ಬೆಂಗಳೂರಿನ ಜಾಲಹಳ್ಳಿ ಸಮೀಪದ ಖಾಸಗಿ ಶಾಲೆಯೊಂದರಲ್ಲಿ 4ನೇ ತರಗತಿಯ ವಿದ್ಯಾರ್ಥಿನಿಯೊರ್ವಳು ಪ್ರಜ್ಞೆ ತಪ್ಪಿ ಅಸಹಜ ರೀತಿಯಲ್ಲಿ ಸಾವಿಗೀಡಾಗಿರುವ ದುರಂತ ಸಂಭವಿಸಿದೆ.
ಶಾಲಾ ಶಿಕ್ಷಕಿ ಹಲ್ಲೆ ನಡೆಸಿದ್ದರಿಂದಲೇ ತಮ್ಮ ಮಗಳು ಸಾವನಪ್ಪಿದ್ದಳೆ ಎಂದು ವಿದ್ಯಾರ್ಥಿನಿಯ ಪೋಷಕರು ಆರೋಪಿಸಿದ್ದು ಈ ಕುರಿತು ಗಂಗಮ್ಮನಗುಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಸೆಕ್ಷನ್ ಸಿಆರ್‌ಪಿಸಿ 174 ಸಿ ಅಡಿಯಲ್ಲಿ ಅನುಮಾನಸ್ಪದ ಸಾವು ಪ್ರಕರಣ ದಾಖಲಿಸಿದ್ದಾರೆ.
ರಾಮಚಂದ್ರಪುರದ ನಿವಾಸಿ ನಾಗೇಂದ್ರ ಮತ್ತು ಸರಸ್ವತಿಯವರ ಪುತ್ರಿ ನಿಶ್ಚಿತ ಎಂಬ ವಿದ್ಯಾರ್ಥಿನಿ ಜಾಲಹಳ್ಳಿ ಸಮೀಪದ ಆರ್‌ಡಿ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಶುಕ್ರವಾರ ಮಧ್ಯಾಹ್ನ 1.30ರ ಸುಮಾರಿಗೆ ಪ್ರಜ್ಞೆ ತಪ್ಪಿ ಕುಸಿದಿಬಿದ್ದದ್ದಾಳೆ. ಆಡಳಿತ ಮಂಡಳಿಯು ವಿದ್ಯಾರ್ಥಿನಿಯನ್ನು ಕೂಡಲೇ ಆಸ್ಪತ್ರೆಗೆ ಸೇರಿಸಿದ್ದರೂ ಸಹ ದಾರಿ ಮಧ್ಯದಲ್ಲಿಯೇ ಬಾಲಕಿ ಕೊನೆಯುಸಿರೆಳೆದಿದ್ದಾಳೆ. ದೇಹದ ಮೇಲೆ ಯಾವುದೇ ಗಾಯದ ಗುರುತುಗಳಿಲ್ಲ ಎಂದು ವೈದ್ಯರು ಹೇಳಿರುವುದಾಗಿ ಡೆಕ್ಕನ್ ಹೆರಾಲ್ಡ್ ಪತ್ರಿಕೆ ವರದಿ ಮಾಡಿದೆ.
ವಿದ್ಯಾರ್ಥಿನಿಯ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಮರಣೋತ್ತರ ಪರೀಕ್ಷೆಯ ಬಳಿಕವೇ ಕಾರಣ ತಿಳಿಯಲಿದೆ. ಆನಂತರ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ದಲಿತರ ಮದುವೆಗೆ ಕಲ್ಯಾಣ ಮಂಟಪ ನೀಡದೆ ಅಸ್ಪೃಶ್ಯತೆ ಆಚರಣೆ: ದೂರು – ಪ್ರತಿಭಟನೆ