ತ್ರಿಪುರಾದಲ್ಲಿ ನಡೆದ ಕೋಮುಗಲಭೆ ಕುರಿತು ಸತ್ಯಶೋಧನೆ ನಡೆಸಿದ ತಂಡದ ಭಾಗವಾಗಿದ್ದ ಇಬ್ಬರು ವಕೀಲರಿಗೆ ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (UAPA) ಹಾಗೂ ಐಪಿಸಿ ಅಡಿಯಲ್ಲಿ ನೋಟಿಸ್ ನೀಡಿರುವುದನ್ನು ಖಂಡಿಸಿ ‘ನ್ಯಾಯಕ್ಕಾಗಿ ಅಖಿಲ ಭಾರತ ವಕೀಲರ ಸಂಘ’ದ(AILAJ) ಕರ್ನಾಟಕ ರಾಜ್ಯ ಘಟಕವು ಪ್ರತಿಭಟನೆ ನಡೆಸಿದೆ.
ರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆಗಳ ಒಕ್ಕೂಟದ ಕಾರ್ಯದರ್ಶಿ ಅಡ್ವೊಕೇಟ್ ಅನ್ಸರ್ ಇಂದೋರಿ ಮತ್ತು ನಾಗರೀಕ ಹಕ್ಕುಗಳ ಸಂಘಟನೆಯಾದ ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟಿಸ್ (ಪಿಯುಸಿಎಲ್, ದೆಹಲಿ)ನ ವಕೀಲರಾದ ಮುಖೇಶ್ ಅವರಿಗೆ ತ್ರಿಪುರಾ ಪೊಲೀಸರು ನೋಟಿಸ್ ಕಳುಹಿಸಿದ್ದಾರೆ. ಆ ನೋಟಿಸ್‌ನಲ್ಲಿ ‘ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿರುವ ಕಲ್ಪಿತ ಮತ್ತು ಸುಳ್ಳು ಹೇಳಿಕೆಗಳು/ ಕಾಮೆಂಟ್‌ಗಳನ್ನು ತಕ್ಷಣವೇ ಅಳಿಸಬೇಕು’ ಎಂದು ಹೇಳಿದ್ದು, ನವೆಂಬರ್ 10ರೊಳಗೆ ಪಶ್ಚಿಮ ಅಗರ್ತಲಾ ಪೊಲೀಸ್ ಠಾಣೆಯ ಮುಂದೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ಗಳು ತಿಳಿಸಿವೆ.
AILAJ Karnataka protested against the issuance of notices invoking UAPA and IPC provisions to advocates for their fact finding report into communal violence in Tripura!
Withdraw these notices!
Stop silencing democratic voices!
Repeal UAPA! pic.twitter.com/Awl4CvChtX— AILAJ_HQ (@AilajHq) November 8, 2021
ಯುಎಪಿಎ ಹೊರತಾಗಿ, ಸೆಕ್ಷನ್ 153 ಎ ಮತ್ತು ಬಿ (ಧರ್ಮ, ಜನಾಂಗ, ಜನ್ಮಸ್ಥಳ, ವಾಸಸ್ಥಳ, ಭಾಷೆ ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು), 469 (ಮಾಹಿತಿಗೆ ಹಾನಿ ಮಾಡುವ ಉದ್ದೇಶಕ್ಕಾಗಿ ನಕಲು ಮಾಡುವುದು), 120 (ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ) ಹಾಗೂ ಐಪಿಸಿಯ 120 ಬಿ (ಕ್ರಿಮಿನಲ್ ಪಿತೂರಿಗಾಗಿ ಶಿಕ್ಷೆ) ಇವೆಲ್ಲದರಡಿಯಲ್ಲಿ ನೋಟಿಸ್ ನೀಡಲಾಗಿದೆ.
ಇದನ್ನೂ ಓದಿರಿ: ಒರಿಸ್ಸಾ: ದಲಿತರ ಗುಡಿಸಲುಗಳಿಗೆ ಬೆಂಕಿ; ಹತ್ತು ಮಂದಿಗೆ ಗಾಯ
ಈ ಕುರಿತು ಮಾತನಾಡಿದ ವಕೀಲರಾದ ಮುಖೇಶ್, ‘ವಾಸ್ತವತೆಯನ್ನು ತಿಳಿಯಲು ತ್ರಿಪುರಾಕ್ಕೆ ಹೋದ ಸತ್ಯಶೋಧನಾ ತಂಡದ ಭಾಗವಾಗಿದ್ದೇನೆ. ಸಾಮಾಜಿಕವಾಗಿ ನಾನು ನೋಡಿದ್ದನ್ನು ಹಂಚಿಕೊಂಡಿದ್ದೇನೆ’ ಎಂದು ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ವಕೀಲ ಎಹ್ತೇಶಾಮ್ ಹಶ್ಮಿ, ವಕೀಲ ಅಮಿತ್ ಶ್ರೀವಾಸ್ತವ್ (ಸಮನ್ವಯ ಸಮಿತಿ, ಪ್ರಜಾಪ್ರಭುತ್ವಕ್ಕಾಗಿ ವಕೀಲರು), ವಕೀಲ ಅನ್ಸಾರ್ ಇಂದೋರಿ ಮತ್ತು ವಕೀಲ ಮುಖೇಶ್ ಅವರನ್ನು ಒಳಗೊಂಡ ಸತ್ಯಶೋಧನಾ ತಂಡವು ಮಂಗಳವಾರ ದೆಹಲಿಯ ಪ್ರೆಸ್ ಕ್ಲಬ್ ನಲ್ಲಿ ವರದಿಯನ್ನು ಬಿಡುಗಡೆ ಮಾಡಿದೆ.
ಸತ್ಯಶೋಧನಾ ವರದಿ ಏನು ಹೇಳುತ್ತದೆ?
‘ಹ್ಯುಮ್ಯಾನಿಟಿ ಅಂಡರ್ ಅಟ್ಯಾಕ್ ಇನ್ ತ್ರಿಪುರ; #ಮುಸ್ಲಿಂ ಲೀವ್ಸ್ ಮ್ಯಾಟರ್’ ಶೀರ್ಷಿಕೆಯಡಿ ಬಿಡುಗಡೆಯಾದ ಸತ್ಯಶೋಧನಾ ವರದಿಯು ತ್ರಿಪುರಾದಲ್ಲಿನ ಬಿಜೆಪಿ ಸರ್ಕಾರವು ಹಿಂಸಾಚಾರವನ್ನು ನಿಲ್ಲಿಸಬಹುದಿತ್ತು ಆದರೆ ಅವರು ರಾಜ್ಯದಲ್ಲಿ ಗಲಭೆ ನಡೆಸಲು ಹಿಂದುತ್ವದ ಗುಂಪುಗಳಿಗೆ ಮುಕ್ತ ಅವಕಾಶ ನೀಡುವ ದಾರಿಯನ್ನು ಆರಿಸಿಕೊಂಡರು ಎಂಬುದನ್ನು ತಿಳಿಸಿದೆ.
ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ), ಬಜರಂಗದಳ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ನಂತಹ ಹಿಂದೂ ರಾಷ್ಟ್ರೀಯತಾವಾದಿ ಸಂಘಟನೆಗಳು ಜೆಸಿಬಿಗಳೊಂದಿಗೆ ರ್‍ಯಾಲಿಗಳನ್ನು ನಡೆಸಿವೆ ಮತ್ತು ಹಿಂಸೆಗೆ ಪ್ರಚೋದನೆ ನೀಡಿವೆ ಎಂದು ವರದಿಯಲ್ಲಿದೆ.
ವಕೀಲರ ಮೇಲಿನ ಈ ಆರೋಪವನ್ನು ನ್ಯಾಯಕ್ಕಾಗಿ ವಕೀಲರ ಸಂಘ ಖಂಡಿಸಿದ್ದು, ಈ ನೋಟಿಸ್‌ಗಳನ್ನು ವಾಪಸ್ ಪಡೆಯಬೇಕು. ಪ್ರಜಾಪ್ರಭುತ್ವದ ಕತ್ತು ಹಿಸುಕುವನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.
ರಾಹುಲ್ ಗಾಂಧಿ ಟೀಕೆ
ತ್ರಿಪುರಾ ರಾಜ್ಯದಲ್ಲಿ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (UAPA) ಅಡಿಯಲ್ಲಿ ಜನರನ್ನು ಬಂಧಿಸುವ ಮೂಲಕ ಸತ್ಯವನ್ನು ಮೌನಗೊಳಿಸಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ಹೇಳಿದ್ದಾರೆ.
ತ್ರಿಪುರಾದಲ್ಲಿ ಕೋಮು ಘರ್ಷಣೆಗಳು ಮತ್ತು ಮಸೀದಿಗಳ ಮೇಲಿನ ದಾಳಿಗಳ ಕುರಿತು ಪತ್ರಕರ್ತರು, ವಕೀಲರು ಮತ್ತು ಸಾಮಾಜಿಕ ಕಾರ್ಯಕರ್ತರ ವಿರುದ್ಧ ಪೊಲೀಸರು ಯುಎಪಿಎಯನ್ನು ಜಾರಿಗೊಳಿಸಿದ ನಂತರ ರಾಹುಲ್ ಗಾಂಧಿ ಈ ಪ್ರತಿಕ್ರಿಯೆ ನೀಡಿದ್ದಾರೆ.
“ತ್ರಿಪುರಾ ಹೊತ್ತಿ ಉರಿಯುತ್ತಿದೆ” ಎಂಬ ಹ್ಯಾಶ್‌ಟ್ಯಾಗ್ ಬಳಸಿ ಟ್ವೀಟ್ ಮಾಡಿರುವ ಅವರು, ತ್ರಿಪುರಾ ಹೊತ್ತಿ ಉರಿಯುತ್ತಿದೆ ಎಂದರೆ, ಅದನ್ನು ಸರಿಪಡಿಸುವ ಕ್ರಮ ಕೈಗೊಳ್ಳಬೇಕು ಎಂಬುದರ ಕರೆ ಅದು. ಆದರೆ, ಬಿಜೆಪಿಯು ತನ್ನ ನೆಚ್ಚಿನ ಕೆಲಸ ಮಾಹಿತಿದಾರರನ್ನು ಹೊಡೆದುರುಳಿಸುವ ಕೆಲಸಕ್ಕೆ ಮುಂದಾಗಿದೆ ಎಂದು ಟೀಕಿಸಿದ್ದಾರೆ.
ಇದನ್ನೂ ಓದಿರಿ: ತ್ರಿಪುರ ಕೋಮು ಗಲಭೆ: 68 ಜನರ ಟ್ವಿಟರ್ ಖಾತೆ ಅಮಾನತುಗೊಳಿಸುವಂತೆ ಟ್ವಿಟರ್‌ಗೆ ಪತ್ರ ಬರೆದ ಪೊಲೀಸರು


