ನೇಪಾಳದಲ್ಲಿ ಭ್ರಷ್ಟಾಚಾರ ಮತ್ತು ದುರಾಡಳಿತದ ವಿರುದ್ಧ ನಡೆದ ಪ್ರತಿಭಟನೆಗಳ ಕುರಿತು ಪೋಸ್ಟ್ ಮಾಡಿದ ವಿಡಿಯೋಗೆ ಸಂಬಂಧಿಸಿದಂತೆ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಯ ಸೆಕ್ಷನ್ 152 ರ ಅಡಿಯಲ್ಲಿ ಕಂಟೆಂಟ್ ಕ್ರಿಯೇಟರ್ ಅರ್ಪಿತ್ ಶರ್ಮಾ ವಿರುದ್ಧ ಉತ್ತರ ಪ್ರದೇಶ ಪೊಲೀಸರು ‘ದೇಶದ್ರೋಹ’ ಪ್ರಕರಣ ದಾಖಲಿಸಿದ್ದಾರೆ ಎಂದು ದಿ ವೈರ್ ಶನಿವಾರ ವರದಿ ಮಾಡಿದೆ.
ಬಿಎನ್‌ಎಸ್ ಸೆಕ್ಷನ್ 152 ಭಾರತದ ಸಾರ್ವಭೌಮತ್ವ, ಏಕತೆ ಮತ್ತು ಸಮಗ್ರತೆಗೆ ಅಪಾಯವನ್ನುಂಟುಮಾಡುವ ಕೃತ್ಯಗಳಿಗೆ ಸಂಬಂಧಿಸಿದೆ. ವಿಮರ್ಶಕರು ಇದನ್ನು ವಸಾಹತುಶಾಹಿ ಯುಗದ ದೇಶದ್ರೋಹ ಕಾನೂನಿನ ಹೊಸರೂಪ ಎಂದು ಬಣ್ಣಿಸಿದ್ದಾರೆ.
ಗುರುವಾರ ದಾಖಲಾಗಿರುವ ಎಫ್‌ಐಆರ್‌ನಲ್ಲಿ ಶರ್ಮಾ ನೇಪಾಳದಲ್ಲಿ ನಡೆದ ಪ್ರತಿಭಟನೆಗಳನ್ನು ಮುಂದಿಟ್ಟುಕೊಂಡು ಭಾರತದಲ್ಲಿ ಹಿಂಸಾಚಾರವನ್ನು ಪ್ರಚೋದಿಸಲು ಮತ್ತು ದೇಶದ ಸಮಗ್ರತೆಯನ್ನು ಕದಡಲು ವಿಡಿಯೋ ಮಾಡಿದ್ದಾರೆ ಎಂದು ಆರೋಪಿಸಿದ್ದಾಗಿ ದಿ ವೈರ್ ಹೇಳಿದೆ.
ಈ ವಾರದ ಆರಂಭದಲ್ಲಿ ನೇಪಾಳ ಸರ್ಕಾರ 26 ಸಾಮಾಜಿಕ ಮಾಧ್ಯಮ ವೇದಿಕೆಗಳ ಮೇಲೆ ಹೇರಿದ್ದ ನಿಷೇಧದ ವಿರುದ್ಧ ನಡೆದ ಪ್ರತಿಭಟನೆಗಳು, ನಂತರ ಆ ದೇಶದ ರಾಜಕೀಯ ಬಿಕ್ಕಟ್ಟಿಗೆ ಕಾರಣವಾಗಿತ್ತು. ಅಂತಿಮವಾಗಿ ಪ್ರತಿಭಟನೆ ಭ್ರಷ್ಟಾಚಾರದ ವಿರುದ್ಧದ ವ್ಯಾಪಕ ಚಳವಳಿಯಾಗಿ ತಿರುಪಡೆದುಕೊಂಡು ಹಿಂಸಾತ್ಮಕ ರೂಪ ತಾಳಿತ್ತು.
1990 ಮತ್ತು 2010ರ ನಡುವಿನ ‘ಜೆನ್ ಝೀ’ ಯುವಜನರ ಗುಂಪು ಪ್ರತಿಭಟನೆಯನ್ನು ಮುನ್ನಡೆಸಿತ್ತು. ಪರಿಣಾಮ ಸರ್ಕಾರ ಪತನಗೊಂಡು, ಪ್ರಸ್ತುತ ಮಧ್ಯಂತರ ಸರ್ಕಾರ ರಚನೆಯಾಗಿದೆ.
ನೇಪಾಳದಲ್ಲಿ ಪ್ರತಿಭಟನೆಗಳು ಪ್ರಾರಂಭವಾದ ಒಂದು ದಿನದ ನಂತರ ಎಕ್ಸ್‌ನಲ್ಲಿ ಪೋಸ್ಟ್ ಮಾಡಲಾದ ವಿಡಿಯೋದಲ್ಲಿ, ಶರ್ಮಾ ನೇಪಾಳದ ಯುವಕರನ್ನು ಶ್ಲಾಘಿಸಿದ್ದರು. ಭ್ರಷ್ಟಾಚಾರ ಮತ್ತು ದ್ವೇಷ ಭಾಷಣದಂತಹ ವಿಷಯಗಳ ವಿರುದ್ಧ ಭಾರತೀಯರು ಏಕೆ ಪ್ರತಿಭಟಿಸುತ್ತಿಲ್ಲ ಎಂದು ಪ್ರಶ್ನಿಸಿದ್ದರು.
ದಿ ವೈರ್ ಜೊತೆ ಮಾತನಾಡಿದ ಶರ್ಮಾ, “ನಾನು ವಿಡಿಯೋ ಮಾಡುವಾಗ ನೇಪಾಳ ಶಾಂತವಾಗಿತ್ತು. ನಾನು ಯಾರನ್ನೂ ಪ್ರಚೋದಿಸಿಲ್ಲ” ಎಂದಿದ್ದಾರೆ.


