ಪ್ಯಾಲೆಸ್ತೀನಿಯರು ನೆರೆಯ ದೇಶಗಳಿಗೆ ಸ್ಥಳಾಂತರಗೊಂಡ ನಂತರ, ಯುದ್ಧದಿಂದ ಜರ್ಜರಿತವಾಗಿರುವ ಗಾಝಾ ಪಟ್ಟಿಯನ್ನು ಅಮೆರಿಕ ಸ್ವಾಧೀನಪಡಿಸಿಕೊಳ್ಳಬೇಕು ಮತ್ತು ‘ವಿಶ್ವದ ಜನರು’ ಅಲ್ಲಿ ವಾಸಿಸುವಂತೆ ಪ್ರದೇಶವನ್ನು ಅಭಿವೃದ್ಧಿಪಡಿಸಬೇಕು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ದ್ವಿಪಕ್ಷೀಯ ಸಭೆಗಾಗಿ ಮಂಗಳವಾರ (ಫೆ.4) ಶ್ವೇತಭವನಕ್ಕೆ ಭೇಟಿ ನೀಡಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಟ್ರಂಪ್, ತಮ್ಮ ಆಘಾತಕಾರಿ ಯೋಜನೆಯನ್ನು ಬಹಿರಂಗಪಡಿಸಿದ್ದಾರೆ.
ಪ್ಯಾಲೆಸ್ತೀನಿಯರು ‘ಗಾಝಾ ತೊರೆಯಲು ಮುಂದಾಗಿದ್ದಾರೆ’ ಎಂದು ಹೇಳುವ ಮೂಲಕ ಟ್ರಂಪ್ ಹೊಸ ಆತಂಕವನ್ನು ಹುಟ್ಟು ಹಾಕಿದ್ದಾರೆ. ಟ್ರಂಪ್ ಹೇಳಿಕೆ ಗಾಝಾ ಜನರಲ್ಲಿ ಜನಾಂಗೀಯ ನಿರ್ಮೂಲನೆಯ ಭಯವನ್ನು ಹುಟ್ಟು ಹಾಕಿದೆ.
ಟ್ರಂಪ್‌ಗೆ ಪ್ರತಿಕ್ರಿಯೆಯಾಗಿ ಹಮಾಸ್ ಹೇಳಿಕೆ ಬಿಡುಗಡೆ ಮಾಡಿದೆ. “ಟ್ರಂಪ್ ಯೋಜನೆಗಳು ಗಾಝಾದಲ್ಲಿ ಅವ್ಯವಸ್ಥೆ ಮತ್ತು ಉದ್ವಿಗ್ನತೆಯನ್ನು ಸೃಷ್ಟಿಸುವ ಒಂದು ಪಿತೂರಿಯಾಗಿದೆ. ಗಾಝಾ ಪಟ್ಟಿಯಲ್ಲಿರುವ ನಮ್ಮ ಜನರು ಈ ಯೋಜನೆಗಳನ್ನು ಜಾರಿಗೆ ತರಲು ಬಿಡುವುದಿಲ್ಲ” ಎಂದು ಹೇಳಿದೆ.
ನೆತನ್ಯಾಹು ಅಮೆರಿಕದ ಭೇಟಿಯನ್ನು ಖಂಡಿಸಿ ವಾಷಿಂಗ್ಟನ್ ಡಿಸಿಯಲ್ಲಿ ಜಮಾಯಿಸಿದ ಜನರು ಪ್ರತಿಭಟನೆ ನಡೆಸಿದ್ದಾರೆ. ಟ್ರಂಪ್ ಒಬ್ಬ ‘ಯುದ್ಧ ಅಪರಾಧಿ’ಯನ್ನು ಶ್ವೇತಭವನಕ್ಕೆ ಆಹ್ವಾನಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೆತನ್ಯಾಹು ಅಮೆರಿಕ ಭೇಟಿಗೂ ಮುನ್ನವೇ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದ ಟ್ರಂಪ್ “ಗಾಝಾ ಕದನ ವಿರಾಮ ಮುಂದುವರಿಯುವ ಗ್ಯಾರಂಟಿ ನನಗಿಲ್ಲ” ಎಂದಿದ್ದರು. ಇದಕ್ಕೂ ಮುನ್ನ ಕೆಲ ದಿನಗಳ ಹಿಂದೆ ” ಗಾಝಾ ಜನತೆಯನ್ನು ಸುತ್ತಮುತ್ತಲಿನ ಈಜಿಪ್ಟ್, ಜೋರ್ಡಾನ್, ತುರ್ಕಿ ದೇಶಗಳು ಕರೆಸಿಕೊಳ್ಳಿ” ಎಂದಿದ್ದರು.
ಕುವೈತ್‌ನ ಶತ ಪ್ರಯತ್ನದ ಫಲವಾಗಿ 15 ತಿಂಗಳ ಬಳಿಕ ಜನವರಿ 16, 2025ರಿಂದ ಗಾಝಾದಲ್ಲಿ ಇಸ್ರೇಲ್ ಆಕ್ರಮಣ ತಾತ್ಕಾಲಿಕ ಕೊನೆಗೊಂಡಿದೆ. ಜನರು ತಮ್ಮ ಮೂಲ ಸ್ಥಳಗಳಿಗೆ ಮರಳಿ ಛಿದ್ರವಾದ ಬದುಕನ್ನು ಮರು ರೂಪಿಸುವ ಪ್ರಯತ್ನದಲ್ಲಿದ್ದಾರೆ.
ಈ ನಡುವೆ ಗಾಝಾದಲ್ಲಿ ನಿರಂತರ ನರಮೇಧ ನಡೆಸಿದ ಇಸ್ರೇಲ್‌ನ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಮೆರಿಕಕ್ಕೆ ತೆರಳಿ ಟ್ರಂಪ್ ಅವರನ್ನು ಭೇಟಿಯಾಗಿದ್ದಾರೆ. ಟ್ರಂಪ್ ಕೂಡ ಪದೇ ಪದೇ ವಿಚಿತ್ರ ಹೇಳಿಕೆಗಳನ್ನು ನೀಡುತ್ತಿದ್ದಾರೆ, ಇವೆಲ್ಲವೂ ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ಗಾಝಾ ಜನತೆಯನ್ನು ಅವರ ನಾಡಿನಿಂದ ಹೊರದಬ್ಬಿ ಗಾಝಾವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವ ಹುನ್ನಾರ ನಡೆಸುತ್ತಿರುವಂತೆ ಕಾಣುತ್ತಿದೆ.
ಗಾಝಾ ಕದನ ವಿರಾಮ ಮುಂದುವರಿಯುವ ಗ್ಯಾರಂಟಿಯಿಲ್ಲ : ನೆತನ್ಯಾಹು ಭೇಟಿಗೂ ಮುನ್ನ ಟ್ರಂಪ್ ಹೇಳಿಕೆ


