ಮೇ ತಿಂಗಳ ಕೊನೆಯ ವಾರದ ಸಂಚಿಕೆಯಲ್ಲಿ ನರೇಂದ್ರ ಮೋದಿ ಸರ್ಕಾರದ 7 ವರ್ಷಗಳ ಸಾಧನೆ ಅಥವಾ
ವೈಫಲ್ಯದ ಕುರಿತು ಬರೆಯಬೇಕಿತ್ತು. ಆದರೆ ಸಂಪಾದಕರು ಕೊರೊನಾ ನಿರ್ವಹಣೆಯ ವೈಫಲ್ಯ ಮತ್ತು ಕೊರೊನಾ, ಕಪ್ಪು ಫಂಗಸ್ ಹಾಗೂ ವ್ಯಾಕ್ಸೀನ್ ಕುರಿತ ವೈಜ್ಞಾನಿಕ ಸಂಗತಿಗಳನ್ನು ಜನರಿಗೆ ತಲುಪಿಸುವುದು ನಮ್ಮ ಆದ್ಯತೆಯಾಗಿರಬೇಕೆಂದು ಭಾವಿಸಿದರು. ಜೊತೆಗೆ ಈ 7 ವರ್ಷಗಳಲ್ಲಿ ಮೋದಿ ಸರ್ಕಾರದ ಕುರಿತು ನ್ಯಾಯಪಥ ಮತ್ತು ಗೌರಿ ಲಂಕೇಶ್ ಪತ್ರಿಕೆಯಲ್ಲಿ ನಿರಂತರವಾಗಿ ಬರೆಯಲಾಗಿದೆ. ಹೌದು, ಬಹುತೇಕ ಟೀಕೆಗಳನ್ನೇ ಮಾಡಲಾಗಿದೆ. ಮತ್ತೆ ಅದನ್ನೇ ಪುನರಾವರ್ತಿಸುವುದರಿಂದ ಬೋರ್ ಹೊಡೆಯುವುದಲ್ಲದೇ ಮತ್ತೇನೂ ಪ್ರಯೋಜನವಿಲ್ಲ.

ನರೇಂದ್ರ ಮೋದಿ ಸರ್ಕಾರದ ಕುರಿತು ನಿಮ್ಮ ಅನಿಸಿಕೆಗಳು ಒನ್ ಸೈಡೆಡ್ ಅಂತ ಕೆಲವರು ಹೇಳುತ್ತಾರೆ. ಹೌದು ಅದರಲ್ಲೇನೂ ಸಂದೇಹವಿಲ್ಲ. ಪ್ರಜಾಪ್ರಭುತ್ವದಲ್ಲಿ ಪತ್ರಿಕೆಯ ಕೆಲಸ ಆಡಳಿತ ಪಕ್ಷವನ್ನು ಪ್ರಶ್ನಿಸುವುದಾಗಿರಬೇಕು, ಹಾಗಾಗಿ ಹೀಗೆ ಎಂದು ಹೇಳಿದರೂ ಕ್ಲೀಷೆಯಾದೀತು. ಯಾವ ಪರಂಪರೆಯನ್ನು ಈ ಪತ್ರಿಕೆಯು ಪ್ರತಿನಿಧಿಸುತ್ತದೋ ಅದು ಇದುವರೆಗೆ ಅತ್ಯಂತ ಹೆಚ್ಚು ಟೀಕಿಸಿರುವುದು ಕಾಂಗ್ರೆಸ್ ಪಕ್ಷದ ಸರ್ಕಾರಗಳನ್ನು, ಬೇಕಾದರೆ ನಮ್ಮೆಲ್ಲಾ ಹಳೆಯ ಸಂಚಿಕೆಗಳನ್ನು ನೋಡಿ ಎಂದೂ ಹೇಳಹೋಗುವುದಿಲ್ಲ. ಇಂತಹ ಸಮಜಾಯಿಷಿಗಳಿಂದ ಹೆಚ್ಚೇನೂ ಪ್ರಯೋಜನವಾಗದು. ಏಕೆಂದರೆ ಈ ರೀತಿಯ ಪ್ರಶ್ನೆ ಕೇಳುವವರಲ್ಲಿ ಆ ಪ್ರಮಾಣದ ಕುರುಡುತನ ಆವರಿಸಿದೆ.

ಕೆಲವೊಮ್ಮೆ ಒನ್‌ಸೈಡೆಡ್ ಆಗಿ ನಿಲ್ಲುವುದರ ಅಗತ್ಯವಿರುತ್ತದೆ. ಸತ್ಯ, ನ್ಯಾಯ ಹಾಗೂ ಮಾನವೀಯತೆಯ ಪರ ಒನ್‌ಸೈಡೆಡ್ ಆಗಿ. ಆದರೆ ನರೇಂದ್ರ ಮೋದಿಯವರ ವಿರುದ್ಧ ಎಂದರೆ ಕಾಂಗ್ರೆಸ್ ಪರ, ಬಿಜೆಪಿಯ ಪರ ಎಂದರೆ ಹಿಂದುಗಳ ವಿರುದ್ಧ ಎಂಬಂತೆ ಹೇಳುವವರ ಜೊತೆಯೇ ಸಮಸ್ಯೆ. ಇಂದಿರಾಗಾಂಧಿಯವರನ್ನು ನಖಶಿಖಾಂತ ವಿರೋಧಿಸಿದವರಲ್ಲಿ ಕೆಲವರನ್ನು ಬಿಟ್ಟರೆ ಬಹುತೇಕರು ನರೇಂದ್ರ ಮೋದಿಯವರ ವಿರುದ್ಧ ಇದ್ದಾರೆ ಎಂಬುದು ಅವರಿಗೆ ಕಾಣುವುದಿಲ್ಲ. ಜೀವನವಿಡೀ ಕಾಂಗ್ರೆಸ್ಸನ್ನು ವಿರೋಧಿಸಿಕೊಂಡು ಬಂದ ಕೆಲವರು ತಮ್ಮ ಕಡೆಗಾಲದಲ್ಲಿ ಅದನ್ನು ಬೆಂಬಲಿಸುತ್ತಿರುವುದೇಕೆ ಎಂಬುದೂ ಗೊತ್ತಾಗುವುದಿಲ್ಲ. ನರೇಂದ್ರ ಮೋದಿ ಹಾಗೂ ಬಿಜೆಪಿಗಳು ಕಾಂಗ್ರೆಸ್ ಹಾಗೂ ಇಂದಿರಾಗಾಂಧಿಯ ಮುಂದುವರಿಕೆ ಎಂದು ಭಾವಿಸಲೂ ಕಾರಣಗಳಿವೆ ಎಂಬುದು ಅವರಿಗೆ ಅರ್ಥವಾಗುವುದಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಈ ದೇಶದಲ್ಲಿ ಹಿಂದೂಗಳ ಪರ ನಿಲ್ಲುವುದು ಎಂದರೆ ಅದು ಬಿಜೆಪಿ, ಆರೆಸ್ಸೆಸ್ಸಿನ ವಿರುದ್ಧ ನಿಲ್ಲುವುದು ಎಂಬುದಂತೂ ಅಂಥವರಿಗೆ ಅರ್ಥವಾಗುವುದು ಇನ್ನೂ ಕಷ್ಟ. ಏಕೆಂದರೆ ಅವರು ಕುರುಡುತನದಿಂದ ಅಥವಾ ಹಠದಿಂದ ವಾದಕ್ಕಷ್ಟೇ ನಿಂತಿರುತ್ತಾರೆ. ಚರ್ಚೆಗೆ, ಸಂವಾದಕ್ಕೆ ಅಲ್ಲ.

ಅದೇನೇ ಇರಲಿ, ಈ 7 ವರ್ಷಗಳ ಬಿಜೆಪಿ ಫುಲ್ ಮೆಜಾರಿಟಿ ಸರ್ಕಾರದ ಕುರಿತಂತೆ ಬರೆಯುತ್ತಾ ಮತ್ತೆ ನಕಾರಾತ್ಮಕ ಸಂಗತಿಗಳನ್ನು ಬರೆಯಲು ಅಷ್ಟು ಉತ್ಸಾಹ ಹುಟ್ಟುತ್ತಿಲ್ಲ. ಹಾಗಾಗಿ ಈಗ ಒಂದಷ್ಟು ಸಕಾರಾತ್ಮಕ ಸಂಗತಿಗಳ ಕುರಿತು ಬರೆದು, ಪಾಸಿಟಿವಿಟಿ ಹೆಚ್ಚಿಸಲು ಈ ಲೇಖನದಲ್ಲಿ ಆದ್ಯತೆ ಕೊಡಲಾಗಿದೆ.

ಸಕಾರಾತ್ಮಕ ಸಂಗತಿ ಏನೆಂದರೆ ಮೋದಿಯವರಿಗೆ ಸುಳ್ಳು ಹೇಳುವುದು ಸುಸ್ತು ತರುತ್ತಿದೆ. ಅವರಿಗೆ ತಮ್ಮ ಮಾತುಗಳು ಸೋಲುತ್ತಿರುವುದರ ಅರಿವಾಗುತ್ತಿದೆ. ಅದಕ್ಕೆ ನಿನ್ನೆಯ (ಜೂನ್ 7ರ) ಭಾಷಣವೇ ಸಾಕ್ಷಿ. ಅದರಲ್ಲಿ ಸತ್ವವಾಗಲೀ, ಉತ್ಸಾಹವಾಗಲೀ ಇಲ್ಲದೇ ಮೋದಿಯವರು ಆ ಭಾಷಣ ಮಾಡಲು ಬೇಕಾದ ಶಕ್ತಿ ಸಂಚಯ ಮಾಡಿಕೊಳ್ಳುತ್ತಾ ಸುಸ್ತಾಗುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಈ ಸುಸ್ತು ಏಕೆ ಆಗುತ್ತಿದೆ?

ಸುಳ್ಳುಗಳನ್ನು ಹೇಳುತ್ತಿರುವುದು ಅವರಿಗೇ ಗೊತ್ತಿದ್ದರೂ, ಅವರೇ ನಂಬಿಕೊಂಡು ಹೋದಷ್ಟು ದಿನ ಸುಸ್ತೆನಿಸುವುದಿಲ್ಲ; ಅದಕ್ಕಿಂತ ಹೆಚ್ಚಾಗಿ ಮಿಕ್ಕವರಿಗೆ ಅದು ಸುಳ್ಳೆಂದು ಗೊತ್ತಾಗುತ್ತಿದೆ ಎಂದು ಗೊತ್ತಾದಾಗ ಕಷ್ಟವಾಗುತ್ತದೆ. ಮುಖ್ಯವಾಗಿ ಸದರಿ ಭಾಷಣದಲ್ಲಿ ರಾಜ್ಯಗಳ ಮೇಲೆ ಮೋದಿಯವರು ಮುಗಿಬಿದ್ದ ರೀತಿಯು ಅವರಿಗೆ ಅತೀವ ಸುಸ್ತು ತಂದಂತೆ ಕಂಡಿತು. ಏಕೆಂದರೆ ವ್ಯಾಕ್ಸಿನ್ ಒಳಗೊಂಡಂತೆ ಕೋವಿಡ್ ನಿಯಂತ್ರಣದ ಬಹುತೇಕ ಸಂಗತಿಗಳನ್ನು ಸಂಪೂರ್ಣ ಕೇಂದ್ರೀಕರಿಸಿದ್ದ ಒಕ್ಕೂಟ ಸರ್ಕಾರವು, ಪರಿಸ್ಥಿತಿ ಕೈ ಮೀರುವ ಹಂತಕ್ಕೆ ಬಂದಿದ್ದಾಗ ಮಾತ್ರ ರಾಜ್ಯಗಳ ತಲೆ ಮೇಲೆ ಹಾಕಲು ಶುರು ಮಾಡಿತ್ತು. ರಾಜ್ಯಗಳು ಆ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದರ ಜೊತೆಗೆ ಒಕ್ಕೂಟ ಸರ್ಕಾರದ ಮೇಲೆ ಒಂದೇ ಸಮನೆ ಒತ್ತಡ ನಿರ್ಮಿಸಿದ್ದವು.

ನಮಗೆ ಅವಕಾಶ ಕೊಡಿ, ಅಧಿಕಾರ ಕೊಡಿ, ಅನುದಾನ ಕೊಡಿ ಎಂಬುದು ಅವರ ಬೇಡಿಕೆಯಾಗಿತ್ತು. ಇದರಿಂದ ವ್ಯಾಕ್ಸೀನ್ ಕುರಿತಂತೆ ಕಳೆದ ಜುಲೈನಿಂದ ಮೋದಿ ಸರ್ಕಾರವು ಸತತವಾಗಿ ಹೇಳುತ್ತಾ ಬಂದ ಸುಳ್ಳುಗಳೆಲ್ಲವೂ ಬಯಲಾಗಿದ್ದವು. ಈಗ ಲೀಡರ್ ಬದಲಾದ ಸುಪ್ರೀಂಕೋರ್ಟಿನಿಂದ ಒಂದೇ ಸಮನೆ ಮೊಟಕಿಸಿಕೊಳ್ಳಬೇಕಾಗಿ ಬಂದಿದೆ. ಗಂಗೆಯಲ್ಲಿ ತೇಲಿಹೋದ ಶವಗಳು, ದೇಶದ ಕೋಟಿಗಟ್ಟಲೆ ಕುಟುಂಬಗಳ ಕಣ್ಣೀರು, ಕುಸಿಯುತ್ತಿರುವ ಆರ್ಥಿಕತೆ ಇವೆಲ್ಲವೂ ಸಾಮಾನ್ಯ ಜನರಲ್ಲಿ ಆಕ್ರೋಶ ಹುಟ್ಟಿಸಲು ಶುರು ಮಾಡಿವೆ ಎಂಬುದು ಎಂಥವರಿಗೂ ಗೊತ್ತಾಗುತ್ತದೆ. ಎಲ್ಲಾ ಗೊತ್ತಿರುವ ಬಿಜೆಪಿ ಸರ್ಕಾರಕ್ಕೆ ಗೊತ್ತಾಗುವುದಿಲ್ಲವೇ? ಹೀಗಾಗಿ ಏನೋ ಒಂದು ವೇಷ ಬದಲಾವಣೆಯ ಅಗತ್ಯವಿತ್ತು. ಹಿಂದಿನ ಸಾರಿಯಂತೆ ನಿರ್ಮಲಾ ಸೀತಾರಾಮನ್ ಅವರನ್ನೋ ಅಥವಾ ಹರ್ಷವರ್ಧನ್‌ರನ್ನೋ ಫೀಲ್ಡಿಗೆ ಇಳಿಸಿದರೆ ಪ್ರಯೋಜನವಿಲ್ಲ. ಖುದ್ದಾಗಿ ಖಾವಂದರೇ ಬರಬೇಕಾಯಿತು, ಬಹು ಕಷ್ಟದ ಕೆಲಸವದಾಗಿತ್ತು.

ಆದರೆ ಅಂತಹ ತೇಪೆದಾರಿಕೆಯ ಸಂದರ್ಭದಲ್ಲೂ ವಿಪರೀತ ಸುಳ್ಳುಗಳನ್ನು ಹೇಳಬೇಕಾಗಿ ಬಂದಿದ್ದು ಬತ್ತಳಿಕೆಯಲ್ಲಿ ಬಾಣಗಳೆಲ್ಲಾ ಖಾಲಿಯಾಗಿರುವುದರ ಸೂಚಕವಾಗಿತ್ತು. ರಾಜ್ಯಗಳಿಗೆ ಅಧಿಕಾರ ಕೊಡಬೇಕು ಎಂಬ ಒತ್ತಾಯ ಕೇಳಿಬಂದಿದ್ದರಿಂದ ಕೊಟ್ಟಿದ್ದೆವು, ಅವರು ಹಾಳು ಮಾಡಿದ್ದರು, ನಾವೀಗ ಸರಿ ಮಾಡಲು ಮತ್ತೆ ಮರಳಿ ನಮ್ಮ ತೆಕ್ಕೆಗೆ ತೆಗೆದುಕೊಳ್ಳುತ್ತಿದ್ದೇವೆ ಎಂಬ ಹುಸಿ ಪೋಸು ಕೊಟ್ಟರು. ಅವರ ದುರಂತ ಅದಲ್ಲ; ಈಗಲೂ ವ್ಯಾಕ್ಸೀನ್ ಕೊರತೆಯನ್ನು ಸರಿ ಮಾಡಿಕೊಳ್ಳುವುದು ಸುಲಭ ಸಾಧ್ಯವಿಲ್ಲ ಎಂಬುದು ಎಲ್ಲರಿಗಿಂತ ಚೆನ್ನಾಗಿ ಅವರಿಗೇ ಗೊತ್ತಿದೆ. ಈ ಅರಿವು ಸುಸ್ತು ಮಾಡಿಸುತ್ತದೆ. ಅಷ್ಟರ ಮೇಲೆ 70 ವರ್ಷ ಮಾಡದೇ ಇದ್ದುದನ್ನು ೫ ವರ್ಷಗಳಲ್ಲಿ ಮಾಡಿದ್ದೇವೆಂಬ ಇನ್ನೂ ದೊಡ್ಡ ಹುಸಿ ಕ್ಲೇಮು ಬೇರೆ ಮಾಡುವಾಗ ಉಸಿರು ಹಿಡಿಯುತ್ತದೆ. ಅದೇ ನಿನ್ನೆ ಮೋದಿಯವರಿಗೆ ಆಗಿದ್ದು. ಈ ಭಾಷಣ ಮುಗಿಸಿದ ಕೆಲವೇ ಗಂಟೆಗಳಲ್ಲಿ ’ದಿ ಹಿಂದೂ’ ಪತ್ರಿಕೆಯು ಅದರಲ್ಲಿನ ಪ್ರಮುಖ ಕ್ಲೇಮನ್ನು ಸುಳ್ಳೆಂದು ಫ್ಯಾಕ್ಟ್ ಚೆಕ್ ಮಾಡಿಬಿಡುತ್ತದೆ. ಸುಳ್ಳನ್ನು ಪತ್ತೆ ಹಚ್ಚುವುದು ಒಂದರ್ಧ ಜನರಿಗೆ ಸಾಧ್ಯವಾಗದೇ ಇರಬಹುದು; ಆದರೆ ಈಗ ಸತ್ಯ ಮಾತಾಡಲು ಧೈರ್ಯ ಪಡೆದುಕೊಂಡಿರುವವರು ಹೆಚ್ಚುತ್ತಿದ್ದಾರೆ.

ಬದಲಾದ ಇನ್ನೊಂದು ಸಂದರ್ಭವೂ ಇದೆ. ಇತ್ತೀಚಿನ ವಿಧಾನಸಭಾ ಚುನಾವಣೆಗಳ ನಂತರ ರಾಜ್ಯ ಸರ್ಕಾರಗಳ ಧೈರ್ಯ ಹೆಚ್ಚಲಿದೆ. ದೊಡ್ಡ ರಾಜ್ಯಗಳ ಪೈಕಿ ಪ.ಬಂಗಾಳ, ಜಾರ್ಖಂಡ್, ಪಂಜಾಬ್, ರಾಜಸ್ತಾನ, ಮಹಾರಾಷ್ಟ್ರ, ಛತ್ತೀಸ್‌ಗಢ, ಕೇರಳ, ತಮಿಳುನಾಡುಗಳಲ್ಲಿ ಬಿಜೆಪಿ ವಿರೋಧಿ ಸರ್ಕಾರಗಳಿವೆ. ಆಂಧ್ರಪ್ರದೇಶ, ತೆಲಂಗಾಣ ಮತ್ತು ಒರಿಸ್ಸಾಗಳಲ್ಲಿ ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿವೆ. ದೊಡ್ಡ ರಾಜ್ಯಗಳ ಪೈಕಿ ಉತ್ತರಪ್ರದೇಶ, ಉತ್ತರಾಖಂಡ, ಮಧ್ಯಪ್ರದೇಶ, ಗುಜರಾತ್, ಹರಿಯಾಣ, ಅಸ್ಸಾಂ, ಕರ್ನಾಟಕ, ಹಿಮಾಚಲ ಪ್ರದೇಶಗಳಲ್ಲಿ ಬಿಜೆಪಿಯೂ, ಬಿಹಾರದಲ್ಲಿ ಅವರ ಕೂಟದ ಸರ್ಕಾರಗಳೂ ಇವೆ. ದೆಹಲಿ ಪುಟ್ಟದಾದರೂ ಮಹತ್ವದ ರಾಜ್ಯವಾಗಿದ್ದು, ಬಿಜೆಪಿಯ ವಿರುದ್ಧ ದನಿಯೆತ್ತುವ ಪಕ್ಷ ಅಧಿಕಾರದಲ್ಲಿದೆ. ಪರಿಸ್ಥಿತಿ ಹೀಗಿರುವಾಗ ಬಿಜೆಪಿಗೆ ಎರಡು ರೀತಿಯ ಅನನುಕೂಲವಿದೆ. ರಾಜ್ಯಗಳನ್ನು ಸರಿಯಾದ ರೀತಿಯಲ್ಲಿ ನಡೆಸಿಕೊಳ್ಳದಿದ್ದರೆ ಬಿಜೆಪಿಯೇತರ ಸರ್ಕಾರಗಳಿಂದ ವಿರೋಧ; ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಸರ್ಕಾರಗಳು ಜನಪ್ರಿಯತೆ ಕಳೆದುಕೊಳ್ಳುವ ಸಾಧ್ಯತೆ.

ಅಂದರೆ ಮೋದಿ ಸರ್ಕಾರವು ಕಳೆದ 7 ವರ್ಷಗಳಲ್ಲಿ ಎಂದೂ ಇಲ್ಲದಿರುವ ಪ್ರಮಾಣದ ಸವಾಲನ್ನು ಎದುರಿಸುತ್ತಿದೆ. ಮೋದಿಯವರ ಭಾಷಣದ ಸುಸ್ತಿನ ಮೂಲ ಅಲ್ಲಿದೆ. ಇದಕ್ಕಿಂತ ಹೆಚ್ಚಾಗಿ ಸದ್ಯದಲ್ಲೇ ಕಾಡಲಿರುವ ದೊಡ್ಡ ಸಮಸ್ಯೆಯಿದೆ. ಅದು ದೇಶವು ಎದುರಿಸಲಿರುವ ಆರ್ಥಿಕ ಬಿಕ್ಕಟ್ಟಿನದ್ದು. ಮೊದಲನೇ ಲಾಕ್‌ಡೌನ್‌ನಲ್ಲಿ ನೆಪಮಾತ್ರಕ್ಕೆ ಒಂದು ಪ್ಯಾಕೇಜ್ ಇತ್ತು; ಈ ಸಾರಿ ಅದೂ ಇಲ್ಲ. ದೇಶದ ಗಣನೀಯ ಪ್ರಮಾಣದ ಆರ್ಥಿಕತೆಯನ್ನು ಲಾಕ್‌ಡೌನ್‌ನಿಂದ ಸ್ತಬ್ಧಗೊಳಿಸಿದ ನಂತರ ಅದಕ್ಕೊಂದು ಆರ್ಥಿಕ ಪುನಶ್ಚೇತನದ ಪ್ಯಾಕೇಜ್ ಬೇಕೆಂಬುದು ಎಕನಾಮಿಕ್ಸ್‌ನ ಬೇಸಿಕ್ ಪಾಠವಲ್ಲವೇ? 2020ರ ಮಾರ್ಚ್ ಕೊನೆಯ ಭಾಗದಲ್ಲಿ ಪ್ರಪಂಚದ ಮಟ್ಟದಲ್ಲಿ ಹೆಸರು ಮಾಡಿರುವ (ಮುಕ್ತ ಮಾರುಕಟ್ಟೆಯನ್ನು ಒಪ್ಪಿರುವ) ಕನಿಷ್ಠ 7 ಅರ್ಥಶಾಸ್ತ್ರಜ್ಞರು ಜನರ ಕೈಗೆ ಉದಾರವಾಗಿ ಹಣ ನೀಡಿ, ಅದೊಂದೇ ಉಳಿದಿರುವ ದಾರಿ ಎಂದರು. ಅದನ್ನು ಆಗಲೂ ಮಾಡಲಿಲ್ಲ; ಈಗಲೂ ಮಾಡುತ್ತಿಲ್ಲ.

ಈ ಸರ್ಕಾರಕ್ಕೆ ಆರ್ಥಿಕ ಸಲಹೆ ಕೊಡುವವರು ಯಾರೂ ಇದ್ದಂತಿಲ್ಲ. ಜನರ ಕೈಯ್ಯಲ್ಲಿ ಹಣ ಓಡಾಡದೇ ಇದ್ದರೆ, ಕೊಳ್ಳುವ ಶಕ್ತಿ ಉಳಿದುಕೊಳ್ಳದೇ ಇದ್ದರೆ ತಳಮಟ್ಟದ ಜನರು ಮಾತ್ರವೇ ಅಲ್ಲ, ಅಲ್ಲಿಂದ ಒಂದು ಸರಣಿಯೋಪಾದಿಯಲ್ಲಿ ಮೇಲಿನ ಸ್ತರದ ಜನರಲ್ಲೂ ಆರ್ಥಿಕತೆ ಬೆಳೆಯುವುದು ಸಾಧ್ಯವೇ ಇಲ್ಲ. ಆದರೆ ಈ ಸರ್ಕಾರದ ನೀತಿಯು ಮೊದಲಿಂದಲೂ ಹಣವು ಕೆಲವರಲ್ಲಿ (ಅದರಲ್ಲೂ ಬೆರಳೆಣಿಕೆಯ ಉದ್ದಿಮೆಪತಿಗಳ ಕೈಯ್ಯಲ್ಲಿ ಹಾಗೂ ಎಲ್ಲಾ ಪಕ್ಷಗಳಿಂದ ವಲಸೆ ಬಂದು ಬಿಜೆಪಿಯಲ್ಲಿ ಕೂಡಿಕೊಂಡಿರುವ ಭ್ರಷ್ಟರಲ್ಲಿ) ಮಾತ್ರ ಸಂಪತ್ತು ಶೇಖರಣೆ ಮಾಡುವುದೇ ಆಗಿದೆ. ಇದರ ಫಲವಾಗಿ ದೇಶದ ಜಿಡಿಪಿಯು -7.3%ಗಿಳಿದಿದೆ. ಇದರ ಪರಿಣಾಮವು ದೇಶದ ಮೇಲೆ ಏನಿರಬಹುದು?

ಯಾವುದೇ ಫ್ಯಾಸಿಸ್ಟ್ ಪಕ್ಷವು (ಒಂದೆರಡು ಅಪವಾದಗಳನ್ನು ಹೊರತುಪಡಿಸಿ) ದೀರ್ಘಕಾಲ ಉಳಿಯುವುದಿಲ್ಲ; ಹೋಗುತ್ತದೆ ಎಂಬುದು ಇತಿಹಾಸ ತೋರುವ ಸತ್ಯ. ಆದರೆ ತೊಲಗುವ ಮುಂಚೆ ಅಲ್ಲೊಂದು ನರಮೇಧ ನಡೆಸಿ ಹೋಗುತ್ತದೆ. ಅಂತಹದೊಂದು ನಡೆಯದೇ ಇದನ್ನು ಸೋಲಿಸುವುದು ಹೇಗೆ ಎಂಬುದಷ್ಟೇ ಕಾಳಜಿ. ಈಗ ದೇಶದಲ್ಲಿ ನರಮೇಧವೊಂದು ನಡೆದುಹೋಗಿದೆ. ಕೆಲವು ಲಕ್ಷ ಸಾವುಗಳ ಲೆಕ್ಕ ಇದೆ; ಹಲವು ಲಕ್ಷ ಸಾವುಗಳ ಲೆಕ್ಕವೂ ಇಲ್ಲ.

ಇದಿಲ್ಲಿಗೆ ನಿಲ್ಲುತ್ತದೆಯಾ?
ಹೇಳಲಾಗದು. ಏಕೆಂದರೆ ಮೋದಿ ಸರ್ಕಾರದ ವೈಫಲ್ಯಗಳಾಚೆಗೂ ಅವರ ಬಳಿಯಿರುವ ಸುಳ್ಳಿನ ಫ್ಯಾಕ್ಟರಿ ಮತ್ತು ಅದನ್ನು ದೇಶದ ಮೂಲೆ ಮೂಲೆಗೂ ಹಂಚಲು ಗುತ್ತಿಗೆ ತೆಗೆದುಕೊಂಡಿರುವ ಡೀಲರ್‌ಗಳ ಸಾಮರ್ಥ್ಯವನ್ನು ಕಡಿಮೆ ಅಂದಾಜು ಮಾಡಲಾಗದು. ಜೊತೆಗೆ ಈ ದೇಶ ವಿರೋಧಿ ಶಕ್ತಿಯನ್ನು ಜನಸಾಮಾನ್ಯರ ಕಣ್ಣಿನಲ್ಲಿ ವ್ಯವಸ್ಥಿತವಾಗಿ ಎಕ್ಸ್‌ಪೋಸ್ ಮಾಡಲಾಗದ ವೈಫಲ್ಯವೂ ಎದ್ದು ಕಾಣುತ್ತಿದೆ. ಪರ್ಯಾಯದ ಭರವಸೆ ಮೂಡಿಸದ ವಿರೋಧ ಪಕ್ಷಗಳು, ಪ್ರಮುಖವಾಗಿ ಕಾಂಗ್ರೆಸ್ ಪಕ್ಷದ ಸಮಸ್ಯೆಯು ಬಹುದೊಡ್ಡ ತೊಡಕಾಗಿದೆ. ಮೋದಿಯಲ್ಲದಿದ್ದರೆ ಯಾರು ಎಂಬ ಪ್ರಶ್ನೆ ಎದುರಾದರೆ ಅವರ ವಿರೋಧಿಗಳೂ ತಡಕಾಡುತ್ತಾರೆ. ಏಕೆಂದರೆ ಮೋದಿಯ ಒಂದು ಬೃಹತ್ ಹುಸಿ ಇಮೇಜನ್ನು ಕಟ್ಟಿ ನಿಲ್ಲಿಸಲಾಗಿದೆ. ಅದಕ್ಕೆದುರು ಯಾರು ಎಂಬ ಪ್ರಶ್ನೆಗೆ ಇಷ್ಟು ಬೃಹತ್ ವೈಫಲ್ಯದ ನಂತರವೂ ಜನಸಾಮಾನ್ಯರಿಗೆ ಮನವರಿಕೆ ಮಾಡಿಕೊಡಬಲ್ಲ ಉತ್ತರವೇಕಿಲ್ಲ?

ಏಕೆಂದರೆ ಪ್ರಶ್ನೆಯಲ್ಲೇ ತಪ್ಪಿದೆ ಎಂದು ಹೇಳಲಾಗುತ್ತಿಲ್ಲ. ಮೊದಲನೆಯದಾಗಿ ಮೋದಿಯೇ ಪರ್ಯಾಯವಾಗಿರಲಿಲ್ಲ. ಹಿಂದೆ ಇದ್ದ ವ್ಯವಸ್ಥೆಯಲ್ಲಿ ಅಪಾರ ದೋಷಗಳಿದ್ದವು.
ಆದರೆ ಹಿಂದಿನೆಲ್ಲಾ ದೋಷಗಳ ವಿರಾಟ್ ರೂಪವೇ ಮೋದಿ ಮತ್ತು ಆರೆಸ್ಸೆಸ್ಸು. ಹಾಗಾಗಿಯೇ ಈ ಸರ್ಕಾರಕ್ಕಿಂತ ಹಿಂದಿನ ಎಲ್ಲಾ ಸರ್ಕಾರಗಳೂ ಈಗ ಸಭ್ಯರ ರೀತಿ, ಧರ್ಮಾತ್ಮರ ರೀತಿ, ದಕ್ಷರ ರೀತಿ ಕಾಣುತ್ತಿದ್ದಾರೆ.

ಇನ್ನು ಎರಡನೆಯದಾಗಿ, 70 ವರ್ಷಗಳ ಪ್ರಶ್ನೆ. 70 ವರ್ಷಗಳಲ್ಲಿ 50 ವರ್ಷ ಕಾಂಗ್ರೆಸ್ ನೇತೃತ್ವದ ಸರ್ಕಾರವಿದ್ದರೆ, 22 ವರ್ಷ ಬಿಜೆಪಿಯು ಅಂಗವಾಗಿದ್ದ ಸರ್ಕಾರಗಳಿದ್ದವು. 2 ವರ್ಷ ಬಿಜೆಪಿ ಇರದಿದ್ದ ಆದರೆ, ಕಾಂಗ್ರೆಸ್ ಪಕ್ಷವು ಹೊರಗಿನಿಂದ ಬೆಂಬಲ ಕೊಟ್ಟಿದ್ದ ಸರ್ಕಾರಗಳಿದ್ದವು. ತಮ್ಮ 50 ವರ್ಷಗಳಲ್ಲಿ ದೇಶದಲ್ಲಾದ ಸಾಧನೆಯನ್ನೂ ಹೇಳಿಕೊಳ್ಳಲಾಗದ ಸ್ಥಿತಿಯಲ್ಲಿ ಕಾಂಗ್ರೆಸ್ ಏಕಿದೆಯೆಂದರೆ ಅವುಗಳಲ್ಲಿ ಮೂರು ಬಗೆಯ ಸಾಧನೆಗಳಿವೆ. ಒಂದು, ಸಹಜವಾಗಿ ಒಂದು ಸಮಾಜದ ಗತಿಯಲ್ಲಾಗುವ ಸಾಧನೆಗಳು. ಎರಡು, ನೆಹರೂ ಗಾಂಧಿ ಕುಟುಂಬವೂ ಸೇರಿದಂತೆ ಕೆಲವು ಪ್ರಮುಖ ನಾಯಕರುಗಳ ಆಲೋಚನೆಗಳಿಂದ ಆದ ಸಾಧನೆಗಳು. ಮೂರನೆಯದ್ದೇ ಮುಖ್ಯವಾದುದು- ಜನರ ಮತ್ತು ಜನಾಂದೋಲನಗಳ ಒತ್ತಾಸೆಯಿಂದ ಆದ ಸಾಧನೆಗಳು. ಇವೆಲ್ಲವೂ ಸೇರಿಯೇ ದೇಶ. ಆ ದೇಶವನ್ನು ತಾನು ಪ್ರತಿನಿಧಿಸುತ್ತೇನೆ ಎಂದು ಹೇಳಿಕೊಳ್ಳುವ ಸ್ಥಿತಿಯಲ್ಲಿ ಬಹುತೇಕ ಪಕ್ಷಗಳಿಲ್ಲ.

ಈಗಿನ ಸವಾಲು ಇಷ್ಟೇ. ಈಗ ಎದುರಾಗಲಿರುವ ಬಿಕ್ಕಟ್ಟನ್ನು ತನ್ನ ಪ್ರೊಪಗಾಂಡಾ ಯಂತ್ರಾಂಗದ ಮೂಲಕ ಸಾಮಾಜಿಕ ಬಿಕ್ಕಟ್ಟಾಗಿ ಪರಿವರ್ತಿಸಿ, ಇನ್ನೊಂದು ಭೀಕರ ಸ್ಥಿತಿಯನ್ನೂ ನಿರ್ಮಾಣ ಮಾಡಿ ಅಧಿಕಾರದಲ್ಲಿ ಮುಂದುವರೆಯುವ ಸಾಧ್ಯತೆ ಈಗಲೂ ಬಿಜೆಪಿ ಮತ್ತು ಆರೆಸ್ಸೆಸ್ಸಿಗಿದೆ. ಇದುವರೆಗಿನ 7 ವರ್ಷಗಳಲ್ಲಿ ಮೋದಿ ಸರ್ಕಾರದ ನಾಯಕತ್ವ ಈಗಿನಷ್ಟು ದುರ್ಬಲವಾಗಿ ಎಂದೂ ಇರಲಿಲ್ಲ. ವಿಪರೀತ ಸ್ಟಿರಾಯ್ಡ್ ಪಡೆದುಕೊಂಡೂ ಶೇ.50ರಷ್ಟು ಆಕ್ಸಿಜನ್ ಸ್ಯಾಚುರೇಷನ್‌ನೊಂದಿಗೆ ಏಗುತ್ತಿದೆ. ಈ ಸಕಾರಾತ್ಮಕವಾದ ಸ್ಥಿತಿಯನ್ನು ಬಳಸಿಕೊಂಡು ದೇಶವನ್ನು ಉಳಿಸಿಕೊಳ್ಳುವ ಸವಾಲನ್ನು ನಾವು ತೆಗೆದುಕೊಳ್ಳಬೇಕಷ್ಟೇ.

ಡಾ.ವಾಸು ಎಚ್.ವಿ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ಡಾ.ವಾಸು ಎಚ್.ವಿ.
+ posts

LEAVE A REPLY

Please enter your comment!
Please enter your name here