Homeಮುಖಪುಟಪುಣ್ಯಕೋಟಿ ಯೋಜನೆಗಾಗಿ ನೌಕರರ ಸಂಬಳ ಕಡಿತಕ್ಕೆ ಸರ್ಕಾರದ ಆದೇಶ: ನೌಕರರ ತೀವ್ರ ವಿರೋಧ

ಪುಣ್ಯಕೋಟಿ ಯೋಜನೆಗಾಗಿ ನೌಕರರ ಸಂಬಳ ಕಡಿತಕ್ಕೆ ಸರ್ಕಾರದ ಆದೇಶ: ನೌಕರರ ತೀವ್ರ ವಿರೋಧ

- Advertisement -
- Advertisement -

ರಾಜ್ಯದ ಸರ್ಕಾರಿ ಮತ್ತು ಖಾಸಗೀ ಗೋಶಾಲೆಗಳಲ್ಲಿರುವ ಗೋವುಗಳನ್ನು ದತ್ತು ತೆಗೆದುಕೊಳ್ಳುವ ಪುಣ್ಯಕೋಟಿ ಯೋಜನೆಗಾಗಿ ಸರ್ಕಾರಿ ನೌಕರರ ನಂವೆಂಬರ್ ತಿಂಗಳ ಸಂಬಳದಲ್ಲಿ ಕಡಿತ ಮಾಡುವುದಾಗಿ ಆದೇಶ ಹೊರಡಿಸಿದೆ. ಈ ಬೆನ್ನಲ್ಲೆ ಹಲವು ಸರ್ಕಾರಿ ನೌಕರರು ತಮ್ಮ ಸಂಬಳ ಕಡಿತಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವಿಧಾನಸಭಾ ಸಚಿವಾಲಯದ ನೌಕರರ ಸಂಘದ ಅಧ್ಯಕ್ಷರೆ ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಸರ್ಕಾರದ ಆರ್ಥಿಕ ಇಲಾಖೆಯ ಉಪಕಾರ್ಯದರ್ಶಿ ಉಮಾ ಕೆ ರವರು ನಡಾವಳಿ ಪತ್ರ ಹೊರಡಿಸಿದ್ದಾರೆ. “ಕರ್ನಾಟಕ ಸರ್ಕಾರದ ಪುಣ್ಯಕೋಟಿ ದತ್ತು ಯೋಜನೆಯ ಸುಗಮ ಅನುಷ್ಟಾನಗೊಳಿಸಲು ಅನುವಾಗಲು ರಾಜ್ಯ ಸರ್ಕಾರಿ ನೌಕರರು ಹಾಗೂ ನಿಗಮ/ಮಂಡಳಿ/ಪ್ರಾಧಿಕಾರ/ವಿಶ್ವವಿದ್ಯಾಲಯ/ಸ್ವಾಯುತ್ತ ಸಂಸ್ಥೆಗಳ ನೌಕರರ ನವೆಂಬರ್-2022ರ ಮಾಹೆಯ ವೇತನದಿಂದ ಒಂದು ಬಾರಿಗೆ ಸೀಮತವಾಗಿ ವಂತಿಗೆಯನ್ನು ಕಟಾಯಿಸಲು ಹಾಗೂ ನಿಗದಿತ ಯೋಜನೆಗೆ ಬಳಕೆ ಮಾಡಲು ಸರ್ಕಾರವೂ ಮಂಜೂರಾತಿ ನೀಡಿದೆ” ಎಂದು ನಡಾವಳಿಯಲ್ಲಿ ತಿಳಿಸಲಾಗಿದೆ.

ಕ್ಲಾಸ್ ಒನ್ ಅಧಿಕಾರಿಗಳು ತಲಾ 11,000 ರೂ, ಗ್ರೂಪ್ ಬಿ ನೌಕರರು 4,000 ರೂ ಮತ್ತು ಗ್ರೂಪ್ ಸಿ ನೌಕರರ 400 ರೂಗಳನ್ನು ಕಡಿತ ಮಾಡಲಾಗುವುದು. ವೇತನದಿಂದ ವಂತಿಕೆ ಕೊಡಲಿಚ್ಛಿಸದ ನೌಕರರು ತಮ್ಮ ಅಸಮ್ಮತಿಯನ್ನು ಸಂಬಂಧಪಟ್ಟ ಬಡವಾಡೆ ಅಧಿಕಾರಿಗಳಿಗೆ ಲಿಖಿತ ಮೂಲಕ ನವೆಂಬರ್ 25ರೊಳಗೆ ಸಲ್ಲಿಸತಕ್ಕದ್ದು ಎಂದು ಸಹ ನಡಾವಳಿಯಲ್ಲಿ ಹೇಳಲಾಗಿದೆ.

ಆದರೆ ಸರ್ಕಾರ ಈ ಯೋಜನೆಗೆ ಹಿಂದಿನಿಂದಲೂ ಸಹ ವಿರೋಧವಿದ್ದು, ಈಗ ಸಂಬಳ ಕಡಿತಕ್ಕೆ ಬಹಳಷ್ಟು ನೌಕರರು ವಿರೋಧ ವ್ಯಕ್ತಪಡಿಸಿದ್ದಾರೆ. ಹೆಸರು ಹೇಳಲು ಇಚ್ಚಿಸದ, ರಾಯಚೂರಿನಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿರುವ ನೌಕರರೊಬ್ಬರು ನಾನುಗೌರಿ.ಕಾಂ ಜೊತೆ ಮಾತನಾಡಿ, “ಗೋವು ಪೂಜ್ಯನೀಯ, ಹಾಗಾಗಿ ಅದನ್ನು ರಕ್ಷಿಸಲು ಹಣ ಕೊಡಿ ಎಂದು ಕೇಳುತ್ತಿದ್ದಾರೆ. ಅದು ಒಂದು ಧರ್ಮಕ್ಕೆ ಸಂಬಂಧಿಸಿದ ವಿಷಯವಾಗಿದ್ದು ಅದನ್ನು ನಾನು ಅಲ್ಲಗಳೆಯುವುದಿಲ್ಲ. ಆದರೆ ಎಲ್ಲಾ ಧರ್ಮದ ನೌಕರರು ಸಹ ಇದ್ದು ಎಲ್ಲರ ಮೇಲೆ ಒಂದು ಧರ್ಮ ನಂಬಿಕೆಯನ್ನು ಹೇರುವುದು ಸರಿಯಲ್ಲ” ಎಂದರು.

ಸರ್ಕಾರಿ ನೌಕರರ ಸಂಘದ ಸಿ.ಎಸ್ ಷಡಕ್ಷರಿಯವರು ಯಾರೊಂದಿಗೂ ಚರ್ಚಿಸದೆ ದೇಣಿಗೆ ನೀಡುವುದಾಗಿ ಘೋಷಿಸಿದ್ದಾರೆ. ಅವರು ಸಂಘದ ನೌಕರರ ಹಿತ ಕಾಯುವ ಕೆಲಸ ಮಾಡುತ್ತಿಲ್ಲ. ಹಳೆ ಪಿಂಚಣಿ ವ್ಯವಸ್ಥೆಗಾಗಿ ನೌಕರರು ಬಹಳ ದಿನಗಳಿಂದ ಹೋರಾಟ ಮಾಡುತ್ತಿದ್ದಾರೆ. ಆದರೆ ಅದರ ಬಗ್ಗೆ ಸೊಲ್ಲತ್ತೆದ ಅವರು ಉಪಯೋಗಕ್ಕೆ ಬಾರದ ಯೋಜನೆಗೆ ನೌಕರರು ಹಣ ಕೊಡಬೇಕೆಂದು ಒತ್ತಾಯಿಸುವುದು ಒಪ್ಪಲು ಸಾಧ್ಯವಿಲ್ಲ” ಎಂದರು.

ಇಲ್ಲಿ ಹಣದ ಪ್ರಶ್ನೆಯಾಗಿ ಇದನ್ನು ನೋಡುತ್ತಿಲ್ಲ. ನಾವು ಹಿಂದೆ ಕೋವಿಡ್ ಸಮಯದಲ್ಲಿ ಮತ್ತು ನೆರೆ ಸಂದರ್ಭದಲ್ಲಿ ಒಂದು ದಿನದ ವೇತನ ಕೊಟ್ಟಿದ್ದೇವೆ. ಇಂದು ಸಹ ಅಪೌಷ್ಟಿಕ ಮಕ್ಕಳಿಗಾಗಿ, ಸರ್ಕಾರಿ ಶಾಲೆಗಳ ಅಭಿವೃದ್ದಿಗೆ ಹಣ ಕೇಳಿದರೆ ಒಂದು ದಿನದ ವೇತನ ಕೊಡಲು ಸಿದ್ದರಿದ್ದೇವೆ. ನಮ್ಮ ನಮ್ಮ ಸರ್ಕಾರಿ ಶಾಲೆಗಳ ಅಭಿವೃದ್ದಿಗೆ ನಾನು 10,000 ರೂ ಕೊಡಲು ಸಿದ್ದನಿದ್ದೇನೆ. ಆದರೆ ಧರ್ಮದ ಹೆಸರಿನಲ್ಲಿ ಹಣ ಕೇಳುವುದಕ್ಕೆ ನಮ್ಮ ವಿರೋಧವಿದೆ ಎಂದರು.

ಬರಹಗಾರ ಯೋಗೇಶ್ ಮಾಸ್ಟರ್ ಈ ಯೋಜನೆಯ ಕುರಿತು ಪ್ರಶ್ನೆಯೆತ್ತಿದ್ದಾರೆ. “ಗೋ ಸಂತತಿಯು ನಶಿಸುವಂತ ಅಪಾಯದಲ್ಲಿದೆಯೇ? ಈಗ ಕರ್ನಾಟಕ ರಾಜ್ಯವು ಇಂತಹದೊಂದು ಯೋಜನೆಯ ಅಗತ್ಯವನ್ನು ಹೊಂದಿದೆಯೇ? ಈ ರೀತಿಯಲ್ಲಿ ರಾಜ್ಯದ ನೌಕರರ ಹಣವನ್ನು ಇಂತಹದೊಂದು ಯೋಜನೆಗೆ ಬಳಸಿಕೊಳ್ಳಲು ಸೂಕ್ತ ಸಭೆಗಳನ್ನು ನಡೆಸೆ, ಅವರ ಅಭಿಪ್ರಾಯಗಳನ್ನೇನಾದರೂ ಸಂಗ್ರಹಿಸಿರುವುದೇ? ಎಲ್ಲದಕ್ಕಿಂತ ಮುಖ್ಯವಾಗಿ ಗೋ ಸಂತತಿಯನ್ನು ರಕ್ಷಿಸುವಂತ ವಿಷಯವು ಅಷ್ಟೊಂದು ಪ್ರಾಧಾನ್ಯತೆಯನ್ನು ಪಡೆದಿದೆಯೇ?” ಎಂದು ಪ್ರಶ್ನಿಸಿದ್ದಾರೆ.

ರಾಜ್ಯದಲ್ಲಿ ಶಿಕ್ಷಣ, ಆರೋಗ್ಯ, ಆಹಾರ, ಉದ್ಯೋಗ, ಶಿಶು ಮರಣ ಪ್ರಮಾಣದ ತಡೆ, ಸರ್ಕಾರಿ ಆಸ್ಪತ್ರೆ / ಶಾಲೆಗಳಲ್ಲಿರುವ ಮೂಲಭೂತ ಸೌಕರ್ಯಗಳ ಕೊರತೆಯನ್ನು ನೀಗಿಸುವಿಕೆ, ರೈತರ ಸಮಸ್ಯೆ, ಗುತ್ತಿಗೆ ಕೆಲಸಗಾರರ ವೇತನಾಶ್ರೇಣಿಯ ಪರಿಷ್ಕರಣೆಗಳೆಲ್ಲದಕ್ಕಿಂತ ಅತ್ಯಗತ್ಯವಾಗಿರುವುದೇ ಈ ಪುಣ್ಯಕೋಟಿ ಯೋಜನೆ? ಅಥವಾ ನೈಸರ್ಗಿಕ ವಿಕೋಪವೋ ಅಥವಾ ಯುದ್ಧ ಅಥವಾ ಕ್ಷಾಮದಂತಹ ದುರ್ಭಿಕ್ಷ ವಕ್ಕರಿಸಿದೆಯೇ?
ರಾಜ್ಯ ಸರ್ಕಾರಕ್ಕೆ ಯೋಜನೆಗಳನ್ನು ರೂಪಿಸುತ್ತಿರುವವರು ಯಾರು? ಅವರಿಗೆ ಜನಪರ ಯೋಜನೆಗಳಿಗಿಂತ, ಗೋ-ಪರ ಯೋಜನೆಗಳು ಮುಖ್ಯವಾಯ್ತೇ? ಎಂದು ಅವರು ಫೇಸ್‌ಬುಕ್ ಪೋಸ್ಟ್‌ ಮೂಲಕ ಪ್ರಶ್ನೆ ಎತ್ತಿದ್ದಾರೆ.

ಈ ಯೋಜನೆಗೆ ಹಿಂದಿನಿಂದಲೂ ಸಹ ಕರ್ನಾಟಕ ರಾಜ್ಯ ಸರ್ಕಾರಿ ಎಸ್ಸಿ /ಎಸ್ಟಿ ನೌಕರರ ಸಮನ್ವಯ ಸಮಿತಿಯ ಅಧ್ಯಕ್ಷರಾದ ಡಿ. ಶಿವ ಶಂಕರ್ ಮತ್ತು ವಿಧಾನಸಭಾ ಸಚಿವಾಲಯದ ನೌಕರರ ಸಂಘದ ಪಿ.ಗುರುಸ್ವಾಮಿಯವರು ವಿರೋಧಿಸಿದ್ದಾರೆ.

ಇದನ್ನೂ ಓದಿ; ಪುಣ್ಯಕೋಟಿ ಹಸು ದತ್ತು ಯೋಜನೆಗಾಗಿ ಸರ್ಕಾರಿ ನೌಕರರು 100 ಕೋಟಿ ದೇಣಿಗೆ ನೀಡುತ್ತೇವೆ -ಸಿ.ಎಸ್ ಷಡಕ್ಷರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ದೆಹಲಿ ಮಹಿಳಾ ಆಯೋಗದ 223 ಗುತ್ತಿಗೆ ನೌಕರರು ಹುದ್ದೆಯಿಂದ ವಜಾ!

0
ದೆಹಲಿ ಮಹಿಳಾ ಆಯೋಗದ 223 ಗುತ್ತಿಗೆ ನೌಕರರನ್ನು ಲೆಫ್ಟಿನೆಂಟ್ ಗವರ್ನರ್ ವಿ.ಕೆ ಸಕ್ಸೇನಾ ಅವರು ಹುದ್ದೆಯಿಂದ ವಜಾಗೊಳಿಸಿದ್ದಾರೆ. ಈ ಹಿಂದೆ ಮಹಿಳಾ ಆಯೋಗದ ಅಧ್ಯಕ್ಷೆಯಾಗಿದ್ದ ಎಎಪಿಯ ರಾಜ್ಯಸಭೆ ಸಂಸದೆ ಸ್ವಾತಿ ಮಲಿವಾಲ್ ಅವರು...