ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ಇಸ್ಲಾಮಾಬಾದ್‌ನಲ್ಲಿ ಶಾಂತಿ ಮಾತುಕತೆ ಆಯೋಜಿಸಲಾಗಿದೆ.
ಅಮೆರಿಕ ಮತ್ತು ಇರಾನ್ ನಿಯೋಗಗಳ ನಡುವಿನ ಈ ಮಹತ್ವದ ಮಾತುಕತೆಯು 2026ರ ಏಪ್ರಿಲ್ 10ರಂದು (ಶುಕ್ರವಾರ) ಇಸ್ಲಾಮಾಬಾದ್‌ನಲ್ಲಿ ನಡೆಯಲಿದೆ ಎಂದು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಘೋಷಿಸಿದ್ದಾರೆ.
ಮಾತುಕತೆಗೆ ಮುನ್ನ ಉಭಯ ರಾಷ್ಟ್ರಗಳು ಎರಡು ವಾರಗಳ ಕಾಲ ತಾತ್ಕಾಲಿಕ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ. ಇದು ಲೆಬನಾನ್ ಸೇರಿದಂತೆ ಸಂಘರ್ಷದ ಇತರ ಪ್ರದೇಶಗಳಿಗೂ ಅನ್ವಯಿಸುತ್ತದೆ ಎಂದು ವರದಿಯಾಗಿದೆ. ಆದರೆ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕದನ ವಿರಾಮ ಲೆಬನಾನ್‌ಗೆ ಅನ್ವಯಿಸುವುದಿಲ್ಲ ಎಂದಿದ್ದಾರೆ.
ಪಶ್ಚಿಮ ಏಷ್ಯಾದಲ್ಲಿ ಶಾಂತಿ ಸ್ಥಾಪಿಸುವುದು ಮತ್ತು ದೀರ್ಘಕಾಲದ ವಿವಾದಗಳನ್ನು ಇತ್ಯರ್ಥಪಡಿಸಿ ಶಾಶ್ವತ ಒಪ್ಪಂದಕ್ಕೆ ಬರುವುದು ಶಾಂತಿ ಮಾತುಕತೆಯ ಮುಖ್ಯ ಗುರಿಯಾಗಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಾಕಿಸ್ತಾನದ ಪ್ರಧಾನಿ ಮತ್ತು ಸೇನಾ ಮುಖ್ಯಸ್ಥರೊಂದಿಗೆ ಚರ್ಚಿಸಿದ ನಂತರ ಕದನ ವಿರಾಮಕ್ಕೆ ಅಸ್ತು ಎಂದಿದ್ದಾರೆ. ಮೊದಲು ಮಾತುಕತೆಗೆ ನಿರಾಕರಿಸಿದ್ದ ಇರಾನ್, ನಂತರ ತನ್ನದೇ ಆದ ಕೆಲವು ಷರತ್ತುಗಳೊಂದಿಗೆ (10 ಅಂಶಗಳ ಪ್ಲಾನ್) ಭಾಗವಹಿಸಲು ಒಪ್ಪಿಕೊಂಡಿದೆ.
ಪಾಕಿಸ್ತಾನವು ಎರಡೂ ದೇಶಗಳ ನಿಯೋಗಗಳಿಗೆ ಅಧಿಕೃತ ಆಹ್ವಾನ ನೀಡಿದ್ದು, ಜಾಗತಿಕ ಮಟ್ಟದಲ್ಲಿ ಈ “ಇಸ್ಲಾಮಾಬಾದ್ ಟಾಕ್ಸ್” ಹೆಚ್ಚಿನ ಕುತೂಹಲ ಮೂಡಿಸಿದೆ.
ಇರಾನ್ ಶಾಂತಿ ಮಾತುಕತೆಗೆ ಮುನ್ನ ಮುಂದಿಟ್ಟಿರುವ 10 ಷರತ್ತುಗಳು ಹೀಗಿವೆ..
1. ಇರಾನ್ ಮೇಲೆ ಯಾವುದೇ ರೀತಿಯ ಮಿಲಿಟರಿ ದಾಳಿ ನಡೆಸುವುದಿಲ್ಲ ಎಂದು ಖಚಿತಪಡಿಸಬೇಕು.
2. ಅಮೆರಿಕ ಇರಾನ್ ಮೇಲೆ ವಿಧಿಸಿರುವ ಎಲ್ಲಾ ಪ್ರಾಥಮಿಕ ಮತ್ತು ದ್ವಿತೀಯ ಆರ್ಥಿಕ ನಿರ್ಬಂಧಗಳನ್ನು ತಕ್ಷಣವೇ ರದ್ದುಗೊಳಿಸಬೇಕು.
3. ಹಾರ್ಮುಝ್ ಜಲಸಂಧಿಯ ಮೇಲೆ ಇರಾನ್ ತನ್ನ ಸಂಪೂರ್ಣ ಸಾರ್ವಭೌಮತ್ವ ಮತ್ತು ನಿಯಂತ್ರಣವನ್ನು ಮುಂದುವರಿಸುವುದು.
4. ಇರಾನ್‌ನ ಯುರೇನಿಯಂ ಸಂವರ್ಧನೆ ಹಕ್ಕನ್ನು ಅಮೆರಿಕ ಅಧಿಕೃತವಾಗಿ ಅಂಗೀಕರಿಸಬೇಕು.
5. ಪಶ್ಚಿಮ ಏಷ್ಯಾದ ಎಲ್ಲಾ ನೆಲೆಗಳಿಂದ ಅಮೆರಿಕ ತನ್ನ ಯುದ್ಧ ಪಡೆಗಳನ್ನು ಹಿಂತೆಗೆದುಕೊಳ್ಳಬೇಕು.
6. ಯುದ್ಧದಿಂದ ಇರಾನ್‌ಗೆ ಉಂಟಾದ ಹಾನಿಗೆ ಅಮೆರಿಕ ಸಂಪೂರ್ಣ ಪರಿಹಾರ ನೀಡಬೇಕು.
7. ವಿದೇಶಗಳಲ್ಲಿ ಸ್ಥಗಿತಗೊಳಿಸಲಾದ ಇರಾನ್‌ನ ಎಲ್ಲಾ ಹಣಕಾಸು ಮತ್ತು ಆಸ್ತಿಗಳನ್ನು ಮುಕ್ತಗೊಳಿಸಬೇಕು.
8. ಇರಾನ್ ವಿರುದ್ಧ ವಿಶ್ವಸಂಸ್ಥೆ ಮತ್ತು ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ ಹೊರಡಿಸಿರುವ ಎಲ್ಲಾ ನಿರ್ಣಯಗಳನ್ನು ಕೈಬಿಡಬೇಕು.
9. ಲೆಬನಾನ್‌ನಲ್ಲಿರುವ ಹಿಜ್ಬುಲ್ಲಾ ಸೇರಿದಂತೆ ಇರಾನ್ ಬೆಂಬಲಿತ ಗುಂಪುಗಳ ಮೇಲಿನ ದಾಳಿಗಳನ್ನು ನಿಲ್ಲಿಸಬೇಕು.
10. ಈ ಒಪ್ಪಂದವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಮೂಲಕ ಕಾನೂನುಬದ್ಧವಾಗಿ ಜಾರಿಗೆ ಬರಬೇಕು.


