Homeಮುಖಪುಟಎನ್‌ಆರ್‌ಐಗಳಂತೆ ವಲಸೆ ಕಾರ್ಮಿಕರು ಮನುಷ್ಯರಲ್ಲವೇ? ಸರ್ಕಾರದಿಂದ ಈ ತಾರತಮ್ಯವೇತಕೆ?

ಎನ್‌ಆರ್‌ಐಗಳಂತೆ ವಲಸೆ ಕಾರ್ಮಿಕರು ಮನುಷ್ಯರಲ್ಲವೇ? ಸರ್ಕಾರದಿಂದ ಈ ತಾರತಮ್ಯವೇತಕೆ?

ಎನ್‌ಆರ್‌ಐಗಳನ್ನು ಉಚಿತವಾಗಿ ವಿಶೇಷ ವಿಮಾನದ ಮೂಲಕ ರಕ್ಷಣೆ ಮಾಡಿ ಭಾರತಕ್ಕೆ ಕರೆತರುವ ಕೇಂದ್ರ ಸರ್ಕಾರಕ್ಕೆ ನಮ್ಮದೇ ದೇಶದ ವಲಸೆ ಕಾರ್ಮಿಕರ ಪ್ರಯಾಣ ದರ ದುಬಾರಿಯೇ?

- Advertisement -
- Advertisement -

ನಮ್ಮ ನೆರೆ ರಾಜ್ಯ ಕೇರಳದಲ್ಲಿ ಬೇರೆ ಜಿಲ್ಲೆ ಮತ್ತು ಇತರೆ ರಾಜ್ಯಗಳಿಂದ ಆಗಮಿಸಿದ ಕಾರ್ಮಿಕರನ್ನು ಅತಿಥಿಗಳು ಎಂದು ಭಾವಿಸಲಾಗುತ್ತದೆ. ಅಗತ್ಯವಾದ ಎಲ್ಲಾ ವಸ್ತುಗಳನ್ನು ನೀಡಿ ಉಚಿತ ಬಸ್ಸು ಮತ್ತು ರೈಲು ಸೇವೆಯನ್ನು ಕಲ್ಪಿಸುವ ಮೂಲಕ ಎಲ್ಲಾ ಕಾರ್ಮಿಕರನ್ನೂ ಗೌರವಾದರಗಳಿಂದ ಅವರವರ ರಾಜ್ಯಗಳಿಗೆ-ಜಿಲ್ಲೆಗಳಿಗೆ ಕಳುಹಿಸಿಕೊಡಲಾಗುತ್ತದೆ. ಆದರೆ, ಕರ್ನಾಟಕದಲ್ಲಿ ಮಾತ್ರ ಎಲ್ಲಕ್ಕೂ ಕಾಸು ಕಾಸು ಕಾಸು..!

ಬೆಂಗಳೂರಿನಂತಹ ಇಡೀ ಮಹಾನಗರವನ್ನು ನಿರ್ಮಿಸಿದವರು ಕಟ್ಟಡ ಕಾರ್ಮಿಕರಲ್ಲದೆ ಇನ್ಯಾರೂ ಇಲ್ಲ. ಅಂದವಾದ ವಿಧಾನಸೌಧದಿಂದ ದಿವಂಗತ ನಟ ರಾಜಕುಮಾರ್ ಸಮಾಧಿಯವರೆಗೆ ಎಲ್ಲೆಡೆ ಅವರ ಶ್ರಮ ಮತ್ತು ಬೆವರಿದೆ. ಆದರೆ, ಕಳೆದ ಒಂದೂವರೆ ತಿಂಗಳಿಂದ ಮಹಾನಗರದಲ್ಲಿ ಇಂತಹ ಕೂಲಿ ಕಾರ್ಮಿಕರ ಪಾಡು ಅಕ್ಷರಶಃ ಯಾರಿಗೂ ಬೇಡದಂತಾಗಿದೆ. ಈ ಎರಡು ಮೂರು ದಿನಗಳಿಂದ ರಾಜ್ಯ ಸರ್ಕಾರ ಈ ಕಾರ್ಮಿಕರನ್ನು ತೀರಾ ಹತಾಶರನ್ನಾಗಿಸಿಬಿಟ್ಟಿದೆ ಎಂದರೆ ತಪ್ಪಾಗಲಾರದು.

ಸಾಮಾನ್ಯವಾಗಿ ಬೆಂಗಳೂರು ಎಲ್ಲಾ ಬಗೆಯ ಜನರಿಂದ ಕೂಡಿರುವ ನಗರ. ಇಲ್ಲಿ ಕಟ್ಟಡ ಕೆಲಸಕ್ಕೆಂದೆ ದೂರದ ಬಿಹಾರ, ಉತ್ತರಪ್ರದೇಶ ಮಾತ್ರವಲ್ಲ. ನಮ್ಮ ಉತ್ತರ ಕರ್ನಾಟಕದ ರಾಯಚೂರು, ಬೀದರ್, ಕೊಪ್ಪಳ, ಬಳ್ಳಾರಿ, ಕಲಬುರಗಿಯಿಂದ ಲಕ್ಷಾಂತರ ಜನ ಬಂದು ಈ ಮಹಾನಗರದ ಹತ್ತಾರು ಸ್ಲಂಗಳಲ್ಲಿ ನೆಲೆ ಕಂಡುಕೊಂಡಿದ್ದಾರೆ.

ಒಂದು ಅಂದಾಜಿನ ಪ್ರಕಾರ ರಾಜ್ಯದಾದ್ಯಂತ ಸುಮಾರು 50 ಲಕ್ಷಕ್ಕೂ ಅಧಿಕ ಕಟ್ಟಡ ಕಾರ್ಮಿಕರಿದ್ದಾರೆ. ಆದರೆ, ನೋಂದಾಯಿಸಿಕೊಂಡಿರುವವರು ಕೇವಲ 15.80 ಲಕ್ಷ ಜನ ಮಾತ್ರ. ಬೆಂಗಳೂರಿನಲ್ಲೇ ಸುಮಾರು 08 ರಿಂದ 10 ಲಕ್ಷ ಜನ ಕಟ್ಟಡ ಕಾರ್ಮಿಕರಿದ್ದಾರೆ ಎಂದು ಅಂದಾಜಿಸಲಾಗಿದೆ. ಇದಲ್ಲದೆ, ನಾನಾ ಕೆಲಸಕ್ಕೆಂದು ಹೊರ ಜಿಲ್ಲೆ ಮತ್ತು ರಾಜ್ಯಗಳಿಂದ ಇಲ್ಲಿಗೆ ಆಗಮಿಸಿರುವ ಜನರ ಸಂಖ್ಯೆ ಅಗಣಿತ.

ಇಂತಹ ಪರಿಸ್ಥಿತಿಯಲ್ಲಿ ಅದೊಂದು ದಿನ ರಾತ್ರಿ ಟಿವಿ ಪರದೆಯಲ್ಲಿ ಕಾಣಿಸಿಕೊಂಡ ಪ್ರಧಾನಿಯವರು ಯಾವುದೇ ಪೂರ್ವ ಸಿದ್ಧತೆ ಇಲ್ಲದೆ, ವಲಸೆ ಕಾರ್ಮಿಕರನ್ನು ಅವರವರ ಊರಿಗೆ ಕಳುಹಿಸಿಕೊಡುವ ಕನಿಷ್ಟ ಜವಾಬ್ದಾರಿಯೂ ವಹಿಸದೆ ಏಕಾಏಕಿ ರಾತ್ರೋರಾತ್ರಿ ಲಾಕ್ಡೌನ್ ಘೋಷಿಸಿಬಿಟ್ಟರು. ಮರುದಿನದಿಂದ ಈ ಕಾರ್ಮಿಕ ವರ್ಗದ ಜನರಿಗೆ ಕೆಲಸ ಇಲ್ಲ, ಕೂಲಿ ಇಲ್ಲ, ಅತ್ತ ಊಟವೂ ಇಲ್ಲ. ಹೀಗೆ ಇಲ್ಲಗಳ ನಡುವೆಯೇ ಕಳೆದು ಹೋಯ್ತು ಬರೋಬ್ಬರಿ 45 ದಿನ.

ಕಳೆದ 45 ದಿನಗಳಲ್ಲಿ ಬೆಂಗಳೂರಿನಂತಹ ಮಹಾನಗರಗಳಲ್ಲಿ ಸಿಲುಕಿಕೊಂಡ ವಲಸೆ ಕಾರ್ಮಿಕರು ತಿನ್ನಲು ಅನ್ನವೂ ಇಲ್ಲದ ಸಂಕಷ್ಟದ ನಡುವೆ ದಿನದೂಡಿದ್ದಾರೆ. ಹಲವಾರು ಕಾರ್ಮಿಕರು ಬಸ್ಸು ರೈಲು ವ್ಯವಸ್ಥೆ ಇಲ್ಲದೆ ತಮ್ಮ ಊರಿಗೆ ನೂರಾರು ಕಿಮೀ ನಡೆದೇ ತೆರಳಲು ಮುಂದಾಗಿದ್ದಾರೆ. ಈ ವೇಳೆ ಹಲವಾರು ಜನರು ಮಾರ್ಗ ಮಧ್ಯೆಯೇ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದ ಪ್ರಕರಣಗಳೂ ಸಾಕಷ್ಟು ವರದಿಯಾಗಿವೆ.

ದೆಹಲಿಯಿಂದ ಸಾಗರೋಪಾದಿಯಲ್ಲಿ ಜನ ಕಾಲ್ನಡಿಗೆಯಲ್ಲೇ ಬಿಹಾರ ಮತ್ತು ಉತ್ತರಪ್ರದೇಶಕ್ಕೆ ತೆರಳಿದ್ದ ದೃಶ್ಯಗಳನ್ನು ಭಾರತೀಯರು ಮರೆತಿರಲಿಕ್ಕಿಲ್ಲ. ಆದರೆ, ಆಗಲೂ ಸರ್ಕಾರಕ್ಕೆ ಕಾರ್ಮಿಕರ ಮೇಲೆ ಕರುಣೆ ಮೂಡಿರಲಿಲ್ಲ.

ಈ ನಡುವೆ ಪರಿಸ್ಥಿತಿ ದಿನೇ ದಿನೇ ಬಿಗಡಾಯಿಸುತ್ತಿದ್ದಂತೆ ಕಾರ್ಮಿಕರು ಸರ್ಕಾರದ ವಿರುದ್ಧ ದಂಗೆ ಏಳುತ್ತಾರೆ ಎನಿಸಿತೋ ಏನೋ, ಕೇಂದ್ರ ಸರ್ಕಾರ ವಲಸೆ ಕಾರ್ಮಿಕರನ್ನು ಅವರವರ ತವರಿಗೆ ಕಳುಹಿಸಲು ಹಸಿರು ನಿಶಾನೆ ನೀಡಿತ್ತು. ಹಸಿವಿನಿಂದ ಕಂಗೆಟ್ಟಿದ್ದ ಕಾರ್ಮಿಕರು ಸಹ ತಮ್ಮ ಮನೆಗಳಿಗೆ ಹಿಂದಿರುಗುವ ಸಂತೋಷದಲ್ಲಿದ್ದರು. ಆದರೆ, ಕೇಂದ್ರ ಸರ್ಕಾರದ ಈ ಹಸಿರು ನಿಶಾನೆಯ ಬೆನ್ನಿಗೆ ಇಡೀ ದೇಶ ಮತ್ತು ಕರ್ನಾಟಕದಲ್ಲಿ ನಡೆದದ್ದು ಮಾತ್ರ ಅತ್ಯಂತ ಅಮಾನವೀಯ ಮತ್ತು ಹೇಯಕರ ಬೆಳವಣಿಗೆ.

ಕಾರ್ಮಿಕರ ಬಳಿಯೇ ಸುಲಿಗೆ ಸರಿಯೇ?

ವಲಸೆ ಕಾರ್ಮಿಕರನ್ನು ಅವರವರ ರಾಜ್ಯ ಮತ್ತು ಜಿಲ್ಲೆಗಳಿಗೆ ಕಳುಹಿಸಲು ಎಲ್ಲಾ ರಾಜ್ಯದಂತೆ ಕರ್ನಾಟಕದಲ್ಲೂ ವಿಶೇಷ ರೈಲು ಮತ್ತು ಬಸ್ಸಿನ ವ್ಯವಸ್ಥೆ ಮಾಡಲಾಗಿತ್ತು. ಆದರೆ, ದುರಾದೃಷ್ಟವಶಾತ್ ಸರ್ಕಾರ ಬಡ ಕಾರ್ಮಿಕರಿಂದಲೇ ಮೂರು ಪಟ್ಟು ಹಣ ಪೀಕಲು ಮುಂದಾಗಿತ್ತು. ಸಾರಿಗೆ ಸಚಿವ ಲಕ್ಷ್ಮಣಸವದಿ ಸಹ ಈ ನಡೆಯನ್ನು ಸಮರ್ಥಿಸಿಕೊಂಡಿದ್ದರು.

ಕರ್ನಾಟಕ ರಸ್ತೆ ಸಾರಿಗೆ ನಷ್ಟದಲ್ಲಿದೆ, ಕಾರ್ಮಿಕರನ್ನು ಅವರವರ ಊರಿಗೆ ತಲುಪಿಸಿದ ನಂತರ ಬಸ್ಸುಗಳು ವಾಪಸ್ ಖಾಲಿಯಾಗಿ ಹಿಂದಿರುಗುತ್ತದೆ. ಹೀಗಾಗಿ ಪ್ರಯಾಣ ದರವನ್ನು ಏರಿಸಲಾಗಿದೆ ಎಂಬುದು ರಾಜ್ಯ ಸರ್ಕಾರದ ವಾದವಾಗಿತ್ತು. ಆದರೆ, ಕಳೆದ ಒಂದೂವರೆ ತಿಂಗಳಿನಿಂದ ಲಾಕ್ಡೌನ್‌ನಿಂದಾಗಿ ಕೆಲಸ ಕೂಲಿ ಇಲ್ಲದೆ ಸಂಕಷ್ಟಕ್ಕೆ ಒಳಗಾಗಿರುವ ಕಾರ್ಮಿಕ ಈ ದುಬಾರಿ ಪ್ರಯಾಣ ದರವನ್ನು ಎಲ್ಲಿಂದ ಹೇಗೆ ನೀಡಬೇಕು?

ಸಾಮಾನ್ಯವಾಗಿ ಕಟ್ಟಡ ಕಾರ್ಮಿಕರು ತಮ್ಮ ಇಡೀ ಕುಟುಂಬದ ಜೊತೆಗೆ ನಗರಗಳಲ್ಲಿ ನೆಲೆಸಿರುತ್ತಾರೆ. ಇವರೆಲ್ಲರೂ ತಮ್ಮ ಊರುಗಳಿಗೆ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಪ್ರಯಾಣ ಬೆಳೆಸಬೇಕು ಎಂದರೆ ಒಂದು ಕುಟುಂಬಕ್ಕೆ ಕನಿಷ್ಟ 10,000 ರೂ. ಪಾವತಿ ಮಾಡಬೇಕಾಗುತ್ತದೆ. ಊಟವೇ ಇಲ್ಲದೆ ಹಸಿದ ಹೊಟ್ಟೆಯಲ್ಲಿ ದಿನದೂಡುತ್ತಿರುವ ಕಾರ್ಮಿಕರು ಇಷ್ಟು ಮೊತ್ತದ ಹಣವನ್ನು ಎಲ್ಲಿಂದ ತರಬೇಕು? ಇಷ್ಟಕ್ಕೂ ಕಾರ್ಮಿಕರನ್ನು ಉಚಿತವಾಗಿ ಅವರವರ ಮನೆಗೆ ಕಳುಹಿಸಬೇಕಿರುವುದು ಸರ್ಕಾರದ ಕರ್ತತ್ಯವಲ್ಲವೇ?

ಕಾರ್ಮಿಕರಿಗೆ ರೈಲು ಬಸ್ಸು ರಾಜಕೀಯ

ಕಾರ್ಮಿಕರನ್ನು ಅವರವರ ಊರುಗಳಿಗೆ ಕಳುಹಿಸಲು ಸರ್ಕಾರ ದುಬಾರಿ ಪ್ರಯಾಣ ದರ ವಿಧಿಸಿದೆ ಎಂಬ ಸುದ್ದಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಲು ಆರಂಭಿಸುತ್ತಿದ್ದಂತೆ, ವಿರೋಧ ಪಕ್ಷವಾದ ಕಾಂಗ್ರೆಸ್ ಕೊನೆಗೂ ಎಚ್ಚೆತ್ತು ಬೀದಿಗೆ ಇಳಿದಿತ್ತು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾಜಿ ಸಿಎಂ ಸಿದ್ದರಾಮಯ್ಯ ಕಳೆದ ಭಾನುವಾರ ನೇರಾವಾಗಿ ಮೆಜೆಸ್ಟಿಕ್‌ಗೆ ಆಗಮಿಸಿ ತಮ್ಮ ಪ್ರತಿಭಟನೆಯನ್ನು ದಾಖಲಿಸಿದ್ದರು.

ರಾಜ್ಯ ಸರ್ಕಾರದ ನಡೆಯನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್ ಕಾರ್ಮಿಕರ ಬಸ್ ವೆಚ್ಚವನ್ನು ತಾವೇ ಭರಿಸುವುದಾಗಿ ಹೇಳಿಕೆ ನೀಡಿದರು. ಅಲ್ಲದೆ, 1 ಕೋಟಿ ಮೊತ್ತದ ಚೆಕ್ ಅನ್ನು ಸಾರಿಗೆ ಇಲಾಖೆಗೆ ನೀಡುತ್ತೇವೆಂದು ಹೇಳುವ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದರು.

ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, “ಕಾರ್ಮಿಕರಿಂದ ಹೀಗೆ ಹಣ ಪಡೆದು ಪ್ರಯಾಣಕ್ಕೆ ಅನುವು ಮಾಡಿಕೊಡುವುದು ಸರಿಯಲ್ಲ. ಹೀಗಾಗಿ ಕಾಂಗ್ರೆಸ್ ಇಡೀ ದೇಶದಾದ್ಯಂತ ಎಲ್ಲಾ ಕಾರ್ಮಿಕರ ರೈಲು ಪ್ರಯಾಣ ದರ ಭರಿಸಲು ಸಿದ್ದವಿದೆ” ಎಂದು ತಿಳಿಸಿದ್ದರು. ಅಲ್ಲದೆ, ಇದಕ್ಕೆ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಎಲ್ಲಾ ರಾಜ್ಯದ ಕಾಂಗ್ರೆಸ್ ಘಟಕಗಳಿಗೆ ಸೂಚನೆ ನೀಡಿದ್ದರು.

ಕಾರ್ಮಿಕರ ಪ್ರಯಾಣ ದರ ವಿಚಾರ ರಾಷ್ಟ್ರ ಮಟ್ಟದಲ್ಲಿ ದೊಡ್ಡ ಮಟ್ಟದ ವಾದ-ವಿವಾದಕ್ಕೆ ಕಾರಣವಾಗುತ್ತಿದ್ದಂತೆ ಎಚ್ಚೆತ್ತ ರಾಜ್ಯ ಸರ್ಕಾರ ಕೊನೆಗೂ ಉತ್ತರ ಕರ್ನಾಟಕ ಭಾಗದ ಕಾರ್ಮಿಕರನ್ನು ಉಚಿತವಾಗಿ ಅವರವರ ಮನೆಗೆ ತಲುಪಿಸಲು ಮುಂದಾಯಿತು. ಪ್ರಕರಣದ ಮಧ್ಯ ಪ್ರವೇಶಿಸಿದ ಸಿಎಂ ಬಿ.ಎಸ್.ಯಡಿಯೂರಪ್ಪ ಉಚಿತ ಬಸ್ ವ್ಯವಸ್ಥೆ ನೀಡುವುದಾಗಿ ಘೋಷಿಸಿದ್ದರು. ಆದರೆ, ಹೊರ ರಾಜ್ಯದ ಕಾರ್ಮಿಕರಿಂದ ಈಗಲೂ ರೈಲಿನ ಪ್ರಯಾಣ ದರವನ್ನು ಸಂಗ್ರಹಿಸುತ್ತಿರುವುದು ವಿಪರ್ಯಾಸ.

ಎನ್‌ಆರ್‌ಐಗಳಿಗೆ ನೀಡುವ ಸವಲತ್ತು ಕಾರ್ಮಿಕರಿಗೆ ಏಕಿಲ್ಲ?

ಕಳೆದ 6 ವರ್ಷದ ಅವಧಿಯಲ್ಲಿ ಸಿರಿಯಾ ಯುದ್ಧದಲ್ಲಿ ಸಿಲುಕಿಕೊಂಡಿದ್ದವರಿಂದ ಹಿಡಿದು, ವಿದೇಶದಲ್ಲಿ ಪ್ರಕೃತಿ ವಿಕೋಪಕ್ಕೆ ಸಿಲುಕಿಕೊಂಡಿದ್ದವರವರೆಗೆ ಲಕ್ಷಾಂತರ ಜನರನ್ನು ಭಾರತ ವಿದೇಶಾಂಗ ಸಚಿವಾಲಯ ರಕ್ಷಿಸಿ ಭಾರತಕ್ಕೆ ಕರೆತಂದಿದೆ. ಕೊರೋನಾ ಭೀತಿಯಲ್ಲಿ ಮೊನ್ನೆ ಮೊನ್ನೆ ಇಟಲಿ ಮತ್ತು ಅರಬ್ ದೇಶಗಳಲ್ಲಿ ಸಿಲುಕಿಕೊಂಡಿದ್ದ ಭಾರತೀಯರನ್ನೂ ಸಹ ಕೇಂದ್ರ ಸರ್ಕಾರ ರಕ್ಷಣೆ ಮಾಡಿದೆ.

ಕಳೆದ ಫೆಬ್ರವರಿ ತಿಂಗಳಲ್ಲಿ ಸಂಸತ್‌ನಲ್ಲಿ ವಿದೇಶಾಂಗ ಖಾತೆ ಸಹಾಯಕ ಸಚಿವ ವಿ.ಕೆ.ಸಿಂಗ್ ನೀಡಿರುವ ಹೇಳಿಕೆ ಪ್ರಕಾರ ಕಳೆದ ಎರಡು ವರ್ಷದಲ್ಲಿ ವಿದೇಶದಲ್ಲಿ, ಆಂತರಿಕ ಕಲಹ, ನೈಸರ್ಗಿಕ ವಿಕೋಪ ಹಾಗೂ ಯುದ್ಧ ಪೀಡಿತ ಸನ್ನಿವೇಶಗಳಲ್ಲಿ ಸಿಲುಕಿಕೊಂಡಿದ್ದ ಸುಮಾರು 2 ಲಕ್ಷ ಭಾರತೀಯರನ್ನು ರಕ್ಷಣೆ ಮಾಡಲಾಗಿದೆ. ವಿಶೇಷ ವಿಮಾನಗಳ ಮೂಲಕ ಲಕ್ಷಾಂತರ ಭಾರತೀಯರನ್ನು ವಾಪಾಸ್ ದೇಶಕ್ಕೆ ಕರೆತರಲಾಗಿದೆ. ಅವರ ನೆಮ್ಮದಿಯ ಬದುಕಿಗೆ ಅನುವು ಮಾಡಿಕೊಡಲಾಗಿದೆ.

ಇದು ನಿಜಕ್ಕೂ ಪ್ರಶಂಸೆಗೆ ಅರ್ಹವಾದ ಕೆಲಸ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶ ಎಂದರೆ, ವಿದೇಶದಿಂದ ರಕ್ಷಣಾ ಕಾರ್ಯಾಚರಣೆ ಮೂಲಕ ವಿಶೇಷ ವಿಮಾನದಲ್ಲಿ ಭಾರತಕ್ಕೆ ಕರೆತಂದ ಯಾವ ಎನ್‌ಆರ್‌ಐಗಳ ಬಳಿಯೂ ಕೇಂದ್ರ ಸರ್ಕಾರ ಒಂದು ನಯಾ ಪೈಸೆೆಯನ್ನೂ ವಸೂಲಿ ಮಾಡಿಲ್ಲ. ಈ ಎಲ್ಲಾ ರಕ್ಷಣಾ ಕಾರ್ಯಾಚರಣೆಯೂ ಉಚಿತ ಮತ್ತು ಸಂಪೂರ್ಣ ಉಚಿತ ಎಂಬುದು ಉಲ್ಲೇಖಾರ್ಹ.

ಆದರೆ, ನಮ್ಮದೇ ದೇಶದ ವಲಸೆ ಕಾರ್ಮಿಕರನ್ನು ಅವರವರ ಊರಿಗೆ ತಲುಪಿಸಲು ಕೇಂದ್ರ ಸರ್ಕಾರ ರೈಲಿನ ಪ್ರಯಾಣ ದರವನ್ನು ವಸೂಲಿ ಮಾಡಬೇಕೆ? ಅದು ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಎಂಬುದು ಹಲವರ ಅಭಿಪ್ರಾಯ.

ಅಲ್ಲದೆ, ಕಾರ್ಮಿಕರ ಪ್ರಯಾಣ ದರವನ್ನು ಕೇಂದ್ರ ಸರ್ಕಾರ ಪಿಎಂ ಕೇರ್ಸ್ನಿಂದ ನೀಡುವಂತೆಯೂ ಹಲವರು ಆಗ್ರಹಿಸಿದ್ದರು. ಆದರೆ, ಕೇಂದ್ರ ಸರ್ಕಾರ ಈವರೆಗೆ ರೈಲಿನ ಪ್ರಯಾಣ ದರವನ್ನು ವಸೂಲಿ ಮಾಡುತ್ತಲೇ ಇದೆ ಎಂಬುದು ವಿಷಾಧನೀಯ.

ಪಿಎಂ ಕೇರ್ (PM CARES) ಹಣ ಎಲ್ಲಿ?

ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಏನೇ ವಿಕೋಪಗಳು ಸಂಭವಿಸಿದರೂ ಸಹ ಜನ ಸಾಮಾನ್ಯರು ದೇಣಿಗೆ ನೀಡಲು ಮುಖ್ಯಮಂತ್ರಿ ಮತ್ತು ಪ್ರಧಾನಮಂತ್ರಿ ಹೆಸರಿನಲ್ಲಿ ರಿಲೀಫ್ ಫಂಡ್ ಖಾತೆ ಇದೆ. ಆದರೆ, ಕೊರೋನಾ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿಶೇಷವಾಗಿ Pಒ ಅಂಖಇS ಎಂಬ ಖಾತೆಯನ್ನು ಆರಂಭಿಸಿದ್ದರು.

ಈ ಖಾತೆಗೆ ಈವರೆಗೆ ಸುಮಾರು 33,000 ಕೋಟಿ ರೂ. ಹಣ ಸಂದಾಯವಾಗಿದೆ. ದೇಶ ವಿದೇಶದ ನಾನಾ ಮೂಲೆಯಿಂದ ಜನ ಪಿಎಂ ಕೇರ್ಸ್ಗೆ ಹಣ ತುಂಬಿದ್ದಾರೆ. ಆದರೆ, ಈ ಹಣವನ್ನು ಹೇಗೆ ಮತ್ತು ಯಾವ ರೀತಿಯಲ್ಲಿ ಖರ್ಚು ಮಾಡಲಾಯಿತು? ಕೊರೋನಾ ಪರಿಸ್ಥಿತಿಯನ್ನು ನಿಭಾಯಿಸಲು ಯಾವ ರಾಜ್ಯಕ್ಕೆ ಎಷ್ಟು ನೀಡಲಾಯಿತು? ಎಂಬ ಕುರಿತು ಈವರೆಗೆ ಕೇಂದ್ರ ಸರ್ಕಾರ ಯಾವುದೇ ಮಾಹಿತಿ ನೀಡಿಲ್ಲ. ಕನಿಷ್ಟ ಪಿಎಂ ಕೇರ್ ನಿಧಿಯಿಂದ ವಲಸೆ ಕಾರ್ಮಿಕರಿಗೆ ರೈಲು ಪ್ರಯಾಣದ ದರವನ್ನಾದರೂ ನೀಡಬಾರದೆ? ಎಂದು ಹಲವಾರು ನಾಯಕರು ಪ್ರಶ್ನೆ ಮಾಡುತ್ತಿದ್ದಾರೆ. ಆದರೆ, ಈ ಪ್ರಶ್ನೆಗೆ ಕೇಂದ್ರದಿAದ ಈವರೆಗೆ ಉತ್ತರ ಸಿಕ್ಕಿಲ್ಲ.

ಕಾರ್ಮಿಕರನ್ನು ಹಿಡಿದಿಟ್ಟುಕೊಳ್ಳಲು ಸರ್ಕಾರ ಕಸರತ್ತು

ಕಟ್ಟಡ ಕಾರ್ಮಿಕರು ಬೆಂಗಳೂರನ್ನು ಖಾಲಿ ಮಾಡುತ್ತಿದ್ದಾರೆ. ಕಳೆದ ನಾಲ್ಕು ದಿನದಲ್ಲಿ ಸುಮಾರು 80,000ಕ್ಕೂ ಅಧಿಕ ಕಟ್ಟಡ ಕಾರ್ಮಿಕರು ಈಗಾಗಲೇ ಅವರವರ ಜಿಲ್ಲೆಗಳಿಗೆ ಕ್ರಮಿಸಿದ್ದಾರೆ. ಇನ್ನೂ ರೈಲಿನ ಮೂಲಕ ಲಕ್ಷಾಂತರ ಹೊರ ರಾಜ್ಯದ ವಲಸೆ ಕಾರ್ಮಿಕರು ಸಹ ತಮ್ಮ ರಾಜ್ಯಗಳಿಗೆ ಮರಳಿದ್ದಾರೆ. ಹೀಗಾಗಿ ಲಾಕ್ಡೌನ್ ತೆರವಾದ ನಂತರವೂ ಸಹ ಬೆಂಗಳೂರಿನಲ್ಲಿ ಯಾವುದೇ ಕಟ್ಟಡ ಕೆಲಸ ಮತ್ತು ಸರ್ಕಾರಿ ಕಾಮಗಾರಿಗಳು ನಡೆಯುವುದು ದುಸ್ತರವಾಗಿದೆ.

ಹೀಗಾಗಿ ರಾಜ್ಯ ಸರ್ಕಾರ ವಲಸೆ ಕಾರ್ಮಿಕರನ್ನು ಹೇಗಾದರೂ ಬೆಂಗಳೂರಿನಲ್ಲೇ ಉಳಿಸಿಕೊಳ್ಳಲು ಮುಂದಾಗಿದೆ. ಈಗಾಗಲೇ ಬಿಹಾರದ ವಲಸೆ ಕಾರ್ಮಿಕರನ್ನು ರೈಲಿನ ಮೂಲಕ ಕಳುಹಿಸಿಕೊಡಲು ಸಿದ್ದತೆ ನಡೆಸಲಾಗಿತ್ತು. ಆದರೆ, ಇದೀಗ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಇದಕ್ಕೆ ಒಪ್ಪಿಲ್ಲ ಎಂಬ ಕಾರಣ ನೀಡಿ ಈ ರೈಲು ಸೇವೆಯನ್ನು ರದ್ದು ಮಾಡಲಾಗಿದೆ.

ಅಲ್ಲದೆ, ಈ ಎಲ್ಲಾ ವಲಸೆ ಕಾರ್ಮಿಕರನ್ನು ಅವರ ಊರಿಗೆ ಕಳಿಸದೇ ದೂರದ ಮಾದಾವರ ಬಳಿಯ ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ (ಬಿಐಇಸಿ) ಕೂಡಿಹಾಕಲಾಗಿದೆ ಎಂದು ಆರೋಪಿಸಲಾಗುತ್ತಿದೆ.

ಈಗಾಗಲೇ ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲೂ ಸುಮಾರು 11 ಜನರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು ಅವರನ್ನು ವಿಕ್ಟೋರಿಯ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೆ, ಇಲ್ಲಿ ಇನ್ನೂ 3,000ಕ್ಕೂ ಅಧಿಕ ಕಾರ್ಮಿಕರು ಇದ್ದಾರೆ ಎಂದು ಸ್ವತಃ ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಆದರೆ, ಇಂತಹ ಸ್ಥಳದಲ್ಲಿ ಬಿಲ್ಡರ್‌ಗಳ ಸಹಾಯದಿಂದ ಸರ್ಕಾರ ಕಾರ್ಮಿಕರನ್ನು ಜೀತದಾಳುಗಳಂತೆ ಕೂಡಿ ಹಾಕುವುದು ಎಷ್ಟು ಸರಿ? ಎಂಬ ಆಕ್ರೋಶ ಪ್ರಜ್ಞಾವಂತ ಸಮುದಾಯದಿಂದ ಕೇಳಿ ಬರುತ್ತಿದೆ. ಸರ್ಕಾರದ ಈ ನಡೆಯನ್ನು ರಾಜ್ಯ ಸಿಪಿಐ(ಎಂ) ಪಕ್ಷ ಖಂಡಿಸಿದೆ. ಅಲ್ಲದೆ, ರಾಜ್ಯ ಸರ್ಕಾರದ ಈ ಅಮಾನವೀಯ ಕೃತ್ಯಕ್ಕೆ ಎಲ್ಲೆಡೆಯಿಂದ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ.

ಒಟ್ಟಾರೆ ವಿದೇಶದಿಂದ ಎನ್‌ಆರ್‌ಐಗಳನ್ನು ಉಚಿತವಾಗಿ ವಿಶೇಷ ವಿಮಾನದ ಮೂಲಕ ರಕ್ಷಣೆ ಮಾಡಿ ಭಾರತಕ್ಕೆ ಕರೆತರುವ ಕೇಂದ್ರ ಸರ್ಕಾರಕ್ಕೆ ನಮ್ಮದೇ ದೇಶದ ವಲಸೆ ಕಾರ್ಮಿಕರ ಪ್ರಯಾಣ ದರ ದುಬಾರಿಯೇ? ಎನ್‌ಆರ್‌ಐಗಳ ಮೇಲಿನ ಪ್ರೀತಿ ವಲಸೆ ಕಾರ್ಮಿಕರ ಮೇಲೆ ಏಕಿಲ್ಲ? ಅವರೂ ಇದೇ ದೇಶದ ಪ್ರಜೆಗಳಲ್ಲವೇ? ಕನಿಷ್ಟ ಮನುಷ್ಯರಲ್ಲವೇ? ಸರ್ಕಾರಕ್ಕೆ ಈ ತಾರತಮ್ಯವೇತಕೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ಬಾಂಬ್ ಸ್ಫೋಟ: ಬಾಲಕ ಮೃತ್ಯು, ಇಬ್ಬರಿಗೆ ಗಂಭೀರ ಗಾಯ

0
ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿ ಕಚ್ಚಾ ಬಾಂಬ್ ಸ್ಫೋಟ ಸಂಭವಿಸಿ ಏಳು ವರ್ಷದ ಬಾಲಕ ಸಾವನ್ನಪ್ಪಿದ್ದು, ಇತರ ಇಬ್ಬರು ಅಪ್ರಾಪ್ತ ಬಾಲಕರಿಗೂ ತೀವ್ರ ಗಾಯಗಳಾಗಿದೆ. ಮೃತ ಬಾಲಕನನ್ನು ರಾಜ್ ಬಿಸ್ವಾಸ್ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ...