ಅಮೆರಿಕ ಮತ್ತು ಅದರ ಆಪ್ತ ಮಿತ್ರ ಇಸ್ರೇಲ್ ಅನ್ನು ಗುರಿಯಾಗಿಸಿಕೊಂಡು ಕಾನೂನುಬಾಹಿರ ಮತ್ತು ಆಧಾರರಹಿತ ಕ್ರಮಗಳನ್ನು ಕೈಗೊಳ್ಳುತ್ತಿವೆ ಎಂದು ಆರೋಪಿಸಿ ‘ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯ’ಕ್ಕೆ (ಐಸಿಸಿ) ನಿರ್ಬಂಧ ವಿಧಿಸುವ ಕಾರ್ಯಕಾರಿ ಆದೇಶಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಹಾಕಿದ್ದಾರೆ.
ಈ ಕ್ರಮವು ಅಮೆರಿಕದ ನಾಗರಿಕರು ಅಥವಾ ಮಿತ್ರರಾಷ್ಟ್ರಗಳ ವಿರುದ್ಧ ಐಸಿಸಿ ನಡೆಸುವ ತನಿಖೆಗಳಿಗೆ ಸಹಾಯ ಮಾಡುವ ವ್ಯಕ್ತಿಗಳು ಮತ್ತು ಅವರ ಕುಟುಂಬಗಳ ಮೇಲೆ ಆರ್ಥಿಕ ಮತ್ತು ವೀಸಾ ನಿರ್ಬಂಧಗಳನ್ನು ವಿಧಿಸುತ್ತದೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಾಷಿಂಗ್ಟನ್‌ಗೆ ಭೇಟಿ ನೀಡಿದ ಬೆನ್ನಲ್ಲೇ ಟ್ರಂಪ್ ಈ ಆದೇಶಕ್ಕೆ ಸಹಿ ಹಾಕಿದ್ದಾರೆ.
ಗಾಝಾದಲ್ಲಿ ಇಸ್ರೇಲ್ ನಡೆಸಿದ ನರಮೇಧಕ್ಕೆ ಸಂಬಂಧಿಸಿದಂತೆ ಯುದ್ದ ಅಪರಾಧ ಹೊರಿಸಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಮಾಜಿ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಮತ್ತು ಇಸ್ರೇಲ್ ಮೇಲಿನ ದಾಳಿಗೆ ಸಂಬಂಧಿಸಿದಂತೆ ಹಮಾಸ್ ಮಿಲಿಟರಿ ಮುಖ್ಯಸ್ಥ ಮೊಹಮ್ಮದ್ ಡೀಫ್ (ಮೊಹಮ್ಮದ್ ದಿಯಾಬ್ ಇಬ್ರಾಹಿಂ ಅಲ್-ಮಸ್ರಿ) ವಿರುದ್ದ 2024ರ ನವೆಂಬರ್ 21ರಂದು ಐಸಿಸಿ ಬಂಧನ ವಾರೆಂಟ್ ಹೊರಡಿಸಿತ್ತು.
ಗುರುವಾರ (ಫೆ.6) ಶ್ವೇತಭವನ ಹೊರಡಿಸಿದ ಪ್ರಕಟಣೆಯಲ್ಲಿ ಇಸ್ರೇಲ್ ಹಾಗೂ ಹಮಾಸ್ ನಾಯಕರ ವಿರುದ್ದ ಏಕಕಾಲದಲ್ಲಿ ವಾರೆಂಟ್ ಜಾರಿ ಮಾಡಿ, ಹಮಾಸ್ ಮತ್ತು ಇಸ್ರೇಲ್ ನಡುವೆ ಐಸಿಸಿ ಅನೈತಿಕ ಸಮಾನತೆ ತೋರ್ಪಡಿಸಿದೆ ಎಂದು ಅಮೆರಿಕ ಆಕ್ರೋಶ ವ್ಯಕ್ತಪಡಿಸಿದೆ.
ಕೋರ್ಟ್‌ನ ಇತ್ತೀಚಿನ ಕ್ರಮಗಳು ಪೂರ್ವಗ್ರಹದಿಂದ ಕೂಡಿದೆ. ಅಮೆರಿಕನ್ನರಿಗೆ ಕಿರುಕುಳ ನೀಡುವಂತಿದೆ, ನಿಂದಿಸುವಂತಿದೆ ಎಂದು ಟ್ರಂಪ್ ಕಾರ್ಯಕಾರಿ ಆದೇಶದಲ್ಲಿ ಹೇಳಲಾಗಿದೆ.
“ಐಸಿಸಿಯ ದುರುದ್ದೇಶಪೂರಿತ ನಡವಳಿಕೆಯು ಅಮೆರಿಕದ ಸಾರ್ವಭೌಮತ್ವಕ್ಕೆ ಬೆದರಿಕೆ ಹಾಕುತ್ತಿದೆ. ಅಮೆರಿಕ ಸರ್ಕಾರ ಮತ್ತು ಇಸ್ರೇಲ್ ಸೇರಿದಂತೆ ನಮ್ಮ ಮಿತ್ರರಾಷ್ಟ್ರಗಳ ನಿರ್ಣಾಯಕ ರಾಷ್ಟ್ರೀಯ ಭದ್ರತೆ ಮತ್ತು ವಿದೇಶಾಂಗ ನೀತಿ ಕಾರ್ಯವನ್ನು ದುರ್ಬಲಗೊಳಿಸುತ್ತಿದೆ” ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಅಮೆರಿಕ ಐಸಿಸಿಯ ಸದಸ್ಯ ರಾಷ್ಟ್ರವಲ್ಲ. ತನ್ನ ಅಧಿಕಾರಿಗಳು ಮತ್ತು ನಾಗರಿಕರ ಮೇಲೆ ಐಸಿಸಿ ಆದೇಶ ನೀಡುವುದನ್ನು ಅಮೆರಿಕ ಒಪ್ಪಿಲ್ಲ. ನಾವು ಐಸಿಸಿಯ ನ್ಯಾಯವ್ಯಾಪ್ತಿಯಲ್ಲಿ ಇಲ್ಲ ಎಂದು ಪದೇ ಪದೇ ತಿರಸ್ಕರಿಸಿದೆ.
ಇರಾನ್ ಸೇರಿದಂತೆ ಇಸ್ರೇಲ್ ವಿರೋಧಿ ಗುಂಪುಗಳನ್ನು ನಿರ್ಲಕ್ಷಿಸಿ, ಇಸ್ರೇಲ್‌ನ ಆತ್ಮರಕ್ಷಣೆಯ ಹಕ್ಕಿನ ಮೇಲೆ ಐಸಿಸಿ ನಿರ್ಬಂಧಗಳನ್ನು ಹೇರುತ್ತಿದೆ ಎಂದು ಶ್ವೇತಭವನ ಆರೋಪಿಸಿದೆ.
ಟ್ರಂಪ್ ತಮ್ಮ ಮೊದಲ ಅಧಿಕಾರಾವಧಿಯಲ್ಲಿ, ಅಮೆರಿಕದ ಪಡೆಗಳು ಅಫ್ಘಾನಿಸ್ತಾನದಲ್ಲಿ ಯುದ್ಧ ಅಪರಾಧಗಳನ್ನು ಎಸಗಿವೆಯೇ ಎಂದು ತನಿಖೆ ನಡೆಸುತ್ತಿದ್ದ ಐಸಿಸಿ ಅಧಿಕಾರಿಗಳ ಮೇಲೆ ನಿರ್ಬಂಧಗಳನ್ನು ವಿಧಿಸಿದ್ದರು. ಆ ನಿರ್ಬಂಧಗಳನ್ನು ನಿರ್ಗಮಿತ ಅಧ್ಯಕ್ಷ ಜೋ ಬೈಡೆನ್ ಆಡಳಿತವು ತೆಗೆದು ಹಾಕಿತ್ತು.
ಕಳೆದ ತಿಂಗಳು, ಅಮೆರಿಕ ಸಂಸತ್ ಐಸಿಸಿಗೆ ಅನುಮೋದನೆ ನೀಡುವ ಮಸೂದೆ ಮೇಲೆ ಮತ ಚಲಾಯಿಸಿತ್ತು. ಆದರೆ, ಆ ಮಸೂದೆ ಸೆನೆಟ್‌ನಲ್ಲಿ ವಿಫಲವಾಗಿತ್ತು.
ಯುಗೊಸ್ಲಾವಿಯಾದ ವಿಸರ್ಜನೆ ಮತ್ತು ರುವಾಂಡಾದ ನರಮೇಧದ ನಂತರ, ಆಪಾದಿತ ದೌರ್ಜನ್ಯಗಳನ್ನು ತನಿಖೆ ಮಾಡಲು ಐಸಿಸಿಯನ್ನು 2002ರಲ್ಲಿ ಸ್ಥಾಪಿಸಲಾಯಿತು.
ಐಸಿಸಿ ಸ್ಥಾಪಿಸಿದ ರೋಮ್ ಶಾಸನವನ್ನು 120ಕ್ಕೂ ಹೆಚ್ಚು ದೇಶಗಳು ಅನುಮೋದಿಸಿವೆ. ಇನ್ನೂ 34 ದೇಶಗಳು ಸಹಿ ಹಾಕಿವೆ ಮತ್ತು ಭವಿಷ್ಯದಲ್ಲಿ ಶಾಸನ ಅಂಗೀಕರಿಸಬಹುದು.
ಅಮೆರಿಕ ಮತ್ತು ಇಸ್ರೇಲ್ ಎರಡೂ ರೋಮ್ ಶಾಸನದ ಭಾಗವಾಗಿಲ್ಲ. ಐಸಿಸಿ ಜಾಗತಿಕವಾಗಿ ಕೊನೆಯ ನ್ಯಾಯಾಲಯವಾಗಿದ್ದು, ರಾಷ್ಟ್ರೀಯ ಅಧಿಕಾರಿಗಳು ವಿಚಾರಣೆ ನಡೆಸಲು ಸಾಧ್ಯವಾಗದಿದ್ದಾಗ ಅಥವಾ ವಿಚಾರಣೆ ನಡೆಸಲು ನಿರಾಕರಿಸಿದಾಗ ಮಾತ್ರ ಮಧ್ಯಪ್ರವೇಶಿಸುತ್ತದೆ.
‘ಕತ್ತೆ ಮಾರ್ಗ’ದ ಮೂಲಕ ಅಮೆರಿಕ ಪ್ರವೇಶಿಸಲು ₹72 ಲಕ್ಷ ಪಾವತಿಸಿದ್ದ ಹರಿಯಾಣದ ಆಕಾಶ್


