ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಪೋಲೇನಹಳ್ಳಿಯಲ್ಲಿ ಇತ್ತೀಚೆಗೆ ಹತ್ಯೆಗೀಡಾದ ದಲಿತ ವ್ಯಕ್ತಿ ಆನಂದ ಅವರ ಕುಟುಂಬಕ್ಕೆ ಸರ್ಕಾರ ಐದು ಎಕರೆ ಜಮೀನು ಮಂಜೂರು ಮಾಡಬೇಕು ಮತ್ತು 25 ಲಕ್ಷ ರೂಪಾಯಿ ಪರಿಹಾರ ನೀಡಬೇಕೆಂದು ರಾಜ್ಯ ಒಳ ಮೀಸಲಾತಿ ಹೋರಾಟದ ಒಕ್ಕೂಟಗಳ ಸಮಿತಿಯ ರಾಜ್ಯ ಮುಖಂಡ ಬಸವರಾಜ ಕೌತಾಳ್ ಒತ್ತಾಯಿಸಿದರು.
ಆನಂದ ಅವರ ಕುಟುಂಬಸ್ಥರ ಮನೆಗೆ ವಿವಿಧ ದಲಿತ, ಪ್ರಗತಿಪರ ಹೋರಾಟಗಾರರು ಸೋಮವಾರ ಭೇಟಿ ನೀಡಿ ಸಾಂತ್ವನ ಹೇಳಿದರು. ಘಟನೆಯ ನೈಜತೆಯ ಬಗ್ಗೆ ಕುಟುಂಬಸ್ಥರಿಂದ ಮಾಹಿತಿ ಪಡೆದು. ಆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೌತಾಳ್, “ಕೊಲೆಯಾಗಿರುವ ಆನಂದ ಅವರ ಹೆಂಡತಿಗೆ ಸರ್ಕಾರ ಉದ್ಯೋಗ ನೀಡಬೇಕು ಮತ್ತು ಅವರ ಮಗುವಿನ ಶಿಕ್ಷಣದ ವೆಚ್ಚವನ್ನು ಭರಿಸಬೇಕು” ಎಂದು ಆಗ್ರಹಿಸಿದರು.
ಆರೋಪಿ ನಾಗೇಶ ಅವರ ತಂದೆ-ತಾಯಿಯನ್ನೂ ಆರೋಪಿಗಳನ್ನಾಗಿಸಿ ಬಂಧಿಸಬೇಕು. ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ ಪರಮೇಶ್ವರ್, ಶಾಸಕ ಕೆ.ಎನ್ ರಾಜಣ್ಣ ಅವರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರನ್ನು ಕಾನೂನಾತ್ಮಕವಾಗಿ ಶಿಕ್ಷೆಗೆ ಒಳಪಡಿಸಬೇಕು ಎಂದು ಹೇಳಿದರು.

ಪ್ರಗತಿಪರ ಚಿಂತಕ ಪ್ರೊ. ನರಸಿಂಹಪ್ಪ ಕಾಳೇನಹಳ್ಳಿ ಮಾತನಾಡಿ, “ಸೌಹಾರ್ದಯುತವಾಗಿ ಬಾಳಿ ಬದುಕಬೇಕಾದ ಎಸ್‌ಸಿ- ಎಸ್ಟಿ ಸಮುದಾಯಗಳು, ಈ ರೀತಿ ಸಣ್ಣ ವಿಷಯಕ್ಕೆ ಜಗಳವಾಡಿ ಕೊಲೆಯಲ್ಲಿ ಅಂತ್ಯವಾಗಿರುವುದು ನೋವಿನ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರು ದಲಿತರಾಗಿದ್ದು, ರಾಜಕೀಯ ಜನ್ಮ ನೀಡಿದ ಮಧುಗಿರಿ ತಾಲೂಕಿನಲ್ಲಿ ಆಗಿರುವ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಶೋಷಿತರ ಪರ ನಿಲ್ಲಬೇಕಾಗಿದೆ. ಅವರು ಇದುವರೆಗೂ ಘಟನಾ ಸ್ಥಳಕ್ಕೆ ಭೇಟಿ ನೀಡದೇ ಇರುವುದು ದಲಿತರ ಮೇಲೆ ಇರುವ ಕಾಳಜಿ ಎಂತದ್ದು ಎಂಬುವುದನ್ನು ತಿಳಿಸುತ್ತದೆ. ಕೇಂದ್ರ ಸಚಿವ ವಿ. ಸೋಮಣ್ಣ ಮತ್ತು ಶಾಸಕ ಕೆ.ಎನ್ ರಾಜಣ್ಣ ಕೂಡ ಸ್ಥಳಕ್ಕೆ ಆಗಮಿಸಿ ನೊಂದ ಕುಟುಂಬಕ್ಕೆ ನೆರವು ಒದಗಿಸಲು ಮುಂದಾಗಬೇಕೆಂದು ಮನವಿ ಮಾಡಿದರು.

ದಲಿತ ಮುಖಂಡ ಡಿ.ಟಿ ವೆಂಕಟೇಶ್ ಮಾತನಾಡಿ, “ಕೊಲೆಯಾದ ಆನಂದ ಅವರ ಕುಟುಂಬಕ್ಕೆ ಸಮಾಜ ಕಲ್ಯಾಣ ಇಲಾಖೆ ಮತ್ತು ಗ್ರಾಮ ಪಂಚಾಯತಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿ ಕೊಡಬೇಕು. ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದ್ದು, ಧೈರ್ಯದಿಂದ ಬದುಕುವ ವಾತಾವರಣ ನಿರ್ಮಾಣ ಮಾಡಬೇಕು. ಆನಂದ ಅವರ ಕುಟುಂಬಕ್ಕೆ ಅಗತ್ಯ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.
ಹಿರಿಯ ಹೋರಾಟಗಾರ ಪ್ರೊ. ದೊರೆರಾಜು ಮಾತನಾಡಿ, “ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಲಾಗುವುದು. ಗ್ರಾಮದಲ್ಲಿ ಜನತೆ ಧೈರ್ಯದಿಂದ ಬದುಕುವ ವಾತಾವರಣ ನಿರ್ಮಾಣ ಮಾಡಬೇಕಾಗಿದೆ” ಎಂದು ಹೇಳಿದರು.

ರೇಷ್ಮೆ ಇಲಾಖೆಯ ನಿವೃತ್ತ ಉಪ ನಿರ್ದೇಶಕ ಬಾಲಕೃಷ್ಣಪ್ಪ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ರವಿಕುಮಾರ್ ನೀಹ, ದಸಂಸ ಜಿಲ್ಲಾ ಸಂಚಾಲಕ ದೊಡ್ಡೇರಿ ಕಣಿಮಯ್ಯ, ದಲಿತ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹರಾಜು, ಜಾಗೃತ ಕರ್ನಾಟಕ ರಾಜ್ಯ ಸಮಿತಿ ಸದಸ್ಯ ಅನಿಲ್ ಕುಮಾರ್ ಚಿಕ್ಕದಾಳವಟ್ಟ, ತೊಂಡೋಟಿ ರಾಮಾಂಜಿನಪ್ಪ, ವಕೀಲ ನರಸಿಂಹಮೂರ್ತಿ, ಜೀವಿಕ ಮಂಜು, ಚಿಕ್ಕಮ್ಮ, ನಿವೃತ್ತ ಪ್ರಾಂಶುಪಾಲ ಮುನೀಂದ್ರ ಕುಮಾರ್, ಉಪನ್ಯಾಸಕ ರಾಮಚಂದ್ರಪ್ಪ, ನವೀನ್ ಪೂಜಾರಹಳ್ಳಿ, ನರಸಿಯಪ್ಪ,ನರಸಿಂಹಣ್ಣ, ವಿ.ಎಲ್ ನರಸಿಂಹಮೂರ್ತಿ, ನಾಗಭೂಷಣ್ ಬಗ್ಗನಾಡು, ವಕೀಲ ಕಿಶೋರ್, ಅಶ್ವಿನಿ ಬೋದ್ , ಪೂರ್ಣ ರವಿಶಂಕರ್, ಶಶಾಂಕ್, ವೇಣುಗೋಪಾಲ ಮೌರ್ಯ, ಮಂಜು ಪಿಟಿಸಿಎಲ್, ಮಂಜನಾಥ್, ಮನೋಜ್, ಅಶ್ವಥ್ ನಾರಾಯಣ ಗುಟ್ಟೆ, ಹಾಗೂ ಎಸ್‌ಸಿ, ಎಸ್ಟಿ ಸಮುದಾಯಗಳ ಹೋರಾಟಗಾರರು ಆನಂದ ಅವರ ಮನೆಗೆ ಭೇಟಿ ನೀಡಿದ ತಂಡದಲ್ಲಿದ್ದರು.
ತುಮಕೂರು: ಕುಡಿಯುವ ನೀರಿನ ಸಂಪರ್ಕ ವಿಚಾರಕ್ಕೆ ಜಗಳ; ದಲಿತ ವ್ಯಕ್ತಿಯ ಭೀಕರ ಕೊಲೆ


