ಕಾಶ್ಮೀರಕ್ಕೆ ವಿಶೇಷ ಸ್ಥಾನ ನೀಡಿದ್ದ 370 ವಿಧಿಯನ್ನು ರದ್ದುಗೊಳಿಸಿ ಆಗಸ್ಟ್ 5ಕ್ಕೆ ಒಂದು ವರ್ಷ. ಹಲವು ತಿಂಗಳುಗಳ ಕಾಲ ಹೇರಿದ್ದ ಕರ್ಫ್ಯೂ ಸಂದರ್ಭದಲ್ಲಿ ಕಾಶ್ಮೀರದ ಸಾಮಾನ್ಯ ಜನರ ಸಂಕಟ, ತಲ್ಲಣ, ಅತಂತ್ರ-ಅನಿಶ್ಚಿತತೆಯನ್ನು ಕಟ್ಟಿಕೊಡುವ ಈ ಕಾಶ್ಮೀರಿ ಕವಿತೆಗಳನ್ನು ಸಂವರ್ಥ ಸಾಹಿಲ್ ಕನ್ನಡಕ್ಕೆ ಅನುವಾದಿಸಿದ್ದಾರೆ.
ನಾವು ಮುಷ್ಠಿ ಬಿಚ್ಚಿದರೆ
ಅದು ಮತ್ತೊಂದು ಯುದ್ಧವನ್ನು
ಬಿಗಿಹಿಡಿಯಲು.
ಬೇಲಿಯ ಮೇಲೆ ಬಿದ್ದು ಸಾಯುತ್ತಾರೆ
ನಮ್ಮ ಜನ ಬಾಗಿಲ ಹಿಂದುಗಡೆ
ನೇತುಹಾಕಿದ ಬಟ್ಟೆಯಂತೆ.
ಬೆಚ್ಚಗಿನ ವಸ್ತ್ರ ತೊಟ್ಟು ಮಕ್ಕಳು
ಮಂದ ಬೆಳಕಿನ ಓಣಿಯಲ್ಲಿ
ಆಟದ ಗನ್ ಹಿಡಿದು
ಒಬ್ಬರನ್ನೊಬ್ಬರು ಎದುರಾಗುತ್ತಾರೆ.
“ಘನತೆಯ ಸಾವಾಗಿರಲಿ”
ಎಂದು ಒಬ್ಬ ಬೊಬ್ಬಿಡುತ್ತಾನೆ
ಮತ್ತೊಬ್ಬ ನೆಲಕ್ಕುರುಳುವ
ನಟನೆ ಮಾಡುತ್ತಾನೆ.
ಸದಾ ಯುದ್ಧದಲ್ಲಿರುವ
ಮಕ್ಕಳು ನಾವು
ಯುದ್ಧದ ಮಕ್ಕಳು ನಾವು.
– ಮುಯಿನ್ ಮೆಹ್ರಾಜ್
***
ಸಂಶಯಿಸಬೇಡ ಪ್ರಶ್ನಿಸಬೇಡ ನನ್ನನು
ಹೇಳುತೇನೆ ಕೇಳು ನನ್ನ ಕಾವ್ಯದ ಶಕ್ತಿಯ
ನನ್ನ ಕಾವ್ಯವೊಂದು ಜಾದೂ ಅಲ್ಲವೇ ಅಲ್ಲ
ಅದನ್ನು ಮೀರಿದ
ಪವಾಡವನ್ನೇ ತನ್ನೊಳಗೆ ಇರಿಸಿಕೂಂಡ
ಕಾವ್ಯ ನನ್ನದು
ನಿನ್ನ ಬಾಂಬುಗಳನ್ನು ಹಕ್ಕಿಯಾಗಿಸಬಲ್ಲದು
ನಿನ್ನ ಕಾಡತೂಸುಗಳನ್ನು ಪ್ರಾಸವಾಗಿಸಬಲ್ಲದು
ನಿನ್ನ ಚಿತ್ರಹಿಂಸೆಯನ್ನು ಸ್ವರಸಮ್ಮೇಳನವಾಗಿಸಬಲ್ಲದು
ನಿನಗೆಂದೂ ಅರ್ಥವಾಗದು ನನ್ನ ಕಾವ್ಯ
ಆದರೂ ನಾನು ಹಾಡುವುದನ್ನು ನಿಲ್ಲಿಸುವುದಿಲ್ಲ
ಯಾಕೆಂದರದು ನಿನ್ನ ವಿಷವನ್ನು ನಿಷ್ಕ್ರಿಯಗೊಳಿಸಬಲ್ಲದು
ನಿನ್ನ ಸಂಸತ್ತನ್ನು ಬುಡಸಮೇತ ನಡುಗಿಸಬಲ್ಲದು
ನನ್ನ ಕಾವ್ಯ ನಿನ್ನ ಚರ್ಮವನ್ನು ಸಿಗಿದು
ನೀ ಬಚ್ಚಿಡುವ ನಿನ್ನ ಘೋರ ವಿಕಾರವನ್ನು ಬಿಚ್ಚಿಡಬಲ್ಲದು
ಕಣ್ಣೀರನ್ನು ಪ್ರವಾಹವಾಗಿಸಬಲ್ಲದು ನನ್ನ ಕಾವ್ಯ
ಪ್ರವಾಹವನ್ನು ಚಂಡಮಾರುತವಾಗಿಸಬಲ್ಲದು
ಚಂಡಮಾರುತವನ್ನು ಹೊಸ ಮುಂಜಾವಿನ
ಸ್ವಾತಂತ್ರ ಮತ್ತು ಭರವಸೆಯಾಗಿಸಬಲ್ಲದು
ನಿನ್ನ ನಾಲಿಗೆಗೆ ರುಚಿಸದೆ ಹೋಗಬಹುದು ನನ್ನ ಕಾವ್ಯ
ಆದರೆ ನನ್ನ ಹೃದಯಕ್ಕೆ ಅದರ ಕಹಿಯೇ ಔಷದ
ನಿನ್ನ ಕಿವಿಗಳಿಗೆ ಹಾಯಾಗಿ ಕೇಳಿಸದೆ ಇರಬಹುದು
ಆದರೆ ಅವುಗಳ ತಪ್ಪಿದ ಪ್ರಾಸ ತಪ್ಪಿದ ಛಂದಸ್ಸು
ನನ್ನ ಎದೆಯ ಬಡಿತವನ್ನು ಧ್ವನಿಸುತ್ತದೆ
ಅದು ನನ್ನ ಕನಸನ್ನು ಜೀವಂತವಾಗಿರಿಸುತ್ತದೆ
ಸ್ವಾತಂತ್ರದ ಕನಸು
ಎಚ್ಚರ!
ನನ್ನ ಕಾವ್ಯ ಸುಡಬಲ್ಲದು ನಿನ್ನನು
ಹಾಗಾಗಿ ಓದು
ಗಮನವಿಟ್ಟು ಓದು
ಆಸ್ವಾದಿಸು
ನಿನ್ನ ದಬ್ಬಾಳಿಕೆಯ ಫಿರಂಗಿಯಿಂದ ಹೊರಮ್ಮಲಾರದ್ದು
ನನ್ನ ಬೇಗುದಿಯ ಗರ್ಭದಿಂದ ಹೊರಹೊಮ್ಮುವುದು.
–ತನ್ನ ಹೆಸರನ್ನು ಬಹಿರಂಗಪಡಿಸಲು ಇಚ್ಚಿಸದ ಕಾಶ್ಮೀರದ ಕವಯತ್ರಿ
***
ನಾನು
ವ್ಯಕ್ತಪಡಿಸುವ ಪ್ರತಿ ಆಲೋಚನೆಗೆ, ಸಂದಾಯ ಪಡೆಯುತ್ತೇನೆ
ಬರೆಯುವ ಪ್ರತಿ ಅಕ್ಷರಕ್ಕೆ, ಸಂದಾಯ ಪಡೆಯುತ್ತೇನೆ
ಕೂಗುವ ಪ್ರತಿ ಘೋಷಣೆಗೆ, ಸಂದಾಯ ಪಡೆಯುತ್ತೇನೆ
ಎಸೆಯುವ ಪ್ರತಿ ಕಲ್ಲಿಗೂ, ಸಂದಾಯ ಪಡೆಯುತ್ತೇನೆ
ನಾನು
ದೋಚಿದ ಬಂದೂಕಿಗೆ ಸಂದಾಯ ಪಡೆಯುತ್ತೇನೆ
ನನ್ನೆದೆ ಸೀಳಿದ ಗುಂಡಿಗೆ ಸಂದಾಯ ಪಡೆಯುತ್ತೇನೆ
ಅಂತ್ಯಕ್ರಿಯೆಗಳಲ್ಲಿ ಪಾಲ್ಗೊಳ್ಳುವುದಕ್ಕೆ ಸಂದಾಯ ಪಡೆಯುತ್ತೇನೆ
ಹುತಾತ್ಮರ ಮನೆಗೆ ಭೇಟಿ ನೀಡುವುದಕ್ಕೆ ಸಂದಾಯ ಪಡೆಯುತ್ತೇನೆ
ನೀನು
ನಮ್ಮ ಕಣಿವೆಗೆ ನುಗ್ಗಿದಾಗ, ಸಂದಾಯ ಪಡೆದಿರುವೆ
ಇಲ್ಲಿ ಕಳೆಯುವ ಪ್ರತಿ ದಿನಕ್ಕೂ ಸಂದಾಯ ಪಡೆದಿರುವೆ
ನಿನ್ನಿಂದಾದ ಪೀಡನೆ, ಚಿತ್ರಹಿಂಸೆ, ಕೊಲೆ, ದಹನಕ್ಕೆ ಸಂದಾಯ ಪಡೆದಿರುವೆ
ನಾನು ಸಂದಾಯ ಪಡೆಯುತ್ತೇನೆ ಎನ್ನುವುದಕ್ಕೂ ಸಂದಾಯ ಪಡೆದಿರುವೆ
ನನ್ನ ಪ್ರತಿಭಟನೆಯ ಪ್ರತಿ ರೂಪವೂ ಸಂದಾಯ ಪಡೆದಿದ್ದರೆ
ನಿನ್ನ ಆಕ್ರಮಣವೂ ಸಂದಾಯ ಪಡೆದಿದೆ
ವ್ಯತ್ಯಾಸವಿಷ್ಟೆ:
ಹಣ ಮತ್ತು ಭಡ್ತಿಯ ಮೂಲಕ ನೀ ಸಂದಾಯ ಪಡೆದರೆ
ನಾನು ನಿನ್ನ ಅತಿಕ್ರಮಣವನ್ನು ಅಂತ್ಯಗೊಳಿಸುವ
ಭರವಸೆಯನ್ನು ಸಂದಾಯವಾಗಿ ಪಡೆಯುತ್ತೇನೆ.
– ನಾಸಿರ್ ಪಟಿಗರು
***
ನೀನು ಅಲ್ಲಿರಲಿಲ್ಲ
ಹೌದು, ನೀನು ಅಲ್ಲಿರಲಿಲ್ಲ
ನನ್ನ ತಲೆಯ ಮೇಲಿನ ಸ್ಕಾರ್ಫ್
ಅವರು ಹಿಡಿದೆಳೆದು ವಶಪಡಿಸಿಕೊಂಡಾಗ
ಕಂಡಿಲ್ಲ ನೀನು
ಕಗ್ಗತ್ತಲ ರಾತ್ರಿಯಲ್ಲಿ ಅವರು
ನಮ್ಮ ಮನೆಯನ್ನು ನುಗ್ಗುವುದನ್ನು
ಉದ್ದೇಶಪೂರ್ವಕವಾಗಿಯೇ
ನಮ್ಮ ಉಗ್ರಾಣವನ್ನೇ ಆಯ್ದು
ಚಹಾದ ಸೊಪ್ಪಿಗೆ ಅರಶಿಣ ಬೆರಸುತ್ತಿದ್ದರು
ಅಲ್ಲಿ ಸಣ್ಣ ಸಂದೊಂದರಿಂದ
ಇಣುಕಿ ನೋಡುತ್ತಿದ್ದೆ ನಾನು
ಗಂಟೆಗಟ್ಟಲೆ
ನನ್ನಮ್ಮನ ಅಳುವನ್ನು, ಚೀರನ್ನು
ಆಕೆ ಮರಗಟ್ಟುವತನಕ
ಅವರು ಒದೆಯುತ್ತಿದ್ದದ್ದನ್ನು
ನೀನು ಕೇಳಿಲ್ಲ
ಅವರು ವಾಚಾಮಗೋಚರವಾಗಿ
ನನ್ನ ಬಯ್ಯುವುದನ್ನು
ಸುತ್ತಲಿನ ಹೊಲಸಿಗಾಗಿ
ಅವರನ್ನು ನಾ ದುರುಗುಟ್ಟಿ ನೋಡಿದಾಗ
ಹೇಗನ್ನಿಸಬೇಡ
ಏಕಕಾಲಕ್ಕೆ ನೂರಾರು ಕಲ್ಲುಗಳನ್ನು
ಅವರು ಎಸೆದಾಗ
ಕಿಟಕಿಯ ಗಾಜನ್ನಲ್ಲ
ಇರುಳಿನ ನಿಶಬ್ದತೆಯನ್ನು ಒಡೆಯಲು
ಒಂದೇ ಏಟಿಗೆ ಇಲ್ಲವಾಗಿಸಿದಾಗ
ಮನೆಯ ಒಬ್ಬೇಒಬ್ಬ ದುಡಿಯುವವನನ್ನು
ನೀನು ಇರಲಿಲ್ಲ
ಇವಕ್ಕೆಲ್ಲ ಸಾಕ್ಷಿಯಾಗಲು.
ಸುಂಟರಗಾಳಿಯಂತೆ ಬಂದು
ಆತನನ್ನು ಅವರು ಗಿರಗಿರ ಸುತ್ತಿಸಿದ
ಆ ಇರುಳು
ಅವರು ನೂಕಿದ ಮತ್ತು ಕಪಾಳಕ್ಕೆ ಹೊಡೆದ ಸದ್ದು
ಇಂದಿಗೂ ನನ್ನ ಕಿವಿಯಲ್ಲಿ ಗುಯ್ಗುಟ್ಟುತ್ತಿದೆ
ದೀರ್ಘವಾದ ‘ಬೀಪ್’ ಸದ್ದನ್ನು ಹಿಂಬಾಲಿಸುವ
ರಭಸದ ಆ ಪ್ರತಿ ತುಳಿತ
ಆಕ್ರಮಣಕ್ಕೆ ಬೆದರಿ
ಕೇಳಲಿಲ್ಲ ನಮ್ಮ ತಪ್ಪೇನೆಂದು
ನಾನು ನೋಡಿದ್ದು, ಮರುಕಪಟ್ಟಿದ್ದು
ಎಲ್ಲವೂ ಮೌನದಲ್ಲಿ
ಶಾಂತ ಸಮುದ್ರ ತೀರದಂತೆ
ಈಗ ನನ್ನಣ್ಣನೂ ಇಲ್ಲ.
ಅಮ್ಮನ ಉಳುಕಿಗೆ ಈಗ
ನೋವಿನ ಅನುಭವವೂ ಆಗುತ್ತಿಲ್ಲ
ಅಪ್ಪ ಅಳುತ್ತಾರೆ
ಕಣ್ಣೀರು ಕೆನ್ನೆಯ ಮೇಲೆ
ಜಾರದ ಹಾಗೆ.
ಈಗ ನಾನು ಬೀದಿಯ ಮೇಲಿದ್ದೇನೆ
ಯಾವುದೇ ಕಿರುಕುಳಕ್ಕೆ ಹೆದರದೆ
ನಮ್ಮ ಮನೆಯ ಮೇಲೆ ನೀನೆಸೆದ
ಅದೇ ಕಲ್ಲುಗಳನ್ನು ಈಗ
ನಾನು ನಿನ್ನತ್ತ ಎಸೆಯುತ್ತೇನೆ
ನೀನು ನನ್ನ ಸಹೋದರರನ್ನು
ಅಟ್ಟಿಸಿದಂತೆ ನಿನ್ನನ್ನು ಅಟ್ಟಾಡಿಸಿ
ಓಡಿ ಹೋಗುವಂತೆ ಮಾಡುತ್ತೇನೆ
ನಿನ್ನಿಂದ ಕಿತ್ತುಕೊಳ್ಳುತೇನೆ
ನಿನ್ನ ಬಂದೂಕನ್ನು
ನೀನು ನನ್ನ ಸ್ಕಾರ್ಫ್ ಅನ್ನು
ನನ್ನಿಂದ ಕಿತ್ತುಕೊಂಡಂತೆ
ನಿನ್ನ ಮೇಲೆ ಮರುಪ್ರಯೋಗಿಸುತ್ತೇನೆ
ನನ್ನ ಮೇಲೆ ನೀ ಪ್ರಯೋಗಿಸಿದ್ದ
ಆ ಎಲ್ಲಾ ಬಯ್ಗುಳಗಳನ್ನು
ನನ್ನ ವಲಯವನ್ನು ನನ್ನಿಂದ ಕಸಿದುಕೊಂಡರೆ
ಏನಾಗಬಹುದೆಂಬುದರ ಸೂಚನೆಯಷ್ಟೆ ಇದು.
– ಇಕ್ರಾ ಅಖೂನ್