‘ಯಾರು ಸಂವಿಧಾನವನ್ನು ಗೌರವಿಸುತ್ತಾರೊ, ಸಂವಿಧಾನದ ಆಶಯಗಳನ್ನು ಎತ್ತಿಹಿಡಿದು ಸೌರ್ಹಾರ್ದತೆಯನ್ನು ಬಯಸುತ್ತಾರೊ ಅವರೇ ನಿಜವಾದ ದೇಶಪ್ರೇಮಿಗಳು’ ಎಂದು ಪ್ರೊ. ಬರಗೂರು ರಾಮಚಂದ್ರಪ್ಪ ಪ್ರತಿಪಾದಿಸಿದರು.
ದಾವಣಗೆರೆಯ ಬೀರಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ನಡೆಯುತ್ತಿರುವ ‘ಸಂವಿಧಾನ ಸಂರಕ್ಷಕರ ಸಮಾವೇಶ’ದಲ್ಲಿ ಉದ್ಘಾಟನಾ ಮಾತುಗಳನ್ನಾಡಿದ ಅವರು, “ಜನ ಒಂದುಗೂಡಿದರೆ ಯಾವೂದೂ ಅಸಾಧ್ಯವಲ್ಲ. ಆದ್ದರಿಂದ, ಜನಶಕ್ತಿಯೆ ಅಂತಿಮವಾಗಿದ್ದು. ಅಂತಹ ಜನಶಕ್ತಿಯನ್ನು ಸಂಘಟಿಸಿದರೆ ಸಂವಿಧಾನವನ್ನು ರಕ್ಷಣೆ ಮಾಡಲು ಸಾಧ್ಯ” ಎಂದರು.
“ಪ್ರಶ್ನೆ ಮಾಡುವುದು ಮತ್ತು ಪ್ರಶ್ನಿಸಿಕೊಳ್ಳುವುದು ಬಹಳ ಮುಖ್ಯ; ಪ್ರಪಂಚದ ಎಲ್ಲ ಕ್ರಾಂತಿಕಾರಿಗಳು ಇದನ್ನು ಮಾಡುತ್ತಾರೆ. ಸಂವಿಧಾನವನ್ನು ಕೈನಲ್ಲಿ ಹಿಡಿಕೊಂಡಿರುವ ಪಡೆ ಒಂದು ಕಡೆ, ಸಂವಿಧಾನವನ್ನು ಪಾಲಿಸದ ಪಡೆ ಮತ್ತೊಂದು ಕಡೆ. ಆದರೆ, ಸಂವಿಧಾನ ಹಿಡಿದಿರುವ ಈ ಪಡೆ ‘ಪರ್ಯಾಯ’ವನ್ನು ಸಾಧ್ಯವನ್ನಾಗಿಸುವ ಪಡೆಯಾಗಿದೆ” ಎಂದು ಅವರು ಹೇಳಿದರು.
“ಸಂವಿಧಾನ ಇದೆ ಎನ್ನುವುದು ಅಷ್ಟು ಮುಖ್ಯವಲ್ಲ; ಅದನ್ನು ಯಾರು ಬಳಸುತ್ತಾರೆ ಎನ್ನುವುದು ಮುಖ್ಯವಾಗಿದೆ. ಏಕೆಂದರೆ, ಪ್ರಾಮಾಣಿಕತೆ ಪತನಗೊಂಡ ಕಾಲವಿದು. ಭ್ರಷ್ಟಗೊಂಡ ಬೌದ್ಧಿಕ ವಲಯದ ಕಾಲವಿದೆ. ಅದು ಈಗ ಜಾತಿ, ಧರ್ಮ, ಪೂರ್ವಗ್ರಹ ಪೀಡಿತವಾಗಿ ಭ್ರಷ್ಟಗೊಂಡಿದೆ. ಜಾತಿ-ಧರ್ಮ ಮೂಲಭೂತವಾಗಬಾರದು. ಸಮಾದಲ್ಲಿ ಜಾತಿ-ಧರ್ಮಗಳಿವೆ; ಆದರೆ, ಅದು ಮೂಲಭೂತವಾಗಿರಬಾರದು. ಇಡೀ ಬೌದ್ಧಿಕ ವಲಯವೇ ವಿಭಜಿತವಾಗಿರುವ ಕಾಲವಿದು. ಯಾರು ಪ್ರಗತಿಪರ, ಯಾರು ದೇಶಪ್ರೇಮಿ ಅಲ್ಲ ಎನ್ನುವುದು ನಾವು ಹಿಂದೂ-ಮುಸ್ಲಿಂ ಎಂಬ ಆಧಾರದಲ್ಲಿ ನೋಡುತ್ತಿದ್ದೇವೆ” ಎಂದರು.
“ನಮ್ಮ ಪರಂಪರೆ ಬಹಳ ಮುಖ್ಯವಗಿದೆ; ಜನಸಾಮಾನ್ಯರನ್ನು ನಮ್ಮ ಪರಂಪರೆಯ ಮೂಲಕ ತಲುಪಬೇಕಾಗಿದೆ. ಹಿಂದೂ ಧರ್ಮ ಒಪ್ಪದ ಅಂಬೇಡ್ಕರ್ ಮತ್ತು ಹಿಂದೂ ಧರ್ಮವನ್ನು ಒಪ್ಪುವ ರಾಧಾಕೃಷ್ಣ ಅವರು ದೇಶದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಇರಬೇಕು ಎಂದು ಪ್ರತಿಪಾದಿಸುತ್ತಾರೆ. ರಾಮ್ ಪ್ರಸಾದ್ ಮತ್ತು ಅಸ್ಪಾಕುಲ್ಲಾ ಅವರು ಒಂದೇ ಸಮಯದಲ್ಲಿ ಸ್ವಾತಂತ್ಯ್ರಕ್ಕೋಸ್ಕರ ಹೋರಾಟ ಮಾಡಿ, ಒಂದೇ ದಿನ ಹುತಾತ್ಮರಾಗುತ್ತಾರೆ; ಇದು ನಮ್ಮ ಭಾರತ” ಎಂದು ವಿವರಿಸಿದರು.
“ಪೆಹಲ್ಗಾಮ್ ಅಮಾನವೀಯ ಘಟನೆನ್ನು ನಾವು ಉಗ್ರವಾಗಿ ಖಂಡಿಸಬೇಕಾಗಿದೆ. ಈ ದೇಶದಲ್ಲಿ ಭಯೋತ್ಪಾನೆ, ದ್ವೇಷೋತ್ಪಾದನೆ ಇದೆ. ಜೊತೆಗೆ ಪ್ರಪಂಚದಲ್ಲಿ ಯುದ್ದೋತ್ಪಾದನೆ ಇವೆ. ಆದರೆ, ನಮಗೆ ಇದು ಯಾವುದೂ ಬೇಡ. ಅಮಾನವೀಯ ಘಟನೆ ನಡೆದ ಸಂಧರ್ಭದಲ್ಲಿ ಮಾನವೀಯವಾಗಿ ಸ್ಪಂಧಿಸುವ ಮನಸ್ಸುಗಳು ಭಾರತದಲ್ಲಿ ಇವೆ ಎನ್ನುವುದು ಪೆಹಲ್ಗಾಮ್ ಘಟನೆ ನಮಗೆ ಉದಾಹರಣೆಯಾಗಿದೆ. ಒಂದು ಕಡೆ ಮೃತ ವ್ಯಕ್ತಿಯ ಮುಂದೆ ರೋಧಿಸುತ್ತಿರುವ ಮಹಿಳೆಯ ಚಿತ್ರವಿದೆ. ಮತ್ತೊಂದು ಕಡೆ, ಒಬ್ಬ ವ್ಯಕ್ತಿ ತನ್ನ ಬೆನ್ನಮೇಲೆ ಹೊತ್ತುಕೊಂಡು ಹೋಗಿ ಯುವಕನ ಜೀವ ರಕ್ಷಿಸುತ್ತಾನೆ. ಇವೆರೆಡೂ ನಮ್ಮ ಮುಂದೆ ಸಂಕೇತವಾಗಿದೆ” ಎಂದರು.
“ಸಂವಿಧಾನವನ್ನು ಪೂಜೆ ಮಾಡುವವರಿಗೆ, ಅದರ ಬಗ್ಗೆ ಗೌರವ ಇದೆಯೇ ಎಂಬುವುದನ್ನು ನಾವು ಪ್ರಶ್ನೆ ಮಾಡಬೇಕಾಗಿದೆ. ಆರಂಭದಲ್ಲಿ ‘ಸಮಾಜವಾದ’ ಎನ್ನುವ ಪದ ಪೀಠಿಕೆಯಲ್ಲಿ ಇರಲಿಲ್ಲ. ಆದರೆ, ಅಂಬೇಡ್ಕರ್ ಅವರು ತಮ್ಮ ಕೊನೆಯ ಸಂವಿಧಾನ ಸಭೆಯಲ್ಲಿ ಮಾತನಾಡುತ್ತಾ, ಸಂವಿಧಾನದ ಒಳಗೆ ಸಮಾಜವಾದದ ಆಶಯ ಅಡಗಿದೆ ಎಂದು ಹೇಳಿದ್ದರು” ಎಂದು ಹೇಳಿದರು.
“ಪಕ್ಷದಲ್ಲಿ ಇದ್ದೂ ಪಕ್ಷವನ್ನು ಮೀರಿ ನೋಡುವ ರಾಜಕೀಯ ನಾಯಕತ್ವ ಬೇಕು. ಧರ್ಮದಲ್ಲಿ ಇದ್ದೂ ಧಾರ್ಮಿಕತೆಯನ್ನು ಮೀರಿ ಧಾರ್ಮಿಕ ನಾಯಕತ್ವ ಈ ದೇಶಕ್ಕೆ ಬರಬೇಕು. ಸಂವಿಧಾನ ಅಸ್ಪೃಶ್ಯತೆ ನಿಷೇಧ ಮಾಡಿದೆ. ಆದರೆ, ಸಮಾಜದಲ್ಲಿ ಇನ್ನೂ ಚಾಲ್ತಿಯಲ್ಲಿದೆ. 1.87 ಲಕ್ಷ ಜನರು ಇನ್ನೂ ಕೈನಿಂದ ಮಲ ಎತ್ತುತ್ತಿದ್ದಾರೆ. ಇದು ಹೋಗಲಾಡಿಸಲು ನಮ್ಮ ಮನಸ್ಸಿನ ಮಲಿನತೆ ಹೋಗಬೇಕು. ಸಂಘಟಿತ ವಲಯದ ಜೊತೆಗೆ ಅಸಂಘಟಿತ ವಲಯದ ಬಗ್ಗೆ ಮಾತನಾಡುವ ತುರ್ತು ಇದೆ. ನಮ್ಮ ಸೈದ್ಧಾಂತಿಕ ಬದ್ಧತೆಯನ್ನು ಬಿಟ್ಟುಕೊಡದೆ, ಸೈದ್ಧಾಂತಿಕ ಸಂಕುಚಿತತೆಯನ್ನು ಮೀರಬೇಕು. ದೇಶದಲ್ಲಿ ಬದಲಾವಣೆ ಬರಬೇಕಿದ್ದರೆ, ಕೆಂಪು, ನೀಲಿ, ಹಸಿರು ಒಂದೇ ವೇದಿಕೆಯ ಮೇಲೆ ಬರಬೇಕು” ಎಂದು ಬರಗೂರು ರಾಮಚಂದ್ರಪ್ಪ ಸಲಹೆ ನೀಡಿದರು.