ಯುನೈಟೆಡ್ ಕಿಂಗ್‌ಡಮ್ (ಯುಕೆ), ಕೆನಡಾ ಮತ್ತು ಆಸ್ಟ್ರೇಲಿಯಾ ದೇಶಗಳು ಭಾನುವಾರ (ಸೆ.21) ಅಧಿಕೃತವಾಗಿ ಪ್ಯಾಲೆಸ್ತೀನ್ ಅನ್ನು ಒಂದು ರಾಷ್ಟ್ರವೆಂದು ಗುರುತಿಸಿವೆ.
ಇದು ಈ ದೇಶಗಳ ವಿದೇಶಾಂಗ ನೀತಿಯಲ್ಲಿ ಗಮನಾರ್ಹ ಬದಲಾವಣೆ ತರಲಿದ್ದು, ಯುನೈಟೆಡ್ ಸ್ಟೇಟ್ಸ್‌ನೊಂದಿಗಿನ (ಯುಎಸ್) ಹೊಂದಾಣಿಕೆಯಿಂದ ಒಂದು ಹೆಜ್ಜೆ ದೂರವಾಗಿಸಿದೆ. ಈ ವಾರ ಇನ್ನೂ ಹಲವು ಯುರೋಪಿಯನ್ ರಾಷ್ಟ್ರಗಳು ಮತ್ತು ಯುಎಸ್ ಮಿತ್ರರಾಷ್ಟ್ರಗಳು ಈ ಮೂರು ರಾಷ್ಟ್ರಗಳ ನಡೆಯನ್ನು ಅನುಸರಿಸಲು ಸಿದ್ಧವಾಗಿವೆ ಎಂದು ವರದಿಗಳು ಹೇಳಿವೆ.
“ಪ್ಯಾಲೆಸ್ತೀನಿಯರು ಮತ್ತು ಇಸ್ರೇಲಿಗರಲ್ಲಿ ಶಾಂತಿಯ ಭರವಸೆಯನ್ನು ಪುನರುಜ್ಜೀವನಗೊಳಿಸಲು ಮತ್ತು ದ್ವಿರಾಷ್ಟ್ರ ಪರಿಹಾರಕ್ಕಾಗಿ ಯುನೈಟೆಡ್ ಕಿಂಗ್‌ಡಮ್ ಪ್ಯಾಲೆಸ್ತೀನ್ ಅನ್ನು ಔಪಚಾರಿಕವಾಗಿ ಪ್ರತ್ಯೇಕ ರಾಷ್ಟ್ರ ಎಂದು ಗುರುತಿಸುತ್ತದೆ” ಎಂದು ಬ್ರಿಟಿಷ್ ಪ್ರಧಾನಿ ಕೀರ್ ಸ್ಟಾರ್ಮರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಗ್ರೂಪ್ ಆಫ್ 7 (ಜಿ7) ಎಂಬ ಏಳು ಪ್ರಮುಖ ರಾಷ್ಟ್ರಗಳ ಗುಂಪಿನಲ್ಲಿ ಕೆನಡಾ ಮೊದಲ ಬಾರಿಗೆ ಪ್ಯಾಲೆಸ್ತೀನ್‌ನನ್ನು ಸ್ವತಂತ್ರ ರಾಷ್ಟ್ರವಾಗಿ ಅಧಿಕೃತವಾಗಿ ಗುರುತಿಸಿದೆ. ಈ ಐತಿಹಾಸಿಕ ನಿರ್ಧಾರದ ಮೂಲಕ, ಕೆನಡಾದ ಪ್ರಧಾನ ಮಂತ್ರಿ ಮಾರ್ಕ್ ಕಾರ್ನೆ ಅವರು, ಪ್ಯಾಲೆಸ್ತೀನ್ ಮತ್ತು ಇಸ್ರೇಲ್ ಎರಡೂ ರಾಷ್ಟ್ರಗಳಿಗೆ ಶಾಂತಿಯುತವಾದ ಮತ್ತು ಸೌಹಾರ್ದಯುತ ಭವಿಷ್ಯವನ್ನು ಒದಗಿಸುವ ಭರವಸೆಯನ್ನು ನೀಡಿದ್ದಾರೆ. ಈ ಕ್ರಮವು ಅಂತಾರಾಷ್ಟ್ರೀಯ ರಾಜಕೀಯದಲ್ಲಿ ಮಹತ್ವದ ಹೆಜ್ಜೆಯಾಗಿದೆ, ಏಕೆಂದರೆ ಜಿ7 ರಾಷ್ಟ್ರಗಳು ವಿಶ್ವದ ಪ್ರಮುಖ ಆರ್ಥಿಕ ಮತ್ತು ರಾಜಕೀಯ ಶಕ್ತಿಗಳಾಗಿವೆ.
ಸ್ವತಂತ್ರ ಮತ್ತು ಸಾರ್ವಭೌಮ ಪ್ಯಾಲೆಸ್ತೀನ್ ರಾಷ್ಟ್ರವನ್ನು ಔಪಚಾರಿಕವಾಗಿ ಗುರುತಿಸಿದ ಸ್ವಲ್ಪ ಸಮಯದ ನಂತರ ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಕೂಡ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.
ಇಸ್ರೇಲ್‌ನ ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ಅವರು ಪ್ಯಾಲೆಸ್ತೀನ್ ರಾಷ್ಟ್ರದ ಸ್ಥಾಪನೆಯನ್ನು ವಿರೋಧಿಸುವ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.
ಅವರ ಪ್ರಕಾರ, ಪ್ಯಾಲೆಸ್ತೀನ್ ರಾಷ್ಟ್ರದ ಗುರುತಿಸುವಿಕೆ ಇಸ್ರೇಲ್‌ನ ಅಸ್ತಿತ್ವಕ್ಕೆ ಅಪಾಯವನ್ನುಂಟುಮಾಡುತ್ತದೆ ಮತ್ತು ಭಯೋತ್ಪಾದನೆಗೆ ಬೆಂಬಲ ನೀಡುವಂತಿದೆ. ಈ ಕಾರಣಕ್ಕಾಗಿ, ಇಸ್ರೇಲ್ ವಿರುದ್ಧದ ತಪ್ಪು ಆರೋಪಗಳು ಮತ್ತು ಪ್ಯಾಲೆಸ್ತೀನ್ ರಾಷ್ಟ್ರದ ಸ್ಥಾಪನೆಗೆ ಸಂಬಂಧಿಸಿದ ಕರೆಗಳ ವಿರುದ್ಧ ಅವರು ಐಕ್ಯರಾಷ್ಟ್ರ ಸಂಸ್ಥೆ (ಯುಎನ್) ಮತ್ತು ಇತರ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಹೋರಾಡುವುದಾಗಿ ಘೋಷಿಸಿದ್ದಾರೆ. ಮುಂಬರುವ ದಿನಗಳಲ್ಲಿ ಈ ವಿಷಯದ ಬಗ್ಗೆ ಇಸ್ರೇಲ್ ತನ್ನ ನಿಲುವನ್ನು ಅಂತಾರಾಷ್ಟ್ರೀಯ ಸಮುದಾಯಕ್ಕೆ ಮನವರಿಕೆ ಮಾಡಿಕೊಡಲಿದೆ ಎಂದು ಹೇಳಿದ್ದಾರೆ.
ವಿದೇಶಿ ನಾಯಕರು ಹಮಾಸ್‌ಗೆ ‘ಬಹುಮಾನ’ ನೀಡುತ್ತಿದ್ದಾರೆ ಎಂದು ನೆತನ್ಯಾಹು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜೋರ್ಡಾನ್ ನದಿಯ ಪಶ್ಚಿಮಕ್ಕೆ ಪ್ಯಾಲೆಸ್ತೀನ್ ರಾಷ್ಟ್ರದ ಸ್ಥಾಪನೆ ಸಾಧ್ಯವಿಲ್ಲ ಎಂದಿದ್ದಾರೆ.
ಇಸ್ರೇಲಿ ವಿದೇಶಾಂಗ ಸಚಿವಾಲಯವು ಎಕ್ಸ್ ಖಾತೆಯಲ್ಲಿ ಈ ಕುರಿತು ಹೇಳಿಕೆ ನೀಡಿದ್ದು, ಯುನೈಟೆಡ್ ಕಿಂಗ್‌ಡಮ್ ಮತ್ತು ಇತರ ದೇಶಗಳ ಘೋಷಣೆಗಳನ್ನು ‘ಖಂಡಿತವಾಗಿಯೂ ತಿರಸ್ಕರಿಸುತ್ತೇವೆ’ ಎಂದಿದೆ.
“ಈ ಘೋಷಣೆಯು ಶಾಂತಿಯನ್ನು ಉತ್ತೇಜಿಸುವುದಿಲ್ಲ, ಬದಲಾಗಿ ಇದಕ್ಕೆ ವಿರುದ್ಧವಾಗಿ, ಆ ಪ್ರದೇಶವನ್ನು ಮತ್ತಷ್ಟು ಅಸ್ಥಿರಗೊಳಿಸುತ್ತದೆ ಮತ್ತು ಭವಿಷ್ಯದಲ್ಲಿ ಶಾಂತಿಯುತ ಪರಿಹಾರವನ್ನು ಸಾಧಿಸುವ ಸಾಧ್ಯತೆಗಳನ್ನು ಹಾಳು ಮಾಡುತ್ತದೆ” ಎಂದು ಹೇಳಿಕೆಯಲ್ಲಿ ತಿಳಿಸಿದೆ.
ಮೂರು ರಾಷ್ಟ್ರಗಳ ಘೋಷಣೆಯನ್ನು ಹಮಾಸ್ ಸ್ವಾಗತಿಸಿದೆ. “ಇದು ವಿಮೋಚನೆ ಮತ್ತು ಮರಳುವಿಕೆಯ ಹಾದಿಯಲ್ಲಿ ನಮ್ಮ ಜನರ ಹೋರಾಟ, ದೃಢತೆ ಮತ್ತು ತ್ಯಾಗಗಳಿಗೆ ಸಿಕ್ಕ ಫಲಿತಾಂಶ” ಎಂದಿದೆ.
ಸಾಂಕೇತಿಕವಾಗಿರುವ ಮೂರು ರಾಷ್ಟ್ರಗಳ ಘೋಷನೆಯು ಪ್ಯಾಲೆಸ್ತೀನಿಯನ್ನರಿಗೆ ಹೆಚ್ಚಿನ ರಾಜತಾಂತ್ರಿಕ ಸ್ಥಾನಮಾನ ಮತ್ತು ಒಪ್ಪಂದ ಮಾಡಿಕೊಳ್ಳುವ ಸಾಮರ್ಥ್ಯವನ್ನು ನೀಡುತ್ತದೆ.
ಆದರೆ, ಇದು ಗಾಝಾ ಪಟ್ಟಿಯ ವಾಸ್ತವಗಳನ್ನು ಮೂಲಭೂತವಾಗಿ ಬದಲಾಯಿಸುವುದಿಲ್ಲ, ಅಲ್ಲಿ ಸುಮಾರು ಎರಡು ವರ್ಷಗಳ ಯುದ್ಧದಿಂದ ಮಾನವೀಯ ಬಿಕ್ಕಟ್ಟು ಹದಗೆಡುತ್ತಲೇ ಇದೆ. ಅತ್ತ ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಪ್ಯಾಲೆಸ್ತೀನಿಯರು ಯಹೂದಿ ವಸಾಹತುಗಾರರು ಮತ್ತು ಮಿಲಿಟರಿಯಿಂದ ಹೆಚ್ಚುತ್ತಿರುವ ಒತ್ತಡಕ್ಕೆ ಒಳಗಾಗಿದ್ದಾರೆ.
ಪ್ಯಾಲೆಸ್ತೀನ್ ಆರೋಗ್ಯ ಸಚಿವಾಲಯದ ಪ್ರಕಾರ, ಅಕ್ಟೋಬರ್ 2023 ರಿಂದ ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ಆಕ್ರಮಣದಿಂದ ಇದುವರೆಗೆ 65,000ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಇದರಲ್ಲಿ ಸಾವಿರಾರು ಮಕ್ಕಳು ಸೇರಿದ್ದಾರೆ. ಗಾಝಾದ ಹೆಚ್ಚಿನ ಪ್ರದೇಶಗಳು ನಾಶವಾಗಿದೆ. ಜನರು ತಮ್ಮದೆಲ್ಲವನ್ನೂ ತೊರೆದು ಜೀವ, ಜೀವನಕ್ಕಾಗಿ ದಿನಕ್ಕೊಂದು ಕಡೆಗೆ ಪಲಾಯನ ಮಾಡುತ್ತಿದ್ದಾರೆ.
ಗಾಝಾ ನಗರದ ಅತ್ಯಂತ ಜನನಿಬಿಡ ಪ್ರದೇಶದಲ್ಲಿ ಇಸ್ರೇಲ್ ತನ್ನ ದಾಳಿಯನ್ನು ಮುಂದುವರೆಸಿದ್ದು, ಲಕ್ಷಾಂತರ ಜನರು ಬರಗಾಲದಿಂದ ಬಳಲುತ್ತಿದ್ದಾರೆ ಎಂದು ಆರೋಗ್ಯ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ಭಾನುವಾರ ರಾತ್ರಿಯಿಡೀ ಇಸ್ರೇಲ್ ನಡೆಸಿದ ದಾಳಿಯಲ್ಲಿ ಕನಿಷ್ಠ 34 ಜನರು ಸಾವನ್ನಪ್ಪಿದ್ದಾರೆ ಎಂದು ಗಾಝಾ ನಗರದ ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ.
ಗಾಝಾದಲ್ಲಿ ಆಕ್ರಮಣ ತೀವ್ರಗೊಳಿಸಿದ ಇಸ್ರೇಲ್ : ಹಮಾಸ್‌ನಿಂದ 48 ಒತ್ತೆಯಾಳುಗಳ ‘ವಿದಾಯ ಚಿತ್ರ’ ಬಿಡುಗಡೆ


