ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಅವರು ಮಾಫಿಯಾಗಳನ್ನು ತೊಡೆದುಹಾಕಲು ಮತ್ತು ಅಭಿವೃದ್ಧಿ ಮಾಡಲು ಬೇಕಾಗಿ ಹಲವು ಯೋಜನೆಗಳನ್ನು ಕೈಗೆತ್ತಿಕೊಂಡಿದ್ದಾರೆ ಎಂದು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ. “ಹಾಗಾಗಿಯೆ ಜನರು ‘ಯುಪಿ ಪ್ಲಸ್ ಯೋಗಿ ತುಂಬಾ ಉಪಯೋಗಿ’ ಎಂದು ಹೇಳುತ್ತಿದ್ದಾರೆ” ಎಂದು ಅವರು ಹೇಳಿದ್ದಾರೆ.
ಉತ್ತರ ಪ್ರದೇಶದ ಶಹಜಹಾನ್‌ಪುರ ಜಿಲ್ಲೆಯಲ್ಲಿ 594 ಕಿಮೀ ಉದ್ದದ ಗಂಗಾ ಎಕ್ಸ್‌ಪ್ರೆಸ್ ವೇಗೆ ಶನಿವಾರ ಶಂಕುಸ್ಥಾಪನೆ ನೆರವೇರಿಸಿ ಪ್ರಧಾನಿ ಮಾತನಾಡುತ್ತಿದ್ದರು. “ಕಾನೂನು ಮತ್ತು ಸುವ್ಯವಸ್ಥೆಯನ್ನು ಕಳಪೆಯಾಗಿ ನಿರ್ವಹಿಸಿದ್ದರಿಂದ ಉತ್ತರ ಪ್ರದೇಶದಿಂದ ಜನರು ಹಿಂದೆ ಸರಿಯಯುತ್ತಿದ್ದರು. ಆದರೆ ಕಳೆದ 4.5 ವರ್ಷಗಳಲ್ಲಿ ಬುಲ್ಡೋಜರ್‌ಗಳು ಮಾಫಿಯಾಗಳ ಅನಧಿಕೃತ ಆಸ್ತಿಗಳನ್ನು ಧ್ವಂಸಗೊಳಿಸಿದ್ದು, ಅವರನ್ನು ಬೆಂಬಲಿಸುವವರಿಗೆ ನೋವುಂಟು ಮಾಡಿದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ:ಉತ್ತರ ಪ್ರದೇಶ:ಪ್ರಧಾನಿ ವಿರುದ್ಧ ಪ್ರತಿಭಟನೆಗೆ ಸಜ್ಜಾಗಿದ್ದ 70 ಮಂದಿ ಎಸ್‌ಪಿ ಕಾರ್ಯಕರ್ತರ ಬಂಧನ, ಬಿಡುಗಡೆ
ಉತ್ತರ ಪ್ರದೇಶದ ಹಿಂದಿನ ಆಡಳಿತದ ಮೇಲೆ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ, “ಐದು ವರ್ಷಗಳ ಹಿಂದಿನ ಸ್ಥಿತಿಯನ್ನು ನೆನಪಿಸಿಕೊಳ್ಳಿ. ರಾಜ್ಯದ ಕೆಲವು ಪ್ರದೇಶಗಳನ್ನು ಹೊರತುಪಡಿಸಿ, ಇತರ ನಗರಗಳು ಮತ್ತು ಹಳ್ಳಿಗಳಲ್ಲಿ ವಿದ್ಯುತ್ ಲಭ್ಯವಿರಲಿಲ್ಲ. ಸಾರ್ವಜನಿಕ ಹಣವನ್ನು ಹೇಗೆ ಬಳಸಲಾಗಿದೆ ಎಂಬುದನ್ನು ಜನರು ಚೆನ್ನಾಗಿ ನೋಡಿದ್ದಾರೆ” ಎಂದು ಹೇಳಿದ್ದಾರೆ.
“ಇಂದು ಉತ್ತರ ಪ್ರದೇಶದ ಹಣವನ್ನು ರಾಜ್ಯದ ಅಭಿವೃದ್ಧಿಗೆ ಹೂಡಿಕೆ ಮಾಡಲಾಗುತ್ತಿದೆ. ಉತ್ತರ ಪ್ರದೇಶದಲ್ಲಿ ನಿರ್ಮಿಸಲಾಗುತ್ತಿರುವ ಆಧುನಿಕ ಮೂಲಸೌಕರ್ಯವು ಸಂಪನ್ಮೂಲಗಳನ್ನು ಹೇಗೆ ಸರಿಯಾಗಿ ಬಳಸುತ್ತದೆ ಎಂಬುದನ್ನು ಇದು ತೋರಿಸುತ್ತದೆ” ಎಂದು ಅವರು ಹೇಳಿದ್ದಾರೆ.
“ಮುಂದುವರೆದ ಮೂಲಸೌಕರ್ಯಗಳೊಂದಿಗೆ ಉತ್ತರಪ್ರದೇಶವು ಅತ್ಯಂತ ಆಧುನಿಕ ರಾಜ್ಯವಾಗಿ ಗುರುತಿಸಲ್ಪಡುವ ದಿನ ದೂರವಿಲ್ಲ. ಯುಪಿಯಲ್ಲಿ ಎಕ್ಸ್‌ಪ್ರೆಸ್‌ವೇಗಳ ಜಾಲ, ನಿರ್ಮಿಸಲಾಗುತ್ತಿರುವ ಹೊಸ ವಿಮಾನ ನಿಲ್ದಾಣಗಳು, ಹೊಸ ರೈಲು ಮಾರ್ಗಗಳು ಯುಪಿಯ ಜನರಿಗೆ ಏಕಕಾಲದಲ್ಲಿ ಹಲವಾರು ಪ್ರಯೋಜನಗಳನ್ನು ತರುತ್ತಿವೆ” ಎಂದು ಪ್ರಧಾನಿ ಹೇಳಿದ್ದಾರೆ.
ಪ್ರಧಾನಿ ಮೋದಿ ಇತ್ತೀಚೆಗೆ ಉತ್ತರ ಪ್ರದೇಶಕ್ಕೆ ಹಲವಾರು ಬಾರಿ ಭೇಟಿ ನೀಡುತ್ತಿದ್ದಾರೆ. ಗಮನಿಸಬೇಕಾದ ಅಂಶವೆಂದರೆ, ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷದ ಆರಂಭದಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿವೆ.
ಇದನ್ನೂ ಓದಿ:ಉತ್ತರ ಪ್ರದೇಶ ಚುನಾವಣೆ: ಅಖಿಲೇಶ್ ಯಾದವ್‌ಗೆ ಬೆಂಬಲಿಸಲು ವಾರಣಾಸಿಗೆ ತೆರಳಲಿರುವ ಮಮತಾ ಬ್ಯಾನರ್ಜಿ


