Homeಮುಖಪುಟಭಾರತೀಯ ರೈತರಿಗೆ ಅಮೇರಿಕಾ-ಭಾರತ ಮುಕ್ತ ವ್ಯಾಪಾರ ಒಪ್ಪಂದ ತಂದೊಡ್ಡುವ ಅಪಾಯಗಳು

ಭಾರತೀಯ ರೈತರಿಗೆ ಅಮೇರಿಕಾ-ಭಾರತ ಮುಕ್ತ ವ್ಯಾಪಾರ ಒಪ್ಪಂದ ತಂದೊಡ್ಡುವ ಅಪಾಯಗಳು

ಕಳೆದ ಮೂರು ವರ್ಷಗಳಿಂದ ದಕ್ಷಿಣ ಕೊರಿಯಾ, ಚೀನಾ, ಕೆನಡಾ ಮತ್ತು ಮೆಕ್ಸಿಕೊಗಳೊಂದಿಗೆ ಟ್ರಂಪ್ ಸಹಿ ಹಾಕಿದ ವ್ಯಾಪಾರ ಒಪ್ಪಂದಗಳನ್ನು ಗಮನಿಸಿದರೆ, ಅಮೇರಿಕಾ - ಭಾರತ ಒಪ್ಪಂದವು ಭಾರತದ ಕೃಷಿ ಕ್ಷೇತ್ರದ ಪಾಲಿಗೆ ಕೆಟ್ಟ ಸುದ್ದಿಯಾಗಲಿದೆ ಎಂಬುದು ಸ್ಪಷ್ಟವಾಗಿದೆ.

- Advertisement -

ಈ ವರ್ಷದ ಫೆಬ್ರವರಿ ಇಪ್ಪತ್ತರಂದು ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಎರಡು ದಿನಗಳ ಅಧ್ಯಕ್ಷೀಯ ಭೇಟಿಗೆಂದು ಭಾರತಕ್ಕೆ ಬಂದಿದ್ದರು. ಈ ಸಂದರ್ಭದಲ್ಲಿ ಅವರು ನರೇಂದ್ರ ಮೋದಿಯವರೊಂದಿಗೆ ದ್ವಿಪಕ್ಷೀಯ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕುವ ನಿರೀಕ್ಷೆಯಿತ್ತು. ಆ ಸಭೆಯಲ್ಲಿ ಹೊರಬಿದ್ದಿರುವ ಒಂದು ಹೇಳಿಕೆಯಲ್ಲಿ ಈ ವರ್ಷಾಂತ್ಯದ ಹೊತ್ತಿಗೆ ಸಾಧ್ಯವಾದರೆ “ಮೊದಲ ಹಂತದ” ವ್ಯಾಪಾರ ಒಪ್ಪಂದದ ಕುರಿತು ತೀರ್ಮಾನಕ್ಕೆ ಬರಲು ಉಭಯ ನಾಯಕರು ಒಪ್ಪಿದ್ದಾರೆ, ಇದರ ನಂತರ ಸಮಗ್ರ ವ್ಯಾಪಾರ ಒಪ್ಪಂದ ಜಾರಿಗೆ ಬರಲಿದೆ ಎಂದು ಹೇಳಲಾಗಿತ್ತು.

ಉದ್ದೇಶಿತ ಒಪ್ಪಂದದ ಘೋಷಣೆಯು ಲಕ್ಷಾಂತರ ಸಣ್ಣ ಪ್ರಮಾಣದ ಭಾರತೀಯ ರೈತರು ಮತ್ತು ಅನೌಪಚಾರಿಕ ವ್ಯಾಪಾರಿಗಳಿಗೆ ದೊಡ್ಡ ಪ್ರಮಾಣದ ತೊಂದರೆಯನ್ನು ಉಂಟುಮಾಡಲಿದೆ ಏಕೆಂದರೆ ಈ ಒಪ್ಪಂದವು ನೇರವಾಗಿ ಅವರ ಬೆಳೆ, ಮಾರಾಟ, ವ್ಯಾಪಾರ ವಹಿವಾಟಿನ ಮೇಲೆ ಪರಿಣಾಮ ಬೀರಲಿದೆ. ಸರ್ಕಾರವು ಇದುವರೆಗೆ ಈ ಪ್ರಸ್ತಾವನೆಯ ಬಗ್ಗೆ ಯಾವುದೇ ಚರ್ಚೆ ಅಥವಾ ಸಮಾಲೋಚನೆ ನಡೆಸಿಲ್ಲ, ಅಥವಾ ಅದರ ಕರಡನ್ನು ಸಾರ್ವಜನಿಕರಿಗೆ ಲಭ್ಯವಾಗಿಸಿಲ್ಲ ಅಥವಾ ಭಾರತೀಯ ಸಂಸತ್ತಿನಲ್ಲಿ ಚರ್ಚಿಸಲಾಗಿಲ್ಲ. ಆದರೂ, ಈ ಒಪ್ಪಂದದಲ್ಲಿ ಭಾರತದ ಕೃಷಿ ಕ್ಷೇತ್ರವನ್ನು ಗುರಿಯಾಗಿಸುವುದು ಸ್ಪಷ್ಟವಾಗಿದೆ.

ಎರಡೂ ದೇಶಗಳು ಪರಸ್ಪರ ಪ್ರಮುಖ ವ್ಯಾಪಾರ ಪಾಲುದಾರರು.

ಸರಕುಗಳ ವ್ಯಾಪಾರಕ್ಕೆ ಸಂಬಂಧಿಸಿದಂತೆ, ಭಾರತವು ಅಮೇರಿಕಾಕ್ಕೆ 9 ನೇ ಅತಿದೊಡ್ಡ ಪಾಲುದಾರನಾಗಿದ್ದರೆ, ಆ ದೇಶ ಭಾರತಕ್ಕೆ 2 ನೇ ಅತಿದೊಡ್ಡ ಪಾಲುದಾರನಾಗಿದೆ. ಸರಕುಗಳಲ್ಲಿ ಅವರ ದ್ವಿಪಕ್ಷೀಯ ವ್ಯಾಪಾರವು ವರ್ಷಕ್ಕೆ 87.9 ಶತಕೋಟಿ ಅಮೇರಿಕನ್ ಡಾಲರ್ ಮೌಲ್ಯದ್ದಾಗಿದೆ ಮತ್ತು ಸೇವಾಕ್ಷೇತ್ರದಲ್ಲಿ ಅವರ ದ್ವಿಪಕ್ಷೀಯ ವ್ಯಾಪಾರವು 54.8 ಬಿಲಿಯನ್ ಅಮೇರಿಕನ್ ಡಾಲರ್ ಆಗಿದೆ.

ಕೃಷಿ ಸಬ್ಸಿಡಿಗಳು, ಬೌದ್ಧಿಕ ಆಸ್ತಿ ಹಕ್ಕುಗಳು, ಹೈನುಗಾರಿಕೆ ಅಲ್ಲದೇ ಸುಂಕಗಳು ಮತ್ತು ಮಾರುಕಟ್ಟೆ ಪ್ರವೇಶದಂತಹ ವಿಷಯಗಳ ಬಗ್ಗೆ ಕಳೆದ ವರ್ಷಗಳಲ್ಲಿ ಉಭಯ ದೇಶಗಳ ನಡುವಿನ ವ್ಯಾಪಾರ ಸಂಬಂಧಗಳ ರಾಜಕೀಯವು ತೀವ್ರ ಭಿನ್ನಾಭಿಪ್ರಾಯಗಳಿಂದ ಕೂಡಿದೆ. ಇದರಲ್ಲಿ ಹೆಚ್ಚಿನ ವಿಷಯಗಳ ಕುರಿತು ವಿಶ್ವ ವ್ಯಾಪಾರ ಸಂಸ್ಥೆ (ಡಬ್ಲ್ಯುಟಿಒ) ಯಲ್ಲಿ ಹೋರಾಡಲಾಗಿದೆ. ಆದರೆ ಅಮೇರಿಕೆಯ ಕಾರ್ಪೊರೇಟ್ ಹಿತಾಸಕ್ತಿಗಳು, ಡೈರಿ ಕಂಪನಿಗಳು, ವಾಷಿಂಗ್ಟನ್‌ ಸರ್ಕಾರದ ಮೇಲೆ ಒತ್ತಡ ಹೇರುತ್ತಲೇ ಇವೆ, “ತನ್ನ ಮಾರುಕಟ್ಟೆಗೆ ಸಮನಾದ ಮತ್ತು ಸಮಂಜಸವಾದ ಪ್ರವೇಶವನ್ನು” ಒದಗಿಸುವಲ್ಲಿ ವಿಫಲವಾದ ಕಾರಣ ಭಾರತದ ವಿರುದ್ಧ ಯುನೈಟೆಡ್ ಸ್ಟೇಟ್ಸ್ ಟ್ರೇಡ್ ರೆಪ್ರೆಸೆಂಟೇಟಿವ್ (ಯುಎಸ್‌ಟಿಆರ್) ಕಚೇರಿಗೆ ಮನವಿಗಳನ್ನು ಸಲ್ಲಿಸುತ್ತಿವೆ. ಈಗ ಟ್ರಂಪ್ ಆಡಳಿತ ನೇರವಾಗಿ ಮೋದಿಯೊಂದಿಗೆ ಒಪ್ಪಂದ ಮಾಡಿಕೊಳ್ಳಲು ಬಯಸುತ್ತಿದೆ. ಕಳೆದ ಮೂರು ವರ್ಷಗಳಿಂದ ದಕ್ಷಿಣ ಕೊರಿಯಾ, ಚೀನಾ, ಕೆನಡಾ ಮತ್ತು ಮೆಕ್ಸಿಕೊಗಳೊಂದಿಗೆ ಟ್ರಂಪ್ ಸಹಿ ಹಾಕಿದ ವ್ಯಾಪಾರ ಒಪ್ಪಂದಗಳನ್ನು ಗಮನಿಸಿದರೆ, ಅಮೇರಿಕಾ – ಭಾರತ ಒಪ್ಪಂದವು ಭಾರತದ ಕೃಷಿ ಕ್ಷೇತ್ರದ ಪಾಲಿಗೆ ಕೆಟ್ಟ ಸುದ್ದಿಯಾಗಲಿದೆ ಎಂಬುದು ಸ್ಪಷ್ಟವಾಗಿದೆ.

ಟ್ರಂಪ್ ನೇತೃತ್ವದಲ್ಲಿ ಅಮೇರಿಕಾದ ಎಫ್‍ಟಿಎಗಳು

ಡೊನಾಲ್ಡ್ ಟ್ರಂಪ್ ತಮ್ಮ ಚುನಾವಣಾ ಪ್ರಚಾರದ ಸಮಯದಲ್ಲಿ ಹಿಂದಿನವರು ಸಹಿ ಮಾಡಿದ ವ್ಯಾಪಾರ ಒಪ್ಪಂದಗಳನ್ನು ಬಹಳವಾಗಿ ಟೀಕಿಸಿದ್ದರು, ಅವು ಅಮೆರಿಕನ್ ಕಾರ್ಮಿಕರಿಗೆ ಒಳ್ಳೆಯದಲ್ಲ ಎಂದು ಹೇಳಿಕೊಂಡಿದ್ದರು, ಆದರೆ ಇದು ಕೇವಲ ಚುನಾವಣೆಯಲ್ಲಿ ಗೆಲ್ಲುವ ತಂತ್ರವಾಗಿತ್ತು. ಅವರು ಅಧಿಕಾರ ವಹಿಸಿಕೊಂಡ ನಂತರ ಹಲವಾರು ಒಪ್ಪಂದಗಳ ಮರು-ಮಾತುಕತೆ ನಡೆಸಲು ಪ್ರಾರಂಭಿಸಿದರು, ಒಂದರಿಂದ (ಟ್ರಾನ್ಸ್‌ಪ್ಯಾಸಿಫಿಕ್ ಪಾರ್ಟ್‌ನರ್‌ಶಿಪ್) ಹಿಂದೆ ಸರಿದರು ಮತ್ತು ಡಬ್ಲ್ಯುಟಿಒ ತೊರೆಯುವುದಾಗಿ ಬೆದರಿಕೆ ಹಾಕಿದರು. ಕೆಲವೇ ವರ್ಷಗಳಲ್ಲಿ ಅವರು ಜಪಾನ್‌ನೊಂದಿಗಿನ ಭಾಗಶಃ ವ್ಯಾಪಾರ ಒಪ್ಪಂದವನ್ನು ಅಂತ್ಯಗೊಳಿಸಲು, ಯುಎಸ್-ದಕ್ಷಿಣ ಕೊರಿಯಾ ಎಫ್‌ಟಿಎಯನ್ನು ಉನ್ನತೀಕರಿಸಲು, ಉತ್ತರ ಅಮೆರಿಕಾದ ಮುಕ್ತ ವ್ಯಾಪಾರ ಒಪ್ಪಂದವನ್ನು (ಈಗ ಯುಎಸ್-ಮೆಕ್ಸಿಕೊ-ಕೆನಡಾ ಒಪ್ಪಂದ ಅಥವಾ ಯುಎಸ್‌ಎಂಸಿಎ) ಮರು ಮಾತುಕತೆ ನಡೆಸಲು ಮತ್ತು ಹೊಸ ಎಫ್‌ಟಿಎಗಳಿಗಾಗಿ ಮಾತುಕತೆಗಳನ್ನು ಪ್ರಾರಂಭಿಸಲು ಯಶಸ್ವಿಯಾದರು.

ಚೀನಾ, ಭಾರತ, ಯುರೋಪಿಯನ್ ಯೂನಿಯನ್ (ಇಯು) ಮತ್ತು ಬ್ರೆಕ್ಸಿಟ್ ನಂತರ ಯುನೈಟೆಡ್ ಕಿಂಗ್‌ಡಮ್‍ಗಳೊಂದಿಗೂ ಮಾತುಕತೆ ನಡೆಸಿದರು. ಅವರು ಉಪ-ಸಹಾರ ಆಫ್ರಿಕಾ ದೇಶವಾದ ಕೀನ್ಯಾದೊಂದಿಗೆ ಮೊಟ್ಟಮೊದಲ ಸಮಗ್ರ ಎಫ್ಟಿಎ ಮಾತುಕತೆ ನಡೆಸಲು ಹೊರಟರು. ಈ ಎಲ್ಲಾ ಪ್ರಕ್ರಿಯೆಗಳು ಟ್ರಂಪ್‌ರ “ಅಮೇರಿಕಾ ಫಸ್ಟ್” ಎನ್ನುವ ಘೋಷಣೆಯು ಬರೀ ಮಾತುಗಾರಿಕೆಯಂತೆ ತೋರಿಸುತ್ತಿವೆ. ಯುಎಸ್ಎಂಸಿಎ ಮತ್ತು ಕೀನ್ಯಾ ಒಪ್ಪಂದವನ್ನು ಹೊರತುಪಡಿಸಿ, ಈ ಎಲ್ಲಾ ಎಫ್ಟಿಎಗಳು, ಕೆಲವು ವಲಯಗಳು ಅಥವಾ ನಿಯಮಗಳನ್ನು ಮಾತ್ರ ಒಳಗೊಂಡಂತೆ ಭಾಗಶಃ ಜಾರಿಯಲ್ಲಿವೆ.

ಟ್ರಂಪ್ ಅವರ ಭಾರತ ಭೇಟಿಯ ನಂತರ, ಸಮಗ್ರ ಎಫ್‌ಟಿಎ ಬಹುತೇಕ ಖಚಿತವಾಗಿದೆ, ಆದರೆ ಸದ್ಯಕ್ಕೆ ಯಾವುದೇ ಸಮಯ ನಿಗದಿಯಾಗಿಲ್ಲ. ಏತನ್ಮಧ್ಯೆ, ಯುಎಸ್-ಚೀನಾ ಪ್ರಕ್ರಿಯೆಯಂತೆಯೇ ಎರಡೂ ದೇಶಗಳು ಈಗ ಸಣ್ಣ ಒಪ್ಪಂದ (ಮಿನಿ ಡೀಲ್ ) ಅಥವಾ ಒಂದನೇ ಹಂತದ ಒಪ್ಪಂದವನ್ನು ಮಾಡಿಕೊಳ್ಳಲು ಪ್ರಯತ್ನಿಸುತ್ತವೆ. ಸಣ್ಣ ವ್ಯಾಪಾರ ಒಪ್ಪಂದಗಳು ಟ್ರಂಪ್‌ಗೆ ಒಂದು ರೀತಿಯ ಟ್ರೆಂಡ್ ಆಗಿವೆ. ಇವುಗಳನ್ನು ಅಮೇರಿಕ ಕಾಂಗ್ರೆಸ್ಸಿನ ಅನುಮೋದನೆಯ ಅಗತ್ಯವಿಲ್ಲದೇ ಶೀಘ್ರವಾಗಿ ಅಂತಿಮಗೊಳಿಸಬಹುದಾಗಿದೆ.

ಈ ಒಪ್ಪಂದಗಳಿಗೆ ಸಹಿ ಮಾಡುವುದು ಸುಲಭವೆಂದು ಕಾಣುತ್ತದೆಯಾದರೂ ಅಮೇರಿಕಾದ ಕೆಲವು ನೀತಿ ನಿರೂಪಕರು ಈ ಕುರಿತು ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಏಕೆಂದರೆ ಇವು ಕೆಲವು ಮಹತ್ವದ ವಿಷಯಗಳನ್ನು ಪರಿಹರಿಸದೆ ನೇರವಾಗಿ ಒಪ್ಪಂದಕ್ಕೆ ಮುಂದಾಗುವುದು ಡಬ್ಲ್ಯೂಟಿಒ ಒಪ್ಪಂದೊಂದಿಗೆ ಘರ್ಷಣೆಗೆ ಕಾರಣವಾಗುತ್ತದೆ. ಇದರಲ್ಲಿ ಒಂದು ದೇಶದಿಂದ ಮತ್ತೊದು ದೇಶಕ್ಕೆ ಅನ್ಯಾಯವಾಗುವುದನ್ನು ತಡೆಯಲು “ಗಣನೀಯವಾಗಿ ಎಲ್ಲ ವ್ಯಾಪಾರ” ವನ್ನು ಒಳಗೊಳ್ಳುವುದನ್ನು ಖಚಿತಪಡಿಸಿಕೊಳ್ಳಲು, ಪರಸ್ಪರ ಅಂತರ ಪ್ರಮಾಣ ಹೆಚ್ಚದಂತೆ ನೋಡಿಕೊಳ್ಳಲು ದ್ವಿಪಕ್ಷೀಯ ಅಥವಾ ಪ್ರಾದೇಶಿಕ ಎಫ್‌ಟಿಎಗಳನ್ನು ಮಾಡುವ ಸದಸ್ಯರಾಷ್ಟ್ರಗಳ ಅಗತ್ಯವಿರುತ್ತದೆ.

ರೈತರು ಏನನ್ನು ನಿರೀಕ್ಷಿಸಬಹುದು?

ದೊಡ್ಡ ಕೃಷಿ ಕಂಪನಿಗಳಿಂದ ನಿಯಂತ್ರಿಸಲ್ಪಡುವ ಅಮೇರಿಕಾದಲ್ಲಿನ ಬಹುತೇಕ ಕೃಷಿಯು ಹೆಚ್ಚು ರಫ್ತುಗಳ ಮೇಲೆ ಅವಲಂಬಿತವಾಗಿದೆ. ಆದಾಗ್ಯೂ, ಹಲವಾರು ಪ್ರಯತ್ನಗಳ ಹೊರತಾಗಿಯೂ, ಅಮೇರಿಕಾ ಕೃಷಿ ಸರಕುಗಳಿಗೆ ಭಾರತದಲ್ಲಿ ಮಾರುಕಟ್ಟೆಯನ್ನು ತೆರೆಯಲು ಇದುವರೆಗೆ ಅಮೇರಿಕಾಗೆ ಸಾಧ್ಯವಾಗಿಲ್ಲ.

2010 ರಲ್ಲಿ, ಅಮೇರಿಕಾ ಸೆನೆಟ್‍ನಲ್ಲಿ ಪ್ರಶ್ನೆಗೆ ಉತ್ತರಿಸಿದ ಅಂದಿನ ಯುಎಸ್ಟಿಆರ್ ರಾನ್ ಕಿರ್ಕ್, “ನಾವು ತುಂಬಾ ನಿರಾಶೆಗೊಂಡಿದ್ದೇವೆ. ಈ ಕುರಿತು ಕಾನೂನು ಕ್ರಮ ಕೈಗೊಳ್ಳಲಿದ್ದೇವೆಯೇ ಎಂಬುದನ್ನು ಸಾರ್ವಜನಿಕವಾಗಿ ಹೇಳಲಾಗುವುದಿಲ್ಲ, ಆದರೆ ಭಾರತದಲ್ಲಿ ನಮ್ಮ ಸರಕುಗಳಿಗೆ ಕೃಷಿ ಮಾರುಕಟ್ಟೆಗಳನ್ನು ತೆರೆಯಲು, ಲಭ್ಯವಿರುವ ಪ್ರತಿಯೊಂದು ಪರ್ಯಾಯ ಮತ್ತು ಸಾಧನಗಳನ್ನು ನಾವು ಹುಡುಕುತ್ತಿದ್ದೇವೆ. ಹತ್ತು ವರ್ಷಗಳ ನಂತರವೂ ಅದರ ಪರಿಸ್ಥಿತಿ ಹೆಚ್ಚು ಬದಲಾಗಿಲ್ಲ. ಹಾಗೆ ನೋಡಿದರೆ, 2019 ರ ಜೂನ್‌ನಲ್ಲಿ ಭಾರತವು ಕೃಷಿ ವಸ್ತುಗಳು ಸೇರಿದಂತೆ 28 ಯುಎಸ್ ಉತ್ಪನ್ನಗಳಿಗೆ ಪ್ರತೀಕಾರದ ಸುಂಕವನ್ನು ವಿಧಿಸಿದೆ.

ಪ್ರಧಾನಿ ಮೋದಿ ಅವರು 2019 ರ ಸೆಪ್ಟೆಂಬರ್‌ನಲ್ಲಿ ಅಮೆರಿಕಕ್ಕೆ ಹೋದಾಗ, ಅಧ್ಯಕ್ಷ ಟ್ರಂಪ್ ಅವರು ಭಾರತಕ್ಕೆ ಅಮೆರಿಕದ ರಫ್ತು ವಿಸ್ತರಿಸಲು ಕೆಲಸ ಮಾಡುತ್ತಿರುವುದಾಗಿ ಘೋಷಿಸಿದರು. ತಕ್ಷಣವೇ, ಏಷ್ಯಾ-ಪೆಸಿಫಿಕ್ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವದ (ಆರ್‌ಸಿಇಪಿ) ವ್ಯಾಪಕ ವ್ಯಾಪಾರ ಮಾತುಕತೆಗಳಿಂದ ಭಾರತ ಹಿಂದೆ ಸರಿಯಿತು ಮತ್ತು ಭಾರತ, ಅಮೇರಿಕಾ ಹಾಗೂ ಯೂರೋಪ್ ಯೂನಿಯನ್‌ಗಳ ಜೊತೆ ವ್ಯಾಪಾರ ಒಪ್ಪಂದಗಳನ್ನು ನೋಡಲು ಭಾರತ ಪ್ರಾರಂಭಿಸಿದೆ ಎಂದು ವಾಣಿಜ್ಯ ಸಚಿವರು ಘೋಷಿಸಿದರು.

‘’ಭಾರತವು ಎಂದಿಗೂ ಯಾವುದೇ ವ್ಯಾಪಾರ ಒಪ್ಪಂದವನ್ನು ಅವಸರದಲ್ಲಿ ಅಂತಿಮಗೊಳಿಸುವುದಿಲ್ಲ ಮತ್ತು ರೈತರು, ಡೈರಿ ವಲಯ, ಸಣ್ಣ ಉದ್ಯಮಗಳು ಮತ್ತು ದೇಶೀಯ ಉತ್ಪಾದನೆಗಳ ಕಾಳಜಿಯನ್ನು ರಕ್ಷಿಸಲಾಗುವುದು’’ ಎಂದು ಮೋದಿಯವರು ಭರವಸೆ ಕೊಟ್ಟಿದ್ದರು. ವಾಸ್ತವವಾಗಿ ರೈತರು ಮತ್ತು ಗ್ರಾಮೀಣ ಸಮುದಾಯಗಳಿಂದ ಅದರಲ್ಲೂ ವಿಶೇಷವಾಗಿ ಹೈನುಗಾರಿಕೆ ರೈತರ ಒತ್ತಡದಿಂದಾಗಿ ಭಾರತ ಆರ್‌ಸಿಇಪಿಯಿಂದ ಹಿಂದೆ ಬರುವಂತೆ ಮಾಡಿತು, ಇದು ಅಪಾಯಕಾರಿಯಾಗಲಿದೆ ಎಂದು ರೈತರಿಗೆ ತಿಳಿದಿತ್ತು.

ಅಮೇರಿಕ -ಭಾರತ ನಡುವಿನ ಮುಕ್ತ ವ್ಯಾಪಾರ ಒಪ್ಪಂದವು ಆರ್ಸಿಇಪಿಗಿಂತಲೂ ಕೆಟ್ಟದಾಗಿದೆ. ಸರಾಸರಿ ಒಂದು ಹೆಕ್ಟೇರ್ ಭೂಮಿಯನ್ನು ಹೊಂದಿರುವ ಭಾರತದ ರೈತರು, ಸರಾಸರಿ 176 ಹೆಕ್ಟೇರ್ ಭೂಮಿ ಹೊಂದಿರುವ ಅಮೇರಿಕ ರೈತರೊಂದಿಗೆ ಸ್ಪರ್ಧಿಸಬೇಕಾಗುತ್ತದೆ . ಅಮೇರಿಕಾದಾದ್ಯಂತ 2.1 ಮಿಲಿಯನ್ ಕೃಷಿ ಕೇಂದ್ರಗಳಿವೆ. ಜನಸಂಖ್ಯೆಯ 2% ಕ್ಕಿಂತ ಕಡಿಮೆ ಉದ್ಯೋಗವನ್ನು ಹೊಂದಿವೆ, ಪ್ರತಿ ಕೃಷಿ ಮನೆಯ ಸರಾಸರಿ ವಾರ್ಷಿಕ, 6 18,637.11 ಅಮೇರಿಕನ್ ಡಾಲರ್, ಆದರೆ ಕೃಷಿಯನ್ನು ಅವಲಂಬಿಸಿರುವ ಭಾರತದ 1.3 ಶತಕೋಟಿಗಿಂತ ಅರ್ಧದಷ್ಟು ಜನರು ತಮ್ಮ ಜೀವನೋಪಾಯಕ್ಕಾಗಿ ಕೃಷಿಯ ಮೇಲೆ ಅವಲಂಬಿತರಾಗಿದ್ದಾರೆ ಇಲ್ಲಿನ ಪ್ರತಿ ಕೃಷಿಕರ ಮನೆಯ ಸರಾಸರಿ ವಾರ್ಷಿಕ ಆದಾಯ (ಎಲ್ಲಾ ಮೂಲಗಳಿಂದ) 1000 ಅಮೇರಿಕನ್ ಡಾಲರಿಗಿಂತ ಕಡಿಮೆ.

ಭಾರತ ಮತ್ತು ಅಮೇರಿಕ ನಡುವಿನ ವ್ಯಾಪಾರ ಒಪ್ಪಂದದ ಆರಂಭಿಕ ಹಂತವು ಕೃಷಿ ಕೇಂದ್ರಿತವಾಗಿರಲಿದೆ ಎಂದು ನಿರೀಕ್ಷಿಸಲಾಗಿದೆ. ಭಾರತ-ಅಮೇರಿಕ ಮುಕ್ತ ವ್ಯಾಪಾರ ಒಪ್ಪಂದದ ವ್ಯಾಪ್ತಿಗೆ ಬರುವ ಹಲವಾರು ಸರಕುಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಇಲ್ಲಿ ನೋಡಲು ಪ್ರಯತ್ನಿಸೋಣ.

ಡೈರಿ

ಭಾರತದ ಡೈರಿ ಮಾರುಕಟ್ಟೆಗೆ ಪ್ರವೇಶಿಸಲು ಪ್ರಬಲ ಪ್ರತಿರೋಧದ ನಡುವೆಯೂ ಅಮೇರಿಕಾ ಸಾಕಷ್ಟು ಪ್ರಯತ್ನಿಸುತ್ತಿದೆ, ಭಾರತವು 2003 ರಿಂದ ಡೈರಿ ಆಮದಿನ ಮೇಲೆ ಸ್ಯಾನಿಟರಿ ಮತ್ತು ಫೈಟೊ ಸ್ಯಾನಿಟರಿ ಮಾನದಂಡಗಳನ್ನು ಹೇರಿತು, ಅದು ಅಮೇರಿಕಾ ಡೈರಿ ಸರಕುಗಳ ಪ್ರವೇಶವನ್ನು ನಿರ್ಬಂಧಿಸಿತು. 2018 ರ ಡಿಸೆಂಬರ್‌ನಲ್ಲಿಯೇ ಭಾರತವು ಯುಎಸ್‌ನಿಂದ ಡೈರಿ ಆಮದನ್ನು ಕಟ್ಟುನಿಟ್ಟಾದ ಕಡ್ಡಾಯ ಪ್ರಮಾಣೀಕರಣದೊಂದಿಗೆ ಪ್ರವೇಶಿಸಲು ಅನುಮತಿ ನೀಡಿತ್ತು, ಇದರಲ್ಲಿ ಡೈರಿ ಉತ್ಪನ್ನಗಳನ್ನು “ರಕ್ತಾಹಾರ, ಒಳ ಅಂಗಾಂಗಗಳು, ಅಥವಾ ಜಠರ ಅಂಗಾಂಶಗಳು” ಹೊಂದಿರುವ ಮೇವು ಕೊಟ್ಟು ಸಾಕುವ ಜಾನುವಾರುಗಳಿಂದ ಪಡೆಯಲಾಗುವುದಿಲ್ಲ ಎಂದು ಸೂಚಿಸಬೇಕಾಗಿತ್ತು.

ಸಾಂಸ್ಕೃತಿಕ ಮತ್ತು ಧಾರ್ಮಿಕ ಸೂಕ್ಷ್ಮತೆಗಳಿಂದಾಗಿ ಬಹುಪಾಲು ಭಾರತೀಯರು ಇಂತಹ ಜಾನುವಾರು ಉತ್ಪನ್ನಗಳನ್ನು ನಿರಾಕರಿಸುತ್ತಾರೆ. ಆದರೆ ಸಾಕಣಿಕೆ ವೆಚ್ಚವನ್ನು ಕಡಿಮೆ ಮಾಡಲು ಮತ್ತು ಇಳುವರಿಯನ್ನು ಹೆಚ್ಚಿಸಲು ಹಾಲು ಉತ್ಪಾದಿಸುವ ಪ್ರಾಣಿಗಳಿಗೆ ರಕ್ತಾಹಾರ (ಬ್ಲಡ್ ಮೀಲ್) ನೀಡುವುದು ಪಶ್ಚಿಮದ ದೊಡ್ಡ ಕೈಗಾರಿಕಾ ಡೈರಿ ಫಾರಂಗಳಲ್ಲಿ, ವಿಶೇಷವಾಗಿ ಅಮೇರಿಕಾದಲ್ಲಿ ಅಭ್ಯಾಸವಾಗಿದೆ. ಈ ಅವಶ್ಯಕತೆಗಳನ್ನು “ವೈಜ್ಞಾನಿಕವಾಗಿ ಅನಗತ್ಯ” ಎಂದು ಅನುನಯನದಲ್ಲಿ ವಿವರಿಸಲು ಅಮೇರಿಕಾ ಇಲ್ಲಿಯವರೆಗೆ ಹಿಂಜರಿಯುತ್ತಿದೆ. ಎಫ್ಟಿಎ ಅಡಿಯಲ್ಲಿ 5% ಸುಂಕ ಮತ್ತು ಸೀಮಿತ ಕೋಟಾಗಳೊಂದಿಗೆ ಅಮೇರಿಕಾ ಡೈರಿಗೆ ನಿರ್ಬಂಧಿತ ಪ್ರವೇಶವನ್ನು ನೀಡಲು ಭಾರತ ಸರ್ಕಾರ ಚಿಂತಿಸುತ್ತಿದೆ ಎಂದು ಸುದ್ದಿ ವರದಿಗಳು ಸೂಚಿಸುತ್ತವೆ. 30% ಇರುವ ಪ್ರಸ್ತುತ ಸುಂಕವು 60% ರವರೆಗೆ ಹೆಚ್ಚುವ ದೊಡ್ಡ ಬದಲಾವಣೆಯಾಗಿದೆ.

ಅಮೇರಿಕಾ ಡೈರಿ ಉತ್ಪನ್ನಗಳ ಬಗ್ಗೆ ಮತ್ತೊಂದು ದೊಡ್ಡ ಕಾಳಜಿಯೆಂದರೆ ಹಸುಗಳ ಹಾಲು ಉತ್ಪಾದನೆಯನ್ನು 10-15% ಹೆಚ್ಚಿಸಲು ರಿಕಾಂಬಿನೆಂಟ್ ಬೋವಿನ್ ಸೊಮಾಟೊಟ್ರೊಪಿನ್ (ಆರ್ಬಿಎಸ್ಟಿ) ಎಂಬ ಮಾರ್ಪಡಿಸಿದ ತಳಿ ಬೆಳವಣಿಗೆಯ ಹಾರ್ಮೋನ್ ಅನ್ನು ಬಳಸುವುದು. ಐಸ್‌ಕ್ರೀಮ್, ಬೆಣ್ಣೆ, ಚೀಸ್ ಮತ್ತು ಮೊಸರು ತಯಾರಿಸಲು ಆರ್‌ಬಿಎಸ್‌ಟಿ ಸಂಸ್ಕರಿಸಿದ ಹಸುಗಳಿಂದ ಹಾಲನ್ನು ಬಳಸಲಾಗುತ್ತದೆ. ಯುಎಸ್ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ ಈ ಹಾರ್ಮೋನ್ ಬಳಕೆಯನ್ನು 1993 ರಲ್ಲಿ ಅನುಮೋದಿಸಿದೆ. ಇದನ್ನು ಅಮೇರಿಕಾದ ಡೈರಿ ಉದ್ಯಮದಲ್ಲಿ ಇನ್ನೂ ವ್ಯಾಪಕವಾಗಿ ಬಳಸಲಾಗುತ್ತದೆ, ಆದರೆ ಮಾನವ ಮತ್ತು ಪ್ರಾಣಿಗಳ ಬಗೆಗಿನ ಕಳವಳದಿಂದಾಗಿ ಯುರೋಪ್ ಒಕ್ಕೂಟ, ಕೆನಡಾ ಮತ್ತು ಇತರ ಹಲವು ದೇಶಗಳಲ್ಲಿ ಇದರ ಬಳಕೆಯನ್ನು ನಿಷೇಧಿಸಲಾಗಿದೆ. ಆರೋಗ್ಯ ಕಾರಣದ ಹೊರತಾಗಿಯೂ ಕೆನಡಾವು ಯುಎಸ್ಎಂಸಿಎ ಅಡಿಯಲ್ಲಿ ಅಮೇರಿಕಾದಿಂದ ಆರ್ಬಿಎಸ್ಟಿ ಹಾಲಿನ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಲು ಒತ್ತಾಯಿಸಲ್ಪಟ್ಟಿದೆ.

ಭಾರತದಲ್ಲಿ 150 ಮಿಲಿಯನ್ ಡೈರಿ ರೈತರು ಇದ್ದಾರೆ, ಇತರ ದೇಶಗಳಿಗಿಂತ ಹೆಚ್ಚಿನ ಹಾಲು ಉತ್ಪಾದಿಸುತ್ತಿದ್ದಾರೆ. ಈ ರೈತರಲ್ಲಿ ಬಹುಪಾಲು ಸಣ್ಣ ಭೂಮಾಲೀಕರು, ಎರಡು ಅಥವಾ ಮೂರು ಹಸುಗಳು ಅಥವಾ ಎಮ್ಮೆಗಳು ಹೊಂದಿರುವವರೇ ಆಗಿದ್ದಾರೆ. ಆದ್ದರಿಂದ ಹೈನುಗಾರಿಕೆ ಗ್ರಾಮೀಣ ಭಾರತದ ಬೆನ್ನೆಲುಬಾಗಿದೆ ಮತ್ತು ಉತ್ಪಾದಿಸುವ ಹಾಲನ್ನು ಉತ್ಪಾದಕರೇ ಬಳಸುತ್ತಾರೆ ಅಥವಾ ಗ್ರಾಮೀಣ ಪ್ರದೇಶಗಳಲ್ಲಿನ ಉತ್ಪಾದಕರಲ್ಲದ ಇತರರಿಗೆ ಅಥವಾ ನಗರ ಪ್ರದೇಶದ ಮನೆಗಳಿಗೆ, ವ್ಯಾಪಕವಾದ ಸಹಕಾರಿ ಮತ್ತು ಸಣ್ಣ-ಪ್ರಮಾಣದ ಮಾರಾಟಗಾರರ ಜಾಲದ ಮೂಲಕ ಮಾರಾಟ ಮಾಡುತ್ತಾರೆ. ಗ್ರಾಹಕರು ಹಾಲಿಗೆ ಪಾವತಿಸುವ ಮೊತ್ತದ 70% ಕ್ಕಿಂತ ಹೆಚ್ಚು ಪಾಲು ಉತ್ಪಾದಕರಿಗೆ ಹೋಗುತ್ತದೆ.

ಇದಕ್ಕೆ ವಿರುದ್ಧವಾಗಿ, ಅಮೇರಿಕಾದಲ್ಲಿನ ಡೈರಿ ಉದ್ಯಮವು ದೊಡ್ಡ-ಗಾತ್ರದ ಕಾರ್ಯಾಚರಣೆಗಳಲ್ಲಿ ಕೇಂದ್ರೀಕೃತವಾಗಿದೆ, ಡೈರಿ ಫಾರಂಗಳ ಸಂಖ್ಯೆ ಕ್ಷೀಣಿಸುತ್ತಿದೆ ಮತ್ತು ಪ್ರತಿ ಜಮೀನಿಗೆ ಹಸುಗಳ ಸಂಖ್ಯೆ ಹೆಚ್ಚುತ್ತಿದೆ. ಅಮೇರಿಕಾದಲ್ಲಿ ಉತ್ಪಾದನೆಯಾಗುವ ಸುಮಾರು 35% ನಷ್ಟು ಹಾಲು 2,500 ಕ್ಕೂ ಹೆಚ್ಚು ಹಸುಗಳನ್ನು ಹೊಂದಿರುವ ಫಾರಮ್‍ಗಳಿಂದ ಬರುತ್ತದೆ, ಮತ್ತು 45% ನಷ್ಟು 1,000 ಹಸುಗಳನ್ನು ಹೊಂದಿರುವ ಫಾರ್ಮ್‍ಗಳಿಂದ ಬರುತ್ತದೆ. ಕೆಲವು ಮೆಗಾ ಡೈರಿ ಫಾರಂಗಳಲ್ಲಿ 30,000 ಹಸುಗಳಿವೆ. ಈ ಕ್ಷೇತ್ರದ ಹೆಚ್ಚುತ್ತಿರುವ ಸಾಂದ್ರತೆಯು ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ಇರುವ ಬೆಲೆಗಳನ್ನು ಸರಿದೂಗಿಸಲು ಸರ್ಕಾರದ ಸಬ್ಸಿಡಿಗಳ ಅಗತ್ಯವಿದೆ.

2015 ರಲ್ಲಿ, ಯುಎಸ್ ಸರ್ಕಾರವು ತನ್ನ ಡೈರಿ ವಲಯಕ್ಕೆ 22.2 ಬಿಲಿಯನ್ ಡಾಲರ್ ಮೊತ್ತದ ನೇರ ಮತ್ತು ಪರೋಕ್ಷ ಸಬ್ಸಿಡಿಗಳನ್ನು ನೀಡಿತು. ಭಾರಿ ಸಬ್ಸಿಡಿಗಳ ಹೊರತಾಗಿಯೂ, ಯುಎಸ್ ಡೈರಿ ರೈತರು ನಷ್ಟದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಮತ್ತು ಉತ್ಪಾದನಾ ವೆಚ್ಚವು ಅವರು ಮಾರುಕಟ್ಟೆಯ ದರಕ್ಕಿಂತ ಹೆಚ್ಚಿನದಾಗಿದೆ. ಆದಾಗ್ಯೂ, ಸಂಸ್ಕಾರಕಗಳು ಮತ್ತು ತಯಾರಕರು – ವಿಶೇಷವಾಗಿ ಮೆಗಾ-ಕೋಆಪರೇಟಿವ್, ಡೈರಿ ಫಾರ್ಮರ್ಸ್ ಆಫ್ ಅಮೆರಿಕಾದ ಒಡೆತನದ ಕ್ರಾಫ್ಟ್ ಫುಡ್ಸ್, ಡೀನ್ ಫುಡ್ಸ್ ಮತ್ತು ಲ್ಯಾಂಡ್ ಒ’ಲೇಕ್ಸ್ – ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ಬೆಲೆಗೆ ಹಾಲು ಖರೀದಿಯನ್ನು ಅವಲಂಬಿಸಿವೆ, ಯುಎಸ್-ಚೀನಾ ಎಫ್‍ಟಿಎ ಅಡಿಯಲ್ಲಿ ಸುಂಕ ಮತ್ತು ಸುಂಕ ರಹಿತ ಅಡೆತಡೆಗಳನ್ನು ತೆಗೆದುಹಾಕುವುದರಿಂದ ಮುಂದಿನ ದಶಕದಲ್ಲಿ ಯುಎಸ್ ಡೈರಿ ಉದ್ಯಮವು 23 ಬಿಲಿಯನ್ ಡಾಲರ್ ಆದಾಯವನ್ನು ಹೆಚ್ಚಿಸಿಕೊಳ್ಳುವ ನಿರೀಕ್ಷೆಯಿದೆ.

ಅದೇ ರೀತಿ ಕೆನಡಾದ ಹೆಚ್ಚು ಸಂರಕ್ಷಿತ ಡೈರಿ ವಲಯದಲ್ಲಿ ಯುಎಸ್ಎಂಸಿಎ ಹೊಸ ಮಾರುಕಟ್ಟೆ ಅವಕಾಶಗಳನ್ನು ಸೃಷ್ಟಿಸಿದೆ. “ಬ್ಲ್ಯೂ” ಅಥವಾ “ಸ್ವಿಸ್” ನಂತಹ ಸಾಮಾನ್ಯ ಹೆಸರುಗಳೊಂದಿಗೆ ಚೀಸ್‌ಗೆ ಯುಎಸ್ ಮಾರುಕಟ್ಟೆ ಪ್ರವೇಶದ ಭವಿಷ್ಯದ ನಷ್ಟವನ್ನು ತಡೆಯಲು ಸಹಾಯ ಮಾಡುವ ಭೌಗೋಳಿಕ ಸೂಚನೆಗಳ ನಿಬಂಧನೆಗಳು ಇವುಗಳಲ್ಲಿ ಸೇರಿವೆ. ಅಂತರರಾಷ್ಟ್ರೀಯ ವ್ಯಾಪಾರ ಆಯೋಗದ ಪ್ರಕಾರ, ಯುಎಸ್ ಡೈರಿ ರಫ್ತು ಯುಎಸ್ಎಂಸಿಎ ಅಡಿಯಲ್ಲಿ ವರ್ಷಕ್ಕೆ 314 ಮಿಲಿಯನ್ ಅಮೇರಿಕನ್ ಡಾಲರ್‌‌ಗಿಂತಲೂ ಹೆಚ್ಚಾಗುತ್ತದೆ ಎಂದು ನಿರೀಕ್ಷಿಸಲಾಗಿದೆ.

ಯುಎಸ್-ಜಪಾನ್ ಎಫ್‍ಟಿಎ ಕಥೆ ಕೂಡಾ ತುಂಬಾ ಭಿನ್ನವಾಗಿಲ್ಲ. ಜಪಾನ್ ತನ್ನ 40% ಚೀಸ್ ಸುಂಕವನ್ನು 15 ವರ್ಷಗಳಲ್ಲಿ ಮತ್ತು 5 ರಿಂದ 20 ವರ್ಷಗಳಲ್ಲಿ ತೆಗೆದುಹಾಕಲು ಒಪ್ಪಿಕೊಂಡಿತು ವಾಸ್ತವವಾಗಿ, ಗಟ್ಟಿಯಾದ ಚೀಸ್ ಮೇಲಿನ ಜಪಾನಿನ ಸುಂಕವು 1 ಜನವರಿ 2020 ರಂದು 29.8% ರಿಂದ 26% ಕ್ಕೆ ಮತ್ತು 2020 ರ ಏಪ್ರಿಲ್ 1 ರಂದು 24.2% ಕ್ಕೆ ಇಳಿದಿದೆ. ಈ ಇತ್ತೀಚಿನ ಒಪ್ಪಂದಗಳ ಅಡಿಯಲ್ಲಿ ಡೈರಿಗೆ ನೀಡಲಾಗುವ ಆದ್ಯತೆಯು ಯುಎಸ್ ಕಂಪನಿಗಳು ಭಾರತದ ಮಾರುಕಟ್ಟೆಯಲ್ಲಿ ಕೂಡ ಗಣನೀಯ ಪಾಲನ್ನು ಬಯಸುತ್ತವೆ ಎಂದು ಸೂಚಿಸುತ್ತದೆ.

ಕೋಳಿ ಸಾಕಾಣಿಕೆ

ಕಳೆದ ಎರಡು ದಶಕಗಳಿಂದ, ಅಮೇರಿಕಾ ತನ್ನ ಫ್ರೋಝನ್ ಕೋಳಿ ಕಾಲುಗಳನ್ನು ಭಾರತದ ಕೋಳಿ ಮಾರುಕಟ್ಟೆಗೆ ಮಾರಲು ಪ್ರಯತ್ನಿಸುತ್ತಿದೆ, ಆದರೆ ವಿಫಲವಾಗಿದೆ. ಕೋಳಿ ಮಾಂಸದ ಮೇಲೆ ಭಾರತ 100% ಪರಿಣಾಮಕಾರಿ ಸುಂಕವನ್ನು ವಿಧಿಸುತ್ತಿದೆ. ಏವಿಯನ್ ಇನ್ಫ್ಲುಯೆನ್ಸ (ಹಕ್ಕಿಜ್ವರ) ಹರಡುವುದನ್ನು ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮವಾಗಿ ಭಾರತ ಹೇರಿದ ಕೋಳಿ ಮಾಂಸ ಮತ್ತು ಮೊಟ್ಟೆಗಳ ಆಮದು ನಿಷೇಧದ ಬಗ್ಗೆ ಡಬ್ಲ್ಯುಟಿಒನಲ್ಲಿ ಯುಎಸ್ ಜೊತೆ ದೀರ್ಘಕಾಲದ ವಿವಾದ ಬಾಕಿಯಿದೆ.

ಅಮೇರಿಕಾ-ಭಾರತ ವ್ಯಾಪಾರ ಒಪ್ಪಂದದ ಮೊದಲ ಹಂತಕ್ಕೆ ಸಹಿ ಹಾಕುವ ಮೂಲಕ ಈ ಸನ್ನಿವೇಶವು ಶೀಘ್ರದಲ್ಲೇ ಬದಲಾಗಲಿದೆ. ಯುಎಸ್ ಕೋಳಿ ಕಾಲುಗಳಿಗೆ ಮಾರುಕಟ್ಟೆಯನ್ನು 25% ಆಮದು ಸುಂಕದಲ್ಲಿ ಭಾಗಶಃ ತೆರೆಯಲು ಮತ್ತು ಆಮದು ಮಾಡಲು ಭಾರತ ಅವಕಾಶ ನೀಡಿದೆ. ಅದಾಗ್ಯೂ, ಯುಎಸ್ ಸಮಾಲೋಚಕರು ಸುಂಕವನ್ನು 10% ಕ್ಕೆ ಇಳಿಸಬೇಕೆಂದು ಬಯಸುತ್ತಿದ್ದಾರೆ. ಅಗ್ಗದ ಕೋಳಿ ಆಮದುಗಳು ನೂರಾರು ಸಾವಿರ ದೇಶೀಯ ಕೋಳಿ ಸಾಕಣೆ ಕೇಂದ್ರಗಳು ಮತ್ತು ಸಂಸ್ಕರಣಾ ಘಟಕಗಳನ್ನು ಮುಚ್ಚಲು ಕಾರಣವಾಗಬಹುದು ಮತ್ತು ಸುಮಾರು ನಾಲ್ಕು ದಶಲಕ್ಷ ಜನರು ಉದ್ಯೋಗವಿಲ್ಲದವರಾಗಬಹುದು ಎಂಬ ಭಯದಿಂದಾಗಿ ‘ಭಾರತೀಯ ಕೋಳಿ ಉದ್ಯಮಗಳು’ ಯುಎಸ್ ಜೊತೆ ಪ್ರಸ್ತಾವಿತ ಎಫ್‍ಟಿಎಯನ್ನು ತೀವ್ರವಾಗಿ ವಿರೋಧಿಸುತ್ತಿವೆ.

“ಅಮೇರಿಕಾದಲ್ಲಿ ಕೋಳಿಯ ಬೆಲೆ ಕೇಳಿದರೆ ನೀವು ನಕ್ಕುಬಿಡಬಹುದು, ಅಷ್ಟು ಕಡಿಮೆಯಿದೆ” ಎಂದು ಭಾರತದ ಕಚ್ಚಾ ಮತ್ತು ಸಂಸ್ಕರಿಸಿದ ಕೋಳಿ ಮಾಂಸದ ಪ್ರಮುಖ ಉತ್ಪಾದಕ ವೆಂಕಟೇಶ್ವರ ಹ್ಯಾಚರೀಸ್‌ನ ಜನರಲ್ ಮ್ಯಾನೇಜರ್ ಕೆ.ಜಿ. ಆನಂದ್ ಹೇಳುತ್ತಾರೆ. “ಒಂದು ದೇಶದ ಅಗತ್ಯಗಳನ್ನು ಪೂರೈಸುವ ಸಲುವಾಗಿ ಸರ್ಕಾರವು ತನ್ನ ಲಕ್ಷಾಂತರ ರೈತರನ್ನು ಕೊಲ್ಲಲು ಸಾಧ್ಯವಿಲ್ಲ.”

ಅಮೇರಿಕಾದಿಂದ ಫ್ರೋಝನ್ (ಶೈತ್ಯಾಗಾರದಲ್ಲಿ ಇರಿಸಲಾದ) ಕೋಳಿಯನ್ನು ಆಮದು ಮಾಡಿಕೊಳ್ಳುವುದು ಕೋಳಿ ಸಾಕಣೆದಾರರು ಮತ್ತು ಸಂಸ್ಕರಣೇ ಮಾಡುವವರ ಮೇಲೆ ಮಾತ್ರವಲ್ಲದೆ ಮೆಕ್ಕೆಜೋಳ ಮತ್ತು ಸೋಯಾಬೀನ್ ಬೆಳೆಯುವ ಭಾರತದ ಸಣ್ಣ ಮತ್ತು ಅತಿಸಣ್ಣ ರೈತರ ಮೇಲೆ ಪರಿಣಾಮ ಬೀರುತ್ತದೆ. ಇವು ಕೋಳಿ ಆಹಾರಕ್ಕಾಗಿ ಬಳಸುವ ಎರಡು ಪ್ರಮುಖ ಬೆಳೆಗಳು ಮತ್ತು ಇದಕ್ಕಾಗಿ ಭಾರತ ಸ್ವಾವಲಂಬಿಯಾಗಿದೆ.

ಅಮೇರಿಕಾದಲ್ಲಿ ಕೋಳಿ ಆಹಾರಕ್ಕಾಗಿ ಬಳಸುವ ಮೆಕ್ಕೆಜೋಳ ಮತ್ತು ಸೋಯಾಬೀನ್ ಮುಖ್ಯವಾಗಿ ಕುಲಾಂತರಿ ತಳಿಯವು. ಅಮೇರಿಕಾ ಡೈರಿ ಜಾನುವಾರುಗಳ ಆಹಾರದಂತೆಯೇ ಕೋಳಿ ಆಹಾರವು ಕೂಡ ಮರುಬಳಕೆಯ ಪ್ರಾಣಿಗಳ ಉಪ-ಉತ್ಪನ್ನಗಳನ್ನು (ಮುಖ್ಯವಾಗಿ ಗೋಮಾಂಸ ಮತ್ತು ಹಂದಿಮಾಂಸ) ಹೊಂದಿರುತ್ತದೆ. ಸಾಲ್ಮೊನೆಲ್ಲಾ ಬ್ಯಾಕ್ಟಿರಿಯ ತೊಲಗಿಸಲು ಕೋಳಿಯ ದೇಹವನ್ನು ಕ್ಲೋರಿನ್‌ನಿಂದ ತೊಳೆಯಲು ಯುಎಸ್ ಅನುಮತಿಸುತ್ತದೆ ಎಂಬುದು ಭಾರತೀಯರಿಗೆ ಮತ್ತಷ್ಟು ತೊಡಕು.

ಗೋಮಾಂಸ ಮತ್ತು ಹಂದಿಮಾಂಸದ ಉಳಿಕೆಗಳು, ಜಿಎಂ ಫೀಡ್ ಮತ್ತು ಕ್ಲೋರಿನ್ ತೊಳೆಯುವಿಕೆಯು ಯುಎಸ್ ಕೋಳಿಗಳ ಆಮದನ್ನು ನಿರ್ಬಂಧಿಸಲು ಬಹಳ ಬಲವಾದ ಆಧಾರಗಳಾಗಿವೆ. ಆದಾಗ್ಯೂ, ಅಮೇರಿಕಾ-ಭಾರತ ಎಫ್‍ಟಿಎ ಅಡಿಯಲ್ಲಿ ಇದು ಸಾಧ್ಯವಾಗದಿರಬಹುದು.

2020 ರ ಜನವರಿಯಲ್ಲಿ ಸಹಿ ಹಾಕಿದ ಯುಎಸ್-ಚೀನಾ ಒಪ್ಪಂದವನ್ನು ನಾವು ಗಮನಿಸಿದರೆ, ಒಪ್ಪಂದದ ಮಹತ್ವದ ಭಾಗವೆಂದರೆ ಚೀನಾ ಕೆಲವು ಆರೋಗ್ಯ ಮತ್ತು ಸುರಕ್ಷತಾ ಮಾನದಂಡಗಳನ್ನು ಕಡಿಮೆ ಮಾಡಲು ಬದ್ಧವಾಗಿದೆ. ಉದಾಹರಣೆಗೆ, ಚೀನಾಕ್ಕೆ ಅಮೇರಿಕಾದ ಗೋಮಾಂಸ ರಫ್ತಿಗೆ ಅನುಮತಿ ನೀಡುವ ಸಲುವಾಗಿ ಗೋಮಾಂಸದಲ್ಲಿನ ಬೆಳವಣಿಗೆಯ ಹಾರ್ಮೋನುಗಳ ಕುರಿತಾದ “ಶೂನ್ಯ ಸಹಿಷ್ಣುತೆ” ನೀತಿಯಿಂದ ಯುಎಸ್ ಉಳಿಕೆ ಮಿತಿಗಳನ್ನು ಅಂಗೀಕರಿಸಲು ಚೀನಾ ಒಪ್ಪಿಕೊಂಡಿತು. ಬೀಜಿಂಗ್ ಸಹ ಪರವಾನಗಿ, ಪರಿಶೀಲನೆ ಮತ್ತು ನೋಂದಣಿ ನಿಯಮಗಳನ್ನು ಸಡಿಲಿಸುತ್ತಿದೆ. ಅವುಗಳನ್ನು ಅಮೇರಿಕಾ ವ್ಯಾಪಾರಕ್ಕೆ ಅಡೆತಡೆಗಳೆಂದು ಪರಿಗಣಿಸಿದೆ.

ಯುಎಸ್ ಕೋಳಿ ಸುರಿಕೆ ಈಗಾಗಲೇ ಏಷ್ಯಾ ಮತ್ತು ಆಫ್ರಿಕಾದ ಕೆಲವು ಭಾಗಗಳಲ್ಲಿ ಪ್ರಮುಖ ಪರಿಣಾಮಗಳನ್ನು ಬೀರಿದೆ. ವಿಯೆಟ್ನಾಂನಲ್ಲಿ, ಅನಿಮಲ್ ಹಸ್ಬೆಂಡ್ರಿ ಅಸೋಸಿಯೇಷನ್ಸ್ 2015 ರಲ್ಲಿ ಯುಎಸ್ ನಿಂದ ಸಬ್ಸಿಡಿ ಕೋಳಿಮಾಂಸವನ್ನು ಸ್ಥಳೀಯ ಮಾರುಕಟ್ಟೆ ಬೆಲೆಗಿಂತ ಕಡಿಮೆ ಬೆಲೆಗೆ ಮಾರಾಟ ಮಾಡಿದಾಗ ದೂರು ನೀಡಿತು. ದಕ್ಷಿಣ ಆಫ್ರಿಕಾದಲ್ಲಿ, ಯುಎಸ್‌ನಿಂದ ಫ್ರೋಝನ್ ಕೋಳಿಮಾಂಸವನ್ನು ಆಮದು ಮಾಡಿಕೊಳ್ಳುವುದನ್ನು ಕಡಿಮೆ ಬೆಲೆಗೆ ಇಳಿಸಿತು ಇದು ಕೋಳಿ ಸಂಸ್ಥೆಗಳನ್ನು ವ್ಯವಹಾರದಿಂದ ಹೊರಗೆ ತಳ್ಳಿದ ಕಾರಣ ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ.

ಅಮೇರಿಕಾದ ಕೋಳಿ ಸಾಕಣಿಕಾ ವಲಯದಲ್ಲಿ ಐದು ದೊಡ್ಡ ಸಂಸ್ಥೆಗಳು ಪ್ರಾಬಲ್ಯ ಹೊಂದಿವೆ: ಟೈಸನ್ ಫುಡ್ಸ್, ಪಿಲ್ಗ್ರಿಮ್ಸ್ ಪ್ರೈಡ್, ಸ್ಯಾಂಡರ್ಸನ್ ಫಾರ್ಮ್ಸ್, ಪರ್ಡ್ಯೂ ಫಾರ್ಮ್ಸ್ ಮತ್ತು ಕೋಚ್ ಫುಡ್ಸ್. 2016 ರಲ್ಲಿ, ಅವರು 50% ಕ್ಕಿಂತ ಹೆಚ್ಚು ಕೋಳಿ, ಗೋಮಾಂಸ ಮತ್ತು ಹಂದಿಮಾಂಸ ಮಾರುಕಟ್ಟೆಗಳನ್ನು ನಿಯಂತ್ರಿಸಿದರು. ಅವರು ಕೋಳಿಗಳನ್ನು ಸಾಕುವ ರೈತ-ಗುತ್ತಿಗೆದಾರರ ಕತ್ತು ಹಿಸುಕುತ್ತಾರೆ. ಅಮೇರಿಕಾ ಬ್ರೆಜಿಲ್ ನಂತರ ಫ್ರೋಝನ್ ಕೋಳಿಯ ಎರಡನೇ ಪ್ರಮುಖ ರಫ್ತುದಾರ ಮತ್ತು ಒಟ್ಟಾಗಿ ಅವರು ವಿಶ್ವದ ಒಟ್ಟು ಫ್ರೋಝನ್ ಕೋಳಿ ಮಾಂಸದ 50% ಕ್ಕಿಂತ ಹೆಚ್ಚು ರಫ್ತು ಮಾಡುತ್ತಾರೆ. ಆದ್ದರಿಂದ, ಯುಎಸ್ ಸಬ್ಸಿಡಿ ಕೋಳಿ ಆಮದಿನಿಂದ ಗಂಭೀರ ಪರಿಣಾಮ ಬೀರುವ ಅಪಾಯವು ಭಾರತದ ಪಾಲಿಗೆ ನಿಜವಾಗಿದೆ.

ಸೋಯಾಬೀನ್

ಸೋಯಾಬೀನ್ ಮತ್ತು ಅವುಗಳ ಉತ್ಪನ್ನಗಳು ವಿಶ್ವದಲ್ಲೇ ಹೆಚ್ಚು ವಹಿವಾಟು ನಡೆಸುವ ಕೃಷಿ ಸರಕುಗಳಾಗಿವೆ, ಇದು ಎಲ್ಲಾ ಜಾಗತಿಕ ಕೃಷಿ ವ್ಯಾಪಾರದ ಒಟ್ಟು ಮೌಲ್ಯದ 10% ಕ್ಕಿಂತ ಹೆಚ್ಚು. ಅಮೇರಿಕಾ ವಿಶ್ವದ ಅತಿದೊಡ್ಡ ಸೋಯಾಬೀನ್ ಉತ್ಪಾದಕ, ಇದು ಮೂರು ರೂಪಗಳಲ್ಲಿ ರಫ್ತು ಮಾಡುತ್ತದೆ: ಇಡೀ ಕಾಳು, ಆಹಾರ ಮತ್ತು ಎಣ್ಣೆ. ಯುರೋಪ್ ಮತ್ತು ಏಷ್ಯಾದಲ್ಲಿ ಮಾಂಸ ಮತ್ತು ಕೋಳಿಗಳ ಬೇಡಿಕೆ ಹೆಚ್ಚಾದ ಕಾರಣ 2000 ರಿಂದ ಯುಎಸ್‌‌ನಿಂದ ಸೋಯಾಬೀನ್ ರಫ್ತು ಗಮನಾರ್ಹವಾಗಿ ಹೆಚ್ಚಾಗಿದೆ.

2017 ರವರೆಗೆ, ಚೀನಾ ಅತಿದೊಡ್ಡ ಆಮದುದಾರನಾಗಿತ್ತು, ಆದರೆ ಬೀಜಿಂಗ್ ಮತ್ತು ವಾಷಿಂಗ್ಟನ್ ನಡುವಿನ ವ್ಯಾಪಾರದ ಉದ್ವಿಗ್ನತೆಯು ಯುಎಸ್ ಸೋಯಾಬೀನ್ ಬೆಲೆಯಲ್ಲಿ ತೀವ್ರ ಕುಸಿತಕ್ಕೆ ಕಾರಣವಾಯಿತು, ಆದರೆ ಚೀನಾ ಬ್ರೆಜಿಲ್ ಮತ್ತು ರಷ್ಯಾದಿಂದ ಖರೀದಿಸಿತು. ಯುಎಸ್ ಮತ್ತು ಚೀನಾ 2020 ರ ಜನವರಿಯಲ್ಲಿ ತಮ್ಮ ಮೊದಲ ಹಂತದ ದ್ವಿಪಕ್ಷೀಯ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದಾಗ, ಸೋಯಾಬೀನ್ ಮತ್ತು ಸೋಯಾಬೀನ್ ತೈಲವನ್ನು ಸೇರಿಸಲಾಯಿತು. ಕರೋನವೈರಸ್ ಸಾಂಕ್ರಾಮಿಕವು ಈಗಾಗಲೇ ಯುಎಸ್ ಸೋಯಾ ರಫ್ತುಗಳನ್ನು ಗಮನಾರ್ಹವಾಗಿ ಕುಂಠಿತಗೊಳಿಸಿದ್ದರೂ, ಚೀನಾವು 2020-2021ರ ಅವಧಿಯಲ್ಲಿ ಹೆಚ್ಚುವರಿ 32 ಬಿಲಿಯನ್ ಡಾಲರ್ ಮೌಲ್ಯದ ಯುಎಸ್ ಕೃಷಿ ವಸ್ತುಗಳನ್ನು ಆಮದು ಮಾಡಿಕೊಳ್ಳುವ ನಿರೀಕ್ಷೆಯಿದೆ.

ಭಾರತವು ಎಂದಿಗೂ ಅಮೇರಿಕಾದಿಂದ ಸೋಯಾಬೀನ್ ಆಮದು ಮಾಡಿಕೊಳ್ಳುತ್ತಿರಲಿಲ್ಲ, ಆದರೆ ಸಾಂದರ್ಭಿಕವಾಗಿ ಸೋಯಾಬೀನ್ ಎಣ್ಣೆ ಅಥವಾ ಸೋಯಾಬೀನ್ ಅನ್ನು ವಿಭಜಿತ ರೂಪದಲ್ಲಿ ಆಮದು ಮಾಡಿಕೊಳ್ಳುತ್ತದೆ. ಕಾರಣ, ಯುಎಸ್ ಸೋಯಾಬೀನ್ ಬೆಳೆ ಬಹುತೇಕ ಕುಲಾಂತರಿಯದ್ದು ಅದನ್ನು ಆಮದು ಮಾಡಲು ಭಾರತವು ಅನುಮತಿಸುವುದಿಲ್ಲ. ಆದಾಗ್ಯೂ, ಎಫ್‍ಟಿಎ ಯುಎಸ್ ಸೋಯಾಬೀನ್ ತೈಲಕ್ಕಾಗಿ ಭಾರತದ ಮಾರುಕಟ್ಟೆಯನ್ನು ವಿಸ್ತರಿಸಲಿದೆ ಮತ್ತು ಇಡೀ ಸೋಯಾಬೀನ್ ಮತ್ತು ಸೋಯಾ ಆಹಾರ (ಮೀಲ್) ಆಮದು ಮಾಡಿಕೊಳ್ಳಲು ಅನುವು ಮಾಡಿಕೊಡುವುದರಿಂದ ಭಾರತದ ಜೈವಿಕ ಸುರಕ್ಷತಾ ನಿಯಮಗಳನ್ನು ಅದು ದುರ್ಬಲಗೊಳಿಸುತ್ತದೆ ಎಂದು ಅಂದಾಜಿಸಲಾಗಿದೆ.

ಅಮೇರಿಕಾದಿಂದ ಕುಲಾಂತರಿ ಸೋಯಾಬೀನ್ ಆಮದು ಲಕ್ಷಾಂತರ ಭಾರತೀಯ ಸೋಯಾಬೀನ್ ಬೆಳೆಗಾರರಿಗೆ ಅಪಾಯಕಾರಿ ಮಾತ್ರವಲ್ಲದೆ ಈ ಉತ್ಪನ್ನಗಳನ್ನು ಲಕ್ಷಾಂತರ ಜನರು ಸೇವಿಸುತ್ತಾರೆ. ಸೋಯಾಬೀನ್ ಉತ್ಪಾದಿಸುವ ವಿಶ್ವದ ಐದನೇ ಅತಿದೊಡ್ಡ ದೇಶ ಭಾರತ. ಇದು ಉತ್ಪಾದಿಸುವ 90% ಕ್ಕಿಂತ ಹೆಚ್ಚು ಸೋಯಾಬೀನ್ ಅನ್ನು ಎಣ್ಣೆ ತೆಗೆಯಲು ಮತ್ತು ಎಣ್ಣೆ ಹಿಂಡಿ ಮತ್ತು ಆಯಿಲ್ ಮೀಲ್ ತಯಾರಿಕೆಗೆ ಬಳಸಲಾಗುತ್ತದೆ, ಇವುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ರಫ್ತು ಮಾಡಲಾಗುತ್ತದೆ. ಸೋಯಾಬೀನ್ ಉತ್ಪಾದನೆಯು ದೇಶದ ಅನೇಕ ರೈತರ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸಿದೆ. ಏಕೆಂದರೆ ಅದರ ಕೆಲವು ಉಪ ಉತ್ಪನ್ನಗಳು ಹೆಚ್ಚಿನ ಬೆಲೆಗಳನ್ನು ಪಡೆಯುತ್ತವೆ.

ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ಪ್ರಮಾಣದಲ್ಲಿ ಹೆಚ್ಚಿನ ಪ್ರಮಾಣದ ಸಬ್ಸಿಡಿ ಹೊಂದಿರುವ ಅಮೇರಿಕಾ ಸೋಯಾಬೀನ್ ಆಮದು ಮಾಡಿಕೊಳ್ಳುವುದು ಭಾರತದಲ್ಲಿ ಬೆಲೆಗಳನ್ನು ಕುಂಠಿತಗೊಳಿಸುತ್ತದೆ ಮತ್ತು ಭಾರತದ ಸೋಯಾಬೀನ್ ಬೆಳೆಗಾರರಿಗೆ ಜೀವನೋಪಾಯಕ್ಕೆ ಕಷ್ಟವಾಗುತ್ತದೆ. ಇನ್ಸ್ಟಿಟ್ಯೂಟ್ ಆಫ್ ಅಗ್ರಿಕಲ್ಚರ್ ಅಂಡ್ ಟ್ರೇಡ್ ಪಾಲಿಸಿಯ ಸಂಶೋಧನೆಯು ಯುಎಸ್ ಸೋಯಾಬೀನ್ಗೆ ನೀಡುವ ಸರಕು ಬೆಂಬಲವು ಯುಎಸ್ ಕೃಷಿ ವ್ಯವಹಾರ ಕಂಪನಿಗಳಿಗೆ ಹೋಗುತ್ತದೆ, ಆದರೆ ರೈತರಿಗೆ ಅಲ್ಲ. ವಾಸ್ತವವಾಗಿ, ಯು.ಎಸ್. ರೈತರು ತಮ್ಮ ಬೆಳೆಗಳಿಗೆ ಪಡೆಯುವ ಬೆಲೆಗಳು, ಸರಾಸರಿ, ಅವರ ಉತ್ಪಾದನಾ ವೆಚ್ಚಕ್ಕಿಂತ ಹೆಚ್ಚಾಗಿರುತ್ತವೆ. ಯುಎಸ್-ಇಂಡಿಯಾ ವ್ಯಾಪಾರ ಒಪ್ಪಂದದಿಂದಾಗಿ ಭಾರತದಲ್ಲಿ ಸೋಯಾಬೀನ್ ಮಾರುವುದು ಭಾರತದ ಲಕ್ಷಾಂತರ ಬೆಳೆಗಾರ ಪಾಲಿಗೆ ವಿನಾಶಕಾರಿಯಾಗಿದೆ.

ಜೋಳ

ಮೆಕ್ಕೆಜೋಳವು ಮತ್ತೊಂದು ಸರಕು ಬೆಳೆಯಾಗಿದ್ದು, ಯುಎಸ್ ಹೆಚ್ಚು ರಫ್ತಿಗಾಗಿ ಉತ್ಪಾದಿಸುತ್ತದೆ. 2018-2019ರಲ್ಲಿ, ಯುಎಸ್ ಸುಮಾರು 400 ಮಿಲಿಯನ್ ಮೆಟ್ರಿಕ್ ಟನ್ ಉತ್ಪಾದಿಸಿತು, ಅದರಲ್ಲಿ 14% ಜೋಳವನ್ನು 73 ಕ್ಕೂ ಹೆಚ್ಚು ವಿವಿಧ ದೇಶಗಳಿಗೆ ರಫ್ತು ಮಾಡಲಾಯಿತು. ವಿಶ್ವದ ಅತಿದೊಡ್ಡ ಹೈನುಗಾರಿಕೆ ಸಮೂಹ, ಮೂರನೇ ಅತಿದೊಡ್ಡ ಬ್ರಾಯ್ಲರ್ ಉತ್ಪಾದಕ ಮತ್ತು ನಾಲ್ಕನೇ ಅತಿದೊಡ್ಡ ಮೊಟ್ಟೆ ಉತ್ಪಾದಕ ರಾಷ್ಟ್ರವಾಗಿರುವ ಭಾರತವು ಯುಎಸ್ ಮೆಕ್ಕೆ ಜೋಳಕ್ಕೆ ಒಂದು ದೊಡ್ಡ ಮಾರುಕಟ್ಟೆಯಾಗಬಹುದು.

ಆದರೆ ಕುಲಾಂತರಿ ಮೆಕ್ಕೆ ಜೋಳದ ಮೇಲಿನ ನಿರ್ಬಂಧದಿಂದಾಗಿ ಅಮೆರಿಕಕ್ಕೆ ಭಾರತಕ್ಕೆ ರಫ್ತು ಮಾಡಲು ಸಾಧ್ಯವಾಗುತ್ತಿಲ್ಲ. ಯುಎಸ್ ಕಂಪನಿಗಳು ಭಾರತದ ಹೆಚ್ಚುತ್ತಿರುವ ಜೈವಿಕ ಇಂಧನ ಅಗತ್ಯಗಳ ಮೇಲೆ ಕಣ್ಣಿಟ್ಟಿವೆ, ಇದು ಯುಎಸ್ ಮೆಕ್ಕೆ ಜೋಳಕ್ಕೆ ಮತ್ತೊಂದು ದೊಡ್ಡ ಅವಕಾಶವನ್ನು ನೀಡುತ್ತದೆ. ಯುಎಸ್ ಧಾನ್ಯಗಳ ನಿಗಮವು ಈ ದೊಡ್ಡ ಸಂಭಾವ್ಯ ಮಾರುಕಟ್ಟೆಯನ್ನು ರಫ್ತಿಗೆ ತೆರೆಯುವ ಪ್ರಯತ್ನವನ್ನು ಮುಂದುವರೆಸಿದೆ ಮತ್ತು ಯುಎಸ್-ಇಂಡಿಯಾ ಎಫ್‍ಟಿಎ ಬಹುಶಃ ಇದನ್ನು ಕಾರ್ಯರೂಪಕ್ಕೆ ತರಲು ಸಹಾಯ ಮಾಡುತ್ತದೆ.

ಅಕ್ಕಿ ಮತ್ತು ಗೋಧಿಯ ನಂತರ, ಮೆಕ್ಕೆ ಜೋಳವು ಭಾರತದ ಮೂರನೇ ಪ್ರಮುಖ ಧಾನ್ಯದ ಬೆಳೆಯಾಗಿದ್ದು, ಒಟ್ಟು ಆಹಾರ ಧಾನ್ಯ ಉತ್ಪಾದನೆಯಲ್ಲಿ ಸುಮಾರು 10% ರಷ್ಟಿದೆ. ಮೆಕ್ಕೆ ಜೋಳವನ್ನು ಮಾನವ ಆಹಾರ ಮತ್ತು ಪಶು ಆಹಾರಕ್ಕಾಗಿ ಮಾತ್ರ ಬಳಸುತ್ತಿಲ್ಲ, ಬದಲಿಗೆ ಸಾವಿರಾರು ಕೈಗಾರಿಕಾ ಉತ್ಪನ್ನಗಳಿಗೆ ಕಚ್ಚಾ ವಸ್ತುವಾಗಿ ಕೂಡ ಬಳಸಲಾಗುತ್ತದೆ. ಕೋಳಿ ಆಹಾರ ಮತ್ತು ಪಿಷ್ಟಕ್ಕೆ ಹೆಚ್ಚುತ್ತಿರುವ ಬೇಡಿಕೆಯಿಂದಾಗಿ, ಭಾರತದ ಮೆಕ್ಕೆಜೋಳದ ಆಮದು 2019 ರಲ್ಲಿ ಒಂದು ಮಿಲಿಯನ್ ಟನ್ ತಲುಪಿದೆ. ಯುಎಸ್ ಮೆಕ್ಕೆ ಜೋಳವನ್ನು ಉತ್ಪಾದನಾ ವೆಚ್ಚಕ್ಕಿಂತ 12% ಕ್ಕಿಂತ ಕಡಿಮೆ ಅಂತರದಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಿದಾಗ ಸೋಯಾಬೀನ್‌ನಂತೆ ಮೆಕ್ಕೆ ಜೋಳದ ಸ್ಥಳೀಯ ಬೆಲೆ ಕುಸಿಯುತ್ತದೆ. ಇದು ಅದರ ಬೆಳೆ ಪ್ರದೇಶಗಳು ಮತ್ತು ಉತ್ಪಾದನೆಯಲ್ಲಿ ತೀವ್ರ ಕುಸಿತಕ್ಕೆ ಕಾರಣವಾಗುತ್ತದೆ.

ಇದರ ಪರಿಣಾಮವಾಗಿ ಭಾರತೀಯ ಮೆಕ್ಕೆಜೋಳ ಬೆಳೆಗಾರರು ಎನ್‍ಎಫ್‍ಟಿಎ ಸಹಿ ಮಾಡಿದ ನಂತರ ಮೆಕ್ಸಿಕೊ ಬೆಳೆಗಾರರು ಎದುರಿಸಿದ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ವ್ಯಾಪಾರ ಒಪ್ಪಂದವು ಮೆಕ್ಸಿಕೋದಲ್ಲಿ ಅಮೆರಿಕಯ ಸಬ್ಸಿಡಿ ಜೋಳದ ಪ್ರವಾಹವನ್ನು ಹರಿಸಿದ್ದರಿಂದ ಅಲ್ಲಿನ ಬೆಳೆಗಾರರು ಸಂಕಷ್ಟಕ್ಕೆ ಈಡಾಗಿದ್ದಾರೆ.

ಯುಎಸ್ ಮುಕ್ತ ವ್ಯಾಪಾರ ಒಪ್ಪಂದದಡಿಯಲ್ಲಿ ನಿಯಮಾವಳಿ ಬದಲಾವಣೆಗಳು

ಟ್ರಂಪ್ ವ್ಯಾಪಾರ ಒಪ್ಪಂದಗಳು, ಸಣ್ಣದಿರಬಹುದು ಅಥವಾ ಅಲ್ಲದಿರಬಹುದು ಅಥವಾ ಕೇವಲ ಸುಂಕ ಕುರಿತಾದುವಲ್ಲ. ಯುಎಸ್ ವ್ಯವಹಾರ ಚಟುವಟಿಕೆಯನ್ನು ನಿರ್ಬಂಧಿಸುವಂತೆ ಕಂಡುಬಂದರೆ ಅವು ಪಾಲುದಾರ ರಾಷ್ಟ್ರಗಳ ನಿಯಮಾವಳಿ ಚೌಕಟ್ಟುಗಳಲ್ಲಿ ಕೂಡ ಪ್ರಮುಖ ಬದಲಾವಣೆಗಳನ್ನು ವಿಧಿಸುತ್ತವೆ.

ಯುಎಸ್ಎಂಸಿಎ ಒಪ್ಪಂದದಲ್ಲಿ ಕೃಷಿ ಮತ್ತು ಆಹಾರ ಉತ್ಪನ್ನಗಳಲ್ಲಿ ವ್ಯಾಪಾರವನ್ನು ವಿಸ್ತರಿಸುವ ಸಲುವಾಗಿ ಆರೋಗ್ಯ, ಸುರಕ್ಷತೆ ಮತ್ತು ಮಾರುಕಟ್ಟೆ ಮಾನದಂಡಗಳ ಹೆಚ್ಚಿನ ಸಾಮರಸ್ಯದತ್ತ ಸಾಗಲು ಅವಕಾಶಗಳಿವೆ. ಯುಎಸ್ ಎಫ್‍ಟಿಎಗಳ ಅಡಿಯಲ್ಲಿ ಸಾಮರಸ್ಯ ಎಂದರೆ ಆರೋಗ್ಯ ಮತ್ತು ಸುರಕ್ಷತೆ ಮುನ್ನೆಚ್ಚರಿಕೆಯ ಕೊರತೆಯ ನಡುವೆಯೂ ಅಮೇರಿಕಾ ಇತರ ದೇಶಗಳಿಗೆ ಹತ್ತಿರವಾಗುತ್ತ ಒಂದು ನೇರಕ್ಕೆ ಬರಬೇಕು. ಆ ಮೂಲಕ ನಿರ್ಬಂಧಗಳನ್ನು ಕಡಿಮೆಗೊಳಿಸಿ ವ್ಯಾಪಾರವು ಬೆಳೆಯಲು ಅನುವು ಮಾಡಿಕೊಡಬೇಕು. ಯುಎಸ್ಎಂಸಿಎ ನಿಯಮಾವಳಿಗಳಲ್ಲಿ ಉತ್ತಮ ಅಭ್ಯಾಸಗಳ ಕುರಿತಂತೆ ಹೊಸ ಅಧ್ಯಾಯವನ್ನು ಸೇರಿಸಿದೆ ಮತ್ತು ಮೂರು ದೇಶಗಳ ಆರೋಗ್ಯ ಮತ್ತು ಸುರಕ್ಷತಾ ಮಾನದಂಡಗಳ ನಡುವೆ “ಸಮಾನತೆ” ಯನ್ನು ಹೆಚ್ಚಿಸುವಲ್ಲಿ ಮತ್ತಷ್ಟು ಮುಂದುವರಿಯುವ ನೈರ್ಮಲ್ಯ ಕ್ರಮಗಳ ಬಗ್ಗೆ ಮತ್ತೊಂದು ಅಧ್ಯಾಯವನ್ನು ಒಳಗೊಂಡಿದೆ.

ಒಂದು ದೇಶವು ಅದರ ಅಡಿಯಲ್ಲಿ ‘ಉತ್ಪನ್ನ ಸುರಕ್ಷಿತವಾಗಿದೆ’ ಎಂದು ಖಚಿತಪಡಿಸಿಕೊಳ್ಳುವುದು ನಿಯಮಗಳ ಗುರಿಯಾಗಿದೆ. ಇತರ ಎರಡು ದೇಶಗಳು ಉತ್ಪನ್ನಗಳು ತಮ್ಮ ಅಡಿಯಲ್ಲಿ ಸುರಕ್ಷಿತವೆಂದು ಸ್ವೀಕರಿಸುತ್ತವೆ – ಮತ್ತು ಈ ನಿರ್ಣಯಗಳನ್ನು ಸಾಧ್ಯವಾದಷ್ಟು ವೇಗಗೊಳಿಸಲು. “ಸಾರ್ವಜನಿಕ ನೀತಿ ಉದ್ದೇಶಗಳ” ಆಧಾರದ ಮೇಲೆ ದೇಶಗಳು ತಮ್ಮದೇ ಆದ ಮಾನದಂಡಗಳನ್ನು ಹೊಂದಲು ಸಮಾಲೋಚಕರ ವ್ಯಾಪ್ತಿಗೆ ಬಿಡಲಾಗಿದೆ ಆದರೆ ಇದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ನೋಡಬೇಕಾಗಿದೆ. ಯುಎಸ್ಎಂಸಿಎ “ಜೀನ್ ಎಡಿಟಿಂಗ್‍ನಂತಹ ಹೊಸ ವಿಧಾನಗಳನ್ನು ಒಳಗೊಂಡಂತೆ ಸಸ್ಯ ಸಂತಾನೋತ್ಪತ್ತಿ ನಾವೀನ್ಯತೆಯ ಮಹತ್ವವನ್ನು ಹೇಗೆ ಗುರುತಿಸುತ್ತದೆ ಮತ್ತು ಕೃಷಿ ಜೈವಿಕ ತಂತ್ರಜ್ಞಾನದ ವ್ಯಾಪಾರಕ್ಕೆ ಸಂಬಂಧಿಸಿದ ಮಾಹಿತಿ ವಿನಿಮಯ ಮತ್ತು ಸಹಕಾರವನ್ನು ಹೆಚ್ಚಿಸುವ ನಿಬಂಧನೆಗಳನ್ನು ಒಳಗೊಂಡಿದೆ” ಎಂಬುದರ ಬಗ್ಗೆ ಯುಎಸ್ ಬೀಜ ಉದ್ಯಮವು ಬಹಳ ಉತ್ಸುಕವಾಗಿದೆ.

ಅಂತೆಯೇ, ಯುಎಸ್-ಚೀನಾ ವ್ಯಾಪಾರ ಒಪ್ಪಂದವು ಚೀನಾಕ್ಕೆ ಆಮದು ಮಾಡಿಕೊಳ್ಳಲು ತ್ವರಿತ ಆಹಾರ ಸುರಕ್ಷತಾ ತಪಾಸಣೆ ಮತ್ತು ಜಿಎಮ್‍ಒ ಗಳಿಗೆ ಚೀನಾದಲ್ಲಿ ತ್ವರಿತ ಅನುಮೋದನೆಗಳನ್ನು ವಿಧಿಸುತ್ತದೆ. ಒಪ್ಪಂದದ ಪರಿಣಾಮವಾಗಿ 2019 ರ ಡಿಸೆಂಬರ್‌ನಲ್ಲಿ ಚೀನಾ ಯುಎಸ್‌ನಿಂದ ಕುಲಾಂತರಿ (ಜಿಎಂ) ಪಪ್ಪಾಯ ಮತ್ತು ಸೋಯಾಬೀನ್ ಆಮದು ಮಾಡಿಕೊಳ್ಳಲು ಅನುಮತಿ ನೀಡಿತು ಮತ್ತು ಅದರ ಮುಂದಿನ ತಿಂಗಳು ಪಶು ಆಹಾರಕ್ಕಾಗಿ ಐದು ಕುಲಾಂತರಿ (ಜಿಎಂ) ಬೆಳೆಗಳನ್ನು ಅನುಮೋದಿಸಿತು.

ಯುಎಸ್ ಮತ್ತು ಯುಕೆ ನಡುವಿನ ಪ್ರಸ್ತುತ ವ್ಯಾಪಾರ ಮಾತುಕತೆಯಲ್ಲಿ, ಅಮೇರಿಕಾದ ಕೃಷಿ ವ್ಯವಹಾರದ ಲಾಬಿಯು ಯುಕೆಯಲ್ಲಿ ಕೀಟನಾಶಕಗಳು, ಕುಲಾಂತರಿ (ಜಿಎಂ) ಬೆಳೆಗಳು ಹಾಗೂ ಕೋಳಿ ಮತ್ತು ಮಾಂಸ ಉತ್ಪನ್ನಗಳ ಉತ್ಪಾದನೆಯ ಮೇಲಿನ ನಿಯಂತ್ರಕ ಮಾನದಂಡಗಳನ್ನು ಕಡಿತಗೊಳಿಸಲು ಒತ್ತಾಯಿಸುತ್ತಿದೆ. ಯುಎಸ್ ತನ್ನ ಕಂಪನಿಗೆ “ಸಂಪೂರ್ಣ ಕೃಷಿ ಮಾರುಕಟ್ಟೆ ಪ್ರವೇಶವನ್ನು” ಬಯಸಬೇಕು ಮತ್ತು “ಕೃಷಿ ಕ್ಷೇತ್ರದಲ್ಲಿ ಉದ್ದೇಶಿತ ಅಥವಾ ಅನಪೇಕ್ಷಿತ ಸುಂಕ ರಹಿತ ಅಡೆತಡೆಗಳನ್ನು ನಿವಾರಿಸಬೇಕು” ಎಂದು ಬೃಹತ್ ಕೃಷಿ ಉದ್ಯಮಿ ಕಾರ್ಗಿಲ್ ಒತ್ತಾಯಿಸಿದ್ದಾರೆ.

ಹಾರ್ಮೋನ್ ತುಂಬಿದ ಗೋಮಾಂಸ, ಕ್ಲೋರಿನ್ ಬಳಸಿ ತೊಳೆದ ಕೋಳಿ ಮತ್ತು ಕುಲಾಂತರಿ (ಜಿಎಂ) ಆಹಾರಗಳಿಗೆ ತನ್ನ ಗಡಿಯನ್ನು ತೆರೆಯಲು ಒತ್ತಾಯಿಸುವ ಕಾರಣ ಇವು ಯುಕೆಯಲ್ಲಿ ಆಹಾರ ಸುರಕ್ಷತೆಯ ಮೇಲೆ ಹೆಚ್ಚಿನ ಪರಿಣಾಮಗಳನ್ನು ಬೀರಬಹುದು. ಇದಲ್ಲದೆ, ಪ್ರಸ್ತುತ ದೇಶೀಯವಾಗಿ ಮತ್ತು ಯೂರೋಪಿನಲ್ಲಿ ಪರಿಸರ ಮತ್ತು ಸುರಕ್ಷತೆಯ ಆಧಾರದ ಮೇಲೆ ನಿಷೇಧಿಸಲಾಗಿರುವ ಕೀಟನಾಶಕಗಳೊಂದಿಗೆ ಬೆಳೆದ ಹಣ್ಣು ಮತ್ತು ತರಕಾರಿಗಳನ್ನು ಮಾರಾಟ ಮಾಡಲು ಯುಕೆ ಅನುಮತಿ ನೀಡಬೇಕಾಗುತ್ತದೆ.

ಅಮೆರಿಕಾದ ಸಕ್ಕರೆ ಒಕ್ಕೂಟವು ಯುಕೆಯಲ್ಲಿ ಗ್ರಾಹಕ-ಪರ ಆಹಾರ ಲೇಬಲಿಂಗ್ಅನ್ನು ಪ್ರಶ್ನಿಸುತ್ತಿದೆ, ಇದನ್ನು ಸಮಾಲೋಚಕರು ‘ಸುಂಕ ರಹಿತ ವ್ಯಾಪಾರ ಅಡೆತಡೆಗಳು’ ಎಂದು ನಿರ್ಣಯಿಸುತ್ತಾರೆ. ಈ ಬೇಡಿಕೆಗಳು ಅಮೇರಿಕ ಮತ್ತು ಯುರೋಪ್ ಒಕ್ಕೂಟ ನಡುವಿನ ಹಿಂದಿನ ವ್ಯಾಪಾರ ಮಾತುಕತೆಗಳನ್ನು ವಿಷಪೂರಿತಗೊಳಿಸಿದವು, ಇದು ಟ್ರಂಪ್ ಆಯ್ಕೆಯಾದ ನಂತರ ಸಂಪೂರ್ಣ ಸ್ಥಗಿತಗೊಂಡಿತು ಆದರೆ ಈಗ ಮತ್ತೆ ಸಣ್ಣ ಮಟ್ಟದ ಮಾತುಕತೆಯಲ್ಲಿ ಪ್ರಾರಂಭವಾಗುತ್ತಿದೆ.

ಎಫ್‌ಟಿಎ ಮಾತುಕತೆ ಮುಂದೆ ಸಾಗಿದರೆ ಭಾರತ ಈ ವಿಷಯದಲ್ಲಿ ತೀವ್ರ ಸೆಣೆಸಾಡಲಿದೆ. 2018 ರಲ್ಲಿ, ಯುಎಸ್-ಇಂಡಿಯಾ ಬಿಸಿನೆಸ್ ಕೌನ್ಸಿಲ್ ಈಗಾಗಲೇ 5% ಅಥವಾ ಅದಕ್ಕಿಂತ ಹೆಚ್ಚಿನ ಕುಲಾಂತರಿ (ಜಿಎಂ) ಪದಾರ್ಥಗಳೊಂದಿಗೆ ಭಾರತದಲ್ಲಿ ಮಾರಾಟ ಮಾಡುವ ಆಹಾರ ಉತ್ಪನ್ನಗಳನ್ನು ಅದಕ್ಕೆ ಅನುಗುಣವಾಗಿ ಲೇಬಲ್ ಮಾಡಬೇಕೆಂದು ಶಿಫಾರಸು ಮಾಡಿದೆ. ಭಾರತದಲ್ಲಿ ಕುಲಾಂತರಿ (ಜಿಎಂ) ಆಹಾರವನ್ನು ಪರಿಚಯಿಸುವ ಹಿಂಬಾಗಿಲ ಪ್ರಯತ್ನವಾಗಿದೆ. ಕುಲಾಂತರಿ (ಜಿಎಂ) ಪಶು ಆಹಾರವನ್ನು ಆಮದು ಮಾಡಿಕೊಳ್ಳಲು ಭಾರತವನ್ನು ಒಪ್ಪಿಸಲು ಅಮೇರಿಕಾ ಕಂಪನಿಗಳು ಕಳೆದ ಹಲವಾರು ವರ್ಷಗಳಿಂದ ಸಮಾನವಾಗಿ ಪ್ರಯತ್ನಿಸುತ್ತಿವೆ. ಇತ್ತೀಚೆಗೆ, ಭಾರತದ ಕುಲಾಂತರಿ (ಜಿಎಂ) ನಿಯಂತ್ರಕ ಸಂಸ್ಥೆ ಇದನ್ನು ಅನುಮತಿಸಲು ಹೆಚ್ಚಿನ ಒಳಹರಿವುಗಳನ್ನು ಬಯಸಿದೆ. ಆದ್ದರಿಂದ, ಭಾರತದಲ್ಲಿ ನಿರ್ಬಂಧಗಳನ್ನು ಸಡಿಲಗೊಳಿಸಲು ಅಮೆರಿಕೆಯ ಕಾರ್ಪೊರೇಟ್ ಒತ್ತಡವು ಈಗಾಗಲೇ ನಡೆಯುತ್ತಿದೆ.

ಯುಎಸ್ಎಂಸಿಎ ಮತ್ತು ಯುಎಸ್-ಚೀನಾ ಎಫ್ಟಿಎ ಎರಡೂ ಆಮದು ಮಾಡಿದ ಆಹಾರ ಅಥವಾ ಕೃಷಿ ಉತ್ಪನ್ನಗಳಲ್ಲಿ ಜಿಎಂಒಗಳ “ಕಡಿಮೆ ಮಟ್ಟದ ಉಪಸ್ಥಿತಿ” ಕುರಿತು ನಿಬಂಧನೆಗಳನ್ನು ಒಳಗೊಂಡಿವೆ. ಯುಎಸ್ಎಂಸಿಎ ಪಠ್ಯದ ಪ್ರಕಾರ ಮೆಕ್ಸಿಕೊದಂತಹ ದೇಶಗಳು ಆಮದು ಮಾಡಿಕೊಳ್ಳುವ ಆಹಾರ ಅಥವಾ ಕೃಷಿ ಉತ್ಪನ್ನಗಳಲ್ಲಿ ಕುಲಾಂತರಿ (ಜಿಎಂ) ವಸ್ತುಗಳು ಗೊತ್ತಿಲ್ಲದೇ ಸೇರಿ ಬಿಟ್ಟಿದ್ದರೆ ಅದನ್ನು ಶೀಘ್ರವಾಗಿ ನಿಭಾಯಿಸುವ ಜೊತೆಗೆ ಮತ್ತು ಉತ್ಪನ್ನದ ಸುರಕ್ಷತಾ ಅನುಮೋದನೆಯನ್ನು ರಫ್ತುದಾರರ ಕಡೆಯಿಂದ ಗಣನೆಗೆ ತೆಗೆದುಕೊಳ್ಳಬೇಕು. ಬೇರೆ ರೀತಿಯಲ್ಲಿ ಹೇಳುವುದಾದರೆ, ವಿವಿಧ ರಾಷ್ಟ್ರೀಯ ಕಾನೂನುಗಳನ್ನು ಲೆಕ್ಕಿಸದೆ ಜಿಎಮ್ ಪದಾರ್ಥಗಳ ಕಡಿಮೆ ಮಟ್ಟದ ಉಪಸ್ಥಿತಿಯನ್ನು ಅನುಮತಿಸಬೇಕು. ಯುಎಸ್-ಚೀನಾ ಎಫ್‍ಟಿಎ ಹಂತ ಒಂದು ಇದನ್ನು ಹೇಳುತ್ತದೆ. “ಅಜಾಗರೂಕತೆಯಿಂದ” ಚೀನಾಕ್ಕೆ ರಫ್ತು ಮಾಡುವ ಜಿಎಮ್‍ಒ ವಿಷಯದಲ್ಲಿ ಯುಎಸ್ ಅಥವಾ ಇತರ ದೇಶಗಳ ಸುರಕ್ಷತಾ ಮೌಲ್ಯಮಾಪನಗಳನ್ನು ಚೀನಾ ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ.

ಇಲ್ಲಿಯವರೆಗೆ, ಭಾರತದಲ್ಲಿ ಯಾವುದೇ ಜೈವಿಕ ತಂತ್ರಜ್ಞಾನದಿಂದ ಕಂಡುಹಿಡಿಯಲಾದ ಆಹಾರ ಬೆಳೆ ಅನುಮೋದನೆ ಪಡೆದಿಲ್ಲ. “ಕಡಿಮೆ ಮಟ್ಟದ ಉಪಸ್ಥಿತಿ”ಯ ನಿಬಂಧನೆಗಳು, ಭಾರತದ ಆಹಾರ ಸುರಕ್ಷತಾ ಪ್ರಾಧಿಕಾರದಿಂದ ಮಾನವ ಬಳಕೆಗಾಗಿ ಅನುಮೋದಿಸದ ಕುಲಾಂತರಿ (ಜಿ ಎಂ) ವಸ್ತುಗಳೊಂದಿಗೆ ಸೇರಿ ಭಾರತದ ಆಹಾರ ವ್ಯವಸ್ಥೆಯ ಮಾಲಿನ್ಯವನ್ನು ಕಾನೂನುಬದ್ಧಗೊಳಿಸುತ್ತದೆ.

ಯುಎಸ್ಎಂಸಿಎ ಮತ್ತು ಯುಎಸ್-ಚೀನಾ ಒಪ್ಪಂದ ಎರಡೂ ಕೃಷಿ ಜೈವಿಕ ತಂತ್ರಜ್ಞಾನದ ವಿಭಾಗಗಳನ್ನು ಹೊಂದಿವೆ, ಇದು ಜಿಎಂಒಗಳಿಗೆ ಅನುಮೋದನೆ ಪ್ರಕ್ರಿಯೆಯನ್ನು ವೇಗಗೊಳಿಸುವ ಕಟ್ಟುಪಾಡುಗಳನ್ನು ಒಳಗೊಂಡಿದೆ. ವಾಸ್ತವವಾಗಿ, ಯುಎಸ್ಎಂಸಿಎ ವ್ಯಾಖ್ಯಾನವು ಜೀನ್ ಸಂಪಾದನೆಯ ಹೊಸ ವಿಧಾನಗಳಿಗೆ ವಿಸ್ತರಿಸುತ್ತದೆ. ಇದು ಪಾರದರ್ಶಕತೆ, ನಿಯಂತ್ರಕ ಅನುಮೋದನೆ ಮತ್ತು ಅವುಗಳ ನಡುವಿನ ಸಹಕಾರದ ಅಗತ್ಯವಿರುವ ಉತ್ಪನ್ನಗಳ ಸಮಯೋಚಿತ ವಿಮರ್ಶೆಗೆ ಸಂಬಂಧಿಸಿದ ಕಾರ್ಯವಿಧಾನಗಳನ್ನು ನೀಡುತ್ತದೆ.

ಯುಎಸ್-ಚೀನಾ ಒಪ್ಪಂದವು ಜೈವಿಕ ತಂತ್ರಜ್ಞಾನದ ಕೃಷಿ ಉತ್ಪನ್ನಗಳಿಗೆ ಅನುಮೋದನೆ ಕಾರ್ಯವಿಧಾನಗಳನ್ನು ವೇಗಗೊಳಿಸಲು ವರ್ಷಪೂರ್ತಿ ಅರ್ಜಿಗಳನ್ನು ಸ್ವೀಕರಿಸಲು ಮತ್ತು ಅಂತಹ ಕಾರ್ಯವಿಧಾನಗಳನ್ನು 24 ತಿಂಗಳಿಗಿಂತ ಹೆಚ್ಚಿಗೆ ಸೀಮಿತಗೊಳಿಸುವ ಕಟ್ಟುಪಾಡುಗಳನ್ನು ಸಹ ಒಳಗೊಂಡಿದೆ. ಅನುಮೋದನೆ ಪಡೆದ ನಂತರ, ದೃಢೀಕರಣ ಅವಧಿಯು ಕನಿಷ್ಠ 5 ವರ್ಷಗಳು. ಪರಿಸರ ಸುರಕ್ಷತೆ ಮತ್ತು ಆರೋಗ್ಯ ಕಾರಣಗಳಿಗಾಗಿ ಎಚ್ಚರಿಕೆ ಇನ್ನೂ ಪ್ರಮುಖವಾಗಿರುವ ಭಾರತದಲ್ಲಿ ಈ ರೀತಿಯ ಕ್ರಮಗಳು ಭಾರಿ ಪರಿಣಾಮ ಬೀರುತ್ತವೆ.

ಯುಪಿಒವಿ ಮೂಲಕ ಬೀಜಗಳ ಮೇಲೆ ಏಕಸ್ವಾಮ್ಯ

ಟ್ರಂಪ್‌ರ ವ್ಯಾಪಾರ ಒಪ್ಪಂದಗಳ ಕುರಿತು ಮತ್ತೊಂದು ಪ್ರಮುಖ ಕಾಳಜಿಯೆಂದರೆ ಬೀಜ ಕಂಪನಿಗಳಿಗೆ ಪೇಟೆಂಟ್ ತರಹದ ಹಕ್ಕುಗಳನ್ನು ಒದಗಿಸುವ ಹೊಸ ಸಸ್ಯ ಪ್ರಭೇದಗಳ ಸಂರಕ್ಷಣೆ (ಯುಪಿಒವಿ) ಯ 1991 ರ ಸಮಾವೇಶದ ನಿರ್ಣಯವನ್ನು ಅಂಗೀಕರಿಸುವುದು. ಇದು ಟ್ರಂಪ್ ಆಡಳಿತಕ್ಕೆ ಮಾತ್ರ ಸೀಮಿತವಾಗಿಲ್ಲ; ಇದು 1990 ರ ದಶಕದಿಂದ ಯುಎಸ್ ಎಫ್‍ಟಿಎಗಳ ಪ್ರಮುಖ ಅಂಶವಾಗಿದೆ. 1978 ರ ಸಮಾವೇಶದಡಿಯಲ್ಲಿ ಯುಪಿಒವಿ ಸದಸ್ಯರಾಗಿರುವ ಮೆಕ್ಸಿಕೊವನ್ನು ಯುಎಸ್‌ಎಂಸಿಎ ಹೆಚ್ಚು ಕಠಿಣವಾದ ಯುಪಿಒವಿ 1991 ಆವೃತ್ತಿಗೆ ಉನ್ನತೀಕರಿಸಲು ನಿರ್ಬಂಧಿಸಿದೆ. ಯುಎಸ್ ಬೀಜ ಉದ್ಯಮವು ಈ ಬಗ್ಗೆ ಬಹಳ ಉತ್ಸುಕವಾಗಿದೆ, ಇದು ಅವರಿಗೆ “ಗೆಲುವು” ಎಂದು ಹೇಳಬಹುದು.

ಯುಎಸ್-ಚೀನಾ ಒಪ್ಪಂದದ ಮೊದಲ ಹಂತದಲ್ಲಿ ಯುಪಿಒವಿ 1991 ರ ಬಗ್ಗೆ ಯಾವುದೇ ನಿಬಂಧನೆಗಳಿಲ್ಲ. ಅದಕ್ಕೆ ಎರಡು ಕಾರಣಗಳಿರಬಹುದು. ಒಪ್ಪಂದದ ಎರಡನೇ ಹಂತದಲ್ಲಿ ಯುಎಸ್ ವಿಶಾಲ ಬೌದ್ಧಿಕ ಆಸ್ತಿ ವಿಷಯಗಳನ್ನು ತೆಗೆದುಕೊಳ್ಳಲಿದೆ. ಮೆಕ್ಸಿಕೊದಂತೆಯೇ ಚೀನಾ ಈಗಾಗಲೇ ಯುಪಿಒವಿ 1978 ರ ಸದಸ್ಯನಾಗಿದ್ದು, ಯುಪಿಒವಿ 1991 ರೊಂದಿಗೆ ಹೇಗಾದರೂ ಹೊಂದಾಣಿಕೆ ಮಾಡಲು ಕ್ರಮೇಣ ತನ್ನ ಬೀಜ ಕಾನೂನುಗಳನ್ನು ತಿದ್ದುಪಡಿ ಮಾಡುವತ್ತ ಸಾಗುತ್ತಿದೆ.

ಭಾರತವು ತನ್ನ ಲಕ್ಷಾಂತರ ಸಣ್ಣ ರೈತರು ಮತ್ತು ಕಾರ್ಪೊರೇಟ್ ಅಲ್ಲದ ಬೀಜ ಉತ್ಪಾದಕರ ಹಿತಾಸಕ್ತಿಗಳನ್ನು ಕಾಪಾಡುವ ಸಲುವಾಗಿ ಯುಪಿಒವಿ ಸಮಾವೇಶಕ್ಕೆ ಸೇರಿಕೊಳ್ಳದ ನೀತಿಯನ್ನು ಹೊಂದಿದೆ. ಯುಪಿಒವಿಗೆ ಸೇರಲು ಸರ್ಕಾರದ ಮೇಲೆ ಒತ್ತಡ ಹೇರಿದರೆ ಪ್ರಸ್ತಾವಿತ ಯುಎಸ್-ಇಂಡಿಯಾ ಎಫ್‍ಟಿಎ ಭಾರತದಲ್ಲಿನ ರೈತರ ಹಕ್ಕುಗಳ ಮೇಲೆ ಗಂಭೀರ ಪರಿಣಾಮಗಳನ್ನು ಬೀರುತ್ತದೆ. 2019 ರಲ್ಲಿ ಪೆಪ್ಸಿಕೋ ಆಲೂಗೆಡ್ಡೆ ತಳಿಯ ನಿಯಮವನ್ನು ಉಲ್ಲಂಘಿಸಲಾಗಿದೆಯೆಂದು ಭಾರತೀಯ ರೈತರ ಮೇಲೆ ಇತ್ತೀಚೆಗೆ ನಡೆದ ಹಗರಣವನ್ನು ಗಮನಿಸಿದರೆ, ಯುಎಸ್ ಬೀಜ ಉದ್ಯಮವು ಯುಎಸ್-ಇಂಡಿಯಾ ಎಫ್ಟಿಎ ಅಡಿಯಲ್ಲಿ ಬಲವಾದ ಬೀಜ ಏಕಸ್ವಾಮ್ಯದ ಹಕ್ಕುಗಳನ್ನು ಪಡೆಯಲು ಮತ್ತು ರೈತರ ಪಾಲಿಗೆ ಬೀಜಗಳನ್ನು ಉಳಿಸುವ ಸಾಧ್ಯತೆಗಳನ್ನು ತೆಗೆದುಹಾಕುವ ಸಾಧ್ಯತೆಯಿದೆ.

ಉಪಸಂಹಾರ

ಭಾರತದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರು, ಭಾರತದ ಡೈರಿ ಉತ್ಪಾದಕರು, ರೈತರು ಮತ್ತು ಇತರ ಉದ್ಯಮ ಕ್ಷೇತ್ರಗಳ ಸೂಕ್ಷ್ಮತೆಗಳ ಬಗ್ಗೆ ಆರ್‌ಸಿಇಪಿಯು ಮಾತಾಡದೇ ಇದ್ದುದರಿಂದ ಆ ವ್ಯಾಪಾರ ಮಾತುಕತೆಯಿಂದ ಸರ್ಕಾರ ಹಿಂದೆ ಸರಿದಿದೆ ಎಂದಿದ್ದಾರೆ. ಈಗ ಯುಎಸ್-ಇಂಡಿಯಾ ವ್ಯಾಪಾರ ಮಾತುಕತೆಗಳನ್ನು ಪ್ರಾರಂಭಿಸುವುದು ಅಸಮಂಜಸ ಮತ್ತು ಅಭಾಸಕಾರಿಯಾದುದು, ಅದು ಭಾರತದ ಗ್ರಾಮೀಣ ಸಮುದಾಯಗಳಿಗೆ ಮತ್ತು ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಸವಾಲುಗಳನ್ನು ಒಡ್ಡುತ್ತದೆ ಮತ್ತು ಭಾರತದ ಸ್ಥಳೀಯ ಬೀಜಗಳು ಮತ್ತು ಸಸ್ಯಗಳ ಬೃಹತ್ ವೈವಿಧ್ಯತೆಯನ್ನು ಬಹಳವಾಗಿ ಹಾಳು ಮಾಡುತ್ತದೆ, ಇವುಗಳನ್ನು ವರ್ಷದಿಂದ ವರ್ಷಕ್ಕೆ ಲಕ್ಷಾಂತರ ಭಾರತೀಯ ರೈತರು ಸಂರಕ್ಷಿಸಿ ಮರುಬಳಕೆ ಮಾಡುತ್ತಿದ್ದಾರೆ. ಹಾಗಿರುವಾಗ ಈ ಒಪ್ಪಂದವು ಆಹಾರ ಸಾರ್ವಭೌಮತ್ವದ ಭಾರತದ ಭರವಸೆಯನ್ನು ಸಹ ನಾಶಪಡಿಸುತ್ತದೆ.

ಇದು ಭಾರತದ ರೈತರು ಮತ್ತೆ ಹೋರಾಟಕ್ಕೆ ಅಣಿಯಾಗಬೇಕಾದ ಸಮಯ. ಯುಎಸ್-ಇಂಡಿಯಾ ವ್ಯಾಪಾರ ಒಪ್ಪಂದವನ್ನು ಔಪಚಾರಿಕಗೊಳಿಸುವ ಯಾವುದೇ ಸಾಧ್ಯತೆಯನ್ನು ಇಂದು, ಮುಂದೂ ವಿರೋಧಿಸಲೇಬೇಕಿದೆ.

ಅಫ್ಸರ್ ಜಾಫ್ರಿ, ಗ್ರೇನ್

(ಈ ಲೇಖನವನ್ನು ಸಾಮಾಜಿಕ ಕಾಳಜಿಯ ಸಮಾನ ಮನಸ್ಕ ಗೆಳೆಯರು ಅನುವಾದಿಸಿದ್ದಾರೆ)


ಇದನ್ನೂ ಓದಿ: ಆರ್‌ಸಿಇಪಿ ಒಪ್ಪಂದಕ್ಕೆ ಈ ಬಾರಿ ಭಾರತ ಸಹಿ ಹಾಕಲಿದೆಯೇ?

+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕರ್ನಾಟಕ ಕೊರೊನಾ: 24 ಗಂಟೆಯಲ್ಲಿ 67 ಸಾವಿರ ಡಿಸ್ಚಾರ್ಜ್, 38 ಸಾವಿರ ಹೊಸ ಪ್ರಕರಣ

0
ಕೊರೊನಾ ಮೂರನೇ ಅಲೆಯಲ್ಲಿ ರಾಜ್ಯದಲ್ಲಿ ಪ್ರಕರಣಗಳು ದಿಢೀರ್‌ ಹೆಚ್ಚಾಗಿದ್ದವು. ರಾಜಧಾನಿ ಬೆಂಗಳೂರಿನಲ್ಲಿ ಹೆಚ್ಚಿನ ಕೇಸಸ್ ಪತ್ತೆಯಾಗಿದ್ದವು. ಆದರೆ, ಕಳೆದ 24 ಗಂಟೆಯಲ್ಲಿ 67 ಸಾವಿರ ಕೊರೊನಾ ಸೋಂಕಿತರು ಚೇತರಿಕೆ ಕಂಡು, ಡಿಸ್ಚಾರ್ಜ್ ಆಗಿದ್ದಾರೆ....
Wordpress Social Share Plugin powered by Ultimatelysocial