1.
ನೀನು,
ನಿನ್ನ ವಯಸ್ಸಲ್ಲ,
ನಿನ್ನ ಎತ್ತರವಲ್ಲ,
ನೀನು ಧರಿಸುವ ಉಡುಪೂ ಅಲ್ಲ,
ನಿನ್ನ ತೂಕವಲ್ಲ,
ನಿನ್ನ ಕೂದಲಿನ ಬಣ್ಣವೂ ಅಲ್ಲ.
ನೀನು ನಿನ್ನ ಹೆಸರಲ್ಲ,
ನಿನ್ನ ಕೆನ್ನೆಯಲಿ ಬೀಳುವ ಗುಳಿಯೂ ಅಲ್ಲ.
ಆದರೆ ನೀನು,
ನೀನು ಓದಿದ ಎಲ್ಲ ಪುಸ್ತಕಗಳು,
ನೀನು ಆಡಿದ ಎಲ್ಲ ಮಾತುಗಳು,
ನಿನ್ನ ಮುಂಜಾನೆಯ ಗಡಸು ದನಿ ಮತ್ತು
ನೀನು ಮುಚ್ಚಿಟ್ಟುಕೊಳ್ಳಲು ಪ್ರಯತ್ನಿಸುವ
ನಿನ್ನ ಮುಗುಳ್ನಗು.
ನೀನು,
ನಿನ್ನ ನಗೆಯೊಳಗಿನ ಮಾಧುರ್ಯ ಮತ್ತು
ನೀನು ಅತ್ತ ಎಲ್ಲ ಕಣ್ಣೀರು.
ನೀನು,
ಗಟ್ಟಿಯಾಗಿ ನೀನು ಹಾಡುವ ಹಾಡುಗಳು,
ನಿನಗೆ ಮಾತ್ರ ಗೊತ್ತಿರುವ ನಿನ್ನ ಏಕಾಂತ,
ನೀನು ಭೇಟಿ ಮಾಡಿದ ಎಲ್ಲ ಸ್ಥಳಗಳು ಮತ್ತು
ನೀನು ಮನೆ ಎಂದು ಕರೆಯುವ ಜಾಗ.
ನೀನು,
ನೀನು ನಂಬಿಕೆಯಿಟ್ಟಿರುವ ಸಂಗತಿಗಳು,
ನೀನು ಪ್ರೀತಿಸುವ ಎಲ್ಲ ಜನಗಳು ಮತ್ತು,
ನಿನ್ನ ಬೆಡ್ರೂಮಿನಲ್ಲಿರುವ ಎಲ್ಲ ಫೋಟೋಗಳು ಮತ್ತು
ನೀನು ಕನಸುಗಾಣುವ ಭವಿಷ್ಯ.
ಎಷ್ಟೊಂದು ಚೆಲುವುಗಳಿಂದ
ಸೃಷ್ಟಿಯಾಗಿರುವೆ ನೀನು
ಆದರೂ
ಬಹುಶಃ ಎಲ್ಲ ಮರೆತಿರುವೆ,
ಯಾವಾಗ ಜನ
ನೀನು ಯಾವುದಲ್ಲವೋ ಆ ಸಂಗತಿಗಳಿಂದಲೇ
ನಿನ್ನನ್ನು ಗುರುತಿಸುತ್ತಿದ್ದಾರೆ ಎನ್ನುವುದು
ಗೊತ್ತಾದಾಗ ನಿನಗೆ.
________________________________
2.
ನಿನ್ನ ಕಣ್ಣುಗಳ ದಿಟ್ಟಿಸುತ್ತ,
ನಿನ್ನ ಎಲ್ಲ ಮಾತುಗಳಿಗೆ ಕಿವಿಯಾಗಬಲ್ಲೆನೇ ಹೊರತು
ಎಂದೂ ನಿನ್ನೆದುರು ನನ್ನ ಎದೆಯ ಬಿಚ್ಚಿಡುವುದಿಲ್ಲ.
ನಾನು ಬದಲಾಗಬೇಕು ಎನ್ನುವ
ನಿನ್ನ ಬೇಡಿಕೆಯಲ್ಲಿ ಇರುವ ಕಳಕಳಿ
ಗೊತ್ತಾಗುತ್ತದೆ ನನಗೆ.
ಆದರೆ ಈ ಬದಲಾಗುವುದನ್ನ
ಎಲ್ಲಿಂದ ಮೊದಲು ಮಾಡಲಿ ನಾನು?
ನನ್ನ ನಗು ಲೋಕಕ್ಕೆ ಕಾಣುವುದಕ್ಕಿಂತ ಹೆಚ್ಚಾಗಿ
ನನಗೆ ಕಾಣಿಸಿದ್ದೇ ಹೆಚ್ಚು.
ಕಾರಣ ಅಂಥ ವಿಶೇಷವೇನಿಲ್ಲ,
ನನ್ನ ನಗು
ನಾನು ನನ್ನ ಜೊತೆ ಇರುವಾಗ ಮಾತ್ರ ಸಾಚಾ.
ಅರ್ಥವಾಗುವುದಿಲ್ಲ ಜನರಿಗೆ ನನ್ನ ಭಾವನೆಗಳು
ಮತ್ತು ಈಗೀಗ ಅವರು ಅರ್ಥ ಕೇಳುವುದಿಲ್ಲ ಕೂಡ,
ಏಕೆಂದರೆ
ಮೂರ್ಖರನ್ನಾಗಿಸಿದ್ದೇನೆ ಅವರನ್ನೆಲ್ಲ ನಾನು
ಎನ್ನುವ ಅನುಮಾನ
ಅವರಿಗಷ್ಟೇ ಅಲ್ಲ ಇದೆ ನನಗೂ.
ಮುಖವಾಡದಾಚೆಗಿನ ನನ್ನ ಮುಖ
ಕಾಣಿಸುವುದಿಲ್ಲ ಅವರಿಗೆ.
ಲೋಕ ಇನ್ನೂ ನಿದ್ದೆಯಲ್ಲಿರುವಾಗ,
ರಾತ್ರಿಯನ್ನು ಸಾಕ್ಷಿಯಾಗಿಟ್ಟುಕೊಂಡು
ಜನ ನನ್ನೆದುರು
ತಮ್ಮ ಕುತೂಹಲಗಳನ್ನು ತೋಡಿಕೊಂಡಾಗಲೆಲ್ಲ,
ನನ್ನ ರಹಸ್ಯಗಳನ್ನ ಅವರೆದುರು ಬಿಚ್ಚಿಟ್ಟು
ಹಾಕಿದ್ದೇನೆ ಸವಾಲು,
ಆದರೆ ನನ್ನ ಕಣ್ಣಿನ ಹಸಿ ಆರಿ ಹೋಗುವ ಮುನ್ನವೇ
ಅವರು ಎದ್ದು ಹೋದಾಗ ಖಾತ್ರಿ ಮಾಡಿಕೊಂಡಿದ್ದೇನೆ,
ಜನರಿಗೆ ಬಾಡಿಗೆ ಕುತೂಹಲ ಮಾತ್ರ
ಸ್ವಂತಿಕೆಯಿಲ್ಲ ಒಬ್ಬರಲ್ಲೂ
ನನ್ನ ಬಗ್ಗೆ
ನನ್ನ ನಗು ನಕಲಿ ಎನ್ನುವ
ಲೋಕದ ಆಪಾದನೆಗಳನ್ನು ಕೇಳಿದಾಗಲೆಲ್ಲ
ನಗುತ್ತೇನೆ ಬಿದ್ದು ಬಿದ್ದು ಮತ್ತು
ಬಾಕಿ ಉಳಿದ ರಾತ್ರಿಗಳ ಕತ್ತಲನ್ನು ಮಡಿಚಿಟ್ಟು
ಬೆಚ್ಚಿ ಬೀಳಿಸುತ್ತೇನೆ
ಗಂಡು ಜಾತಿಯ ತಿಳಿವಳಿಕೆಯನ್ನ.
________________________________
3.
ಹೃದಯಗಳಿಗಾಗಿಯೇ ಎಂಬಂತೆ
ಮಾಡಿಸಿಟ್ಟುಕೊಂಡಿದ್ದಾಳೆ ಒಂದು ಬುಕ್ ಶೆಲ್ಫ್,
ಮತ್ತು ಬರೆಯುವ ಶಾಯಿ
ತುಂಬಿಕೊಂಡಿದೆ ಅವಳ ನರನಾಡಿಗಳಲ್ಲಿ.
ಅವಳ ಮೆದುಳಿನಲ್ಲಿ ಕುಟ್ಟುವ
ಟೈಪ್ ರೈಟರ್‌ನ ಕೀಗಳು ನಿನ್ನನ್ನು
ಅವಳ ಕಥೆಯಲ್ಲಿ ಪ್ರಕಟ ಮಾಡುತ್ತವೆ.
ಅವಳ ಪುಟಗಳನ್ನು ತಿರುವಿಹಾಕಿದ,
ಆದರೆ ಕೊನೆಯ ಪುಟ ಮುಟ್ಚುವ ಮುನ್ನವೇ
ಪುಸ್ತಕ ಮುಚ್ಚಿಬಿಟ್ಟವರ ಕಥೆಗಳ ನೂಕುನುಗ್ಗಲಿನಿಂದಾಗಿ
ತುಂಬಿಹೋಗಿದೆ ಅವಳ ಬುಕ್ ಶೆಲ್ಫ್.
ಕೆಲವು ಪುಸ್ತಕಗಳು ಡಸ್ಟ ಬಿನ್ ಸೇರಿರುವಾಗಲೂ
ಆ ಒಂದು ಪುಸ್ತಕ ಮಾತ್ರ
ಅವಳ ಫೈನೆಸ್ಟ್ ರೈಟಿಂಗ್
‘The One’s Who Lost My Trust’
ಧೂಳು ತಿನ್ನುತ್ತ ಬುಕ್ ಶೆಲ್ಫ್‌ನ ತುದಿಯಲ್ಲಿ
ಕೈಗೆಟುಕುವ ಹಾಗೆ ಬಾಗಿದೆ.
ಅವಳಿಗೆ ಕೆಲ ಪುಸ್ತಕಗಳನ್ನ
ಓಪನ್ ಮಾಡಲು ಭಯ ಮತ್ತು
ಕೆಲ ಪುಸ್ತಕಗಳನ್ನು ಮುಚ್ಚಲು ಬೇಸರ.
ಭೇಟಿ ಮಾಡಿದ ಪ್ರತೀ ಮನುಷ್ಯನ ಕಥೆಗಳು
ಪುಸ್ತಕದ ಕೊನೆಯಿಲ್ಲದ ಸಾಲುಗಳಲ್ಲಿ
ಹಿಗ್ಗಿಸಿಕೊಂಡಿವೆ ತಮ್ಮನ್ನು ತಾವು.
ಕೆಲವರು ಒಂದು ವಾಕ್ಯದಲ್ಲಿ ಮಾತ್ರ
ಮತ್ತು ಕೆಲವರು ಒಮ್ಮೆ ಕಥೆಯ ಮುಖ್ಯ ಭಾಗದಲ್ಲಿ,
ಅವಳ ಎದೆಯ ಮೇಲೆ ಬಿಟ್ಟು ಹೋಗಿದ್ದಾರೆ
ಶಾಯಿಯ ಹೆಜ್ಜೆ ಗುರುತುಗಳ.
ನಿಮಗೆ ಆಶ್ಚರ್ಯ ಆಗಬಹುದು
ಯಾಕೆ ಹೀಗೆ ಅವಳು?
ಯಾಕೆ ತನಗೆ ಎದುರಾದವರನ್ನ
ಕಟ್ಟಿ ಹಾಕುತ್ತಾಳೆ ತನ್ನ ಕಥೆಗಳಲ್ಲಿ?
ಅವಳಿಗೊಂದು ಭರವಸೆ;
ಮುಂದೆ ಒಂದು ದಿನ ತಾನೂ ಇನ್ನೊಬ್ಬರನ್ನು
ತಾಕಬಹುದು,
ಅವರೂ ಪಾತ್ರವಾಗಿಸಬಹುದು ತನ್ನ
ಅವರ ಕಥೆಗಳಲ್ಲಿ, ಕವಿತೆಗಳಲ್ಲಿ,
ಪ್ರೀತಿಯಾಗಿ, ಸಂಕಟವಾಗಿ, ಅಸೂಯೆಯಾಗಿ,
ಅಥವಾ ಸಾಧ್ಯವಾಗದಿದ್ದರೆ
ಪ್ರಶ್ನಾರ್ಥಕದಂತೆ, ಉದ್ಘಾರ ವಾಚಕದಂತೆ
ಅಲ್ಪ ವಿರಾಮದಂತೆ, ಪೂರ್ಣ
ವಿರಾಮವಾಗಿ.
_____________________________
4.
ನೀವು
ಯಾವುದೇ ಮೂಲೆಯನ್ನ ನೋಡಿ,
ಅಲ್ಲಿ ಅವಳು ಸಿಕ್ಕೇ ಸಿಗುತ್ತಾಳೆ ನಿಮಗೆ,
ಕತ್ತಲು, ತನ್ನೊಳಗೆ ಅಡಗಿಸಿಕೊಂಡ
ಗುಂಗುರು ಕೂದಲಿನ ಹುಡುಗಿ.
ಪುಸ್ತಕದಲ್ಲಿ ಮೂಗು ತೂರಿಸಿಕೊಂಡ,
ಮೋಡಗಳಲ್ಲಿ ಕೈಚಾಚಿಕೊಂಡ,
ಸಂತೆಗಳಿಂದ ದೂರ ನಿಂತುಕೊಂಡ,
ನಗು, ಅಳು, ನಾಚಿಕೆಗಳ ಮುಚ್ಚಿಟ್ಟುಕೊಂಡ
ಗುಂಗುರು ಕೂದಲಿನ ಹುಡುಗಿ.
ಜಗತ್ತು ನಿಮ್ಮನ್ನು ದಾಟಿ ಹೋಗುತ್ತಿರುವಾಗ
ಕುಳಿತುಕೊಳ್ಳಿ ಪಕ್ಕ, ಅವಳ ಕೈ ಹಿಡಿದುಕೊಂಡು.
ನಿಮ್ಮ ಐದೇ ಐದು ನಿಮಿಷ
ಅವಳದಾಗಬಹುದಾದರೆ,
ನೀವೇ ನೋಡುತ್ತೀರಿ, ಹೇಗೆ ಅವಳ ನಗು
ಜಗತ್ತಿನ ಅತ್ಯಂತ ಕೆಟ್ಟ ಸಂಗತಿಗಳನ್ನೂ
ಬೇಕೆನಿಸುವಂತೆ ಮಾಡುತ್ತದೆ,
ಮತ್ತೆ ಮತ್ತೆ ನಿಮಗೆ.
ಆದರೆ ನೀವು
ಕತ್ತಲ ಮೂಲೆಗಳನ್ನು ನೋಡುವುದಿಲ್ಲ,
ಆ ದಿಕ್ಕಿನಲ್ಲಿ ಹೊರಳುವುದೂ ಇಲ್ಲ.
ಆದರೂ ಅವಳು ನಿಮ್ಮ ಒಂದು ನೋಟಕ್ಕಾಗಿ
ಕಾಯುತ್ತಲೇ ಇದ್ದಾಳೆ ಇನ್ನೂ,
ತನ್ನ ನಗು, ಅಳು, ನಾಚಿಕೆಗಳ ಮುಚ್ಚಿಟ್ಟುಕೊಂಡ,
ಪುಸ್ತಕದಲ್ಲಿ ಮೂಗು ತೂರಿಸಿಕೊಂಡ,
ಗುಂಗುರು ಕೂದಲಿನ ಹುಡುಗಿ.
—————————
ಎರಿನ್ ಹ್ಯಾನ್ಸನ್
ಅಸ್ಟ್ರೇಲಿಯಾ ಮೂಲದ ಕವಿ. ತಮ್ಮ 11ನೆಯ ವಯಸ್ಸಿನಲ್ಲಿಯೇ ಬ್ಲಾಗ್‌ನಲ್ಲಿ ಅಭಿವ್ಯಕ್ತಿಸುತ್ತಿದ್ದ ಅವರ ಪದ್ಯಗಳು ಭಾರಿ ಜನಪ್ರಿಯತೆ ಪಡೆದು ಕವಿಯಾಗಿ ಗುರುತಿಸಿಕೊಂಡವರು.
(ಕನ್ನಡಕ್ಕೆ): ಚಿದಂಬರ ನರೇಂದ್ರ
ಕವಿ, ಅನುವಾದಕ. ’ಚಿಕ್ಕಿ ತೋರಿಸ್ತಾವ ಚಾಚಿ ಬೆರಳ’, ’ಹೂಬಾಣ’, ’ಗಾಳೀ ಕೆನೆ’ ಪ್ರಕಟಿತ ಕವನ ಸಂಕಲನಗಳು.
ಇದನ್ನೂ ಓದಿ: ಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್’ ಅನುವಾದ; ಶತಮೂರ್ಖ (ಅಧ್ಯಾಯ-1; ಭಾಗ-1)