Homeಕರ್ನಾಟಕಕರ್ನಾಟಕದ ಆರ್ಥಿಕ ಚಿಂತನೆಯ ಕೊಡುಗೆ ಮತ್ತು ಸಾರ್ವಜನಿಕ ವಲಯ

ಕರ್ನಾಟಕದ ಆರ್ಥಿಕ ಚಿಂತನೆಯ ಕೊಡುಗೆ ಮತ್ತು ಸಾರ್ವಜನಿಕ ವಲಯ

- Advertisement -
- Advertisement -

ಪ್ರಸ್ತಾವನೆ

ಅನೇಕ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಕಾರಣಗಳಿಂದಾಗಿ ಸಾರ್ವಜನಿಕ ವಲಯವು ಇಂದು ನಿಷೇಧಾತ್ಮಕ ನುಡಿಯಾಗಿಬಿಟ್ಟಿದೆ. ಹಾಗೆ ನೋಡಿದರೆ ಇಂದು ಸಮಾನತೆ, ಸಾಮಾಜಿಕ ನ್ಯಾಯ, ಆಹಾರ ಭದ್ರತೆಯ ಮೌಲ್ಯಗಳು ನಿರಾಕರಣೆಗೆ ಒಳಗಾಗುತ್ತಿವೆ. ನಮ್ಮ ಪ್ರಾಚೀನ ಆರ್ಥಿಕ ಚರಿತ್ರೆಯನ್ನು ಸಾರ್ವಜನಿಕ ವಲಯ-ವಿರೋಧಿ ಚಿಂತನೆಯಾಗಿ ಮರುರೂಪಿಸುವ ಕಾರ್ಯವನ್ನು ಇಂದು ಆಳುವ ವರ್ಗ ನಡೆಸುತ್ತಿದೆ. ರಾಜಸತ್ತೆಯ ಕಾಲದಲ್ಲಿ ಸಾರ್ವಜನಿಕ ವಲಯ-ಖಾಸಗಿ ವಲಯ ಎಂಬುದೇನಿರಲಿಲ್ಲ. ಅಲ್ಲಿದ್ದುದು ಶೋಷಣಾ ವ್ಯವಸ್ಥೆಯೇ ವಿನಃ ಅಭಿವೃದ್ಧಿ ವ್ಯವಸ್ಥೆಯಲ್ಲ. ಜನರ ಯೋಗಕ್ಷೇಮವು ರಾಜನ ಜವಾಬ್ದಾರಿಯಾಗಿತ್ತು ಎಂದು ಕೌಟಿಲ್ಯನ ಅರ್ಥಶಾಸ್ತ್ರ, ವೇದಗಳು, ಉಪನಿಷತ್ತುಗಳು ಹೇಳಿವೆ ಎನ್ನಲಾಗಿದೆ. ವಾಸ್ತವವಾಗಿ ಅಲ್ಲಿ ನಡೆಯುತ್ತಿದ್ದುದು ಒಂದು ಕಡೆ ತ್ರೈವರ್ಣಿಕರ ಶ್ರೇಯೋಭಿವೃದ್ಧಿ ಮತ್ತೊಂದು ಕಡೆ ಶೂದ್ರರು ಮತ್ತು ಅತಿಶೂದ್ರರ(ದಲಿತರ) ಶೋಷಣೆ. ತ್ರೈವರ್ಣಿಕರನ್ನು ಬಿಟ್ಟರೆ ಉಳಿದವರಿಗೆ ಶಿಕ್ಷಣದ ಅವಕಾಶವನ್ನು ನಿಷೇಧಿಸಲಾಗಿತ್ತು. ಆದರೆ ಇಂದು ತ್ರೈವರ್ಣೀಕ ಶಿಕ್ಷಣ ತಜ್ಞರು ’ಗುರುಕುಲ’ ವ್ಯವಸ್ಥೆಯ ಬಗ್ಗೆ ಮಾತನಾಡುತ್ತಾರೆ ಮತ್ತು ಅದರ ಮರುಸ್ಥಾಪನೆಯನ್ನು ಒತ್ತಾಯಿಸುತ್ತಿದ್ದಾರೆ.

ಇವರು ಹೇಳುವ ಗುರುಕುಲದಲ್ಲಿ ಶೂದ್ರರಿಗೆ, ಅತಿಶೂದ್ರರಿಗೆ, ಮಹಿಳೆಯರಿಗೆ, ಆದಿವಾಸಿಗಳಿಗೆ ಪ್ರವೇಶವಿರಲಿಲ್ಲ ಮಾತ್ರವಲ್ಲ ಶಿಕ್ಷಣಕ್ಕೆ, ಅಕ್ಷರಕ್ಕೆ, ಜ್ಞಾನಕ್ಕೆ ಅವರು ಅರ್ಹರಲ್ಲ ಎಂಬ ಸಿದ್ಧಾಂತವನ್ನು ವೇದಶಾಸ್ತ್ರಾಗಮಪುರಾಣಗಳು, ಗೀತೆ, ಅರ್ಥಶಾಸ್ತ್ರ, ಮನುಸ್ಮೃತಿ ಮುಂತಾದ ತ್ರೈವರ್ಣೀಕ ಶಾಸ್ತ್ರ ಗ್ರಂಥಗಳು ಪ್ರತಿಪಾದಿಸುತ್ತಿದ್ದವು. ಆರೋಗ್ಯಕ್ಕೆ ಸಂಬಂದಿಸಿದಂತೆಯೂ ತ್ರೈವರ್ಣೀಕರ ಗುತ್ತಿಗೆಯಾಗಿರುವ ಆಯುರ್ವೇದವನ್ನು ಸಮಾಜದ ಮೇಲೆ ಇಂದು ಹೇರಲಾಗುತ್ತಿದೆ. ಹೀಗೆ ಶಿಕ್ಷಣವಿರಲಿ, ಆರೋಗ್ಯವಿರಲಿ ಮತ್ತು ಆರ್ಥಿಕತೆಯಿರಲಿ — ಎಲ್ಲ ಕ್ಷೇತ್ರಗಳಲ್ಲಿಯೂ ರಾಜಸತ್ತೆಯ ಶೋಷಣಾತ್ಮಕ ಮೌಲ್ಯಗಳನ್ನು, ಹಿಂಸಾತ್ಮಕ ಪದ್ಧತಿಗಳನ್ನು, ಅಸಮಾನತೆಯ ಪ್ರಣಾಳಿಕೆಯನ್ನು ಬಹಿರಂಗವಾಗಿಯೇ ಬೋಧಿಸುವ ಅರ್ಥಶಾಸ್ತ್ರದಂತಹ, ಮನುಸ್ಮೃತಿಯಂತಹ ಪಠ್ಯವನ್ನು ಸಮಾಜದ ಮೇಲೆ ಹೇರುವ ಕೆಲಸವನ್ನು ಅತ್ಯಂತ ವ್ಯವಸ್ಥಿತವಾಗಿ ಮತ್ತು ಪ್ರಜ್ಞಾಪೂರ್ವಕವಾಗಿ ತ್ರೈವರ್ಣೀಕ ಸರ್ಕಾರಗಳು ಇಂದು ನಡೆಸುತ್ತಿವೆ. ಕರ್ನಾಟಕದಲ್ಲಿ 20ನೆಯ ಶತಮಾನದ ಮೊದಲೆರಡು-ಮೂರು ದಶಕಗಳಲ್ಲಿ ರೂಪುಗೊಂಡ ಆರ್ಥಿಕ ಚಿಂತನೆಯು ಹೇಗೆ ಅಖಿಲ ಭಾರತ ಮಟ್ಟದಲ್ಲಿ ನೇರವಾಗಿಯಲ್ಲದಿದ್ದರೂ ಮುಖ್ಯವಾಗಿ ಆರ್ಥಿಕ ಅಭಿವೃದ್ಧಿ ನೀತಿಗಳನ್ನು ಪ್ರಭಾವಿಸಿತ್ತು ಮತ್ತು ಅಂತಹ ಜನಸ್ನೇಹಿ ಆರ್ಥಿಕ ಚಿಂತನೆಯನ್ನು ಬುಡಮಟ್ಟ ನಿರ್ಮೂಲ ಮಾಡುವ ಕೆಲಸವನ್ನು ಇಂದು ಒಕ್ಕೂಟ ಸರ್ಕಾರವು ಹೇಗೆ ನಡೆಸಲಾಗುತ್ತಿದೆ ಎಂಬುದನ್ನು ಚರ್ಚಿಸಲು ಪ್ರಸ್ತುತ ಪ್ರಬಂಧದಲ್ಲಿ ಪ್ರಯತ್ನಿಸಲಾಗಿದೆ.

ಅಸಮಾನತೆಯನ್ನು – ಶ್ರೇಣೀಕರಣವನ್ನು ಬಹಿರಂಗವಾಗಿಯೇ ಒಪ್ಪಿಕೊಂಡಿದ್ದ ಚಾತುರ್ವಣ ಸಿದ್ಧಾಂತವನ್ನು ಇಂದು ತಜ್ಞರೆನಿಸಿಕೊಂಡವರು ನಾಚಿಕೆ-ಹೇಸಿಗೆಯಿಲ್ಲದೆ ಹೇಗೆ ಪ್ರತಿಪಾದಿಸುತ್ತಿದ್ದಾರೆ ಎಂಬುದು ವಿಚಿತ್ರವಾಗಿ ಕಾಣುತ್ತದೆ. ಇಂದು ಆಳುವ ವರ್ಗವು ಯಾವ ರೀತಿಯಲ್ಲಿ ರಾಜಸತ್ತೆಯು ರೂಪಿಸಿದ್ದ ಆರ್ಥಿಕ ಚಿಂತನೆಯನ್ನು ಮರುತ್ನಿಪಿಸಲು ಪ್ರಯತ್ನಸುತ್ತಿದೆ ಎಂಬುದಕ್ಕೆ 2019-20ರ ಭಾರತದ ಆರ್ಥಿಕ ಸಮೀಕ್ಷೆಯಲ್ಲಿನ ನಿರೂಪಣೆಯು ಸಾಕ್ಷಿಯಾಗಿದೆ. ಇದರಲ್ಲಿನ ಮುಖ್ಯ ಪ್ರತಿಪಾದನೆ ಹೀಗಿದೆ: ’ನಮಗೆ ತಿಳಿದಿರುವ ಆರ್ಥಿಕ ಚರಿತ್ರೆಯ ಮೂರುಮುಕ್ಕಾಲುವೀಸೆ ಭಾಗದಲ್ಲಿ ಭಾರತವು ಜಾಗತಿಕವಾಗಿ ಆರ್ಥಿಕ ಪ್ರಬಲಶಕ್ತಿಯಾಗಿತ್ತು. ಈ ಆರ್ಥಿಕ ಪ್ರಬಲ ಸ್ಥಿತಿಯಲ್ಲಿ ಬಹುಪಾಲು ಸಂಪತ್ತಿನ ಉತ್ಪಾದನೆಗೆ ಮಾರುಕಟ್ಟೆಯ ಅಗೋಚರ ಹಸ್ತವನ್ನು ಮತ್ತು ಜನರ ವಿಶ್ವಾಸದ ಬೆಂಬಲವನ್ನು ದೇಶ ಅವಲಂಬಿಸಿತ್ತು.

ವಿಶೇಷವಾಗಿ ಮಾರುಕಟ್ಟೆಯ ಅಗೋಚರ ಹಸ್ತವು ಆರ್ಥಿಕತೆಯಲ್ಲಿದ್ದ ಮುಕ್ತ ವ್ಯವಹಾರಗಳಲ್ಲಿ ಮತ್ತು ನೈತಿಕ ಹಾಗೂ ತತ್ವಶಾಸ್ತ್ರೀಯ ಆಯಾಮಗಳನ್ನು ಪ್ರತಿಪಾದಿಸುತ್ತಿದ್ದ ಜನರ ವಿಶ್ವಾಸದ ಹಸ್ತದಲ್ಲಿ ಅಭಿವ್ಯಕ್ತವಾಗುತ್ತಿತ್ತು’ (ಕೆ. ಸುಬ್ರಮಣಿಯನ್. ಮುಖ್ಯ ಆರ್ಥಿಕ ಸಮಾಲೋಚಕ, ಭಾರತ ಸರ್ಕಾರ, 2020. ಆರ್ಥಿಕ ಸಮೀಕ್ಷೆ 2019-20. ಸಂಪುಟ 1. ಪುಟ 1). ಪ್ರಧಾನಮಂತ್ರಿ ದೇಶವನ್ನು ’ವಿಶ್ವಗುರು’ವನ್ನಾಗಿ ಮಾಡಲು ಹೊರಟಿದ್ದರೆ ಈ ಅರ್ಥಶಾಸ್ತ್ರಜ್ಞ ಚರಿತ್ರೆಯಲ್ಲಿ ಇದು ಆರ್ಥಿಕವಾಗಿ ವಿಶ್ವಗುರುವಾಗಿತ್ತು ಎಂದು ಹೇಳಲು ಪ್ರಯತ್ನಿಸುತ್ತಿದ್ದಾನೆ. ಇಲ್ಲಿ ಈ ಮನುಷ್ಯ ಹೇಳುತ್ತಿರುವುದು ’ರಾಜಸತ್ತೆಯ ಅರ್ಥಶಾಸ್ತ್ರ ಎಂಬುದನ್ನು ತಿಳಿದುಕೊಳ್ಳುವುದು ನಮಗೆ ಕಷ್ಟವಾಗಬಾರದು. ರಾಜಸತ್ತೆಯ ಆರ್ಥಿಕತೆಯಲ್ಲಿ ಸಾರ್ವಜನಿಕ-ಖಾಸಗಿ ಎನ್ನುವ ಭಿನ್ನತೆಯಿರಲಿಲ್ಲ. ಅಂದು ಆರ್ಥಿಕತೆಯು ಖಾಸಗಿ ವಲಯದಿಂದಲೇ ನಿರ್ವಹಿಸಲ್ಪಡುತ್ತಿತ್ತು ಎನ್ನುವ ಸುಬ್ರಮಣಿಯನ್ ಅವರ ಮಾತುಗಳನ್ನು ನಂಬುವುದು ಸಾಧ್ಯವಿಲ್ಲ. ಸಾರ್ವಜನಿಕ ವಲಯವನ್ನು ನಾಶ ಮಾಡುವುದಕ್ಕೆ ಮತ್ತು ಖಾಸಗಿ ವಲಯದ ವೈಭವೀಕರಣಕ್ಕೆ ಒಂದು ಸೈದ್ಧಾಂತಿಕ ಚೌಕಟ್ಟನ್ನು ನೀಡುವುದು ಇವರ ಪ್ರಣಾಳಿಕೆಯ ಪ್ರಧಾನ ಉದ್ದೇಶವಾಗಿದೆ.

ನಾಲ್ವಡಿ ಒಡೆಯರ ಆರ್ಥಿಕ ಚಿಂತನೆ

ಕಳೆದ 20ನೆಯ ಶತಮಾನದ ಮೊದಲ ದಶಕದಲ್ಲಿ ಮೈಸೂರು ಸಂಸ್ಥಾನದಲ್ಲಿ ಅಧಿಕಾರಕ್ಕೆ ಬಂದ ನಾಲ್ವಡಿ ಕೃಷರಾಜ ಒಡೆಯರ್ ಅವರು ಅಂದಿನ ಮೈಸೂರು ಸಂಸ್ಥಾನದ ಆರ್ಥಿಕತೆಯನ್ನು ಹೇಗೆ ಕಟ್ಟಿದರು ಎಂಬುದು ಒಂದು ರೋಚಕ ಸಂಗತಿಯಾಗಿದೆ. ಕೆ. ಸುಬ್ರಮಣಿಯನ್ ಹೇಳುವ ಮಾರುಕಟ್ಟೆ ಅಗೋಚರ ಹಸ್ತವನ್ನು ಅವಲಂಬಿಸಿಕೊಂಡು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೈಸೂರು ಸಂಸ್ಥಾನದ ಆರ್ಥಿಕತೆಯನ್ನು ಕಟ್ಟಲಿಲ್ಲ. ಮೈಸೂರು ಸಂಸ್ಥಾನದಲ್ಲಿ 1900ರಿಂದ 1940ರ ಅವಧಿಯಲ್ಲಿ ಆರಂಭವಾದ ಎಲ್ಲ ಅಭಿವೃದ್ಧಿ ಯೋಜನೆಗಳೂ ಸಾರ್ವಜನಿಕ ವಲಯದ ಉದ್ದಿಮಗಳಾಗಿದ್ದವು. ಅಭಿವೃದ್ಧಿಶೀಲ ಆರ್ಥಿಕತೆಯಾಗಿದ್ದ ಮೈಸೂರು ಸಂಸ್ಥಾನದಲ್ಲಿ ಬಂಡವಾಳವುಳ್ಳ ಖಾಸಗಿ ಉದ್ಯಮಪತಿಗಳಿರಲಿಲ್ಲ. ಇದು ಭಾರತವನ್ನೂ ಸೇರಿಸಿಕೊಂಡು ಎಲ್ಲ ಅಭಿವೃದ್ಧಿಶೀಲ-ಹಿಂದುಳಿದ ಆರ್ಥಿಕತೆಗಳ ಕಥೆಯಾಗಿದೆ.

ಭಾರತ ಸರ್ಕಾರದ ಹಣಕಾಸು ಇಲಾಖೆಯ ಮುಖ್ಯ ಆರ್ಥಿಕ ಸಲಹೆಗಾರರು 2019-2020ರ ಆರ್ಥಿಕ ಸಮೀಕ್ಷೆಯಲ್ಲಿ ಹೇಳುವ ’ಮಾರುಕಟ್ಟೆ ಶಕ್ತಿಯ ಅಗೋಚ ಹಸ್ತ’ ಎಂಬುದರ ಪಾತ್ರವೇನಿರಲಿಲ್ಲ. ಇದು ಅಂದಿನ ಮೈಸೂರು ಸಂಸ್ಥಾನಕ್ಕೆ ಎಷ್ಟು ಸತ್ಯವೋ ಅಷ್ಟೇ ಉಳಿದ ಭಾರತದ ಭಾಗಗಳಿಗೂ ಸತ್ಯವಾಗಿತ್ತು. ಸ್ವಾತಂತ್ರ್ಯ ಪಡೆದ ಭಾರತದಲ್ಲಿಯೂ ಆರಂಭದ 50-60-70ರ ದಶಕಗಳಲ್ಲಿ ಖಾಸಗಿ ವಲಯ ಎನ್ನುವುದು, ಮಾರುಕಟ್ಟೆ ಶಕ್ತಿ ಎನ್ನುವುದು ಪ್ರಬಲವಾಗಿರಲಿಲ್ಲ. ಸಹಜವಾಗಿ ನೆಹರೂ-ಮಹಾಲನೋಬಿಸ್ ಅಭಿವೃದ್ಧಿ ಮಾದರಿಯಲ್ಲಿ ಸಾರ್ವಜನಿಕ ಉದ್ದಿಮೆಗಳಿಗೆ ಆರ್ಥಿಕತೆಯ ಮುಂಚೂಣಿಯನ್ನು ಆಕ್ರಮಿಸುವಂತೆ ಮಾಡುವುದು ಅನಿವಾರ್ಯವಾಗಿತ್ತು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ತಮ್ಮ 35ರಿಂದ 40 ವರ್ಷಗಳ ಆಳ್ವಿಕೆಯಲ್ಲಿ ಶಿಕ್ಷಣ, ಆರೋಗ್ಯ, ಉದ್ದಿಮೆ, ವಾಣಿಜ್ಯ, ಲಲಿತ ಕಲೆ ಸಾಹಿತ್ಯ ಹೀಗೆ ಅನೇಕ ಯೋಜನೆಗಳನ್ನು ಸಾರ್ವಜನಿಕ ವಲಯದಲ್ಲಿ ಸ್ಥಾಪಿಸಿದರು.

ಕೈಗಾರಿಕೋದ್ಯಮಗಳು ಮತ್ತು ವಾಣಿಜ್ಯೋದ್ಯಮಗಳು

1. ಶಿವನಸಮುದ್ರ ಜಲ ವಿದ್ಯುತ್ ಯೋಜನೆ 1902.
2. ಮೈಸೂರು ಸ್ಟೇಟ್ ರೈಲ್ವೆ 1918
3. ಗೌರ್ನಮೆಂಟ್ ಗಂಧದ ಎಣ್ಣೆ ಕಾರ್ಖಾನೆ 1916
4. ವುಡ್ ಡಿಸಿಲ್ಟ್ರೇಶನ್ ಕಾರ್ಖಾನೆ 1918
5. ಮೈಸೂರು ಕ್ರೋಮ್ ಆಂಡ್ ಟ್ಯಾನಿಂಗ್ ಕಾರ್ಖಾನೆ 1918
5. 7. ಮೈಸೂರು ಪೇಪರ್ ಮಿಲ್ಸ್ 1936
8. ಮೈಸೂರು ಲ್ಯಾಂಪ್ಸ್ ಕಾರ್ಖಾನೆ 1936
9. ಮೈಸೂರು ಕೆಮಿಕಲ್ ಆಂಡ್ ಫರ್ಟಿಲೈಸರ್ ಕಾರ್ಖಾನೆ 1937
10. ಮೈಸೂರು ಪೇಂಟ್ಸ್ ಆಂಡ್ ವಾರ್ನಿಷ್ ಕಾರ್ಖಾನೆ
11. ಮೈಸೂರು ಗ್ಲಾಸ್ ಆಂಡ್ ಪ್ರೊಸಲಿನ್ ಕಾರ್ಖಾನೆ 1939
12. ಮೈಸೂರು ಇಂಪ್ಲಿಮೆಂಟ್ಸ್ ಕಾರ್ಖಾನೆ, 1939
13. ಮೈಸೂರು ಸ್ಟೇಟ್ ಬ್ಯಾಂಕ್, 1913
14. ಮರ್ಚೆಂಟ್ ಚೇಂಬರ್‍ಸ್ ಆಫ್ ಕಾಮರ್ಸ್, 1916
15. ಕೆ. ಆರ್. ಮಾರ್ಕೆಟ್, 1928

ನೀರಾವರಿ ಯೋಜನೆಗಳು

1. ವಾಣಿವಿಲಾಸ ಸಾಗರ ಯೋಜನೆ. 1907
2. ಕೃಷ್ಣರಾಜ ಸಾಗರ 1924
3. ಮಾರ್ಕೊನಹಳ್ಳಿ ನೀರಾವರಿ ಯೋಜನೆ 1930
4. ಹಿರೇಭಾಸ್ಕರ ಅಣೆಕಟ್ಟೆ 1939
5. ಇರ್ವಿಂಗ್ ಕಾಲುವೆ.

ಆರೋಗ್ಯ ಯೋಜನೆಗಳು

1. ಮೈಸೂರು ಮಿಂಟೊ ಆಸ್ಪತ್ರೆ. 1903
2. ಮೈಸೂರು ಮೆಡಿಕಲ್ ಕಾಲೇಜ್, 1924
3. ಕೃಷ್ಣ ರಾಜೇಂದ್ರ ಆಸ್ಪತ್ರೆ 1927
4. ವಾಣಿವಿಲಾಸ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ 1934

ಶೈಕ್ಷಣಿಕ ಕಾರ್ಯಕ್ರಮ

1. ಇಂಡಿಯನ್ ಇನ್ಸಿಟಿಟ್ಯೂಟ್ ಆಫ್ ಸೈನ್ಸ್ 1909
2. ಮೈಸೂರು ಬಾಯ್ಸ್ ಆಂಡ್ ಸ್ಕೌಟ್ 1909
3. ಮೈಸೂರು ಅಗ್ರಿಕಲ್ಚರಲ್ ರೆಸಿಡೆನ್ಸಿಯಲ್ ಸ್ಕೂಲ್, 1913
4. ಮೈಸೂರು ವಿಶ್ವವಿದ್ಯಾಲಯ, 1916
5. ಸ್ಕೂಲ್ ಆಫ್ ಎಂಜಿನಿಯರಿಂಗ್ ಕಾಲೇಜ್, 1916
6. ಮಹಾರಾಜ ಸೈನ್ಸ್ ಕಾಲೇಜ್ ಫಾರ್ ವುಮೆನ್ 1917
7. ಗೌವರ್ನಮೆಂಟ್ ಸೈನ್ಸ್ ಕಾಲೇಜ್, 1921
8. ನ್ಯಾಷನಲ್ ಮೆಂಟಲ್ ಆಂಡ್ ನ್ಯೂರೋ ಸೈನ್ಸ್‌ಸ್ ಇನ್ಸ್ಟಿಟ್ಯೂಟ್, 1925
9. ಸಿ. ವಿ. ರಾಮನ್ ಇನ್ಸ್ಟಿಟ್ಯೂಟ್, 1934
10. ಮೈಸೂರು ಮಹಾರಾಣಿ ಕಾಲೇಜು, 1938

ಇವಲ್ಲದೆ ನಾಲ್ವಡಿ ಅವರು ಲಲಿತ ಕಲೆ, ಸಾಹಿತ್ಯ, ನಾಟಕ ಮುಂತಾದ ಕ್ಷೇತ್ರದಲ್ಲಿಯೂ ಅನೇಕ ಯೋಜನೆಗಳನ್ನು ಜಾರಿಗೊಳಿಸಿದರು. ಇವೆಲ್ಲವೂ ಸರ್ಕಾರ ಹೂಡಿದ ಬಂಡವಾಳವಾಗಿತ್ತು.
ಇದನ್ನು ’ಪ್ರಭುತ್ವ ಪ್ರಾಯೋಜಿತ ಅಭಿವೃದ್ಧಿ ಮಾದರಿ’ ಎಂದು ಕರೆಯಬಹುದು.

ಇಷ್ಟಾದರೂ ನಾಲ್ವಡಿಯವರು ಕೈಗೊಂಡ ಅಭಿವೃದ್ಧಿ ಮಾದರಿಯು ಇಂದಿಗೂ ಅನುಕರಣೀಯವಾದುದಾಗಿದೆ. ನಾಲ್ವಡಿಯವರು ತೆರಿಗೆಗಳ ಮೂಲಕ ಸಂಗ್ರಹಿಸಿದ್ದ ಸಂಪನ್ಮೂಲಗಳನ್ನು ಅಭಿವೃದ್ಧಿಗೆ ವಿನಿಯೋಗಿಸಿದರು. ಈ ಬಗೆಯ ಅಭಿವೃದ್ಧಿ ಕಾರ್ಯಕ್ರಮದಿಂದಾಗಿ ಮೈಸೂರು ಸಂಸ್ಥಾನ ಅಂದು ಮತ್ತು ಕರ್ನಾಟಕ ಇಂದು ಪ್ರಗತಿಶೀಲ ಆರ್ಥಿಕತೆಯಾಗಿ ಬೆಳೆದಿದೆ.

ಭಾರತದಲ್ಲಿ ಸಾರ್ವಜನಿಕ ವಲಯದ ಸ್ಥಾನ, ಅಗತ್ಯತತೆ, ಪಾತ್ರ

ಸ್ವಾತಂತ್ರ್ಯಾನಂತರ ಭಾರತದ ಅಭಿವೃದ್ಧಿಯ ಚುಕ್ಕಾಣಿ ಹಿಡಿದಿದ್ದ ನೆಹರು-ಪಟೇಲ್-ಅಂಬೇಡ್ಕರ್-ಮೌಲನಾ ಅಬ್ದುಲ್ ಕಲಾಮ್ ಆಜಾದ್ ಮುಂತಾದವರು ಎರಡು ಕಾರಣಗಳಿಗೆ, ಭಾರತದ ಅಭಿವೃದ್ಧಿಯಲ್ಲಿ ಸಾರ್ವಜನಿಕ ವಲಯ ಮುಂಚೂಣಿ ಸ್ಥಾನದಲ್ಲಿರಬೇಕು ಎಂಬ ಪ್ರಣಾಳಿಕೆಯನ್ನು ರೂಪಿಸಿ ಅದನ್ನು ಅನುಷ್ಠಾನಗೊಳಿಸಿದರು.

1. ಅಭಿವೃದ್ಧಿಶೀಲ ಆರ್ಥಿಕತೆಯಲ್ಲಿ ಬೃಹತ್ ಪ್ರಮಾಣದ ಬಂಡವಾಳ ಹೂಡುವಂತಹ ಖಾಸಗಿ ಉದ್ದಿಮೆದಾರರಿರಲಿಲ್ಲ. ಸರ್ಕಾರವು ಆ ಕೆಲವನ್ನು ಮಾಡಬೇಕಾಗಿತ್ತು.

2. ಇದಕ್ಕಿಂತ ಮುಖ್ಯವಾಗಿ ಆರ್ಥಿಕ ಅಸಮಾನತೆಯನ್ನು ತಡೆಯುವ ಮತ್ತು ಸಂಪತ್ತಿನ ಕೇಂದ್ರೀಕರಣವನ್ನು ವಿರೋಧಿಸುವ ಪ್ರಣಾಳಿಕೆಯ ನೆಲೆಯಲ್ಲಿ ಭಾರತವು ಸಾರ್ವಜನಿಕ ವಲಯದಲ್ಲಿ ಅಭಿವೃದ್ಧಿಯನ್ನು ಕೈಗೊಳ್ಳುವ ಕ್ರಮವನ್ನು ಅಳವಡಿಸಿಕೊಂಡಿತು.

ಈ ಅಸಮಾನತೆಯನ್ನು ನಿವಾರಿಸುವುದು ಮತ್ತು ಸಂಪತ್ತಿನ ಕೇಂದ್ರೀಕರಣವನ್ನು ತಡೆಯುವುದು ನಮ್ಮ ಸಂವಿಧಾನದ ಒಂದು ಬಹುಮುಖ್ಯ ನಿಯಮವಾಗಿದೆ. ಸಂವಿಧಾನದ ಭಾಗ 4ರಲ್ಲಿನ ಪರಿಚ್ಛೇದ 38ರ ಸೆಕ್ಷನ್ 2ರಲ್ಲಿ ಅಸಮಾನತೆಯನ್ನು ನಿವಾರಿಸುವ ಮತ್ತು ಸಂಪತ್ತಿನ ಕೇಂದ್ರೀಕರಣವನ್ನು ತಡೆಯುವ ಜವಾಬ್ದಾರಿಯನ್ನು ಸರ್ಕಾರಕ್ಕೆ ವಹಿಸಿದೆ. ಸಾರ್ವಜನಿಕ ವಲಯ ಸಮಾಜದ ಯೋಗಕ್ಷೇಮಕ್ಕೆ ಬದ್ಧವಾಗಿರುತ್ತದೆ. ಆದರೆ ಖಾಸಗಿ ವಲಯದ ಮೂಲ ಉದ್ದೇಶವು ಲಾಭವನ್ನು ಗರಿಷ್ಟೀಕರಿಸಿಕೊಳ್ಳುವದಾಗಿರುತ್ತದೆ. ಖಾಸಗಿ ವಲಯ ಎಂದರೆ ಲಾಭಬುಡಕತನ ಎಂದು ಹೇಳಬಹುದು. ಖಾಸಗಿ ವಲಯವು ಬಂಡವಾಳಕ್ಕೆ ಬದ್ಧವಾಗಿರುತ್ತದೆ ವಿನಾ ದುಡಿಮೆಗಾರರಿಗೆ ಅಥವಾ ಆರ್ಥಿಕತೆಗೆ ಬದ್ಧವಾಗಿರುವುದಿಲ್ಲ.

ಸಾರ್ವಜನಿಕವಲಯ ಪ್ರಣೀತ ಅಭಿವೃದ್ಧಿ ಮಾದರಿಗೆ ಅಪಾಯ ಬಂದಿದೆ

ನಮ್ಮ ದೇಶದಲ್ಲಿ ನಾಲ್ವಡಿ ಅವರು ರೂಪಿಸಿದ್ದ ಸಾರ್ವಜನಿಕ ವಲಯ ಪ್ರಣೀತ ಅಭಿವೃದ್ಧಿ ಮಾದರಿಗೆ ಬದ್ಧವಾಗಿದ್ದ ನೆಹರೂ-ಮಹಾಲನೊಬಿಸ್ ಅಭಿವೃದ್ಧಿ ಮಾದರಿಗೆ ಮೊದಲು ಅಪಾಯ 1991ರಲ್ಲಿ ಬಂತು. ಯಾವುದನ್ನು ನಾವು ಹೊಸ ಆರ್ಥಿಕ ನೀತಿ ಅಥವಾ ’ಉದಾರೀಕರಣ-ಮಾರ್ಕೆಟ್ಟೀಕರಣ-ಜಾಗತೀಕರಣ’ ಎಂದು ಕರೆಯುತ್ತೇವೆಯೋ ಅದು ಖಾಸಗಿ ವಲಯಕ್ಕೆ ಆರ್ಥಿಕತೆಯ ಬಾಗಿಲನ್ನು ದೊಡ್ಡದಾಗಿ ತೆರೆಯಲಾಯಿತು. ಆದರೆ ಖಾಸಗಿ ವಲಯದ ನಿಯಂತ್ರಣ ನಿಯಮವನ್ನು ಸರ್ಕಾರ ಬಿಟ್ಟುಕೊಟ್ಟಿರಲಿಲ್ಲ. ನಿಯಂತ್ರಿತ ಖಾಸಗೀಕರಣ ನಿಯಮದಿಂದಾಗಿ ನಮಗೆ 2008-09ರ ಆರ್ಥಿಕ ಕುಸಿತವನ್ನು ಯಶಸ್ವಿಯಾಗಿ ನಿಭಾಯಿಸುವುದು ಸಾಧ್ಯವಾಯಿತು. ಆದರೆ ನಿಯಂತ್ರಿತ ಖಾಸಗೀಕರಣ 2014ರಲ್ಲಿ ಕೊನೆಗೊಂಡಿತು. ಸಾರ್ವಜನಿಕ ವಲಯವನ್ನು ನಾಶ ಮಾಡುವ ಮತ್ತು ಖಾಸಗಿ ವಲಯವನ್ನು ಆರಾಧನೆ ಮಾಡುವ ಪರ್ವ ಆರಂಭವಾಯಿತು. ಖಾಸಗೀಕರಣದ ಆರಾಧನೆ ಮತ್ತು ಕಾರ್ಪೊರೆಟೀಕರನದ ವೈಭವೀಕರಣ ಎಂದು 2014ರ ನಂತರದ ಆರ್ಥಿಕ ನೀತಿಯನ್ನು ಕರೆಯುವುದಕ್ಕೆ ಆಧಾರವಾಗಿ ಇಲ್ಲಿ ಎರಡು ನಿದರ್ಶನಗಳನ್ನು ನೀಡಲಾಗಿದೆ.

ಮೈಸೂರು ವಿಶ್ವವಿದ್ಯಾನಿಲಯದ ಕಾರ್ಯಸೌಧ

(1) ಭಾರತ ಸರ್ಕಾರದ 2018-19ರ ಆರ್ಥಿಕ ಸಮೀಕ್ಷೆಯಲ್ಲಿನ ಮೊದಲ ಅಧ್ಯಾಯದ ಶೀರ್ಷಿಕೆ ಹೀಗಿದೆ;

ಪಥ ಬದಲಾವಣೆ: ಖಾಸಗಿ ಹೂಡಿಕೆಯು ಅಭಿವೃದ್ಧಿಯ, ಉದ್ಯೋಗಗಳ, ರಪ್ತು ವ್ಯಾಪಾರದ ಮತ್ತು ಬೇಡಿಕೆಯ ಚಾಲಕಶಕ್ತಿಯಾಗಿದೆ.

(2). ನಮ್ಮ ಪ್ರಧಾನಮಂತ್ರಿ ಮತ್ತು ವಿತ್ತ ಮಂತ್ರಿ ಅವರು 2020-21ರ ಬಜೆಟ್ ಮಂಡನೆಯ ಸಂದರ್ಭದಲ್ಲಿ ವೆಲ್ತ್ ಕ್ರಿಯೇಟರ್‍ಸ್‌ಗಳ (ಖಾಸಗಿ ಬಂಡವಾಳಿಗರು) ಬಗ್ಗೆ ಹೇಳಿರುವ ಮಾತುಗಳು:

’ಜನರು ಸಂಪತ್ತನ್ನು ಉತ್ಪಾದಿಸುವವರನ್ನು ಅನುಮಾನದಿಂದ ನೋಡುವುದನ್ನು ನಿಲ್ಲಿಸಬೇಕು. ಸಂಪತ್ತಿನ ಉತ್ಪಾದನೆಯಲ್ಲಿ ನಿರತರಾಗಿರುವವರು ದೇಶದ ಸಂಪತು’ (ಪ್ರಧಾನ ಮಂತ್ರಿ. 2019ರ ಸ್ವಾತಂತ್ರ್ಯ ದಿನಾಚರಣೆ ಭಾಷಣ).

ವಿತ್ತ ಮಂತ್ರಿ ಅವರು ಖಾಸಗಿ ಬಂಡವಾಳಿಗರ ಬಗ್ಗೆ ಹೀಗೆ ಹೇಳಿದ್ದಾರೆ: ’ಸಂಪತ್ತನ್ನು ಉತ್ಪಾದಿಸುವವರನ್ನು ಸರ್ಕಾರ ಗೌರವಿಸುತ್ತದೆ. ನಾವು ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವ ಬಗ್ಗೆ ಯೋಚಿಸುತ್ತಿಲ್ಲ (ರಾಜ್ಯ ಸಭೆಯಲ್ಲಿನ ಹೇಳಿಕೆ).

ಇದನ್ನು ಖಾಸಗೀ ವಲಯದ ಆರಾಧನೆ ಎನ್ನದೆ ಮತ್ತೇನು ಹೇಳಬಹುದು? ಇದನ್ನು ಖಾಸಗಿ ವಲಯದ ವೈಭವೀಕರಣವೆನ್ನದೆ ಮತ್ತೇನು ಹೇಳಲು ಸಾಧ್ಯ?

ಆದರೆ 2014ರಲ್ಲಿ ಅಧಿಕಾರಕ್ಕೆ ಬಂದ ತ್ರೈವರ್ಣೀಕ ಸರ್ಕಾರವು ವ್ಯವಸ್ಥಿತವಾಗಿ ಮತ್ತು ಪ್ರಜ್ಞಾಪೂರ್ವಕವಾಗಿ ಸಾರ್ವಜನಿಕ ವಲಯವನ್ನು ನಾಶ ಮಾಡುವ ದಿಶೆಯಲ್ಲಿ ದಾಪು ಹೆಜ್ಜೆಗಳನ್ನಿಡುತ್ತಿದೆ. ಉದಾರೀಕರಣ 1991ರಿಂದ 2014ರ ಪರ್ವದಲ್ಲಿ ಖಾಸಗೀಕರಣಕ್ಕೆ ಅವಕಾಶ ನೀಡಲಾಗಿತ್ತು. ಆದರೆ ಇಲ್ಲಿ ಖಾಸಗಿ ವಲಯದ ಆರಾಧನೆಯಿರಲಿಲ್ಲ. ಇಂದು 2014ರ ನಂತರ ಖಾಸಗೀಕರಣದ ಆರಾಧನೆ ಮತ್ತು ಕಾರ್ಪೊರೆಟೀಕರಣದ ವೈಭವೀಕರಣ ನಡೆದಿದೆ. ಸಮಾನತೆಯ ಮೌಲ್ಯದ ಬಗ್ಗೆ ತ್ರೈವರ್ಣೀಕ ಸರ್ಕಾರಕ್ಕೆ ಗೌರವವಿಲ್ಲ. ನಮ್ಮ ಸಂವಿಧಾನದ ಪರಿಚ್ಛೇದ 38ರ ನಿಯಮದ ಬಗ್ಗೆಯೂ ಇದಕ್ಕೆ ಬದ್ಧತೆಯಿಲ್ಲ. ಇದಕ್ಕೆ ಮೇಲಿನ ಎರಡು ಉದಾಹರಣೆಗಳು ಸಾಕ್ಷಿಯಾಗಿವೆ.

ವೆಲ್ತ್ ಕ್ರಿಯೇಶನ್ನಿನಲ್ಲಿ ಕಾರ್ಮಿಕರ ಪಾತ್ರವಿಲ್ಲವೇ?

ನಮ್ಮ ಆರ್ಥಿಕತೆಯಲ್ಲಿ ಸರಿಸುಮಾರು 50 ಕೋಟಿ ದುಡಿಮೆಗಾರರಿದ್ದಾರೆ. ಇವರಲ್ಲಿ ಹಂಗಾಮಿ ಉದ್ಯೋಗಸ್ಥರಿದ್ದಾರೆ, ಸ್ವಯಂ ಉದ್ಯೋಗಿಗಳಿದ್ದಾರೆ, ಖಾಯಂ ಉದ್ಯೋಗಿಗಳಿದ್ದಾರೆ. ರೈತರಿದ್ದಾರೆ. ಸಣ್ಣ-ಪುಟ್ಟ ವ್ಯಾಪಾರಿಗಳಿದ್ದಾರೆ. ದೇಶದ ಜಿಡಿಪಿಯಲ್ಲಿ ಇವರ ಕಾಣಿಕೆಯು ಅಪಾರವಾಗಿದೆ. ಆದರೆ ತ್ರೈವರ್ಣೀಕ ಸರ್ಕಾರವು ಬಂಡವಾಳವನ್ನು ಮಾತ್ರ ವೆಲ್ತ್ ಕ್ರಿಯೇಟರ್‍ಸ್ ಎಂದು ಭಾವಿಸಿದೆ. ಕಾರ್ಮಿಕ ವರ್ಗದ ಬಗ್ಗೆ ಇದಕ್ಕೆ ಒಂದು ರೀತಿಯ ವಿರೋಧವಿದೆ. ಬಂಡವಾಳಿಗರ ಸಲಹೆ-ಸೂಚನೆಯಂತೆ ತ್ರೈವರ್ಣೀಕ ಸರ್ಕಾರವು ನಡೆಯುತ್ತಿದೆ ಮತ್ತು ಕಾರ್ಮಿಕ ವರ್ಗದ ಹಿತಾಸಕ್ತಿಗಳ ಬಗ್ಗೆ ಔದಾಸೀನ್ಯ ಧೋರಣೆ ತಳೆದಿದೆ. ಖಾಸಗೀಕರಣ ಮತ್ತು ಕಾರ್ಮಿಕ ವಿರೋಧಿ ಧೋರಣೆಯಿಂದಾಗಿ ಆರ್ಥಿಕತೆಯು ಕುಸಿಯುತ್ತಿದೆ.

ಮೈಸೂರು ಸಂಸ್ಥಾನದಲ್ಲಿ 20ನೆಯ ಶತಮಾನದ ಆದಿ ಭಾಗದಲ್ಲಿ ನಾಲ್ವಡಿ ಅವರು ಅನುಸರಿಸಿದ್ದ ಆರ್ಥಿಕ ನೀತಿಯಿಂದ ಇಂದು ನಾವು ಪಾಠ ಕಲಿಯಬಹುದಾಗಿದೆ. ಬಂಡವಾಳವನ್ನು ಆರಾಧಿಸುವ ಅಗತ್ಯವಿಲ್ಲ. ಕಾರ್ಮಿಕ ವರ್ಗದ ಹಿತಾಶಸಕ್ತಿಗಳನ್ನು ಕಡೆಗಣಿಸುವ ಅಗತ್ಯವಿಲ್ಲ. ಸರ್ಕಾರವು ಬಡವರ, ಹಸಿದವರ, ದಲಿತರ, ಹಿಂದುಳಿದ ವರ್ಗಗಳ ಹಿತಾಸಕ್ತಿಯನ್ನು ಕಾಪಾಡುವುದಕ್ಕೆ ಪೂರಕವಾದದ ಆರ್ಥಿಕ ನೀತಿ ಅನುಸರಿಸಬೇಕು. ಈ ಸಂಗತಿಯನ್ನು ಗಮನದಲ್ಲಿಟ್ಟುಕೊಂಡು ಹಿಂದುಳಿದ ವರ್ಗಕ್ಕೆ ಸಾಮಾಜಿಕ ನ್ಯಾಯವನ್ನು ನೀಡುವ ಉದ್ದೇಶದಿಂದ ನಾಲ್ವಡಿ ಅವರು 1918ರಲ್ಲಿ ಲೆಸ್ಲೆ ಮಿಲ್ಲರ್ ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ನೇಮಿಸಿದರು. ಅದರ ಶಿಫಾರಸ್ಸಿನಂತೆ ಉದ್ಯೋಗಗಳಲ್ಲಿ ಹಿಂದುಳಿದ ವರ್ಗಕ್ಕೆ ಮೀಸಲಾತಿ ನೀಡುವ ಕ್ರಮವನ್ನು ಅನುಷ್ಠಾನಗೊಳಿಸಿದರು. ಖಾಸಗೀಕರಣದ ಆರಾಧನೆಯಿಂದಾಗಿ ಇಂದು ಮೀಸಲಾತಿಯು ಅಪ್ರಸ್ತುತವಾಗುತ್ತಿದೆ. ಆರ್ಥಿಕ, ಸಾಮಾಜಿಕ, ರಾಜಕೀಯ, ಶೈಕ್ಷಣಿಕ, ಆರೋಗ್ಯ — ಹೀಗೆ ಜನರ ಬದುಕಿನ ಎಲ್ಲ ಆಯಾಶಮಗಳನ್ನು ಒಳಗೊಂಡಂತೆ ನಾಲ್ವಡಿ ಅವರು ತಮ್ಮ ಆರ್ಥಿಕ ನೀತಿ ಅಳವಡಿಸಿಕೊಂಡಿದ್ದರು. ಆದರೆ ಇಂದು ತ್ರೈವರ್ಣೀಕ ಸರ್ಕಾರ ಕೇವಲ ಆರ್ಥಿಕತೆಗೆ ಆದ್ಯತೆ ನೀಡಿ ಸಾಮಾಜಿಕ ಅಸಮಾನತೆ-ಶ್ರೇಣೀಕರಣವನ್ನು ಊರ್ಜಿತಗೊಳಿಸುವ ರೀತಿಯ ನೀತಿಯನ್ನು ಪಾಲಿಸುತ್ತಿದೆ. ಭಾರತ ಸರ್ಕಾರವು ತ್ರೈವರ್ಣೀಕರ ಶಿಫಾರಸ್ಸುಗಳನ್ನು ಅನುಸರಿಸದೆ ದಲಿತರ, ಮಹಿಳೆಯರ, ಹಿಂದುಳಿದ ವರ್ಗಗಳ ಹಿತಾಸಕ್ತಿಗಳನ್ನು ಪೋಷಿಸುವಂತಹ ನೀತಿಗಳನ್ನು ಅನುಸರಿಸುವ ಅಗತ್ಯವಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಅಭಿವೃದ್ಧಿ ನೀತಿಯು ನಮಗೆ ಇಂದು ದಾರಿದೀಪವಾಗಬಹುದು.

ಡಾ. ಟಿ. ಆರ್. ಚಂದ್ರಶೇಖರ್

ಡಾ. ಟಿ. ಆರ್. ಚಂದ್ರಶೇಖರ
ಅಭಿವೃದ್ಧಿ ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿ ಹಂಪಿ ವಿ.ವಿಯಲ್ಲಿ ಸೇವೆ ಸಲ್ಲಿಸಿರುವ ಚಂದ್ರಶೇಖರ್ ಅವರು ಅರ್ಥಶಾಸ್ತ್ರದ ವಿಷಯದಲ್ಲಿ ಹಲವು ಪುಸ್ತಕಗಳನ್ನು ರಚಿಸಿದ್ದಾರೆ. ಇತಿಹಾಸ-ಸಂಸ್ಕೃತಿಗಳ ಬಗ್ಗೆಯೂ ತಮ್ಮ ವಿಶಿಷ್ಟ ಚಿಂತನೆಗಳನ್ನು ಪ್ರಸ್ತುತ ಪಡಿಸುತ್ತಿರುವ ಮುಂಚೂಣಿ ಚಿಂತಕರು


ಇದನ್ನೂ ಓದಿ: ಭಾರತದ ಆರ್ಥಿಕತೆ – ಸುಧಾರಣಾಪೂರ್ವ ಮತ್ತು ಸುಧಾರಣೋತ್ತರ ಕಾಲಘಟ್ಟ; ಒಂದು ಮೌಲ್ಯಮಾಪನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಣಿಪುರ ಬೆತ್ತಲೆ ಮೆರವಣಿಗೆ: ಗಲಭೆಕೋರರ ಗುಂಪಿಗೆ ಮಹಿಳೆಯರನ್ನು ಒಪ್ಪಿಸಿದ್ದ ಪೊಲೀಸರು, ಚಾರ್ಜ್‌ಶೀಟ್‌ನಲ್ಲಿ ಮಹತ್ವದ ಅಂಶಗಳು...

0
ಮಣಿಪುರ ಹಿಂಸಾಚಾರದ ಸಮಯದಲ್ಲಿ ನಡೆದಿದ್ದ ಇಬ್ಬರು ಮಹಿಳೆಯರ ಬೆತ್ತಲೆ ಮೆರವಣಿಗೆ, ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ಚಾರ್ಜ್‌ಶೀಟ್‌ನಲ್ಲಿ ಮಹತ್ವದ ಅಂಶಗಳ ಉಲ್ಲೇಖವಾಗಿದ್ದು, ಮಹಿಳೆಯರನ್ನು ಗಲಭೆಕೋರರ ಗುಂಪಿಗೆ ಪೊಲೀಸರೇ ಒಪ್ಪಿಸಿದ್ದಾರೆ ಎಂದು ತಿಳಿಸಿದೆ. ಪೊಲೀಸರ...