Homeಕರ್ನಾಟಕಭದ್ರಾ ಮೇಲ್ದಂಡೆ ಯೋಜನೆ ಭ್ರಷ್ಟಾಚಾರ: ಬಾಂಬ್ ಸಿಡಿಸಿದ ಹೆಚ್‌. ವಿಶ್ವನಾಥ್‌!

ಭದ್ರಾ ಮೇಲ್ದಂಡೆ ಯೋಜನೆ ಭ್ರಷ್ಟಾಚಾರ: ಬಾಂಬ್ ಸಿಡಿಸಿದ ಹೆಚ್‌. ವಿಶ್ವನಾಥ್‌!

- Advertisement -

ಬಿಜೆಪಿಯಲ್ಲಿ ಆಂತರಿಕ ಜಗಳವೆಂಬುದು ದಿನನಿತ್ಯದ ಚಟುವಟಿಕೆಯಾದಂತೆ ಕಾಣುತ್ತಿದೆ. ಬಿ.ವೈ ವಿಜಯೇಂದ್ರ ಹಸ್ತಕ್ಷೇಪವಾಯಿತು, ಮುಖ್ಯಂಮತ್ರಿ ಬದಲಾವಣೆ ಪರ್ವ ಮುಗಿಯಿತು. ಈದೀಗ ಬಿಜೆಪಿಗರಿಂದಲೇ ಮುಖ್ಯಮಂತ್ರಿಗಳ ಮೇಲೆ ಭ್ರಷ್ಟಾಚಾರದ ಆರೋಪ ಕೇಳಿಬಂದಿದೆ.

ಕೆಲವು ದಿನಗಳ ಹಿಂದೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರನ್ನು ಇಳಿಸಲು ಬಿಜೆಪಿಯ ಒಳಗಿಂದಲೆ ಸಾಕಷ್ಟು ಪ್ರಯತ್ನ ನಡೆಸಿದ್ದರು. ಬಸವನಗೌಡ ಯತ್ನಾಳ್, ಸಿ.ಪಿ.ಯೋಗಿಶ್ವರ್, ಅರವಿಂದ್ ಬೆಲ್ಲದ್ ಹೀಗೆ ಒಂದಷ್ಟು ನಾಯಕರ ಪ್ರತ್ಯೇಕ ಗುಂಪುಗಳು ಬಿ.ಎಸ್.ಯೆಡಿಯೂರಪ್ಪನವರ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಒಂದಲ್ಲಾ ಒಂದು ರೀತಿಯಲ್ಲಿ ಮುಖ್ಯಮಂತ್ರಿಗಳ ವಿರುದ್ಧ ಅಸಮಾಧಾನವನ್ನು ಬಹಿರಂಗವಾಗಿಯೇ ಪ್ರದರ್ಶಿಸುತ್ತ ಬಂದಿದ್ದಾರೆ. ಈ ಪಟ್ಟಿಯಲ್ಲಿ ಬಹುಮುಖ್ಯವಾದ ಇನ್ನೊಂದು ಹೆಸರು ಸೇರಿಕೊಂಡಿದೆ, ಅದುವೆ ಅಡಗೂರು ಹೆಚ್.ವಿಶ್ವನಾಥ್!.

ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿ ಜೆಡಿಎಸ್‌‌‌‌ನಿಂದ ಮತ್ತೆ ಬಿಜೆಪಿಗೆ ಜಿಗಿದಿರುವ ಮಾಜಿ ಸಂಸದ, ಮಾಜಿ ಸಚಿವ ಹೆಚ್. ವಿಶ್ವನಾಥ್ ಆರಂಭದ ದಿನಗಳಿಂದಲೂ ಬಿಎಸ್‌ ಯಡಿಯೂರಪ್ಪನವರ ವಿರುದ್ಧ ಬಹಿರಂಗ ಆರೋಪಗಳನ್ನು ಮಾಡುತ್ತಲೇ ಬಂದಿದ್ದಾರೆ. ಈಗ ಅದು ಮತ್ತೊಂದು ಹಂತವನ್ನು ತಲುಪಿದೆ.

ಇದನ್ನೂ ಓದಿ: ‘ಎಲ್‌ಕೆಜಿ ಮಗು’ ಎಂದು ಅಪಹಾಸ್ಯ ಮಾಡಿದ್ದಕ್ಕೆ ದೇಶದ ಕಿರಿಯ ಮೇಯರ್‌‌ ಆರ್ಯ ರಾಜೇಂದ್ರನ್ ಹೇಳಿದ್ದೇನು?

ಬಿಎಸ್ ಯಡಿಯೂರಪ್ಪರ ವಯಸ್ಸು, ಆರೋಗ್ಯ, ಕುಟುಂಬ ರಾಜಕೀಯ, ಬಿವೈ ವಿಜಯೇಂದ್ರ ಹಸ್ತಕ್ಷೇಪ ವಿಚಾರಗಳನ್ನು ಈ ಹಿಂದೆ ಬಿಜೆಪಿಯ ಹಲವು ನಾಯಕರು ಪ್ರಸ್ತಾಪಿಸಿದ್ದರು. ಆದರೆ ಯಡಿಯೂರಪ್ಪನವರ ಈ ಭಾರಿಯ ಅಧಿಕಾರ ಅವಧಿಯಲ್ಲಿ ಇದುವರೆಗೆ ಬಿಜೆಪಿಯ ಯಾವ ಶಾಸಕರೇ ಆಗಲಿ ಅಥವಾ ನಾಯಕರು ಮುಖ್ಯಮಂತ್ರಿಗಳ ಮೇಲೆ ಭ್ರಷ್ಟಾಚಾರದ ಆರೋಪ ಮಾಡಿರಲಿಲ್ಲ. ಆದರೆ ನಿನ್ನೆ ಅಡಗೂರು ಹೆಚ್ ವಿಶ್ವನಾಥ್ ಮೈಸೂರಿನಲ್ಲಿ ಪ್ರತ್ಯೇಕ ಸುದ್ದಿಗೋಷ್ಠಿಯನ್ನು ನಡೆಸಿ ಬಿ.ಎಸ್. ಯಡಿಯೂರಪ್ಪ ಮತ್ತು ಅವರ ಪುತ್ರ, ರಾಜ್ಯ ಬಿಜೆಪಿ ಉಪಾಧ್ಯಾಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ನೇರವಾಗಿ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ.

ಬೃಹತ್ ನೀರಾವರಿ ಇಲಾಖೆಯಲ್ಲಿ ಬಿಎಸ್‌ ವೈ ಮತ್ತು ಅವರ ಪುತ್ರ ವ್ಯಾಪಕ ಹಗರಣವನ್ನು ನಡೆಸಿದ್ದಾರೆ ಎಂದು ಆರೋಪವನ್ನು ಅವರು ಮಾಡಿದ್ದಾರೆ. ಕೆಲವು ಕಡೆ ಇದು ಬಿಎಸ್‌ವೈ ವಿಶ್ವನಾಥ್ ಅವರನ್ನು ಸಚಿವರನ್ನಾಗಿ ಮಾಡಲಿಲ್ಲ ಎಂಬ ಕಾರಣಕ್ಕೆ ನೀಡಿದ ಹತಾಶೆಯ, ದ್ವೇಷದ ಆರೋಪ ಎಂದು ಮುಖ್ಯಮಂತ್ರಿ ಸೇರಿ ಬಿಜೆಪಿಯ ಇತರ ನಾಯಕರು ಹೆಚ್‌. ವಿಶ್ವನಾಥ್ ಆರೋಪಗಳಿಗೆ ತಿರುಗೇಟು ನೀಡಿದ್ದಾರೆ.

ಹೆಚ್. ವಿಶ್ವನಾಥ್ ಆರೋಪದ ಸಮಯ, ಸಂದರ್ಭ ಮತ್ತು ಅವರ ಇಂದಿನ ಪರಿಸ್ಥಿತಿಗಳಲ್ಲಿ ಹೆಚ್. ವಿಶ್ವನಾಥ್ ಆತ್ಮಾಹುತಿಯ ಪ್ರಯತ್ನಕ್ಕೆ ಕೈಹಾಕಿದ್ದಾರೆಂದರೆ ಅದು ಕೇವಲ ದ್ವೇಷದಿಂದ ಕೂಡಿದ ಹತಾಶೆಯ ಆರೋಪ ಮಾತ್ರ ಆಗಿರಲಿಕ್ಕೆ ಸಾಧ್ಯವಿಲ್ಲ ಎಂದು ಬಿಜೆಪಿಯ ಒಳಗಿನ ಮೂಲಗಳು ಹೇಳುತ್ತವೆ. ಹೆಚ್‌.ವಿಶ್ವನಾಥ್ ಆರೋಪಗಳಿಗೆ ಜಲಸಂಪನ್ಮೂಲ ಇಲಾಖೆಯ ಮುಖ್ಯ ಕಾರ್ಯದರ್ಶಿಗಳು ಸ್ಪಷ್ಟನೆಯನ್ನು ನೀಡಿದ್ದಾರೆ. ಯಾವುದೇ ಅಕ್ರಮಕ್ಕೆ ಅವಕಾಶವಾಗಿಲ್ಲ, ಇದು ಕೇಂದ್ರ ಸರ್ಕಾರದ ಸಹಯೋಗದ ಯೋಜನೆ. ಎಲ್ಲವೂ ನಿಯಮಗಳ ಅನುಸಾರ ಕಾನೂನು ಬದ್ಧವಾಗಿಯೇ ಇದೆ ಎಂದಿದ್ದಾರೆ.

ಇದನ್ನೂ ಓದಿ: ಮುಂಬೈ: ನಕಲಿ ಲಸಿಕೆ ಕ್ಯಾಂಪ್ ಹಗರಣದಲ್ಲಿ ನಾಲ್ವರ ಬಂಧನ

ಹಾಗಾದರೆ ಹೆಚ್.ವಿಶ್ವನಾಥ್ ಹೇಳಿಕೆ ಕೇವಲ ಆರೋಪ ಮಾತ್ರವೇ? ವಿಷಯದಲ್ಲಿ ಹುರುಳಿಲ್ಲದಿದ್ದರೆ ಹೆಚ್‌. ವಿಶ್ವನಾಥ್ ತಮ್ಮ ರಾಜಕೀಯ ಜೀವನವನ್ನು ಕೊನೆಯಾಗಿಸುವ ಈ ಪ್ರಯತ್ನಕ್ಕೆ ಯಾಕೆ ಕೈ ಹಾಕುತ್ತಿದ್ದರು ಎಂಬುದು ಯಕ್ಷ ಪ್ರಶ್ನೆಯಾಗಿಯೇ ಉಳಿಯುತ್ತದೆ. ಹೆಚ್.ವಿಶ್ವನಾಥ್ ಈ ಪತ್ರಿಕಾಗೋ‍ಷ್ಠಿಯ ಹಿಂದೆ ಬಿಜೆಪಿಯ ಯಾವುದಾದರೂ ಕಾಣದ ಕೈಗಳು ಕೆಲಸ ಮಾಡಿವೆಯೇ ಎಂಬ ಅನುಮಾನಗಳು ಮೂಡದಿರುವುದಿಲ್ಲ. ಆದರೆ ವಿಶ್ವನಾಥ್ ಸಿಡಿಸಿದ ಭದ್ರಾ ಬಾಂಬ್ ಸ್ಫೋಟಗೊಳ್ಳದೆ ಒಂದಷ್ಟು ಅನುಮಾನಗಳಿಗೆ ಅವಕಾಶಮಾಡಿಕೊಟ್ಟಿದೆ ಅಷ್ಟೆ.

ಕರ್ನಾಟಕದಲ್ಲಿ ವಿರೋಧಪಕ್ಷಗಳು ಸರ್ಕಾರದ ಅಕ್ರಮವನ್ನು ಹೊರಗೆಳೆಯುವ ಕನಿಷ್ಠ ಪ್ರಯತನ್ನವನ್ನು ಮಾಡಲು ಸಿದ್ದರಿಲ್ಲ ಎಂಬುದು ಮತ್ತೊಮ್ಮೆ ಹೆಚ್‌.ವಿಶ್ವನಾಥ್ ಪತ್ರಿಕಾಗೋಷ್ಠಿಯಿಂದ ಸಾಬೀತಾಗಿದೆ. ಹೆಚ್‌.ವಿಶ್ವನಾಥ್ ಒಂದರ್ಥದಲ್ಲಿ ವಿರೋಧಪಕ್ಷಗಳು ಮಾಡಬೇಕಾದ ಕೆಲಸವನ್ನು ಮಾಡಿರುವಾಗ ಘಟನೆ ಬೆಳಕಿಗೆ ಬಂದು ದಿನ ಕಳೆದರೂ ವಿರೋಧ ಪಕ್ಷಗಳು ಏನನ್ನು ಮಾಡುತ್ತಿವೆ ? ವಿರೋಧಪಕ್ಷದ ನಾಯಕರು ಯಾಕೆ ಫೇಸ್‌ಬುಕ್, ಟ್ವಿಟ್ಟರ್, ಹೇಳಿಕೆಗಳಿಗೆ ಮಾತ್ರ ಸೀಮಿತವಾಗುತ್ತಿದ್ದಾರೆ ಎಂಬುದು ಕರ್ನಾಟಕದಲ್ಲಿ ಸದ್ಯಕ್ಕೆ ಉದ್ಭವವಾಗಿರುವ ಪ್ರಶ್ನೆ.

ಹಾಗಾದರೆ ಇಷ್ಟೊಂದು ಚರ್ಚೆಗೆ ಗ್ರಾಸವಾಗಿರುವ ನಿನ್ನೆಯ ಪತ್ರಿಕಾಗೋಷ್ಠಿಯಲ್ಲಿ ಹೆಚ್‌.ವಿಶ್ವನಾಥ್ ಹೇಳಿದ್ದೇನು?

ಭದ್ರಾ ಮೇಲ್ದಂಡೆ ಯೋಜನೆ 21,470 ಕೋಟಿ ರೂ ಕಾಮಗಾರಿಯಾಗಿದೆ. ಆದರೆ ಹಣಕಾಸು ಇಲಾಖೆಯ ಅನುಮೋದನೆಯನ್ನು ಪಡೆಯದೇ ಭದ್ರಾ ಮೇಲ್ದಂಡೆ ಯೋಜನೆಗೆ ಟೆಂಡರ್ ಕರೆಯಲಾಗಿದೆ. 7 ಹಂತದಲ್ಲಿ   ಹಣವನ್ನು ಬಿಡುಗಡೆ ಮಾಡದೇ ಹೇಗೆ ಟೆಂಡರ್ ಕರೆಯಾಲಾಗಿದೆ ? ಇದರಲ್ಲಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪನವರ ಪುತ್ರ ಬಿ.ವೈ. ವಿಜಯೇಂದ್ರ ಅವರ ಪಾತ್ರವಿದೆ. ಅವರು ಕಿಕ್ ಬ್ಯಾಕ್ ಪಡೆದಿದ್ದಾರೆ ಎಂದು ಕೂಡಾ ವಿಧಾನಪರಿಷತ್ ಸದಸ್ಯ ಹೆಚ್‌.ವಿಶ್ವನಾಥ್ ಆರೋಪ ಮಾಡಿದ್ದಾರೆ.

ಹೆಚ್ ವಿಶ್ವನಾಥ್ ಹೇಳಿಕೆಗೆ ಸರ್ಕಾರದ ಪ್ರತಿಕ್ರಿಯೆ ಏನು ?

ಹೆಚ್‌.ವಿಶ್ವನಾಥ್ ಮಾಡಿರುವ ಆರೋಪಗಳಿಗೆ ಜಲಸಂಪನ್ಮೂಲ ಇಲಾಖೆಯ ಮುಖ್ಯ ಕಾರ್ಯದರ್ಶಿಗಳು ಪ್ರತಿಕ್ರಿಯೆಯನ್ನು ಸಹ ನೀಡಿದ್ದಾರೆ. ಹಾಗೇ ಹಣಕಾಸು ಇಲಾಖೆ ಕೂಡ ಯೋಜನೆಯನ್ನು ಸಮರ್ಥಿಸಿಕೊಂಡಿದೆ. ಇಲಾಖೆಯು 2020 ರ ಡಿಸೆಂಬರ್ 6 ರಂದು 21,473.67 ಕೋಟಿ ರೂ ಮೊತ್ತದ ಭದ್ರಾ ಮೇಲ್ದಂಡೆ ಯೋಜನೆಯ ಪರಿಷ್ಕರಿಸಲಾದ DPR ಗೆ ಆಡಳಿತಾತ್ಮಕ ಅನುಮೋದನೆಯನ್ನು ಪಡೆದಿದೆ. ಈ ಅನುಮೋದನೆಯು ಹಣಕಾಸು ಇಲಾಖೆ ಹಾಗು ಬೋರ್ಡ್‌ನ ಶಿಫಾರಸ್ಸಿನ ಮೇಲೆ ಪಡೆಯಲಾಗಿದೆ.

ಇದನ್ನೂ ಓದಿ : ಕವಿ ಸಿದ್ದಲಿಂಗಯ್ಯನವರಿಗೆ ನುಡಿನಮನ; ಶ್ರಮಜೀವಿ ಪ್ರತಿಭೆಯನ್ನು ಅರಿಯುವ ಕಡೆಗೆ

ಕೇಂದ್ರ ಜಲಶಕ್ತಿ ಇಲಾಖೆಯ ತಾಂತ್ರಿಕ ಸಲಹಾ ಸಮಿತಿಯಿಂದ 2024 ರ ಡಿಸೆಂಬರ್ 24 ರಂದು 16,125.48 ರೂ ಮೊತ್ತದ ಯೋಜನೆಗೆ ಅನುಮೋದನೆಯನ್ನು ಪಡೆಯಲಾಗಿದೆ.  ಭದ್ರಾ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಿಸುವಂತೆ ಕೇಂದ್ರ ಜಲಶಕ್ತಿ ಇಲಾಖೆಯೊಂದಿಗೆ ಚರ್ಚೆ ನಡೆಯುತ್ತಿದೆ. ಶೀಘ್ರದಲ್ಲಿಯೇ ಈ ಸಂಬಂಧ ಕೇಂದ್ರ ಸರ್ಕಾರ ನಿರ್ಧಾರ ಕೈಗೊಳ್ಳುವ ವಿಶ್ವಾಸ ಇದೆ ಎಂದು ರಾಜ್ಯಸರ್ಕಾರ ಹೆಚ್.ವಿಶ್ವನಾಥ್ ಆರೋಪವನ್ನು ತಳ್ಳಿಹಾಕಿದೆ. ಹಾಗೇ ಯೋಜನೆಯಲ್ಲಿ ಬಿ.ವೈ. ವಿಜಯೇಂದ್ರ ಪಾತ್ರವನ್ನು ನಿರಾಕರಿಸಿದೆ.

ಬಿಜೆಪಿಯ ಇತರ ನಾಯಕರ ಪ್ರತಿಕ್ರಿಯೆ

ಬಿಜೆಪಿಯ ರೇಣುಕಾಚಾರ್ಯ, ಬಿಡಿಎ ಅಧ್ಯಕ್ಷ ವಿಶ್ವನಾಥ್ ಸೇರಿದಂತೆ ಹಲವರು ಹೆಚ್‌. ವಿಶ್ವನಾಥ್ ವಿರುದ್ಧ ಆರೋಪಗಳ ಸುರಿಮಳೆಯನ್ನು ಮಾಡಿದ್ದಾರೆ. ಆರ್ ಅಶೋಕ್ ಸೇರಿ ಹಲವರು ಈ ಸಂಬಂಧ ಚರ್ಚೆ ಅನಗತ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬಿಎಸ್‌ವೈ ಬೆಂಬಲಿಗರ ಗುಂಪು ಹೆಚ್.ವಿಶ್ವನಾಥ್ ಆರೋಪವನ್ನು ಪ್ರಸ್ತಾಪಿಸದೇ ವಿಶ್ವನಾಥ್ ಮೇಲೆ ವೈಯಕ್ತಿಕ ಆರೋಪಗಳನ್ನು ಮಾಡಿದೆ. ಬಿಜೆಪಿಯ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಬೆಂಗಳೂರು ಭೇಟಿಯ ವೇಳೆ ಹೆಚ್.ವಿಶ್ವನಾಥ್ ಹೇಳಿಕೆ ನೀಡಿರುವುದು ಬಿಜೆಪಿಯಲ್ಲಿ ಹೆಚ್‌.ವಿಶ್ವನಾಥ್ ವಿರುದ್ಧ ಕ್ರಮವಾಗಲಿದೆ. ಈ ಸಂಬಂಧ ಅರುಣ್ ಸಿಂಗ್ ಹಾಗೂ ಹೈಕಮಾಂಡ್‌ಗೆ ದೂರು ನೀಡುವುದಾಗಿಯೂ ಬಿಜೆಪಿಯ ಅನೇಕ ನಾಯಕರು ಪ್ರತಿಕ್ರಿಯೆ ನೀಡಿದ್ದಾರೆ.

ಹೆಚ್‌. ವಿಶ್ವನಾಥ್ ಆರೋಪ ಅವರ ರಾಜಕೀಯ ಜೀವನದ ಆತ್ಮಾಹುತಿಯಾಗುವ ಸಾಧ್ಯತೆ

ಹೆಚ್.ವಿಶ್ವನಾಥ್ ತಮ್ಮ ರಾಜಕೀಯ ಜೀವನದ ಸಂಧ್ಯಕಾಲದಲ್ಲಿದ್ದಾರೆ. ಈ ಸಂದರ್ಭದಲ್ಲಿ ಅವರ ಹೇಳಿಕೆ ಕಾರಣದಿಂದ ವಿಶ್ವನಾಥ್ ಮೇಲೆ ಬಿಜೆಪಿಯ ಹೈಕಮಾಂಡ್ ಕಠಿಣ ಕ್ರಮವನ್ನು ಕೈಗೊಳ್ಳುವ ಸಾಧ್ಯತೆಯಿದೆ.  ವಿಶ್ವನಾಥ್ ಅವರನ್ನು ಪಕ್ಷದಿಂದ ಉಚ್ಛಾಟಿಸಬೇಕು ಎಂಬ ಕೂಗು ಕೂಡ ಬಿಜೆಪಿಯಲ್ಲಿ ಜೋರಾಗಿ ಕೇಳಿಸುತ್ತಿದೆ.

ತಮ್ಮ ಆರೋಪಗಳಿಂದ ಆಗುವ ಪರಿಣಾಮಗಳನ್ನು ವಿಶ್ವನಾಥ್ ಮೊದಲೇ ಗ್ರಹಿಸಿರಲಿಲ್ಲವೇ ? ಅವರ ಲೆಕ್ಕಾಚಾರ ಉಲ್ಟಾ ಹೊಡೆದಿದ್ದು ಎಲ್ಲಿ ? ಆರೋಪಗಳಲ್ಲಿ ಹುರುಳಿಲ್ಲದೇ ಹೆಚ್‌.ವಿಶ್ವನಾಥ್ ಇಷ್ಟುದೊಡ್ಡ ಹೆಜ್ಜೆಯನ್ನಿಡಲು ಹೇಗೆ ಸಾಧ್ಯ? ಈ ಮೊದಲೇ ತಮ್ಮ ಜೊತೆ ವಲಸೆ ಬಂದ ಸಹಪಾಠಿಗಳೊಂದಿಗೆ ಚರ್ಚೆ ನಡೆಸಿದ್ದಾರೆಯೇ ? ಎಂಬ ಪ್ರಶ್ನಗಳು ಸಾಮಾನ್ಯವಾಗಿ ಎದ್ದೇಳುತ್ತವೆ.

ಹೆಚ್‌. ವಿಶ್ವನಾಥ್ ಅವರಲ್ಲಿ ಭದ್ರಾ ಮೇಲ್ದಂಡೆ ಯೋಜನೆಯ ಅಕ್ರಮಕ್ಕೆ ಸಂಬಂಧಿಸಿದಂತೆ ಪ್ರಬಲ ಸಾಕ್ಷಿಗಳು ಮತ್ತು ದಾಖಲೆಗಳು ಇವೆಯೇ ? ಇದ್ದರೆ ಅವುಗಳನ್ನು ಯಾಕೆ ಹೊರಗೆಡವಿಲ್ಲ ಎಂಬುದು ಕೂಡ ಈ ಸಂದರ್ಭದಲ್ಲಿ ಚರ್ಚೆಯಾಗುತ್ತಿದೆ. ಆದರೆ ಹೆಚ್‌. ವಿಶ್ವನಾಥ್ ತಮ್ಮ ಹಿಂದೆ ಪ್ರಬಲ ಸಾಕ್ಷಿಯಿಲ್ಲದೇ ಮುಖ್ಯಮಂತ್ರಿಗಳ ಮೇಲೆ  ಭೃಷ್ಟಾಚಾರದ ಆರೋಪ ಮಾಡುವ ಹಂತಕ್ಕೆ ಮುಂದುವರೆದಿರುವ ಸಾಧ್ಯತೆ ಅತ್ಯಂತ ಕಡಿಮೆಯಿದೆ. ಯಾಕೆಂದರೆ ಹೆಚ್.ವಿಶ್ವನಾಥ್‌ಗೆ ಮಂತ್ರಿ ಸ್ಥಾನ ಸಿಗುವ ಸಾಧ್ಯತೆಯಿಲ್ಲ ಎಂಬುದು ಈಗಾಗಲೇ ಬಹುತೇಕ ಖಚಿತವಾಗಿದೆ. ಜೊತೆಗೆ ಯಡಿಯೂರಪ್ಪನವರ ಮೇಲೆ ಬಿಜೆಪಿ ಹೈಕಮಾಂಡ್ ಶ್ರೀರಕ್ಷೆಯಿದ್ದು ಇನ್ನುಳಿದ 2 ವರ್ಷ ಬಿಎಸ್‌ವೈ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಈಗಾಗಲೇ ಹೇಳಿಯಾಗಿದೆ.

ಇದನ್ನೂ ಓದಿ :ಕೊರೊನಾ ನಿರ್ವಹಣೆ ಲೋಪ ಮುಚ್ಚಿಕೊಳ್ಳಲು ಜಾಹೀರಾತುಗಳಿಗೆ ಹಣ ಸುರಿಯುತ್ತಿರುವ ಕರ್ನಾಟಕ ಮತ್ತು ಉತ್ತರ ಪ್ರದೇಶ

ಈ ಹೊತ್ತಿನಲ್ಲಿ ಹೆಚ್‌.ವಿಶ್ವನಾಥ್ ಮಂತ್ರಿಯಾಗುವ ಸಾಧ್ಯತೆ 0.1% ದಷ್ಟು ಕಾಣಿಸುತ್ತಿಲ್ಲ. ಇಂತಹ ಹೊತ್ತಿನಲ್ಲಿ ತನ್ನ ರಾಜಕೀಯ ಜೀವನ ದುರಂತ ಅಂತ್ಯವಾಗಬಹುದು ಎಂಬ ಅರಿವು ಇದ್ದು ಕೂಡ ವಿಶ್ವನಾಥ್ ತಮ್ಮದೇ ಪಕ್ಷದ ಅಗ್ರ ನಾಯಕರು, ರಾಜ್ಯದ ಮುಖ್ಯಮಂತ್ರಿಗಳಾದ ಬಿಎಸ್‌.ಯಡಿಯೂರಪ್ಪನವರ ವಿರುದ್ಧ ಆರೋಪ ಮಾಡಿದ್ದಾರೆ ಎಂದರೆ ಪ್ರಕರಣದಲ್ಲಿ ಹುರುಳಿರುವ ಸಾಧ್ಯತೆಯಿದೆ. ಈ ಸಂಬಂಧ ಉನ್ನತ ತನಿಖೆಯಾಗುವುದು ಉತ್ತಮ. ಇದು ಕೇವಲ ದ್ವೇಷದ, ಹತಾಶೆಯ ಆರೋಪದಂತೆ ಕಾಣಿಸುತ್ತಿಲ್ಲ ಎಂದು ಹೆಚ್‌.ವಿಶ್ವನಾಥ್ ಮತ್ತು ಬಿಎಸ್‌ ಯಡಿಯೂರಪ್ಪ ಕುಟುಂಬವನ್ನು ಹತ್ತಿರದಿಂದ ಬಲ್ಲವರೊಬ್ಬರು ಅಭಿಪ್ರಾಯಪಡುತ್ತಾರೆ.

ಆದರೆ ಈ ಸಂಬಂಧ ಸ್ಪಷ್ಟನೆಗಾಗಿ ಹೆಚ್‌.ವಿಶ್ವನಾಥ್ ಅವರನ್ನು ಸಂಪರ್ಕಿಸಲು ಪ್ರತಯತ್ನಿಸಲಾಯಿತಾದರೂ ಅವರು ಯಾವುದೇ ರೀತಿಯ ಸಂಪರ್ಕಕ್ಕೆ ಲಭ್ಯವಾಗಿಲ್ಲ. ಹಾಗೇ ಹೆಚ್‌. ವಿಶ್ವನಾಥ್ ತಮ್ಮ ಆರೋಪದಲ್ಲಿ ಹೆಸರಿಸಿರುವ ಬಿ.ವೈ. ವಿಜಯೇಂದ್ರ ಅವರನ್ನು ಕೂಡ ಸಂಪರ್ಕಿಸಲು ಪ್ರಯತ್ನಿಸಲಾಯಿತಾದರೂ ಅವರು ಕೂಡ ಸಂಪರ್ಕಕ್ಕೆ ಲಭ್ಯವಾಗಿಲ್ಲ.

ಮಾಜಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೋಳಿಯವರ ಹೆಸರನ್ನು ಎಲ್ಲೂ ಪ್ರಸ್ತಾಪಿಸದ ಹೆಚ್‌.ವಿಶ್ವನಾಥ್

ಹೆಚ್‌.ವಿಶ್ವನಾಥ್ ತಮ್ಮ ಪತ್ರಿಕಾಗೋಷ್ಠಿಯ ಉದ್ದಕ್ಕೂ ಸಿಎಂ ಬಿಎಸ್‌ವೈ, ಬಿ.ವೈ. ವಿಜಯೇಂದ್ರ ಇವರುಗಳ ಮೇಲೆ ಆರೋಪಗಳ ಸುರಿಮಳೆಯನ್ನೇ ಗೈದಿದ್ದಾರೆ. ಹಾಗಾದರೆ ಆ ಸಂದರ್ಭದಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದ ಜಾರಕಿಹೋಳಿ ಅವರ ಹೆಸರನ್ನು ಪ್ರಸ್ತಾಪಿಸಿಲ್ಲ. ಒಂದು ವೇಳೆ ಹೆಚ್‌.ವಿಶ್ವನಾಥ್ ಆರೋಪದಲ್ಲಿ ಹುರುಳಿರುವುದೇ ಆದರೆ 20,000 ಕೋಟಿ ಮೊತ್ತದ ಯೋಜನೆಯ ಟೆಂಡರ್ ಜಲಸಂಪನ್ಮೂಲ ಸಚಿವರ ಗಮನಕ್ಕೆ ಬಾರದೇ  ಹೇಗೆ ಅನುಮೋದನೆಗೊಳ್ಳಲು ಸಾಧ್ಯ ?

ರಮೇಶ್ ಜಾರಕಿಹೋಳಿ ಜಲಸಂಪನ್ಮೂಲ ಸಚಿವರ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು 2021 ರ ಮಾರ್ಚ್‌ 4 ರಂದು.ಹಾಗಾದರೆ 2020 ರ ಡಿಸೆಂಬರ್‌ ಅವಧಿಯಲ್ಲಿ ನಡೆದ ಭದ್ರಾ ಮೇಲ್ದಂಡೆ ಯೋಜನೆಯ ಟೆಂಡರ್‌ ಹಂಚಿಕೆ ರಮೇಶ್ ಜಾರಕಿಹೋಳಿಯವರ ಪಾತ್ರವಿಲ್ಲದೇ ನಡೆಯಲಿಕ್ಕೆ ಸಾಧ್ಯವಿದೆಯೇ ? ಅಥವಾ ಹೆಚ್‌.ವಿಶ್ವನಾಥ್ ರಮೇಶ್ ಜಾರಕಿಹೋಳಿ ಅವರ ಹೆಸರನ್ನು ತಮ್ಮ ಆರೋಪಗಳಿಂದ ಉದ್ದೇಶ ಪೂರ್ವಕವಾಗಿಯೇ ಕೈಬಿಟ್ಟಿರುವರೇ ಎಂಬ ಅನುಮಾನ ವಿಧಾನಸೌಧದ ಪಡಸಾಲೆಯಲ್ಲಿ ಹರಿದಾಡಲು ಆರಂಭಿಸಿದೆ. ಈ ಭದ್ರಾ ಮೇಲ್ದಂಡೆ ಯೋಜನೆಯ ಟೆಂಡರ್ ಕುರಿತು ಮಶಹಿತಿ ಪಡೆಯಲು ರಮೇಶ್ ಜಾರಕಿಹೋಳಿ ಅವರನ್ನು ಸಂಪರ್ಕಿಸಲು ಸತತ ಪ್ರಯತ್ನ ನಡೆಸಲಾಯಿತು. ಆದರೆ ಇದುವರೆಗೆ ಅವರು ದೂರವಾಣಿ ಸಂಪರ್ಕಕ್ಕಾಗಲಿ ನೇರ ಸಂಪರ್ಕಕ್ಕಾಗಲಿ ಲಭ್ಯವಾಗಿಲ್ಲ.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಮೇಲೆ ಮತ್ತು ಅವರ ಪುತ್ರನ ಮೇಲೆ  ಭ್ರಷ್ಟಾಚಾರದ ಆರೋಪವನ್ನು ಅವರ ಸ್ವಪಕ್ಷೀಯರೇ ನೇರವಾಗಿ  ಮಾಡುತ್ತಿರುವಾಗ ವಿರೋಧಪಕ್ಷಗಳು ಮೌನವಾಗಿರುವುದೇಕೆ?

ಹೆಚ್‌. ವಿಶ್ವನಾಥ್ ಪತ್ರಿಕಾಗೋಷ್ಠಿಯ ನಂತರಲ್ಲಿ ವಿರೋಧ ಪಕ್ಷವಾದ ಕಾಂಗ್ರೆಸ್ ಅಥವಾ ಜೆಡಿಎಸ್‌ ವಲಯದಲ್ಲಿ ಅಂತಹ ಚಟುವಟಿಕೆಗಳು ಕಂಡುಬಂದಿಲ್ಲ. ವಿರೋಧ ಪಕ್ಷದ ನಾಯಕರಾದ ಸಿಧ್ಧರಾಮಯ್ಯನವರು ಕೇವಲ ಟ್ವಿಟ್ಟರ್, ಫೇಸ್‌ಬುಕ್ ಹೇಳಿಕೆಗಳನ್ನು ನೀಡಿ ಸುಮ್ಮನಾಗಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಿಂದೆ ಜಲಸಂಪನ್ಮೂಲ ಸಚಿವರಾಗಿದ್ದವರು. ಅವರು ಕೂಡ ಮುಖ್ಯಮಂತ್ರಿಗಳ ಮೇಲಿನ ಭ್ರಷ್ಟಾಚಾರದ ಆರೋಪಗಳ ತನಿಖೆಗೆ ಒತ್ತಾಯಿಸಿ ಹೋರಾಟ ನಡೆಸುವ ಸೂಚನೆಯನ್ನು ನೀಡಿಲ್ಲ.

ಹಾಗಿದ್ದರೆ ಹೆಚ್.ವಿಶ್ವನಾಥ್ ಆರೋಪಗಳು ಹೊಳೆಯಲ್ಲಿನ ಹೋಮವಾಗುತ್ತವೆಯೇ ? ಅಥವಾ ಹೆಚ್‌.ವಿಶ್ವನಾಥ್ ಅವರೇ ಗಾಳಿಯಲ್ಲಿ ಗುಂಡು ಹಾರಿಸುತ್ತಿದ್ದಾರೆಯೇ ? ವಿರೋಧಪಕ್ಷದ ವಲಯವನ್ನು ಹತ್ತಿರದಿಂದ ಬಲ್ಲ ಹೆಸರು ಹೇಳಲಿಚ್ಛಿಸದ ನಾಯಕರೊಬ್ಬರು ಹೀಗೊಂದು ಅನುಮಾನವನ್ನು ವ್ಯಕ್ತಪಡಿಸಿದ್ದಾರೆ.

ಯಡಿಯೂರಪ್ಪ ವಿರುದ್ಧದ ಆರೋಪಗಳ ನಡುವೆ ಹೆಚ್‌.ವಿಶ್ವನಾಥ್ ರಾಜಕೀಯ ಜೀವನ ಭಾಗಶ: ಅಂತ್ಯವಾಗುವ ಸಾಧ್ಯತೆ

ರಾಜ್ಯ ರಾಜಕಾರಣದಲ್ಲಿ ಹಿರಿಯ ರಾಜಕಾರಣಿಯಾಗಿರುವ ಹೆಚ್‌.ವಿಶ್ವನಾಥ್ ಕಾಂಗ್ರೆಸ್, ಜೆಡಿಎಸ್‌ ಮತ್ತು ಬಿಜೆಪಿ ಹೀಗೆ ಮೂರು ಪಕ್ಷದಲ್ಲಿ ಇದ್ದವರು. ಅಲ್ಲಿನ ನಾಯಕರನ್ನು ಹತ್ತಿರದಿಂದ ಬಲ್ಲವರು. ವಿಶ್ವನಾಥ್ ಆರೋಪಗಳಿಗೆ ಯಾರೂ ಧ್ವನಿಗೂಡಿಸದಿರುವುದು ಹೆಚ್‌.ವಿಶ್ವನಾಥ್ ಅವರ ಎಲ್ಲಾ ಲೆಕ್ಕಾಚಾರವನ್ನು ತಲೆಕೆಳಗು ಮಾಡಿದೆ. ಹಾಗೆಯೇ  ಬಿ.ಎಸ್‌. ಯಡಿಯೂರಪ್ಪ ವಿರುದ್ಧ ಆರೋಪಗಳನ್ನು ಮಾಡಿರುವ ಕಾರಣದಿಂದ ಬಿಜೆಪಿಯಲ್ಲಿ ಹೆಚ್‌. ವಿಶ್ವನಾಥ್ ಭವಿಷ್ಯವು ಅನಿಶ್ಚಿತವಾಗಿದೆ.

ರಾಜ್ಯ ಬಿಜೆಪಿಯ ಮೂಲಗಳ ಪ್ರಕಾರ ಬಿಜೆಪಿ ಹೈಕಮಾಂಡ್ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಬಿ.ವೈ. ವಿಜಯೇಂದ್ರ ಅವರ ಮೇಲಿನ ಭ್ರಷ್ಟಚಾರ ಆರೋಪವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಇದರಿಂದ ಹೆಚ್‌. ವಿಶ್ವನಾಥ್ ಅವರಿಗೆ ತೊಡಕಾಗಲಿದೆ. ಯಾಕೆಂದರೆ ತಮ್ಮ ಮೇಲಿನ ಯಾವ ಆರೋಪ, ಭಿನ್ನಮತಗಳನ್ನು ಸಹಿಸುತ್ತಾರೆ. ಆದರೆ ಭ್ರಷ್ಟಾಚಾರದ ಆರೋಪಗಳನ್ನು ಸಹಿಸಲಾರರು. ಅದೂ ಸ್ವ ಪಕ್ಷೀಯರಿಂದಲೇ ಬಂದಾಗ ಬಿಎಸ್‌ವೈ ಇನ್ನಷ್ಟು ಉಗ್ರರಾಗುತ್ತಾರೆ. ಯಾಕೆಂದರೆ ಬಿಎಸ್‌. ಯಡಿಯೂರಪ್ಪನವರು ತಮಗೆ ಈಗಾಗಲೇ ಅಂಟಿರುವ ಭ್ರಷ್ಟಾಚಾರದ ಕಳಂಕದಿಂದ ಮುಕ್ತರಾಗಿ ರಾಜಕೀಯ ಜೀವನದಿಂದ ಗೌರವಯುತವಾಗಿ ನಿವೃತ್ತಿ ಪಡೆಯಲು ಯತ್ನಿಸುತ್ತಿದ್ದಾರೆ. ಆದರೆ ಈಗ ಹೆಚ್‌.ವಿಶ್ವನಾಥ್ ಬಿಎಸ್‌ವೈ ವಿರುದ್ಧ ಭ್ರಷ್ಟಾಚಾರದ ಆರೋಪವನ್ನು ಮಾಡಿದ್ದಾರೆ.

ಇದರಿಂದ ಮುಖ್ಯಮಂತ್ರಿ ಯಡಿಯೂರಪ್ಪ ಸಹಜವಾಗಿಯೇ ಕೆರಳಿದ್ದಾರೆ ಎನ್ನಲಾಗಿದ್ದು ಹೆಚ್.ವಿಶ್ವನಾಥ್ ಅಮಾನತ್ತಿಗೆ ಬಿಜೆಪಿ ಹೈಕಮಾಂಡ್‌ ಮೇಲೆ ಒತ್ತಡ ಹೇರಿದ್ದಾರೆ ಎನ್ನಲಾಗಿದೆ. ಜೊತೆಗೆ ಹೆಚ್‌. ವಿಶ್ವನಾಥ್ ವಿಧಾನಪರಿಷತ್ ಸದಸ್ಯರಾಗಿರುವುದಿಂದ ಅವರನ್ನು ಅಮಾನತ್ತು ಮಾಡುವುದರಿಂದ ಬಿಜೆಪಿಗೆ ಹೆಚ್ಚಿನ ನಷ್ಟವೂ ಆಗಲಾರದು. ಬಿಜೆಪಿ ಅಗತ್ಯ ಬಹುಮತಹೊಂದಿದ್ದು ವಿಶ್ವನಾಥ್ ಬದಲಿಗೆ ಬೇರೆಯವರನ್ನು ವಿಧಾನಪರಿಷತ್‌ಗೆ ಆಯ್ಕೆ ಮಾಡುವ ಶಕ್ತಿ ಹೊಂದಿದೆ.

ಒಟ್ಟಿನಲ್ಲಿ ಹೆಚ್‌.ವಿಶ್ವನಾಥ್ ಮುಖ್ಯಮಂತ್ರಿ ಯಡಿಯೂರಪ್ಪನವರ ಮೇಲೆ ಮಾಡಿರುವ ಆರೋಪಗಳು ಹಳ್ಳ ಹಿಡಿಯುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿದ್ದು ಈ ಸಂಬಂಧ ವಿರೋಧಪಕ್ಷಗಳು ಮೈಕೊಡವಿ ಮೇಲೆದ್ದು ಹೋರಾಟವನ್ನು ನಡೆಸಿದರೆ ಮಾತ್ರ ಸರ್ಕಾರದ ಅಕ್ರಮ ಅವ್ಯವಹಾರಗಳನ್ನು ಬೈಲಿಗೆಳೆಯಲು ಸಾಧ್ಯ. ಆದರೆ ಹೆಚ್‌.ವಿಶ್ವನಾಥ್ ಮಾತ್ರ ಈ ಭದ್ರಾ ಮೇಲ್ದಂಡೆಯ ಆರೋಪದ ಮೂಲಕ ಬಿಜೆಪಿಯಲ್ಲಿ ತಮ್ಮ ಸ್ಥಾನವನ್ನು ಮತ್ತಷ್ಟು ದುರ್ಬಲಗೊಳಿಸಿಕೊಂಡಿದ್ದಾರೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಇದನ್ನೂ ಓದಿ: ಯುಎಪಿಎ ಕಾಯ್ದೆಯಡಿ ಬಂಧಿತ ಪತ್ರಕರ್ತ ಸಿದ್ದಿಕಿ ಕಪ್ಪನ್ ತಾಯಿ ನಿಧನ

 

ರಾಜೇಶ್ ಹೆಬ್ಬಾರ್
+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಆಸ್ಪತ್ರೆ ಸಿಬ್ಬಂದಿಗೆ ಲಂಚ ನೀಡಲು ಸಾಧ್ಯವಾಗದೆ ರಸ್ತೆಯಲ್ಲೆ 6 ತಿಂಗಳ ಶಿಶುವಿಗೆ ಜನ್ಮ ನೀಡಿದ ಮಹಿಳೆ | Naanu Gauri

ಆಸ್ಪತ್ರೆ ಸಿಬ್ಬಂದಿಗೆ ಲಂಚ ನೀಡಲು ಸಾಧ್ಯವಾಗದೆ ರಸ್ತೆಯಲ್ಲೆ 6 ತಿಂಗಳ ಶಿಶುವಿಗೆ ಜನ್ಮ ನೀಡಿದ...

0
ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆ ನಿರಾಕರಿಸಿದ ಕಾರಣಕ್ಕೆ ಮಹಿಳೆಯೊಬ್ಬರು ರಸ್ತೆಯಲ್ಲೇ ಆರು ತಿಂಗಳ ಶಿಶುವಿಗೆ ಜನ್ಮ ನೀಡಿರುವ ಅಘಾತಕಾರಿ ಘಟನೆ ಮಧ್ಯಪ್ರದೇಶದ ಭಿಂಡ್ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ. ಆರು ತಿಂಗಳ ಗರ್ಭಿಣಿಯಾಗಿದ್ದ ಕಲ್ಲೋ ಬಾಯಿಯನ್ನು...
Wordpress Social Share Plugin powered by Ultimatelysocial