Homeಮುಖಪುಟಹಠಾತ್ ಗೋಚರಕ್ಕೆ ಬಂದ ವಲಸೆ ಕಾರ್ಮಿಕ ಸಂಗ್ರಾಮ್ ಟುಡು

ಹಠಾತ್ ಗೋಚರಕ್ಕೆ ಬಂದ ವಲಸೆ ಕಾರ್ಮಿಕ ಸಂಗ್ರಾಮ್ ಟುಡು

ಸಾಮಾನ್ಯ ಪೊಲೀಸ್ ಕಾನ್ಸ್ಟೆಬಲ್ ಯಾವುದೇ ಮುಲಾಜಿಲ್ಲದೆ ನತದೃಷ್ಟ ಕಾರ್ಮಿಕರ ಮೇಲೆ ಲಾಠಿಯನ್ನು ಬೀಸುವುದು, ಸುಪ್ರೀಂ ಕೋರ್ಟ್ ಪೀಠವು ಕಾರ್ಮಿಕರಿಗೆ ದಿನಕ್ಕೆ ಎರಡು ಬಾರಿ ಆಹಾರ ನೀಡಿದರೆ ಸಾಕು, ಅವರಿಗೆ ಹಣ ಪಾವತಿಸಬೇಕಾಗಿಲ್ಲ ಎಂದು ತೀರ್ಮಾನಿಸಿರುವುದು ಒಂದೇ ಆಧಾರದ ಮೇಲೆ ನಿಂತಿವೆ.

- Advertisement -
- Advertisement -

“ವಲಸೆ ಕಾರ್ಮಿಕ ರ ಬಗ್ಗೆ ಮತ್ತೊಂದು ವಿಚಾರ ಚಾಲ್ತಿಯಲ್ಲಿದೆ: ಅವರು ಬೇರೆ ರಾಜ್ಯಗಳಿಗೆ ಕೆಲಸವನ್ನು ಹುಡುಕಿಕೊಂಡು ವಲಸೆ ಹೋಗುವುದರಿಂದ ಅವರನ್ನು ಬರಮಾಡಿಕೊಳ್ಳುವ ಆತಿಥೇಯ ದೇಶ ಅಥವಾ ರಾಜ್ಯದಲ್ಲಿ ಅಲ್ಲಿನ ಜನರ ಉದ್ಯೋಗಾವಕಾಶಕ್ಕೆ ಕುತ್ತು ಉಂಟಾಗಿದೆ ಎಂಬ ಅಭಿಮತ. ಇಂತಹ ವಿಚಾರಗಳಿಗೆ ಸಂಬಂಧಿಸಿದಂತೆ ಅಭಿಜಿತ್ ವಿನಾಯಕ್ ಬ್ಯಾನರ್ಜಿ ಮತ್ತು ಎಸ್ತರ್ ಡುಫ್ಲೋ ತಮ್ಮ ‘ಗುಡ್ ಎಕಾನಮಿ ಫಾರ್ ಹಾರ್ಡ್ ಟೈಮ್ಸ್’ ಪುಸ್ತಕದಲ್ಲಿ ವಲಸೆ-ಕಾರ್ಮಿಕರ ಬಗ್ಗೆ ಇರುವ ಅನೇಕ ಮಿಥ್ಯೆಗಳನ್ನು ಬಯಲಿಗೆಳೆದಿದ್ದಾರೆ. ಅವರು ವಾದಿಸುವ ಪ್ರಕಾರ ‘ಸತ್ಯ ನಂಬಿಕೆಗೆ ತದ್ವಿರುದ್ಧವಾಗಿದೆ’. ಕರೋನಾ ಸಾಂಕ್ರಾಮಿಕ ಸಮಯದಲ್ಲಿ ವಲಸೆ-ಕಾರ್ಮಿಕರು ನಮ್ಮ ಕಣ್ಣಿಗೆ ಕಾಣಿಸಿಕೊಂಡಿದ್ದಾರೆ. ಆದರೆ ಅವರ ದನಿ ಯಾರ ಗಮನಕ್ಕು ಬಂದಿಲ್ಲ. ಅದಿನ್ನೂ ಮೂಕವಾಗಿಯೇ ಇದೆ”

ಇಂಗ್ಲೀಷ್ ಮೂಲ-ರಜತ್ ರಾಯ್ (ಬಾರ್ಡರ್ಸ್ ಆಫ್ ಆನ್ ಎಪಿಡೆಮಿಕ್ ಪುಸ್ತಕದಿಂದ)
ಕನ್ನಡಕ್ಕೆ-ವಿಜಯಕುಮಾರ ಎಂ. ಬೋರಟ್ಟಿ

ಸಾಗ್ರಾಮ್ ಟುಡು ಮಾಲ್ಡಾದ ಗಜೋಲ್ ಪ್ರದೇಶವರು. ಕೆಲವು ತಿಂಗಳುಗಳ ಹಿಂದೆ ಬೃಹತ್ ಕಟ್ಟಡ ನಿರ್ಮಾಣದಲ್ಲಿ ಕೆಲಸ ಮಾಡಲು ಕಲ್ಲುಕುಟುಕರು ಮತ್ತು ಇತರ ಕಾರ್ಮಿಕರ ತಂಡದೊಂದಿಗೆ ಬೆಂಗಳೂರಿಗೆ ಬಂದಿಳಿದ್ದರು. ಆದರೆ ಈಗ ಅವರು ಮತ್ತು ಅವರ ಸಹಚರರು ಬೆಂಗಳೂರಿನ ಕೆಂಗೇರಿ ಪ್ರದೇಶದಲ್ಲಿ ಸಿಲುಕಿಕೊಂಡಿದ್ದಾರೆ. ಅವರನ್ನು ಕರೆತಂದ ಕಾರ್ಮಿಕ ಸರಬರಾಜುದಾರ ಸಹದೇಬ್ ಬಿಸ್ವಾಸ್ ಕೂಡ ಗಜೋಲ್ ಮೂಲದವರು.

24 ಅಂತಸ್ತಿನ ವಾಣಿಜ್ಯ ಸಂಕೀರ್ಣ ನಿರ್ಮಾಣದ ಈ ಯೋಜನೆಯು ಈಗ ತಾನೇ ಪ್ರಾರಂಭವಾಗಿದೆ. ಇಲ್ಲಿಯವರೆಗೆ ಕೇವಲ ಎರಡು ಮಹಡಿಗಳನ್ನು ಮಾತ್ರ ನಿರ್ಮಿಸಲಾಗಿದೆ. ಈ ಬೃಹತ್ ಕಟ್ಟಡದ ಕೆಲಸ ಪೂರ್ಣಗೊಳ್ಳಲು ಇನ್ನೂ 4-5 ವರ್ಷಗಳು ಬೇಕಾಗಬಹುದು. ಆದರೆ ಹಠಾತ್ ಲಾಕ್ಡೌನ್ ಇಲ್ಲಿನ ಕೆಲಸಗಾರರಿಗೆ ಕೆಲಸ-ಕಾರ್ಯವನ್ನು ಕಳೆದುಕೊಳ್ಳುವಂತೆ ಮಾಡಿದುದಲ್ಲದೆ, ಈ ನಿರ್ಮಾಣ ಕಂಪನಿಯು ನಿರ್ಮಿಸಿದ ತಾತ್ಕಾಲಿಕ ಕ್ವಾಟ್ರಸ್ ನಲ್ಲಿ ಅವರೆಲ್ಲರು ಉಳಿಯುವಂತೆ ಆಗಿದೆ. ಕ್ವಾಟ್ರಸ್ ನಲ್ಲಿ ಸುಮಾರು 200 ಕಾರ್ಮಿಕರು ವಾಸಿಸುತ್ತಿದ್ದಾರೆ. ತಾತ್ಕಾಲಿಕ ಕ್ವಾಟ್ರಸ್ ಗಳನ್ನು ತಗಡಿನಿಂದ ಮಾಡಲಾಗಿದೆ. ಅವುಗಳ ಛಾವಣಿ ಮತ್ತು ಗೊಡೆಗಳು ಸಹ ಇದೆ ತಗಡಿನಿಂದ ಮಾಡಲ್ಪಟ್ಟಿವೆ. ಸಗ್ರಾಮ್ ಟುಡು ಹೇಳುವ ಪ್ರಕಾರ ಕನಿಷ್ಠ ನಾಲ್ಕು ವ್ಯಕ್ತಿಗಳು ಒಂದು ಕೋಣೆಯನ್ನು ಹಂಚಿಕೊಳ್ಳುತ್ತಿದ್ದಾರೆ. ಅಲ್ಲಿ ಶೌಚಾಲಯಗಳ ಸೌಲಭ್ಯಗಳಿವೆ. ಆದರೆ ಅವುಗಳ ಸಂಖ್ಯೆ ಅವಶ್ಯಕತೆಗಿಂತ ಕಡಿಮೆ. ಆರಂಭದಲ್ಲಿ ಈ ಕಾರ್ಮಿಕರು ಮಾರುಕಟ್ಟೆಯಿಂದ ಪಡಿತರವನ್ನು ಖರೀದಿಸಬೇಕಾಗಿತ್ತು. ಅವರಿಗಾಗಿ ಸಾಮಾನ್ಯ ಅಡುಗೆ ಮನೆಯಲ್ಲಿ ಅಡುಗೆ ಮಾಡಲು ವ್ಯವಸ್ಥೆ ಮಾಡಲಾಗಿತ್ತು. ಈಗ ಕೆಲವೇ ದಿನಗಳ ಹಿಂದೆ ಈ ಕಾರ್ಮಿಕರ ಗುತ್ತಿಗೆದಾರನು ಇವರ ಪಡಿತರವನ್ನು ಸರಬರಾಜು ಮಾಡುವ ವ್ಯವಸ್ಥೆ ಮಾಡಿದ್ದಾನೆ. ಇದಕ್ಕಾಗಿ ತಗುಲುವ ವೆಚ್ಚವನ್ನು ಅವನು ಮುಂದೆ ಅವರ ಸಂಬಳದಲ್ಲಿ ಸರಿಹೊಂದಿಸುತ್ತಾರೆ.

ಸಗ್ರಾಮ್ ತುಡು, ಹರೇನ್ ಮುರ್ಮು, ಸಾಮ್ರಾಟ್ ಬಿಸ್ವಾಸ್ ಮತ್ತು ಮಾಲ್ಡಾದ ಇತರ ಕಾರ್ಮಿಕರು ಅಲ್ಲಿ ಒಟ್ಟಾಗಿ ವಾಸಿಸುತ್ತಿದ್ದಾರೆ. ಕಂಪನಿಯ ಸಿಬ್ಬಂದಿ ನಿಯಮಿತವಾಗಿ ನಿರ್ಮಾಣ ಸ್ಥಳಕ್ಕೆ ಭೇಟಿಕೊಟ್ಟು, ಅಲ್ಲಿ ಕೆಲಸ ಮಾಡುತ್ತಿರುವವರ ಆರೋಗ್ಯವನ್ನು ಆಗಾಗ ಪರಿಶೀಲಿಸುತ್ತಿದ್ದಾರೆ. ಅಲ್ಲಿ ಕೆಲಸ ಮಾಡುವವರೆಲ್ಲರಿಗೂ ದಿನಕ್ಕೆ ಎರಡು ಬಾರಿ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. ಅವರೆಲ್ಲರು ಕೋಣೆಗಳಲ್ಲೆ ಉಳಿದುಕೊಂಡು, ಹೊರಗೆ ಎಲ್ಲಿಯೂ ಹೋಗದಂತೆ ಗಮನಿಸಲಾಗುತ್ತಿದೆ. ಆದರೆ ಅವರೀಗ ಚಿಂತಿತರಾಗಿದ್ದಾರೆ. ಅವರಿಗೀಗ ಆತಂಕ ಭಾದಿಸುತ್ತಿದೆ. ಎಷ್ಟು ದಿನಗಳ ಕಾಲ ಈ ಸ್ಥಿತಿಯಲ್ಲಿ ಇರಬೇಕಾಗುತ್ತದೆಂದು ಅವರಿಗೆ ಗೊತ್ತಿಲ್ಲ. ಮೊದಮೊದಲು ಅವರು ತಮ್ಮ ಬಳಿ ಇದ್ದ ಸ್ವಲ್ಪ ಹಣವನ್ನು ತಮಗೆ ಬೇಕಾಗಿದ್ದ ಪಡಿತರವನ್ನು ಖರೀದಿಸಲು ಖರ್ಚು ಮಾಡಿದರು. ಆದರೆ ಈಗ ಅವರು ಸಂಪೂರ್ಣವಾಗಿ ಗುತ್ತಿಗೆದಾರ ನೀಡುವ ಸಾಲದ ಮೇಲೆ ಅವಲಂಬಿತರಾಗಿದ್ದಾರೆ.

 ವಲಸೆ ಕಾರ್ಮಿಕ
ಸಾಂಧರ್ಭಿಕ ಚಿತ್ರ

ದೇಶಾದ್ಯಂತ ಹರಡಿರುವ ಲಕ್ಷಾಂತರ ವಲಸೆ ಕಾರ್ಮಿಕರಂತೆ, ಇವರು ಕೂಡ ಹಠಾತ್ ಲಾಕ್‌ಡೌನ್‌ಗೆ ಮಾನಸಿಕವಾಗಿ ಸಿದ್ಧರಾಗಿರಲಿಲ್ಲ. ಲಾಕ್ಡೌನ್ ಹಾಕಿದ ನಂತರ ಅವರು ತಮ್ಮ ಸ್ವಂತ ಜಿಲ್ಲೆಯಾಧ ಮಾಲ್ಡಾಕ್ಕೆ ಮರಳಲು ಬಯಸಿದ್ದರು. ಆದರೆ ಪ್ರಯಾಣ ಮಾಡಲು ಅವರಿಗೆ ಸಾಕಷ್ಟು ಹಣವಿರಲಿಲ್ಲ. ಕಾರ್ಮಿಕ-ಸರಬರಾಜುದಾರ ಸಹದೇಬ್ ಬಿಸ್ವಾಸ್ ಈಗ ಪ್ರತಿ ಎರಡು-ಮೂರು ತಿಂಗಳಿಗೊಮ್ಮೆ ಸಂಬಳವನ್ನು ನೀಡುತ್ತಿದ್ದಾನೆ. ಅದು ಕೂಡ ಅವರಿಗಾಗಿ ವ್ಯವಸ್ಥೆ ಮಾಡಿದ ಪಡಿತರ ವೆಚ್ಚ ಮತ್ತು ಇತರ ಖರ್ಚುಗಳನ್ನು ಕಡಿತಗೊಳಿಸಿದ ನಂತರ. ಲಾಕ್ಡೌನ್ ಕಾರಣದಿಂದಾಗಿ ಸಹದೇಬ್ ಬಿಸ್ವಾಸ್ ಗೆ ಕಟ್ಟಡ ನಿರ್ಮಾಣದ ಮ್ಯಾನೆಜರ್‌ನಿಂದ ಬರಬೇಕಾಗಿದ್ದ ಸಂಬಳದ ಚೆಕ್ ಕೂಡ ಬರದೇ ಹೋಯಿತು. ಇದರ ಪರಿಣಾಮವಾಗಿ ಕಾರ್ಮಿಕರ ವೇತನವು ಈಗ ಇಲ್ಲದಂತಾಗಿದೆ. ಈಗ ಅವರು ತಮ್ಮ ಕೆಲಸವನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆಯೋ, ಇಲ್ಲವೋ; ಅವರಿಗೆ ಬರಬೇಕಾದ ವೇತನವು ಸಿಗುತ್ತದೆಯೋ ಇಲ್ಲವೋ ಎಂಬ ಚಿಂತೆಯಲ್ಲಿ ಇದ್ದಾರೆ. ಸಹದೇಬ್ ಬಿಸ್ವಾಸ್ ಎಷ್ಟು ದಿನ ಅಂತ ಅವರಿಗೆ ಸಾಲ ಕೊಡಲು ಸಾಧ್ಯ ಎಂಬ ಸಂದೇಹ ಎದುರಾಗಿದೆ. ಜೊತೆಗೆ ತಮ್ಮ, ತಮ್ಮ ಗ್ರಾಮಗಳಿಂದ ಬರುತ್ತಿರುವ ಅಹಿತಕರ ಸುದ್ದಿಗಳನ್ನು ಕೇಳಿದ ನಂತರ ಈ ಎಲ್ಲಾ ಕಾರ್ಮಿಕರಿಗೆ ಹೆಚ್ಚಿನ ದುಗುಡ, ಅನಿಶ್ಚಿತತೆ ತಲೆದೋರಿದೆ.

ಮಾರ್ಚ್ 26 ರಂದು ಮಜೀರ್ ಶೇಖ್ (44) ಮತ್ತು ಇತರ 70 ಕಾರ್ಮಿಕರು ಬಿಹಾರದ ಔರಂಗಾಬಾದ್ ನಿಂದ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದರು. ಕೆಲವೇ ನಿಮಿಷಗಳಲ್ಲಿ ಸುಮಾರು 80 ಜನರು ಅವರನ್ನು ಸೇರಿಕೊಂಡರು. ಈ ದೀರ್ಘ ಪ್ರಯಾಣಕ್ಕೆ ಔರಂಗಾಬಾದ್ ಪೊಲೀಸರ ಕ್ರೂರ ವರ್ತನೆ ಪ್ರಚೋದನಾಕಾರಿಯಾಗಿತ್ತು. “ಲಾಕ್ಡೌನ ನಂತರ ಅಗತ್ಯ ವಸ್ತುಗಳನ್ನು ಖರೀದಿಸಲು ನಮಗೆ ಒಂದು ಗಂಟೆಯ ಕಾಲಾವಧಿ ಸಿಗುತಿತ್ತು. ಅದು ಕೂಡ ಅಂಗಡಿಯ ಸಣ್ಣ ಕಿಟಕಿಯ ಮೂಲಕ ಖಿರಾಣಿ ಸಾಮಾನುಗಳನ್ನು ಖರೀದಿ ಮಾಡಬೇಕಾಗುತ್ತಿತ್ತು. ಆದರೆ ಪಡಿತರ ಅಂಗಡಿಗಳ ಮುಂದೆ ಉದ್ದನೆಯ ಕ್ಯು ಇರುತಿತ್ತು. ನಮಗೆ ಬೇಕಾದ್ದನ್ನು ಖರೀದಿ ಮಾಡಿ, ಮನೆಗೆ ಮರಳಲು ಇದ್ದ ಕಾಲಾವಧಿ ಸಾಕಾಗುತ್ತಿರಲಿಲ್ಲ. ಅಶಿಸ್ತು ಪಾಲನೆ ಆಗುತ್ತಿದೆ ಎಂದು ಅನೇಕ ಬಾರಿ ಪೊಲೀಸರು ನಮ್ಮನ್ನು ಹೊಡೆದು, ನಮ್ಮ ಚೀಲವನ್ನು ಕಸಿದುಕೊಂಡು, ಸಾಮಾನುಗಳನ್ನು ಎಸೆಯುತ್ತಿದ್ದರು. ಇದೆಲ್ಲರಿಂದ ಪಾರಾಗಲು ನಮ್ಮ ರಾಜ್ಯಕ್ಕೆ (ಪಶ್ಚಿಮ ಬಂಗಾಳ) ಮರಳುವುದು ಉತ್ತಮ ಎಂದು ನಾವು ಭಾವಿಸಿದೆವು “ಎಂದು ಮಜೀರ್ ಶೇಖ್ ಹೇಳುತ್ತಾರೆ.

 ವಲಸೆ ಕಾರ್ಮಿಕ
ವಲಸೆ ಹರಟಿರುವ ಕಾರ್ಮಿಕರು

ಇಂತಹ ಕಹಿ ಅನುಭವಗಳು ಮತ್ತು ಅದರಿಂದ ಉಂಟಾದ ಸಂಪೂರ್ಣ ಹತಾಶೆಯು ನಮಗೆ ಕಾಲ್ನಡಿಗೆಯಲ್ಲಿ ಪ್ರಯಾಣವನ್ನು ಕೈಗೊಳ್ಳುವಂತೆ ಮಾಡಿತು ಎಂದು ಅನೇಕರು ಹೇಳಿದ್ದಾರೆ. ಇತರ ಕಡೆಗಳಲ್ಲೂ ಮಿಲಿಯನ್ ವಲಸೆ ಕಾರ್ಮಿಕರು ಸಹ ತಮ್ಮ ಮನೆಗಳನ್ನು ತಲುಪುವ ಹತಾಶ ಪ್ರಯತ್ನದಲ್ಲಿ ದೇಶಾದ್ಯಂತ ರಸ್ತೆಗಳಲ್ಲಿದ್ದಾರೆ. ಇದರಿಂದ ಹೆದ್ದಾರಿಗಳೆಲ್ಲಾ ಜನರಿಂದ ತುಂಬಿ ಹೋಗಿವೆ ಎಂಬ ಅರಿವು ಕೂಡ ಇವರಿಗೆ ಇರಲಿಲ್ಲ. ಔರಂಗಾಬಾದ್ ಪೊಲೀಸರ ಕೈಯಲ್ಲಿ ಬಹಳ ಕೆಟ್ಟ ಅನುಭವ ಹೊಂದಿದ್ದ ಕಾರ್ಮಿಕರು ನಂತರ ಜಿ.ಟಿ.ರಸ್ತೆಯ ಮೇಲೆ 25 ಕಿ.ಮೀ.ರಷ್ಟು ಕ್ರಮಿಸಿದಾಗ ಅವರಿಗೆ ಆಶ್ಚರ್ಯ ಕಾದಿತ್ತು. ಅವರನ್ನು ಪೋಲಿಸರು ಸಂಜೆಯ ಹೊತ್ತು ತಡೆದು ನಿಲ್ಲಿಸಿದರು. “ಅವರು ನಮಗೆ ತಿನ್ನಲು ಖಚೊರಿ ಮತ್ತು ಅಚಾರನ್ನು (ಉಪ್ಪಿನ ಕಾಯಿ) ವಿತರಿಸಿದರು. ಮುಂದಿನ ಪ್ರಯಾಣವನ್ನು ಪ್ರಾರಂಭಿಸುವ ಮೊದಲು ಸ್ವಲ್ಪ ಸಮಯ ವಿಶ್ರಾಂತಿ ಪಡೆಯಲು ಹೇಳಿದರು. ಮಧ್ಯರಾತ್ರಿಯಲ್ಲಿ ನಾವು ನಮ್ಮ ನಡಿಗೆಯನ್ನು ಪುನರಾರಂಭಿಸಿದೆವು. ಆ ಹೊತ್ತಿಗೆ ನಾವು 500 ಜನ ಇದ್ದೆವು. ಅವರಲ್ಲಿ ಅನೇಕರು ಸಸಾರಂ, ಭಾಬುವಾ, ಯು.ಪಿ. (ಉತ್ತರ ಪ್ರದೇಶ) ಯ ಬನಾರಸ್ ಜಾಗಗಳಿಂದ ಬಂದವರಾಗಿದ್ದರು. ನಾವೆಲ್ಲರು ಬಂಗಾಳ ಗಡಿಯ ಕಡೆಗೆ ನಮ್ಮ ಕಾಲ್ನಡಿಗೆಯನ್ನು ಮುಂದುವರೆಸಿದೆವು” ಎಂದು ಮಜೀರ್ ವಿವರಿಸುತ್ತಾರೆ. ಅವರ ಹಾದಿಯಲ್ಲಿ ಇನ್ನೂ ಅನೇಕರು ಅವರನ್ನು ಸೇರಿಕೊಂಡರು. ಅಂತಿಮವಾಗಿ ಸುಮಾರು 500 ಜನರು ಟ್ರಕ್ಗಳ ಮೂಲಕ ಪ್ರಯಾಣ ಮಾಡಿದ ಮೇಲೆ ಜಿ.ಟಿ.ರಸ್ತೆಯ ಚಿರ್ಕುಂಡಾ ಸ್ಥಳವನ್ನು ತಲುಪಿದರು.

ಅದು ಜಾರ್ಖಂಡ್-ಪಶ್ಚಿಮ ಬಂಗಾಳ ಗಡಿ ಪೋಸ್ಟ್ ನ ಸ್ಥಳ. ಅದನ್ನು ತಲುಪಿದಾಗ ಬೆಳಿಗ್ಗೆಯಾಗಿತ್ತು. ಔರಂಗಾಬಾದ್ ನಿಂದ ಚಿರ್ಕುಂಡಾಗೆ 300 ಕಿ.ಮೀ ದೂರವನ್ನು ಕ್ರಮಿಸಲು ಅವರು ಎರಡು ದಿನ ಮತ್ತು ಎರಡು ರಾತ್ರಿಗಳನ್ನು ತೆಗೆದುಕೊಂಡಿದ್ದರು. ಆ ಹೊತ್ತಿಗೆ ಎಲ್ಲಾ ಅಂತರರಾಜ್ಯ ಸಂಚಾರ ಸ್ಥಗಿತಗೊಂಡಿತ್ತು. ಗಡಿಯನ್ನು ತಲುಪಿದ ಇವರನ್ನು ಜಾರ್ಖಂಡ್ ಪೊಲೀಸರು ಒಂದು ಕಪ್ ಬಿಸಿ ಚಹಾ ಮತ್ತು ಬಿಸ್ಕತ್ತುಗಳೊಂದಿಗೆ ಸ್ವಾಗತಿಸಿದರು. ಅಲ್ಲಿನ ಎಸ್.ಡಿ.ಪಿ.ಒ. ಮೇಲ್ವಿಚಾರಣೆಯಲ್ಲಿ ಅವರ ಪ್ರಾಥಮಿಕ ಆರೋಗ್ಯ ತಪಾಸಣೆ ನಡೆಸಿ ಹೆಸರುಗಳನ್ನು ದಾಖಲಿಸಲಾಯಿತು. ನಂತರ ಅವರನ್ನು ಒಂದು ಕಿ.ಮೀ ದೂರದವರೆಗೆ ಕಾಲ್ನಡಿಗೆಯಲ್ಲಿ ಮೈಥಾನ್ ಎಂಬ ಜಾಗಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಒಂದು ಸ್ಥಳೀಯ ಕಾಲೇಜು ಕಟ್ಟಡವೊಂದರಲ್ಲಿ ಇರಿಸಲಾಯಿತು. ಅಲ್ಲಿ ಅವರಿಗೆ ದಿನಕ್ಕೆ ಎರಡು ಬಿಸಿ ಊಟಗಳನ್ನು (ಹೆಚ್ಚಾಗಿ ಖಚೊರಿ ಅಥವಾ ಅಕ್ಕಿ ಮತ್ತು ದಾಲ್) ಮತ್ತು ಬೆಳಿಗ್ಗೆ ಉಪಹಾರಗಳನ್ನು (ಬ್ರೆಡ್ ಮತ್ತು ಚಹಾ) ನೀಡಲಾಗುತ್ತದೆ. ಲಾಕ್‌ಡೌನ್‌ ಅವಧಿ ಮುಗಿಯುವವರೆಗೂ ಅವರೆಲ್ಲರು ಮನೆಯೊಳಗೆ ಇರಬೇಕೆಂದು ತಿಳಿಸಲಾಯಿತು. ಅವರು ಪಶ್ಚಿಮ ಬಂಗಾಳಕ್ಕೆ ಮತ್ತು ಅವರ ಮೂಲ ಸ್ಥಳಗಳಾದ ಮುರ್ಶಿದಾಬಾದಿನ ರಘುನಾಥಗಂಜನ್ನು ತಲುಪದಿದ್ದರೂ, ಜಾರ್ಖಂಡ್ ಪೊಲೀಸರು ಅವರನ್ನು ನೋಡಿಕೊಂಡ ರೀತಿಯು ಎಲ್ಲರಿಂದ ಪ್ರಶಂಸೆಗೊಳಗಾಯಿತು.

 ವಲಸೆ ಕಾರ್ಮಿಕ
ಮಕ್ಕಳು ಸಮೇತ ಸಾವಿರಾರು ಕಿಲೋ ಮೀಟರ್ ನಡೆಯುವ ಕಾರ್ಮಿಕರು

ಇತ್ತೀಚಿನ ವರ್ಷಗಳಲ್ಲಿ, ಕೇರಳ ಪಶ್ಚಿಮ ಬಂಗಾಳದ ವಲಸೆ ಕಾರ್ಮಿಕರ ನೆಚ್ಚಿನ ತಾಣವಾಗಿದೆ. ಅಲ್ಲಿ ಕೊಡುವ ವೇತನ ಉತ್ತಮವಾಗಿದೆ. ಕಲ್ಲು ಕುಟುಕರಿಗೆ ದಿನಕ್ಕೆ ಕನಿಷ್ಠ ರೂ .750 ಮತ್ತು ಸಹಾಯಕನಿಗೆ ರೂ .470 ಸಿಗುತ್ತದೆ. ಮಜಮ್ಮೆಲ್ ಹಕ್ ಮತ್ತು ಬರುನ್ ಸರ್ಕಾರ ಎಂಬ ಕೆಲಸಗಾರರ ಪ್ರಕಾರ ಅವರಲ್ಲಿ 16 ಮಂದಿ ಕೇರಳಕ್ಕೆ ಬಂದಿದ್ದರು. ಈಗ ಅವರೂ ಕೂಡ ಲಾಕ್‌ಡೌನ್‌ನಿಂದ ಸಿಕ್ಕಿಹಾಕಿಕೊಳ್ಳುವ ಹಾಗಾಗಿದೆ. ಇವರಲ್ಲಿ ಮುರ್ಶಿದಾಬಾದ್ ನಿಂದ ಒಂಬತ್ತು ಮಂದಿ ಮತ್ತು ಉಳಿದವರು ದಕ್ಷಿಣ ದಿನಾಜ್ ಪುರದ ತಪನ್ ಪ್ರದೇಶದವರು. ಅವರು ಹೊಸ ಶಾಲಾ ಕಟ್ಟಡದ ನಿರ್ಮಾಣದಲ್ಲಿ ನಿರತರಾಗಿದ್ದರು ಮತ್ತು ಆ ಸ್ಥಳದಲ್ಲಿಯೇ ತಂಗಿದ್ದರು. ಲಾಕ್‌ಡೌನ್‌ ನಂತರ ಶಾಲಾ ಅಧಿಕಾರಿಗಳಿಂದ ಅವರಿಗೆ ಪಡಿತರ ವಸ್ತುಗಳು ಕೆಲ ಕಾಲ ದೊರೆತವು. ಆದರೆ ಈಗ ಅದು ಕೂಡ ನಿಂತುಹೋಗಿದೆ. ಅವರಿಗೆ ಹಳೆಯ ಶಾಲಾ ಕಟ್ಟಡದಿಂದ ನೀರನ್ನು ಈಗಲೂ ಕೊಡಲಾಗುತ್ತಿದೆ. ಈಗ ಅವರು ಹತ್ತಿರದ ಅಂಗಡಿಗಳಿಂದ ಪಡಿತರವನ್ನು ಪಡೆದುಕೊಳ್ಳುತ್ತಿದ್ದಾರೆ (ಹೆಚ್ಚಾಗಿ ಅಕ್ಕಿ, ದಾಲ್, ಅಟ್ಟಾ ಮತ್ತು ಆಲೂಗಡ್ಡೆ). ಇದರ ಖರ್ಚು-ವೆಚ್ಚವನ್ನು ಈಗ ನಿರ್ಮಾಣ ಕಂಪನಿಯು ಭರಿಸುತ್ತಿದ್ದು, ನಂತರ ಅದನ್ನು ಅವರ ವೇತನಕ್ಕೆ ಸರಿಹೊಂದಿಸಲಾಗುತ್ತದೆ.

ಅವರ ಮೂರು ವಾರಗಳ ವೇತನ ಪಾವತಿಯು ಆಗುವ ಮೊದಲು ಲಾಕ್‌ಡೌನ್‌ ಹೇರಲಾಯಿತು. ಆದ್ದರಿಂದ ಅವರು ಈಗ ಹಣವಿಲ್ಲದೆ ಬಹುತೇಕ ದರಿದ್ರರಾಗಿದ್ದಾರೆ. ಅವರಲ್ಲಿ ಹೆಚ್ಚಿನವರು ಕೆಲವೇ ಕೆಲವು ವಾರಗಳ ಹಿಂದೆ ಕೆಲಸಕ್ಕೆ ಸೇರಿಕೊಂಡ ಕಾರಣ ಮತ್ತು ತಮ್ಮ ಜೊತೆ ತಂದಿದ್ದ ಹಣವನ್ನೆಲ್ಲಾ ಸುಮ್ಮನೆ ಕೆಲಸವಿಲ್ಲದೆ ಕುಳಿತುಕೊಂಡು ಖರ್ಚು ಮಾಡಿದ್ದರಿಂದ ಅವರು ತಮ್ಮ ಊರಿಗೆ ಮರಳಿ ಹೋಗಬೇಕೆಂದರು ಕೂಡ ಪ್ರಯಾಣಕ್ಕಾಗಿ ರೈಲು ಟಿಕೆಟ್ಗಳನ್ನು ಖರೀದಿಸಲು ಹಣವಿಲ್ಲದೆ ಕಷ್ಟವಾಗಿದೆ. ಆದರೂ ಮೊಜಮ್ಮೆಲ್ (21) ಹೇಳುವಂತೆ ಒಂದು ಸಣ್ಣ ಅವಕಾಶ ಸಿಕ್ಕರೆ ಸಾಕು ಮನೆಗೆ ಮರಳಬೇಕೆಂದು ತನ್ನ ಕುಟುಂಬ ಒತ್ತಾಯಿಯಿಸುತ್ತಿದೆ. ಬರುನ್ ಸರ್ಕಾರ್ ಎಂಬವರು ಕೂಡ ಇಲ್ಲಿ ಒಬ್ಬ ಕೆಲಸಗಾರ. ಇವರು ಕೇರಳಕ್ಕೆ ಈ ಮೊದಲು ಬಂದಿದ್ದಾರೆ. ಆದರೆ ಅವರಿಗು ಕೂಡ ಈಗ ಕಳೆದ ಎರಡು ತಿಂಗಳುಗಳಿಂದ ವೇತನ ದೊರೆತಿಲ್ಲ. ತಿಂಗಳುಗಟ್ಟಲೆ ಗುತ್ತಿಗೆದಾರರಿಂದ ಬರಬೇಕಾದ ವೇತನ ಬರದೆ ಹೋಗುವುದು ಇವರ ಜೀವನದಲ್ಲಿ ಸರ್ವೇ ಸಾಮಾನ್ಯ. ಇದು ಬರುನ್‌ನಂತವರಿಗೆ ಪದೆ, ಪದೆ ಆಗುವ ಅನುಭವ. ಕೆಲವು ಕಾರ್ಮಿಕರು ತಮ್ಮ ಆಹಾರ ಮತ್ತು ವೆಚ್ಚಗಳಿಗಾಗಿ ಎಷ್ಟು ಬೇಕೋ, ಅಷ್ಟು ಹಣವನ್ನು ಮಾತ್ರ ತೆಗೆದುಕೊಳ್ಳುತ್ತಾರೆ. ಉಳಿದದ್ದನ್ನು ಗುತ್ತಿಗೆದಾರನ ಹತ್ತಿರ ಉಳಿಸಿರುತ್ತಾರೆ. ಅವರು ಮನೆಗೆ ಹೋಗಲು ರಜೆ ತೆಗೆದುಕೊಂಡಾಗ ಅಥವಾ ತಮ್ಮ ಮನೆಗೆ ಹಣವನ್ನು ಕಳುಹಿಸಬೇಕಾದರೆ ಗುತ್ತಿಗೆದಾರರಿಂದ ಮಿಕ್ಕುಳೀದ ಹಣವನ್ನು ಪಡದುಕೊಳ್ಳುತ್ತಾರೆ. ಈಗ ಲಾಕ್ಡೌನ್ ಅವರ ಇಂತಹ ಲೆಕ್ಕಾಚಾರಗಳನ್ನು ಬುಡ-ಮೇಲಾಗಿಸಿದೆ. ಅವರೀಗ ಅನಿಶ್ಚಿತ ಭವಿಷ್ಯವನ್ನು ಎದುರಿಸುತ್ತಿದ್ದಾರೆ.

ಕೇರಳ ಸರ್ಕಾರವೂ ತಮ್ಮ ರಾಜ್ಯದ ‘ಅತಿಥಿ’ ಕಾರ್ಮಿಕರಿಗೆ ಸಹಾಯ ಮಾಡುವಲ್ಲಿ ಅತ್ಯಂತ ಉತ್ತಮ ಕೆಲಸ ಮಾಡುತ್ತಿದೆ ಎಂದು ವ್ಯಾಪಕವಾಗಿ ವರದಿಯಾಗಿದೆ. ಅಲ್ಲಿ ಹಲವಾರು ಪುನರ್ವಸತಿ ಶಿಬಿರಗಳನ್ನು ತೆಗೆದು, ನಿರ್ಗತಿಕರಿಗೆ ಆಶ್ರಯ ಮತ್ತು ಆಹಾರವನ್ನು ನೀಡಲಾಗುತ್ತಿದೆ. ಆ ಶಿಬಿರಗಳಲ್ಲಿ ಉಳಿದಿಲ್ಲದ ವಲಸೆ ಕಾರ್ಮಿಕರು ಭಿನ್ನವಾದ ಅನುಭವವನ್ನು ಹೊಂದಿದ್ದಾರೆ. ಕೇರಳದ ಇತರ ಭಾಗಗಳಂತೆ ಕಣ್ಣೂರು ಜಿಲ್ಲೆ ಕೂಡ ಪಶ್ಚಿಮ ಬಂಗಾಳ, ಯು.ಪಿ, ಬಿಹಾರ, ಅಸ್ಸಾಂ, ಒರಿಸ್ಸಾ ಮತ್ತು ಇತರ ಹಲವು ರಾಜ್ಯಗಳಿಂದ ವಲಸೆ ಬಂದ ಕಾರ್ಮಿಕರಿಗೆ ಆತಿಥ್ಯ ನೀಡುತ್ತಿದೆ.

 ವಲಸೆ ಕಾರ್ಮಿಕ
ಕೇರಳದಲ್ಲಿ ಕಾರ್ಮಿಕರ ನೋಂದಣಿ

ಅಜಯ್ ರಜನೀಶ್ ಕಣ್ಣೂರಿನಲ್ಲಿ ಸ್ವತಂತ್ರ ವೆಲ್ಡರ್ ಆಗಿದ್ದು 2007 ರಿಂದ ಅಲ್ಲಿದ್ದಾರೆ. ಸ್ಥಳೀಯ ಪಂಚಾಯತಿನಿಂದ ಗುರುತಿನ ಚೀಟಿ ಪಡೆದುಕೊಂಡು, ತನ್ನ ಕುಟುಂಬದ ಜೊತೆಗೆ ಬಾಡಿಗೆ ಮನೆಯೊಂದರಲ್ಲಿದ್ದಾರೆ. ಅಜಯ್ ಯು.ಪಿ.ಯ ರಾಜ್ಯದವರು. ಅವರ ಗ್ರಾಮ ಯು.ಪಿ.ಯ ಉನ್ನಾವೊ ಜಿಲ್ಲೆಯಲ್ಲಿದೆ. ಕೆಲವು ಏಜೆನ್ಸಿಗಳು (ಇದು ಸರ್ಕಾರಿ ಅಥವಾ ಖಾಸಗಿ ಎಂದು ಖಚಿತವಾಗಿಲ್ಲ) ಬೇಯಿಸಿದ ಆಹಾರವನ್ನು ನೀಡುತ್ತಿದ್ದರು. ಇದಕ್ಕಾಗಿ ಅಜಯ್‌ನಂತವರು 25 ರೂ.ಗಳನ್ನು ಕೊಡಬೇಕಾದ ದುಸ್ಥಿತಿ ಉಂಟಾಗಿದೆ ಎಂದು ಅವರು ತನ್ನ ಅಳಲನ್ನು ತೊಡಿಕೊಂಡರು. ಈಗ ಅವರು ಒಂದು ದಿನಕ್ಕೆ 150 ರೂ. ಗಳಷ್ಟು ವೆಚ್ಚ ಮಾಡಬೇಕಾದ ಸಂದಿಗ್ದತೆ ಉಂಟಾಗಿದೆ. ಹಾಗಾಗಿ ಇದಕ್ಕೆ ಪರ್ಯಾಯವಾಗಿ ಅವರು ಸಾಲ ಮಾಡಿ ರೇಷನ್ ನಲ್ಲಿ ತನಗೆ ಬೇಕಾದ ದಿನಸಿ ಸಾಮಾನುಗಳನ್ನು ಖರೀದಿ ಮಾಡಿ, ತಾವೆ ಊಟವನ್ನು ತಯಾರಿಸಿಕೊಳ್ಳುತ್ತಿದ್ದಾರೆ. ಅವರ ಮನೆಯ ಮಾಲೀಕ ಈಗ ಸ್ವಲ್ಪ ಮಟ್ಟಿಗೆ ಸಹಾಯ ಮಾಡುತ್ತಿದ್ದಾರೆ. ಅವರ ಸ್ಥಿತಿಯನ್ನು ತಿಳಿದ ನಂತರ (ಅಜಯ್ ಹತ್ತಿರ ಬಾಡಿಗೆ ಹಣ ಹೆಚ್ಚಾಗಿ ಇಲ್ಲದಿರುವ ಸ್ಥಿತಿ) ಬಾಡಿಗೆ ಪಾವತಿಯನ್ನು ಮುಂದೂಡಲು ಮನೆಯ ಮಾಲೀಕ ಒಪ್ಪಿಕೊಂಡಿದ್ದಾರೆ (ಒಂದು ತಿಂಗಳು ರೂ .4000 / – ಮತ್ತು ವಿದ್ಯುತ್ ಬಿಲ್ (ರೂ .500 /). ಈ ರೀತಿ ಎಷ್ಟು ದಿನ ಜೀವನ ಸಾಗಿಸಬೇಕೋ ಎಂಬ ಕಳವಳದಲ್ಲಿ ಅಜಯ್ ಪ್ರತಿ ಕ್ಷಣವನ್ನು ಎದುರಿಸುತ್ತಿದ್ದಾರೆ. ಅವರಿಗೀಗ ಏನೂ ಖಚಿತವಾಗಿ ದಾರಿಗಾಣುತ್ತಿಲ್ಲ. “ಕರೋನಾ ಬಂದರೆ ಸ್ವಲ್ಪ ಸಮಯದ ನಂತರ ಸಾಯುತ್ತೇವೆ. ಆದರೆ ಇದಕ್ಕೆ ಮೊದಲೇ ಹಸಿವಿನಿಂದ ಸಾಯುವಂತಾಗಿದೆ” ಎಂದು ಅವರು ಕಣ್ಣೀರಿಡುತ್ತಾರೆ.

ಶ್ರೀ ಹರಿಸ್ಸ ಎಂಬ ಕಣ್ಣೂರಿನ ಸಹಾಯಕ ಕಲೆಕ್ಟರ್ ನಾನು ಈ ವಿಷಯದ ಬಗ್ಗೆ ಕೇಳಿದ ಪ್ರಶ್ನೆಗೆ ಈ ರೀತಿ ಪ್ರತಿಕ್ರಿಯಿಸಿದ್ದಾರೆ:

ಕಣ್ಣೂರು ಜಿಲ್ಲೆಯಲ್ಲಿ 38095 ಅತಿಥಿ ಕೆಲಸಗಾರರಿದ್ದಾರೆ. ಜಿಲ್ಲಾಡಳಿತದ ಬೆಂಬಲ ಅಗತ್ಯವಿರುವವರು 19167 ಮಂದಿ. ಉಳಿದವರಿಗೆ ಅವರಿಗೆ ಉದ್ಯೋಗ ನೀಡಿದ ಉದ್ದಿಮೆದಾರರು ಬೇಕಾದ ಅಗತ್ಯ ಸಾಮಗ್ರಿಗಳನ್ನು ಒದಗಿಸುತ್ತಿದ್ದಾರೆ. ಸ್ಥಳೀಯ ಸಂಘ-ಸಂಸ್ಥೆಗಳು ಅಗತ್ಯ ವಸ್ತುಗಳು ತಲುಪ ಬೇಕಾದ ಜನರಿಗೆ ತಲುಪುತ್ತಿವೆಯೇ, ಇಲ್ಲವೇ ಎಂದು ಖಾತರಿಪಡಿಸು ಕ್ರಿಯೆಯಲ್ಲಿ ಇವೆ. ಯಾವುದೇ ದೂರುಗಳಿದ್ದರೆ ಅವನ್ನು ಸರಿಪಡಿಸುವಲ್ಲಿ ನಿಗಾ ವಹಿಸಲಾತುತ್ತಿದೆ

ಸಹಾಯಕ್ಕಾಗಿ ಜಿಲ್ಲಾ ನಿಯಂತ್ರಣ ಕೊಠಡಿಯಲ್ಲಿ ಸಹಾಯವಾಣಿಗಳನ್ನು ಮೀಸಲಿಡಲಾಗಿದೆ. ಸ್ಥಳೀಯ ಪಂಚಾಯತ್ಗಳು ಎರಡು ಆಶ್ರಯ ಮನೆಗಳನ್ನು ನಡೆಸುತ್ತಿವೆ. ಅಗತ್ಯವಿದ್ದಲ್ಲಿ ಅಂತಹ ಮನೆಗಳಿಗಾಗಿ ಜಿಲ್ಲಾಡಳಿತವು ಮತ್ತಷ್ಟು ಜಾಗಗಳನ್ನು ಗುರುತಿಸಿದೆ. ಅತಿಥಿ ಕೆಲಸಗಾರರ ಶಿಬಿರಗಳನ್ನು ಪರಿಶೀಲಿಸಲು, ಅವರಿಗೆ ಅಗತ್ಯವಿರುವ ವಸ್ತುಗಳನ್ನು ಪೂರೈಸಲು ಮತ್ತು ಸ್ವಚ್ಛತೆಯನ್ನು ಕಾಪಾಡಲು 30 ಮೊಬೈಲ್ ತಂಡಗಳು ಉಪತಹಶೀಲ್ದಾರ್ ನೇತೃತ್ವದಲ್ಲಿವೆ. ಪ್ರತಿ ತಂಡವು ಈ ಕಾರ್ಮಿಕರೊಂದಿಗೆ ಸಂವಹನ ನಡೆಸಲು ಹಿಂದಿ ಮತ್ತು ಬಂಗಾಳಿ ಭಾಷೆಯಲ್ಲಿ ಪ್ರವೀಣರಾಗಿರುವ ಸ್ವಯಂಸೇವಕರನ್ನು ಹೊಂದಿದೆ. ವಿವಿಧ ಪ್ರದೇಶಗಳಲ್ಲಿ ವೈದ್ಯಕೀಯ ತಂಡಗಳು ನಿಯಮಿತವಾಗಿ ವೈದ್ಯಕೀಯ ತಪಾಸಣಾ ಶಿಬಿರಗಳನ್ನು ನಡೆಸುತ್ತಿವೆ. ಕೆಲಸಗಾರರ ಆರೋಗ್ಯದ ಬಗ್ಗೆ ನಿಗಾ ವಹಿಸಲು ಬದ್ಧತೆ ಮತ್ತು ವೃತಿಪರತೆಯುಳ್ಳ ಅನೇಕ ಮೊಬೈಲ್ ಆರೋಗ್ಯ ತಂಡಗಳನ್ನು ರಚಿಸಲಾಗಿದೆ.

ಇದರೊಂದಿಗೆ ನಿಯಮಿತವಾಗಿ ಐ.ಇ.ಸಿ. ಅಭಿಯಾನಗಳನ್ನು ಜಿಲ್ಲಾಡಳಿತ ಮತ್ತು ವಿವಿಧ ಎನ್.ಜಿ.ಒ.ಗಳು ನಡೆಸುತ್ತಿದೆ. ಆಹಾರವನ್ನು ಈ ಕೆಳಗೆ ಹೇಳಲ್ಪಟ್ಟಿರುವ ಮೂರು ಅಂಶಗಳ ಮೂಲಕ ನಿಯಮಿತವಾಗಿ ಒದಗಿಸಲಾಗುತ್ತದೆ:

  1. ಕಣ್ಣೂರು ಥಾಲಿ (ಕಾರ್ಪೊರೇಷನ್ ಮಿತಿಯಲ್ಲಿ)
  2. ಸಮುದಾಯ ಅಡಿಗೆ (ಪುರಸಭೆಗಳು ಮತ್ತು ಪಂಚಾಯಿತಿಗಳಲ್ಲಿ)
  3. ಕಚ್ಚಾ ವಸ್ತುಗಳ ಕಿಟ್ಗಳಾದ ಗೋದಿ ಹಿಟ್ಟು ಅಥವಾ ಅಕ್ಕಿ, ತರಕಾರಿಗಳು, ಎಣ್ಣೆ, ಇತ್ಯಾದಿ ಜೊತೆಗೆ ಮಿಲ್ಮಾದಿಂದ ಹಾಲು ಪ್ಯಾಕೆಟ್ಗಳನ್ನು ಸಹ ನೀಡಲಾಗುತ್ತಿದೆ.

ಲಾಕ್ಡೌನ್ನ ಈ ಕಷ್ಟದ ಸಮಯದಲ್ಲಿ ಮನರಂಜನೆಗಾಗಿ ಟಿವಿ ಸೆಟ್ಗಳ ವ್ಯವಸ್ಥೆ ಮಾಡಲಾಗಿದೆ. ಕಣ್ಣೂರು ಜಿಲ್ಲೆಯಲ್ಲಿ 89 ಸಮುದಾಯ ಅಡಿಗೆಮನೆಗಳು ಕಾರ್ಯನಿರ್ವಹಿಸುತ್ತಿವೆ. ಅತಿಥಿ ಕಾರ್ಮಿಕರಿಗೆ ಸಮುದಾಯದ ಅಡುಗೆಮನೆಯಲ್ಲಿ ಬೇಯಿಸಿದ ಆಹಾರವನ್ನು ನೀಡಲಾಗುತ್ತದೆ. ಇವು ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ ಯಾವುದೇ ಶುಲ್ಕವಿಲ್ಲದೆ ಕಾರ್ಯನಿರ್ವಹಿಸುತ್ತಿವೆ.

 ವಲಸೆ ಕಾರ್ಮಿಕ
ಊಟ ಮಾಡುತ್ತಿರುವ ಕಾರ್ಮಿಕರು

ಅತಿಥಿ/ವಲಸೆ ಕಾರ್ಮಿಕರು ಬೇಕಾದ ವಸ್ತುಗಳನ್ನು ಪಡೆದುಕೊಂಡ ಮೇಲೆ, ತಮ್ಮ ಅಡುಗೆಯನ್ನು ತಾವೇ ಮಾಡಿಕೊಳ್ಳಲು ಇಷ್ಟ ಪಡುತ್ತಾರೆ. ಆದ್ದರಿಂದ ಗೋದಿ ಹಿಟ್ಟು / ಅಕ್ಕಿ, ಈರುಳ್ಳಿ, ಆಲೂಗಡ್ಡೆ, ಅಡುಗೆ ಎಣ್ಣೆ ಮತ್ತು ಇತರ ಪದಾರ್ಥಗಳನ್ನು ಕೇರಳ ರಾಜ್ಯವು ಆಹಾರ ಕಿಟ್ಗಳ ಮೂಲಕ ಈ ಕಾರ್ಮಿಕ ಕುಟುಂಬಗಳಿಗೆ ಒದಗಿಸುತ್ತಿದೆ. ಗೌರವಾನ್ವಿತ ಸಿಎಂ ನಿರ್ದಶಿಸಿದಂತೆ ಸಾಧ್ಯವಿರುವ ಎಲ್ಲಾ ಕಾಳಜಿಯನ್ನು ಕಾರ್ಮಿಕರಿಗೆ ನೀಡಲಾಗುತ್ತಿದೆ.

ವಿಪರ್ಯಾಸವೆಂದರೆ, ಕೇರಳದಂತೆ ಇತರ ಆತಿಥೇಯ ರಾಜ್ಯಗಳು ತೊಂದರೆಗೀಡಾದ ವಲಸೆ ಕಾರ್ಮಿಕರ ಬಗ್ಗೆ ಹೆಚ್ಚು ಕಾಳಜಿಯನ್ನು ತೋರಿಸಿಲ್ಲ. ಮಹಾರಾಷ್ಟ್ರ ಯುಗಯುಗಗಳಿಂದ ವಲಸೆ ಕಾರ್ಮಿಕರ ನೆಚ್ಚಿನ ತಾಣ. ಆದರೆ ಏಕಾಏಕಿ ಎರಗಿರುವ ಕರೋನಾ ಸಮಸ್ಯೆಯನ್ನು ಪರಿಹರಿಸಲು ಈ ರಾಜ್ಯವು ಅಷ್ಟೊಂದು ಜನಪ್ರಿಯ ಕಾರ್ಯವನ್ನು ಮಾಡಲು ವಿಫಲವಾಗಿದೆ. ಕರೋನಾ ಭೀತಿಯ ಮಧ್ಯೆ (ಮಹಾರಾಷ್ಟ್ರದಲ್ಲಿ ಇದುವರೆಗೆ ಸೋಂಕಿತ ಪ್ರಕರಣಗಳ ಸಂಖ್ಯೆ ಹೆಚ್ಚು) ಈ ರಾಜ್ಯ ಸರ್ಕಾರವೂ 12 ವಿಶೇಷ ರೈಲುಗಳನ್ನು ಕಾಯ್ದಿರಿಸಿ ವಲಸೆ ಕಾರ್ಮಿಕರನ್ನು ಈ ರೈಲುಗಳಲ್ಲಿ ಕುಳ್ಳಿರಿಸಿ ಪೂರ್ವ ಮತ್ತು ಉತ್ತರದ ರಾಜ್ಯಗಳಾದ ಪಶ್ಚಿಮ ಬಂಗಾಳ, ಬಿಹಾರ ಮತ್ತು ಯು.ಪಿ. ರಾಜ್ಯಗಳಿಗೆ ಕಳುಹಿಸಿತು. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇದಕ್ಕೆ ಪ್ರತಿಕ್ರಯಿಸುತ್ತಾ “ಕಾರ್ಮಿಕರನ್ನು ಆ ರೈಲುಗಳಿಗೆ ತಳ್ಳುವ ಮೊದಲು ಕನಿಷ್ಠ ಆರೋಗ್ಯ ತಪಾಸಣೆ ನಡೆಸಲು ಮಹಾರಾಷ್ಟ್ರ ಸರ್ಕಾರ ತಲೆಕೆಡಿಸಿಕೊಳ್ಳಲಿಲ್ಲ” ಎಂದು ಟೀಕಿಸಿದ್ದಾರೆ. ಪುಣೆ ಮತ್ತು ಮುಂಬೈಯಿಂದ ಆ ಎರಡು ರೈಲುಗಳು ಸಾವಿರಾರು ವಲಸೆ ಕಾರ್ಮಿಕರನ್ನು ಹೌರಾ ನಿಲ್ದಾಣಕ್ಕೆ ತಂದಿಳಿಸಿದ್ದಾರೆ, ಇವರನ್ನು ಬಂಗಾಳ ರಾಜ್ಯ ಆಡಳಿತವು ಚಾರ್ಟರ್ಡ್ ಬಸ್ ಗಳ ಮೂಲಕ ಆ ಕಾರ್ಮಿಕರ ಊರುಗಳಾದ ಮಾಲ್ಡಾ, ಮುರ್ಶಿದಾಬಾದ್, ಬಿರ್ಭುಮ್ ಮತ್ತು ಇತರ ಸ್ಥಳಗಳಿಗೆ ಕಳುಹಿಸಿತು ಎಂಬುದು ಬೇರೆ ವಿಷಯ. ಆದರೆ ಹೌರಾದಲ್ಲಿಯೂ ಕೂಡ ಈ ಕಾರ್ಮಿಕರ ಯಾವುದೇ ಆರೋಗ್ಯ ತಪಾಸಣೆ ಮಾಡಲಾಗಲಿಲ್ಲ.

ಭಾರತದ ಇತರ ಭಾಗಗಳಲ್ಲಿ ಸಿಲುಕಿರುವ ವಲಸೆ ಕಾರ್ಮಿಕರು ಪಶ್ಚಿಮ ಬಂಗಾಳ ಸರ್ಕಾರಕ್ಕೆ, ಆಯಾ ಪ್ರದೇಶಗಳ ಚುನಾಯಿತ ಪ್ರತಿನಿಧಿಗಳಿಗೆ ಮತ್ತು ಕೆಲವು ನಾಗರಿಕ ಸಮಾಜ ಸಂಸ್ಥೆಗಳ ಸಹಾಯವಾಣಿಗಳಿಗೆ ಸಹಾಯಕ್ಕಾಗಿ ಈಗಲೂ ಸಹ ಕರೆಗಳನ್ನು ಮಾಡುತ್ತಿದ್ದಾರೆ. ರಾಜ್ಯದಲ್ಲಿ ಕೋಮು ಗಲಭೆಗಳು ಉಲ್ಬಣಗೊಂಡ ಹಿನ್ನೆಲೆಯಲ್ಲಿ ಕೆಲವು ಶಿಕ್ಷಣ ತಜ್ಞರು ಮತ್ತು ವೃತ್ತಿಪರರಿಂದ ಸ್ಥಾಪಿಸಲ್ಪಟ್ಟ ಬಾಂಗ್ಲಾ ಸಂಸ್ಕೃತಿ ಮಂಚಾ ಎಂಬ ಸಂಘಟನೆಯು ವಿವಿಧ ರಾಜ್ಯಗಳಲ್ಲಿ ಸಿಲುಕಿರುವ ವಲಸೆ ಕಾರ್ಮಿಕರ ಕಲ್ಯಾಣಕ್ಕಾಗಿ ಸಕ್ರಿಯವಾಗಿ ಕೆಲಸ ಮಾಡಲು ಪ್ರಾರಂಭಿಸಿರುವುದರಿಂದ ಅದರ ಖ್ಯಾತಿ ಈಗ ಹೆಚ್ಚಾಗಿದೆ.

 ವಲಸೆ ಕಾರ್ಮಿಕ
ಬಾಂಗ್ಲಾ ಸಂಸ್ಕೃತಿ ಮಂಚಾ

ಬಂಗಾಳ ರಾಜ್ಯದಲ್ಲಿ 10.33 ಮಿಲಿಯನ್ ವಲಸಿಗರು ಇದ್ದಾರೆ. ಅದಕ್ಕಿಂತ ಹೆಚ್ಚಿನ ಸಂಖ್ಯೆಯ ಜನರು ಕೆಲಸಕ್ಕಾಗಿ ಮತ್ತು ಜೀವನೋಪಾಯಕ್ಕಾಗಿ ಇತರ ರಾಜ್ಯಗಳಿಗೆ ವಲಸೆ ಹೋಗಿದ್ದಾರೆ. ಆದರೆ ಇವರ ಅಂಕಿ-ಸಂಖ್ಯೆಯ ಬಗ್ಗೆ ರಾಜ್ಯ ಆಡಳಿತವು ಯಾವುದೇ ಖಚಿತ ದಾಖಲೆಯನ್ನು ಹೊಂದಿಲ್ಲ. 2019 ರಲ್ಲಿ ಯು.ಪಿ. ಯ ಬನಾರಸ್ ನಲ್ಲಿ ನಡೆದ ಅಪಘಾತದಲ್ಲಿ 5 ಬಂಗಾಳಿ ವಲಸೆ ಕಾರ್ಮಿಕರು ಪ್ರಾಣ ಕಳೆದುಕೊಂಡ ನಂತರ, ಪಶ್ಚಿಮ ಬಂಗಾಳವು ತನ್ನ ರಾಜ್ಯದ ಎಲ್ಲಾ ವಲಸೆ ಕಾರ್ಮಿಕರ ಡೇಟಾಬೇಸ್ ತಯಾರಿಸಲು ಜಿಲ್ಲಾಡಳಿತಗಳನ್ನು ಕೇಳಿದೆ. ಆದರೆ ಆ ನಿಟ್ಟಿನಲ್ಲಿ ಯಾವ ಕೆಲಸವೂ ಸಮರ್ಪಕವಾಗಿ ಆಗಿಲ್ಲ. ರಾಜ್ಯದಿಂದ ಹೋದ ವಲಸೆಗಾರರ ಡೇಟಾಬೇಸ್ ಈಗಲೂ ಸಿಗುವುದಿಲ್ಲ. ಹೊರ- ವಲಸೆಯ ಪ್ರಮಾಣವು ತುಂಬಾ ಹೆಚ್ಚಿರುವ ಜಿಲ್ಲೆಗಳಲ್ಲಿ ಮಾಲ್ಡಾ, ಮುರ್ಶಿದಾಬಾದ್, ನಾಡಿಯಾ ಮತ್ತು ಬಿರ್ಭುಮ್ ಸೇರಿವೆ ಎಂಬುದು ಸಾರ್ವಜನಿಕ ಜ್ಞಾನ. ಆದರೂ ಇದರ ಬಗ್ಗೆ ಮಾಹಿತಿ ಅಥವಾ ಅಂಕಿ-ಅಂಶಗಳು ಅತ್ಯಲ್ಪ.

ಈಗ ಬಿಕ್ಕಟ್ಟಿನ ಸಮಯದಲ್ಲಿ ಇತರ ಕೆಲವು ರಾಜ್ಯಗಳಲ್ಲಿ ಸಿಲುಕಿರುವ ಕಾರ್ಮಿಕರ ವಿವರಗಳಿಗಾಗಿ ರಾಜ್ಯ ಸರ್ಕಾರವು ಬಾಂಗ್ಲಾ ಸಂಸ್ಕೃತಿ ಮಂಚಾದಂತಹ ನಾಗರಿಕ ಸಮಾಜ ಸಂಸ್ಥೆಗಳ ಮೇಲೆ ಅವಲಂಬಿತವಾಗಿದೆ. ಬಾಂಗ್ಲಾ ಸಂಸ್ಕೃತಿ ಮಂಚಾದ ಅಧ್ಯಕ್ಷ ಸಮಿರುಲ್ ಇಸ್ಲಾಂರ ಪ್ರಕಾರ 50,000 ಕ್ಕೂ ಹೆಚ್ಚು ವಲಸೆ ಕಾರ್ಮಿಕರ ಡೇಟಾವನ್ನು ಇದುವರೆಗು ಸಂಗ್ರಹಿಸಲಾಗಿದೆ. ಈ ಡೇಟಾ ಇನ್ನೂ ಲಂಬವಾಗಿ ಬೆಳೆಯುತ್ತಿದೆ. ಅವರು ಸಹಾಯವಾಣಿಗಳನ್ನು ಸ್ಥಾಪಿಸಿದ ನಂತರ ಕಳೆದ 15 ದಿನಗಳಲ್ಲಿ ಈ ಎಲ್ಲ ಮಾಹಿತಿಯನ್ನು ಪಡೆದುಕೊಂಡು ಆಯಾ ಜಿಲ್ಲಾಡಳಿತಗಳಿಗೆ ಹಸ್ತಾಂತರಿಸಿದ್ದಾರೆ. ವಲಸೆ ಕಾರ್ಮಿಕರಿಂದ ಎಸ್.ಒ.ಎಸ್. ಪಡೆದ ನಂತರ ಅವರು ತಕ್ಷಣವೇ ಹತ್ತಿರದ ಪ್ರದೇಶಗಳಲ್ಲಿ ಈ ವಲಸೆಗಾರ ಕಾರ್ಮಿಕರಿಗೆ ಸಹಾಯ ಮಾಡುವವರು ಯಾರು ಇದ್ದಾರೆ ಎಂದು ಪತ್ತೆಹಚ್ಚಲು ಪ್ರಯತ್ನಿಸುತ್ತಾರೆ. ಸ್ಥಳೀಯ ಸಂಸ್ಥೆ ಅಥವಾ ಸಂಘಗಳೊಂದಿಗೆ ಸಂಕಷ್ಟಕ್ಕೆ ಸಿಲುಕಿರುವ ಕಾರ್ಮಿಕರ ಸಂಪರ್ಕವನ್ನು ಏರ್ಪಡಿಸಲಾಗುತ್ತದ್ತೆ. ಅವರಿಗೆ ಮೂಲಭೂತ ಸೌಲಭ್ಯಗಳ ವ್ಯವಸ್ಥೆಯನ್ನು ಕೂಡ ಮಾಡಲಾಗುತ್ತದೆ.

“ನಮ್ಮ ಸಂಸ್ಥೆ ಇತರ ಎನ್.ಜಿ.ಒ.ಗಿಂತ ಭಿನ್ನ. ನಾವು ವಿವಿಧ ದಾನಿ ಸಂಸ್ಥೆಗಳಿಂದ ಹಣವನ್ನು ಪಡೆಯುವುದಿಲ್ಲ. ನಮ್ಮ ಸದಸ್ಯರ ಕೊಡುಗೆಯನ್ನೆ ಸಂಘವು ಸಹಾಯ-ಕಾರ್ಯಗಳಿಗೆ ಬಳಸುಕೊಳ್ಳುತ್ತದೆ” ಎಂದು ಸಮಿರುಲ್ ವಿವರಿಸುತ್ತಾರೆ. ಕೆಲ ವೃತ್ತಿಪರರು ಮತ್ತು ಶಿಕ್ಷಣ ತಜ್ಞರ ಗುಂಪು ತನ್ನದೇ ಆದ ಕಾರ್ಯಕಾರಿ ಸಮಿತಿಯನ್ನು ರಚಿಸಿಕೊಂಡಿದೆ. ಈಗ ಈ ಸಂಘವು ತನ್ನ ಸದಸ್ಯರ ಸಂಖ್ಯೆಯನ್ನು ಇತರ ಜಿಲ್ಲೆಗಳಲ್ಲಿ ವೇಗವಾಗಿ ಹೆಚ್ಚಿಸಿಕೊಳ್ಳುತ್ತಿದೆ. ಈಗಾಗಲೇ, ಅವರು 30,000 ಕ್ಕೂ ಹೆಚ್ಚು ಆಲ್ಕೊಹಾಲ್ ಆಧಾರಿತ ಸ್ಯಾನಿಟೈಜರ್ಗಳನ್ನು ಸಿದ್ಧಪಡಿಸಿಕೊಂಡು ಬಿರ್ಭುಮ್, ಮಾಲ್ಡಾ ಮತ್ತು ಇತರ ಕೆಲವು ಜಿಲ್ಲೆಗಳ ಬುಡಕಟ್ಟು ಜನರು, ಪೊಲೀಸ್, ಆಸ್ಪತ್ರೆ ಕಾರ್ಮಿಕರು ಮತ್ತು ಕನ್ಸರ್ವೆನ್ಸಿ ಕಾರ್ಮಿಕರಿಗೆ ವಿತರಿಸಿದ್ದಾರೆ. ಅವರ ಕೆಲಸದಿಂದ ಪ್ರಭಾವಿತರಾಗಿ ಬಿರ್ಭುಮ್ ಎಸ್.ಪಿ. ಇನ್ನೂ 200 ಸ್ಯಾನಿಟೈಜರ್ಗಳನ್ನು ತಯಾರಿಸಲು ಅವರಿಗೆ 200 ಲೀಟರ್ ಈಥೈಲ್ ಆಲ್ಕೋಹಾಲ್ ನೀಡಿದ್ದಾರೆ. ಈಗ ಅವರು ಬಡ ಮತ್ತು ಅಸಹಾಯಕ ಜನರಿರುವ ಹಳ್ಳಿಗಳತ್ತ ಗಮನ ಹರಿಸುತ್ತಿದ್ದಾರೆ. ಈಗ ತನ್ನ ಸದಸ್ಯರ ಸಂಖ್ಯೆ ಹೆಚ್ಚುತ್ತಿರುವ ಬಿರ್ಭುಮ್, ಮುರ್ಶಿದಾಬಾದ್, ಮಾಲ್ಡಾ, ಹೌರಾ ಮುಂತಾದ ಜಿಲ್ಲೆಗಳಲ್ಲಿ ಈ ಸಂಸ್ಥೆ ಅಗತ್ಯವಿರುವ ಜನರಿಗೆ ಒಣ ಪಡಿತರವನ್ನು ಒದಗಿಸಲು ಪ್ರಯತ್ನಿಸುತ್ತಿದೆ.

 ವಲಸೆ ಕಾರ್ಮಿಕ
ಹ್ಯಾಂಡ್ ಸ್ಯಾನಿಟೈಜರ್ ವಿತರಣೆಗೆ ಸಜ್ಜುಗೊಳಿಸುತ್ತಿರುವ ಬಾಂಗ್ಲಾ ಸಂಸ್ಕೃತಿ ಮಂಚ್

ವಸಾಹತುಶಾಹಿ ಅವಧಿಯಲ್ಲಿ ರಾಜ್ಯವು ಪ್ರಜೆಗಳ ಸಂಕಷ್ಟಕ್ಕೆ ಸರಿಯಾಗಿ ಸ್ಪಂದಿಸಲಿಲ್ಲ. ಬಂಗಾಳದಲ್ಲಿ 1943 ರಲ್ಲಿ ಉಂಟಾದ ಮಹಾ ಬರಗಾಲದ ಸಮಯದಲ್ಲಿ ಲಕ್ಷಾಂತರ ಜನರು ನಾಶವಾದರೂ, ರಾಜ್ಯ ಆಡಳಿತವು ಜನರಿಗೆ ಸಹಾಯ ಮಾಡಲು ಏನನ್ನೂ ಮಾಡಲಿಲ್ಲ. ಲಂಗರ್ ಅನ್ನು ನಡೆಸುವುದು ಮತ್ತು ಹಸಿವಿನಿಂದ ಬಳಲುತ್ತಿರುವ ಜನರಿಗೆ ಆಹಾರವನ್ನು ನೀಡುವುದನ್ನು ನಾಗರಿಕ ಸಮಾಜ (civil society) ಮಾಡಿದೆಯೆ ಹೊರತು ಬೇರೆ ಸಂಸ್ಥೆಯಲ್ಲ. ವಸಾಹತುಶಾಹಿ ನಂತರದ ಯುಗದಲ್ಲಿ ಈಗಿನ ಸಂಕಷ್ಟದ ಸಮಯದಲ್ಲಿ ಪರಿಹಾರದ ಪ್ರಮುಖ ಕಾರ್ಯಗಳನ್ನು ನಿರ್ವಹಿಸುತ್ತಿರುವುದು ರಾಜ್ಯ ಸರ್ಕಾರವಾಗಿದೆ. ಸರ್ಕಾರದ ಎಲ್ಲ ಪ್ರಯತ್ನಗಳ ಹೊರತಾಗಿಯೂ ಇನ್ನೂ ಅನೇಕ ಕಡೆ ಇತಿ-ಮಿತಿಗಳು ತಲೆದೋರಿವೆ. ನಾಗರಿಕ ಸಮಾಜವು ಈ ಇತಿ-ಮಿತಿಗಳನ್ನು ತಗ್ಗಿಸುವ ಪ್ರಯತ್ನಗಳನ್ನು ಮಾಡುತ್ತಿದೆ.

ಕರಾಟೆ ಸಮರ ಕಲೆಯನ್ನು ಅಭ್ಯಾಸ ಮಾಡುವ ಯುವಕರ ಒಂದು ಸಣ್ಣ ಗುಂಪು ಬೋಲ್ಪುರ್-ಶಾಂತಿನಿಕೇತನದಲ್ಲಿ ಸಹಾಯವಾಣಿಯನ್ನು ಪ್ರಾರಂಭಿಸಿದೆ. ಅವರು ಹಿರಿಯ ನಾಗರಿಕರಿಗೆ ಬೇಕಾಗುವ ಔಷಧಿ ಮತ್ತು ಅಗತ್ಯ ಸರಕುಗಳ ಅಗತ್ಯತೆಗಳನ್ನು ಪೂರೈಸುವತ್ತ ಗಮನ ಹರಿಸಿದ್ದಾರೆ. ಅಲ್ಲದೆ ಅವರು ಬೋಲ್ಪುರ್ ಮತ್ತು ಶಾಂತಿನಿಕೇತನದಲ್ಲಿ ಸುಮಾರು 400 ಬೀದಿ ನಾಯಿಗಳಿಗೆ (ಲಾಕ್‌ಡೌನ ಅವಧಿಯಲ್ಲಿ ಅನೇಕ ಬೀದಿ ನಾಯಿಗಳು ಹಸಿವಿನಿಂದ ಬಳಲುವ ಸಾಧ್ಯತೆಗಳಿರುತ್ತವೆ) ಸತತವಾಗಿ ಆಹಾರವನ್ನು ನೀಡುವ ವ್ಯವಸ್ಥೆಯನ್ನು ಮಾಡಿದ್ದಾರೆ.

ಶಾಂತಿನಿಕೇತನದಲ್ಲಿರುವ ಹೆಲ್ಮ್ ಹರ್ಸ್ ಸಂಸ್ಥೆ ಹೆಚ್ಚಾಗಿ ನಿರ್ಗತಿಕ ಹೆಣ್ಣುಮಗು ಮತ್ತು ಮಹಿಳೆಯರಿಗೋಸ್ಕರ ಕೆಲಸ ಮಾಡುತ್ತಿದೆ. ಬೋಲ್ಪುರದ ಎರಡು ಸರ್ಕಾರಿ ಆಸ್ಪತ್ರೆಗಳಲ್ಲಿ ಬಡ ಗ್ರಾಮಸ್ಥರಿಗೆ ವೈದ್ಯಕೀಯ ಸಹಾಯವನ್ನು ಪಡೆಯಲು ಸಹಾಯ ಮಾಡುವುದರ ಜೊತೆಗೆ, ಅಪ್ರಾಪ್ತ ಬಾಲಕಿಯರನ್ನು ಮದುವೆ ಮತ್ತು ಕಳ್ಳಸಾಗಣೆಕೆಯಂತ ಪಿಡುಗಿನಿಂದ ರಕ್ಷಿಸುವ ಕ್ರಿಯೆಯಲ್ಲಿ ಅವರು ಸಕ್ರಿಯವಾಗಿದ್ದಾರೆ. ಲಾಕ್ ಡೌನ್ ಅವಧಿಯಲ್ಲಿ ಸೈಂಥಿಯಾ ಬಳಿಯ ಹಳ್ಳಿಯೊಂದರಲ್ಲಿ ಅಪ್ರಾಪ್ತ ಬಾಲಕಿಯ ಮದುವೆಯನ್ನು ಪೊಲೀಸರ ಸಹಾಯದಿಂದ ಈ ಸಂಸ್ಥೆಯು ಯಶಸ್ವಿಯಾಗಿ ತಡೆ ಹಿಡಿಯಿತು.

ಡಾರ್ಜಲಿಂಗ್ ನಲ್ಲಿ , ಪೆನ್ಚೆನ್ ಧೆಂಡಪ್ ಮತ್ತು ಅವನ ಸ್ನೇಹಿತರು ಲಾಕ್ ಆಗಿರುವ ಜನರಿಗೆ ಅಗತ್ಯ ಔಷಧಿಗಳನ್ನು ತಲುಪಿಸಿದ್ದಾರೆ. ಅವರು ಜಲಕಲ್ಯಾಣ್ ಎಂಬ ಔಷಧಿ ಡೀಲರ್‌ಗಳಿಂದ ಶೇಕಡ 50 ರಷ್ಟು ರಿಯಾಯತಿ ದರದಲ್ಲಿ ಸ್ಯಾನಿಟೈಜರ್ ಮತ್ತು ಮುಖವಾಡಗಳನ್ನು ಖರೀದಿಸಿ ಡಾರ್ಜಲಿಂಗ್, ಬಿಜನ್ಬಾರಿ, ಸುಖಿಯಾಪೋಖ್ರಿ ಮತ್ತು ಇತರ ಕೆಲವು ಸ್ಥಳಗಳಲ್ಲಿರುವ ಬಡ ಜನರಿಗೆ ರಿಯಾಯಿತಿ ದರದಲ್ಲಿ ತಲುಪಿಸಿದ್ದಾರೆ. ಧೆಂಡಪ್ ಪ್ರಕಾರ, ಜಿ.ಟಿ.ಎ. ಜನರು ಪಡಿತರ ವಿತರಣೆಯನ್ನು ನೋಡಿಕೊಳ್ಳುತ್ತಿರುವುದರಿಂದ ಅವರು ಔಷಧದ ಸರಬರಾಜಿನತ್ತ ಗಮನಹರಿಸಲು ನಿರ್ಧರಿಸಿದರು.

 ವಲಸೆ ಕಾರ್ಮಿಕ
ಮಾಸ್ಕ್ ಹಂಚುತ್ತಿರುವ ಮುಖ್ಯಮಂತ್ರಿ ಮಮತ ಬ್ಯಾನರ್ಜಿ

ಸಾಮಾಜಿಕ ಕಾರ್ಯಗಳಿಗೆ ಮೀಸಲಾಗಿರುವ ಅಖಿಲ ಭಾರತ ಅಲ್ಪಸಂಖ್ಯಾತ ಸಂಘಟನೆಯ ಅಧ್ಯಕ್ಷ ಪ್ರೊ.ನಾಸರ್ ಅಹ್ಮದ್ ಅವರ ಪ್ರಕಾರ ಅವರ ಸಂಸ್ಥೆಯು ಈಗ ವಲಸೆ ಕಾರ್ಮಿಕರು ಮತ್ತು ಅವರ ಕುಟುಂಬಗಳಿಗೆ ಬೇಕಾಗುವ ಪರಿಹಾರ ಕಾರ್ಯದಲ್ಲಿ ನಿರತರಾಗಿದ್ದಾರೆ. ಅವರು ಈಗಾಗಲೇ 10 ಲಕ್ಷ ರೂ.ಗಳಷ್ಟು ದೇಣಿಗೆಯನ್ನು ಸಂಗ್ರಹಿಸಿ, ಅದರಲ್ಲಿ ರೂ. 7.5 ಲಕ್ಷವನ್ನು ರಾಜ್ಯದ ಹೊರಗೆ ಸಿಲುಕಿರುವ ಹಲವಾರು ವಲಸೆ ಕಾರ್ಮಿಕರಿಗೆ ವಿತರಿಸಿದ್ದಾರೆ. ಈಗಾಗೆಲೇ 500 ಕ್ವಿಂಟಾಲ್ ಅಕ್ಕಿ, 200 ಕ್ವಿಂಟಾಲ್ ದಾಲ್ ಖರೀದಿಸಿ ಮಾಲ್ಡಾ ಜಿಲ್ಲೆಯ ಸುಮಾರು 10,000 ಜನರಿಗೆ ತಲಾ ಮೂರು ಕೆ.ಜಿ.ಯಷ್ಟು ನೀಡಲಾಗಿದೆ. ಈಗ ನಡಯುತ್ತಿರುವ ಪರಿಹಾರ ಕಾರ್ಯಗಳನ್ನು ಮುಂದುವರೆಸಲು ಜಿಲ್ಲೆ ಮತ್ತು ಬ್ಲಾಕ್ ಮಟ್ಟದಲ್ಲಿ ಹೆಚ್ಚಿನ ಸಂಪನ್ಮೂಲವನ್ನು ಸಂಗ್ರಹಿಸಲು ಸಂಸ್ಥೆಯ ಸದಸ್ಯರಿಗೆ ಕೇಳಿಕೊಳ್ಳಲಾಗಿದೆ.

ನರೇಂದ್ರ ಮೋದಿ ಸರ್ಕಾರ ದೇಶದ 80 ಕೋಟಿ ಜನರಿಗೆ ಮೂರು ತಿಂಗಳವರೆಗೆ ಉಚಿತ ಪಡಿತರವನ್ನು ನೀಡುವುದಾಗಿ ಘೋಷಿಸಿತು. ಮುಂದಿನ ಮೂರು ತಿಂಗಳವರೆಗೆ 80 ಕೋಟಿ ಜನರಿಗೆ 5 ಕೆಜಿ ಅಕ್ಕಿ ಅಥವಾ ಗೋಧಿ ಮತ್ತು ಅವರಿಗೆ ಇಷ್ಟವಾದ ಒಂದು ಕೆಜಿ ದ್ವಿದಳ ಧಾನ್ಯ ಉಚಿತವಾಗಿ ನೀಡಲಿದೆ ಎಂಬ ಸರ್ಕಾರದ ಪ್ರಕಟಣೆಯನ್ನು ಸುಪ್ರೀಂ ಕೋರ್ಟ್ ಕೂಡ ಶ್ಲಾಘಿಸಿದೆ. ಇದರ ಹಿಂದೆಯೇ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳದ 8.5 ಕೋಟಿ ಜನರಿಗೆ ಉಚಿತ ಪಡಿತರವನ್ನು ಏಪ್ರಿಲ್ 1 ರಿಂದ ಮುಂದಿನ ಆರು ತಿಂಗಳವರೆಗೆ ನೀಡಲಿದೆಯೆಂದು ಪ್ರಕಟಿಸಿದ್ದಾರೆ. ಆದರೆ ಪಡಿತರ ವಿತರಕರು ಈಗಲೂ ಸಹ ಎಲ್ಲಾ ಕಾರ್ಡುದಾರರಿಗೆ 5 ಕೆಜಿ ಬದಲಿಗೆ 2 ಕೆಜಿ ಅಕ್ಕಿ ನೀಡುತ್ತಲಿದೆ. ಹಳೆಯ ಅಥವಾ ಹೊಸದಾದ ಯಾವುದೇ ಪಡಿತರ ಚೀಟಿ ಇಲ್ಲದ ರಾಜ್ಯದ ಇನ್ನೂ 1.5 ರಿಂದ 2 ಕೋಟಿ ಜನರಿಗೆ ತಲುಪಬೇಕಾದ ಆಹಾರ ಕೂಪನ್ಗಳು ತಲುಪದೆ ಇನ್ನೂ ಹಾಗೆ ಉಳಿದಿವೆ.

ಹಳ್ಳಿಗಳಲ್ಲಿನ ಪಡಿತರ ಅಂಗಡಿಗಳಲ್ಲಿ ಪಡಿತರ ಸಂಪೂರ್ಣ ಕೋಟಾ ಲಭ್ಯವಿಲ್ಲದಿರುವುದು ವ್ಯಾಪಾರಿ ಮತ್ತು ಗ್ರಾಹಕರು ನಡುವೆ ದ್ವೇಷಮಯ ಸನ್ನಿವೇಶವನ್ನು ಹುಟ್ಟುಹಾಕಿದೆ. ಕೆಲವು ಜಿಲ್ಲೆಗಳಲ್ಲಿ ಪಡಿತರ ವಿತರಣೆಯ ವಿಷಯದಲ್ಲಿ ನಡೆದ ಅಹಿತಕರ ಘಟನೆಗಳ ನಂತರ 3-4 ವಿತರಕರನ್ನು ಬಂಗಾಳದಲ್ಲಿ ಬಂಧಿಸಲಾಗಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಇಂತಹ ಘಟನೆಗಳಿಂದ ಉದ್ವಿಗ್ನತೆ ಇನ್ನೂ ಹೆಚ್ಚುತ್ತಿದೆ. ನಾವು 2008 ರಲ್ಲಿ ನೋಡಿದಂತೆ ಮತ್ತೊಂದು ಪಡಿತರ-ಗಲಭೆಗೆ ಈ ಘಟನೆಗಳು ನಾಂದಿ ಹಾಡುತ್ತಿವೆಯೇನೋ ಎಂಬ ಅನುಮಾನ ದಟ್ಟವಾಗುತ್ತಿವೆ.

ಆದರೆ ವಲಸೆ ಕಾರ್ಮಿಕರ ಬಗ್ಗೆ ಸುಪ್ರೀಂ ಕೋರ್ಟಿನ ಇತ್ತೀಚಿನ ನಿಲುವು ನ್ಯಾಯಾಂಗದ ಬಗ್ಗೆ ಶಂಕೆಯನ್ನುಂಟು ಮಾಡುವಂತಾಗಿರುವುದು ವಿಷಾದಕರ. ವಿವಿಧ ರಾಜ್ಯಗಳಲ್ಲಿ ಸಿಲುಕಿರುವ ವಲಸೆ ಕಾರ್ಮಿಕರಿಗೆ ಸರ್ಕಾರವೂ ಉಚಿತವಾಗಿ ಆಹಾರವನ್ನು ನೀಡುತ್ತಿರುವುದರಿಂದ ಅವರಿಗೆ ಹಣ ಪಾವತಿಸಬೇಕಾಗಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ, ನ್ಯಾಯಮೂರ್ತಿ ಎಸ್ ಕೆ ಬೈಲ್ ಮತ್ತು ದೀಪಕ್ ಗುಪ್ತಾ ಅವರ ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಭಾರತ ಸರ್ಕಾರವೂ ವಲಸೆ ಕಾರ್ಮಿಕರ ಸ್ಥಿತಿ-ಗತಿಗಳ ಬಗ್ಗೆ ವರದಿಯನ್ನು ಸುಪ್ರೀಂ ಕೋರ್ಟಿಗೆ ಸಲ್ಲಿಸಿದ ನಂತರ ಈ ರೀತಿಯ ತೀರ್ಮಾನವನ್ನು ಕೊಡಲಾಯಿತು.

ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಸಲ್ಲಿಸಿದ ವರದಿಯಲ್ಲಿ ದೇಶಾದ್ಯಂತ ಸರ್ಕಾರವೂ 22,567 ರಷ್ಟು ಆಶ್ರಯ ಮನೆಗಳನ್ನು ಸ್ಥಾಪಿಸಿದೆ ಮತ್ತು ಎನ್.ಜಿ.ಒ.ಗಳಿಂದ 3909 ಆಶ್ರಯ ಮನೆಗಳು ತೆರೆಯಲ್ಪಟ್ಟಿವೆ. ಇವುಗಳನ್ನು ಸೇರಿಸಿ ಒಟ್ಟು 26,476 ಆಶ್ರಯ ಮನೆಗಳು ಈಗ ಕಾರ್ಯೋನ್ಮಕವಾಗಿವೆ ಮತ್ತು ಇದರಲ್ಲಿ ಒಟ್ಟು 10.3 ಲಕ್ಷ ಜನರು ನೆಲೆಸಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ. ಒಟ್ಟಾರೆ 17000 ಆಹಾರ ಶಿಬಿರಗಳಿದ್ದು, ಪ್ರತಿದಿನ ಸುಮಾರು 84 ಲಕ್ಷ ಜನರಿಗೆ ಆಹಾರವನ್ನು ನೀಡಲಾಗುತ್ತಿದೆ. ಅಲ್ಲದೆ 15 ಲಕ್ಷಕ್ಕೂ ಹೆಚ್ಚು ವಲಸೆ ಕಾರ್ಮಿಕರಿಗೆ ಉದ್ಯೋಗ ನೀಡಿರುವ ಉದ್ಯಮಿಗಳು ಮತ್ತು ಕೈಗಾರಿಕೆಗಳಿಂದ ಆಶ್ರಯ ಮತ್ತು ಆಹಾರವನ್ನು ನೀಡಲಾಗುತ್ತಿದೆ. ಹರ್ಷ ಮಂದರ್ ಪರವಾಗಿ ಪ್ರಶಾಂತ್ ಭೂಷನ್ ಸಲ್ಲಿಸಿದ್ದ ಅರ್ಜಿಗೆ ಸ್ಪಂದಿಸಿದ ಸುಪ್ರೀಂ ಕೋರ್ಟ್ ನ್ಯಾಯಪೀಠ, ಕಾರ್ಮಿಕರಿಗೆ ಸರ್ಕಾರ ಆಹಾರವನ್ನು ನೀಡುತ್ತಿರುವುದರಿಂದ ಅವರಿಗೆ ನಗದು ವರ್ಗಾವಣೆ ಮಾಡುವ ಯಾವುದೇ ಆದೇಶವನ್ನು ನೀಡುವ ಅಗತ್ಯ ನ್ಯಾಯಾಲಯವು ಕಾಣುವುದಿಲ್ಲ ಎಂದು ತೀರ್ಮಾನ ಇತ್ತಿತು. ಕಾರ್ಮಿಕರಿಗೆ ತಮ್ಮ ಕುಟುಂಬಕ್ಕೆ ಕಳುಹಿಸಲು/ಕೊಡಲು ಹಣ ಬೇಕು ಎಂದು ಅರ್ಜಿದಾರರು ಮಾಡಿದ ಮನವಿಯನ್ನು ನ್ಯಾಯಾಲಯ ಕಡೆಗಣಿಸಿತು.

 ವಲಸೆ ಕಾರ್ಮಿಕ
ವಕೀಲ ಪ್ರಶಾಂತ್ ಭೂಷನ್
 ವಲಸೆ ಕಾರ್ಮಿಕ
ಸಾಮಾಜಿಕ ಕಾರ್ಯಕರ್ತ ಹರ್ಷ ಮಂದರ್

ಈ ತೀರ್ಪಿನಲ್ಲಿ ಕಡೆಗಣಿಸಲ್ಪಟ್ಟ ಮತ್ತೊಂದು ಸಂಗತಿಯೆಂದರೆ ಸರ್ಕಾರ ಆದೇಶಿಸಿರುವ ಲಾಕ್ಡೌನ್ನ ಕರಿನೆರಳಿನಲ್ಲಿ ನಲುಗುತ್ತಿರುವ ವಲಸೆ ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸಲು ಇದುವರೆಗು ತೆಗೆದುಕೊಂಡಿರುವ ಕ್ರಮಗಳು ಬೆರಳೆಣಿಕೆಯಷ್ಟು ಮಾತ್ರ ಎಂಬ ಸಂಗತಿ. 10.3 ಲಕ್ಷ ವಲಸೆ ಕಾರ್ಮಿಕರನ್ನು ವಸತಿ-ಆಶ್ರಯಗಳಲ್ಲಿ ಇರಿಸಿ, 85 ಲಕ್ಷ ಜನರಿಗೆ ಆಹಾರವನ್ನು ನೀಡಲಾಗುತ್ತಿದೆ. ಈ ಎರಡು ಅಂಕಿಅಂಶಗಳು ಒಂದಕ್ಕೊಂದರ ಮೇಲೆ ಇಲ್ಲವೆಂದು ನಾವು ಪರಿಗಣಿಸಿದರೂ ಅವರ ಉದ್ಯೋಗದಾತರಿಂದ ಆಶ್ರಯ ಪಡೆದು, ಪೋಷಿಸಲ್ಪಟ್ಟಿರುವ ಇನ್ನೂ 15 ಲಕ್ಷ ಕಾರ್ಮಿಕರನ್ನು ಸೇರಿಸಿದರೆ, ಒಟ್ಟಾರೆ ಮೊತ್ತ 110.3 ಲಕ್ಷಗಳು ಅಥವಾ 11 ಮಿಲಿಯನ್ಗಿಂತಲೂ ಕಡಿಮೆ ಬರುತ್ತದೆ. 2011 ರ ಜನಗಣತಿಯ ಪ್ರಕಾರ, ಭಾರತದಲ್ಲಿ 453 ಮಿಲಿಯನ್ ವಲಸಿಗರಿದ್ದಾರೆ. ಮಹಾರಾಷ್ಟ್ರವು ವಲಸೆ ಕಾರ್ಮಿಕರ ಆದ್ಯತೆಯ ತಾಣವಾಗಿದ್ದು ಅಲ್ಲಿ ಈ ವಲಸಿಗರು ಜನಸಂಖ್ಯೆ 20.38% ರಷ್ಟು. ಅಂದರೆ 22.89 ಮಿಲಿಯನ್ ಜನ ಕಾರ್ಮಿಕರು ಇದ್ದಾರೆ. ಪಶ್ಚಿಮ ಬಂಗಾಳದಲ್ಲಿ ವಲಸೆ ಬರುವ ಜನಸಂಖ್ಯೆ 10.33 ಮಿಲಿಯನ್, ದೆಹಲಿಯಲ್ಲಿ 2.9 ಮಿಲಿಯನ್, ತಮಿಳುನಾಡು 12.39 ಮಿಲಿಯನ್, ಕರ್ನಾಟಕ 10.49 ಮಿಲಿಯನ್ನಷ್ಟು.

2011-20ರ ಅವಧಿಯಲ್ಲಿ ಈ ರಾಜ್ಯಗಳಲ್ಲಿ ವಲಸೆ ಬಂದ ಜನಸಂಖ್ಯೆ ಪ್ರಮಾಣ ಧೀರ್ಘಕಾಲದ ಆರ್ಥಿಕ ಬಿಕ್ಕಟ್ಟು ಮತ್ತು ದೇಶದ ನಿರುದ್ಯೋಗದ ಏರಿಕೆಯಿಂದಾಗಿ ಹೆಚ್ಚಾಗಲಿಲ್ಲ ಎಂದು ನಾವು ತಿಳಿದುಕೊಂಡರು ಸಹ, ಹೆಚ್ಚು ಸಂಖ್ಯೆಯ ವಲಸೆ ಕಾರ್ಮಿಕರು ಲಾಕ್ಡೌನಿಂದ ತಪ್ಪಿಸಿಕೊಂಡು ತಮ್ಮ ತವರು ರಾಜ್ಯಗಳಿಗೆ ಧಾವಿಸಿದರು ಎಂದು ತಿಳಿದರೂ ಕೂಡ ಜನಗಣತಿಯ ಅಂಕಿ-ಅಂಶಗಳು ಮತ್ತು ಸರ್ಕಾರದ ಪ್ರಕಾರ ಇರುವ ವಲಸಿಗರ ಸಂಖ್ಯೆಯ ನಡುವಿನ ದೊಡ್ಡ ಅಂತರವನ್ನು ಹೇಗೆ ಅರ್ಥ ಮಾಡಿಕೊಳ್ಳುವುದೆಂದು ತಿಳಿಯುವುದಿಲ್ಲ. ಅಪಾರ ಸಂಖ್ಯೆಯ ವಲಸೆ ಕಾರ್ಮಿಕರು ಅಗೋಚರವಾಗಿ ಉಳಿದಿದ್ದಾರೆ.

ವಲಸೆ ಕಾರ್ಮಿಕರು ಸಾಮಾನ್ಯ ಸಮಯದಲ್ಲಿ ಅಗೋಚರವಾದ ಅಸ್ತಿತ್ವವನ್ನು ಹೊಂದಿದ್ದಾರೆ. ಕರೋನಾ ಪ್ರಚೋದಿತ ಲಾಕ್ಡೌನ್ ಮತ್ತು ಅದರ ಪರಿಣಾಮವಾಗಿ ಉದ್ಭವಿಸಿರುವ ಉದ್ಯೋಗದ ನಷ್ಟವು ಹೆಚ್ಚಿನ ಸಂಖ್ಯೆಯ ವಲಸೆ ಕಾರ್ಮಿಕರು ಈಗ ಗೋಚರಕ್ಕೆ ಬರುವಂತಾಗಿದೆ ಮತ್ತು ಅವರು ತಮ್ಮ ಊರುಗಳಿಗೆ ವಾಪಾಸಾಗುವಂತೆ ಪ್ರಚೋದಿಸಿದೆ.

ಲಾಕ್ಡೌನ್ನ ದೆಸೆಯಿಂದ ರಿಸರ್ವ್ ಮೈಗ್ರೇಶನ್ ಮತ್ತು ಸಾಮಾಜಿಕ ಅಂತರವು ಅವರ ಅಸ್ತಿತ್ಷ/ಇರುವಿಕೆಯನ್ನು ಎರಡು ಬಗೆಯಲ್ಲಿ ಸ್ಪಷ್ಟ ಪಡಿಸುತ್ತದೆ ಎಂದು ಭಾವಿಸಬಹುದು.

  • ಮೊದಲನೆಯದಾಗಿ ನಗರಗಳು ಮತ್ತು ಪಟ್ಟಣಗಳು ತಮ್ಮ ಜೀವನವನ್ನು ಸುಗುಮವಾಗಿ ಸಾಗುವಂತೆ ಮಾಡುವ ಸೇವಾ ಪೂರೈಕೆದಾರರ ಅನುಪಸ್ಥಿತಿಯನ್ನು ಅನುಭವಿಸಿದ್ದು. ಅಸಂಘಟಿತ ಮತ್ತು ಸಂಘಟಿತ ಕ್ಷೇತ್ರಗಳಲ್ಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿಲ್ಲದಿರುವುದು, ಮನೆಗೆಲಸದ ಆಳುಗಳು ಕೆಲಸಕ್ಕೆ ಬರದೆ ಇರುವುದು ನಗರ ವಾಸಿಗಳ ಮೇಲೆ ಅಗಾಧವಾದ ಪರಿಣಾಮ ಬೀರಿದೆ. ಇವರಿಲ್ಲದೆ ಜೀವನ ದುಸ್ತರ ಅನಿಸಿದೆ ಅವರಿಗೆ.
  • ಎರಡನೇಯದಾಗಿ, ನೂರಾರು ಸಾವಿರ ಜನರು ಹೆದ್ದಾರಿಗಳಲ್ಲಿ ಮೈಲುಗಳಷ್ಟು ನಡೆದು ತಮ್ಮ ದೂರದ ಮನೆಗಳನ್ನು ತಲುಪಲು ಪ್ರಯತ್ನಿಸುತ್ತಿರುವ ದೃಶ್ಯ ಮತ್ತು ದಾರಿ ಮಧ್ಯದಲ್ಲಿ ಕೆಲವರ ನಿಧನದ ಸಂಗತಿಗಳು ವಲಸೆ-ಕಾರ್ಮಿಕರ ಅಸ್ತಿತ್ವವನ್ನು ನಮ್ಮೆಲ್ಲರ ಗೋಚರಕ್ಕೆ ತಂದಿದೆ.

ಆರಂಭದಲ್ಲಿ ಕೇಂದ್ರ ಸರ್ಕಾರವೂ ತೋರಿಸಿದ ಕಠೋರ ಉದಾಸೀನತೆಯು ಮುಖ್ಯವಾಹಿನಿಯ ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮಗಳ ಕೆಂಗಣ್ಣಿಗೆ ಗುರಿಯಾದ ಮೇಲೆ ಮತ್ತು ಈ ಮಾಧ್ಯಮಗಳೂ ಅದೃಷ್ಟಹೀನ ಜನರ ದುಃಸ್ಥಿತಿಯ ಬಗ್ಗೆ ತೀವ್ರ ಗಮನ ಹರಿಸಿದಾಗ, ಪರಿಸ್ಥಿತಿಯನ್ನು ತಿಳಿಗೊಳಿಸಲು ಸರ್ಕಾರವೂ ಕೆಲವು ಕ್ರಮಗಳನ್ನು ತೆಗೆದುಕೊಳ್ಳುವಷ್ಟರ ಮಟ್ಟಿಗೆ ಒತ್ತಡಕೊಳ್ಳಗಾಯಿತು. ತತ್ಪರಿಣಾಮವಾಗಿ ವಲಸೆ-ಕಾರ್ಮಿಕರಿಗೆ ಆಶ್ರಯ ಮತ್ತು ಆಹಾರವನ್ನು ನೀಡಲಾಗುವುದೆಂದು ಸರ್ಕಾರವು ಘೋಷಿಸಿತು. ಇದಕ್ಕೂ ಮುನ್ನ ಮುಖ್ಯಮಂತ್ರಿಯೊಬ್ಬರು (ತೆಲಂಗಾಣದವರು) ಹೆದ್ದಾರಿಗಳಲ್ಲಿ ವಲಸೆ-ಕಾರ್ಮಿಕರು ಅಧಿಕ ಸಂಖ್ಯೆಯಲ್ಲಿ ಕಾಣಿಸಿಕೊಳ್ಳದಂತೆ ತಡೆಯಲು ‘ಕಂಡಲ್ಲಿ ಗುಂಡಿಕ್ಕಿ’ ಆದೇಶ ಹೊರಡಿಸುವುದಾಗಿ ಬೆದರಿಕೆ ಹಾಕಿದರು. ಕೆಲವು ಸ್ಥಳಗಳಲ್ಲಿ ಪೊಲೀಸರು ವಲಸೆ-ಕೆಲಸಗಾರರ ಮೇಲೆ ಲಾಠಿಗಳನ್ನು ಚಲಾಯಿಸಿದರು.

ಸಾಮಾನ್ಯ ಪೊಲೀಸ್ ಕಾನ್ಸ್ಟೆಬಲ್ ಯಾವುದೇ ಮುಲಾಜಿಲ್ಲದೆ ನತದೃಷ್ಟ ಕಾರ್ಮಿಕರ ಮೇಲೆ ಲಾಠಿಯನ್ನು ಬೀಸುವುದು, ಸುಪ್ರೀಂ ಕೋರ್ಟ್ ಪೀಠವು ಕಾರ್ಮಿಕರಿಗೆ ದಿನಕ್ಕೆ ಎರಡು ಬಾರಿ ಆಹಾರ ನೀಡಿದರೆ ಸಾಕು, ಅವರಿಗೆ ಹಣ ಪಾವತಿಸಬೇಕಾಗಿಲ್ಲ ಎಂದು ತೀರ್ಮಾನಿಸಿರುವುದು ಒಂದೇ ಆಧಾರದ ಮೇಲೆ ನಿಂತಿವೆ: ವಲಸೆ ಕಾರ್ಮಿಕರ ಅಸ್ತಿತ್ವವು ಸುರಕ್ಷಿತ ಸಮಾಜಕ್ಕೆ ಸಂಬಂಧಿಸಿದಲ್ಲ; ಜೊತೆಗೆ ಅವರು ‘ಗೆದ್ದಲುಗಳಂತೆ’ ವ್ಯವಸ್ಥೆಯನ್ನು ಒಳಗೊಳಗೆ ತಿನ್ನುವ ಜೀವಿಗಳು ಎಂಬ ಕಳವಳಕಾರಿ ಭಾವನೆ.

ವಲಸೆ-ಕಾರ್ಮಿಕರ ಬಗ್ಗೆ ಮತ್ತೊಂದು ವಿಚಾರ ಚಾಲ್ತಿಯಲ್ಲಿದೆ: ಅವರು ಬೇರೆ ರಾಜ್ಯಗಳಿಗೆ ಕೆಲಸವನ್ನು ಹುಡುಕಿಕೊಂಡು ವಲಸೆ ಹೋಗುವುದರಿಂದ ಅವರನ್ನು ಬರಮಾಡಿಕೊಳ್ಳುವ ಆತಿಥೇಯ ದೇಶ ಅಥವಾ ರಾಜ್ಯದಲ್ಲಿ ಅಲ್ಲಿನ ಜನರ ಉದ್ಯೋಗಾವಕಾಶಕ್ಕೆ ಕುತ್ತು ಉಂಟಾಗಿದೆ ಎಂಬ ಅಭಿಮತ. ಇಂತಹ ವಿಚಾರಗಳಿಗೆ ಸಂಬಂಧಿಸಿದಂತೆ ಅಭಿಜಿತ್ ವಿನಾಯಕ್ ಬ್ಯಾನರ್ಜಿ ಮತ್ತು ಎಸ್ತರ್ ಡುಫ್ಲೋ ತಮ್ಮ ‘ಗುಡ್ ಎಕಾನಮಿ ಫಾರ್ ಹಾರ್ಡ್ ಟೈಮ್ಸ್’ ಪುಸ್ತಕದಲ್ಲಿ ವಲಸೆ-ಕಾರ್ಮಿಕರ ಬಗ್ಗೆ ಇರುವ ಅನೇಕ ಮಿಥ್ಯೆಗಳನ್ನು ಬಯಲಿಗೆಳೆದಿದ್ದಾರೆ. ಅವರು ವಾದಿಸುವ ಪ್ರಕಾರ ‘ಸತ್ಯ ನಂಬಿಕೆಗೆ ತದ್ವಿರುದ್ಧವಾಗಿದೆ’. ಕರೋನಾ ಸಾಂಕ್ರಾಮಿಕ ಸಮಯದಲ್ಲಿ ವಲಸೆ-ಕಾರ್ಮಿಕರು ನಮ್ಮ ಕಣ್ಣಿಗೆ ಕಾಣಿಸಿಕೊಂಡಿದ್ದಾರೆ. ಆದರೆ ಅವರ ದನಿ ಯಾರ ಗಮನಕ್ಕು ಬಂದಿಲ್ಲ. ಅದಿನ್ನೂ ಮೂಕವಾಗಿಯೇ ಇದೆ.


ಇದನ್ನೂ ಓದಿ: ಎನ್‌ಆರ್‌ಐಗಳಂತೆ ವಲಸೆ ಕಾರ್ಮಿಕರು ಮನುಷ್ಯರಲ್ಲವೇ? ಸರ್ಕಾರದಿಂದ ಈ ತಾರತಮ್ಯವೇತಕೆ?


ವಿಡಿಯೊ ನೋಡಿ: ನಮ್ಮ ನಾನು ಗೌರಿ ಯೂಟ್ಯೂಬ್ ಚಾನೆಲ್ ನಲ್ಲಿ


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಮೇಥಿಯಲ್ಲಿ ‘ಅಬ್ ಕಿ ಬಾರ್ ರಾಬರ್ಟ್ ವಾದ್ರಾ’ ಪೋಸ್ಟರ್; ಪ್ರಿಯಾಂಕಾ ಪತಿ ಸ್ಪರ್ಧೆಗೆ ಹೆಚ್ಚಿದ...

0
2019ರ ಲೋಕಸಭಾ ಚುನಾವಣೆ ಸೋಲಿನ ನಂತರ ರಾಹುಲ್ ಗಾಂಧಿ ತಮ್ಮ ಕ್ಷೇತ್ರವನ್ನು ಅಮೇಥಿಯಿಂದ ಕೇರಳದ ವಯನಾಡಿಗೆ ಸ್ಥಳಾಂತರಿಸಿದ್ದಾರೆ. ಆದರೆ, ಬಿಜೆಪಿ ಹಾಲಿ ಸಂಸದೆ ಸ್ಮೃತಿ ಇರಾನಿ ವಿರುದ್ಧ ಸ್ಪರ್ಧಿಸುವ ಕಾಂಗ್ರೆಸ್ ಅಭ್ಯರ್ಥಿ ಯಾರು...