Homeಚಳವಳಿ‘ನಿಮ್ಮ ಬೆದರಿಕೆಗಳು ನಮ್ಮ ಬಾಯಿ ಮುಚ್ಚಿಸಲಾರವು’

‘ನಿಮ್ಮ ಬೆದರಿಕೆಗಳು ನಮ್ಮ ಬಾಯಿ ಮುಚ್ಚಿಸಲಾರವು’

- Advertisement -
- Advertisement -

ನನಗೆ ನಿರಂತರವಾಗಿ ಬರುತ್ತಿದ್ದ ಕೊಲೆ ಬೆದರಿಕೆಗಳು ಹಾಗೂ ಕಳೆದ ಕೆಲವು ವರ್ಷಗಳಲ್ಲಿ ಆದ ಚಿಂತಕರ ಹತ್ಯೆಗಳಿಂದಾಗಿ ನನ್ನ ಮೇಲೆಯೂ ಯಾರಾದರೂ ಗುಂಡು ಹಾರಿಸಲಿದ್ದಾರೆ ಎಂದು ನನಗೆ ಅನಿಸತೊಡಗಿತ್ತು. ಧಾಬೋಲ್ಕರ್, ಕಲ್ಬುರ್ಗಿ, ಪನ್ಸಾರೆ, ಗೌರಿ ಲಂಕೇಶ್- ಹೀಗೆ ಹತ್ಯೆಗೀಡಾದ ಚಿಂತಕರ ಪಟ್ಟಿ ಬೆಳೆಯುತ್ತಲೇ ಇದೆ. ಆದರೆ ನಾನು ಅದಕ್ಕೆ ಸಿದ್ಧನಾಗಿದ್ದೆ ಎಂದು ಹೇಳಲು ನನಗೆ ಸಾಧ್ಯವೇ? ಇಂತಹ ಅಂತಿಮ ಸಾಧ್ಯತೆಗೆ ತಾನು ಸಿದ್ಧ ಎಂದು ಹೇಳಲು ಯಾರಿಗಾದರೂ ಸಾಧ್ಯವೇ? ಇಲ್ಲ. ಆಗಸ್ಟ್ 15ರ ಸ್ವಾತಂತ್ರ ದಿನಾಚರಣೆಗೆ ಎರಡು ದಿನ ಮುಂಚೆ ಆದ ಈ ಘಟನೆಯಿಂದ ಇನ್ನೂ ಕೆಲವು ಪ್ರಶ್ನೆಗಳು ಉದ್ಭವಿಸುತ್ತವೆ. ಅನ್ಯಾಯದ ವಿರುದ್ಧ ಮಾತನಾಡುವ ‘ಅಪರಾಧ’ ಕ್ಕೆ ದೇಶದ ನಾಗರಿಕರು ಜೀವದ ಬೆಲೆ ತೆರಬೇಕಾದರೆ ಈ ‘ಸ್ವಾತಂತ್ರ’ ಅಂದರೆ ಏನು ಎನ್ನುವ ಪ್ರಶ್ನೆ ಕಾಡಲಾರಂಭಿಸಿದೆ. ವಿಪರ್ಯಾಸವೆಂದರೆ, ‘ಭಯದಿಂದ ಮುಕ್ತಿ’ (ಫ್ರೀಡಮ್ ಫ್ರಮ್ ಫಿಯರ್) ಎನ್ನುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಹೋಗುತ್ತಿದ್ದಾಗ ಕಾನ್ಸ್ಟಿಟೂಷನ್ ಕ್ಲಬ್ ಎದುರುಗಡೆಯೇ ಅಪರಿಚಿತ ಬಂದೂಕುಧಾರಿಯೊಬ್ಬ ನನ್ನ ಮೇಲೆ ಹಲ್ಲೆ ಮಾಡಿ ನನ್ನನ್ನು ಕೊಲ್ಲಲೆತ್ನಿಸಿದ.
ನೆನಪಿಡಿ, ನನ್ನ ಮೇಲೆ ಹಲ್ಲೆಯಾಗಿದ್ದು ದೇಶದ ರಾಜಧಾನಿಯ ಅತ್ಯಂತ ಸುರಕ್ಷಿತ ‘ಹೈ ಸೆಕ್ಯುರಿಟಿ’ ವಲಯದಲ್ಲಿ, ಅದೂ ಹಾಡುಹಗಲಿನಲ್ಲಿ. ಇಂತಹ ಕೃತ್ಯವನ್ನು ಎಸಗುವ ಧೈರ್ಯ ಆ ವ್ಯಕ್ತಿಗೆ ಇತ್ತೆಂದರೆ ಅವನಿಗೆ ತಾನೇನು ಮಾಡಿದರೂ ತನ್ನನ್ನು ಯಾರೂ ಮುಟ್ಟಲಾರರು ಎನ್ನುವ ಭಾವನೆ ಇರದೇ ಇದ್ದರೆ ಅವನು ಈ ಕೃತ್ಯ ಎಸಗುತ್ತಿರಲಿಲ್ಲ. ಈಗಿನ ಆಡಳಿತ ಇಂಥವರಿಗೆ ಅಂಥ ಸುರಕ್ಷತೆಯ ಭಾವನೆಯನ್ನು ನೀಡುತ್ತಿದೆ. ಆ ವ್ಯಕ್ತಿ ಯಾರು, ಅವನ ಹಿಂದೆ ಇನ್ಯಾರೆಲ್ಲ ಇದಾರೆ ಎನ್ನುವುದು ನನಗೆ ಗೊತ್ತಿಲ್ಲ. ಈ ಬಗ್ಗೆ ತನಿಖೆ ಮಾಡುವುದು ಪೊಲೀಸರ ಕರ್ತವ್ಯ. ಆದರೆ, ನಿನ್ನೆ ನನಗೇನಾದರೂ ಆಗಿದ್ದರೆ, ಅಥವಾ ನಾಳೆ ಮತ್ತೇನಾದರೂ ಆದಲ್ಲಿ ಆ ‘ಅಪರಿಚಿತ ಬಂದೂಕುಧಾರಿ’ಯನ್ನಷ್ಟೇ ದೂಷಿಸಬೇಡಿ. ನಿಜವಾದ ಅಪರಾಧಿಗಳು ಅಧಿಕಾರದ ಸ್ಥಾನದಲ್ಲಿ ಕುಳಿತು ಇಂತಹ ಕೊಲೆಗಡುಕರನ್ನು, ಗುಂಪುಗೂಡಿ ಹತ್ಯೆ ಮಾಡುತ್ತಿರುವವರನ್ನು ರಕ್ಷಿಸುತ್ತ್ತಿರುವವರು, ದೇಶದಾದ್ಯಂತ ದ್ವೇಷದ, ಹಿಂಸೆಯ ಮತ್ತು ಭಯದ ವಾತಾವರಣ ಉಂಟುಮಾಡುತ್ತಿರುವವರು. ನಿಜವಾದ ಅಪರಾಧಿಗಳು, ಆಡಳಿತ ಪಕ್ಷದ ವಕ್ತಾರರು ಮತ್ತು ಪ್ರೈಮ್ ಟೈಮ್‍ನ ನಿರೂಪಕರು ಹಾಗೂ ವಿನಾಕಾರಣ ನನ್ನ ವಿರುದ್ಧ ವಿಷ ಕಾರುತ್ತಾ, ಸುಳ್ಳುಗಳ ಕಂತೆ ಹೆಣೆದು ನನ್ನನ್ನು ಒಬ್ಬ ‘ರಾಷ್ಟ್ರ ದ್ರೋಹಿ’ ಎಂಬ ಹಣೆಪಟ್ಟಿ ಕಟ್ಟಿ ನನ್ನನ್ನು ಮುಗಿಸಲು ಪ್ರಚೋದಿಸಿದ ಟಿವಿ ಚಾನೆಲ್‍ಗಳು ನಿಜವಾದ ಅಪರಾಧಿಗಳು. ಇವರ ಇಂಥಾ ಹೇಯ ಕೃತ್ಯಗಳಿಂದಾಗಿ ನನ್ನ ಬದುಕು ಇಂಥ ದಾರುಣ ಸ್ಥಿತಿಗೆ ಬಂದುನಿಂತಿದೆ.
ಹಲ್ಲೆ ನಡೆದು ಒಂದು ದಿನವಾದ ನಂತರ, ಸೆಕ್ಷನ್ 307 ಮತ್ತು ಆಮ್ರ್ಸ್ ಅಕ್ಟ್ ಅಡಿಯಲ್ಲಿ ಪೊಲೀಸರು ಕೇಸು ದಾಖಲಿಸಿಕೊಂಡ ನಂತರವೂ ಮಧ್ಯಪ್ರದೇಶದ ಬಿಜೆಪಿ ಲೋಕಸಭೆಯ ಸದಸ್ಯೆ ಮೀನಾಕ್ಷಿ ಲೇಖಿ ಮತ್ತು ಜಾಲತಾಣದಲ್ಲಿರುವ ಇತರ ಕೇಸರಿ ಪಡೆಯವರು ನನ್ನ ಮೇಲೆ ಹಲ್ಲೆ ನಡೆದೇಯಿಲ್ಲವೆಂದು ಯಾಕೆ ವಾದಿಸುತ್ತಿದ್ದಾರೆ? ಇನ್ನೂ ಮುಂದೆ ಹೋಗಿ ನಾನೇ ಈ ಹಲ್ಲೆಯೆನ್ನು ಸಂಯೋಜಿಸಿದ್ದು ಎಂದು ಯಾಕೆ ಸೂಚಿಸುತ್ತಿದ್ದಾರೆ? ನನ್ನ ಮೇಲಿನ ಹಲ್ಲೆಗೆ ಕಾರಣರೆಂದು ನಾನು ಯಾರ ಮೇಲೆಯೂ ಬೆರಳು ಮಾಡಿ ತೋರಿಸಿಲ್ಲವಾದರೂ ಇವರ್ಯಾಕೆ ಈ ಘಟನೆಯ ನಿರೂಪಣೆಯನ್ನು ತಿರುಚಲು ಕಾತರರಾಗಿದ್ದಾರೆ, ಹತಾಶರಾಗಿದ್ದಾರೆ? ಇವರ ಈ ಹತಾಶೆಯನ್ನು ಏನೆಂದು ಅರ್ಥೈಸಿಕೊಳ್ಳಬೇಕು? ಕೊಲೆ ಯತ್ನವನ್ನು ಇವರೇ ಮಾಡಿದ್ದು ಎಂದೇ? ಈ ಘಟನೆಯನ್ನು ಗೌರಿ ಲಂಕೇಶ್ ಅವರ ಹತ್ಯೆಯ ಉದಾಹರಣೆಯೊಂದಿಗೆ ನೋಡಬೇಕು, ಆ ಪ್ರಕರಣದಲ್ಲಿ ಬಂಧನಕ್ಕೀಡಾಗುತ್ತಿರುವ ಆರೋಪಿಗಳನ್ನು ನೋಡಿದರೆ ಹಿಂದುತ್ವ ಹೆಸರಿನ ಭಯೋತ್ಪಾದನೆಯ ಗುಂಪುಗಳ ಕೈವಾಡ ಸ್ಪಷ್ಟವಾಗುತ್ತಿದೆ. ಹಾಗಾಗಿ, ಈ ‘ಅಪರಿಚಿತ ಬಂದೂಕುಧಾರಿ’ಯ ಹಿಂದೆ, ಈ ಭಯೋತ್ಪಾದನಾ ಕೃತ್ಯದ ಹಿಂದಿರುವ ನಿಜವಾದ ಕೈಗಳು ಯಾವುವು ಎಂದು ಗುರುತಿಸುವುದು ಬಹಳ ಮುಖ್ಯ.
ನನ್ನ ವಿರುದ್ಧದ ಈ ದ್ವೇಷಭರಿತ ಪ್ರಚಾರ ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಸಾಗುತ್ತಿದೆ. ಅಲ್ಲಿ ಯಾವುದೇ ಸಾಕ್ಷಿಗಳಿಲ್ಲ, ಬರೀ ಸುಳ್ಳುಗಳಿವೆ. ಅಲ್ಲಿ ಆರೋಪ ಪಟ್ಟಿಯಿಲ್ಲ (ಚಾರ್ಜ್‍ಶೀಟ್); ಬರೀ ಮೀಡಿಯಾ ಟ್ರಯಲ್ ಇದೆ. ಅಲ್ಲಿ ವಾದ ಮಾಡುವವರಿಲ್ಲ, ಬರೀ ಟ್ರಾಲ್ ಮಾಡುವವರಿದ್ದಾರೆ. ಅಲ್ಲಿ ಚರ್ಚೆಯಿಲ್ಲ, ಬರೀ ಬೆದರಿಕೆಗಳಿವೆ. ಇದೆಲ್ಲದರ ಅಂತಿಮ ಪರಿಣಾಮ ಇಂದು ಬಂದೂಕಿನ ದಾಳಿಯ ಹಂತಕ್ಕೆ ಬಂದಿದೆ. ‘ತುಕ್ಡೆ ತುಕ್ಡೆ’ (ತುಂಡು ತುಂಡು) ಎನ್ನುವ ಪದವನ್ನು ನನ್ನ ಹೆಸರಿನೊಂದಿಗೆ ಯಾಕೆ ಅಂಟಿಸಲಾಗಿದೆ? ಯಾವುದೋ ಒಂದು ಸಿನಿಮಾ ಬಿಡುಗಡೆಯಾದರೆ ದೇಶ ‘ತುಕ್ಡೆ ತುಕ್ಡೆ’ ಆಗುತ್ತದೆಂದು ಬೊಬ್ಬೆ ಹಾಕುವವರನ್ನು ಬಿಜೆಪಿ ನಾಯಕರು ಬೆಂಬಲಿಸುತ್ತಿದ್ದಾರೆ. ಆದರೆ ಇದೇ ಸಂದರ್ಭದಲ್ಲಿ, ರಾಜಧಾನಿಯ ಹೃದಯಭಾಗದಲ್ಲೇ ಕೆಲವರು ಭಾರತದ ಸಂವಿಧಾನವನ್ನು ಹಾಡುಹಗಲು ಸುಟ್ಟುಹಾಕಿದಾಗ ಯಾವ ಆಕ್ರೋಶವೂ ಕಾಣುವುದಿಲ್ಲ. ಆದರೆ ನನ್ನನ್ನು ಆ್ಯಂಟಿ-ನ್ಯಾಷನಲ್ ಎಂದು ಕರೆದು ನಿರಂತರವಾಗಿ ಮೀಡಿಯಾ ಟ್ರಯಲ್ ಏಕೆ ನಡೆಸಲಾಗುತ್ತಿದೆ? ದೇಶದ ಅಲ್ಪಸಂಖ್ಯಾತರ ವಿರುದ್ಧ ದ್ವೇಷ ಕಾರಿ ದೇಶವನ್ನು ಧ್ರುವೀಕರಿಸುವವರನ್ನು, ಮಾಬ್ ಲಿಂಚಿಂಗ್ ಮಾಡುವವರನ್ನು ಗೌರವಿಸಿ, ಅವರಿಗೆ ಯಾಕೆ ಹೂಮಾಲೆ ಹಾಕಲಾಗುತ್ತಿದೆ? ಇಂಥಾ ದ್ವೇಷ ರಾಜಕಾರಣದ ವಿರುದ್ಧ ಮಾತನಾಡುವವರನ್ನು ಗುರಿಯಾಗಿಸಿ ದಾಳಿ ಮಾಡುತ್ತಿರುವುದೇಕೆ? ಜಾತಿಯ ಹೆಸರಿನಲ್ಲಿ ಸಮಾಜವನ್ನು ಒಡೆಯುತ್ತಿರುವ, ದಲಿತರ ಮೇಲೆ ಹಲ್ಲೆ ಮಾಡುವವರನ್ನು ಸಮಾಜ ಒಡೆಯುತ್ತಿದ್ದಾರೆಂದು ಇವರು ಟೀಕಿಸುವುದಿಲ್ಲ ಯಾಕೆ? ಜಾತಿವಾದಿ ಸಂಭಾಜಿ ಭಿಡೆಯನ್ನು ಪ್ರಧಾನಿ ಮೋದಿ ಮಹಾಪುರುಷ ಎಂದೇಕೆ ಕರೆಯುತ್ತಾರೆ? ಬಡವರ ಬದುಕನ್ನು ಬಲಿಕೊಟ್ಟು ದೇಶವನ್ನು ತುಂಡು ತುಂಡಾಗಿ ಕಾರ್ಪೋರೇಟ್ ಶಕ್ತಿಗಳಿಗೆ ಮಾರುತ್ತಿರುವವರನ್ನು ದೇಶಭಕ್ತರೆಂದು ಯಾಕೆ ಕರೆಯಲಾಗುತ್ತಿದೆ? ಇವರ ಈ ಕೃತ್ಯಗಳನ್ನು ಪ್ರಶ್ನಿಸುವವರನ್ನು ‘ರಾಷ್ಟ್ರ ದ್ರೋಹಿ’ ಎಂದು ಯಾಕೆ ಬಿಂಬಿಸಲಾಗುತ್ತಿದೆ. ಇವು ಇಂದು ನಾವು ಕೇಳಲೇಬೇಕಾದ ಪ್ರಶ್ನೆಗಳು.
ಇಂತಹ ಹಲ್ಲೆಗಳ ಮೂಲಕ ನಮ್ಮ ಬಾಯಿ ಮುಚ್ಚಿಸಬಹುದು ಎಂದು ಅವರು ತಿಳಿದುಕೊಂಡಿದ್ದರೆ ಅದು ಅವರ ದೊಡ್ಡ ತಪ್ಪು ಕಲ್ಪನೆಯಷ್ಟೆ. ಗೌರಿ ಲಂಕೇಶ್ ಅವರ ಪರಿಕಲ್ಪನೆಗಳು, ರೋಹಿತ್ ವೆಮುಲಾನ ಐಡಿಯಾಗಳು ಅವರಿಲ್ಲದಿದ್ದರೂ ಜೀವಂತವಾಗಿವೆ, ಜೀವಂತವಾಗಿರುತ್ತವೆ. ಅವರು ನಮ್ಮನ್ನು ಜೈಲಿನ ಭಯ ತೋರಿಸಿ ಅಥವಾ ಗುಂಡಿನ ಭಯ ತೋರಿಸಿ ಸುಮ್ಮನಿರಿಸಲಾಗುವುದಿಲ್ಲ. ಅದನ್ನು ನಾವು ನಿನ್ನೆಯೂ ಸಾಬೀತುಪಡಿಸಿದ್ದೇವೆ. ‘ಭಯದಿಂದ ಮುಕ್ತಿ’ ಎನ್ನುವ ಕಾರ್ಯಕ್ರಮ ನನ್ನ ಮೇಲೆಯ ಹಲ್ಲೆಯ ಹೊರತಾಗಿಯೂ ಕಾನ್ಸ್ಟಿಟೂಷನ್ ಕ್ಲಬ್‍ನಲ್ಲಿ ಯಶಸ್ವಿಯಾಗಿ ನಡೆಯಿತು. ಪ್ರಶಾಂತ್ ಭೂಷಣ್, ಪ್ರೊ. ಅಪೂರ್ವಾನಂದ, ಎಸ್.ಆರ್.ದಾರಾಪುರಿ, ಮನೋಜ್ ಝಾ ಇವರೊಂದಿಗೆ ನಜೀಬ್‍ನ ತಾಯಿ ಫಾತಿಮ ನಫಿಸ್, ಅಲಿಮುದ್ದೀನ್ (ಕೇಂದ್ರ ಸಚಿವ ಜಯಂತ್ ಸಿನ್ಹ ಇತ್ತೀಚಿಗೆ ಅಲಿಮುದ್ದೀನ್ ಹಂತಕರನ್ನು ಸನ್ಮಾನಿಸಿದ್ದರು) ಅವರ ಹೆಂಡತಿ ಮರಿಯಮ್, ಜುನೈದ್ (ಕಳೆದ ವರ್ಷ ಟ್ರೇನಿನಲ್ಲಿ ಕೊಲ್ಲಲ್ಪಟ್ಟ 16 ವರ್ಷದ ಹುಡುಗ) ನ ತಾಯಿ ಫಾತಿಮ, ರಕ್ಬರ್ ಖಾನ್‍ನ ಸಹೋದರ ಅಕ್ಬರ್, ಡಾ. ಕಫೀಲ್ ಖಾನ್ ಮತ್ತಿತರರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಎಲ್ಲರೂ ಕೇಸರಿ ಭಯೋತ್ಪಾದನೆಯಿಂದ ಆಗುತ್ತಿರುವ ಭಯ, ಗುಂಪುಹತ್ಯೆ ಮತ್ತು ದ್ವೇಷದ ವಿರುದ್ಧ ಧ್ವನಿಯೆತ್ತಿದರು. ಇದು ನಮ್ಮ ಪ್ರತಿರೋಧದ ಚೈತನ್ಯ.
ನನಗೆ ಜೀವ ಬೆದರಿಕೆ ಮುಂದುವರೆದಿರುವುದರಿಂದ ದೆಹಲಿ ಪೊಲೀಸರು ನನಗೆ ಸೂಕ್ತ ಸುರಕ್ಷತೆ ಒದಗಿಸಬೇಕೆಂದು ಇಲ್ಲಿ ಮತ್ತೊಮ್ಮೆ ಹೇಳಲು ಬಯಸುತ್ತೇನೆ. ಕಳೆದೆರಡು ವರ್ಷಗಳಲ್ಲಿ ಎರಡು ಬಾರಿ ರಕ್ಷಣೆಗಾಗಿ ಪೊಲೀಸರನ್ನು ಕೇಳಿಕೊಂಡಿದ್ದರೂ ಪೊಲೀಸರು ಸ್ಪಂದಿಸಿಲ್ಲ. ಪ್ರತಿನಿತ್ಯ ಒಂದಿಲ್ಲೊಂದು ಬೆದರಿಕೆ, ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷಪೂರಿತ ಸಂದೇಶಗಳು ನಿರಂತರವಾಗಿ ಬರುತ್ತಲೇ ಇವೆ. ನಿನ್ನೆಯ ಘಟನೆಯ ಬಳಿಕ, ದೆಹಲಿ ಪೋಲೀಸರು ಇನ್ನೂ ಯಾತಕ್ಕಾಗಿ ಕಾಯುತ್ತಿದ್ದಾರೋ? ಸೂಕ್ತ ಭದ್ರತೆಯಿಲ್ಲದೆ ನಾನು ಓಡಾಡುವುದೇ ಅಸಾಧ್ಯವಾಗಿರುವ ಹಿನ್ನೆಲೆಯಲ್ಲಿ, ದೆಹಲಿ ಪೊಲೀಸರು ನನಗೆ ಭದ್ರತೆ ಒದಗಿಸುವಂತೆ ದೇಶದ ಎಲ್ಲ ಪ್ರಜಾತಾಂತ್ರಿಕ ಶಕ್ತಿಗಳು ಒತ್ತಡ ತರಬೇಕೆಂದು ನಾನು ಈ ಮೂಲಕ ವಿನಂತಿಸುತ್ತೇನೆ.
ಈ ಹೇಡಿತನದ ಕೃತ್ಯದ ವಿರುದ್ಧ ಧ್ವನಿಯೆತ್ತಿ, ನ್ಯಾಯದ ಈ ಹೋರಾಟದಲ್ಲಿ ನನ್ನೊಂದಿಗೆ ನಿಂತ ಎಲ್ಲ ಅಸಂಖ್ಯಾತ ಸಂಗಾತಿಗಳಿಗೆ ಅನಂತ ಧನ್ಯವಾದಗಳು. ಪ್ರಜಾಪ್ರಭುತ್ವಕ್ಕಾಗಿ ನಡೆಯುತ್ತಿರುವ ನಮ್ಮೆಲ್ಲರ ಈ ಸಾಮೂಹಿಕ ಹೋರಾಟದಲ್ಲಿ ನಾವು ಸಾವರ್ಕರ್ ಮತ್ತು ಗೋಡ್ಸೆಯ ಹಿಂಬಾಲಕರನ್ನು ಖಂಡಿತವಾಗಿಯೂ ಸೋಲಿಸುತ್ತೇವೆ. ದಾಲ್ಮಿಯ ಕಂಪನಿಯ ಕೆಂಪು ಕೋಟೆಯಿಂದ ನಾಳೆ ಇನ್ನಷ್ಟು ಸುಳ್ಳುಗಳು, ಸಿಹಿಲೇಪಿತ ಜುಮ್ಲಾಗಳ ಸುರಿಮಳೆಯಾಗಲಿದೆ; ಹಾಗೆಯೆ, ನೈಜ ಸ್ವಾತಂತ್ರ ಮತ್ತು ಘನತೆಗಾಗಿ ಭಗತ್ ಸಿಂಗ್ ಮತ್ತು ಬಾಬಾಸಾಹೇಬ್ ಅಂಬೇಡ್ಕರ್ ಅವರು ಕಂಡ ಕನಸನ್ನು ನನಸಾಗಿಸಲು ನಡೆಯುತ್ತಿರುವ ಹೋರಾಟ ಕೂಡ ಇನ್ನಷ್ಟು ಹುರುಪಿನಿಂದ ಮುಂದೆ ಸಾಗಲಿದೆ.
ಜೈ ಭೀಮ್, ಲಾಲ್ ಸಲಾಮ್

– ಉಮರ್ ಖಾಲಿದ್
ಕನ್ನಡಕ್ಕೆ: ರಾಜಶೇಖರ್ ಅಕ್ಕಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...