ಇರಾಕಿನ ರಾಜಧಾನಿ ಬಾಗ್ದಾದ್‌ನಲ್ಲಿ ಒಂದು ವಾರದ ಹಿಂದೆ ಅಪಹರಿಸಲ್ಪಟ್ಟಿದ್ದ ಅಮೆರಿಕದ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ತಿಳಿಸಿದ್ದಾರೆ.
ಮಾರ್ಚ್ 31ರಂದು ಶೆಲ್ಲಿ ಕಿಟಲ್‌ಸನ್ ಅವರನ್ನು ಅಪಹರಿಸಲಾಗಿತ್ತು. ಅವರು ತಕ್ಷಣ ಇರಾಕ್ ತೊರೆಯಬೇಕೆಂಬ ಷರತ್ತಿನ ಮೇಲೆ ಬಿಡುಗಡೆ ಮಾಡುವುದಾಗಿ ಇರಾನ್ ಬೆಂಬಲಿತ ಮಿಲಿಟರಿ ಗುಂಪು ಕತೈಬ್ ಹಿಝ್ಬುಲ್ಲಾ ಮಂಗಳವಾರ (ಏ.7) ಹೇಳಿತ್ತು.
“ಅಮೆರಿಕದ ನಾಗರಿಕರು ಜಗತ್ತಿನ ಎಲ್ಲೇ ಇದ್ದರೂ ಅವರ ಸುರಕ್ಷತೆ ಮತ್ತು ಭದ್ರತೆಗೆ ಟ್ರಂಪ್ ಆಡಳಿತದ ದೃಢ ಬದ್ಧತೆಯನ್ನು ಈ ಬಿಡುಗಡೆ ಪ್ರತಿಬಿಂಬಿಸುತ್ತದೆ” ಎಂದು ರುಬಿಯೊ ಹೇಳಿದ್ದಾರೆ.
ಪತ್ರಕರ್ತೆಯ ಬಿಡುಗಡೆಗೆ ಸಹಾಯ ಮಾಡಿದ್ದಕ್ಕಾಗಿ ಅವರು ಇರಾಕ್‌ನ ಅಧಿಕಾರಿಗಳಿಗೆ ಧನ್ಯವಾದ ತಿಳಿಸಿದ್ದಾರೆ. “ಅಮೆರಿಕ ಈಗ ಇರಾಕ್‌ನಿಂದ ಆಕೆಯ ಸುರಕ್ಷಿತ ನಿರ್ಗಮನವನ್ನು ಬೆಂಬಲಿಸಲು ಕೆಲಸ ಮಾಡುತ್ತಿದೆ” ಎಂದು ಹೇಳಿದ್ದಾರೆ.
49 ವರ್ಷದ ಕಿಟಲ್‌ಸನ್ ಅವರ ಅಪಹರಣದ ಸಮಯದಲ್ಲಿ ಭದ್ರತಾ ಪಡೆಗಳು ಶಂಕಿತರನ್ನು ಬೆನ್ನಟ್ಟಿದ್ದು, ಅಪಹರಣಕಾರರ ಕಾರುಗಳಲ್ಲಿ ಒಂದು ಮಗುಚಿ ಬಿದ್ದಿದ್ದು, ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಇರಾಕ್ ಸರ್ಕಾರ ತಿಳಿಸಿದೆ.
ಕಳೆದ ವಾರ, ಇರಾಕ್ ಪ್ರಧಾನಿ ಮೊಹಮ್ಮದ್ ಶಿಯಾ ಅಲ್-ಸುಡಾನಿ ಅವರು ವಿದೇಶಿಯರನ್ನು ಅಪಹರಿಸುವವರ ಬೆನ್ನಟ್ಟುವಂತೆ ಭದ್ರತಾ ಪಡೆಗಳಿಗೆ ಆದೇಶಿಸಿದ್ದರು.
ಈ ನಡುವೆ, ಪ್ರತ್ಯೇಕ ಪೋಸ್ಟ್ ಒಂದರಲ್ಲಿ ಕತೈಬ್ ಹಿಜ್ಬುಲ್ಲಾದ ಮುಖ್ಯಸ್ಥ ಅಸಾಫ್, ಕಿಟಲ್ಸನ್ ಅವರ ಇರಾಕ್‌ನಲ್ಲಿನ ಪಾತ್ರ ಮತ್ತು ಚಟುವಟಿಕೆಗಳನ್ನು ತೋರಿಸುವ ರೆಕಾರ್ಡಿಂಗ್ ಅನ್ನು ಗುಂಪು ಬಿಡುಗಡೆ ಮಾಡಲಿದೆ ಎಂದು ಹೇಳಿದ್ದರು. ಆದರೆ ಈ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಿಲ್ಲ.
ಇರಾನ್ ಮೇಲಿನ ಅಮೇರಿಕ-ಇಸ್ರೇಲ್ ದಾಳಿ ಪ್ರಾರಂಭವಾದಾಗಿನಿಂದ, ಇರಾನ್ ಮತ್ತು ಅದರ ಮಿತ್ರಪಕ್ಷಗಳಾದ ಇರಾಕಿ ಶಿಯಾ ಬಂಡುಕೋರ ಗುಂಪುಗಳು ಇರಾಕ್ ಸೇರಿದಂತೆ ಈ ವಲಯದಾದ್ಯಂತ ಇರುವ ಅಮೆರಿಕದ ಗುರಿಗಳ ಮೇಲೆ ನಡೆಸುತ್ತಿರುವ ಸರಣಿ ದಾಳಿಗಳ ನಡುವೆಯೇ ಈ ಅಪಹರಣ ನಡೆದಿತ್ತು.
ಕಿಟಲ್‌ಸನ್ ಅವರ ಗೆಳೆಯ ಮತ್ತು ಸಿಎನ್ಎನ್ ಭದ್ರತಾ ವಿಶ್ಲೇಷಕ ಅಲೆಕ್ಸ್ ಪ್ಲಿಟ್ಸಾಸ್ ಅವರು, “ಆಕೆಯ ಬಿಡುಗಡೆಯ ಬಗ್ಗೆ ಬಂದಿರುವ ಸುದ್ದಿಯನ್ನು ನಾನು ನೋಡಿದ್ದೇನೆ. ಆದರೆ ಇದು ನಿಜವೇ ಎಂದು ಅಮೆರಿಕ ಸರ್ಕಾರ ನಮಗೆ ಇನ್ನೂ ಅಧಿಕೃತವಾಗಿ ತಿಳಿಸಿಲ್ಲ” ಎಂದಿದ್ದಾರೆ.
ಕಿಟಲ್‌ಸನ್ ಅಪಹರಣಕ್ಕೊಳಗಾಗುವ ಮೊದಲು, ಅಮೆರಿಕದ ಅಧಿಕಾರಿಗಳು ಆಕೆಯನ್ನು ಹಲವು ಬಾರಿ ಸಂಪರ್ಕಿಸಿದ್ದರು. ಆಕೆಯ ಮೇಲೆ ದಾಳಿ ನಡೆಯುವ ಸಾಧ್ಯತೆಯಿದೆ ಎಂದು ಅವರು ಮೊದಲೇ ಎಚ್ಚರಿಕೆ ನೀಡಿದ್ದರು ಎಂದು ವರದಿಯಾಗಿದೆ.


