ಕುಡಿಯುವ ನೀರಿನ ಸಂಪರ್ಕ ವಿಚಾರವಾಗಿ ಗ್ರಾಮ ಪಂಚಾಯಿತಿಯಲ್ಲಿ ನಡೆದ ಜಗಳವು ವಿಕೋಪಕ್ಕೆ ತಲುಪಿದ್ದು, ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಬಿಲ್ ಕಲೆಕ್ಟರ್ ಸೇರಿ ದಲಿತ ವ್ಯಕ್ತಿಯನ್ನು ಭೀಕರವಾಗಿ ಕೊಲೆ ಮಾಡಿದ್ದಾ ಎಂಬ ಆರೋಪ ಕೇಳಿಬಂದಿದೆ.
ತುಮಕೂರು ಜಿಲ್ಲೆಯ ಮುಧುಗಿರಿ ತಾಲೂಕಿನ ಪೋಲೆನಹಳ್ಳಿಯಲ್ಲಿ ಈ ಭೀಕರ ಘಟನೆ ನಡೆದಿದೆ. ನೀರು ಕೇಳಿದ ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದ ರಾಮಾಂಜಿನಪ್ಪ ಎಂಬುವವರ ಪುತ್ರ ಆನಂದ್ ಎಂಬುವವರನ್ನು ಘನಘೋರವಾಗಿ ಕೊಲೆ ಮಾಡಲಾಗಿದೆ.
ಪೋಲೆನಹಳ್ಳಿ ಗ್ರಾಮದ ನಿವಾಸಿಯಾದ ಆನಂದ್ ಅವರ ಮನೆಯ ಬಳಿ ಅಳವಡಿಸಿದ್ದ ನಲ್ಲಿಯಲ್ಲಿ ನೀರು ಬರುತ್ತಿಲ್ಲ, ಇದೇ ವಿಚಾರವಾಗಿ ಅವರು ಗ್ರಾಮ ಪಂಚಾಯತಿ ಬಿಲ್ ಕಲೆಕ್ಟರ್ ರಾಮಕೃಷ್ಣಯ್ಯ ಹಾಗೂ ಅವರ ಮಗ ಗ್ರಾಮ ಪಂಚಾಯತಿ ಸದಸ್ಯ ನಾಗೇಶ್ ಅವರನ್ನ ಅವರ ಮನೆಯ ಬಳಿ ಹೋಗಿ ಏರು ಧ್ವನಿಯಲ್ಲಿ ಪ್ರಶ್ನೆ ಮಾಡಿದ್ದರು. ಇದರಿಂದ ಸಿಟ್ಟಾದ ಇಬ್ಬರೂ ಕೊಲೆ ಮಾಡಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಕುಡಿಯುವ ನೀರಿನ ವಿಚಾರವಾಗಿ ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್ ರಾಮಕೃಷ್ಣಪ್ಪ ಹಾಗೂ ಮಗ ಗ್ರಾಮ ಪಂಚಾಯಿತಿ ಸದಸ್ಯ ನಾಗೇಶ, ನಾಗಮಣಿ ಇತರರು ಸೇರಿ ಮಚ್ಚು ದೊಣ್ಣೆ ಗಳಿಂದ ಹಲ್ಲೆ ಮಾಡಿ, ಜೈ ಶ್ರೀರಾಮ್ ಎಂದು ಹೆಸರು ಇರುವ ಜೀಪ್‌ನಿಂದ ಗುದ್ದಿಸಿ ಕೊಲೆ ಮಾಡಿದ್ದು, ಕೊಡಿಗೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೃಹ ಸಚಿವರ ತವರು ಜಿಲ್ಲೆ; ದಲಿತ ಶಾಸಕ ಪ್ರತಿನಿಧಿಸುವ ಕ್ಷೇತ್ರ
ದಲಿತ ಯುವಕನ ಕೊಲೆ ಮಾಡಿರುವ ಗ್ರಾಮವು ಗೃಹ ಸಚಿವ ಜಿ.ಪರಮೇಶ್ವರ ಅವರ ತವರು ಜಿಲ್ಲೆ ತುಮಕೂರಿಗೆ ಸೇರಿದೆ. ದಲಿತ (ಪರಿಶಿಷ್ಟ ಪಂಗಡ) ಶಾಸಕ ಕೆ.ಎನ್.ರಾಜಣ್ಣ ಮಧುಗಿರಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾರೆ. ದಲಿತರೇ ಬಹುಸಂಖ್ಯಾತರಾಗಿರುವ ಮತಕ್ಷೇತ್ರಗಳಲ್ಲಿ ದಲಿತರಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಘಟನೆ ಬಗ್ಗೆ ಜನರು ಆಕ್ರೋಶ ಹೊರಹಾಕಿದ್ದಾರೆ.
ಮಾಜಿ ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರ ಹೆಸರನ್ನು ದುರುಪಯೋಗ ಮಾಡಿಕೊಂಡು, ಅವರದ್ದೇ ಸಮುದಾಯದ ಕೆಲವು ಜಾತಿವಾದಿಗಳು ಅಸ್ಪೃಶ್ಯ ಸಮುದಾಯವಾದ ಆದಿ ಕರ್ನಾಟಕ (ಎಸ್‌ಸಿ) ಸಮುದಾಯದ ಮೇಲೆ ಗುಂಡಾವರ್ತನೆ ತೋರುತ್ತಿದ್ದಾರೆ ಎಂದು ಕೆಲವರು ಆರೋಪಿಸಿದ್ದಾರೆ.
ಕೊಡಿಗೇನಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿ ನಾಗೇಶ್ ಎಂಬಾತನನ್ನ ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಗೃಹ ಸಚಿವರಾದ ಜಿ.ಪರಮೇಶ್ವರ್ ಹಾಗೂ ಶಾಸಕರಾದ ಕೆ.ಎನ್. ರಾಜಣ್ಣನವರು ಘಟನೆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.
ಉತ್ತರ ಪ್ರದೇಶ: ಕಾರಿಗೆ ಬೈಕ್ ತಾಕಿದ್ದಕ್ಕೆ ದಲಿತ ಯುವಕನ ಮೇಲೆ ಮಾರಣಾಂತಿಕ ಹಲ್ಲೆ


