ತುಮಕೂರು ಮಹಾನಗರ ಪಾಲಿಕೆಯಲ್ಲಿ ದಿಕ್ಕುತಪ್ಪಿದ ಆಡಳಿತ ಮತ್ತು ಹಣಕಾಸು ನಿರ್ವಹಣೆಯನ್ನು ಸರಿದಾರಿಗೆ ತರಲು ಆಯುಕ್ತ ಭೂಬಾಲನ್ ಹೆಣಗುವಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ. ಐರನ್ ಮೈಂಡ್ ಗಳ ಬಿಗಿಹಿಡಿತ ದಿಂದ ಭೂಬಾಲನ್ ಸುಸೂತ್ರವಾಗಿ; ಸ್ವತಂತ್ರವಾಗಿ ಕೆಲಸ ಮಾಡಲು ಆಗುತ್ತಿಲ್ಲ. ಎರಡನೇ ಬಾರಿಗೆ ಪಾಲಿಕೆ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿರುವ ಭೂಬಾಲನ್ ರಾಜಕಾರಣಿಗಳ ಅಸಹಕಾರ ಮನೋಭಾವದಿಂದ ಕೆಲಸ ಮಾಡಲು ಅಷ್ಟೊಂದು ಉತ್ಸುಕತೆ ತೋರುತ್ತಿಲ್ಲ ಎಂಬ ಚರ್ಚೆ ಜೋರಾಗಿಯೇ ನಡೆದಿದೆ.
ಉಪಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಭೂಬಾಲನ್ ತುಮಕೂರು ಪಾಲಿಕೆಯಿಂದ ವರ್ಗಾವಣೆ ಗೊಂಡರು. ಇದು ಮೇಲ್ನೋಟದ ವಿವರಣೆ. ಆದರೆ ಇವರು ವರ್ಗಾವಣೆಗೊಂಡರು ಎನ್ನುವುದಕ್ಕಿಂತ ಎತ್ತಂಗಡಿ ಮಾಡಿಸಿದರು ಎನ್ನುವುದೇ ಸೂಕ್ತ. ಇದರ ಹಿಂದೆ ‘ಬಸವಜ್ಯೋತಿ’ ಪ್ರಭಾವ ಇದರ ಹಿಂದೆ ಇತ್ತು. ಸಾದಾಸೀದ ಪ್ರಾಮಾಣಿಕ ಅಧಿಕಾರಿ ಭೂಬಾಲನ್ ‘ಬಸವಜ್ಯೋತಿ’ ಮುಂದೆ ಶರಣಾಗಿರಲಿಲ್ಲ. ತಿನ್ನುವುದಿಲ್ಲ; ತಿನ್ನಲು ಬಿಡುವುದಿಲ್ಲ’ ಎಂಬ ಮಾತುಗಳು ಈ ಅಧಿಕಾರಿಗೆ ಹೇಳಿಮಾಡಿಸಿದಂತಿತ್ತು. ಹೀಗಾಗಿ ‘ಪ್ರಭಾವಳಿ’ ಬೀರಿ ‘ರಿಲ್ಯಾಕ್ಸ್’ ಪಡೆಯಲು ವರ್ಗಾವಣೆ ನಡೆದುಹೋಗಿತ್ತು.
ಇದನ್ನೂ ಓದಿ: ತುಮಕೂರಿನ ಪ್ರಾಮಾಣಿಕ ಅಧಿಕಾರಿಯ ಎತ್ತಂಗಡಿಯ ಹಿಂದಿದ್ದಾರೆ ರಿಯಲ್ ಎಸ್ಟೇಟ್ ರಾಜಕಾರಣಿಗಳು..
ಭೂಬಾಲನ್ ವರ್ಗಾವಣೆಯಾಗುವ ಸಮಯದಲ್ಲಿ ಪಾಲಿಕೆಯಲ್ಲಿ ಸುಮಾರು 9 ರಿಂದ 12 ಕೋಟಿ ರೂಪಾಯಿ ಪಾಲಿಕೆಯ ಖಜಾನೆಯಲ್ಲಿತ್ತು. ಜನರಿಂದ ನೀರು ಮೊದಲಾದ ತೆರಿಗೆಗಳನ್ನು ಕಟ್ಟುನಿಟ್ಟಾಗಿ ವಸೂಲಿ ಮಾಡಿ ಇಷ್ಟೊಂದು ಹಣವನ್ನು ಉಳಿಸಿ ಹೋಗಿದ್ದರು. ಹೋಗುವಾಗ ಯೋಗಾನಂದ ಎಂಬ ಅಧಿಕಾರಿಗೆ ಪಾಲಿಕೆಯ ಅಧಿಕಾರ ಹಸ್ತಾಂತರಿಸಿದ್ದರು. ಯೋಗಾನಂದರಿಗೆ ಯೋಗ ಖುಲಾಯಿಸಿತ್ತು. ಯೋಗಾನಂದರವರು ಆನಂದಲ್ಲಿ ತೇಲತೊಡಗಿದರು. ಸು’ಯೋಗ’ ಬರಬಹುದೆಂದು ನಂಬಿದ್ದವರಿಗೆ ನಿರಾಸೆಯಾಯಿತು.’ಸತ್ಯ’ ಗೊತ್ತಾದ ಮೇಲೆ ಯೋಗಾನಂದರಿಗೆ ಗೇಟ್ ಪಾಸ್ ಕೊಡಿಸಿದರು. ಜನ ಇವರನ್ನು ಅಯೋಗಾನಂದ ಎಂದೇ ಗೇಲಿ ಮಾಡುವುದುಂಟು.

ಇಷ್ಟೊತ್ತಿಗಾಗಲೇ ಪಾಲಿಕೆ ಆಡಳಿತ ಹಳ್ಳ ಹಿಡಿದಿತ್ತು. ಆಗ ತುಮಕೂರು ಉಪವಿಭಾಗಾಧಿಕಾರಿ ಶಿವಕುಮಾರ್ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡರು. ಇವರು ಬಂದ ಮೇಲೆ ಭೂಬಾಲನ್ ಉಳಿಸಿಹೋಗಿದ್ದ ಸುಮಾರು 9 ರಿಂದ 12 ಕೋಟಿ ರೂ ಹಣ ‘ಕರಗಿ’ಹೋಯಿತು. ಎರಡು ಮೂರು ತಿಂಗಳೊತ್ತಿನಲ್ಲಿ ಕೋಟಿಕೋಟಿ ಹಣ ಧನದಾಹಿಗಳ ಕೈಗೆ ಸೇರಿತ್ತು. ಐರನ್ ಮೈಂಡ್ ಗಳ ಅಸೆಯೂ ಈಡೇರಿತ್ತು. ಪಾಲಿಕೆ ಖಜಾನೆ ಖಾಲಿಖಾಲಿ ಆಗಿದೆ. ಇಷ್ಟೊಂದು ಮೊತ್ತ ಯಾವ ಬಾಬ್ತಿಗೆ ವೆಚ್ಚವಾಯ್ತು ಅಂಬೋ ಲೆಕ್ಕವನ್ನು ಯಾರಿಗೆ ಕೇಳೋದು ಎಂದು ಜನರಂತೂ ಮಾತನಾಡಿಕೊಳ್ಳುತ್ತಿದ್ದಾರೆ.
ಇಂಥೆಂಬೋ ಹೊತ್ತಿನಲ್ಲಿ ತುಮಕೂರು ನಗರಪಾಲಿಕೆಯ ಆಯುಕ್ತರಾಗಿ ಭೂಬಾಲನ್ ಎರಡನೇ ಅವಧಿಗೆ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡು ಕೆಲಸ ನಿರ್ವಹಿಸುತ್ತಿದ್ದಾರೆ. ಮೊದಲು ಇದ್ದ ಹುಮ್ಮಸ್ಸು, ಉತ್ಸಾಹ ಸ್ವಲ್ಪ ಕಡಿಮೆಯಾಗಿದೆ. ಗಾಂಧಿನಗರದಲ್ಲಿ ಬಿಜೆಪಿ ಮುಖಂಡರೊಬ್ಬರು ಪಿಜಿ ನಡೆಸುತ್ತಿದ್ದರು. ಇದರ ಬಗ್ಗೆ ಮರಗಳಿಗೆ ಪಿಜಿ ಫಲಕಗಳು ನೇತುಹಾಕಿ ಉಚಿತ ಜಾಹಿರಾತು ನೀಡಿದರು. ತಮ್ಮದೇ ಆಡಳಿತ, ತಮ್ಮದೇ ಸಂಸದರು, ತಮ್ಮದೇ ಶಾಸಕರು ಕೇಳುವವರು ಯಾರು ಎಂಬ ಹುಂಬುತನದಿಂದ ಮರಮರಗಳಿಗೂ ಬೋರ್ಡ್ ಗಳು ನೇತುಬಿದ್ದವು.
ಇದೆಲ್ಲವನ್ನು ನೋಡಿದ ಆಯುಕ್ತ ಬೂಬಾಲನ್ ಸೀದಾ ಗಾಂಧೀನಗರಕ್ಕೆ ಹೋಗಿ ಎಚ್ಚರಿಕೆ ನೀಡಿದರು. ಕೂಡಲೇ ಮರಗಳಿಗೆ ನೇತುಹಾಕಿರುವ ಫಲಕಗಳನ್ನು ತೆರವುಗೊಳಿಸುವಂತೆ ಹೇಳಿಬಂದರು. ಇದು ಆ ಬಿಜೆಪಿ ಮುಖಂಡನನ್ನು ಕೆರಳಿಸಿತು. ಪಾಲಿಕೆ ಕಚೇರಿಗೆ ಹೋಗಿ ಆಯುಕ್ತರಿಗೆ ಧಮಕಿ ಹಾಕಿದರು. ಅದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ವ್ಯಾಪಕ ಖಂಡನೆ ವ್ಯಕ್ತವಾದ ಮೇಲೆ ‘ಆಂಜನೇಯ’ ಹೋಗಿ ಕ್ಷಮೆಯಾಚಿಸಿದ.
ಆಗ ಆಯುಕ್ತ ಭೂಬಾಲನ್ ಬಿಜೆಪಿ ಮುಖಂಡನಿಗೆ ತರಾಟೆಗೆ ತೆಗೆದುಕೊಂಡು ನೀರಿಳಿಸಿದರು. ನಿಮ್ಮದೇ ಸರ್ಕಾರ ಇದೆ. ನಿಮ್ಮವರೇ ‘ಎಲ್ಲರೂ’ ಇದ್ದಾರೆ. ಟ್ರಾನ್ಸ್ ಫರ್ ಮಾಡಿಸು. ನನಗೆ ಇಲ್ಲೇ ಇರಬೇಕೆಂದೇ ಇಲ್ಲ. ಮತ್ತೆ ಹೀಗೆಲ್ಲ ಮಾಡಬೇಡ ಎಂದು ಎಚ್ಚರಿಸಿದ್ದಾರೆ. ಆದರೆ ಈಗ ಬಂದಿರುವ ವರ್ತಮಾನವೆಂದರೆ ಇಂಥವರ ನಡುವೆ ಹೇಗೆ ಕೆಲಸ ಮಾಡುವುದು? ಕೆಲಸ ಮಾಡಲು ಮನಸ್ಸೇ ಬರುತ್ತಿಲ್ಲ ಎಂದು ಭೂಬಾಲನ್ ಕೆಲವರಲ್ಲಿ ಹೇಳಿಕೊಂಡು ನೋವು ತೋಡಿಕೊಂಡಿದ್ದಾರೆ. ಈಗ ‘ಬಸವಜ್ಯೋತಿ’ ಮತ್ತಷ್ಟು ಪ್ರಖರವಾಗಿ ಬೆಳಗುತ್ತಿದೆ. ಸೂಟ್ ಕೇಸ್ ಗಳ ಕೈಬದಲಾವಣೆ ಎಲ್ಲವನ್ನೂ ಒಂದಾಗಿಸುತ್ತದೆ ಎಂದು ಪಾಲಿಕೆ ಆವರಣದಲ್ಲಿ ಮಗುಮ್ಮಾಗಿ ನಗುವವರ ಸಂಖ್ಯೆ ಹೆಚ್ಚಾಗಿದೆ.


