HomeUncategorizedಏಳು ಬಣ್ಣಗಳ ಬಾವುಟ ಬೀಸಿ ಬಹುತ್ವ ಸಂದೇಶದೊಂದಿಗೆ ಉಡುಪಿಯ ಸಾಮರಸ್ಯ ನಡಿಗೆ ಆರಂಭ

ಏಳು ಬಣ್ಣಗಳ ಬಾವುಟ ಬೀಸಿ ಬಹುತ್ವ ಸಂದೇಶದೊಂದಿಗೆ ಉಡುಪಿಯ ಸಾಮರಸ್ಯ ನಡಿಗೆ ಆರಂಭ

- Advertisement -
- Advertisement -

ಬಹುತ್ವವನ್ನು ಪ್ರತಿಪಾದಿಸುವ ಏಳು ಬಣ್ಣಗಳ ಬಾವುಟವನ್ನು ಹಿಡಿಯುವ ಮೂಲಕ ಉಡುಪಿಯ ಸಾಮರಸ್ಯ ನಡಿಗೆಗೆ ಚಾಲನೆ ನೀಡಲಾಯಿತು.

ಇಲ್ಲಿನ ಅಜ್ಜರಕಾಡು ಹುತಾತ್ಮರ ಚೌಕದಿಂದ ಕ್ರಿಶ್ಚಿಯನ್‌ ಶಾಲೆ ಮೈದಾನದವರೆಗೆ ನಡೆಯುವ ಮೆರವಣಿಗೆಗೆ ವಿವಿಧ ಸಮುದಾಯಗಳ ಧರ್ಮಗುರುಗಳು, ವಿವಿಧ ಕ್ಷೇತ್ರದ ಗಣ್ಯರು ಬಾವುಟ ಬೀಸಿ ಚಾಲನೆ ನೀಡಿದರು.

ಬಹುತ್ವ ಕರ್ನಾಟಕ ಸಂಚಾಲಕರಾದ ವಿನಯ್‌ ಶ್ರೀನಿವಾಸ್‌ ಪ್ರಾಸ್ತಾವಿಕವಾಗಿ ಮಾತನಾಡಿ, “ಉಡುಪಿ ಕನಕದಾಸರ ನಾಡು, ಹಾಜಿ ಅಬ್ದುಲ್ಲರ ನಾಡು. ಈ ನಾಡಿನಲ್ಲಿ ವಿವಿಧ ಪರಂಪರೆಗಳಿವೆ. ಸಹಬಾಳ್ವೆ ಇಲ್ಲಿನ ದಿನನಿತ್ಯದ ಭಾಗವಾಗಿದೆ. ಇಂದು ದ್ವೇಷ ಹೆಚ್ಚುತ್ತಿದೆ. ದ್ವೇಷ ಎಂಬುದು ಬೀದಿಬೀದಿಗಳಲ್ಲಿ ಹರಡುತ್ತಿದೆ. ಗೋಡೆಗಳನ್ನು ಕಟ್ಟಲಾಗುತ್ತಿದೆ. ಮಾನವೀಯತೆ ಅಪಾಯದಲ್ಲಿದೆ” ಎಂದರು.

ದ್ವೇಷವನ್ನು ಬಿತ್ತಲು ಹೊರಟವರ ಎದುರು ನಾವು ಪ್ರತಿ ಮನುಷ್ಯರಲ್ಲಿನ ಪ್ರೀತಿಯನ್ನು ಹಂಚಲು ಹೊರಟಿದ್ದೇವೆ. ಅದಕ್ಕಾಗಿ ಸಹಬಾಳ್ವೆ ಸಮಾವೇಶ ಆಯೋಜಿಸಿದ್ದೇವೆ. ಸಾವಿರಾರು ಸಂಖ್ಯೆಯ ಜನರು ಪ್ರೀತಿ ಹಂಚಲು ಬಂದಿದ್ದಾರೆ. ಎಲ್ಲ ಧರ್ಮದವರು, ಜಾತಿಯವರು ಜೊತೆಗೂಡಿದ್ದಾರೆ. ಉಡುಪಿ ಹಾಗೂ ಬೆಂಗಳೂರಿನಲ್ಲಿ ಕರಪತ್ರ ಹಂಚಲು ಹೋದಾಗ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ. ಈ ಕೆಲಸ ಅಗತ್ಯವಿತ್ತು ಎಂದು ಬಹಳಷ್ಟು ಜನರು ತಿಳಿಸಿದರು” ಎಂದರು.

ಸಹಬಾಳ್ವೆ ಎಂದರೆ ಪ್ರಜಾಪ್ರಭುತ್ವ, ಒಬ್ಬರಿಗೊಬ್ಬರು ಪ್ರೀತಿಯಿಂದ ಇರುವುದು ಸಹಬಾಳ್ವೆ. ಸಹಬಾಳ್ವೆ ಸಾಮರಸ್ಯವು ನಮ್ಮ ಸಂವಿಧಾನ ಪೀಠಿಕೆಯ ಭಾಗವಾಗಿದೆ. ನಾಡಿನಲ್ಲಿ ಆರ್ಥಿಕ, ಸಾಮಾಜಿಕ ಸಮಾನತಯೆ ಇಲ್ಲವಾಗಿದೆ. ಸಮಾನತೆ ಬರಬೇಕಾದರೆ ಸಹಬಾಳ್ವೆ ಬೇಕಿದೆ. ಪ್ರೀತಿಯಿಂದ  ದ್ವೇಷವನ್ನು ಸೋಲಿಸೋಣ. ಸೇತುವೆಯನ್ನು ಕಟ್ಟೋಣ ಎಂದು ಆಶಿಸಿದರು.

ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ ವಾದ) ರಾಜ್ಯ ಸಂಚಾಲಕರಾದ ಮಾವಳ್ಳಿ ಶಂಕರ್‌ ಮಾತನಾಡಿ, “ಸಾಮರಸ್ಯ, ಸಹಬಾಳ್ವೆ ಸಹಜವಾಗಿ ಬರಬೇಕು. ಪ್ರಕೃತಿಯಲ್ಲಿ ಅದು ಸಹಜವಾಗಿದೆ. ಅದು ಮನುಷ್ಯರಲ್ಲಿಯೂ ಸಹಜವಾಗಬೇಕಿದೆ” ಎಂದರು.

ದಮನಿತ ಸಮುದಾಯಗಳು ಈ ದೇಶಕ್ಕೆ ಅನ್ಯಾಯ ಮಾಡಿಲ್ಲ. ಈ ನಾಡನ್ನು ಕಟ್ಟಿದ ಜನರಿವರು. ಈ ನಾಡಿಗಾಗಿ ಶ್ರಮಿಸಿದವರು. ದೇಶದ ಯಾವುದೇ ಆಂತರಿಕ ವಿಚಾರವನ್ನುಇನ್ನೊಂದು ದೇಶಕ್ಕೆ ತಿಳಿಸಿಲ್ಲ. ಇನ್ನೊಬ್ಬರನ್ನು ಕೊಲ್ಲುವ ಮನಸ್ಸು ನಮ್ಮದಲ್ಲ. ಆ ವೈದಿಕ ಪರಂಪರೆ ಇಡೀ ದೇಶವನ್ನು ಆಪೋಷನ ತೆಗೆದುಕೊಳ್ಳುತ್ತಿದೆ. ಬುದ್ಧ, ಬಸವ, ನಾರಾಯಣ ಗುರುರವರ ಭಾರತ ಮಾಯವಾಗಿ, ಪೇಶ್ವೆ ಹಾಗೂ ಬುಲ್ಡೋಜರ್‌ ಭಾರತ ಬರುತ್ತಿದೆ” ಎಂದು ಆತಂಕ ವ್ಯಕ್ತಪಡಿಸಿದರು.

ಉಡುಪಿಗೆ ಸಾವಿರಾರು ಜನರು ನದಿಗಳಾಗಿ ಬಂದಿದ್ದಾರೆ. ಕುವೆಂಪು ಅವರು ಕಂಡಂತಹ ಸರ್ವಜನ ಶಾಂತಿಯ ತೋಟ ಕದಡಲು ಬಿಡುವುದಿಲ್ಲ ಎಂದು ಅವರು ಎಚ್ಚರಿಸಿದರು.

ಹೋರಾಟಗಾರ್ತಿ ಕೆ. ನೀಲಾ ಮಾತನಾಡಿ,  ”ನಾವು ಮೈಮರೆತ್ತಿದ್ದೆವು. ಆದರೆ ಇವರು ಎಚ್ಚರಿಸಿದ್ದಾರೆ.  ನಮಗೆ ಎಚ್ಚರವನ್ನು ನೀಡಿದ್ದಕ್ಕೆ ನಿಮಗೆ ಕೃತಜ್ಞತೆಗಳು. ಮರೆತ್ತಿದ್ದನ್ನು ನೆನಪು ಮಾಡಿದ್ದೀರಿ. ಕೂಡಿ ಬಾಳುವುದಕ್ಕೆ ಯಾವ ದೊಣ್ಣೆನಾಯಕನ ಅನುಮತಿಯೂ ಬೇಕಿಲ್ಲ.  ನಾವು ಜಗತ್ತಿನಾದ್ಯಂತ ಪ್ರೀತಿಯ ಹಸಿವನ್ನು ತಣಿಸುವ ಕೆಲಸ ಮಾಡುತ್ತೇವೆ. ಎಲ್ಲರೂ ಕೂಡಿ ಬದುಕಿದ ಪರಂಪರೆಯನ್ನು ನಾವು ಮುಂದುವರಿಸುತ್ತೇವೆ. ಈ ಪರಂಪರೆಯ ಕೊಂಡಿಯನ್ನು ಮುಂದಕ್ಕೆ ತೆಗೆದುಕೊಂಡು ಹೋಗೋಣ. ಬಹುಸಂಖ್ಯಾತದ ಕೋಮುವಾದಕ್ಕೆ  ಅಲ್ಪಸಂಖ್ಯಾತ ಕೋಮುವಾದ ಉತ್ತರವಲ್ಲ. ಬೆಂಕಿಗೆ ತಣ್ಣೀರೇ ಉತ್ತರ. ಪ್ರೀತಿಗೆ ಜಯವಾಗಲಿ, ದುಡಿಯುವ ಶಕ್ತಿಗೆ ಜಯವಾಗಲಿ” ಎಂದು ಘೋಷಣೆ ಕೂಗಿದರು.

ರೈತ ನಾಯಕ ಚಾಮರಸ ಮಾಲೀಪಾಟೀಲ್‌ ಮಾತನಾಡಿ, `ಸಮಾಜವನ್ನು ಇಬ್ಬಾಗ ಮಾಡಿ ಅಧಿಕಾರ ಹಿಡಿಯಲು ಹೊರಟಿರುವವರನ್ನು ದೇಶದಲ್ಲಿ ನೋಡುತ್ತಿದ್ದೇವೆ. ಇದು ರಾಜ್ಯದಲ್ಲಿಯೂ ನಡೆಯುತ್ತಿದೆ. ಹಿಜಾಬ್‌, ಹಲಾಲ್‌ ಕಟ್‌, ಜಟ್ಕಾ ಕಟ್‌, ವ್ಯಾಪಾರಕ್ಕೆ ನಿರ್ಬಂಧ, ಕಲ್ಲಂಗಡಿ ಹಣ್ಣಿನ ವ್ಯಾಪಾರಿ ಪ್ರಕರಣ ಮೊದಲಾಗಿ ಈಗ ಆಜಾನ್‌ಗೆ ಬಂದು ನಿಂತಿದೆ. ಉದ್ಯೋಗವಿಲ್ಲದೆ ಯುವಕರು ಬೀದಿ ಬೀದಿ ಅಲೆಯುತ್ತಿದ್ದಾರೆ. ಸಾಲಗಾರರಾಗಿ ಮೂರುವರೆ ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದರ ಬಗ್ಗೆ ಮಾತನಾಡಿ. ಅತಿವೃಷ್ಟಿಯಿಂದ ನೊಂದ ರೈತರಿಗೆ ಪರಿಹಾರ ನೀಡಿ. ಅದನ್ನು ಬಿಟ್ಟು ಸಮಾಜವನ್ನು ಒಡೆಯುವ ಕೆಲಸವನ್ನು ಮಾಡುತ್ತಿದ್ದೀರಿ. ರೈತರು, ದಲಿತರು, ಮುಸ್ಲಿಮರು ಒಗ್ಗೂಡಿ ಅಹಿಸಾತ್ಮಕವಾಗಿ ಹೋರಾಟ ಮಾಡಬೇಕಾಗಿದೆ. ಈ ಫ್ಯಾಸಿಸ್ಟ್‌ ವಿರುದ್ಧ ಕೆಲಸ ಮಾಡೋಣ. ಇಡೀ ದೇಶಕ್ಕೆ ಸಂದೇಶ ಕೊಡೋಣ” ಎಂದರು.

`ಅನುಪಮ’ ಮಾಸಪತ್ರಿಕೆಯ ಉಪಸಂಪಾದಕಿ ಸಬೀಹ ಫಾತಿಮ ಮಾತನಾಡಿ, “ಮಾನವೀಯ ಸಂದೇಶವನ್ನು ಕಳುಹಿಸಬೇಕಾಗಿದೆ. ದ್ವೇಷಭಕ್ತರ ಎಲ್ಲ ಸುಳ್ಳುಗಳನ್ನು ಸೋಲಿಸಲು ಸಾಧ್ಯವಿದೆ. ಎಲ್ಲ ಅನ್ಯಾಯ, ಅಕ್ರಮಗಳ ವಿರುದ್ಧ ಸೆಟೆದು ನಿಲ್ಲಬೇಕು. ಈ ನೆಲದಲ್ಲಿರುವ ಎಲ್ಲ ಮನುಷ್ಯರನ್ನು ಮನುಷ್ಯರೆಂದು ಸಾರಬೇಕಾಗಿದೆ. ನಮ್ಮ ಊರಿನ ಗಲ್ಲಿಗಲ್ಲಿಗೂ ಈ ಸಂದೇಶವನ್ನು ಕಳುಹಿಸೋಣ” ಎಂದು ತಿಳಿಸಿದರು.

ದಲಿತ ಮುಖಂಡರಾದ ಮೋಹನ್‌ ರಾಜ್‌ ಮಾತನಾಡಿ, “ಇದು ನಮ್ಮ ದೇಶ. ನಮ್ಮನ್ನು ದೇಶ ಬಿಟ್ಟು ಹೋಗಿ ಎನ್ನುತ್ತಿದ್ದಾರೆ. ಮಧ್ಯ ಏಷಿಯಾದಿಂದ ಬಂದವರು ವಾಪಸ್‌ ಹೋಗಬಹುದು. ನೀವು ನಕಲಿ ದೇಶಭಕ್ತರು. ನಾವು ಶಾಂತಿಯನ್ನು ಪಾಲಿಸೋರು. ನಾವೇನಾದರೂ ತಿರುಗಿ ಬಿದ್ದರೆ ನೀವ್ಯಾರು ಎದುರಿಸಲು ಸಾಧ್ಯವಿಲ್ಲ” ಎಂದು ಎಚ್ಚರಿಸಿದರು.

“ಸಂವಿಧಾನ ರಚನಾ ಸಭೆಗೆ ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ಪ್ರವೇಶಿಸಲು ಕಾರಣರಾದವರು ಮುಸ್ಲಿಮರು. ಅಂಬೇಡ್ಕರ್‌ ಅವರನ್ನು ಗೆಲ್ಲಿಸಿ ಕಳುಹಿಸಿದರು. ಮುಸ್ಲಿಮರೆಂದರೆ ಮಾಜಿ ದಲಿತರು. ನಾವು ನಿಮ್ಮ ರಕ್ತ ಹಂಚಿಕೊಂಡು ಹುಟ್ಟಿದ್ದೇವೆ. ನಿಮ್ಮೊಂದಿಗೆ ಇರುತ್ತೇವೆ” ಎಂದು ಅಭಯ ನೀಡಿದರು.

ರೈತ ಮುಖಂಡ ಎಚ್‌.ಆರ್‌.ಬಸವರಾಜಪ್ಪ ಮಾತನಾಡಿ, “ರಾಮಸೇನೆ, ಬಜರಂಗದವಳದವರೇ ನಿಮ್ಮ ಮಕ್ಕಳನ್ನು ಜಟ್ಕಾ ಕಟ್‌ಗೆ ಕಳುಹಿಸಿ. ಬಡ ಮಕ್ಕಳನ್ನು  ವಿದ್ಯಾಭ್ಯಾಸದಿಂದ ವಂಚಿಸುತ್ತಿದ್ದೀರಿ. ನಮ್ಮ ಮಕ್ಕಳಿಗೆ ಶಿಕ್ಷಣವನ್ನು ನೀಡಬೇಕಾಗಿದೆ” ಎಂದು ಹೇಳಿದರು.

ಯುವ ಹೋರಾಟಗಾರ್ತಿ ನಜ್ಮಾ ಮಾತನಾಡಿ- ಯಾವ ಧರ್ಮವೂ ಯಾರನ್ನೂ ದ್ವೇಷಿಸಲು ಹೇಳಿಲ್ಲ. ಧರ್ಮದ ರಕ್ಷಣೆ ಹೆಸರಲ್ಲಿ, ಧರ್ಮದ ಗುತ್ತಿಗೆ ಪಡೆದವರು ಮನುಷ್ಯ ಮನುಷ್ಯರ ನಡುವೆ ಕಂದಕವನ್ನು ಉಂಟು ಮಾಡುತ್ತಿದ್ದಾರೆ. ಧರ್ಮವನ್ನು ನಿಜವಾಗಿ ಅನುಸರಿಸುವವರು ಪ್ರೀತಿಯನ್ನು ಹಂಚುತ್ತಾರೆ” ಎಂದರು.

ನಂತರ ಬೃಹತ್‌ ಮೆರವಣಿಗೆ ಆರಂಭವಾಯಿತು. ಇದಕ್ಕೂ ಮೊದಲು ಬಾಗಲಕೋಟೆಯಿಂದ ಪಾದಯಾತ್ರೆ ಆರಂಭಿಸಿ ಉಡುಪಿಗೆ ಬಂದ ಎಸ್‌.ಕೆ.ನಾಗರಾಜ್‌ ತಂಡವನ್ನು ಅಭಿನಂದಿಸಲಾಯಿತು.

(ಕಾರ್ಯಕ್ರಮದ ಅಪ್‌ಡೇಟ್ ನಿರೀಕ್ಷಿಸಿ)

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. Jai Bharath….. Jai Bharath..
    … Jai Bharath…… Helona…. Jai Hind nalli Hindu maathra ide…. Jai Bharath nalli Hindu Muslim Christian Dalith Sikh….
    et… Yellavu ide

LEAVE A REPLY

Please enter your comment!
Please enter your name here

- Advertisment -

Must Read

ದೆಹಲಿಯ ಲೆಫ್ಟಿನೆಂಟ್ ಗವರ್ನರ್ ತಮ್ಮನ್ನೇ ನ್ಯಾಯಾಲಯ ಎಂದು ಭಾವಿಸಿರುವಂತಿದೆ: ಸುಪ್ರೀಂ ಕೋರ್ಟ್ ಕಿಡಿ

0
ಸುಪ್ರೀಂ ಕೋರ್ಟ್‌ ಆದೇಶ ಉಲ್ಲಂಘಿಸಿ ಉತ್ತರ ಅರಾವಳಿ ಚಿರತೆ ವನ್ಯಜೀವಿ ಕಾರಿಡಾರ್‌ ಆಗಿರುವ ದೆಹಲಿ ರಿಜ್‌ ಅರಣ್ಯ ಪ್ರದೇಶದಲ್ಲಿ ಸುಮಾರು 1,100 ಮರಗಳನ್ನು ಕಡಿಯಲು ನಿರ್ದೇಶನ ನೀಡುವಾಗ ದೆಹಲಿ ಅಭಿವೃದ್ಧಿ ಪ್ರಾಧಿಕಾರದ (ಡಿಡಿಎ)...