Homeಮುಖಪುಟಹಲವು ಬದಲಾವಣೆಗಳಿಗೆ ಕಾರಣವಾದ ಭಾರತ ಜೋಡೋದ ಎರಡು ತಿಂಗಳ ಯಾತ್ರೆ

ಹಲವು ಬದಲಾವಣೆಗಳಿಗೆ ಕಾರಣವಾದ ಭಾರತ ಜೋಡೋದ ಎರಡು ತಿಂಗಳ ಯಾತ್ರೆ

- Advertisement -
- Advertisement -

ಭಾರತ್ ಜೋಡೊ ಯಾತ್ರೆ ಶುರು ಆದ ಮೊದಲ ದಿನಗಳಲ್ಲಿ ಸ್ನೇಹಿತರು ಫೋನ್ ಮಾಡಿ ಈ ರೀತಿ ಹೇಳುತ್ತಿದ್ದರು: “ರಾಹುಲ್ ಗಾಂಧಿಯ ಯಾತ್ರೆಯಲ್ಲಿ ನೀವೇಕೆ ಸೇರಿಕೊಂಡಿದ್ದೀರಾ?” ಎಂದು. ಈಗ ಎರಡು ತಿಂಗಳ ನಂತರ ಈ ರೀತಿ ಹೇಳುತ್ತಿದ್ದಾರೆ: “ಭಾರತ್ ಜೋಡೊ ಯಾತ್ರೆಯಲ್ಲಿ ಎಲ್ಲಿ ಸೇರಿಕೊಂಡಿದ್ದೀರಾ? ಹೇಗೆ ಸೇರಿಕೊಂಡಿದ್ದೀರಾ?” ಎಂದು. ಭಾರತ್ ಜೋಡೊ ಯಾತ್ರೆಯ ಪರಿಣಾಮವನ್ನು ಈ ಬದಲಾವಣೆಯಲ್ಲಿ ಕಾಣಬಹುದಾಗಿದೆ. ಸುಮಾರು 70 ದಿನ ಹಾಗೂ 1,800 ಕಿಲೊಮೀಟರ್ ನಡಿಗೆಯ ನಂತರ ಈ ಯಾತ್ರೆಯು ತನ್ನ ಅರ್ಧ ದೂರವನ್ನು ಕ್ರಮಿಸಿದೆ. ತಮಿಳುನಾಡಿನ ಕನ್ಯಾಕುಮಾರಿಯಿಂದ ಶುರುವಾದ ಈ ಯಾತ್ರೆಯು ಕೇರಳ, ಕರ್ನಾಟಕ, ಆಂಧ್ರ ಪ್ರದೇಶ-ತೆಲಂಗಾಣದಿಂದ ಹಾದು ಈಗ ಮಹಾರಾಷ್ಟ್ರವನ್ನೂ ಮುಗಿಸಿ ಮಧ್ಯಪ್ರದೇಶದ ಬಾಗಿಲು ತಟ್ಟಲಿದೆ.

ಸ್ವಾಭಾವಿಕವಾಗಿಯೇ ಕಾಂಗ್ರೆಸ್ ಪಕ್ಷ ಆಯೋಜಿಸಿದ ಈ ಯಾತ್ರೆಯಲ್ಲಿ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಮುಗಿಬಿದ್ದು ಪಾಲ್ಗೊಂಡಿದ್ದಾರೆ. ರಾಹುಲ್ ಗಾಂಧಿಯೊಂದಿಗೆ 100ಕ್ಕೂ ಹೆಚ್ಚು ’ಭಾರತ ಯಾತ್ರಿ’ಗಳು ಕನ್ಯಾಕುಮಾರಿಯಿಂದ ಕಾಶ್ಮೀರದ ತನಕ ಪಾದಯಾತ್ರೆ ಮಾಡುತ್ತಲಿದ್ದಾರೆ. ಸಾವಿರಾರು ’ಪ್ರದೇಶ ಯಾತ್ರಿಗಳು ರಾಜ್ಯದ ಆರಂಭದಿಂದ ಆ ರಾಜ್ಯದ ಗಡಿ ಕೊನೆಯಾಗುವ ತನಕ ಪಾದಯಾತ್ರೆ ಮಾಡುತ್ತಲಿದ್ದಾರೆ. ಹಾಗೂ ಪ್ರತಿನಿತ್ಯ ಸಾವಿರಾರು ಸ್ಥಳೀಯ ಕಾರ್ಯಕರ್ತರು ಯಾತ್ರೆಯ ನಡಿಗೆಯಲ್ಲಿ ಭಾಗವಹಿಸುತ್ತಿದ್ದಾರೆ. ಪ್ರತಿರಾಜ್ಯದಲ್ಲಿ ಒಂದು ಅಥವಾ ಎರಡು ಕಡೆ ವಿಶಾಲವಾದ ಸಾರ್ವಜನಿಕ ಸಭೆಗಳನ್ನು ಆಯೋಜಿಸಲಾಗುತ್ತಿದೆ. ಬಹಳ ಸಮಯದ ನಂತರ ಕಾಂಗ್ರೆಸ್ ಸಂಘಟನೆಗೆ ಚುನಾವಣೆ ಎದುರಿಸುವುದರ ಹೊರತಾಗಿ ಬೇರೊಂದು ಸಕಾರಾತ್ಮಕ ಕೆಲಸ ಸಿಕ್ಕಿದೆ. ಬಹಳ ಸಮಯದ ನಂತರ ಕಾಂಗ್ರೆಸ್‌ನ ಕಾರ್ಯಕತೆ/ರ್ತ ರಸ್ತೆಗೆ ಇಳಿದಿದ್ದಾಳೆ/ನೆ. ಈ ಹೊಸ ಕಾರ್ಯಕ್ರಮದಿಂದ ಒಂದು ಹೊಸ ಆತ್ಮವಿಶ್ವಾಸ ಹುಟ್ಟಿದೆ ಮತ್ತು ತನ್ನ ನಾಯಕತ್ವದಲ್ಲಿ ಭರವಸೆ ಹುಟ್ಟುಕೊಂಡಿದೆ. ಇಷ್ಟಕ್ಕೇ ಕಾಂಗ್ರೆಸ್‌ನ ಪುನರ್ಜನ್ಮದ ಮಾತುಗಳನ್ನಾಡುವುದು ಆತುರ ಮಾಡಿದಂತಾಗುವುದು, ಆದರೆ ಕೆಲವು ಮೂಲಭೂತ ಬದಲಾವಣೆಯ ಬೀಜ ಮೊಳೆಯುವ ಒಂದು ಝಲಕ್ ಕಾಣಿಸಿಕೊಂಡಿದೆ.

ಈ ಎರಡು ತಿಂಗಳಲ್ಲಿ ಅತ್ಯಂತ ದೊಡ್ಡ ಬದಲಾವಣೆ ಕಾಣಿಸಿಕೊಂಡಿದ್ದು ಯಾವುದು ಎಂದು ನೋಡಿದಾಗ, ಅದು ರಾಹುಲ್ ಗಾಂಧಿಯ ಇಮೇಜ್‌ನಲ್ಲಿ ಆದ ಬದಲಾವಣೆ ಎನ್ನಬಹುದು. ಯಾತ್ರೆ ಶುರುವಾದ ಸಮಯದಲ್ಲಿ ಹಲವಾರು ಹಿತೈಷಿಗಳು ನನಗೆ ಈ ರೀತಿ ಎಚ್ಚರಿಕೆ ನೀಡಿದ್ದರು: “ನೀನಂತೂ ರಸ್ತೆಯಲ್ಲಿ ಕಾಲ್ನಡಿಗೆ ಮಾಡುತ್ತೀಯ, ಆದರೆ ರಾಹುಲ್ ಗಾಂಧಿ ಕೆಲ ದಿನಗಳ ನಂತರ ಗಾಡಿ ಹತ್ತಿಬಿಟ್ಟಾರು, ಹೊರದೇಶಕ್ಕೆ ಹಾರಿಬಿಟ್ಟಾರು” ಎಂದು. ’ಪಪ್ಪು’ ಎಂಬ ಇಮೇಜ್ ರಾಹುಲ್ ಗಾಂಧಿಯ ವ್ಯಕ್ತಿತ್ವದ ಮೇಲೆ ಸಂಪೂರ್ಣ ಪ್ರಮಾಣದಲ್ಲಿ ಆವರಿಸಿಕೊಂಡಿತ್ತು. ಆದರೆ, ಯಾವ ರಾಹುಲ್ ಗಾಂಧಿಯನ್ನು ನಾನು ಕಳೆದ 15 ವರ್ಷಗಳಿಂದ ನೋಡಿದ್ದೇನೋ, ಅವರು ಒಬ್ಬ ಶಾಲೀನ, ಗಂಭೀರ, ಸ್ಪಷ್ಟತೆಯುಳ್ಳ ಹಾಗೂ ಜಿಜ್ಞಾಸೆಯುಳ್ಳ ವ್ಯಕ್ತಿಯಾಗಿದ್ದರು. ಎಲ್ಲೂ ಕಪಟತೆ, ವಂಚನೆಯಿಲ್ಲದ ಮತ್ತು ಯಾವುದೇ ಕೃತಕತೆಯಿಲ್ಲದ ವ್ಯಕ್ತಿ. ಸಂವಿಧಾನದ ಮೌಲ್ಯಗಳಿಗೆ ಬದ್ಧರಾಗಿರುವ, ಸಮಾಜದ ಕೊನೆಯಲ್ಲಿರುವ ವ್ಯಕ್ತಿಯ ಬಗ್ಗೆ ಕಾಳಜಿಯುಳ್ಳ ಹಾಗೂ ಅವಕಾಶವಾದಿ ರಾಜಕೀಯದಿಂದ ದೂರವಿರುವ ವ್ಯಕ್ತಿ. ನಾನು ಕಾಂಗ್ರೆಸ್‌ನ ಕಟು ಟೀಕೆ ಮಾಡಿದಾಗ ಹಾಗೂ ಅವರ ಸರಕಾರದ ವಿರುದ್ಧ ಬೀದಿಗಿಳಿದು ವಿರೋಧ ಮಾಡಿದಾಗಲೂ ರಾಹುಲ್ ಗಾಂಧಿಯ ವ್ಯಕ್ತಿತ್ವದ ಬಗ್ಗೆ ನನ್ನ ಅಭಿಪ್ರಾಯದಲ್ಲಿ ಬದಲಾವಣೆ ಆಗಿದ್ದಿಲ್ಲ.

ಆದರೆ ರಾಹುಲ್ ಗಾಂಧಿಯನ್ನು ಪಪ್ಪು ಮಾಡುವ ಮಾಧ್ಯಮಗಳ ಹಾಗೂ ರಾಜಕೀಯ ಅಭಿಯಾನವು ಅವರ ಬೇರೆಯದೇ ಒಂದು ಇಮೇಜನ್ನು ಸಾಮಾನ್ಯ ಜನರ ಮುಂದಿಟ್ಟಿತ್ತು. ರಾಜಕೀಯ ಕುಟುಂಬದ ಎರಡನೆಯ ಅಥವಾ ಮೂರನೆಯ ತಲೆಮಾರಿನ ನಾಯಕರ ತರಹವೇ ರಾಹುಲ್ ಗಾಂಧಿ ಕೂಡ ಒಬ್ಬ ಗಂಭೀರವಲ್ಲದ, ದೇಶದೊಂದಿಗೆ ಸಂಬಂಧವಿಟ್ಟುಕೊಳ್ಳದ, ತಿಳಿವಳಿಕೆಯಿಲ್ಲದ ಹಾಗೂ ದುರಹಂಕಾರಿ ವ್ಯಕ್ತಿ ಎಂದು ಅವರ ಬಗ್ಗೆ ತಿಳಿಯದಿರುವ ಒಬ್ಬ ಸಾಧಾರಣ ವ್ಯಕ್ತಿಯು ನಂಬಿಕೆ ಬೆಳೆಸಿಕೊಳ್ಳುವಂತೆ ಮಾಡಿತು. ಈ ದೇಶದ ಧೂಳು ಮಣ್ಣಿನಲ್ಲಿ ಎರಡು ದಿನಾನೂ ಸಹಿಸಿಕೊಳ್ಳಲು ಆಗುವುದಿಲ್ಲ ಎಂದು ತಿಳಿದುಕೊಂಡಿದ್ದರು. ಆದರೆ ಈ ಎರಡು ತಿಂಗಳಲ್ಲಿ ದೇಶದ ಜನರು ಅದೇ ರಾಹುಲ್ ಗಾಂಧಿಯನ್ನು ದೇಶದ ಉಬ್ಬುತಗ್ಗಿನ ರಸ್ತೆಗಳಲ್ಲಿ ನಡೆಯುವುದನ್ನು ನೋಡುತ್ತಿದ್ದಾರೆ, ಒಂದು ’ರಾಜಕೀಯ ತಪಸ್ಸಿ’ನ ತನ್ನ ಸಂಕಲ್ಪವನ್ನು ಪೂರ್ಣಗೊಳಿಸುವುದನ್ನು ನೋಡುತ್ತಿದ್ದಾರೆ. ಒಂದೆಡೆ, ಪ್ರಧಾನಮಂತ್ರಿಗಳು ಒಂದು ಫ್ಲೈಓವರ್ ಮೇಲೆ 20 ನಿಮಿಷ ಸಿಕ್ಕಾಕಿಕೊಂಡಾಗ, ತಮ್ಮದೇ ಪಕ್ಷದ ಬೆಂಬಲಿಗರ ಸಲುವಾಗಿಯೂ ತಮ್ಮ ಕಾರಿನ ಕಿಟಕಿಯ ಗಾಜನ್ನು ಕೆಳಗಿಳಿಸುವುದಿಲ್ಲ, ಇನ್ನೊಂದೆಡೆ ರಾಹುಲ್ ಗಾಂಧಿ ಪ್ರತಿಯೊಬ್ಬ ಮಗು, ಮುದುಕ ಮತ್ತು ಯುವಜನರನ್ನು ಅಪ್ಪಿಕೊಳ್ಳುತ್ತಿದ್ದಾರೆ; ಪರಿಚಯವಿದ್ದವರು, ಇಲ್ಲದವರ ಕೈಹಿಡಿದು ನಡೆಯುತ್ತಿದ್ದಾರೆ, ಓಡುತ್ತಿದ್ದಾರೆ, ಆಡುತ್ತಿದ್ದಾರೆ. ಇದೇ ರಾಹುಲ್ ಗಾಂಧಿ ಪ್ರತಿ ಸಂಜೆ ದೇಶವನ್ನು ಉದ್ದೇಶಿಸಿ ಬೆಲೆಏರಿಕೆ, ನಿರುದ್ಯೋಗ ಹಾಗೂ ಶ್ರೀಮಂತ ಮತ್ತು ಬಡವರ ನಡುವೆ ಇರುವ ಕಂದರದ ಬಗ್ಗೆ ದೇಶವನ್ನು ಎಚ್ಚರಿಸುತ್ತಿದ್ದಾರೆ; ಗೌರವ ಮತ್ತು ಸಮತೋಲನ ಕಳೆದುಕೊಳ್ಳದೇ ದ್ವೇಷದ ರಾಜಕೀಯದ ಮೇಲೆ ದಾಳಿ ಮಾಡುತ್ತಿದ್ದಾರೆ. ದೇಶವು ಒಬ್ಬ ಹೊಸ ರಾಹುಲ್ ಗಾಂಧಿಯ ದರ್ಶನ ಮಾಡುತ್ತಿದೆ.

ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆ: ದ್ವೇಷ ರಾಜಕಾರಣಕ್ಕೆ ಎದುರಾಗಿ ಬಿರುಸಿನ ನಡಿಗೆ

ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್‌ನ ಹೊರತಾಗಿ ಈ ಯಾತ್ರೆಯು ದೇಶದಲ್ಲಿಯ ಜನಾಂದೋಲನಗಳು ಹಾಗೂ ಜನರ ಸಂಘಟನೆಗಳ ನಡುವೆ ಒಂದು ಹೊಸ ಶಕ್ತಿಯ ಸಂಚಲನವಾಗುವಂತೆ ಹಾಗೂ ಅದರೊಂದಿಗೆ ಅವುಗಳ ನಡುವೆ ಸಮನ್ವಯ ಆಗುವಂತೆ ಮಾಡುತ್ತಿದೆ. ಈ ಯಾತ್ರೆಗೆ ಅಹ್ವಾನಿಸುವ ಸಮಯದಲ್ಲಿ ಕಾಂಗ್ರೆಸ್ ಪಕ್ಷವು ದೇಶದ ಹಲವಾರು ರಾಜಕೀಯ ಪಕ್ಷ, ಜನಾಂದೋಲನಗಳು, ಜನರ ಸಂಘಟನೆಗಳಿಗೆ ಈ ಯಾತ್ರೆಯೊಂದಿಗೆ ಸೇರಿಕೊಳ್ಳಲು ಆಹ್ವಾನಿಸಿತ್ತು. ಈ ಆಹ್ವಾನವನ್ನು ಸ್ವೀಕರಿಸಿ ದೇಶದ ಅನೇಕ ಗಣ್ಯ ವ್ಯಕ್ತಿಗಳು ಹಾಗೂ ಜನರ ಸಂಘಟನೆಗಳು ಆರಂಭದಿಂದಲೇ ಈ ಯಾತ್ರೆಯಲ್ಲಿ ಸೇರಿಕೊಂಡಿದ್ದರು. ಆದರೆ ಅನೇಕರ ಮನಸ್ಸಿನಲ್ಲಿ ಹಲವಾರು ಅನುಮಾನಗಳಿದ್ದವು, ಹಳೆಯ ತಕರಾರುಗಳಿದ್ದವು. ಕಳೆದ ಎರಡು ತಿಂಗಳಲ್ಲಿ ಈ ಅವಿಶ್ವಾಸ ನಿಧಾನವಾಗಿ ಕಾಣೆಯಾಗುತ್ತಿವೆ. ಕಾಂಗ್ರೆಸ್ ಕಾರ್ಯಕರ್ತರ ಜೊತೆಗೆ ಸೇರಿ ನಡೆಯುತ್ತಿರುವ ಜನಾಂದೋಲನಗಳ ದಂಡು ಜೊತೆಜೊತೆಗೆ ಹೆಜ್ಜೆಹಾಕುತ್ತಿವೆ. ಪ್ರತಿದಿನ ಸ್ಥಳೀಯ ಸಂಘಟನೆಗಳು ತಳಮಟ್ಟದ ವಿಷಯಗಳನ್ನಿಟ್ಟುಕೊಂಡು ರಾಹುಲ್ ಗಾಂಧಿಯೊಂದಿಗೆ ಭೇಟಿ ಮಾಡುತ್ತಿವೆ. ಒಂದು ದಿನ ಆತ್ಮಹತ್ಯೆಗೆ ಬಲಿಯಾದ ರೈತರ ಕುಟುಂಬ ಭೇಟಿಯಾದರೆ ಇನ್ನೊಂದು ದಿನ ಬೀಡಿ ಕಾರ್ಮಿಕರು ಭೇಟಿ ಮಾಡಿದ್ದಾರೆ. ಯಾವುದೋ ಒಂದು ದಿನ ದೇವದಾಸಿ ಪದ್ಧತಿಗೆ ಬಲಿಯಾದ ಮಹಿಳೆಯರು ಭೇಟಿಯಾದರೆ ಇನ್ನೊಂದು ದಿನ ಇಂದಿಗೂ ಅಂಚಿನಲ್ಲಿರುವ ಆದಿವಾಸಿ ಹಾಗೂ ಶೋಷಿತ ಸಮಾಜದವರು ಭೇಟಿಯಾಗಿದ್ದಾರೆ. ಒಂದು ದಿನ ಸಾರಾಯಿ ವಿರೋಧಿ ಅಂದೋಲನದ ಪ್ರತಿನಿಧಿಗಳು ಹಾಗೂ ಕೆಲವು ಸಲ ಪರ್ಯಾಯ ಶಿಕ್ಷಣ, ಆರೋಗ್ಯ ಹಾಗೂ ಕೃಷಿಯ ಪ್ರಯೋಗಗಳನ್ನು ಮಾಡುತ್ತಿರುವ ಸಂಘಟನೆಗಳು. ಈ ಯಾತ್ರೆ ಕನಸುಗಳನ್ನು ಒಂದುಗೂಡಿಸುತ್ತಿದೆ, ನೋವಿನಿಂದಲೇ ಪ್ರಾರಂಭವಾಗಿ ಹಲವು ಸಂಬಂಧಗಳನ್ನು ಹುಟ್ಟುಹಾಕುತ್ತಿದೆ. ಕಳೆದ ಕೆಲವು ದಿನಗಳಲ್ಲಿ ಈ ನದಿಯಲ್ಲಿ ಹಲವಾರು ಧಾರೆಗಳು ಬಂದು ಸೇರಿಕೊಂಡಿವೆ, ಸಣ್ಣಸಣ್ಣ ಯಾತ್ರೆಗಳು ಸೇರಿಕೊಳ್ಳುತ್ತಿವೆ, ಹೆಸರಾಂತ ನಾಗರಿಕರು ಸೇರಿಕೊಳ್ಳುತ್ತಿದ್ದಾರೆ. ಒಂದು ಸಮಯದಲ್ಲಿ ಭ್ರಷ್ಟಾಚಾರ ವಿರೋಧಿ ಆಂದೋಲನದ ಮೂಲಕ ಕಾಂಗ್ರೆಸ್‌ಅನ್ನು ವಿರೋಧ ಮಾಡುತ್ತಿದ್ದ ಪ್ರಶಾಂತ್ ಭೂಷಣ್ ಮತ್ತು ಮಾಜಿ ನೌಕಾಸೇನೆ ಪ್ರಮುಖ ಅಡ್ಮಿರಲ್ ರಾಮದಾಸ್ ಅವರುಗಳು ರಾಹುಲ್ ಗಾಂಧಿಯೊಂದಿಗೆ ಯಾತ್ರೆ ಮಾಡುತ್ತಿದ್ದಾರೆ; ಸಿನೆಮಾ ಜಗತ್ತಿನ ಪೂಜಾ ಭಟ್ ಮತ್ತು ಸುಶಾಂತ್ ಸಿಂಗ್ ಕೂಡ ನಡೆಯುತ್ತಿದ್ದಾರೆ. ಕಾಂಗ್ರೆಸ್‌ನ ತುರ್ತುಪರಿಸ್ಥಿತಿಯ ಸಮಯದಲ್ಲಿ 19 ತಿಂಗಳು ಸೆರೆವಾಸ ಅನುಭವಿಸಿದ ಸೇನಾನಿಯೂ ಜೊತೆಗೆ ನಡೆಯುತ್ತಿದ್ದಾರೆ ಹಾಗೂ ಯಾವುದೇ ಪಕ್ಷ ಅಥವಾ ಸಂಘಟನೆಯೊಂದಿಗೆ ಸಂಬಂಧವಿಟ್ಟುಕೊಳ್ಳದ ಯುವಕ ಯುವತಿಯರೂ ನಡೆಯುತ್ತಿದ್ದಾರೆ. ನಿಧಾನವಾಗಿ ಸಣ್ಣ ಹಳ್ಳವೊಂದು ಈಗ ಒಂದು ನದಿಯಾಗಿ ಬದಲಾಗುತ್ತಿದೆ.

ಹಾಗಾದರೆ, ದೇಶದ ಮೂಡ್ ಬದಲಾಗಿದೆಯೇ? ದ್ವೇಷದ ರಾಜಕೀಯ ನಿಲ್ಲುವುದೇ? ಸದ್ಯದಲ್ಲೇ ನಡೆಯಲಿರುವ ಗುಜರಾತ್ ಮತ್ತು ಹಿಮಾಚಲ್ ಪ್ರದೇಶದ ಚುನಾವಣೆಗಳ ಮೇಲೆ ಪರಿಣಾಮ ಬೀರುವುದೇ? ಸದ್ಯಕ್ಕೆ ಇಂತಹ ಯಾವುದೇ ದೂರಗಾಮಿ ಅಥವಾ ತಾತ್ಕಾಲಿಕ ನಿರೀಕ್ಷೆ ಇಟ್ಟುಕೊಳ್ಳುವುದು ತಪ್ಪಾಗುತ್ತದೆ. ಈಗ ಇಷ್ಟನ್ನು ಹೇಳಬಹುದು: ದೇಶದಲ್ಲಿ ಯಾವ ಅಂಧಕಾರದ, ನಿರಾಶೆಯ ಹಾಗೂ ಶೋಕದ ವಾತಾವರಣವಿತ್ತೋ, ಒಂದು ಪರ್ಯಾಯವಿಲ್ಲದ ಘಟ್ಟವಿತ್ತೋ, ಮೌನದ, ಒಂಟಿತನದ ಹಾಗೂ ಭಯದ ಗೋಡೆಯಿತ್ತೋ, ಅದರಲ್ಲಿ ಒಂದು ಬಿರುಕು ಮೂಡಿದೆ. ಅಂಧಕಾರದಲ್ಲಿ ಬೆಳಕಿನ ಕಿರಣವೊಂದು ಕಾಣಿಸಿಕೊಳ್ಳುತ್ತಿದೆ. ಭೋಪಾಲ್‌ದಲ್ಲಿ ಈ ಯಾತ್ರೆಯ ಬಗ್ಗೆ ಆಯೋಜಿಸಿದ್ದ ಒಂದು ಗೋಷ್ಠಿಯಲ್ಲಿ ಎಡಪಂಥೀಯ ಚಿಂತಕ ಹಾಗೂ ಕಾರ್ಯಕರ್ತ ಬಾದಲ್ ಸರೋಜ್ ಹೇಳಿದ್ದು ಇದು: “ಭಾರತ ಜೋಡೊ ಯಾತ್ರೆಯು ನಮ್ಮ ಕಾಲಘಟ್ಟದ ಒಂದು ಮಹತ್ವಪೂರ್ಣ ಘಟನೆಯಾಗಿದೆ” ಎಂದು.

ನನಗೆ ಯಾರಾದರೂ ಈ ಯಾತ್ರೆಯಿಂದ ಏನನ್ನು ಸಾಧಿಸಲಾಗಿದೆ ಎಂದು ಕೇಳಿದಾಗ ನಾನು ರಘುವೀರ್ ಸಹಾಯ್ ಅವರ ಪ್ರಸಿದ್ಧ ಕವಿತೆ ’ಆತ್ಮಹತ್ಯೆಯ ವಿರುದ್ಧ’ದ ಈ ಸಾಲುಗಳನ್ನು ಹೇಳುತ್ತೇನೆ:

“ಏನೋ ಆಗುವುದು, ಏನೋ ಆಗುವುದು ಒಂದು ವೇಳೆ ನಾನು ಮಾತನಾಡಿದರೆ
ಮುರಿದು ಬೀಳಲಿಲ್ಲ ಮುರಿದು ಬೀಳಲಿಲ್ಲ ಅಧಿಕಾರದ ಭ್ರಮೆ
ನನ್ನೊಳಗಿನ ಒಬ್ಬ ಹೇಡಿ ಮುರಿದು ಬೀಳುವನು”

(ಕನ್ನಡಕ್ಕೆ): ರಾಜಶೇಖರ ಅಕ್ಕಿ

ಯೋಗೇಂದ್ರ ಯಾದವ್

ಯೋಗೇಂದ್ರ ಯಾದವ್
ರಾಜಕೀಯ ಚಿಂತಕರು ಮತ್ತು ಸ್ವರಾಜ್ ಇಂಡಿಯಾದ ರಾಷ್ಟಾಧ್ಯಕ್ಷರು. ಪ್ರಸ್ತುತ ರಾಜಕೀಯ ಸಂತಿಗಳ ಬಗ್ಗೆ, ಪ್ರಜಾಪ್ರಭುತ್ವವನ್ನು ಉಳಿಸುವ ತಮ್ಮ ಚಿಂತನೆಗಳನ್ನು ಹಲವು ಪತ್ರಿಕೆಗಳಲ್ಲಿ ಸಕ್ರಿಯವಾಗಿ ಮಂಡಿಸುತ್ತಾರೆ. ‘ಮೇಕಿಂಗ್ ಸೆನ್ಸ್ ಆಫ್ ಇಂಡಿಯನ್ ಡೆಮಾಕ್ರಸಿ’ ಪುಸ್ತಕ ರಚಿಸಿದ್ದಾರೆ.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...