Homeಮುಖಪುಟಕೇಂದ್ರ ಬಜೆಟ್ 2023: ಶ್ರೀಮಂತರಿಗಾಗಿ, ಶ್ರೀಮಂತರಿಂದ, ಶ್ರೀಮಂತರಿಗೋಸ್ಕರ

ಕೇಂದ್ರ ಬಜೆಟ್ 2023: ಶ್ರೀಮಂತರಿಗಾಗಿ, ಶ್ರೀಮಂತರಿಂದ, ಶ್ರೀಮಂತರಿಗೋಸ್ಕರ

- Advertisement -
- Advertisement -

ಕಳೆದ ಡಿಸೆಂಬರ್ 2022ರ CMIE (Centre for monitoring Indian economy) ವರದಿ ಪ್ರಕಾರ ಭಾರತದಲ್ಲಿ ಗ್ರಾಮೀಣ ಭಾಗದ ನಿರುದ್ಯೋಗ ಶೇ.8.3 ಮತ್ತು ನಗರ ಭಾಗದ ನಿರುದ್ಯೋಗ ದರ ಶೇ.10. ಇದು ಸ್ವತಂತ್ರ ಭಾರತದ ಇತಿಹಾಸದಲ್ಲೇ ಅತಿ ಹೆಚ್ಚಿನ ನಿರುದ್ಯೋಗ ದರ.

ಅಂದರೆ, ಭಾರತದಲ್ಲಿ ದಿನೇದಿನೇ ನಿರುದ್ಯೋಗ ಹೆಚ್ಚುತ್ತಿದೆ ಎಂಬುದು ನಿಚ್ಚಳವಾಗಿದೆ.

ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ 121 ದೇಶಗಳಲ್ಲಿ ಭಾರತದ ಸ್ಥಾನ 107. ಹಸಿವಿನಿಂದ ನರಳುತ್ತಿರುವ ಶೇಕಡಾವಾರು ಜನಸಂಖ್ಯೆಯನ್ನು ಲೆಕ್ಕಕ್ಕೆ ತೆಗೆದುಕೊಂಡಾಗ ಭಾರತ ನೆರೆಯ ಶ್ರೀಲಂಕಾ, ನೇಪಾಳ, ಬಾಂಗ್ಲಾದೇಶಗಳಿಗಿಂತ ದುಸ್ಥಿತಿಯಲ್ಲಿದೆ. ಅಪೌಷ್ಟಿಕತೆಯಿಂದ ನರಳುತ್ತಿರುವ ಮಕ್ಕಳು ಮತ್ತು ಮಹಿಳೆಯರ ಸಂಖ್ಯೆ ಆಫ್ರಿಕಾದ ಬಡರಾಷ್ಟ್ರಗಳಿಗಿಂತ ಇಂಡಿಯಾದಲ್ಲಿ ಹೆಚ್ಚಾಗಿದೆ. ಮೇ 2022ರ ಯೂನಿಸೆಫ್ ಅಂಕಿಅಂಶಗಳ ಪ್ರಕಾರ ತೀವ್ರ ಅಪೌಷ್ಟಿಕತೆಯಿಂದ ನರಳುತ್ತಿರುವ ಮಕ್ಕಳ ಸಂಖ್ಯೆ ಅತಿ ಹೆಚ್ಚು ಇರುವುದು ಇಂಡಿಯಾದಲ್ಲಿ.

ಆಕ್ಸ್‌ಫಾಮ್ 2023ರ ವರದಿಯಂತೆ ಇಂಡಿಯಾದಲ್ಲಿ ಶೇ.1 ಶ್ರೀಮಂತರು ಈ ದೇಶದ ಶೇ.40 ಆಸ್ತಿಯನ್ನು ಹೊಂದಿದ್ದಾರೆ.

ವಾಸ್ತವ ಹೀಗಿರುವಾಗ ಕೇಂದ್ರ ಸರ್ಕಾರದ ಬಜೆಟ್ ಯಾವುದರ ಮೇಲೆ ಹೆಚ್ಚಿನ ಗಮನ ಕೊಡಬೇಕಿತ್ತು? ಬಜೆಟ್ ಅಂದರೆ ನಮಗೆಲ್ಲಾ ತಿಳಿದಿರುವಂತೆ ಆಯಾ ವರ್ಷದ ಖರ್ಚು ಮತ್ತು ಆದಾಯದ ಸ್ಟೇಟ್‌ಮೆಂಟ್. ಯಾವುದಕ್ಕೆ ಎಷ್ಟು ಹಣ ಕೊಡಲಾಗುತ್ತಿದೆ ಎಂಬುದರ ಮೇಲೆ ಬಜೆಟ್‌ನ ಮತ್ತು ಆ ಮೂಲಕ ಕೇಂದ್ರ ಸರ್ಕಾರದ ಆದ್ಯತೆಯನ್ನು ಸುಲಭವಾಗಿ ಗುರುತಿಸಬಹುದು.

ಮೇಲಿನ ವಾಸ್ತವ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಬಜೆಟ್‌ನಲ್ಲಿ ಉದ್ಯೋಗ ಸೃಷ್ಟಿಗೆ ಮತ್ತು ಎಲ್ಲರಿಗೂ ಪೌಷ್ಟಿಕ ಆಹಾರದ ಲಭ್ಯತೆಯನ್ನು ಖಚಿತಪಡಿಸಿ, ಅಪೌಷ್ಟಿಕತೆ ನಿವಾರಣೆಗೆ ಒತ್ತುನೀಡಬೇಕಾಗಿತ್ತು. ದೇಶದಲ್ಲಿ ಬಡವ ಶ್ರೀಮಂತರ ನಡುವಿನ ಅಂತರ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬಡವರ ಆದಾಯ ಮತ್ತು ಶ್ರೀಮಂತರ ಮೇಲಿನ ತೆರಿಗೆ ಹೆಚ್ಚಿಸುವತ್ತ ಬಜೆಟ್ ಕ್ರಮ ಕೈಗೊಳ್ಳಬೇಕಿತ್ತು.

ಆದರೆ, ಈ ಬಾರಿಯ ಬಜೆಟ್‌ನಲ್ಲಿ ಹಣದ ಹಂಚಿಕೆಯನ್ನು ಗಮನಿಸಿದಾಗ, ಅತ್ಯಂತ ಸ್ಪಷ್ಟವಾಗಿ ಈ ಬಜೆಟ್ ಶ್ರೀಮಂತರ ಪರವಾದ ಮತ್ತು ಬಡವರನ್ನು ಮತ್ತಷ್ಟು ಬಡವರನ್ನಾಗಿಸುವ ಬಜೆಟ್ ಎಂದು ಗೊತ್ತಾಗುತ್ತದೆ.

ಏರುತ್ತಿರುವ ನಿರುದ್ಯೋಗದ ಹಿನ್ನೆಲೆಯಲ್ಲಿ, ಹಲವು ಆರ್ಥಿಕ ತಜ್ಞರ ಅಭಿಪ್ರಾಯದಂತೆ ಈ ಬಾರಿಯ ಬಜೆಟ್‌ನಲ್ಲಿ ನಗರ ಉದ್ಯೋಗ ಖಾತರಿ ಯೋಜನೆಯನ್ನು ಆರಂಭಿಸಬೇಕಾಗಿತ್ತು. ಆದರೆ ನಗರ ಉದ್ಯೋಗ ಖಾತರಿ ಯೋಜನೆ ಆರಂಭಿಸುವುದಿರಿಲಿ, ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಹಣಕ್ಕೇ ಕತ್ತರಿ ಹಾಕಲಾಗಿದೆ. (ಹೋದವರ್ಷದ ರೂ. 89.000 ಕೋಟಿಯಿಂದ -Revised estimate- ಈ ವರ್ಷ ಕೇವಲ ರೂ 60,000 ಕೋಟಿಗೆ.)

ವಿಶ್ವಬ್ಯಾಂಕ್ ಆರ್ಥಿಕ ತಜ್ಞರ ಪ್ರಕಾರ ಕನಿಷ್ಠ ರೂ.3.4 ಲಕ್ಷಕೋಟಿಯಷ್ಟು (1.6% of GDP) ಹಣವನ್ನು ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ಮೀಸಲಿಟ್ಟರೆ ಮಾತ್ರ ಅಗತ್ಯವಿರುವ 8 ಕೋಟಿಗಿಂತ ಹೆಚ್ಚು ಕುಟುಂಬಗಳಿಗೆ ವಾರ್ಷಿಕ ನೂರು ದಿನಗಳಷ್ಟು ಉದ್ಯೋಗ ನೀಡಲು ಸಾಧ್ಯ. ಈಗ ಹಂಚಿಕೆ ಮಾಡಿರುವ ರೂ.60,000 ಕೋಟಿಗಳಿಂದ ಪ್ರತಿ ಕುಟುಂಬಕ್ಕೆ ವಾರ್ಷಿಕ 20 ದಿನಗಳಷ್ಟು ಕೆಲಸ ಕೊಡಲು ಕೂಡ ಸಾಧ್ಯವಿಲ್ಲ.

ಇದನ್ನೂ ಓದಿ: ‘ಅಂಬೇಡ್ಕರ್‌ರನ್ನು ಗುಂಡಿಟ್ಟು ಕೊಲ್ಲುತ್ತಿದ್ದೆ’: ನಾಲಿಗೆ ಹರಿಬಿಟ್ಟ ಹಿಂದುತ್ವ ನಾಯಕ; ಕ್ರಮಕ್ಕೆ BSP ನಾಯಕರ ಆಗ್ರಹ

ಸರ್ಕಾರ ಈ ಬಾರಿ ಅತಿ ಹೆಚ್ಚು, ಅಂದರೆ ರೂ.10 ಲಕ್ಷ ಕೋಟಿ ಹಣವನ್ನು ರಸ್ತೆ, ಬಂದರು, ವಿಮಾನ ನಿಲ್ದಾಣ, ರೈಲ್ವೆಯಂತಹ ಮೂಲಸೌಕರ್ಯ ಅಭಿವೃದ್ಧಿಗೆ ಹೂಡಿಕೆ ಮಾಡುತ್ತಿದ್ದು ಅದರಿಂದ ಹೆಚ್ಚಿನ ಉದ್ಯೋಗ ಸೃಷ್ಟಿಯಾಗುತ್ತದೆಯೆಂದು ಹೇಳುತ್ತಿದೆ. ಆದರೆ, ಕಳೆದ ವರ್ಷ ಮೂಲಸೌಕರ್ಯ ಅಭಿವೃದ್ದಿಗೆ ರೂ.7.5 ಲಕ್ಷ ಕೋಟಿ (2021ರ ಬಜೆಟ್‌ಗಿಂತ 35% ಹೆಚ್ಚು) ಹಣ ಹಂಚಿಕೆ ಮಾಡಲಾಗಿದ್ದರೂ 2022ರ ಕೊನೆಯಲ್ಲಿ ಅತಿಹೆಚ್ಚು ನಿರುದ್ಯೋಗ ತಾಂಡವವಾಡುತ್ತಿರುವುದು ಬೇರೆ ಕಥೆಯನ್ನು ಹೇಳುತ್ತದೆ; ಈ ರೀತಿಯ ಬಂಡವಾಳ ಹೂಡಿಕೆ ಉದ್ಯೋಗ ಸೃಷ್ಟಿ ಮಾಡಿಲ್ಲವೆಂದು ಸ್ಪಷ್ಟಪಡಿಸುತ್ತಿದೆ. ಕಾರಣ, ಇತ್ತೀಚಿನ ವರ್ಷಗಳಲ್ಲಿ ಈ ರೀತಿಯ ಮೂಲಸೌಕರ್ಯ ಅಭಿವೃದ್ದಿಯ ಕೆಲಸಗಳಲ್ಲಿ ಆದಷ್ಟೂ ದೊಡ್ಡ ಯಂತ್ರಗಳನ್ನು ಬಳಸಿಕೊಳ್ಳುತ್ತಿರುವುದರಿಂದ ಉದ್ಯೋಗ ಸೃಷ್ಟಿ ಪ್ರಮಾಣ ಜಾಸ್ತಿ ಇರುವುದಿಲ್ಲ. ಆದುದರಿಂದ, ಈ ರೂ.10 ಲಕ್ಷ ಕೋಟಿಯ ಹೂಡಿಕೆ ಮುಂದಿನ ವರ್ಷಗಳಲ್ಲಿ ಖಾಸಗಿ ಉದ್ಯಮಿಗಳಿಗೆ ಅನುಕೂಲ ಮಾಡಿಕೊಡಲಿದೆಯೇ ಹೊರತು ಅಗತ್ಯವಿರುವಷ್ಟು ಉದ್ಯೋಗ ಸೃಷ್ಟಿ ಮಾಡುವುದಿಲ್ಲ.

ಇಂತಹ ಕಟು ವಾಸ್ತವದಲ್ಲಿ, ಒಂದು ಕಡೆ ನಗರ ಉದ್ಯೋಗ ಖಾತ್ರಿ ಯೋಜನೆಯಂಥದ್ದನ್ನೇನೂ ಮಾಡದೆ, ಮತ್ತೊಂದು ಕಡೆ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ಭಾರೀ ಹಣ ಕಡಿತ ಮಾಡಿರುವುದು ಕೇಂದ್ರ ಸರ್ಕಾರದ ಬಜೆಟ್ ಶ್ರೀಮಂತ ಉದ್ಯಮಪತಿಗಳ ಪರವಾಗಿದೆ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತಿದೆ.

ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತದ ಸ್ಥಾನ ಮತ್ತು ದೇಶದಲ್ಲಿ ಅಪೌಷ್ಟಿಕತೆಯ ಪರಿಸ್ಥಿತಿಯ ಹಿನ್ನೆಲೆಯಲ್ಲಿ ದೇಶದ ಬಹುಸಂಖ್ಯಾತರಿಗೆ (ಈ ದೇಶದಲ್ಲಿ ಮಧ್ಯಮ ವರ್ಗ ಕೂಡ ಅಪೌಷ್ಟಿಕತೆಯಿಂದ ನರಳುತ್ತಿದೆ) ಪೌಷ್ಟಿಕ ಆಹಾರ ಲಭ್ಯತೆಯನ್ನು ಖಾತರಿಪಡಿಸುವ ಯೋಜನೆಗೆ ಇನ್ನೂ ಹೆಚ್ಚಿನ ಹಣ ಹಂಚಿಕೆ ಮಾಡಬೇಕಾಗಿತ್ತು. ಆದರೆ, ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಆಹಾರ ಸಬ್ಸಿಡಿಗೆ ಕಳೆದ ವರ್ಷ ಕೊಟ್ಟಿದ್ದ ಹಣದಲ್ಲಿ ರೂ.90000 ಕೋಟಿಯಷ್ಟು ಭಾರೀ ಕಡಿತ ಮಾಡಿರುವುದು ಈ ಸರ್ಕಾರದ ಆದ್ಯತೆ ಶ್ರೀಮಂತರೇ ಹೊರತು ಬಡವರಲ್ಲ ಎಂಬುದನ್ನು ಮತ್ತೆಮತ್ತೆ ಎತ್ತಿತೋರಿಸುತ್ತದೆ.

ಕಳೆದ ವರ್ಷ ಆಹಾರ ಸಬ್ಸಿಡಿಗೆ ರೂ.2,87,000 ಕೋಟಿ ವ್ಯಯಿಸಿದ್ದರೆ (Revised estimate) ಈ ಬಜೆಟ್‌ನಲ್ಲಿ ಹಂಚಿಕೆ ಮಾಡಿರುವುದು ಕೇವಲ ರೂ.1.97.000 ಕೋಟಿ. ಇದರಿಂದ ರೈತರು ಬೆಳೆದ ಆಹಾರ ಧಾನ್ಯಗಳನ್ನು ಸರ್ಕಾರ ಖರೀದಿ ಮಾಡುವ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿ, ರೈತರ ಆದಾಯವೂ ಇದರಿಂದ ಗಣನೀಯವಾಗಿ ಕುಸಿಯಲಿದೆ.

ಈ ದೇಶದ ರೈತರ ಪೈಕಿ ಶೇ.82ರಷ್ಟು ರೈತರು ಎರಡು ಹೆಕ್ಟೇರಿಗಿಂತ ಕಡಿಮೆ ಜಮೀನು ಹೊಂದಿರುವ ಸಣ್ಣ ರೈತರಾಗಿದ್ದಾರೆ. ಅವರೂ ಸೇರಿದಂತೆ ಎಲ್ಲಾ ರೈತರಿಗೆ ಕೊಡುತ್ತಿದ್ದ ರಸಗೊಬ್ಬರ ಸಬ್ಸಿಡಿಯಲ್ಲಿ ಕಳೆದ ವರ್ಷಕ್ಕಿಂತ ಶೇ.21ರಷ್ಟು ಹಣ ಕಡಿತ ಮಾಡಲಾಗಿದೆ. ರೈತರು ಬೆಳೆದ ಬೆಳೆಗಳ ಬೆಲೆಗಳು ಮಾರುಕಟ್ಟೆಯಲ್ಲಿ ದಿಢೀರ್ ಕುಸಿತಗೊಂಡ ಸನ್ನಿವೇಶದಲ್ಲಿ ಅವರಿಗೆ ಬೆಂಬಲ ಬೆಲೆಯ ರೂಪದಲ್ಲಿ ಸಹಾಯ ಮಾಡಲು Market intervention scheme ಅಡಿಯಲ್ಲಿ ಕಳೆದ ವರ್ಷ ಕೊಡಲಾಗಿದ್ದ ರೂ.1500 ಕೋಟಿ ರೂಪಾಯಿಗಳನ್ನು ಈ ಬಜೆಟ್‌ನಲ್ಲಿ ಕೇವಲ ಒಂದು ಲಕ್ಷ ರೂಪಾಯಿಗೆ ಇಳಿಸಲಾಗಿದೆ. ಹೀಗೆ ಮಾಡಿ ರೈತರನ್ನು ಅವಮಾನಿಸುವುದಕ್ಕಿಂತ ಆ ಯೋಜನೆಯನ್ನೇ ರದ್ದುಮಾಡುವುದು ಬೆಟರ್ ಆಗಿತ್ತಲ್ಲವೇ ಎಂದು ಯಾರಿಗೇ ಆದರೂ ಅನಿಸದೇ ಇರದು.

ಆರೋಗ್ಯ ಕ್ಷೇತ್ರಕ್ಕೆ ಕಳೆದ ವರ್ಷಕ್ಕಿಂತ ಹತ್ತಿರಹತ್ತಿರ ಮೂರು ಸಾವಿರ ಕೋಟಿಯಷ್ಟು ಹಂಚಿಕೆಯನ್ನು ಹೆಚ್ಚಿಸಲಾಗಿದ್ದು (Approximately from Rs. 86,606 crores to 88,956 crores) ಈ ಹೆಚ್ಚಳ ಕೇವಲ ಶೇ.2.7ರಷ್ಟಾಗಿದೆ. ಆದರೆ 5.5% ಹಣದುಬ್ಬರವನ್ನು ಲೆಕ್ಕಕ್ಕೆ ತೆಗೆದುಕೊಂಡರೆ ಹೋದವರ್ಷಕ್ಕಿಂತ ಅಂದಾಜು ಶೇ.2.5ರಷ್ಟು ಕಡಿಮೆ ಹಣವನ್ನು ಆರೋಗ್ಯ ಕ್ಷೇತ್ರಕ್ಕೆ ಕೊಟ್ಟಂತಾಗಿದೆ.

ಶಿಕ್ಷಣ ಕ್ಷೇತ್ರಕ್ಕೆ ರೂ.1,12,000 ಕೋಟಿ (ಕಳೆದ ವರ್ಷ ರೂ.99,000 ಕೋಟಿ) ಕೊಟ್ಟಿದ್ದರೂ ಇದು GDPಯ ಕೇವಲ ಶೇ.0.5 ಆಗಿದೆ.

ಬಾಜಾಭಜಂತ್ರಿ ಬಾರಿಸಿಕೊಂಡು ಜಾರಿ ತಂದ NEP (New education policy) ಪ್ರಕಾರವೇ ದೇಶ ಶೈಕ್ಷಣಿಕವಾಗಿ ಮುಂದುವರೆಯಬೇಕಾದರೆ ಶಿಕ್ಷಣಕ್ಕೆ GDPಯ ಕನಿಷ್ಟ 6% ಹಣ ಬಜೆಟ್‌ನಲ್ಲಿ ಮೀಸಲಿಡಬೇಕಿದೆ; ತಾನೇ ಜಾರಿ ತಂದ NEPಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಈ ಸರ್ಕಾರ ಪ್ರಯತ್ನಿಸುತ್ತಿಲ್ಲವೆಂಬುದು ಅತ್ಯಂತ ಸ್ಪಷ್ಟವಾಗುತ್ತಿದೆ.

ಸರ್ಕಾರಿ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟಕ್ಕೆ ಕಳೆದ ವರ್ಷಕ್ಕಿಂತ ಸುಮಾರು ರೂ.800 ಕೋಟಿಗಳಷ್ಟು ಕಡಿತ ಮಾಡಲಾಗಿದೆ.

ಹೀಗೆ ಒಂದು ಕಡೆ ಉದ್ಯೋಗ ಸೃಷ್ಟಿಗೂ ಒತ್ತುಕೊಡದೆ, ರೈತರ ಆದಾಯ ವೃದ್ಧಿಯನ್ನೂ ಕಡೆಗಣಿಸಿ, ಬಡವರ ಬದುಕಿನ ಮಟ್ಟದ ಸುಧಾರಣೆಗೂ ಕವಡೆ ಕಿಮ್ಮತ್ತು ನೀಡದ ಈ ಬಜೆಟ್ ಶ್ರೀಮಂತರ ವೆಚ್ಚವನ್ನು ಕಡಿಮೆ ಮಾಡಿ ಅವರಿಗೆ ಮತ್ತಷ್ಟು ಮಗದಷ್ಟು ಅನುಕೂಲಗಳನ್ನು ಮಾಡಿಕೊಡುವ ಕಡೆ ಗಮನಹರಿಸಿದೆ.

ದೊಡ್ಡ ಕಾರ್ಪೋರೆಟ್ ಕಂಪನಿಗಳಿಗೆ ಅನುಕೂಲ ಮಾಡಿಕೊಡುವುದನ್ನು ಈ ಬಜೆಟ್ ಮುಂದುವರಿಸಿದೆ. (ಉದಾಹರಣೆಗೆ 2019ರಲ್ಲಿ ಕಾರ್ಪೋರೇಟ್ ಟ್ಯಾಕ್ಸ್‌ಅನ್ನು 30%ನಿಂದ 22%ಕ್ಕೆ ಇಳಿಸಿದ್ದನ್ನು ನೆನಪಿಸಿಕೊಳ್ಳಬಹುದು.) ಅವರುಗಳು ಹೆಚ್ಚು ಬಂಡವಾಳ ಹೂಡಿಕೆ ಮಾಡಿ, ಅದರಿಂದ ಉದ್ಯೋಗ ಸೃಷ್ಟಿ ಆಗುತ್ತದೆ ಎಂಬ ನಂಬಿಕೆಯೊಂದಿಗೆ ಸರ್ಕಾರ ಕಳೆದ ಎಂಟು ವರ್ಷಗಳಿಂದ ಕಾರ್ಪೋರೆಟ್ ಕಂಪನಿಗಳಿಗೆ ಅನುಕೂಲಗಳ ಹೊಳೆಯನ್ನೇ ಹರಿಸುತ್ತಿದೆ. ಆದರೆ, ಅದಕ್ಕೆ ತಕ್ಕ ಹಾಗೆ ಖಾಸಗಿ ಬಂಡವಾಳ ಹೂಡಿಕೆಯಾಗಲೀ, ಉದ್ಯೋಗ ಸೃಷ್ಟಿಯಾಗಲೀ ದೊಡ್ಡ ಕಾರ್ಪೋರೆಟ್ ಕಂಪನಿಗಳಿಂದ ಆಗಿಲ್ಲ ಎಂಬುದು ವಾಸ್ತವ.

ಈ ಬಾರಿಯೂ ವಾರ್ಷಿಕ ಐದು ಕೋಟಿಗಿಂತ ಹೆಚ್ಚು ಆದಾಯವಿರುವ ಶ್ರೀಮಂತರ ಆದಾಯ ತೆರಿಗೆ ಮೇಲೆ ವಿಧಿಸುತ್ತಿದ್ದ ಸೆಸ್‌ಅನ್ನು 37%ರಿಂದ 25%ಕ್ಕೆ ಇಳಿಸಲಾಗಿದೆ.

ಒಟ್ಟಾರೆಯಾಗಿ, ಈ ಬಾರಿಯ ಬಜೆಟ್‌ನಲ್ಲಿ ಅತ್ಯಂತ ಸ್ಪಷ್ಟವಾಗಿ ಸರ್ಕಾರ ತಾನು ಉಳ್ಳವರ ಪರವೆಂದು ತೋರಿಸಿಕೊಂಡಿದೆ.

ಡಾ. ಬಿ.ಸಿ. ಬಸವರಾಜು

ಡಾ. ಬಿ.ಸಿ. ಬಸವರಾಜು
ಎಂಜಿನಿಯರಿಂಗ್ ವಿದ್ಯಾಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸುತ್ತಿರುವ ಬಸವರಾಜು ಹಾಡುಗಾರರೂ, ಪ್ರಚಲಿತ ವಿದ್ಯಮಾನಗಳಿಗೆ ಲೇಖನಗಳು ಮತ್ತು ವಿಡಿಯೋಗಳ ಮೂಲಕ ನಿರಂತರವಾಗಿ ಪ್ರತಿಕ್ರಿಯಿಸುತ್ತಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...