಸುವ ವಿಚಾರವಂತ ಮತ್ತು ತಿಳಿಯುವ ಭಾರತ ನಮ್ಮದಗಾಲಿ ಎಂದಷ್ಟೇ ಹೇಳಬಲ್ಲೇ.!

    ನಮ್ಮ ಪ್ರಧಾನಿ ವಿದೇಶಕ್ಕೆ ಹೋದಾಗಲೆಲ್ಲ I Came from Gandhi’s Nation ಅಂತಾರೆ ಆ್ರದರೆ ಇಲ್ಲಿ ಗೋಡ್ಸೆಗೂ ನಮಸ್ಕಾರ ಮಾಡ್ತಾರೆ ಇವರ ದಂದ್ವ ಚಿಂತನೆಯ ಬಗ್ಗೆ ಯುವ ಜನತೆ ಅರ್ಥ ಮಾಡಿಕೊಳ್ಳಬೇಕಾಗಿದೆ…

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...