ಇರಾಕ್ ರಾಜಧಾನಿ ಬಗ್ದಾದ್ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ.
ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ಕಿಟಲ್‌ಸನ್ ರಸ್ತೆ ಬದಿ ನಿಂತಿದ್ದಾಗ ಕಾರಿನಲ್ಲಿ ಬಂದ ಅಪರಿಚಿತರು ಅವರನ್ನು ಬಲವಂತವಾಗಿ ಕಾರಿಗೆ ಹತ್ತಿಸಿಕೊಂಡು ಹೋಗಿದ್ದಾರೆ.
ಇರಾಕ್‌ನ ಆಂತರಿಕ ಸಚಿವಾಲಯವು ಅಪಹರಣವನ್ನು ಖಚಿತಪಡಿಸಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಒಬ್ಬ ಶಂಕಿತನನ್ನು ಬಂಧಿಸಲಾಗಿದೆ ಮತ್ತು ಅವರು ಬಳಸಿದ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದೆ.
ಈ ಅಪಹರಣದಲ್ಲಿ ಇರಾನ್ ಬೆಂಬಲಿತ ಮಿಲಿಟರಿ ಗುಂಪಾದ ಕತೈಬ್ ಹೆಜ್ಬುಲ್ಲಾ ಕೈವಾಡವಿರುವ ಸಾಧ್ಯತೆಯಿದೆ ಎಂದು ಅಮೆರಿಕದ ಅಧಿಕಾರಿಗಳು ಹೇಳಿದ್ದಾರೆ.
ಕಿಟಲ್‌ಸನ್ ಅವರು ಐಸಿಸ್ (ISIS) ಮತ್ತು ಅಫ್ಘಾನಿಸ್ತಾನದ ಸಂಘರ್ಷಗಳ ಬಗ್ಗೆ ವ್ಯಾಪಕವಾಗಿ ವರದಿ ಮಾಡಿದ್ದರು. ಅಪಾಯದ ಮುನ್ಸೂಚನೆ ಇದ್ದರೂ ಅವರು ವರದಿಗಾರಿಕೆಗಾಗಿ ಇರಾಕ್‌ಗೆ ತೆರಳಿದ್ದರು ಎಂದು ಬಿಬಿಸಿ ವರದಿ ಮಾಡಿದೆ.
ಪತ್ರಕರ್ತೆಯ ಅಪಹರಣದ ದೃಶ್ಯವನ್ನು ಪ್ರತ್ಯಕ್ಷದರ್ಶಿಯೊಬ್ಬರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಇರಾಕ್ ಅಧಿಕಾರಿಗಳು ಅಪಹರಣದ ಸುದ್ದಿ ತಿಳಿದು ಕಾರನ್ನು ಹಿಂಬಾಲಿಸಿದ್ದರು. ಕಾರು ಪತ್ತೆಯಾಗಿದೆ. ಆದರೆ, ಅದರಲ್ಲಿ ಶೆಲ್ಲಿ ಕಿಟಲ್‌ಸನ್ ಇರಲಿಲ್ಲ ಎಂದು ಅಲ್-ಜಝೀರಾ ಸುದ್ದಿ ಸಂಸ್ಥೆ ವರದಿ ಹೇಳಿದೆ.
ಪತ್ರಕರ್ತೆ ಜಿಲ್ ಕ್ಯಾರೊಲ್ ಅಪಹರಣ
ಈ ಹಿಂದೆ, ಜನವರಿ 7, 2006ರಂದು ‘ದಿ ಕ್ರಿಶ್ಚಿಯನ್ ಸೈನ್ಸ್ ಮಾನಿಟರ್’ ಪತ್ರಿಕೆಯ ವರದಿಗಾರ್ತಿಯಾಗಿದ್ದ ಜಿಲ್ ಕ್ಯಾರೊಲ್ ಅವರನ್ನು ಬಗ್ದಾದ್‌ನಲ್ಲಿ ಅಪಹರಿಸಲಾಗಿತ್ತು.
ಈ ಸಮಯದಲ್ಲಿ ಕ್ಯಾರೊಲ್ ಅವರ ಇರಾಕಿ ಭಾಷಾಂತರಕಾರ ಅಲಾನ್ ಎನ್ವಿಯಾ ಅವರನ್ನು ಅಪಹರಣಕಾರರು ಹತ್ಯೆ ಮಾಡಿದ್ದರು.
ಸುಮಾರು 82 ದಿನಗಳ ಕಾಲ ಒತ್ತೆಯಾಳಾಗಿ ಇರಿಸಲ್ಪಟ್ಟಿದ್ದ ಕ್ಯಾರೊಲ್ ಅವರನ್ನು ಮಾರ್ಚ್ 30, 2006 ರಂದು ಯಾವುದೇ ಹಾನಿಯಿಲ್ಲದೆ ಬಿಡುಗಡೆ ಮಾಡಲಾಗಿತ್ತು.
ಸಂಶೋಧಕಿ ಎಲಿಜಬೆತ್ ತರ್ಕೋವ್ ಅಪಹರಣ
2023ರಲ್ಲಿ ಇಸ್ರೇಲಿ-ರಷ್ಯನ್ ಸಂಶೋಧಕಿ ಎಲಿಜಬೆತ್ ತರ್ಕೋವ್ ಅವರನ್ನು ಕೂಡ ಬಗ್ದಾದ್‌ನಲ್ಲಿ ಅಪಹರಿಸಲಾಗಿತ್ತು.
ಎಲಿಜಬೆತ್ ಅವರು ಪ್ರಿನ್ಸ್‌ಟನ್ ವಿಶ್ವವಿದ್ಯಾಲಯದ ಪಿಎಚ್‌ಡಿ ವಿದ್ಯಾರ್ಥಿನಿಯಾಗಿದ್ದು, ತಮ್ಮ ಸಂಶೋಧನೆಗಾಗಿ ಮಾರ್ಚ್ 2023ರಲ್ಲಿ ಬಗ್ದಾದ್‌ಗೆ ಭೇಟಿ ನೀಡಿದ್ದರು. ಬಗ್ದಾದ್‌ನ ಕರ್ರಾಡಾ ಜಿಲ್ಲೆಯ ಕೆಫೆಯೊಂದರಿಂದ ಹೊರಬರುವಾಗ ಅವರನ್ನು ಅಪಹರಣ ಮಾಡಲಾಗಿತ್ತು.
ಎಲಿಜಬೆತ್ ಅವರನ್ನೂ ಕೂಡ ಕತೈಬ್ ಹೆಜ್ಬುಲ್ಲಾ ಗುಂಪು ಅಪಹರಿಸಿತ್ತು. ಈ ಗುಂಪು ಎಲಿಜಬೆತ್ ಅವರನ್ನು ಅಮೆರಿಕದ ಸಿಐಎ ಮತ್ತು ಇಸ್ರೇಲ್‌ನ ಮೊಸಾದ್ ಗುಪ್ತಚರ ಏಜೆಂಟ್ ಎಂದು ಆರೋಪಿಸಿತ್ತು.
ಒಟ್ಟು 903 ದಿನಗಳ ಕಾಲ (ಸುಮಾರು ಎರಡೂವರೆ ವರ್ಷ) ಎಲಿಜಬೆತ್ ಅವರು ಕತೈಬ್ ಹೆಜ್ಬುಲ್ಲಾದ ವಶದಲ್ಲಿದ್ದರು. ಈ ಸಮಯದಲ್ಲಿ ಅವರು ತೀವ್ರ ದೈಹಿಕ ಹಿಂಸೆ, ಚಾವಟಿ ಏಟು ಮತ್ತು ಎಲೆಕ್ಟ್ರಿಕ್ ಶಾಕ್‌ಗಳಂತಹ ಚಿತ್ರಹಿಂಸೆಗಳನ್ನು ಅನುಭವಿಸಿದ್ದಾಗಿ ಬಿಡುಗಡೆಯ ನಂತರ ಹೇಳಿಕೊಂಡಿದ್ದಾರೆ.
ಅಂತಾರಾಷ್ಟ್ರೀಯ ಒತ್ತಡ ಮತ್ತು ಅಮೆರಿಕದ ಮಧ್ಯಸ್ಥಿಕೆಯ ನಂತರ, ಸೆಪ್ಟೆಂಬರ್ 2025ರಲ್ಲಿ ಎಲಿಜಬೆತ್ ಅವರನ್ನು ಬಿಡುಗಡೆ ಮಾಡಲಾಗಿತ್ತು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇರಾಕ್ ಪ್ರಧಾನಿ ಮೊಹಮ್ಮದ್ ಶಿಯಾ ಅಲ್-ಸುಡಾನಿ ಅವರು ಈ ಬಿಡುಗಡೆಯನ್ನು ಅಧಿಕೃತವಾಗಿ ಘೋಷಿಸಿದ್ದರು.
ಪ್ರಸ್ತುತ ಅವರು ಸುರಕ್ಷಿತವಾಗಿದ್ದು, ತಮ್ಮ ಆರೋಗ್ಯ ಸುಧಾರಣೆಗಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು ಪ್ರಿನ್ಸ್‌ಟನ್ ವಿಶ್ವವಿದ್ಯಾಲಯದಲ್ಲಿ ತಮ್ಮ ಸಂಶೋಧನೆಯನ್ನು ಮುಂದುವರಿಸಿದ್ದಾರೆ.


