ಕನ್ನಡದ ಹಾಡು ಹಾಕೋದಿಲ್ಲ, ಯಾರೂ ಏನೂ ಮಾಡಿಕೊಳ್ಳೋದಿಕ್ಕೆ ಆಗೋದಿಲ್ಲ ಎಂಬ ಹೇಳಿಕೆ ನೀಡಿ ಗ್ರಾಹಕರೊಂದಿಗೆ ಉದ್ಧಟತನದಿಂದ ನಡೆದುಕೊಂಡಿದ್ದ ಕೆಎಫ್‌ಸಿ ಸಿಬ್ಬಂದಿ ವಿರುದ್ಧ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಒಂದು ವಾರದೊಳಗೆ ಎಲ್ಲಾ ಕೆಎಫ್‌ಸಿ ಮಳಿಗೆಗಳಲ್ಲಿ ಕನ್ನಡವಿರಲಿ ಎಂದು ಆಗ್ರಹಿಸಿರುವ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ದಾವಣಗೆರೆಯಲ್ಲಿ ಕೆಎಫ್‌ಸಿ ಮಳಿಗೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ.
ಕರವೇ ದಾವಣಗೆರೆ ಜಿಲ್ಲಾಧ್ಯಕ್ಷರಾದ ಎಂ.ಎಸ್. ರಾಮೇಗೌಡರವರು ಮಾತನಾಡಿ, “ಒಂದು ವಾರದೊಳಗೆ ಎಲ್ಲ ನಾಮಫಲಕಗಳು ಕನ್ನಡದಲ್ಲಿ ಹಾಕಬೇಕು, ಕನ್ನಡದಲ್ಲೇ ವ್ಯವಹರಿಸಬೇಕು, ಕನ್ನಡದ ಹಾಡುಗಳನ್ನೇ ಹಾಕಬೇಕು. ಒಂದು ವೇಳೆ ಕೆಎಫ್ ಸಿ ತನ್ನ ದುರಹಂಕಾರ ಮುಂದುವರೆಸಿದರೆ ರಾಜ್ಯದ ಎಲ್ಲ ಕೆಎಫ್‌ಸಿ ಮಳಿಗೆಗಳ ಮುಂದೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟಿಸಲಿದ್ದಾರೆ. ಆಗ ಆಗಬಹುದಾದ ಅನಾಹುತಗಳಿಗೆ ನೀವೇ ಹೊಣೆಗಾರರು” ಎಂದು ಕೆಎಫ್‌ಸಿ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದರು.
ಏನಿದು ವಿವಾದ?
ಮಹಿಳೆಯೊಬ್ಬರು ಬೆಂಗಳೂರಿನ ಕೆಎಫ್‌ಸಿ ಮಳಿಗೆಯೊಂದರಲ್ಲಿ ಕನ್ನಡದ ಹಾಡುಗಳನ್ನು ಹಾಕಿ ಎಂದು ಹೇಳಿದ್ದಕ್ಕೆ ಅಲ್ಲಿನ ಸಿಬ್ಬಂದಿ ಉದ್ಧಟತನದಿಂದ ಮಾತನಾಡಿದ್ದರು. “ನಾವು ಕನ್ನಡ ಹಾಡುಗಳನ್ನು ಹಾಕುವುದಿಲ್ಲ, ಹಿಂದಿ ನಮ್ಮ ರಾಷ್ಟ್ರಭಾಷೆ, ನಾವು ಹಿಂದಿ ಹಾಡುಗಳನ್ನೇ ಪ್ರಸಾರ ಮಾಡುತ್ತೇವೆ. ಹಿಂದೆಯೂ ಇದೇ ರೀತಿ ಹಲವರು ಹೇಳಿದ್ದರು, ಯಾರಿಂದ ಏನೂ ಮಾಡಿಕೊಳ್ಳಲು ಆಗೋದಿಲ್ಲ” ಎಂದು ಹೇಳಿದ್ದ ವಿಡಿಯೋವೊಂದು ವೈರಲ್ ಆಗಿತ್ತು.
ಕರ್ನಾಟಕದಲ್ಲಿರುವ ಕೆಎಫ್ ಸಿ ಗಳಲ್ಲಿ ಕನ್ನಡ ಹಾಡು ಹಾಕುವಂತಿಲ್ಲ ಅಂತ @KFC_India ನಿಯಮ ಮಾಡಿದೆಯಂತೆ!#ಇದೆಂತಹಗಾಂಚಲಿ #BanKFCinKarnataka @CMofKarnataka @karkalasunil @rajanna_rupesh pic.twitter.com/a8SMvRXXmJ
— ವಿನಯ್ ?? (@meVinayRW) October 23, 2021
ಕರ್ನಾಟಕಕ್ಕೆ ಬರಲು ಪಾಸ್‌ಪೋರ್ಟ್ ಬೇಕಾ? ನಮ್ಮ ಕಂಪನಿ ರೂಲ್ಸ್ ಫಾಲೋ ಮಾಡುತ್ತೇವೆ. ನೀವು ಏನು ಮಾಡಿಕೊಳ್ಳಲು ಆಗುವುದಿಲ್ಲ ಎಂದು ಸಿಬ್ಬಂದಿ ಮಹಿಳೆಗೆ ಹೇಳಿದ್ದು ವಿಡಿಯೋದಲ್ಲಿ ದಾಖಲಾಗಿತ್ತು. ಇದಕ್ಕೆ ಸಾವಿರಾರು ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿ ಕೆಎಫ್‌ಸಿ ಈ ಉದ್ಧಟತನವನ್ನು ತಿದ್ದಿಕೊಳ್ಳಬೇಕು ಮತ್ತು ಕನ್ನಡಿಗರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದರು. ಈ ಕುರಿತು ಟ್ವಿಟರ್ ನಲ್ಲಿ #RejectKFC #KFCಕನ್ನಡಬೇಕು ಎಂಬ ಹ್ಯಾಶ್ ಟ್ಯಾಗ್ ಮೂಲಕ ಕನ್ನಡಿಗರು ಕಿಡಿಕಾರಿದ್ದರು. ಭಾನುವಾರ ಸಂಜೆ ನಡೆದ ಅಭಿಯಾನದಲ್ಲಿ ಸುಮಾರು 45,000ಕ್ಕೂ ಹೆಚ್ಚು ಟ್ವೀಟ್‌ಗಳು ದಾಖಲಾಗಿದ್ದವು. #RejectKFC ಹ್ಯಾಶ್‌ಟ್ಯಾಗ್ ಭಾರತದಲ್ಲಿ ಮೂರನೇ ಸ್ಥಾನದಲ್ಲಿ ಟ್ರೆಂಡ್ ಆಗಿತ್ತು.
@KFCindia
ಈ KFC ಯವರು ಶ್ರೀಲಂಕಾದಲ್ಲಿ ಸಿಂಹಳಿ,ಚೀನಾದಲ್ಲಿ ಮ್ಯಾಂಡರಿನ್, ಜೋರ್ಡಾನ್ ನಲ್ಲಿ ಅರೇಬಿಕ್, ರಷ್ಯಾದಲ್ಲಿ ರಷ್ಯನ್ ಹೀಗೆ ಆಯಾ ನಾಡುಗಳಲ್ಲಿ ಅವರವರ ನುಡಿಗಳನ್ನೇ ಬಳಸಿದ್ದಾರೆ.
ನಮ್ಮ ಕನ್ನಡದಲ್ಲಿ ಸೇವೆ ಕೊಡೊಕೆ ಆಗಿಲ್ಲ ಅಂದ್ರೆ ಕರ್ನಾಟಕದಿಂದ ಗಂಟು ಮೂಟೆ ಕಟ್ಟಿಕೊಂಡು ಹೋಗಿ.#ServeInMyLanguage#RejectKFC pic.twitter.com/Gkpb20Cthb— Manju Ganapathipuraಮಂಜು ಗಣಪತಿಪುರ (@manjuKrp) October 24, 2021
ಈ KFC ಯವರು ಶ್ರೀಲಂಕಾದಲ್ಲಿ ಸಿಂಹಳಿ, ಚೀನಾದಲ್ಲಿ ಮ್ಯಾಂಡರಿನ್, ಜೋರ್ಡಾನ್ ನಲ್ಲಿ ಅರೇಬಿಕ್, ರಷ್ಯಾದಲ್ಲಿ ರಷ್ಯನ್ ಹೀಗೆ ಆಯಾ ನಾಡುಗಳಲ್ಲಿ ಅವರವರ ನುಡಿಗಳನ್ನೇ ಬಳಸಿದ್ದಾರೆ. ನಮ್ಮ ಕನ್ನಡದಲ್ಲಿ ಸೇವೆ ಕೊಡೊಕೆ ಆಗಿಲ್ಲ ಅಂದ್ರೆ ಕರ್ನಾಟಕದಿಂದ ಗಂಟು ಮೂಟೆ ಕಟ್ಟಿಕೊಂಡು ಹೋಗಿ ಎಂದು ಕನ್ನಡ ಹೋರಾಟಗಾರ ಮಂಜು ಗಣಪತಿಪುರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕನ್ನಡಿಗರ ಮೇಲೆ ದಬ್ಬಾಳಿಕೆ ಮಾಡುವ ಯಾವುದೇ ಸಂಸ್ಥೆ, ಅದು ಎಷ್ಟು ದೊಡ್ಡದೇ ಆದರೂ ನಮಗೆ ಬೇಡ. ಹಣ ಮಾಡಲು ಕರ್ನಾಟಕಕ್ಕೆ ಬರುವ ಸಂಸ್ಥೆಗಳು ಕನ್ನಡಿಗರ ಭಾವನೆಗಳನ್ನು ಗೌರವಿಸಬೇಕು, ಕನ್ನಡಿಗರ ಅಸ್ಮಿತೆಯನ್ನು ಗುರುತಿಸಬೇಕು. ಇತರ ಭಾಷೆಗಳನ್ನು, ಭಾಷಿಕರನ್ನು ಕನ್ನಡಿಗರ ಮೇಲೆ ಹೇರುವ ಹುಚ್ಚಾಟ ಸಹಿಸುವುದಿಲ್ಲ.#RejectKFC #kfcಕನ್ನಡಬೇಕು
— ನಾರಾಯಣಗೌಡ್ರು.ಟಿ.ಎ | Narayanagowdru T.A. (@narayanagowdru) October 24, 2021
“ಕನ್ನಡ ಬಳಕೆ ಮಾಡದ ಕೆಎಫ್‌ಸಿ ಕೂಡಲೇ ಕನ್ನಡಿಗರ ಕ್ಷಮೆ ಯಾಚಿಸಬೇಕು. ಕನ್ನಡದಲ್ಲೇ ವ್ಯವಹರಿಸಬೇಕು, ಮಳಿಗೆಗಳಲ್ಲಿ ಕನ್ನಡದ ಹಾಡುಗಳನ್ನು ಪ್ರಸಾರ ಮಾಡಬೇಕು. ಇಲ್ಲವಾದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ತಕ್ಕ ಪಾಠ ಕಲಿಸಲಿದ್ದಾರೆ. ಕನ್ನಡಿಗರ ಮೇಲೆ ದಬ್ಬಾಳಿಕೆ ಮಾಡುವ ಯಾವುದೇ ಸಂಸ್ಥೆ, ಅದು ಎಷ್ಟು ದೊಡ್ಡದೇ ಆದರೂ ನಮಗೆ ಬೇಡ. ಹಣ ಮಾಡಲು ಕರ್ನಾಟಕಕ್ಕೆ ಬರುವ ಸಂಸ್ಥೆಗಳು ಕನ್ನಡಿಗರ ಭಾವನೆಗಳನ್ನು ಗೌರವಿಸಬೇಕು, ಕನ್ನಡಿಗರ ಅಸ್ಮಿತೆಯನ್ನು ಗುರುತಿಸಬೇಕು. ಇತರ ಭಾಷೆಗಳನ್ನು, ಭಾಷಿಕರನ್ನು ಕನ್ನಡಿಗರ ಮೇಲೆ ಹೇರುವ ಹುಚ್ಚಾಟ ಸಹಿಸುವುದಿಲ್ಲ” ಎಂದು ಕರವೇ ರಾಜ್ಯಾಧ್ಯಕ್ಷರಾದ ನಾರಾಯಣಗೌಡರು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಜೊಮೊಟೊ ಏಜೆಂಟ್ ಹಿಂದಿ ಪ್ರೀತಿ: ತೀವ್ರ ಆಕ್ಷೇಪದ ಬಳಿಕ ಕಂಪನಿ ಕ್ಷಮೆಯಾಚನೆ


