ಉಕ್ರೇನ್ ಜೊತೆ ರಷ್ಯಾ ನಡೆಸುತ್ತಿರುವ ಯುದ್ಧವನ್ನು ಭಾರತದ ಪ್ರಧಾನಿ ನರೇಂದ್ರ ‘ಮೋದಿಯ ಯುದ್ಧ’ ಎಂದು ಅಮೆರಿಕದ ಶ್ವೇತಭವನದ ಅಧಿಕಾರಿಯೊಬ್ಬರು ಬಣ್ಣಿಸಿದ್ದು, ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸುವಂತೆ ಭಾರತವನ್ನು ಒತ್ತಾಯಿಸಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ.
ಭಾರತದಿಂದ ರಫ್ತಾಗುವ ಸರಕುಗಳ ಮೇಲೆ ಅಮೆರಿಕ ವಿಧಿಸಿರುವ ಶೇಕಡ 50ರಷ್ಟು ಸುಂಕ ಬುಧವಾರದಿಂದ (ಆ.27) ಜಾರಿಗೆ ಬಂದಿದೆ. ಈ ಬೆನ್ನಲ್ಲೇ ಅಮೆರಿಕದ ವ್ಯಾಪಾರ ಸಲಹೆಗಾರ ಪೀಟರ್ ನವರೊ ಅವರು ಮೋದಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ರಷ್ಯಾದಿಂದ ತೈಲ ಖರೀದಿಸುವ ಮೂಲಕ ಉಕ್ರೇನ್ ಮೇಲಿನ ದಾಳಿಗೆ ಭಾರತ ಸಹಕಾರ ನೀಡುತ್ತಿದೆ ಎಂದು ಆರೋಪಿಸಿರುವ ಅಮೆರಿಕ, ಭಾರತದಿಂದ ರಫ್ತಾಗುವ ಸರಕುಗಳ ಮೇಲೆ ಶೇ.25ರಷ್ಟು ಸುಂಕ ಮತ್ತು ರಷ್ಯಾದಿಂದ ತೈಲ ಖರೀದಿಸಿದ್ದಕ್ಕೆ ಶೇ.25 ದಂಡ ಸೇರಿ ಶೇ.50ರಷ್ಟು ಸುಂಕ ವಿಧಿಸಿದೆ. ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಮೋದಿಯವರ ಗೆಳೆಯ ಟ್ರಂಪ್ ಭಾರತದ ಮೇಲೆ ವಿಶ್ವದಲ್ಲೇ ಅತೀ ಹೆಚ್ಚು ಸುಂಕ ವಿಧಿಸಿದ್ದಾರೆ.
ಅತೀ ಹೆಚ್ಚು ಸುಂಕ ಹೇರಿರುವುದನ್ನು ಅನ್ಯಾಯ ಎಂದು ಕರೆದಿರುವ ಭಾರತ, ರಷ್ಯಾದಿಂದ ತೈಲ ಖರೀದಿಸುವುದನ್ನು ಕಡಿಮೆ ಮಾಡುವುದಿಲ್ಲ ಎಂದಿದೆ. ತನ್ನ 1.4 ಶತಕೋಟಿ ಜನರ ಹಿತಾಸಕ್ತಿಗಳನ್ನು ಕಾಪಾಡಲು ತೈಲ ಸಂಬಂಧ ‘ಉತ್ತಮ ಒಪ್ಪಂದ’ ಮಾಡಿಕೊಳ್ಳಲು ಬಯಸುವುದಾಗಿ ಹೇಳಿದೆ.
ಫೆಬ್ರವರಿ 2022ರಲ್ಲಿ ಉಕ್ರೇನ್ ಮೇಲೆ ಆಕ್ರಮಣ ಪ್ರಾರಂಭಿಸುವ ಮೊದಲು ಭಾರತದ ಒಟ್ಟು ಕಚ್ಚಾ ತೈಲದ ಶೇ. 2ಕ್ಕಿಂತ ಕಡಿಮೆ ಪ್ರಮಾಣವನ್ನು ರಷ್ಯಾ ಪೂರೈಸುತ್ತಿತ್ತು. ಈಗ ರಷ್ಯಾದಿಂದ ತೈಲ ಆಮದಿನ ಪ್ರಮಾಣ ಶೇ. 35 ರಿಂದ40ರಷ್ಟು ಏರಿಕೆಯಾಗಿದೆ. ಈ ಮೂಲಕ ರಷ್ಯಾ ಭಾರತದ ಕಚ್ಚಾ ತೈಲು ಅತಿದೊಡ್ಡ ಮೂಲ ಎನಿಸಿಕೊಂಡಿದೆ ಎಂದು ಬಿಬಿಸಿ ವರದಿ ವಿವರಿಸಿದೆ.
ರಷ್ಯಾ ತೈಲದ ಅತಿದೊಡ್ಡ ಆಮದುದಾರ ರಾಷ್ಟ್ರವಾದ ಚೀನಾ ಅಥವಾ ರಷ್ಯಾದೊಂದಿಗೆ ಇನ್ನೂ ದೊಡ್ಡ ಪ್ರಮಾಣದ ವ್ಯಾಪಾರವನ್ನು ನಡೆಸುತ್ತಿರುವ ಯುರೋಪಿಯನ್ ಒಕ್ಕೂಟದ ಮೇಲೆ ಅಮೆರಿಕ ನಮ್ಮ ಮೇಲೆ ವಿಧಿಸಿದಂತೆ ಹೆಚ್ಚುವರಿ ಸುಂಕಗಳನ್ನು ವಿಧಿಸಿಲ್ಲ ಎಂದು ಭಾರತ ಗಮನಸೆಳೆದಿದೆ.
ಬ್ಲೂಮ್‌ಬರ್ಗ್ ಟಿವಿಗೆ ನೀಡಿದ ಸಂದರ್ಶನದಲ್ಲಿ ನವರೊ ಅವರು ಅಮೆರಿಕದ ಸುಂಕ ನಿಲುವನ್ನು ಪುನರುಚ್ಚರಿಸಿದ್ದಾರೆ.
“ಭಾರತ ಮಾಡುತ್ತಿರುವ ಕೆಲಸಗಳಿಂದ ಅಮೆರಿಕದಲ್ಲಿ ಎಲ್ಲರೂ ನಷ್ಟ ಅನುಭವಿಸುತ್ತಿದ್ದಾರೆ. ಗ್ರಾಹಕರು, ವ್ಯವಹಾರಗಳು ಮತ್ತು ಎಲ್ಲವೂ ನಷ್ಟ ಅನುಭವಿಸುತ್ತಿವೆ. ಭಾರತದ ಹೆಚ್ಚಿನ ಸುಂಕದಿಂದ ನಮ್ಮ ಉದ್ಯೋಗ, ಕಾರ್ಖಾನೆಗಳು, ಆದಾಯ ಮತ್ತು ಹೆಚ್ಚಿನ ವೇತನದ ಮೇಲೆ ಪರಿಣಾಮ ಬೀರುವುದರಿಂದ ಕಾರ್ಮಿಕರು ನಷ್ಟ ಅನುಭವಿಸುತ್ತಾರೆ. ನಮ್ಮ ತೆರಿಗೆದಾರರೂ ನಷ್ಟ ಅನುಭವಿಸುತ್ತಿದ್ದಾರೆ. ‘ನಾವು ಮೋದಿಯವರ ಯುದ್ಧಕ್ಕೆ ಹಣಕಾಸು ಒದಗಿಸುತ್ತಿದ್ದೇವೆ’ ಎಂದು ನವರೊ ಕಿಡಿಕಾರಿದ್ದಾರೆ.
ಉಕ್ರೇನ್ ಜೊತೆ ನಡೆಯುತ್ತಿರುವುದು ‘ಪುಟಿನ್ ಯುದ್ಧ’ ಎಂದು ನೀವು ಹೇಳುತ್ತೀರಾ ಎಂದು ಕೇಳಿದಾಗ, “ನಾನು ಮೋದಿ ಯುದ್ಧ’ ಎಂದು ಹೇಳಲು ಬಯಸುತ್ತೇನೆ. ಏಕೆಂದರೆ, ಉಕ್ರೇನ್‌ನ ಶಾಂತಿಯ ಹಾದಿ ಭಾಗಶಃ ನವದೆಹಲಿಯ ಮೂಲಕವೇ ಹಾದು ಹೋಗುತ್ತದೆ” ಎಂದು ನವರೋ ಹೇಳಿದ್ದಾರೆ.
“ನನಗೆ ಬೇಸರ ತರಿಸುವ ಸಂಗತಿಯೆಂದರೆ, ಭಾರತೀಯರು ಈ ವಿಷಯದಲ್ಲಿ ತುಂಬಾ ದುರಹಂಕಾರಿಗಳು. ನಮಗೆ ಹೆಚ್ಚಿನ ಸುಂಕ ಇಲ್ಲ, ನಮ್ಮದು ಸಾರ್ವಭೌಮತ್ವ, ನಾವು ಯಾರಿಂದ ಬೇಕಾದರು ತೈಲ ಖರೀದಿಸಿಬಹುದು, ನಮ್ಮದು ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ಎಂಬ ಭಾವನೆ ಅವರಲ್ಲಿ ಇದೆ. ಹಾಗೆಯೇ ವರ್ತಿಸುತ್ತಿರಲಿ” ಎಂದು ನವರೋ ವಾಗ್ದಾಳಿ ನಡೆಸಿದ್ದಾರೆ.
ಅಮೆರಿಕದ ಶೇ.50ರಷ್ಟು ಸುಂಕ ಹೇರಿಕೆ ಭಾರತದಲ್ಲಿ ಬಟ್ಟೆಯಿಂದ ಹಿಡಿದು ವಜ್ರದವರೆಗೆ ರಫ್ತು ವಲಯದಲ್ಲಿ ಕೆಲಸ ಮಾಡುತ್ತಿರುವ ಲಕ್ಷಾಂತರ ಜನರ ಜೀವನೋಪಾಯದ ಮೇಲೆ ಪ್ರಭಾವ ಬೀರಲಿದೆ ಎಂದು ವರದಿಗಳು ಹೇಳಿವೆ.
ಸುಂಕದ ವಿಚಾರದಲ್ಲಿ ಅಮೆರಿಕ-ಭಾರತ ನಡುವಿನ ವ್ಯಾಪಾರ ಸಂಬಂಧ ಹಳಸಿದೆ. ಪರಿಣಾಮ ಈ ವಾರದ ಆರಂಭದಲ್ಲಿ ಪ್ರಾರಂಭವಾಗಬೇಕಿದ್ದ ಉಭಯ ರಾಷ್ಟ್ರಗಳ ನಡುವಿನ ವ್ಯಾಪಾರ ಮಾತುಕತೆಗಳು ರದ್ದುಗೊಂಡಿವೆ. ಆದರೆ, ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಅಮೆರಿಕದ ಪ್ರಮುಖ ಕಾರ್ಯತಂತ್ರದ ಪಾಲುದಾರನಾಗಿ ಉಳಿದಿರುವ ಭಾರತಕ್ಕೆ ಇನ್ನೂ ಒಂದು ಮಾರ್ಗದ ನಿರೀಕ್ಷೆಯಿದೆ ಎಂದು ವರದಿಗಳು ಹೇಳಿವೆ.
ಭಾರತದೊಂದಿಗಿನ ದ್ವಿಪಕ್ಷೀಯ ಸಂಬಂಧಗಳ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿರುವ ಅಮೆರಿಕದ ಮತ್ತೊಬ್ಬ ಅಧಿಕಾರಿಯಾದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಅವರ ಹೇಳಿಕೆಗಳು ಆ ದಿಕ್ಕಿನತ್ತ ಬೆರಳು ತೋರಿಸುತ್ತವೆ ಎಂದು ವಿಶ್ಲೇಷಕರು ಹೇಳುತ್ತಾರೆ.
“ಭಾರತ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ, ಅಮೆರಿಕ ವಿಶ್ವದ ಅತಿದೊಡ್ಡ ಆರ್ಥಿಕತೆಯಾಗಿದೆ. ನಾವು ಒಟ್ಟಿಗೆ ಸೇರಲಿದ್ದೇವೆ ಎಂದು ಭಾವಿಸುತ್ತೇನೆ” ಎಂದು ಬೆಸೆಂಟ್ ಅವರು ಬುಧವಾರ ಫಾಕ್ಸ್ ಬಿಸಿನೆಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಈ ತಿಂಗಳ ಆರಂಭದಲ್ಲಿ, ಸುಂಕಗಳ ಪರಿಣಾಮವನ್ನು ತಗ್ಗಿಸಲು ತೆರಿಗೆಗಳನ್ನು ಕಡಿತಗೊಳಿಸುವುದಾಗಿ ಮೋದಿ ಭರವಸೆ ನೀಡಿದ್ದರು. ಬುಧವಾರ ಬಿಡುಗಡೆಯಾದ ಜುಲೈ ತಿಂಗಳ ಮಾಸಿಕ ಪರಿಶೀಲನಾ ವರದಿಯಲ್ಲಿ, ಭಾರತದ ಹಣಕಾಸು ಸಚಿವಾಲಯವು ಪ್ರಸ್ತುತ ನಡೆಯುತ್ತಿರುವ ಭಾರತ-ಯುಎಸ್ ವ್ಯಾಪಾರ ಮಾತುಕತೆಗಳು ಈ ನಿಟ್ಟಿನಲ್ಲಿ ‘ನಿರ್ಣಾಯಕ’ ಎಂದು ಬಿಬಿಸಿ ವರದಿ ಹೇಳಿದೆ.
ಅಮೆರಿಕದ ಹೆಚ್ಚುವರಿ ಸುಂಕ ಹೇರಿಕೆಯು ಅಮೆರಿಕಕ್ಕೆ ಭಾರತದ ಒಟ್ಟಾರೆ ರಫ್ತಿನ ಅರ್ಧ ಭಾಗದ ಮೇಲೆ ಪರಿಣಾಮ ಬೀರಲಿದೆ. ಸುಂಕ ಹೆಚ್ಚಳವು ಅಮೆರಿಕ-ಭಾರತ ನಡುವೆ ವ್ಯಾಪಾರ ಸಂಬಂಧ ಹದೆಗೆಟ್ಟಿರುವುದನ್ನು ಎತ್ತಿ ತೋರಿಸುತ್ತದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಬುಧವಾರ ವರದಿ ಮಾಡಿದೆ.
ಭಾರತ ಸರ್ಕಾರವು ಅಮೆರಿಕದ ಸುಂಕ ಹೇರಿಕೆ 48.2 ಬಿಲಿಯನ್ ಡಾಲರ್ ಮೌಲ್ಯದ ರಫ್ತಿನ ಮೇಲೆ ಪರಿಣಾಮ ಬೀರಲಿದೆ ಎಂದು ಅಂದಾಜಿಸಿದೆ. ಹೊಸ ಸುಂಕ ಹೇರಿಕೆ ಅಮೆರಿಕಕ್ಕೆ ರಫ್ತು ಮಾಡುವ ಸರಕುಗಳಿಂದ ಭಾರತಕ್ಕೆ ಯಾವುದೇ ವಾಣಿಜ್ಯಿಕ ಲಾಭ ಸಿಗದಂತೆ ಮಾಡಲಿದೆ. ಉದ್ಯೋಗ ನಷ್ಟಕ್ಕೆ ಕಾರಣವಾಗಲಿದೆ ಮತ್ತು ಆರ್ಥಿಕ ಬೆಳವಣಿಗೆಯನ್ನು ನಿಧಾನಗೊಳಿಸಲಿದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾಗಿ ವರದಿ ವಿವರಿಸಿದೆ.
ಶೇ.50ರಷ್ಟು ಸುಂಕ ಹೇರಿದ ಅಮೆರಿಕ: ಭಾರತದ 48 ಬಿಲಿಯನ್ ಡಾಲರ್ ರಫ್ತಿಗೆ ಹೊಡೆತ ಬೀಳುವ ಸಾಧ್ಯತೆ; ವರದಿ


