ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ವೆಂಕಟರಮಣ ದೇವಸ್ಥಾನದಲ್ಲಿ ಪರಿಶಿಷ್ಟ ಜಾತಿ ಸಮುದಾಯದವರ ಮದುವೆಗೆ ಕಲ್ಯಾಣ ಮಂಟಪ ನೀಡದೆ ಅಸ್ಪೃಶ್ಯತೆ ಆಚರಿಸಲಾಗಿದೆ ಎಂದು ಆರೋಪಿಸಿ ದೂರು ದಾಖಲಾಗಿದ್ದು, ತಹಶೀಲ್ದಾರ್ ಕಚೇರಿ ಎದುರು ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿವೆ.
ಗುಡಿಬಂಡೆ ತಾಲ್ಲೂಕಿನ ಬ್ರಾಹ್ಮಣರಹಳ್ಳಿಯ ಪರಿಶಿಷ್ಟ ಜಾತಿ ಸಮುದಾಯದ ವೆಂಕಟರಾಯಪ್ಪನವರ ಪುತ್ರಿ ವೆಂಕಟಲಕ್ಷ್ಮಿ ಮತ್ತು ಬಾಗೇಪಲ್ಲಿಯ ಮಹೇಶ್ ಎಂಬುವವರ ನಡುವೆ ನವೆಂಬರ್ 3ರಂದು ವಿವಾಹ ನಿಶ್ಚಯವಾಗಿತ್ತು. ಅದಕ್ಕೂ 15 ದಿನ ಮೊದಲೇ ವೆಂಕಟಲಕ್ಷ್ಮಿಯ ಸಹೋದರ ಆವುಲಕೊಂಡಪ್ಪ ಎಂಬುವವರು ಗುಡಿಬಂಡೆಯ ವೆಂಕಟರಮಣ ದೇವಾಲಯ ಸಮಿತಿಯ ಕಾರ್ಯದರ್ಶಿ ಮಾಚಾವಲಹಳ್ಳಿ ವೆಂಕಟರಾಯಪ್ಪನವರ ಬಳಿ ತೆರಳಿ ನನ್ನ ತಂಗಿಯ ವಿವಾಹಕ್ಕೆ ದೇವಾಲಯ ಕಲ್ಯಾಣ ಮಂಟಪ್ಪವನ್ನು ಬಾಡಿಗೆಗೆ ನೀಡಬೇಕೆಂದು ಮನವಿ ಮಾಡಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಆದರೆ ಟ್ರಸ್ಟ್ ಕಾರ್ಯದರ್ಶಿ ಮಾಚಾವಲಹಳ್ಳಿ ವೆಂಕಟರಾಯಪ್ಪರವರು ಅಂದು ಬೇರೆ ಮದುವೆ ನಿಗಧಿಯಾಗಿದೆ ಎಂದು ಸುಳ್ಳು ಹೇಳಿರುತ್ತಾರೆ. ವೆಂಕಟಲಕ್ಷ್ಮಿ ಮತ್ತು ಮಹೇಶ್ ಮದುವೆಯ ಲಗ್ನ ಪತ್ರಿಕೆಯಲ್ಲಿ ಅದೇ ಕಲ್ಯಾಣ ಮಂಟಪದ ಹೆಸರು ಸಹ ಮುದ್ರಿಸಿರುತ್ತಾರೆ. ಆದರೆ ಅಂದು ದೇವಾಲಯ ಬೀಗ ಹಾಕಿ ದಲಿತರ ಮದುವೆಗೆ ಅವಕಾಶ ನೀಡಿಲ್ಲ. ಅನಿವಾರ್ಯವಾಗಿ ದೇವಾಲಯದ ಹೊರಗೆ ಮದುವೆ ಮಾಡಲಾಗಿದೆ ಎಂದು ತಹಶೀಲ್ದಾರ್‌ರವರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.
ಸದರಿ ದೇವಸ್ಥಾನವು ಮುಜರಾಯಿ ಇಲಾಖೆಗೆ ಸೇರಿದ್ದು, ಎಲ್ಲಾ ಜಾತಿಯವರಿಗೂ ಬಳಕೆಯ ಹಕ್ಕಿದೆ ಎಂದು ಕಾನೂನು ಹೇಳುತ್ತದೆ. ಆದರೂ ನವೆಂಬರ್ 3 ರಂದು ಬೇರೆ ಯಾವುದೇ ಮದುವೆ ಇಲ್ಲದಿದ್ದರೂ ಸಹ ಉದ್ದೇಶಪೂರ್ವಕವಾಗಿ ದಲಿತರ ಮದುವೆಗೆ ಅವಕಾಶ ನೀಡದೆ ಅಸ್ಪೃಶ್ಯತೆ ಆಚರಿಸಲಾಗಿದೆ ಎಂದು ವಧುವಿನ ಸಹೋದರ ಆವುಲಕೊಂಡಪ್ಪ ತಹಶೀಲ್ದಾರ್‌ರವರಿಗೆ ದೂರು ನೀಡಿದ್ದಾರೆ.

ದೂರು ಸ್ವೀಕರಿಸಿರುವ ತಹಶೀಲ್ದಾರ್ ಸಿಗ್ಬತ್ ಉಲ್ಲಾರವರು, “ದೂರು ಪರಿಶೀಲಿಸಿದಾಗ ಮೇಲ್ನೋಟಕ್ಕೆ ತಪ್ಪು ನಡೆದಿರುವುದು ಕಂಡುಬಂದಿದೆ. ಹಾಗಾಗಿ ಟ್ರಸ್ಟ್ ಕಾರ್ಯದರ್ಶಿ ಮಾಚಾವಲಹಳ್ಳಿ ವೆಂಕಟರಾಯಪ್ಪನವರಿಗೆ ಕಾರಣ ಕೇಳಿ ನೋಟಿಸ್ ಕಳಿಸಲಾಗಿದೆ. ಅವರಿಂದ ಮಾಹಿತಿ ಬಂದ ನಂತರ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು” ಎಂದಿದ್ದಾರೆ.
ದಲಿತ ಸಂಘರ್ಷ ಸಮಿತಿಯ ಮುಖಂಡರು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಮತ್ತು ಗುಡಿಬಂಡೆ ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿಗಳಿಗೂ ಸಹ ದೂರು ಸಲ್ಲಿಸಿದ್ದಾರೆ. ಆನಂತರ ಆರೋಪಿಗಳ ವಿರುದ್ದ ಕ್ರಮ ತೆಗೆದುಕೊಳ್ಳಬೇಕು ಮತ್ತು ಅಸ್ಪೃಶ್ಯತೆ ಆಚರಣೆ ನಿಲ್ಲಿಸಬೇಕು ಎಂದು ಆಗ್ರಹಿಸಿ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ದಸಂಸ ಮುಖಂಡರಾದ ಜಿ.ವಿ ಗಂಗಪ್ಪ, ಗುಡಿಬಂಡೆ ತಾಲ್ಲೂಕು ಸಂಚಾಲಕ ರಮಣ, ಇಸ್ಕೂಲಪ್ಪ, ಆದಿನಾರಾಯಣ, ನರಸಿಂಹಮೂರ್ತಿ, ಅಮರಾವತಿ, ಗಂಗರಾಜು, C. ಮುನಿಯಪ್ಪ, M. ವೆಂಕಟ ರಾಯಪ್ಪ ಉಪಸ್ಥಿತರಿದ್ದರು.
ಇದನ್ನೂ ಓದಿ; ಬೆಂಗಳೂರು: ದೇವಾಲಯಗಳಲ್ಲಿ ಚಪ್ಪಲಿ ಕಾಯುವ ಕೆಲಸ ಪರಿಶಿಷ್ಟರಿಗೆ ಮೀಸಲು; ವಿರೋಧದ ಬಳಿಕ ಟೆಂಡರ್ ರದ್ದು



ದಲಿತರು ಕಲ್ಯಾಣ ಮಂಟಪದಲ್ಲಿ ಮದುವೆ ಆಗುವಂತಿಲ್ಲ ತಪ್ಪು. . ಪಕ್ಕದಲ್ಲಿ ಕುಳಿತರೆ ತಪ್ಪು. ಪ್ರೇಮ ವಿವಾಹ ತಪ್ಪು.ಸಂಭ್ರಮ ಆಚರಣೆ ಮಾಡಿದರೆ ತಪ್ಪು. ಶಾಲೆಯಲ್ಲಿ ಅಡಿಗೆ ಮಾಡಿದರೆ ತಪ್ಪು……..!