Homeಕರ್ನಾಟಕ‘ಉರಿಗೌಡ, ನಂಜೇಗೌಡ’ರು ಜೀವಿಸಿದ್ದ ಯಾವುದೇ ಕುರುಹು ಇಲ್ಲ: ಆದರೂ ಸುಳ್ಳು ಹೇಳುತ್ತಿರುವ ಬಿಜೆಪಿ

‘ಉರಿಗೌಡ, ನಂಜೇಗೌಡ’ರು ಜೀವಿಸಿದ್ದ ಯಾವುದೇ ಕುರುಹು ಇಲ್ಲ: ಆದರೂ ಸುಳ್ಳು ಹೇಳುತ್ತಿರುವ ಬಿಜೆಪಿ

ಟಿಪ್ಪು ಸುಲ್ತಾನ್‌ ಕುರಿತು ಬಿಜೆಪಿ ಹಾಗೂ ಅದರ ಬೆಂಬಲಿಗರು ಸೃಷ್ಟಿಸಿರುವ ನಕಲಿ ಇತಿಹಾಸ ಬಯಲು

- Advertisement -
- Advertisement -

“ಟಿಪ್ಪುವನ್ನು ಕೊಂದವರು ಉರಿಗೌಡ ಮತ್ತು ದೊಡ್ಡ ನಂಜೇಗೌಡ” ಎಂಬ ಸುಳ್ಳು ಇತಿಹಾಸವನ್ನು ವಾಟ್ಸಾಪ್‌ ವಿವಿಯಲ್ಲಿ ಹುಟ್ಟಿ ಹಾಕಿದ್ದು, ಬಿಜೆಪಿ ಹಾಗೂ ಅದರ ಬೆಂಬಲಿಗರು ಅದನ್ನೇ ಪ್ರತಿಪಾದಿಸತೊಡಗಿದ್ದಾರೆ. ಜೊತೆಗೆ ‘ದೊಡ್ಡ ನಂಜೇಗೌಡ’, ‘ಉರಿಗೌಡ’ ಎಂದು ಪ್ರತಿಪಾದಿಸಿ ಫೋಟೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ಇದೀಗ ಸಚಿವ ಡಾ. ಅಶ್ವತ್ಥ ನಾರಾಯಣರವರು ಫೆಬ್ರವರಿ 15 ರಂದು ಮಂಡ್ಯದಲ್ಲಿ ಮಾತನಾಡುತ್ತ, “ಟಿಪ್ಪುವನ್ನು ಉರಿಗೌಡ, ನಂಜೇಗೌಡ ಹೊಡೆದು ಹಾಕಿದ ಹಾಗೆ ಸಿದ್ದರಾಮಯ್ಯನವರನ್ನು ಹೊಡೆದು ಹಾಕಿ ಎಂದು ಬಹಿರಂಗ ಸಭೆಯಲ್ಲಿ ಪ್ರಚೋದಿಸಿದ್ದಾರೆ.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿಯವರೇ ಮೊದಲು ಈ ಸುಳ್ಳುಗಳನ್ನು ತೇಲಿಬಿಟ್ಟಿದ್ದು, ‘ಉರಿಗೌಡ, ನಂಜೇಗೌಡ’ ಎಂಬ ಕಥೆಯನ್ನು ಹೇಳಿಬಿಟ್ಟಿದ್ದಾರೆ. ಈ ಮೂಲಕ ಒಕ್ಕಲಿಗರನ್ನು ಮುಸ್ಲಿಂ ವಿರುದ್ಧ ನಿಲ್ಲಿಸುವ ಹಾಗೂ ಒಕ್ಕಲಿಗರು ಬ್ರಿಟಿಷರ ಪರ ಇದ್ದರೆಂದು ಸುಳ್ಳನ್ನು ಪ್ರತಿಪಾದಿಸುವ ಪ್ರಯತ್ನ ಮಾಡಲಾಗುತ್ತಿದೆ.

ಕೈಯಲ್ಲಿ ಖಡ್ಗವಿಡಿದು ನಿಂತಿರುವ ಇಬ್ಬರು ವೀರರ ಚಿತ್ರವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇವರೇ ದೊಡ್ಡ ನಂಜೇಗೌಡ ಮತ್ತು ಉರಿಗೌಡ ಎಂದು ನಂಬಿಸಲಾಗುತ್ತಿದೆ. ಆದರೆ ಇತಿಹಾಸತಜ್ಞರು ಈ ಕಾಲ್ಪನಿಕ ಪಾತ್ರಗಳನ್ನು ಅಲ್ಲಗಳೆದಿದ್ದಾರೆ.

ಟಿಪ್ಪು ಸುಲ್ತಾನ್‌ ಮತ್ತು ಮೈಸೂರು ಅರಸರ ಇತಿಹಾಸ ಕುರಿತು ಕೃತಿಗಳನ್ನು ರಚಿಸಿರುವ ಇತಿಹಾಸತಜ್ಞರಾದ ಪ್ರೊ.ಪಿ.ವಿ.ನಂಜರಾಜ ಅರಸ್‌ ಅವರು ‘ನಾನುಗೌರಿ.ಕಾಂ’ ಜೊತೆ ಮಾತನಾಡಿ, ಈ ಕಾಲ್ಪನಿಕ ಕಥೆಗಳನ್ನು ಅಲ್ಲಗಳೆದರು.

“ಇಷ್ಟು ವರ್ಷ ಇತಿಹಾಸ ಓದಿದ್ದೇನೆ. ಟಿಪ್ಪುವಿನ ಚರಿತ್ರೆಯಲ್ಲಿ ಎಲ್ಲಿಯೂ ಈ ಹೆಸರುಗಳು ಬರುವುದಿಲ್ಲ. ಇದು ವಾಟ್ಸಾಪ್‌ ಯೂನಿವರ್ಸಿಟಿಯಲ್ಲಿ ಹುಟ್ಟಿದ ಇತಿಹಾಸ. ಕಳೆದ ಎರಡು ವರ್ಷಗಳಿಂದ ಈ ಹೆಸರುಗಳು ಮುನ್ನೆಲೆಗೆ ಬಂದಿವೆ. ಟಿಪ್ಪು ಸುಲ್ತಾನ್‌ ಎಲ್ಲ ಜಾತಿ, ಜನಾಂಗಕ್ಕೂ ಸಹಾಯಹಸ್ತ ಚಾಚಿದ್ದನು. ವಿಶೇಷವಾಗಿ ರೈತರಿಗೆ ಬಡ್ಡಿ ರಹಿತ ಸಾಲವನ್ನು ನೀಡುತ್ತಿದ್ದ. ಉಳುಮೆಗೆ ಜಮೀನುಗಳನ್ನು ನೀಡಿದ. ರೇಷ್ಮೆ ಕೃಷಿಯನ್ನು ಬೆಳೆಸಿ ಮೈಸೂರು ಭಾಗದ ರೈತರಿಗೆ ನೆರವಾದ. ಒಕ್ಕಲಿಗ ಸಮುದಾಯವನ್ನು ಟಾರ್ಗೆಟ್ ಮಾಡಿ ಉರಿಗೌಡ, ನಂಜೇಗೌಡರ ಕಥೆಯನ್ನು ವಾಟ್ಸಾಪ್‌ನಲ್ಲಿ ಹರಿಬಿಟ್ಟಿದ್ದಾರೆ. ಈ ಸುಳ್ಳನ್ನೇ ಮೈಸೂರು ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪನವರು ತಮ್ಮ ಇತ್ತೀಚಿನ ಪ್ರೊಪಗಾಂಡ ಕೃತಿಯಲ್ಲಿ ಸೇರಿಸಿದ್ದಾರೆಂದು ತಿಳಿದು ಬೇಸರವಾಯಿತು” ಎಂದರು.

“ಟಿಪ್ಪು ಸತ್ತ ಸಂಜೆ ಬ್ರಿಟಿಷರು ಅವನ ಮನೆಯನ್ನು ಸರ್ಚ್ ಮಾಡುತ್ತಾರೆ. ಬಹುಶಃ ಟಿಪ್ಪು ಬದುಕಿರಬಹುದು ಎಂಬ ಗುಮಾನಿ ಇವರಿಗೆ ಇರುತ್ತದೆ. ಆದರೆ ಟಿಪ್ಪು ಹತನಾಗಿದ್ದಾನೆ ಎಂದು ಒಬ್ಬಾತ ಹೇಳುತ್ತಾನೆ. ಆನಂತರದಲ್ಲಿ ಹಣದ ರಾಶಿಗಳ ಮಧ್ಯೆ ಟಿಪ್ಪುವಿನ ಶರೀರಕ್ಕಾಗಿ ಹುಡುಕಾಡುತ್ತಾರೆ. ಇದಕ್ಕೆ ಪುರಾವೆ ಇದೆ. ಟಿಪ್ಪು ಶವ ಸಿಕ್ಕ ತಕ್ಷಣ ಜನರಲ್‌ ಹ್ಯಾರೀಸ್‌- ಇಂದು ಭಾರತ ನಮ್ಮದಾಯಿತು. ನಾವು ಭಾರತವನ್ನು ಗೆದ್ದೆವು- ಎಂದು ಉದ್ಗಾರ ಮಾಡುತ್ತಾನೆ. ಟಿಪ್ಪು ಪರ ಹಾಗೂ ವಿರೋಧ ಇದ್ದ ಎಲ್ಲ ಇತಿಹಾಸಕಾರರೂ ಬರೆದಿದ್ದಾರೆ. ಆದರೆ ವಾಟ್ಸಾಪ್ ವಿವಿಯವರು ಹೇಳುವುದೇನು? ಟಿಪ್ಪು ರಣರಂಗದಲ್ಲಿ ಇರುವುದು ಗೊತ್ತಾಗಿ, ಉರಿಗೌಡ, ದೊಡ್ಡ ನಂಜೇಗೌಡರು ಕತ್ತಿ ಹಿಡಿದು ಹೊರಟರು. ಯುದ್ಧ ಮಾಡುತ್ತಿದ್ದ ಟಿಪ್ಪು ಇವರನ್ನು ದೂರದಿಂದ ಕೂಡಲೇ ಓಡಿಹೋದ. ಆದರೆ ಈ ಇಬ್ಬರು ಸಹೋದರರು ಬೆನ್ನು ಹತ್ತಿ ಬಂದು ಕೊಂದರು ಎಂದು ಕತೆ ಹೇಳುತ್ತಿದ್ದಾರೆ. ಹಾಗಾದರೆ ಟಿಪ್ಪುವಿನ ಸೈನಿಕರು ಏನು ಮಾಡುತ್ತಿದ್ದರು? ಕಡ್ಲೆಕಾಯಿ ತಿನ್ನುತ್ತಿದ್ದರೆ? ಈ ಸಹೋದರರು ಭಾರತೀಯರಾದ ಕಾರಣ ಕಪ್ಪು ವರ್ಣದವರು. ನಮ್ಮ ಸೈನಿಕರಲ್ಲ ಎಂದು ತಿಳಿದೂ ಬ್ರಿಟಿಷರು ಹಾಗೆಯೇ ಬಿಟ್ಟುಬಿಟ್ಟರೆ?” ಎಂದು ಪ್ರಶ್ನಿಸಿದರು.

ಈಗ ವೈರಲ್ ಆಗುತ್ತಿರುವ ಚಿತ್ರಗಳ ಕುರಿತು ನೆಟ್ಟಿಗರು ಕಾಲೆಳೆದಿದ್ದಾರೆ. ಈ ಫೋಟೋಗಳ ಅಸಲಿ ಕಥೆಯನ್ನು ಜನರೇ ಬಯಲಿಗೆಳೆದಿದ್ದಾರೆ. ತಮಿಳು ನೆಲದ ವೀರರಾದ ಮರುದು ಪಾಂಡ್ಯರ ಚಿತ್ರಗಳು ಇವು ಎಂಬ ಸಂಗತಿ ಈಗ ಹೊರಬಿದ್ದಿದೆ.

ಮರುದು ಪಾಂಡ್ಯರು (ಪೆರಿಯ ಮರುದು ಮತ್ತು ಚಿನ್ನ ಮರುದು) 18ನೇ ಶತಮಾನದ ಅಂತ್ಯದಲ್ಲಿ ತಮಿಳುನಾಡಿನ ಶಿವಗಂಗೈ ಪ್ರಾಂತ್ಯದಲ್ಲಿ ಪ್ರಸಿದ್ಧರಾಗಿದ್ದರು ಎಂದು ಲಭ್ಯವಿರುವ ಮಾಹಿತಿಗಳು ಹೇಳುತ್ತವೆ. ಈ ಇಬ್ಬರು ಸಹೋದರರು ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ಹೋರಾಡಿದ್ದರು. ಇವರನ್ನು ಸೆರೆಹಿಡಿದು ಗಲ್ಲಿಗೇರಿಸಲಾಯಿತು ಎಂದು ಇತಿಹಾಸದ ಪುಟಗಳು ಹೇಳುತ್ತವೆ.

“ದಕ್ಷಿಣ ಭಾರತದ ಇತಿಹಾಸವನ್ನು ಇತಿಹಾಸಕಾರರು ಕಡೆಗಣಿಸಿದ್ದಾರೆ” ಎಂದು ಪ್ರತಿಪಾದಿಸಿ ಲೇಖನ ಮಾಡಿರುವ ತಮಿಳಿನ ‘ತಮಿಳ್‌ವಳೈ.ಕಾಂ’, ಮುರುದು ಪಾಂಡಿಯಾರ್‌‌ ಸಹೋದರರ ಕುರಿತು ಬೆಳಕು ಚೆಲ್ಲಿದೆ. ದಿನಾಂಕ 24.10.1801ರಂದು ಈ ವೀರರನ್ನು ಗಲ್ಲಿಗೇರಿಸಲಾಯಿತು ಎಂದು 2017, ಅಕ್ಟೋಬರ್‌ 24ರಂದು ಬರಹ ಪ್ರಕಟಿಸಲಾಗಿದೆ. ಮುರುದು ಪಾಂಡಿಯಾರ್‌ ಸಹೋದರರ ರೈತಪರ ಕಾಳಜಿ, ದಿಟ್ಟ ಹೋರಾಟವನ್ನು ಈ ಲೇಖನದಲ್ಲಿ ಉಲ್ಲೇಖಿಸಲಾಗಿದೆ. (ಲೇಖನವನ್ನು ‘ಇಲ್ಲಿ’ ಓದಬಹುದು.)

ಸಂಘಪರಿವಾರದ ಹಿನ್ನೆಲೆಯ ಸೋಷಿಯಲ್ ಮೀಡಿಯಾ ಹ್ಯಾಂಡಲ್‌ಗಳಲ್ಲಿ ಹರಿದಾಡಿದ ಈ ಸುಳ್ಳು ಇತಿಹಾಸದ ಕುರಿತು ಜನರು ವ್ಯಂಗ್ಯವಾಡಿದ್ದಾರೆ.

“ತಮಿಳುನಾಡಿನ ಶಿವಗಂಗೆ ಪಾಂಡ್ಯರ್‌ ಚಿತ್ರವನ್ನು ತಿರುಚಿ, ಮಂಡ್ಯ ಗೌಡರನ್ನಾಗಿ ಮಾಡಲಾಗಿದೆ” ಎಂದು ಲೇಖಕ ನಾಗೇಗೌಡ ಕೀಲಾರ ಟೀಕಿಸಿದ್ದಾರೆ.

ಬರಹಗಾರ, ಚಿಂತಕ ಕನಕರಾಜ್‌ ಈ ಕುರಿತು ಪೋಸ್ಟ್ ಮಾಡಿದ್ದು, “ಅಸಲಿಗೆ ಇಂದಿನ ತಮಿಳುನಾಡಿನ ಅಂದಿನ ಸಿವಗಂಗೈ ಪ್ರಾಂತ್ಯವನ್ನು ಆಳುತ್ತಿದ್ದ ತೇವರ್ ಜನಾಂಗದ ಈ ಕಿರು ಅರಸರುಗಳು ತಮ್ಮ ರಾಣಿ ವೀರ ವೇಲು ನಾಚ್ಚಿಯಾರ್ ನಂತರ ಬ್ರಿಟೀಷರ ವಿರುದ್ಧ ಹೋರಾಡಿ ಮಡಿದ ಮರುದು ಸೋದರರು! ಇಲ್ಲಿ ಮಜಾ ಏನೆಂದರೆ ಈ ಇಬ್ಬರ ಬ್ರಿಟೀಷ್‌ ವಿರೋಧಿ ಹೋರಾಟಕ್ಕೆ ಟಿಪ್ಪು ಬೆಂಬಲವಾಗಿ ನಿಂತ ಇತಿಹಾಸ! ರಾಣಿ ವೇಲು ನಾಚ್ಚಿಯಾರ್‌ರ ಬ್ರಿಟೀಷ್‌ ವಿರುದ್ಧದ ಹೋರಾಟಕ್ಕೂ ಹೈದರ್ ಅಲಿ ಜೊತೆಯಾಗಿ ನಿಂತ ಇತಿಹಾಸ ಇಂದಿಗೂ ಇದೆ. ಇದು ತಮಿಳುನಾಡಿನ ಪಠ್ಯಗಳಲ್ಲಿ ಇಂದಿಗೂ ಇರುವ ವಿಷಯ! ಆದರೆ ಸಂಘಿಗಳು ಈ ಚಿತ್ರಗಳನ್ನು ಬಳಸಿಕೊಂಡು ಟಿಪ್ಪುವನ್ನು ಕೊಂದ ಮಂಡ್ಯದ ಗೌಡರು ಎಂದು ತಿರುಚಿ ಕೂಗುತ್ತಿದ್ದಾರೆ! ಸಂಘಿ, ಬಿಜೆಪಿ ಹಾಗೂ ಎಲ್ಲಾ ಧರ್ಮಗಳ ಮೂಲಭೂತವಾದಿಗಳಿಗೆ ಇತಿಹಾಸ ಸಮಸ್ಯೆಯೇ!” ಎಂದು ಬರೆದಿದ್ದಾರೆ.

ಪತ್ರಕರ್ತ ನವೀನ್‌ ಸೂರಿಂಜೆ ಅವರು ಪ್ರತಿಕ್ರಿಯಿಸಿ, “ಟಿಪ್ಪು ಸುಲ್ತಾನ್‌ನನ್ನು ಗೌಡರು ಕೊಂದರು ಎಂದು ಸಂಘಪರಿವಾರ ಹೊಸ ಕತೆಯನ್ನು ಸೃಷ್ಟಿಸುವುದರ ಹಿಂದೆ, ಒಕ್ಕಲಿಗರನ್ನು ದೇಶದ್ರೋಹಿಗಳು ಎಂದು ಬಿಂಬಿಸುವ ಗುಪ್ತ ಅಜೆಂಡಾ ಹೊಂದಿದೆ. ಮುಂದಿನ ಪೀಳಿಗೆಯು ಇತಿಹಾಸವನ್ನು ಅಧ್ಯಯನ ಮಾಡುವಾಗ ಒಕ್ಕಲಿಗರು ಬ್ರಿಟೀಷರ ಜೊತೆ ಇದ್ದರು ಎಂಬ ಅಂಶ ಇರಕೂಡದು ಎಂದಿದ್ದರೆ ಸಂಘಪರಿವಾರದ ಈ ಹಿಡನ್ ಅಜೆಂಡಾವನ್ನು ಈಗಲೇ ಸಮುದಾಯ ವಿರೋಧಿಸಬೇಕು” ಎಂದು ಎಚ್ಚರಿಸಿದ್ದಾರೆ.

“ನಮ್ಮ ನಾಡಿನ ಹೆಮ್ಮೆಯ ಒಕ್ಕಲಿಗರು ಟಿಪ್ಪುವಿನಂತೆಯೇ ಬ್ರಿಟೀಷರ ವಿರುದ್ಧವಿದ್ದರು. ಬ್ರೀಟಿಷರ ಪರವಿದ್ದಾರೆ ಎಂಬ ಅನುಮಾನದಲ್ಲಿ ಕೊಡವರು, ಕ್ರಿಶ್ಚಿಯನ್ನರು, ನಾಯರ್ ಗಳನ್ನು ಟಿಪ್ಪು ವಿಚಾರಣೆ ನಡೆಸಿದ್ದ ಮತ್ತು ಅವರ ಮೇಲೆ ನಿಗಾ ಇರಿಸುತ್ತಿದ್ದ ಎಂದು ಇತಿಹಾಸದ ದಾಖಲೆಗಳು ಹೇಳುತ್ತವೆಯೇ ಹೊರತು ಒಕ್ಕಲಿಗರನ್ನು ಟಿಪ್ಪು ಟಾರ್ಗೆಟ್ ಮಾಡಿದ ದಾಖಲೆಗಳು ಸಿಗಲ್ಲ. ಹಾಗೆ ನೋಡಿದರೆ ಒಕ್ಕಲಿಗರು ಅಥವಾ ಬಂಟರು ಶಿಫಾರಸ್ಸು ಮಾಡಿದರೆ ಟಿಪ್ಪು ಯಾರ ಮೇಲಿನ ದಾಳಿಯನ್ನಾದರೂ ನಿಲ್ಲಿಸಿಬಿಡುತ್ತಿದ್ದ. ಬ್ರಿಟೀಷರು ಚರ್ಚ್ ಕಟ್ಟುತ್ತಿದ್ದಾರೆ ಎಂಬ ಅನುಮಾನದಲ್ಲಿ ಕ್ರಿಶ್ಚಿಯನ್ ಚರ್ಚ್ ಮೇಲೆ ಟಿಪ್ಪು ದಾಳಿ ಮಾಡಿದಾಗ ಒಕ್ಕಲಿಗರಾಗಿರುವ ಬಂಟರ ಮನವಿ ಮೇರೆಗೆ ದಾಳಿಯನ್ನೇ ಕೈ ಬಿಟ್ಟ ಉದಾಹರಣೆಗಳು ನಮ್ಮ ಮುಂದಿವೆ” ಎಂದು ವಿಶ್ಲೇಷಿಸಿದ್ದಾರೆ.

“ಹಾಗೆ ನೋಡಿದರೆ ಟಿಪ್ಪು ಕಾಲದಲ್ಲಿ ಒಕ್ಕಲಿಗರು ಪ್ರತಿಷ್ಠೆಯ ಜೀವನ ನಡೆಸಿದರು. ಬ್ರಾಹ್ಮಣರ ಶಾನುಭೋಗ ವ್ಯವಸ್ಥೆಯನ್ನು ರದ್ದು ಮಾಡಿ ‘ಊರ ಗೌಡ’ ಪದ್ದತಿಯನ್ನು ಜಾರಿಗೆ ತಂದಿದ್ದನು. ಬ್ರಾಹ್ಮಣರು ಶಾನುಭೋಗರಾಗಿದ್ದರೆ ಒಕ್ಕಲಿಗರು ಮತ್ತಿತರ ಜಾತಿಗಳು ಬ್ರಾಹ್ಮಣರ ಮನೆಯಲ್ಲಿ ಬಿಟ್ಟಿ ಚಾಕರಿ ಮಾಡಬೇಕಿತ್ತು. ಬ್ರಾಹ್ಮಣರಿಗೆ ಉಚಿತವಾಗಿ ಕೃಷಿ ಉತ್ಪನ್ನಗಳನ್ನು ಕೊಡಬೇಕಿತ್ತು. ಇದು ಕೃಷಿ ಮೇಲೆ ಪರಿಣಾಮ ಬಿದ್ದು ಆರ್ಥಿಕ ವ್ಯವಸ್ಥೆ ಹಾಳಾಗುತ್ತಿತ್ತು. ಹಾಗಾಗಿ ಕೃಷಿಕರೇ ಊರ ಗೌಡನಾಗಿರಬೇಕು ಎಂದು ಆದೇಶ ಹೊರಡಿಸಿದ. ಕಂದಾಯ ಲೆಕ್ಕಪತ್ರ ನೋಡಲು ಅಕ್ಷರಾಭ್ಯಾಸ ಇದ್ದ ಬ್ರಾಹ್ಮಣರ ಅವಶ್ಯಕತೆ ಇದ್ದಿದ್ದರಿಂದ ಬ್ರಾಹ್ಮಣರನ್ನು ಸಂಬಳಕ್ಕೆ ಕುಲಕರ್ಣಿಗಳನ್ನಾಗಿ ನೇಮಿಸಿದ. ಕುಲಕರ್ಣಿಗಳಿಗೆ ಸಂಬಳವನ್ನು ಊರ ಗೌಡರೇ ಕೊಡಬೇಕಿದ್ದರಿಂದ ಗೌಡರು ಸಾಮಾಜಿಕ ಪ್ರತಿಷ್ಟೆಯನ್ನು ಉಳಿಸಿಕೊಂಡಿದ್ದರು. ಟಿಪ್ಪುವಿನ ಸೈನ್ಯದಲ್ಲಿ ಮೈಸೂರು, ಮಂಡ್ಯ ಭಾಗದ ಒಕ್ಕಲಿಗ ಮತ್ತು ಕುರುಬರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಆ ಕಾರಣಕ್ಕಾಗಿ ಸೈನಿಕರಿಗೆ ಭೂಮಿ ನೀಡುವ ಯೋಜನೆ ಜಾರಿಗೆ ತಂದ. ಇದರ ದೊಡ್ಡ ಫಲಾನುಭವಿಗಳು ಒಕ್ಕಲಿಗರು. ಪಾಳೇಗಾರ ವ್ಯವಸ್ಥೆಯನ್ನು ನಾಶ ಮಾಡಿ ಸಾಮಾನ್ಯ ಒಕ್ಕಲಿಗರಿಗೆ ಭೂಮಿಯನ್ನು ಹಂಚಿದ‌. ಹಾಗಾಗಿಯೇ ಭೂ ರಹಿತ ಒಕ್ಕಲಿಗರೇ ಇಲ್ಲವೇನೋ ಎನ್ನುವಂತೆ ಒಕ್ಕಲಿಗರು ಕೃಷಿಯಲ್ಲಿ ಅಭಿವೃದ್ದಿಯನ್ನು ಕಂಡರು. ಕೃಷಿಕರು ಅಂದರೆ ಒಕ್ಕಲಿಗರು ಎಂಬಷ್ಟು ಕೃಷಿ ಉತ್ಪಾದನೆಯಲ್ಲಿ ಹಿಡಿತ ಸಾಧಿಸಿದರು” ಎಂದು ವಿವರಿಸಿದ್ದಾರೆ.

“ಟಿಪ್ಪುವಿನ ಕಾಲದಲ್ಲಿ ಸೈನಿಕರಿಗೆ ಭೂಮಿ ಮತ್ತು ಉತ್ತಮ ಸಂಬಳ ದೊರಕುವುದರ ಜೊತೆಗೆ ಸಾಮಾಜಿಕ ಸ್ಥಾನಮಾನಗಳೂ ಸಿಕ್ಕಿರುವಾಗ ಒಕ್ಕಲಿಗರು ಯಾಕೆ ಬ್ರಿಟೀಷರ ಸೈನ್ಯ ಸೇರುತ್ತಾರೆ? ಇತಿಹಾಸದಲ್ಲಿ ಘಟಿಸದೇ ಇರುವ ಘಟನೆಯನ್ನು ಸೃಷ್ಟಿಸಿ ಟಿಪ್ಪು ಕೊಂದ ವೀರರೆಂದು ಒಕ್ಕಲಿಗರನ್ನು ಹೊಗಳುವುದರ ಹಿಂದೆ ಒಕ್ಕಲಿಗರನ್ನು ಬ್ರಿಟೀಷರ ಏಜೆಂಟರೆಂದು ಬಿಂಬಿಸುವ ಬ್ರಾಹ್ಮಣ್ಯದ ಸಂಚು ಅಡಗಿದೆ ಎಂದು ತಿಳಿದಿರಲಿ” ಎಂದಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ಯಾಲೆಸ್ತೀನ್‌ಗೆ ವಿಶ್ವಸಂಸ್ಥೆಯ ಪೂರ್ಣ ಸದಸ್ಯತ್ವ ನೀಡುವ ಪ್ರಯತ್ನ ಬೆಂಬಲಿಸಿದ ಭಾರತ

0
ವಿಶ್ವಸಂಸ್ಥೆಯ ಸಂಪೂರ್ಣ ಸದಸ್ಯತ್ವ ಪಡೆಯುವ ಪ್ಯಾಲೆಸ್ತೀನ್‌ನ ಮನವಿಯನ್ನು ಮರು ಪರಿಶೀಲಿಸಿ ಅನುಮೋದಿಸುವ ವಿಶ್ವಾಸವಿದೆ ಎಂದು ಭಾರತ ಬುಧವಾರ ಹೇಳಿದೆ. ಈ ಮೂಲಕ ಪ್ಯಾಲೆಸ್ತೀನ್‌ ವಿಶ್ವಸಂಸ್ಥೆಯ ಪೂರ್ಣ ಸದಸ್ಯತ್ವ ಪಡೆಯುವುದಕ್ಕೆ ಬೆಂಬಲ ವ್ಯಕ್ತಪಡಿಸಿದೆ. ಇಸ್ರೇಲ್ ಮತ್ತು...