ಇದೇ ಏಪ್ರಿಲ್ 12ರಂದು ತುಮಕೂರಿನಲ್ಲಿ ಅಮಿತ್‍ಷಾರ ಒಂದು ಬಹಿರಂಗ ಸಭೆ ನಡೆಯಬೇಕಿತ್ತು. ಅದು ನಡೆಯದೇ ಇದ್ದಾಗ ಇಂಡಿಯನ್ ಎಕ್ಸ್‍ಪ್ರೆಸ್ ಪತ್ರಿಕೆಯವರು ಅದರ ಬಗ್ಗೆ ಕುತೂಹಲ ಮೂಡಿ ವಿಚಾರಿಸಿದ್ದಾರೆ. ಅವರಿಗೆ ಗೊತ್ತಾದ ಸಂಗತಿಯೇನೆಂದರೆ ಮೋದಿ ಅಥವಾ ಅಮಿತ್‍ಷಾ ಬಂದರೆ ತನಗೆ ತೊಂದರೆಯಾಗುತ್ತದೆಂದು ಅಲ್ಲಿನ ಅಭ್ಯರ್ಥಿ ಜಿ.ಎಸ್.ಬಸವರಾಜು ಅವರ ಅಭಿಪ್ರಾಯ. ಅದಕ್ಕಾಗಿ ತನ್ನ ಪರವಾಗಿ ಪಕ್ಷದ ಸರ್ವೋಚ್ಚ ನಾಯಕರು ತುಮಕೂರಿನಲ್ಲಿ ಪ್ರಚಾರಕ್ಕೆ ಬರುತ್ತಿಲ್ಲ. 
ಮೋದಿಯವರು ಬಂದರೆ, ಅಲ್ಲಿನ ವಾತಾವರಣದಲ್ಲಿ ಸ್ವಲ್ಪವಾದರೂ ಬಿಜೆಪಿ ಅಲೆ ಬೀಸುತ್ತದೆಂಬ ನಿರೀಕ್ಷೆಯಲ್ಲಿ ಹಲವು ಅಭ್ಯರ್ಥಿಗಳು ಇರುತ್ತಾರೆ. ಆದರೆ, ತುಮಕೂರಿನಲ್ಲಿ ಬಸವರಾಜು ಅವರು ಆ ರೀತಿ ಭಾವಿಸುತ್ತಿಲ್ಲ. ತುಮಕೂರಿನಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸ್ಪರ್ಧಿಸುತ್ತಿದ್ದು ಆ ಕಾರಣಕ್ಕೆ ಇದು ಪ್ರತಿಷ್ಠೆಯ ಕಣವಾಗಿದೆ. ಅಷ್ಟೇ ಅಲ್ಲದೇ, ಹಾಲಿ ಸಂಸದ ಕಾಂಗ್ರೆಸ್‍ನ ಮುದ್ದಹನುಮೇಗೌಡರು, ಕ್ಷೇತ್ರವನ್ನು ಜೆಡಿಎಸ್‍ಗೆ ಬಿಟ್ಟುಕೊಟ್ಟಿದ್ದಕ್ಕೆ ಕೆಂಡಾಮಂಡಲರಾಗಿದ್ದರು. ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿ ನಂತರ ಹಿಂತೆಗೆದುಕೊಂಡಿದ್ದರು.
ಸುದೀರ್ಘಕಾಲ ಕಾಂಗ್ರೆಸ್‍ನಲ್ಲೇ ಇದ್ದ ಜಿ.ಎಸ್.ಬಸವರಾಜು ಆ ಪಕ್ಷದಿಂದಲೇ ಸಂಸದರಾಗಿದ್ದರು. ‘ಈ ಸಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಇಲ್ಲದಿರುವುದರಿಂದ ಮತಯಂತ್ರದಲ್ಲಿ ಅದರ ಗುರುತು ಇರುವುದಿಲ್ಲ. ಹಾಗಾಗಿ ಮತದಾರರು ತನಗೆ ಮತ ಹಾಕುವ ಸಾಧ್ಯತೆ ಇದೆ. ಅದರಲ್ಲೂ ಮೋದಿ ಬಂದರೆ ಮುಸ್ಲಿಮರು ತನಗೆ ಮತ ಹಾಕದೇ ಹೋಗಬಹುದು’ ಎಂದು ಬಸವರಾಜು ಇಂಡಿಯನ್ ಎಕ್ಸ್‍ಪ್ರೆಸ್‍ಗೆ ತಿಳಿಸಿದ್ದಾರೆ.
ಬಸವರಾಜು ಅವರ ಈ ಹೇಳಿಕೆಗೆ ಬಿಜೆಪಿ ಕಡೆಯಿಂದ ಆಕ್ಷೇಪಣೆ ಇದುವರೆಗೂ ವ್ಯಕ್ತವಾಗಿಲ್ಲ. ಅಂತಹದೇನಾದರೂ ಹೇಳಿಕೆ ಬಂದರೆ ಇಲ್ಲಿ ಅಪ್‍ಡೇಟ್ ಮಾಡಲಾಗುವುದು.


