ಬೆಂಗಳೂರು: ರಸ್ತೆ ಗುಂಡಿಗಳನ್ನು ಮುಚ್ಚಿಸಿ ತಾತಾ ಎಂದು ಸಿಎಂಗೆ ಮನವಿ ಮಾಡಿದ ಪುಟ್ಟ ಬಾಲಕಿ

ಬೆಂಗಳೂರು ನಗರದಲ್ಲಿ ವಿಪರಿತವಾಗಿರುವ ರಸ್ತೆ ಗುಂಡಿಗಳನ್ನು ಮುಚ್ಚಿಸಿ, ಜನರನ್ನು ಬದುಕಿಸುವಂತೆ ಏಳು ವರ್ಷದ ಪುಟ್ಟ ಬಾಲಕಿಯೊಬ್ಬರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಲ್ಲಿ ವಿಡಿಯೋ ಮೂಲಕ ಮನವಿ ಮಾಡಿದ್ದಾರೆ.

ಬೆಂಗಳೂರಿನ ಹೆಗ್ಗನಹಳ್ಳಿ ಸರ್ಕಾರಿ ಶಾಲೆಯಲ್ಲಿ ಎರಡನೇ ತರಗತಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಧವನಿ ಈ ವಿಡಿಯೋ ಮಾಡಿದ್ದಾರೆ. ತುಮಕೂರು ಜಿಲ್ಲೆ ತಿಪಟೂರಿನ ಕಟ್ಟಡ ಕಾರ್ಮಿಕರ ಮಗಳಾದ  ಧವನಿಯವರ ತಾಯಿ ಎರಡು ವರ್ಷಗಳ ಹಿಂದೆ ಇಂತಹದ್ದೆ ರಸ್ತೆ ಗುಂಡಿಗಳಿಂದಾಗಿಯೇ ಅಪಘಾತಕ್ಕಿಡಾಗಿದ್ದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ‘ತಾತ’  ಎಂದು ಕರೆದಿರುವ ಧವನಿ, ಈ ರಸ್ತೆ ಗುಂಡಿಗಳನ್ನು ಮುಚ್ಚಲು ಮನೆಯಲ್ಲಿ ಚಾಕೊಲೇಟ್‌ಗೆ ನೀಡಲಾಗುವ ತಮ್ಮ ಪಾಕೆಟ್ ಮನಿಯನ್ನು ನೀಡುವುದಾಗಿ ತಿಳಿಸಿದ್ದಾರೆ. ಪಶ್ಚಿಮ ಬೆಂಗಳೂರಿನಲ್ಲಿ ಇತ್ತೀಚೆಗೆ ಸಂಭವಿಸಿದ ಅಪಘಾತದಿಂದ ಮನನೊಂದ ಪುಟಾಣಿ ಧವನಿ ಮನವಿ ಕಳುಹಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ರಸ್ತೆ ಗುಂಡಿಗಳಿಗೆ ಹೂವು, ರಂಗೋಲಿ ಹಾಕಿ ಪ್ರತಿಭಟನೆ ಮಾಡಿದ ಎಎಪಿ

ರಸ್ತೆ ಗುಂಡಿಗಳಿಂದ ಉಂಟಾಗುವ ಅಪಘಾತಗಳಿಂದ ತಮ್ಮ ಸದಸ್ಯರನ್ನು ಕಳೆದುಕೊಂಡ ಕುಟುಂಬಗಳಿಗೆ ಸಂತಾಪ ಸೂಚಿಸುತ್ತಾ, ತಾತಾ ದಯವಿಟ್ಟು ಈ ರಸ್ತೆ ಗುಂಡಿಗಳನ್ನು ಮುಚ್ಚಿಸಿ, ಅವರ ಜೀವವನ್ನು ಉಳಿಸಿ ಎಂದು ಕೈ ಮುಗಿದು ಬೇಡಿಕೊಂಡಿದ್ದಾರೆ.

ಎರಡು ವರ್ಷಗಳ ಹಿಂದೆ ಬಾಲಕಿ ಧವನಿ ಅವರ ತಾಯಿ ರೇಖಾ ನವೀನ್ ಇದೇ ರೀತಿಯ ಅಪಘಾತದಲ್ಲಿ ಕಾಲು ಮುರಿದುಕೊಂಡಿದ್ದಾರೆ. “ಧವನಿ ಆಗ ಚಿಕ್ಕ ಮಗುವಾಗಿದ್ದಳು. ಪರಿಸ್ಥಿತಿಯನ್ನು ಹೆಚ್ಚು ಅರ್ಥಮಾಡಿಕೊಳ್ಳಲಿಲ್ಲ. ಆಕೆ ಬೆಳೆದಂತೆ, ಆಕೆಯ ಅನೇಕ ಸ್ನೇಹಿತರು ಮತ್ತು ಕುಟುಂಬದ ಸದಸ್ಯರು ಇಂತಹ ಅಪಘಾತಗಳಿಗೆ ಬಲಿಯಾಗುತ್ತಿರುವುದನ್ನು ಆಕೆ ನೋಡಿದ್ದಾಳೆ “ಎಂದು ರೇಖಾ ಹೇಳಿದ್ದಾರೆ.

ವಿಡಿಯೊ ಮಾಡಲು ತಾಯಿಯ ಸಹಾಯವನ್ನು ಧವನಿ ಪಡೆದಿದ್ದಾರೆ. ಇನ್ನು ರಸ್ತೆ ಗುಂಡಿಗಳ ರಿಪರಿಗೆ ಹಣ ನೀಡುವುದಾಗಿ ತಿಳಿಸಿರುವ ಬಾಲಕಿ, ಆಕೆಯ ಪೋಷಕರು ಚಾಕಲೇಟ್ ಖರೀದಿಸಲು ನೀಡುವ ಹಣವನ್ನು ಮುಖ್ಯಮಂತ್ರಿ ಬೊಮ್ಮಾಯಿಗೆ ನೀಡುವುದಾಗಿ ಹೇಳಿದ್ದಾರೆ.

ಕಳೆದ ವಾರ ನಗರದೆಲ್ಲಡೆ ರಸ್ತೆ ಗುಂಡಿಗಳು ವಿಪರೀತ ಹೆಚ್ಚಾಗಿ, ಜೀವ ತೆಗೆಯುವಷ್ಟು ಅಪಾಯಕಾರಿ ಮಟ್ಟ ತಲುಪಿರುವುದನ್ನು ಖಂಡಿಸಿ ಆಮ್‌ ಆದ್ಮಿ ಪಾರ್ಟಿ ಕಾರ್ಯಕರ್ತರು, ರಸ್ತೆಗಳಲ್ಲಿರುವ ಗುಂಡಿಗಳ ಸುತ್ತ ರಂಗೋಲಿ ಹಾಕಿ, ಹೂವಿನಿಂದ ಅಲಂಕರಿಸಿ, ಆರತಿ ಎತ್ತಿ ಪೂಜೆ ಮಾಡಿ, ಅದರ ಸುತ್ತಮುತ್ತ ಸರ್ಕಾರದ ವಿರುದ್ಧ  ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ್ದಾರೆ.


ಇದನ್ನೂ ಓದಿ: ‘ಕರ್ನಾಟಕ ಯುವ ನೀತಿ-2021’ ರೂಪಿಕರಣ ಸಮಿತಿಯಲ್ಲಿ ‘ಚಕ್ರವರ್ತಿ ಸೂಲಿಬೆಲೆ’!

LEAVE A REPLY

Please enter your comment!
Please enter your name here