ಬಾಬರಿ ಮಸೀದಿಯ ಉದ್ಘಾಟನೆಗೆ ಆಗಮಿಸುವುದಿಲ್ಲವೆಂದ ಆದಿತ್ಯನಾಥ್ ಕ್ಷಮೆ ಯಾಚಿಸಲಿ: ಎಸ್ಪಿ
PC: Economictimes

ಧ್ವಂಸವಾಗಿರುವ ಬಾಬರಿ ಮಸೀದಿಯ ಬದಲಿಗೆ ಅಯೋಧ್ಯೆಯಲ್ಲಿ ನಿರ್ಮಿಸಲಿರುವ ಮಸೀದಿಯ ಉದ್ಘಾಟನೆಗೆ ತಾನು ಹೋಗುವುದಿಲ್ಲ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಹೇಳಿದ್ದಾರೆ. ಅವರ ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಸಮಾಜವಾದಿ ಪಕ್ಷ, ಅವರು ಕ್ಷಮೆ ಯಾಚಿಸುವಂತೆ ಆಗ್ರಹಿಸಿದೆ.

ಅಯೋಧ್ಯೆಯ ರಾಮ ಮಂದಿರ ಭೂಮಿ ಪೂಜೆ ನಂತರ ದೂರದರ್ಶನದಲ್ಲಿ ಮಾತನಾಡಿದ ಆದಿತ್ಯನಾಥ್ “ಯೋಗಿಯಾಗಿ ಮತ್ತು ಹಿಂದೂ ಆಗಿ ಮಸೀದಿಯ ಉದ್ಘಾಟನೆಗೆ ಹೋಗಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.

ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಪ್ರತಿಪಕ್ಷ ಎಸ್ಪಿ, ಅವರು ರಾಜ್ಯದ ಜನರ ಬಳಿ ಕ್ಷಮೆಯಾಚಿಸಬೇಕು ಹೇಳಿದೆ. ಆದರೆ ಉತ್ತರ ಪ್ರದೇಶದ ಕಾಂಗ್ರೆಸ್ ವಕ್ತಾರ ಮಸೀದಿಯ ಬಗ್ಗೆ ಮುಖ್ಯಮಂತ್ರಿಯ ಟೀಕೆಗಳ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

“ನೀವು ನನ್ನನ್ನು ಮುಖ್ಯಮಂತ್ರಿಯಾಗಿ ಕೇಳಿದರೆ, ನನಗೆ ಯಾವುದೇ ನಂಬಿಕೆ, ಧರ್ಮ ಅಥವಾ ಸಮುದಾಯದೊಂದಿಗೆ ಯಾವುದೇ ಸಮಸ್ಯೆ ಇಲ್ಲ. ನೀವು ನನ್ನನ್ನು ಯೋಗಿಯೆಂದು ಕೇಳಿದರೆ, ನಾನು ಖಂಡಿತವಾಗಿಯೂ ಹೋಗುವುದಿಲ್ಲ. ಏಕೆಂದರೆ ಹಿಂದೂ ಆಗಿ ನನ್ನ ’ಉಪಾಸನ ವಿಧಿ’ (ಪೂಜಾ ವಿಧಾನ) ವ್ಯಕ್ತಪಡಿಸಲು ಮತ್ತು ಅದಕ್ಕೆ ತಕ್ಕಂತೆ ನಡೆದುಕೊಳ್ಳುವ ಹಕ್ಕು ನನಗಿದೆ” ಎಂದು ಆದಿತ್ಯನಾಥ್ ಹೇಳಿದ್ದರು.

“ನಾನು ವಾದಿ ಅಥವಾ ಪ್ರತಿವಾದಿ ಅಲ್ಲ. ಅದಕ್ಕಾಗಿಯೇ ನನ್ನನ್ನು ಆಹ್ವಾನಿಸಿದರೂ ನಾನು ಹೋಗುವುದಿಲ್ಲ. ಅಂತಹ ಯಾವುದೇ ಆಹ್ವಾನ ನೀಡುವುದಿಲ್ಲ ಎಂದು ನನಗೆ ಗೊತ್ತಿದೆ ಎಂದು ಅವರು ಹೇಳಿದರು.

ಅವರು ನನ್ನನ್ನು ಆಹ್ವಾನಿಸಿದ ದಿನ, ಅನೇಕರ ಜಾತ್ಯತೀತತೆಯು ಅಪಾಯದಲ್ಲಿರುತ್ತದೆ. ಅದಕ್ಕಾಗಿಯೇ ಅವರ ಜಾತ್ಯತೀತತೆಯು ಅಪಾಯದಲ್ಲಿರಬಾರದು ಎಂದು ನಾನು ಬಯಸುತ್ತೇನೆ. ಯಾವುದೇ ತಾರತಮ್ಯವಿಲ್ಲದೆ ಸರ್ಕಾರಿ ಯೋಜನೆಯಿಂದ ಪ್ರತಿಯೊಬ್ಬರೂ ಪ್ರಯೋಜನ ಪಡೆಯುವಂತೆ ಖಚಿತಪಡಿಸಿಕೊಳ್ಳಲು ನಾನು ಮೌನವಾಗಿ ಕೆಲಸ ಮಾಡುತ್ತೇನೆ” ಎಂದು ಅವರು ಹೇಳಿದ್ದಾರೆ.

ಅಯೋಧ್ಯೆ ವಿವಾದದ ಬಗ್ಗೆ ಕಾಂಗ್ರೆಸ್ ಎಂದಿಗೂ ಪರಿಹಾರವನ್ನು ಬಯಸಿರಲಿಲ್ಲ. “ತಮ್ಮ ರಾಜಕೀಯ ಲಾಭಕ್ಕಾಗಿ ವಿವಾದ ಮುಂದುವರಿಯಬೇಕೆಂದು ಅವರು ಬಯಸಿದ್ದರು. ತಲೆಯ ಮೇಲೆ ಟೋಪಿ ಹಾಕುವುದರಿಂದ, ಉಪವಾಸ-ಇಫ್ತಾರ್‌ಗೆ ಹಾಜರಾಗುವುದು ಜಾತ್ಯತೀತತೆಯಲ್ಲ. ಇದು ನಾಟಕ ಎಂದು ಜನರಿಗೆ ತಿಳಿದಿದೆ. ಜನರಿಗೆ ವಾಸ್ತವ ತಿಳಿದಿದೆ” ಎಂದು ಸಿಎಂ ಹೇಳಿದರು.

ಎಸ್ಪಿ ವಕ್ತಾರ ಪವನ್ ಪಾಂಡೆ ಆದಿತ್ಯನಾಥ್ ಅವರ ಹೇಳಿಕೆಗಳನ್ನು ಟೀಕಿಸಿದ್ದಾರೆ. ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗ ಮಾಡಿದ ಪ್ರಮಾಣವಚನವನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದ್ದಾರೆ.

“ಅವರು ಇಡೀ ರಾಜ್ಯದ ಸಿಎಂ. ಕೇವಲ ಹಿಂದೂ ಸಮುದಾಯದವರು ಮಾತ್ರವಲ್ಲ. ರಾಜ್ಯದಲ್ಲಿ ಹಿಂದೂ ಮತ್ತು ಮುಸ್ಲಿಮರ ಜನಸಂಖ್ಯೆ ಏನೇ ಇರಲಿ, ಅವರು ಎಲ್ಲರ ಸಿಎಂ. ಸಿಎಂ ಅವರ ಈ ಮಾತಿಗೆ ಘನತೆ ಇಲ್ಲ. ಇದಕ್ಕಾಗಿ ಅವರು ಜನರಿಂದ ಕ್ಷಮೆಯಾಚಿಸಬೇಕು” ಎಂದು ಪಾಂಡೆ ಹೇಳಿದರು.

ಉತ್ತರ ಪ್ರದೇಶ ಕಾಂಗ್ರೆಸ್ ಮಾಧ್ಯಮ ವಕ್ತಾರ ಲಾಲನ್ ಕುಮಾರ್, “ಅವರ ಮಸೀದಿ ಹೇಳಿಕೆಯ ಬಗ್ಗೆ ನಮಗೆ ಯಾವುದೇ ಅಭಿಪ್ರಾಯಗಳಿಲ್ಲ.” ಆದರೆ ರಾಮ ಜನ್ಮಭೂಮಿ-ಬಾಬರಿ ಮಸೀದಿಯ ಬೀಗಗಳನ್ನು ತೆರೆದ ಗೌರವ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಅವರಿಗೆ ಸಲ್ಲುತ್ತದೆ ಎಂದಿದ್ದಾರೆ.

ಆಡಳಿತಾರೂಢ ಬಿಜೆಪಿಯನ್ನು ಉಲ್ಲೇಖಿಸಿದ ಕಾಂಗ್ರೆಸ್ ವಕ್ತಾರ, “ಅವರು ನಕಲಿ ಹಿಂದುತ್ವದ ರಾಜಕೀಯವನ್ನು ಮಾಡುತ್ತಾರೆ. ಕಾಂಗ್ರೆಸ್ ಯಾವಾಗಲೂ ಜನರ ಹಿತದೃಷ್ಟಿಯಿಂದ ಮಾತನಾಡುತ್ತದೆ. ರಾಮ ಪ್ರತಿಯೊಬ್ಬರದ್ದು ಆಗಿದ್ದಾನೆ, ಆದರೆ ರಾಮ ಅವರದು ಮಾತ್ರ ಎಂದು ಬಿಜೆಪಿ ತೋರಿಸಲು ಬಯಸಿದೆ” ಎಂದು ಅವರು ಹೇಳಿದ್ದಾರೆ.


ಓದಿ: ಸಿಜೆಐ ಅಂದ್ರೆ ಸುಪ್ರೀಂ ಕೋರ್ಟ್ ಅಲ್ಲ: ನ್ಯಾಯಾಧೀಶರಿಗಿಂತ ನ್ಯಾಯಾಲಯ ದೊಡ್ಡದು – ಪ್ರಶಾಂತ್ ಭೂಷಣ್


LEAVE A REPLY

Please enter your comment!
Please enter your name here