Homeಅಂಕಣಗಳುಹಿಂಸೆ, ಅಹಿಂಸೆಯ ಲೋಹಿಯಾ ಮೀಮಾಂಸೆ

ಹಿಂಸೆ, ಅಹಿಂಸೆಯ ಲೋಹಿಯಾ ಮೀಮಾಂಸೆ

- Advertisement -
- Advertisement -

ಲೋಹಿಯಾರವರ ಸಮಾನತೆಯ ಕಲ್ಪನೆ ಐತಿಹಾಸಿಕವಾಗಿ ಬಂಡವಾಳಶಾಹಿ ಸೃಷ್ಟಿಸುವ ಸಮಾನತೆಯ ಕಲ್ಪನೆಯನ್ನು ಮೀರಲಾರದ್ದು. ಲೋಹಿಯಾರವರ ಸಮಾಜವಾದದ ಕಲ್ಪನೆ ಯೂರೋಪಿನ ಅಥವಾ ಶ್ರೀಮಂತ ವರ್ಗಗಳ ಉದಾರತೆಯ ಮೇಲೆ ನಿಂತಿರುವುದಾಗಿದೆ. `ಬಂಡವಾಳಶಾಹಿಯಾದರೂ ಔದ್ಯೋಗಿಕ ಸಮಾಜದಲ್ಲಿ ಅಧಿಕ ಮಟ್ಟದ ಸಮಾನತೆ ಇರುತ್ತದೆ.’ `ಖಾಸಗಿ ಲಾಭವಿರುವೆಡೆಯಲ್ಲಿ ಅಸಮಾನತೆ ಇರುವುದು ಸಹಜವೆನ್ನುವುದು, ವ್ಯಕ್ತಿಯೋರ್ವನು ಭಾವನಾತ್ಮಕವಾಗಿ ಸಮಸ್ಯೆಯನ್ನು ಪರಿಶೀಲಿಸುವ ತಪ್ಪಿನಿಂದ ಬಂದ ತೀರ್ಮಾನವೆಂದೂ, ಚಾರಿತ್ರಿಕವಾಗಿ ಇಡೀ ಸಮಾಜದ ದೃಷ್ಟಿಯಿಂದ ಗಮನಿಸಿದರೆ ತಲುಪುವ ತೀರ್ಮಾನ ಬಡಸಮಾಜದಲ್ಲಿ ಹೆಚ್ಚು ಅಸಮಾನತೆ ಇದೆ. ಬಂಡವಾಳಶಾಹಿಯಾದರೂ ಔದ್ಯೋಗಿಕ ಸಮಾಜದಲ್ಲಿ ಅಧಿಕಮಟ್ಟದ ಸಮಾನತೆ ಇರುತ್ತದೆ’ ಎಂದು ಲೋಹಿಯಾ ಹೇಳುತ್ತಾರೆ. ಇಂತಹ ಐತಿಹಾಸಿಕ ನಿಯಮವನ್ನು ಸಂಶೋಧಿಸಿ ಕೊಟ್ಟಿದ್ದಕ್ಕಾಗಿ ಬಂಡವಾಳಶಾಹಿ ವರ್ಗ ಲೋಹಿಯಾರವರಿಗೆ ಚಿರಋಣಿಯಾಗಿರಬೇಕು.
ಲೋಹಿಯಾರವರ ಸಮಾಜವಾದಿ ಕಲ್ಪನೆ ಶ್ರೀಮಂತವರ್ಗದ ಉದಾರತನದ ಮೇಲೋ, ಸಹಕಾರದ ಮೇಲೋ ನಿಂತಿರುವುದಾಗಿದೆ ಎನ್ನುವುದಕ್ಕೆ ಪುರಾವೆ ಎಂದರೆ ‘ಸಮಾಜವಾದದ ಕಡೆಗೆ ಭಾರತೀಯ ದಾರಿ’ ಎನ್ನುವ ಲೇಖನದಲ್ಲಿ ಹೀಗೆ ಬರೆದಿದ್ದಾರೆ. `ಮೇಲ್ಮಟ್ಟದ ಜನರ ಹೃದಯ ಪರಿವರ್ತನೆಯಾಗುವಂತಹ, ಕೆಳಮಟ್ಟದ ಜನ ಮೇಲಕ್ಕೇರಬೇಕೆಂಬ ತಿಳುವಳಿಕೆ ಪಡೆಯುವಂತಹ ಒಂದು ಕ್ರಾಂತಿ ಆಗಲೆಂದು ನಾನು ಇಚ್ಚಿಸುತ್ತೇನೆ. ಈ ಎರಡೂ ವರ್ಗಗಳು ಪರಸ್ಪರ ಸಹಕರಿಸತೊಡಗಿದರೆ ಪ್ರಪಂಚಕ್ಕೆ ಅದೊಂದು ಆದರ್ಶ ಮಾರ್ಗವಾಗುತ್ತದೆ, ಹಾಗೂ ಅದರಿಂದ ಮೂಡಿಬರುವ ಸಮಾಜವಾದದಲ್ಲಿ ಸ್ವಂತ ಆಸ್ತಿಯ ಮೇಲಿನ ಅಧಿಕಾರ ಹಾಗೂ ಆಸ್ತಿಯನ್ನು ತನ್ನದಾಗಿಸಿಕೊಳ್ಳಬೇಕೆಂಬ ಲೋಭ ಇವೆರಡನ್ನೂ ಕೊನೆಗೊಳಿಸಬಹುದು.’ ಅಲ್ಲಿ ಇಲ್ಲಿ ಕೆಲವು ವ್ಯಕ್ತಿಗಳ ಹೊರತಾಗಿ, ಪೂರ್ಣ ಶ್ರೀಮಂತವರ್ಗವೇ ಹೃದಯಪರಿವರ್ತನೆಗೊಂಡು ತನ್ನ ಆದಾಯ ಸಂಪತ್ತೆಲ್ಲವನ್ನೂ ಕೆಳಮಟ್ಟದವರಿಗೆ ನೀಡುತ್ತಾ ಹೋಗುವುದು ಅಸಹಜ ಹಾಗೂ ಅವಾಸ್ತವ.
ಸಮಾಜವಾದಕ್ಕೆ ಎರಡು ಸ್ವರೂಪಗಳಿವೆಯೆಂದೂ `1. ಉತ್ಪಾದನೆಯ ಮೇಲಿನ ಹಿಡಿತ ಹಾಗೂ ಯಜಮಾನಿಕೆ ಯಾರದಾಗಬೇಕೆಂದು 2. ಭಾರತದಂತಹ ದೇಶದಲ್ಲಿ ಹಂಚಿಕೆಯ ದೃಷ್ಟಿ ಬಲವಾಗಿರಬೇಕೆಂದು’ ಲೋಹಿಯಾ ಹೇಳುತ್ತಾರೆ. ಮೊದಲನೆಯದನ್ನು ಅಲಕ್ಷಿಸಿ ಎರಡನೆಯದರ ಬಗ್ಗೆಯೇ ಹೆಚ್ಚು ಒತ್ತುಕೊಡುವುದರಲ್ಲಿಯೇ ಲೋಹಿಯಾ ಸಂಪೂರ್ಣ ದಾರಿ ತಪ್ಪುತ್ತಾರೆ. ಉತ್ಪಾದನೆಯ ಯಜಮಾನಿಕೆಗೂ, ಹಂಚಿಕೆಗೂ ನೇರವಾದ, ಬೇರ್ಪಡಿಸಲಾಗದ ಸಂಬಂಧವಿದೆ. ಲೋಹಿಯಾರವರಿಗೆ ವರ್ಗಹೋರಾಟವಾಗಲಿ, ಜಾತಿಹೋರಾಟವಾಗಲಿ, ಇನ್ಯಾವುದೇ ಆಗಲಿ ಸಮಾನತಾ ಸಮಾಜವನ್ನು ಸಾಧಿಸುವ ಸಾಧನವಾಗುವುದಿಲ್ಲ. ಬದಲು ಈ ಹೊಸ ನಾಗರಿಕತೆಗಾಗಿ ನಡೆಯುವ ಹೋರಾಟ `ಜಾತಿ ವರ್ಗ ಕಲಹಗಳನ್ನು ಮೀರಿ’ `ಸಂಕಲ್ಪ ಶಕ್ತಿಯಿಂದಲೇ’ `ಸಮೀಪೀಕರಣದ ಮೂಲಕ’ ನಡೆಯುವಂತಹದು. ಹೆಚ್ಚೆಂದರೆ ಈ ಸಮೀಪೀಕರಣದ ಕ್ರಿಯೆಗೆ ಬೇಕಾಗುವಷ್ಟು ಮಾತ್ರಕ್ಕೆ ಹೋರಾಟಗಳನ್ನು ನಡೆಸಿ ಮಿತಿಗೊಳಿಸುವುದು. ಆ ಹೋರಾಟಗಳಿಂದ ಮೇಲ್ಮಟ್ಟದ ಜನರ ಹೃದಯ ಕರಗಿ, ಪರಿವರ್ತನೆಯೂ ಆಗಿ, ಕೆಳಮಟ್ಟದ ಜನ ಮೇಲಕ್ಕೇರಬೇಕೆಂಬ ತಿಳುವಳಿಕೆಯೂ ಉಂಟಾಗಿ ಈ ಎರಡೂ ವರ್ಗಗಳು ಪರಸ್ಪರ ಸಹಕರಿಸಬೇಕು, ಎನ್ನುವುದು ಲೋಹಿಯಾವಾದದ ತಿರುಳು.
‘ಅನಂತ ಮರುಭೂಮಿಯಲ್ಲಿ ವರ್ಗದ ಒಂದು ಕೊಂಬೆಯಿಂದ ಜಾತಿಯ ಇನ್ನೊಂದು ಕೊಂಬೆಗೆ ಕೋತಿಯಂತೆ ಜಿಗಿಯುತ್ತಾ ಇರುವುದೇ ಮಾನವನ ಸದಾಕಾಲದ ಹಣೆಯಬರಹ’ ಎಂದು ಇತಿಹಾಸವನ್ನು ತಪ್ಪಾಗಿ ಅರ್ಥೈಸಿ ಅಪಹಾಸ್ಯ ಮಾಡಿದ ಲೋಹಿಯಾ, ತಮ್ಮ ಕಲ್ಪನೆಯ ಪೋಕಳೆ ‘ಇತಿಹಾಸ ಚಕ’್ರ ತನ್ನ ಸುತ್ತುವಿಕೆಯನ್ನು ನಿಲ್ಲಿಸುತ್ತದೆ ಎಂದೇನೂ ಭವಿಷ್ಯ ಹೇಳುವುದಿಲ್ಲವೆಂದೂ, ಆದರೆ ಈಗ `ಇನ್ನೊಂದು ಸಲ ಶುಭ ಸೂಚನೆಯ ಸಲ್ಲಕ್ಷಣಗಳ ಸಂಘಟನೆ ನಡೆದಿದೆ’ ಎಂದೂ `ಅದೃಷ್ಟವಶಾತ್ ಮಾನವ ಕುಲದ ಸಮೀಪೀಕರಣ ಮೂರನೆಯ ಚಾಲಕ ಶಕ್ತಿಯಾಗಿ ಕಾಣಿಸಿಕೊಂಡಿದೆಯೆಂದೂ’ ಹೇಳುತ್ತಾರೆ. ಈಗ ಒಂದು ವಿಶಿಷ್ಟ ಜನತೆಯ ದಕ್ಷತೆಯನ್ನು ಬಿಟ್ಟು ಇಡೀ ಮಾನವ ಕುಲದ ದಕ್ಷತೆಯ ದೃಷ್ಟಿಯಿಂದ ಗರಿಷ್ಠ ಕಾರ್ಯದಕ್ಷತೆಯಿಂದ ಸಮಗ್ರ ಕಾರ್ಯದಕ್ಷತೆಗೆ ಸಾಗುವುದಾಗಿದೆ. ಈಗ ಅದೃಷ್ಟವಶಾತ್ ಮೂರನೆಯ ಶಕ್ತಿಯಾಗಿ ಕಾಣಿಸಿಕೊಂಡಿರುವ ಮಾನವ ಕುಲದ ಸಮೀಪೀಕರಣವನ್ನು ಉಪಯೋಗಿಸಿ ಗರಿಷ್ಠ ಕಾರ್ಯದಕ್ಷತೆಯಿಂದ ಸಮಗ್ರ ಕಾರ್ಯದಕ್ಷತೆಗೆ ಸಾಗುವುದರ ಮೂಲಕ ಇತಿಹಾಸ ಚಕ್ರವನ್ನು ಭೇದಿಸಿ, `ಇತಿಹಾಸದ ಮರುಭೂಮಿಗಳ ಮೇಲೆ ಸುಗಂಧಭರಿತ ಹುಲ್ಲುಗಾವಲುಗಳ ಅಳಿವಿಲ್ಲದ ತಳಹದಿಯಲ್ಲಿ ಕೃಷಿ ಮಾಡುವುದೂ, ಅದರ ಮೇಲೆ ಪ್ರತಿ ಯುಗವೂ ಪ್ರತಿ ಪ್ರದೇಶವೂ ತನಗೆ ಬೇಕಾದ ಹೂಗಳನ್ನು ಬೆಳೆಯಲು ಸಾಧ್ಯವಾಗುವಂತೆ ಮಾಡುವುದೂ’ ಲೋಹಿಯಾರವರ ಹೊಸನಾಗರಿಕತೆಯ ಕನವರಿಕೆಯಾಗಿದೆ. ಇದು ಬಹಳ ವರ್ಣರಂಜಿತವಾದ, ಹಾಗೂ ಶುಷ್ಕವಾದ, ವಾಸ್ತವಕ್ಕೆ ದೂರವಾದ, ಫಲಪ್ರದವಾಗದ ಆದರ್ಶಗಳಿಂದ ಕೂಡಿದ ಹಗಲು ಕನಸುಗಳಾಗಿವೆ. ಆ ಹೊಸ ನಾಗರೀಕತೆಯ ಐದು ಅಂಶಗಳಲ್ಲಿ 3ನೇಯದು ಮಾತ್ರ ರಾಷ್ಟ್ರದ ಚೌಕಟ್ಟಿನಲ್ಲಿದೆ, ಉಳಿದವೆಲ್ಲವೂ ಜಗತ್ತಿನ ಮಟ್ಟದಲ್ಲಿ ನಡೆಯುವಂತಹದು. ಇದಕ್ಕೆ ಯಾವ ಭೌತಾಧಾರವೂ ಇಲ್ಲ.
ರಾಷ್ಟ್ರದೊಳಗೆ ಸದಾ ಏರುತ್ತಿರುವ ಜೀವನಮಟ್ಟದ ಕಲ್ಪನೆಯನ್ನೂ ತಿರಸ್ಕರಿಸಿ, ಸಣ್ಣ ಉದ್ಯಮ ತಂತ್ರಕ್ಕೆ ತಕ್ಕದಾದ ಇಡೀ ಜಗತ್ತಿನಾದ್ಯಂತ ‘ಸಭ್ಯ ಜೀವನಮಟ್ಟ’ ದ ಕಲ್ಪನೆಯನ್ನು ಸೃಷ್ಟಿಸುವುದು. ಈ ಸಣ್ಣ ಉದ್ಯಮತಂತ್ರ ಯಾವುದು ಎನ್ನುವುದಕ್ಕೆ ಲೋಹಿಯಾರವರಿಗೇ ಸ್ಪಷ್ಟತೆಗಳಿರಲಿಲ್ಲ. ಅಮೇರಿಕಾಗೆ ಹೋದಾಗ ಎಲ್ಲಾ ಹುಡುಕಾಡಿ ತಡಕಾಡಿದರೂ ಅವರಿಗೆ ಕಂಡದ್ದು ಕಾಲಭಾದವಾದ ಯಂತ್ರಗಳು. ಲೋಹಿಯಾ ಹೇಳಿದ್ದೇನೆಂದರೆ ಆ ಸಣ್ಣ ಘಟಕದ ಯಂತ್ರವನ್ನು ಕಂಡುಹಿಡಿಯಲು ವಿಜ್ಞಾನಿಗಳಿಗೆ ನಿರ್ದೇಶಿಸಬಹುದೆಂದು. ಅಂದರೆ ಜಗತ್ತಿನಲ್ಲಿ ಅಸ್ತಿತ್ವದಲ್ಲಿಲ್ಲದ, ಇನ್ನೂ ಕಂಡುಹಿಡಿಯಬೇಕಾಗಿರುವ ಚಿದಂಬರ ರಹಸ್ಯದ ಮೇಲೆ ಇವರು ತಮ್ಮ ಹೊಸ ನಾಗರೀಕತೆಯನ್ನು ಕಲ್ಪಿಸಿಕೊಂಡಿರುವುದು. ಅದೂ ಜಗತ್ತಿನ ಎಲ್ಲಾ ರಾಷ್ಟ್ರಗಳೂ ಒಪ್ಪಿಕೊಳ್ಳಬೇಕು. ಹಾಗೆ ಒಪ್ಪಿಕೊಳ್ಳಲು ಸಾಧ್ಯವೇ? ಜಗತ್ತಿನಾದ್ಯಂತ ಸಮಾಜ ಒಂದೇ ರೀತಿಯಲ್ಲಿ ಸ್ತಗಿತವಾಗಿರಬೇಕು. ಯಾವ ಪ್ರದೇಶದಲ್ಲೂ ಯಾವ ಕಾಲಕ್ಕೂ ಅದು ಬದಲಾಗಬಾರದು. ಬದಲಾದರೆ ಶಕ್ತಿ ಸಮೃದ್ಧಿಗಳು ಪಲ್ಲಟವಾಗಿ ಇತಿಹಾಸ ಚಕ್ರ ಮತ್ತೆ ಗರಗರನೆ ತಿರುಗಲು ಶುರುವಾಗಿಬಿಡುತ್ತದೆ. ಇಂತಹ ಪೆದ್ದ ತಿಕ್ಕಲು ಸಿದ್ಧಾಂತ ಪುಣ್ಯ ಭರತ ಭೂಮಿಯನ್ನು ಬಿಟ್ಟರೆ ಬೇರೆಲ್ಲಾದರೂ ಹುಟ್ಟಿದುದುಂಟೆ ಎನ್ನುವುದು ಅನುಮಾನ.
ಗಾಂಧೀಜಿ ಅಥವಾ ಲೋಹಿಯಾ ಸಿದ್ಧಾಂತ ಏನೆಂದರೆ ‘ಯಾವುದೇ ಗುರಿಗಳಾಗಿರಲಿ ಶಸ್ತ್ರರಹಿತವಾದ ಹೋರಾಟದ ಸಾಧನಗಳನ್ನು ಮಾತ್ರ ಬಳಸುವುದು. ಶಸ್ತ್ರಗಳನ್ನು ಮಾತ್ರ ಹಿಡಿಯಕೂಡದು. ಗುರಿ ಮತ್ತು ಸಾಧನಗಳೆರಡೂ ಶುದ್ಧವಾಗಿರಬೇಕು. ಶುದ್ಧ ಗುರಿಗಳಂತೆ ಸಾಧನವೂ ಶುದ್ಧವಾಗಿರಬೇಕು. ಶಸ್ತ್ರಗಳು ಅಶುದ್ಧ ಸಾಧನಗಳು, ಯಾಕೆಂದರೆ `ಶಸ್ತ್ರಗಳು ವೈಚಾರಿಕತೆಯನ್ನು ಕೊಲ್ಲುತ್ತವೆ.’ ಗುರಿಗೂ ಸಾಧನಕ್ಕೂ ಆಯಾಯ ಸನ್ನಿವೇಶಕ್ಕೆ ತಕ್ಕಂತೆ, ಸಾಮಾಜಿಕ ಪರಿಸ್ಥಿತಿಗೆ ತಕ್ಕಂತೆ ನೇರವಾದ, ತರ್ಕಬದ್ಧವಾದ ಸಂಬಂಧವಿದೆ ಎನ್ನುವುದನ್ನೇ ಲೋಹಿಯಾರವರ ವಿಚಾರ ಅಲ್ಲಗಳೆಯುತ್ತದೆ. ಅಲ್ಲಿ ತೀರ್ಮಾನಿಸಬೇಕಾದದ್ದು ಯಾವುದು ಸಮರ್ಥ ಹಾಗೂ ನ್ಯಾಯಬದ್ಧ ಎಂದೇ ಹೊರತು, ಶುದ್ಧ ಅಶುದ್ಧ ಎಂದಲ್ಲ. `ಮ್ಯಾನ್ ಕೈಂಡ್’ನ ಆಗಸ್ಟ್ 1970ರಲ್ಲಿ ಲೋಹಿಯಾ ಸಮಾಜವಾದಿಗಳು ಹೇಗೆ ಬಾಹ್ಯ ಆಕ್ರಮಣದ ಸನ್ನಿವೇಶದಲ್ಲಿ ಶತ್ರು ಸೈನ್ಯವನ್ನು ಅಹಿಂಸಾತ್ಮಕ ಮಾರ್ಗದಲ್ಲಿ ಎದುರಿಸಲು ಸತ್ಯಾಗ್ರಹಿಗಳ ಗುಂಪೊಂದನ್ನು ಕಳುಹಿಸಿ ಅವರು ಆಕ್ರಮಣಕಾರರನ್ನು ಎದುರಿಸಿ ಅವರ ಹೃದಯ ಪರಿವರ್ತನೆ ಮಡಬೇಕೆಂದು ವಿವರಿಸಿದ್ದಾರೆ. ಈ ವಾದ ಎಷ್ಟು ಅವಾಸ್ತವ ಎನ್ನುವುದಕ್ಕೆ ಭಾರತ-ಚೈನಾ ಯುದ್ಧಕ್ಕೆ ಸಂಬಂಧ ಪಟ್ಟಂತೆ ಲೋಹಿಯಾ `ಶೀಘ್ರ ಹಾಗೂ ನೇರ ಸಹಾಯಕ್ಕಾಗಿ(ಶಸ್ತ್ರಗಳ ಸಹಾಯ-ಲೇ) ನಾನು ಮ್ಯಾಕ್‍ಮಿಲನರಿಗೆ ಮುತ್ತು ಕೊಡಬೇಕೆಂದಿದ್ದೆ.’ `ನಾನು ಬಾಂಬನ್ನೇ ಕೇಳಿದೆ ಅದು ಸಿಗುತ್ತಿದ್ದಲ್ಲಿ’ ಇಲ್ಲಿ ಬಾಂಬ್ ಎಂದರೆ ಅಣು ಬಾಂಬ್. ಲೋಹಿಯಾ ಒಂದು ಎಕ್ಸ್‍ಟ್ರೀಮ್‍ನಿಂದ ಇನ್ನೊಂದು ಎಕ್ಸ್‍ಟ್ರೀಮ್‍ಗೆ ಹೋಗಿ ಕುಣಿಯುವ ರಾಜಕಾರಣಿ. ಯಾವುದೇ ದೇಶ ನಮ್ಮ ಮೇಲೆ ಆಕ್ರಮಣ ಮಾಡಿದಾಗ ನಾವು ಸಮರ್ಥ ಹಾಗೂ ನ್ಯಾಯಬದ್ಧ ಶಸ್ತ್ರಗಳನ್ನು ಬಳಸದಿದ್ದಲ್ಲಿ ಅವಿವೇಕಿಗಳೂ ಮೂರ್ಖರೂ ಆಗುತ್ತೇವೆ. ಆದರೆ ಮ್ಯಾಕ್‍ಮಿಲನರಿಗೆ ಮುತ್ತುಕೊಟ್ಟು ಅಣುಬಾಂಬನ್ನೂ, ಶಸ್ತ್ರಗಳನ್ನೂ ಕೇಳುವ ಲೋಹಿಯಾ ಶಸ್ತ್ರಗಳು ಅಶುದ್ಧವೆಂದೂ, ವೈಚಾರಿಕತೆಯನ್ನು ಕೊಲ್ಲುತ್ತವೆಯೆಂದೂ ಹೇಳುವುದರಲ್ಲಿ ಅರ್ಥವೇನು? ಲೋಹಿಯಾರವರಿಗೆ ಪ್ರೋಸ್ಟೇಟ್ ಗ್ಲಾಂಡ್ ಊದಿಕೊಂಡು ಮೂತ್ರವಿಸರ್ಜನೆಗೆ ತೊಂದರೆಯಾಗಿತ್ತು. ವೈದ್ಯರು ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು. ಶಸ್ತ್ರಚಿಕಿತ್ಸೆ ತಮ್ಮ ಅಹಿಂಸಾ ತತ್ವಕ್ಕೆ ವಿರೋಧವಾದುದೆಂದು ತಿರಸ್ಕರಿಸಿದರು. ಇನ್ನು ಬೇರೆ ಏನೂ ವಿಧಿಯಿಲ್ಲ ಎನ್ನುವಾಗ ಶಸ್ತ್ರಚಿಕಿತ್ಸೆಗೆ ಆಸ್ಪತ್ರೆ ಸೇರಿದರು. ಶಸ್ತ್ರಚಿಕಿತ್ಸೆ ಏನೋ ಸೆಪ್ಟೆಂಬರ್ 30, 1967 ರಂದು ಆಯಿತು, ಆದರೆ ಬಹಳ ತಡವಾಗಿ ಆಗಿದ್ದರಿಂದ ಸರಿಯಾಗಿ ಆರೋಗ್ಯವಂತರಾಗಲು ಸಾಧ್ಯವಾಗಲಿಲ್ಲ. ಚಿಕಿತ್ಸೆಯಾದ ಅದೇ ಆಸ್ಪತ್ರೆಯಲ್ಲಿ ಲೋಹಿಯಾ ಅಕ್ಟೋಬರ್ 12ರಂದು ಕಾಲವಾದರು. ಡಾಕ್ಟರ್ ಸಲಹೆ ನೀಡಿದ ಕೂಡಲೇ ಶಸ್ತ್ರಚಿಕಿತ್ಸೆಗೆ ಒಪ್ಪಿಕೊಂಡಿದ್ದರೆ ಈ ದುರಂತ ಸಂಭವಿಸುತ್ತಿರಲಿಲ್ಲ. ‘ಶಸ್ತ್ರಚಿಕಿತ್ಸೆ ತಮ್ಮ ಅಹಿಂಸಾ ತತ್ವಕ್ಕೆ ವಿರೋಧವಾದುದು’ ಎನ್ನುವ ಅವರ ಅಹಿಂಸಾವಾದದ ಗೀಳು ಅವರನ್ನು ಬಲಿತೆಗೆದುಕೊಂಡಿದ್ದು ವಿಷಾದಕರ. ಈ ಅಹಿಂಸಾವಾದ ಹೇಗೆ ನಪುಂಸಕವಾದುದು ಎನ್ನುವುದನ್ನು ಲೋಹಿಯಾರವರೇ ವ್ಯಕ್ತಪಡಿಸುತ್ತಾರೆ. `ನಾಗರಿಕ ಅವಿಧೇಯತೆ ತನ್ನ ದುರ್ಬಲತೆಗಳನ್ನು ತೋರಿಸಿಬಿಟ್ಟಿದೆ. ತೀರಾ ಅಪರೂಪವಾಗಿ ಕೆಲವರ ಹೊರತು ಶತ್ರುವು ಶಕ್ತಿಹೀನವಾಗುತ್ತಾ ಹೋಗುವ ಹಾಗೂ ತನ್ನ ಶಕ್ತಿ ವರ್ಧನೆಯಾಗುತ್ತಾ ಹೋಗುವ ಹೋರಾಟವನ್ನು ಅದು ತೋರಿಸಿಲ್ಲ. ಅದೇ ಅವರು(ಸಶಸ್ತ್ರ ಹೋರಾಟಗಾರರು) ಜನಸಮೂಹದಲ್ಲಿ ಸೈನ್ಯ ಕಟ್ಟಲು ಪ್ರಾರಂಭಿಸಿದಾಗ (ಎಷ್ಟೇ ಗುಪ್ತವಾಗಿ ಅಥವಾ ಸೀಮಿತ ಪ್ರದೇಶದಲ್ಲಿ) ಶತ್ರು ಸೋಲನ್ನನುಭವಿಸುವ ದಿನಗಳನ್ನು ಕಾಣತೊಡಗುತ್ತಾರೆ. ಅಂತಹದು ಅದರಲ್ಲಿ ಮಂಕುಕವಿದ ಕೆಲವರ ಹೊರತು ಅಹಿಂಸಾತ್ಮಕ ಸೈನ್ಯಕ್ಕೆ ಸಾಧ್ಯವಾದುದಿಲ್ಲ.’ ಅಂದರೆ ಅಹಿಂಸಾತ್ಮಕ ಸೈನ್ಯದಲ್ಲಿ ತಮ್ಮ ಶತ್ರು ಸೋಲನ್ನನುಭವಿಸುವ ದಿನಗಳನ್ನು ಕಾಣುವವರು ಮಂಕುಕವಿದ ಜನಗಳೆಂದು ಲೋಹಿಯಾರವರೆ ಹೇಳಿದಂತಾಯಿತು.
1947ರಲ್ಲಿ ಕಾಂಗ್ರೇಸ್ ಅಧ್ಯಕ್ಷ ಆಚಾರ್ಯ ಜೆ. ಬಿ. ಕೃಪಲಾನಿ `ಈ ಭೂಮಿಗೆ ಸ್ವಾತಂತ್ರ್ಯ ತಂದಿಟ್ಟ ಕ್ರಾಂತಿ ಜಗತ್ತಿನ ಇತಿಹಾಸದಲ್ಲಿಯೇ ಅದ್ವಿತೀಯವಾದುದು. ಇಷ್ಟೊಂದು ಅತಿ ಕಡಿಮೆ ಹಿಂಸೆ ರಕ್ತಪಾತವಿಲ್ಲದೆ ಕೋಟಿಗಟ್ಟಲೆ ಮಾನವರ ಬದುಕನ್ನು ಮಾರ್ಪಡಿಸಿದ ಘಟನೆ ಹಿಂದೆಂದೂ ನಡೆದಿಲ್ಲ. ಇದು ಒಂದು ಕ್ರೂರ ಶಕ್ತಿಯ ಮೇಲೆ ಇನೊಂದರ ವಿಜಯವಲ್ಲ.’ ಎಂದು ಜಗತ್ತಿಗೆ ಸಾರಿದರು. ಆಗ ಲೋಹಿಯಾ, `ಅಹಿಂಸೆಯಿಂದ ದೇಶ ಪಡೆದ ಪ್ರಯೋಜನದ ದೃಷ್ಟಿಯಿಂದ ಮಾತಾಡುವವರು ಮರುಕ ಹುಟ್ಟಿಸುವಷ್ಟು ಅಜ್ಞಾನಿಗಳು’ ಎನ್ನುತ್ತಾರೆ. ಇದು ಮೇಲೆ ಹೇಳಿದ ಜೆ.ಬಿ. ಕೃಪಲಾನಿಯವರ ರಕ್ತರಹಿತ ಅಹಿಂಸಾತ್ಮಕ ಕ್ರಾಂತಿಯ ಹೇಳಿಕೆಗೆ ಸರಿಯಾದ ಉತ್ತರವಾಗಿದೆ. ಲೋಹಿಯಾ, `ಎಲ್ಲಾ ಕ್ರೂರತೆ, ಕೊಲೆಗಳು ಹಾಗೂ ಸದ್ಗುಣ ಮತ್ತು ದುರ್ಗುಣಗಳ ಅರ್ಥವೇ ನಾಶವಾಗುವ ಪರಿಸ್ಥಿತಿಯಲ್ಲಿ ವಿಭಜನೆ ಬರದಿದ್ದರೆ, ಭಾರತ ಬಹುಶಃ ಉತ್ತಮ ಸ್ಥಿತಿಯಲ್ಲಿರುತ್ತಿತ್ತು ಎಂದು ಈ ಹಂತದಲ್ಲಿ ನನಗೆ ಹೊಳೆಯುತ್ತೆ, ದೇಶಕ್ಕೆ ಗಾಂಧೀಜಿ ಆಶೀರ್ವಾದಕ್ಕಿಂತ ಒಂದು ಶಾಪ. ನನ್ನ ಈ ವಾದದಿಂದ ಓಡಿಹೋಗುವ ಉದ್ದೇಶವೇನೂ ಇಲ್ಲ. ಗಾಂಧಿ ಇಲ್ಲದಿದ್ದರೆ ಬಹುಶಃ ಭಾರತ ಕೆಲಕಾಲವಾದರೂ ಹೆಚ್ಚು ಸಂತೋಷದಲ್ಲಿರುವ ಸಾಧ್ಯತೆ ನಿಜವಾಗಿಯೂ ಇತ್ತು. ಜಗತ್ತಿನಾದ್ಯಂತ ಪ್ರಸರಿಸದಿದ್ದರೆ ಗಾಂಧೀಜಿಯವರ ಕಾರ್ಯದ ರೀತಿಗಾಗಲಿ, ಮೌಲ್ಯಕ್ಕಾಗಲಿ ಯಾವ ಬೆಲೆಯೂ ಇಲ್ಲ. ಅದು ತನ್ನ ಪ್ರಯತ್ನಗಳನ್ನೇ ಅವಹೇಳನ ಮಾಡುವ ತನ್ನ ವಿಜಯವನ್ನೇ ಹಾಳುಮಾಡುವ ಏನೋ ಮೂಲಭೂತ ಕೊರತೆ ಅಥವಾ ಕೇಡು ಈ ಅಹಿಂಸಾ ನಾಯಕತ್ವಕ್ಕಿದೆ ಎಂದು ಸಂಶಯ ಉಂಟಾಗುತ್ತದೆ.’ ಎನ್ನುತ್ತಾರೆ.
`ಗಾಂಧೀಜಿ ಒಂದಾ ಖೋಟಾ ಅಥವಾ ಪ್ರವಾದಿ’ (ಉಚಿಟಿಜhiರಿi ತಿಚಿs eiಣheಡಿ ಚಿ ಜಿಚಿಞe oಡಿ ಚಿ ಠಿಡಿoಠಿheಣ.) ಎಂದು ಲೋಹಿಯಾ ಹೇಳಿದರು. ಲೋಹಿಯಾ ಹೇಳುವ ಹಾಗೆ ಗಾಂಧೀಜಿ ಖೋಟಾ ಅಲ್ಲ, ಗಾಂಧೀಜಿಯವರ ಬಗ್ಗೆ ಲೋಹಿಯಾರವರ ತಿಳುವಳಿಕೆ ಖೋಟಾ ಆಗಿತ್ತು. ಗಾಂಧೀಜಿ ಗಾಂಧೀಜಿಯೇ, ಒಂದು ವಿಶಿಷ್ಟ ಹಾಗೂ ವಿಚಿತ್ರವಾದ ವ್ಯಕ್ತಿತ್ವ. ಲೋಹಿಯಾ ಸಹ ಖೋಟ ಅಲ್ಲ, ಅದೊಂದು ರೀತಿಯ ವಿಚಿತ್ರ ವ್ಯಕ್ತಿತ್ವ. ಲೋಹಿಯಾ ಬಗೆಗೆ ಲೋಹಿಯಾವಾದಿಗಳ ತಿಳುವಳಿಕೆ ಬಹಳಷ್ಟು ಖೋಟಾ.
ಸ್ವಾತಂತ್ರ್ಯ ಬರುವ ಸಂದರ್ಭದಲ್ಲಿ ಗಾಂಧೀಜಿ ಹೀಗೆ ಹೇಳಿದರು `ನಾನು ನನ್ನ ದಿವಾಳಿತನವನ್ನು ಒಪ್ಪಿಕೊಳ್ಳಲೇ ಬೇಕು, ನಾವು ಮೂವತ್ತು ವರ್ಷಗಳಿಂದಲೂ ಆಚರಿಸಿದ ಅಹಿಂಸೆ ದುರ್ಬಲರದ್ದು. — ನಾನು ಮೂರ್ಖರ ಸ್ವರ್ಗದಲ್ಲಿ ಬದುಕುತ್ತಿಲ್ಲವೇ? ಫಲಕಾರಿಯಾಗದ ಶೋಧನೆಯಲ್ಲಿ ನನ್ನನ್ನು ಅನುಸರಿಸಿ ಎಂದು ನಾನು ಜನರನ್ನು ಯಾಕೆ ಕೇಳಬೇಕು.’ ದೇಶದಾದ್ಯಂತ ಕಾಂಗ್ರೇಸ್ ಪಕ್ಷದ ನೇತೃತ್ವದಲ್ಲಿ ಸ್ವಾತಂತ್ರ್ಯದ ಆಚರಣೆಗಳು ವಿಜೃಂಭಣೆಯಿಂದ ನಡೆಯುತ್ತಿದ್ದರೆ ಗಾಂಧೀಜಿ ದಃಖತಪ್ತರಾಗಿ ಅವರು ತಂಗಿದ್ದ ಕಲ್ಕತ್ತದ ಬೇಲಿಯಾಘಾಟ್ ನಿವಾಸದಲ್ಲಿ ಉಪವಾಸ ಮಾಡುತ್ತಾ ಚರಕ ತಿರುಗಿಸುತ್ತಾ ಕುಳಿತಿದ್ದರು. ಸ್ವಾತಂತ್ರ್ಯದ ಆಚರಣೆಯಲ್ಲಿ ಪಾಲ್ಗೊಳ್ಳಲಿಲ್ಲ. ಅಂದು ಗಾಂಧೀಜಿ ರಾಷ್ಟ್ರದ್ವಜವನ್ನು ಹಾರಿಸಲಿಲ್ಲ. ಭ್ರಮನಿರಸನಗೊಂಡ ಗಾಂಧೀಜಿ ಹೇಳಿದುದೇನೆಂದರೆ: `ನಾವು ಕಳೆದ ಮೂವತ್ತು ವರ್ಷಗಳಿಂದ ಆಚರಿಸಿದುದು ಅಹಿಂಸಾತ್ಮಕ ಪ್ರತಿರೋಧವಲ್ಲ, ಬದಲು ನಿಷ್ಕ್ರಿಯ ಪ್ರತಿರೋಧ’ ಎಂದು.  ತಮ್ಮ 30 ವರ್ಷಗಳ ಆಚರಣೆ ‘ನಿಷ್ಕ್ರಿಯ ಪ್ರತಿರೋಧ’ವಾದುದಾಗಿತ್ತು ಎಂದು ಹೇಳುವುದರ ಮೂಲಕ ಗಾಂಧೀಜಿಯವರು ತಮ್ಮ ಅಹಿಂಸಾವಾದದ ಸತ್ಯ ದರ್ಶನವನ್ನು ನಮಗೆ ಮಾಡಿಸಿದ್ದಾರೆ.
(ಮುಂದುವರಿಯುವುದು)

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಿಮಾಚಲ ಕಾಂಗ್ರೆಸ್​​ನಲ್ಲಿ ಎಲ್ಲವೂ ಸರಿಯಿದೆ: ಡಿಕೆ ಶಿವಕುಮಾರ್

0
ಬಣ ರಾಜಕೀಯದಿಂದ ಪತನವಾಗುವ ಹಂತ ತಲುಪಿದ್ದ ಹಿಮಾಚಲ ಪ್ರದೇಶ ಕಾಂಗ್ರೆಸ್ ಸರ್ಕಾರದಲ್ಲಿ ಎಲ್ಲವೂ ಸರಿ ಇದೆ ಎಂಬ ಸಂದೇಶವನ್ನು ಡಿ.ಕೆ ಶಿವಕುಮಾರ್ ರವಾನಿಸಿದ್ದಾರೆ. ಶಿಮ್ಲಾದಲ್ಲಿ ಗುರುವಾರ ಸಂಜೆ ವಿಕ್ರಮಾದಿತ್ಯ ಸಿಂಗ್ ಹಾಗೂ ಪ್ರತಿಭಾ ಸಿಂಗ್...