ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿಯ ರದ್ದತಿಯನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿರುವುದನ್ನು ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಸ್ವಾಗತಿಸಿದ್ದಾರೆ. ಕಾಶ್ಮೀರಿ ಪಂಡಿತರು ತಮ್ಮ ಹಿಂದಿನ ತಾಯ್ನಾಡಿಗೆ ಸುರಕ್ಷಿತವಾಗಿ ಮರಳುವುದನ್ನು ಪ್ರಧಾನಿ ನರೇಂದ್ರ ಮೋದಿ ಖಾತರಿಪಡಿಸುವರೇ? ಎಂದು ಅವರು ಪ್ರಶ್ನಿಸಿದ್ದಾರೆ.
ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಜಮ್ಮು ಮತ್ತು ಕಾಶ್ಮೀರದಲ್ಲಿ ಶೀಘ್ರವೇ ಚುನಾವಣೆ ನಡೆಸಬೇಕು ಎಂದು ಉದ್ದವ್ ಠಾಕ್ರೆ ಆಗ್ರಹಿಸಿದ್ದಾರೆ.
“ಪಿಒಕೆ (ಪಾಕಿಸ್ತಾನ ಆಕ್ರಮಿತ ಕಾಶ್ಮೀರ) ಭಾರತದಲ್ಲಿ ವಿಲೀನಗೊಳ್ಳುತ್ತದೆ ಎಂದು ನಾವು ಭಾವಿಸುತ್ತೇವೆ. ಇದರಿಂದಾಗಿ ನಮ್ಮ ದೇಶದ ಬೇರ್ಪಡಿಸಲಾಗದ ಭಾಗವಾಗಿರುವ ಕಾಶ್ಮೀರದಲ್ಲಿ ಚುನಾವಣೆಗಳು ನಡೆಯುತ್ತವೆ” ಎಂದು ಠಾಕ್ರೆ ಹೇಳಿದ್ದಾರೆ.
ಕಾಶ್ಮೀರ ಪಂಡಿತರ ಸ್ಥಿತಿಗತಿ ಕುರಿತು ಪ್ರಶ್ನಿಸಿದ ಠಾಕ್ರೆ, “ಕಾಶ್ಮೀರಿ ಪಂಡಿತರು ಮನೆಗೆ ಮರಳುತ್ತಾರೆ ಮತ್ತು ಅವರ ಮತದಾನದ ಹಕ್ಕನ್ನು ಚಲಾಯಿಸುತ್ತಾರೆ ಎಂಬ ಭರವಸೆಯನ್ನು ಯಾರು ನೀಡುತ್ತಾರೆ? ಎಂದು ನಾವು ತಿಳಿಯಬೇಕಾಗಿದೆ. ಪ್ರಧಾನಿ ಮೋದಿ ನಮಗೆ ಭರವಸೆ ನೀಡುತ್ತಾರೆಯೇ? ಕಾಶ್ಮೀರಿ ಪಂಡಿತರು ಸುರಕ್ಷಿತವಾಗಿ ತಮ್ಮ ರಾಜ್ಯಕ್ಕೆ ಮರಳುತ್ತಾರೆಯೇ?” ಎಂದು ಅವರು ಪ್ರಶ್ನಿಸಿದ್ದಾರೆ.
ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಸಂವಿಧಾನದ 370ನೇ ವಿಧಿ ರದ್ದುಗೊಳಿಸಿದ ಕೇಂದ್ರ ಸರ್ಕಾರದ ನಿರ್ಧಾರದ ಸಿಂಧುತ್ವವನ್ನು ಸುಪ್ರೀಂಕೋರ್ಟ್ ಇಂದು(ಡಿ.11) ಎತ್ತಿ ಹಿಡಿದಿದೆ. ತೀರ್ಪು ಪ್ರಕಟಿಸುವ ವೇಳೆ ಸೆಪ್ಟೆಂಬರ್ 30, 2024 ರೊಳಗೆ ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆಗೆ ಚುನಾವಣೆ ನಡೆಸುವಂತೆ ಭಾರತೀಯ ಚುನಾವಣಾ ಆಯೋಗಕ್ಕೆ (ಇಸಿಐ) ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.
ಇದನ್ನೂ ಓದಿ : ‘ಇತಿಹಾಸವೊಂದೇ ಅಂತಿಮ ತೀರ್ಪುಗಾರ’; ಸುಪ್ರೀಂ ತೀರ್ಪಿನ ಬಳಿಕ ಕಪಿಲ್ ಪ್ರತಿಕ್ರಿಯೆ


