Homeನ್ಯಾಯ ಪಥಕವಿ ಸಿದ್ದಲಿಂಗಯ್ಯನವರಿಗೆ ನುಡಿನಮನ; ಶ್ರಮಜೀವಿ ಪ್ರತಿಭೆಯನ್ನು ಅರಿಯುವ ಕಡೆಗೆ

ಕವಿ ಸಿದ್ದಲಿಂಗಯ್ಯನವರಿಗೆ ನುಡಿನಮನ; ಶ್ರಮಜೀವಿ ಪ್ರತಿಭೆಯನ್ನು ಅರಿಯುವ ಕಡೆಗೆ

- Advertisement -
- Advertisement -

ಸ್ನೇಹಿತರೆ,

ಡಾ. ಸಿದ್ಧಲಿಂಗಯ್ಯನವರು ತೀರಿಕೊಂಡಾಗ ನಾಡಿನಾದ್ಯಂತ ದೊಡ್ಡ ಪ್ರಮಾಣದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಗಿದೆ. ಕಳೆದ ನಾಲ್ಕೈದು ದಿನಗಳಿಂದ ಸೋಶಿಯಲ್ ಮೀಡಿಯಾಗಳಲ್ಲಿ ಅವರ ಬಗೆಗೆ ಪ್ರತಿಕ್ರಿಯೆಗಳು ಬರುತ್ತಲೇ ಇವೆ. ಅನೇಕರು ಆನ್‌ಲೈನ್ ವೆಬಿನಾರ್‌ಗಳಲ್ಲಿ ಅವರಿಗೆ ನುಡಿನಮನ ಸಲ್ಲಿಸಿದ್ದಾರೆ. ಇದು ಇನ್ನೂ ಮುಂದುವರಿದಿದೆ.

ಬೆಂಗಳೂರಿನ ಶ್ರೀರಾಂಪುರದ ನಿರ್ಗತಿಕ ಗುಡಿಸಲಿನಲ್ಲಿ ಬೆಳೆದ ಅಸ್ಪೃಶ್ಯನೊಬ್ಬ ತನ್ನ ಅಪ್ರತಿಮ ಪ್ರತಿಭೆ, ಸತತ ಪ್ರಯತ್ನಗಳ ಮೂಲಕ ಪ್ರಾಣವನ್ನೇ ಪಣಕ್ಕಿಟ್ಟು ಕರ್ನಾಟಕ ದಲಿತ ಸಂಘರ್ಷ ಸಮಿತಿಯನ್ನು ಕಟ್ಟಿಬೆಳೆಸಲು ಶ್ರಮಿಸಿದ್ದು, ಹೋರಾಟದ ಎಂಜಿನ್ನಿಗೆ ತಮ್ಮ ಹಾಡುಗಳ ಆಕ್ಸಿಜನ್ ನೀಡಿದ್ದು, ಸರಕಾರದ ಕೆಲವು ಮುಖ್ಯ ಹುದ್ದೆಗಳಲ್ಲಿ ಜನಪರ ಕೆಲಸ ಮಾಡಿದ್ದು, ಕೊನೆಗೆ ರಾಜಧಾನಿಯ ಕಲಾಗ್ರಾಮವನ್ನು ಸೇರಿದ್ದು ಬಹಳ ದೊಡ್ಡ ಜರ್ನಿ. ಇದನ್ನು ಗಂಭೀರವಾಗಿ, ಸೂಕ್ಷ್ಮವಾಗಿ ಮತ್ತು ಸಮಾನತೆಯ ದೃಷ್ಟಿಕೋನದಲ್ಲಿ, ಸಾವಧಾನದ ವಿವೇಕದಿಂದ ಅರಿಯುವ ಅಗತ್ಯವಿದೆ. ಈ ವಿವೇಕಯಿಲ್ಲದೆ “ಅವರು ವ್ಯವಸ್ಥೆಯೊಂದಿಗೆ ರಾಜಿಮಾಡಿಕೊಂಡಿದ್ದರು” ಎಂಬ ಒಂದೇಒಂದು ಮಾತಿನಲ್ಲಿ ಕವಿಗಳ ಒಟ್ಟಾರೆ ಪ್ರತಿಭಾಸಾಮರ್ಥ್ಯವನ್ನು ಸಮಾಧಿ ಮಾಡಲಾಗುತ್ತಿದೆ. ಅವರು ಸೃಷ್ಟಿಸಿದ ಜನತಾಸಾಹಿತ್ಯವನ್ನು ಓದದಂತೆ ಮಾಡಲಾಗಿದೆ. ದಲಿತರಿಗೆ ಅವರ ಬಗೆಗೆ ಸಂದೇಹ ಮೂಡುವಂತೆ ಮಾಡಲಾಗಿದೆ.

ಇದು ಕವಿಗಳಿಗೆ ಮತ್ತು ಅವರ ಸಾಹಿತ್ಯಕ್ಕೆ ಮಾಡಿರುವ ದೊಡ್ಡದ್ರೋಹ. “ಕೋಮುವಾದ, ಕೋಮುವಾದಿಗಳೇ ದೊಡ್ಡ ಶತ್ರುಗಳು” ಎಂದು ಹೇಳುತ್ತಾ, ಜಾತಿವಾದವನ್ನು ಉಸಿರಾಡುತ್ತಿರುವ ಕೆಲವು ’ಪ್ರಗತಿಪರ’ರ ಹುನ್ನಾರ ಗುಟ್ಟಾಗಿ ಉಳಿದಿಲ್ಲ. ಇವತ್ತಿಗೂ ಕೇರಿಗಳಲ್ಲಿ ಜಾತಿವಾದದ ಕ್ರೌರ್ಯವನ್ನು, ಜಾತಿವಾದಿಗಳ ದರ್ಪದ ಅಟ್ಟಹಾಸವನ್ನು ಅಸ್ಪೃಶ್ಯರು ಅನುಭವಿಸುತ್ತಿದ್ದಾರೆ. ಸಾವಿರಾರು ವರ್ಷಗಳಿಂದ ಕಾರಣವೇ ಇಲ್ಲದೆ ಅಸ್ಪೃಶ್ಯರನ್ನು ಪ್ರಾಣಿಗಳಂತೆ ಕಾಣುತ್ತಿರುವುದು ಹೊಸವಿಧಾನದಲ್ಲಿ ಮುಂದುವರಿದಿದೆ. ತುಳಿಯುವ ಜಾತಿಗಳ ಕೆಲವು ‘ಪ್ರಗತಿಪರ’ರಿಗೆ ಇದು ಅರಿವಿಗೆ ಬಾರದಿರುವುದು ದುರಂತ. ಇವರಿಗೆ ಪ್ರಾಮಾಣಿಕವಾದ ಕಾಳಜಿಯಿದ್ದಿದ್ದರೆ, ದಲಿತ ಹೆಣ್ಣು ಮಕ್ಕಳನ್ನು ಅತ್ಯಾಚಾರ ಮಾಡುವ, ದಲಿತರನ್ನು ಹಿಂಸಿಸುವ, ಅಪಮಾನಿಸುವ, ಕೊಲೆ ಮಾಡುವ, ಹೇಲು ತಿನ್ನಿಸುವ, ಉಚ್ಚೆ ಕುಡಿಸುವಂತಹ ತಮ್ಮ ಸಮುದಾಯದ ಕ್ರೂರಿಗಳಿಗೆ “ಹೀಗೆ ಮಾಡಬ್ಯಾಡ್ರಿಯಪ್ಪ, ಅವರೂ ನಮ್ಮಂತೆಯೇ ಮನುಷ್ಯರು…” ಅಂತ ಹೇಳಬಹುದಾಗಿತ್ತು.

ಈ ಕೆಲಸವನ್ನು ಮಾಡಬೇಕಾಗಿದ್ದವರು ಮಾಡದೇ ಇರುವುದರಿಂದ ಇವರೇ ದೊಡ್ಡ ಅಪರಾಧಿಗಳು. ತುಳಿಯುವ ಸಮುದಾಯಗಳಿಂದ ಬಂದ ಕೆಲವರಿಗಾದರೂ ಅವರ ಮನದಾಳದಲ್ಲಿ ಅಪರಾಧಿಪ್ರಜ್ಞೆ, ಲಜ್ಜೆ ಮೂಡಬೇಕಿತ್ತು. ಹೊರಗೆ ಕೋಮುವಾದವನ್ನು ತೋರಿಸುತ್ತಾ, ಒಳಗೆ ಜಾತಿವಾದವನ್ನು ಗಟ್ಟಿಯಾಗಿ ಬೆಳೆಸಿಕೊಂಡವರು. ಮೂಡಿಗೆರೆಯ ಗೋಣಿಬೀಡಿನ ದಲಿತ ಯುವಕನಿಗೆ ಉಚ್ಚೆ ಕುಡಿಸಿದಾಗ, ಸಿಂದಗಿಯ ದಲಿತ ಯುವಕನನ್ನು ಕೊಲೆ ಮಾಡಿದಾಗ ಬಾಯಿಮುಚ್ಚಿಕೊಂಡಿದ್ದವರವನ್ನು ಏನೆನ್ನಬೇಕು? ತಮ್ಮ ಇಂತಹ ಕೋಟಿ ಅಪರಾಧವನ್ನು ಮುಚ್ಚಿಹಾಕಿಕೊಳ್ಳುವ ಸಲುವಾಗಿ, “ಸಿದ್ಧಲಿಂಗಯ್ಯ ವ್ಯವಸ್ಥೆಯೊಂದಿಗೆ ರಾಜಿಮಾಡಿಕೊಂಡಿದ್ದರು” ಅಂತ ಹೇಳುವುದು ನಾಚಿಕೆಗೇಡಿನ ಸಂಗತಿ.

ಇದೇ ಜೂನ್ 15ರ ಸಂಜೆ, ಬಂಡಾಯ ಸಂಘಟನೆಯವರು ಸಿದ್ಧಲಿಂಗಯ್ಯನವರಿಗೆ ಏರ್ಪಡಿಸಿದ್ದ ಆನ್‌ಲೈನ್ ನುಡಿನಮನ ಕಾರ್ಯಕ್ರಮದಲ್ಲಿ, ನಾಡಿನ ಖ್ಯಾತ ಸಾಹಿತಿಗಳಾಗಿರುವ ಪ್ರೊ. ಬರಗೂರು ರಾಮಚಂದ್ರಪ್ಪನವರು ಸಿದ್ಧಲಿಂಗಯ್ಯನವರ ಬಗೆಗೆ ಅತ್ಯಂತ ತೂಕದ ಮಾತುಗಳನ್ನು ಆಡಿದರು. ಅವರ ಮಾತುಗಳನ್ನು ಆಲಿಸುತ್ತಾ ನನ್ನ ಮನದಾಳದಲ್ಲೆ ಬರಗೂರು ಸರ್ ಅವರಿಗೆ ಗೌರವ ಸಲ್ಲಿಸಿದೆ. ನಿಜವಾಗಿಯೂ ಶ್ರಮಜೀವಿ ಪ್ರತಿಭೆಯನ್ನು ಅರಿಯುವುದು ಹೇಗೆ ಎಂಬುದಕ್ಕೆ ಬರಗೂರು ಸರ್ ಶಕ್ತಿಶಾಲಿಯಾದ ತಾತ್ವಿಕ ಬುನಾದಿಯನ್ನು ಹಾಕಿದರು.

ಸಿದ್ಧಲಿಂಗಯ್ಯನವರು ಮೊದಲು ಆಕರ್ಷಿತರಾದದ್ದು ಭಾರತೀಯ ರಿಪಬ್ಲಿಕನ್ ಪಕ್ಷಕ್ಕೆ. ಈ ಪಕ್ಷದವರು ಬಾಬಾಸಾಹೇಬ್ ಡಾ. ಅಂಬೇಡ್ಕರ್ ಅವರ ಮಗ, ಯಶವಂತರಾವ್ ಅಂಬೇಡ್ಕರ್ ಅವರನ್ನು ಶ್ರೀರಾಮಪುರಕ್ಕೆ ಕರೆಸಿದ್ದರು. ಅವರನ್ನು ಮೆರವಣಿಗೆಯಲ್ಲಿ ಕರಕೊಂಡು ಬಂದರು. ಅವರು ಅದ್ಭುತವಾಗಿ ಭಾಷಣ ಮಾಡಿದರು. ಅಂಬೇಡ್ಕರ್ ವಿಚಾರಧಾರೆಯ ಆ ಪಕ್ಷದವರು ದಲಿತರನ್ನು ಒಳಗೊಳ್ಳುವ ಪ್ರಯತ್ನ ಮಾಡಿದರು. ಸಾಮಾಜಿಕ
ಚಟುವಟಿಕೆಯಿಲ್ಲದೆ ಕೇವಲ ಭಾಷಣಗಳಿಗೆ ಸೀಮಿತವಾಗಿ ಅವರ ಗುರಿ ಈಡೇರಲಿಲ್ಲ. ಮುಂದೆ ಸಿದ್ಧಲಿಂಗಯ್ಯನವರು ವಿಚಾರವಾದಿ ಪರಿಷತ್ತನ್ನು ಸಂಘಟಿಸಿ, ಇದರ ಮೊದಲ ರಾಜ್ಯ ಸಂಚಾಲಕರಾಗಿ, ಬೆಂಗಳೂರಿನಲ್ಲಿ ಇದರ ಸಮಾವೇಶವನ್ನು ನಡೆಸಿದರು.

ಆಗ ಇವರ ಮೇಲೆ ಇದರ ವಿರೋಧಿಗಳು ಹಲ್ಲೆ ಮಾಡಿದರು. ಮೈಸೂರಿನಲ್ಲಿ ಬಸವಲಿಂಗಪ್ಪನವರು “ಕನ್ನಡ ಸಾಹಿತ್ಯದಲ್ಲಿ ಬೂಸಾ ಇದೆ” ಎಂದು ಹೇಳಿಕೆ ಕೊಟ್ಟರು. ಇವರ ಪರ ಮತ್ತು ವಿರೋಧ ಪ್ರತಿಭಟನೆಗಳು ಶುರುವಾದವು. ಸಿದ್ಧಲಿಂಗಯ್ಯನವರು ಬೆಂಗಳೂರಿನಲ್ಲಿ ದಲಿತ ವಿದ್ಯಾರ್ಥಿಗಳನ್ನು ಸಂಘಟಿಸಿ, ಮೈಸೂರು ಬ್ಯಾಂಕ್ ಸರ್ಕಲ್‌ನಿಂದ ಕಬ್ಬನ್ ಪಾರ್ಕ್‌ವರೆಗೆ ಮೆರವಣಿಗೆ ಮಾಡಿದರು. ಅದು ಅಲ್ಲಿ ಸಾರ್ವಜನಿಕ ಸಭೆಯಾಗಿ ಮಾರ್ಪಟ್ಟಿತು. ಸಿದ್ಧಲಿಂಗಯ್ಯನವರನ್ನು ಮುಗಿಸಬೇಕು ಎಂದು ಮೊದಲೇ ಸಂಚು ಹೂಡಿದ್ದ ಬಸವಲಿಂಗಪ್ಪನವರ ವಿರೋಧಿಗಳು ದಾಳಿ ಮಾಡಿದರು. ಇವರ ಗೆಳೆಯ ಅಶ್ವಥ್‌ನಾರಾಯಣ ಅವರು ಸಿದ್ಧಲಿಂಗಯ್ಯನವರನ್ನು ಆಟೋದಲ್ಲಿ ಕೂರಿಸಿಕೊಂಡು ಅಲ್ಲಿಂದ ಕೊಲೆಯಾಗಬೇಕಿದ್ದ ಸನ್ನಿವೇಶದಿಂದ ಪಾರುಮಾಡಿದರು.

ಮೈಸೂರಿನ ಅಶೋಕಪುರದ ಸಿದ್ದಾರ್ಥ ಹಾಸ್ಟೆಲಿನಲ್ಲಿ “ದಲಿತ ಲೇಖಕರು, ಕಲಾವಿದರು ಮತ್ತು ಬುದ್ದಿಜೀವಿಗಳ” ಮೊದಲ ಸಭೆ ನಡೆಯಿತು. ದಲಿತರು ಸಂಘಟನೆಯಾಗಬೇಕೆಂಬ ತೀರ್ಮಾನ ಮಾಡಿದರು. ಭದ್ರಾವತಿಯಲ್ಲಿ ಇದರ ಮೊದಲ ಸಭೆ ನಡೆಯಿತು. ಮುಂದೆ ಚಿಕ್ಕಮಗಳೂರಿನಲ್ಲಿ ನಡೆದ ಇದರ ಎರಡನೇ ಸಭೆಯಲ್ಲಿ ’ಕರ್ನಾಟಕ ದಲಿತ ಸಂಘರ್ಷ ಸಮಿತಿ’ ಹುಟ್ಟಿತು. ಇದೇ ಸುಮಾರಿನಲ್ಲಿ ಸಿದ್ಧಲಿಂಗಯ್ಯನವರು ರಾಜ್ಯದ ಒಳಗೂ-ಹೊರಗೂ ನಡೆಯುತ್ತಿದ್ದ ಕೆಲವು ಮಾರ್ಕ್ಸಿಸ್ಟ್ ಅಧ್ಯಯನ ಶಿಬಿರಗಳಲ್ಲಿ ಪಾಲ್ಗೊಂಡು ಮಾರ್ಕ್ಸ್‌ವಾದಿ ತಿಳಿವಳಿಕೆಯನ್ನು ಪಡೆದುಕೊಂಡರು. “ದಲಿತರ ಸಮಸ್ಯೆ ಕೇವಲ ಜಾತಿ ಸಮಸ್ಯೆ ಅಲ್ಲ; ಇದು ಆರ್ಥಿಕ ಅಸಮಾನತೆಯ ಸಮಸ್ಯೆ ಕೂಡಾ ಹೌದು. ಹಾಗಾಗಿ ದಲಿತರ ಸಮಸ್ಯೆಯನ್ನು ಆರ್ಥಿಕ ದೃಷ್ಟಿಕೋನದಲ್ಲಿ ಗ್ರಹಿಸಬೇಕು” ಎಂಬ ದೃಷ್ಟಿಕೋನಕ್ಕೆ ಬಂದರು.

ದ.ಸಂ.ಸ.ದ ಅನೇಕ ಸಭೆಗಳಲ್ಲಿ ಈ ದೃಷ್ಟಿಕೋನದಲ್ಲಿ ಕೆಲವು ಸಮಸ್ಯೆಗಳನ್ನು ಚರ್ಚೆ ಮಾಡಿದರು. ಅನೇಕರು ಈ ದೃಷ್ಟಿಕೋನವನ್ನು ವಿರೋಧಿಸಿದರು. ಆದರೆ ಸಿದ್ಧಲಿಂಗಯ್ಯನವರು ಖಚಿತ ವಿವರಗಳ ಮೂಲಕ ಇದನ್ನು ವಿಶ್ಲೇಷಣೆ ಮಾಡಿ ಮನವರಿಕೆ ಮಾಡಿದರು. ಆರಂಭಿಕ ಹಂತದಲ್ಲಿ ಅಸ್ಪೃಶ್ಯರ ಸಮಸ್ಯೆಗಳಿಗೆ ಮಾತ್ರ ಸೀಮಿತವಾಗಿದ್ದ ದ.ಸಂ.ಸ.ದ ದೃಷ್ಟಿಕೋನವನ್ನು “ಎಲ್ಲಾ ಜಾತಿಯ ಬಡವರು ದಲಿತರು” ಎಂದು ಗ್ರಹಿಸುವಂತೆ ಅಭಿವೃದ್ದಿಪಡಿಸಿದರು. ದ.ಸಂ.ಸ.ದ ದರ್ಶನಕ್ಕೆ ಕವಿಗಳ ದೊಡ್ಡ ಕೊಡುಗೆ ಇದು. ಮುಂದೆ ಇದರ ಪ್ರಭಾವದಲ್ಲಿ ದಲಿತರಲ್ಲದವರ ಅನೇಕ ಸಮಸ್ಯೆಗಳಿಗೆ ದ.ಸಂ.ಸ. ಹೋರಾಡಿತು. ಕೋಲಾರದ ಅನುಸೂಯಮ್ಮ ಪ್ರಕರಣ ಇದಕ್ಕೆ ದೊಡ್ಡ ಉದಾಹರಣೆ. ಇಂತಹ ನೂರಾರು ಉದಾಹರಣೆ ಕೊಡಬಹುದು.

ನಿರ್ದಿಷ್ಟವಾಗಿ ಅಸ್ಪೃಶ್ಯರ ಸಮಸ್ಯೆ ಅಲ್ಲದ ಅನೇಕ ಸಮಸ್ಯೆಗಳಿಗೆ ದ.ಸಂ.ಸ.ದ ಹಲವು ಬಣಗಳು ಇವತ್ತಿಗೂ ಪ್ರತಿಭಟನೆ, ಹೋರಾಟ ಮಾಡುತ್ತಿವೆ. ದಲಿತೇತರ ಸಂಘಟನೆಗಳು ಸಂಯೋಜಿಸಿದ ಹಲವು ಐಕ್ಯಹೋರಾಟಗಳಲ್ಲಿ ದ.ಸಂ.ಸ.ದ ಹಲವು ಬಣಗಳು ಕ್ರಿಯಾಶೀಲವಾಗಿವೆ. ಇದಕ್ಕೆಲ್ಲ ಮೂಲ ಕಾರಣ ಅವತ್ತು ಸಿದ್ಧಲಿಂಗಯ್ಯನವರು ದ.ಸಂ.ಸ.ದ ಒಳಗೆ ಸೃಷ್ಟಿಸಿದ ವರ್ಗದೃಷ್ಟಿಕೋನ. ವಿಧಾನಸೌಧ ಪ್ರವೇಶ ಮಾಡಿದ್ದನ್ನು ಹೊಟ್ಟೆಕಿಚ್ಚಿನಿಂದ
ಕಾರಿಕೊಳ್ಳುವವರು (ವಿಧಾನಸೌಧಕ್ಕೆ ಹೋಗದೆ ಇವರ ಹೊಲಗದ್ದೆಗಳಲ್ಲಿ ಜೀತ ಮಾಡ್ತಾ ಇದ್ದಿದ್ದರೆ ಬಹಳ ಸಂತೋಷ ಆಗ್ತಿತ್ತು!) ದಯವಿಟ್ಟು ಇದನ್ನು ಗಮನಿಸಬೇಕು. ದ.ಸಂ.ಸ.ವನ್ನು ಕಟ್ಟುವಾಗ ಕವಿಗಳು ಹಸಿವು, ನಿದ್ದೆಯನ್ನು ಎಣಿಸದೆ ನಾಡಿನ ಕೇರಿಕೇರಿಗಳನ್ನು ಸುತ್ತಿದ್ದಾರೆ. ಆಗಿನ ಅವರ ಭಾಷಣಗಳು ಎಂತಹವರನ್ನು ಹೋರಾಟಕ್ಕೆ ಬಡಿದೆಬ್ಬಿಸುವ ಕೆಂಡದ ಉಂಡೆಗಳು. ಬಾಲ್ಯದ ಹಲವು ವರ್ಷ ಶ್ರೀರಾಮಪುರದಲ್ಲಿದ್ದ ಅವರಿಗೆ
ತಮಿಳು ಚೆನ್ನಾಗಿ ಬರುತ್ತಿತ್ತು. ತಮಿಳಿನಲ್ಲಿ ಭಾಷಣ ಮಾಡುವ ಸಂದರ್ಭ ಬಂದಾಗ ತಮಿಳಿನಲ್ಲೂ ಭಾಷಣ ಮಾಡುತ್ತಿದ್ದರು. ವಿಧಾನ ಪರಿಷತ್ತಿನಲ್ಲಿ ಇವರ ಪರಿಶ್ರಮದಿಂದ, ಅಂತರ್‌ಜಾತಿ ಮದುವೆಯಾದವರಿಗೆ ಪ್ರೋತ್ಸಾಹಧನ ಕೊಡುವ, ದಕ್ಷಿಣ ಕನ್ನಡದ ಅಜಲು ಪದ್ಧತಿಯನ್ನು ನಿಷೇಧಿಸುವ ಕಾನೂನುಗಳು ರಚನೆಯಾದವು. ಇಂತಹವು ಇನ್ನೂ ಇವೆ. ಸದನದಲ್ಲಿ ಸಿದ್ಧಲಿಂಗಯ್ಯ ಸಂಪುಟಗಳನ್ನು ನೋಡಬಹುದು.

1975ರಿಂದ 2017ರವರೆಗೆ ಕವಿಗಳ ಐದು ಕವನ ಸಂಕಲನಗಳು ಪ್ರಕಟವಾಗಿವೆ. ಹೊಲೆಮಾದಿಗರ ಹಾಡು, ಸಾವಿರಾರು ನದಿಗಳು, ಕಪ್ಪು ಕಾಡಿನ ಹಾಡು, ಕುದಿವ ನೀಲಿಯ ಕಡಲು, ಊರು ಸಾಗರವಾಗಿ. ವರ್ಗದೃಷ್ಟಿಕೋನದಲ್ಲಿ ಸಾಮಾಜಿಕ ರಚನೆಯ ಅಸಮಾನತೆ, ಅನ್ಯಾಯ, ಶೋಷಣೆ ಮತ್ತು ಅಪಮಾನಗಳ ವಿಕೃತ ಪರಿಣಾಮಗಳನ್ನು ಗ್ರಹಿಸಿ ಅಭಿವ್ಯಕ್ತಿಸಿರುವ ವಿಧಾನ ಇವರ ಕಾವ್ಯದ ಕೇಂದ್ರಸ್ಥ ಸ್ಥಾಯಿಗುಣ. ಇದನ್ನು ಕೇವಲ ವರದಿ, ಹೇಳಿಕೆಯಾಗಿ ಮಾಡದೆ ಈ ದರ್ಶನದಲ್ಲಿ ಕಾವ್ಯ ಸೃಷ್ಟಿಸಿದ್ದು ಇವರ ಶ್ರಮಜೀವಿ ಪ್ರತಿಭೆಯ ಮೇರುಶಕ್ತಿ. ಕಾವ್ಯದಲ್ಲಿ ರೂಪಿಸಿರುವ ರೂಪಕ, ಉಪಮೆ, ಪ್ರತಿಮೆ, ಅಲಂಕಾರಗಳು ಕನ್ನಡ ಕಾವ್ಯವನ್ನು ಜನತಾಕಾವ್ಯವಾಗಿಸಿದವು. “ಇಕರ್ಲಾ ವದಿರ್ಲಾ” ಎಂಬುದು ಕಾವ್ಯ ಅಲ್ಲ ಎಂಬ ತೀರ್ಮಾನ, ಇವರು ಉತ್ಪ್ರೇಕ್ಷ ಅಲಂಕಾರದ ಚಕ್ರವರ್ತಿ ಎಂಬ ತೀರ್ಮಾನ ಎರಡೂ ಕೂಡಾ ನಿಸ್ಸಂದೇಹವಾಗಿ ಪೂರ್ವಾಗ್ರಹದವೇ. ಆ ಹೊತ್ತಿನಲ್ಲಿ ಕಾವ್ಯ ಎಂದರೆ ಕೇವಲ ಪಂಡಿತರ ಖಾಸಗೀ ಸೊತ್ತು, ಕಾವ್ಯಕ್ಕಾಗಿ ಕಾವ್ಯ ಎಂದು ಯಜಮಾನಿಕೆಯಿಂದ ಮೆರೆಯುತ್ತಿದ್ದ ನವ್ಯ ಕಾವ್ಯಕ್ಕೆ ಕೊಟ್ಟ ದೊಡ್ಡ ಪೆಟ್ಟು ಕವಿಗಳ ಕಾವ್ಯ. ಏಕಾಂತದ, ಏಕಾಂಗಿತನದ ಮೌನ ಓದನ್ನು ಒಡೆದು ಅದನ್ನು ಒಮ್ಮೆಲೇ ಬಾಯಿಬಿಟ್ಟು ಓದುವಂತೆ, ಸಾಮೂಹಿಕವಾಗಿ ಓದುವಂತೆ, ಹಾಡುವಂತೆ ಮಾಡಿದ್ದು ಇದರ ಹೆಚ್ಚುಗಾರಿಕೆ.

ದಲಿತ ಹೋರಾಟದ ಪ್ರಭಾವದ ತೀವ್ರ ಕಾವಿನಲ್ಲಿ ಹುಟ್ಟಿದ ಇವರ ಕವನಗಳು, ದಲಿತ ಕಲಾ ಮಂಡಳಿಯ ಹಾಡುಗಾರರ ಹಾಡುಗಳ ಮೂಲಕ ದಲಿತ ಹೋರಾಟವನ್ನು ಪ್ರಭಾವಿಸಿದ್ದು, ನಾಡಿನ ಕೇರಿಕೇರಿಗಳ ಎಲ್ಲಾ ವಯೋಮಾನದವರ ಎದೆಗಳನ್ನು ಝಲ್ ಎನಿಸಿದ್ದು ಚಾರಿತ್ರಿಕ ಸಂಗತಿ. “ಅವರ ತೆಂಗಿನತೋಟದಲ್ಲಿ ನಮ್ಮ ರಕ್ತದ ಎಳನೀರು, ಅವರ ಅಮಲಿನ ಗುಂಗಿನಲ್ಲಿ ಕೂಲಿ ಹೆಣ್ಗಳ ಕಣ್ಣೀರು” ಎನ್ನುವ ಸಾಲನ್ನು ಇಡೀ ಕನ್ನಡ ಕಾವ್ಯವೇ ಕಂಡಿರಲಿಕ್ಕಿಲ್ಲ. ಶ್ರಮಜೀವಿಗಳ, ಕೂಲಿ ಹೆಣ್ಗಳ ಮನದಾಳಕ್ಕೆ ಮಿಡಿದಿರುವ ಕನ್ನಡ ಕಾವ್ಯ ಪರಂಪರೆಯೇ ಇದನ್ನು ಅತ್ಯಂತ ಕರುಳುಪ್ರೀತಿಯಿಂದ ಮುದ್ದಾಡಿದೆ. ಆದಿಕವಿ ಪಂಪ, ಬಸವಣ್ಣ, ವಚನಕಾರರು, ರಾಘವಾಂಕ, ಜನಪದ ಕವಿಗಳು, ತತ್ವಪದಕಾರರು ಇವರ ಕಾವ್ಯವನ್ನು ನೋಡಿ “ನಮ್ಮ ಕಾಲದಲ್ಲಿ ಇಂತಹದ್ದನ್ನು ಬರೆಯಲಾಗಲಿಲ್ಲ” ಎಂದು ವಿಷಾದಿಸಿರಬಹುದು. ಇವರ ಮತ್ತು ಕೋಟಗಾನಹಳ್ಳಿ ರಾಮಯ್ಯನವರ ಹಾಡುಗಳು ದಲಿತ ಹೋರಾಟಕ್ಕೆ ಆಕ್ಸಿಜನ್ ಆಗಿ ಕೆಲಸ ಮಾಡಿವೆ. ಕೆಂಡದುಂಡೆಯಂತಹ ಇವರ ಭಾಷಣಗಳು ದಲಿತರನ್ನು ಎಚ್ಚರಿಸಿ ಸಂಘಟನೆ, ಹೋರಾಟಕ್ಕೆ ಬಡಿದೆಬ್ಬಿಸಿವೆ. ಕಾವ್ಯ ಅಂದ್ರೆ ಕೇವಲ ಕಾವ್ಯ ಅಲ್ಲ; ಇದು ಸಾಮಾಜಿಕ ಶಕ್ತಿ ಎಂಬುದನ್ನು ತೋರಿಸಿದೆ.

ಕವಿಗಳ ಗದ್ಯಕ್ಕೆ ಅತ್ಯಂತ ವಿಶಿಷ್ಟವಾದ ಶಕ್ತಿಯಿದೆ. ಆತ್ಮಕತೆ, ಅವತಾರಗಳು, ನಾಟಕ, ಗ್ರಾಮದೇವತೆಗಳು, ವಿಮರ್ಶೆ ಈ ಪ್ರಕಾರಗಳಲ್ಲಿ ಇದನ್ನು ಕಾಣಬಹುದು. ಕಾವ್ಯದಲ್ಲಿ ಮಾತಿನ ನುಡಿಯನ್ನು ಕಾವ್ಯವಾಗಿಸಿದರು; ಕಾವ್ಯವನ್ನು ಮಾತಿಗೆ ಹತ್ತಿರವಾಗಿಸಿದರು. ಗದ್ಯದಲ್ಲೂ ಕೂಡ ಇದೇ ಸೃಜನಶೀಲತೆಯನ್ನು ರೂಪಿಸಿದರು. ಸಾಮಾನ್ಯ ಸಂಗತಿಗಳನ್ನು ಪರಿಶೀಲನೆ ಮಾಡುತ್ತಲೇ ಅದರೊಳಗಿನ ಆಂತರಿಕ ವೈರುಧ್ಯಗಳ ಹಲವು ಪರಿಣಾಮಗಳನ್ನು ತಣ್ಣಗೆ ಚಿತ್ರಕ ಭಾಷೆಯಲ್ಲಿ ಕಟ್ಟುವುದು ಅವರ ಗದ್ಯದ ಕೇಂದ್ರ ಶೈಲಿ. ‘ಅವತಾರಗಳು’ ಕೃತಿ ದೇವರ ನಂಬಿಕೆಯನ್ನು ಅನುಮಾನಿಸುವ, ಸಂದೇಹಿಸುವ ಸೃಜನಶೀಲ ಕಲೆ. ಇದರಲ್ಲಿ ಆರ್ಥಿಕ, ಸಾಮಾಜಿಕ ನೆಲೆಯ ಅಸಮಾನತೆ, ಶೋಷಣೆ, ಅನ್ಯಾಯಗಳ ಪರಿಣಾಮಕಾರಿ ಚಿತ್ರಣವಿದೆ. ಜೊತೆಗೆ ಸಮುದಾಯಗಳ ಆಳವಾದ ನಂಬಿಕೆಯ ಮನಶಾಸ್ತ್ರವಿದೆ.

ಸಮುದಾಯಗಳ ಆಚರಣೆಗಳು ಅವರ ನಂಬಿಕೆಗಳಾಗಿ ಸಮಗ್ರ ಬದುಕಿನ ಭಾಗವಾಗಿರುತ್ತವೆ. ಇದಕ್ಕೆ ಕೈ ಹಾಕುವುದು ಸುಲಭದ ಮಾತಲ್ಲ. ಯಾರಿಗಾದರೂ, “ಏಯ್ ನೀನು ದೇವರು ನಂಬಬೇಡ; ಅದು ಸುಳ್ಳು, ದೇವರು ಇಲ್ಲ!” ಅಂತ ಹೇಳಿದರೆ, ದೇವರು ನಂಬುವವರು ತಿರುಗಿ ಎರಡು ಬಾರಿಸುತ್ತಾರೆ. ಆದರೆ ಕವಿಗಳು ನಿಧಾನಕ್ಕೆ ಅವರ ಮನದಾಳದಲ್ಲಿ ಗಟ್ಟಿಯಾಗಿ ಸ್ಥಾಯಿಯಾಗಿರುವ ನಂಬಿಕೆಗಳಿಗೆ ಪ್ರವೇಶ ಮಾಡಿ, ಅದನ್ನು ವಿವರಿಸಿ ಗೇಲಿ ಮಾಡಿ, ಹಾಸ್ಯ ಮಾಡಿ, ದೇವರುಗಳ ಬಗೆಗೇನೆ ಅಯ್ಯೊ ಎನಿಸಿ, ಅಯ್ಯೊ ಪಾಪ ಎನಿಸಿ, ದೇವರುಗಳ ಬಗೆಗಿನ ಅತಿಮಾನುಷ ಶಕ್ತಿಯನ್ನು ಸಡಿಲಗೊಳಿಸಲು ಪ್ರಯತ್ನಿಸಿದ್ದಾರೆ. ದೇವರುಗಳನ್ನು ಮನುಷ್ಯರೇ ಸೃಷ್ಟಿಸಿದ್ದು ಎಂಬುದನ್ನು ಸನ್ನಿವೇಶ ನಿರ್ಮಾಣದ ಮೂಲಕ ಪ್ರತಿಪಾದನೆ ಮಾಡಿರುವುದು ಅತ್ಯಂತ ಅಸಾಮಾನ್ಯವಾದ ಪ್ರತಿಭೆ.

ಇದು ನಿಜವಾಗಿಯೂ ಶ್ರಮಜೀವಿ ಪ್ರತಿಭೆಯ ಫಲ. ಮನುಷ್ಯರಿಗೆ ಕಷ್ಟ, ಸಂಕಟ ಬಂದಾಗ ದೇವರು ಪರಿಹಾರ ಮಾಡ್ತಾನೆ ಎಂಬುದು ದೈವನಂಬಿಕೆಯ ಒಪ್ಪಿತ ಮಾದರಿ. ಆದರೆ ಇದಕ್ಕೆ ಸಂಪೂರ್ಣ ತದ್ವಿರುದ್ಧವಾಗಿ ದೇವರುಗಳಿಗೇ ಕಷ್ಟ, ಸಂಕಟ ಇದೆ; ಅವನ್ನು ಮನುಷ್ಯರು ಪರಿಹಾರ ಮಾಡಬೇಕು ಎಂಬ ಅರಿವನ್ನು ಸೃಷ್ಟಿಮಾಡುವುದು ಅಸಾಮಾನ್ಯ ಸಂಗತಿ. ಅದಕ್ಕಾಗಿಯೇ ಈ ಕೃತಿ ಗೇಲಿ, ವಿಡಂಬನೆ, ಹಾಸ್ಯ ಇಂತಹ ಅಭಿವ್ಯಕ್ತಿಯನ್ನು ಸೃಷ್ಟಿಸಿದೆ. ಇದರ ಜೊತೆ ಇಡೀ ಕನ್ನಡ ಸಾಹಿತ್ಯದ ಮತ್ತೊಂದು ಕೃತಿ ನಿಲ್ಲಲಾರದು. ಕಾರಂತರ ಬಾಳ್ವೆಯೇ ಬೆಳಕು ಕೃತಿಯ ಗುರಿ ಇದೇ ಮಾದರಿಯದಾದರೂ ಅಭಿವ್ಯಕ್ತಿ ವಿಧಾನ ಸಂಪೂರ್ಣ ಭಿನ್ನ. ದೇವರಿಗೇ ಅಯ್ಯೋ ಎನ್ನುವಂತಹ ಕರುಳು ಸೃಷ್ಟಿಯಾಗುವುದಾದರೆ; ಅದೇ ಕರುಳು ಮನುಷ್ಯರ ಕಷ್ಟ, ಸಂಕಟಗಳಿಗೂ ಅಯ್ಯೊ ಎನ್ನುವಂತಾಗಲಿ ಎಂಬ ಸೃಜನಶೀಲ ತುಡಿತ ಈ ಕೃತಿಯ ಹಿಂದಿದೆ.

ಅವರ ಊರುಕೇರಿ ಬರವಣಿಗೆಯ ನಿರೂಪಣೆಯ ವಿಧಾನವನ್ನು ಸೂಕ್ಷ್ಮವಾಗಿ ಪರಿಶೀಲನೆ ಮಾಡಬೇಕು. ಸಾಮಾನ್ಯವಾಗಿ ಕನ್ನಡದ ಬಹುತೇಕ ಆತ್ಮಕಥನಕಾರರು ತಮ್ಮ ಬಾಲ್ಯದ ಹಸಿವು ಬಡತನಗಳನ್ನು ಬರೆದುಕೊಂಡಿದ್ದಾರೆ. ಆರ್.ಸಿ. ಹಿರೇಮಠ, ಎಸ್.ಎಲ್. ಭೈರಪ್ಪ ಮುಂತಾದವರು. ವಸ್ತುವಿಷಯ ಒಂದೇ. ಆದರೆ
ನಿರೂಪಣೆಯಲ್ಲಿ ಯಾವ ಭಿನ್ನತೆ ಇದೆ ಎಂಬುದನ್ನು ಅಕ್ಕಪಕ್ಕ ಇಟ್ಟು ನೋಡಬೇಕು. ಊರುಕೇರಿಯ ಪುಟಗಳಲ್ಲಿ ದ್ವೇಷ, ಹಗೆತನ, ಶತ್ರುತ್ವ ಮುಂತಾದವುಗಳ ಪಟ್ಟು ಇಲ್ಲದೆ ಆಕ್ರೋಶರಹಿತವಾಗಿ ತಣ್ಣಗೆ ನಿರೂಪಿಸಿರುವ ಕ್ರಮವಿದೆ. ಸ್ವತಃ ಅಪ್ಪನ ಹೆಗಲ ಮೇಲೆ ನೊಗ ಹೊರಿಸಿ ಹೊಲ ಉಳುಮೆ ಮಾಡುವುದು, ಸಾಲ ತೀರಿಸಲಾಗದ ಅಪ್ಪ, ಸಾಲ ಕೇಳಲು ಬಂದವರು ಹೊಡೆದು ಹೋದಮೇಲೆ ಅಪಮಾನದಿಂದ ವಿಷ ಕುಡಿದು ಒದ್ದಾಡುವುದು. ಇಂತಹ ಹಲವಾರು ಸನ್ನಿವೇಶಗಳನ್ನು ಕಮರ್ಶಿಯಲ್ ಸಿನಿಮಾಗಳ ಹಾಗೆ ರೋಚಕಗೊಳಿಸುವುದಿಲ್ಲ. ಅವು ಏಕವ್ಯಕ್ತಿಯ ಬದುಕಿನಲ್ಲಿ ನಡೆದುಹೋದ ಚರಿತ್ರೆಯ ಶೋಕೇಸ್ ಜಡ ಸಂಗತಿಗಳಂತೆ ಮಾಹಿತಿಗಳಾಗಿ ನಮೂದಾಗಿಲ್ಲ.

ಅವೆಲ್ಲ ಜನಸಾಮಾನ್ಯರಲ್ಲಿ ಈಗಲೂ ನಡೆಯುತ್ತಿರುವ, ನಡೆಯುವ ನಿತ್ಯ ಸಂಗತಿಗಳಂತೆ ಚಿತ್ರಿತವಾಗಿವೆ. ಇಂತಹ ಕ್ರೂರ ಬದುಕಿನಿಂದ ಬಂದವರಿಗೆ ಊರುಕೇರಿಯ ಅನೇಕ ಪ್ರಸಂಗಗಳು ನಮ್ಮವೂ ಹೌದು ಎನಿಸುತ್ತದೆ. ಹೀಗೆ ಓದುಗರನ್ನು ಕೇವಲ ಮಾಹಿತಿದಾರರನ್ನಾಗಿಸದೆ ಅವರನ್ನು ಕೃತಿಯ ಜನಕರನ್ನಾಗಿಸುವುದು ಇದರ ಹೆಚ್ಚುಗಾರಿಕೆ. ಊರಿನ ಓದುಗರು ಕೃತಿಗೆ ಹೊರಗಿನವರಾಗಿ ಓದಿದರೆ; ಕೇರಿಯವರು ಈ ಕೃತಿಗೆ ಒಳಗಿನವರಾಗಿ, ಸ್ವತಃ ಇವರೇ ಅದರ ಬರಹಗಾರರಾಗಿ ಮಾರ್ಪಡುತ್ತಾರೆ. ಇದು ಊರುಕೇರಿ ಕೃತಿಯ ಮೊದಲ ಭಾಗದ ಕೆಲವು ಪುಟಗಳಿಗೆ ಅನ್ವಯವಾಗುವ ಮಾತು. ಉಳಿದಂತೆ ಇದರ ಮುಂದಿನ ಭಾಗಗಳ ಕೆಲವು ಪುಟಗಳಲ್ಲಿ ಇವರ ಆತ್ಮೀಯರನ್ನು, ಗೆಳೆಯರನ್ನು ಸ್ಮರಿಸಿಕೊಳ್ಳುವ ಪ್ರಸಂಗಗಳೂ ಇವೆ.

ದುಡಿವ ವರ್ಗದ ದೃಷ್ಟಿಕೋನದಲ್ಲಿ ಸಾಹಿತ್ಯ ವಿಮರ್ಶೆಯನ್ನು ರೂಪಿಸಿದ್ದಾರೆ. ಪಂಚಮ ನಾಟಕದಲ್ಲಿ ಜಾತಿ ಅಪಮಾನದ ಪರಿಣಾಮದ ಸೂಕ್ಷ್ಮಗಳು ಮತ್ತು ಅದರ ನಾಶಕ್ಕೆ ವರ್ಗ ಹೋರಾಟದ ಪ್ರತಿಪಾದನೆ ಇದೆ. ಇದೇ ದೃಷ್ಟಿಕೋನದಲ್ಲಿ ಅವರ ಏಕಲವ್ಯ ನಾಟಕ ರಚನೆಯಾಗಿದೆ. ಕೌರವರು ಮತ್ತು ಪಾಂಡವರ ನಡುವಿನ ಯುದ್ಧ ಉಳ್ಳವರ ನಡುವಿನ ಯುದ್ಧ; ಅದು ಆಳುವ ವರ್ಗಗಳ ನಡುವಿನ ಯುದ್ಧ. ಆ ಯುದ್ಧವನ್ನು ದುಡಿಯುವ ವರ್ಗದವರು ವಿರೋಧಿಸಬೇಕು; ದುಡಿಯುವ ವರ್ಗದವರ ಹೋರಾಟವು ಆಳುವ ವರ್ಗದ ವಿರುದ್ಧ ನಡೆಯಬೇಕು ಎಂಬುದು ಇದರ ಪ್ರತಿಪಾದನೆಯಾಗಿದೆ.

ಈಚಿನ ವರ್ಷಗಳಲ್ಲಿ ಕವಿಗಳು ಎಲ್ಲರನ್ನೂ ಸಮಾನ ದೃಷ್ಟಿಯಲ್ಲಿ ಕಾಣುತ್ತಿದ್ದರು. ಹೆಚ್ಚು ನಗಿಸುತ್ತಿದ್ದರು. ಇವರನ್ನು ಹೊಗಳುವ, ತೆಗಳುವ, ಅನುಮಾನಿಸುವ, ಪ್ರೀತಿಸುವ, ಗೌರವಿಸುವ ಎಲ್ಲರೂ ಒಂದೇ ಎಂಬಂತೆ ಭಾವಿಸಿದ್ದರು. ಎಲ್ಲರನ್ನೂ ನಯವಿನಯದಿಂದ ಮಾತಾಡಿಸುತ್ತಿದ್ದರು. ಎಲ್ಲರೊಂದಿಗೂ ಪ್ರೀತಿಯಿಂದ, ಸಲುಗೆಯಿಂದ ಬೆರೆಯುತ್ತಿದ್ದರು. ಇದು ಇವರೊಳಗೆ ಹುಟ್ಟಿದ ಸಮಾನತಾ ಭಾವ. ಇವರ ಈ ವ್ಯಕ್ತಿತ್ವದ ಮೂಲಕ ಇವರ ಹೋರಾಟ ಮತ್ತು ಸಾಹಿತ್ಯವನ್ನು ಅರಿಯಬೇಕಾಗಿದೆ. ಇವರ ಹೋರಾಟ ಮತ್ತು ಸಾಹಿತ್ಯದ ಮೂಲಕ ಇವರ ವ್ಯಕ್ತಿತ್ವವನ್ನು ಅರಿಯಬೇಕಾಗಿದೆ. ಇದು ಶ್ರಮಜೀವಿ ಪ್ರತಿಭೆಯನ್ನು ಅರಿಯುವುದಕ್ಕೆ ದಾರಿ ಸೃಷ್ಟಿಸಬಹುದು ಎಂದುಕೊಂಡಿದ್ದೇನೆ.

ಡಾ. ಬಿ.ಎಂ. ಪುಟ್ಟಯ್ಯ

ಡಾ. ಬಿ.ಎಂ. ಪುಟ್ಟಯ್ಯ
ಕನ್ನಡ ವಿವಿಯ ಕುಪ್ಪಳಿಯಲ್ಲಿನ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ. ಎಡಪಂಥೀಯ ಚಿಂತಕ. ಕಾಲೇಜು ದಿನಗಳಿಂದ ವಿದ್ಯಾರ್ಥಿ ಚಳುವಳಿಯಲ್ಲಿದ್ದವರು. ’ಸಾವು: ಒಂದು ಚಿಂತನೆ’, ’ಮುಖಾಮುಖಿ’, ’ಅಲಕ್ಷಿತ ವಚನಕಾರರ ಲೋಕದೃಷ್ಟಿ’, ’ಕದಡು’ ಇವರ ಮುಖ್ಯ ಕೃತಿಗಳು. ಸಾಮಾಜಿಕ ಚಳುವಳಿಗಳಲ್ಲಿದ್ದುಕೊಂಡೇ ಅಲ್ಲಿ ನಡೆಯುವ ಅಂತಸ್ಥ ಚಲನೆಗಳನ್ನು ವಿಶ್ಲೇಷಿಸುವ ಪುಟ್ಟಯ್ಯನವರು ಕಳೆದ ಇಪ್ಪತ್ತಾರು ವರ್ಷಗಳಿಂದ ಸಾಹಿತ್ಯ ವಿಮರ್ಶಾ ಕ್ಷೇತ್ರದಲ್ಲಿ ಗುರುತರ ಸಾಧನೆಗಳನ್ನು ಮಾಡಿದ್ದಾರೆ.


ಇದನ್ನೂ ಓದಿ: ಕರ್ನಾಟಕದ ಗೆಳೆಯರನ್ನೆಲ್ಲಾ ಕಳೆದುಕೊಳ್ಳುತ್ತಾ ಹೋದೆ.. ಈಗ ಮಹಾನ್ ಭೂಮಿಪುತ್ರ ದೊರೆಸ್ವಾಮಿಯವರನ್ನು..

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಪತಂಜಲಿಯ ತಪ್ಪು ದಾರಿಗೆಳೆಯುವ ಜಾಹೀರಾತು: ಸಾರ್ವಜನಿಕ ಕ್ಷಮೆಯಾಚನೆಗೆ ಸಿದ್ದ ಎಂದ ಬಾಬಾ ರಾಮ್‌ದೇವ್, ಬಾಲಕೃಷ್ಣ

0
ಇಂದು (ಏ.16) ಸುಪ್ರೀಂ ಕೋರ್ಟ್‌ಗೆ ಖುದ್ದಾಗಿ ಹಾಜರಾದ ಪತಂಜಲಿ ಆಯುರ್ವೇದ ಲಿಮಿಟೆಡ್‌ನ ಸಹ-ಸಂಸ್ಥಾಪಕ ಬಾಬಾ ರಾಮ್‌ದೇವ್, ನ್ಯಾಯಾಲಯಕ್ಕೆ ನೀಡಿದ್ದ ಭರವಸೆಯನ್ನು ಉಲ್ಲಂಘಿಸಿ ತಪ್ಪು ದಾರಿಗೆಳೆಯುವ ಜಾಹೀರಾತುಗಳನ್ನು ಪ್ರಕಟಿಸಿದ್ದಕ್ಕಾಗಿ ಮತ್ತು ಅಲೋಪತಿ ಔಷಧಿಗಳ ವಿರುದ್ಧ...