ಭಾರತದಲ್ಲಿ ಆರೋಗ್ಯ ಸೇವೆಯಲ್ಲಿ ಕ್ರಾಂತಿ ತರಲು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಆಯುಷ್ಮಾನ್ ಭಾರತ ಡಿಜಿಟಿಲ್ ಮಿಷನ್ ಹಾಗು ಅದರ ಮೂಲಕ ದೇಶದ ಪ್ರತಿ ಪ್ರಜೆಗೆ ನೀಡುವ ಹೆಲ್ತ್ ಐ.ಡಿ ಯೋಜನೆಗೆ ಚಾಲನೆ ನೀಡಿದ್ದಾರೆ. ಇದನ್ನ ಅನೇಕ ಖಾಸಗಿ ಕಂಪನಿ ಮಾಲೀಕರು, ಮುಖ್ಯವಾಹಿನಿಯ ಹಲವು ಮಾಧ್ಯಮ ಸಂಸ್ಥೆಗಳು ಸ್ವಾಗತಿಸಿವೆ. ಈ ಯೋಜನೆ, ಈ ಹೆಲ್ತ್ ಐ.ಡಿ ತರಲು ಹೊರಟಿರುವ ಕ್ರಾಂತಿ ಏನಿದು? ಪರಿಶೀಲಿಸೋಣ ಬನ್ನಿ.

ಈ ಹೆಲ್ತ್ ಐ.ಡಿ ಹಾಗೂ ಡಿಜಿಟಲ್ ಹೆಲ್ತ್ ಯೋಜನೆಯ ಮೂಲ 2017ರ ರಾಷ್ಟ್ರೀಯ ಆರೋಗ್ಯ ನೀತಿ. (ಈ ನೀತಿಯ ಕರಡು ಕನ್ನಡದಲ್ಲಿ ಲಭ್ಯವಿಲ್ಲ). ಇದಾದನಂತರ 2020ರಲ್ಲಿ ಪೈಲಟ್ ಯೋಜನೆಯ ಆಧಾರದ ಮೇಲೆ ರಾಷ್ಟ್ರೀಯ ಡಿಜಿಟಲ್ ಹೆಲ್ತ್ ಯೋಜನೆಗೆ ಚಾಲನೆ ನೀಡಲಾಯಿತು. ಈಗ ಈ ಯೋಜನೆಯನ್ನು ಪೂರ್ಣ ಪ್ರಮಾಣದಲ್ಲಿ ಪ್ರಾರಂಭಿಸಲಾಗಿದೆ. ಈ ಯೋಜನೆಯ ಮುಖ್ಯ ಭಾಗಗಳು ಎಂದರೆ – ಹೆಲ್ತ್ ಐ.ಡಿ, ಹೆಲ್ತ್ ಕೇರ್ ಪ್ರೊಫ಼ೆಶನಲ್ಸ್ ರೆಜಿಸ್ಟ್ರಿ, ಹೆಲ್ತ್ ಕೇರ್ ಫ಼ೆಸಿಲಿಟೀಸ್ ರೆಜಿಸ್ಟ್ರಿ ಹಾಗು ಪರ್ಸನೆಲ್ ಹೆಲ್ತ್ ರೆಕಾರ್ಡ್ಸ್. ಅಂದರೆ, ಪ್ರತಿ ಪ್ರಜೆಗೆ 14 ಅಂಕಿಗಳ ಒಂದು ಪ್ರತ್ಯೇಕ ಐ.ಡಿ, ದೇಶದ ಎಲ್ಲಾ ವೈದ್ಯರ ಒಂದು ಆನ್ಲೈನ್ ರೆಜಿಸ್ಟ್ರಿ, ಎಲ್ಲಾ ಕ್ಲಿನಿಕ್/ಆಸ್ಪತ್ರೆ/ಲ್ಯಾಬ್‌ಗಳ ಒಂದು ಆನ್ಲೈನ್ ರೆಜಿಸ್ಟ್ರಿ – ಅತಿಮುಖ್ಯವಾಗಿ, ನಮ್ಮ ಆರೋಗ್ಯದ ಬಗ್ಗೆ, ನಮ್ಮ ಕುಟುಂಬದವರ ಆರೋಗ್ಯದ ಬಗ್ಗೆ ಸಂಪೂರ್ಣ ಮಾಹಿತಿ – ವ್ಯಕ್ತಿಯೊಬ್ಬ ಮಾಡಿಸಿಕೊಂಡ ಪ್ರತಿ ಲ್ಯಾಬ್ ಟೆಸ್ಟ್ ವರದಿ, ಪ್ರತಿ ಬಾರಿ ಕ್ಲಿನಿಕ್‌ಗೆ ಹೋದರೆ ವೈದ್ಯರು ನೀಡಿದ ಪ್ರಿಸ್ಕ್ರಿಪ್ಷನ್ – ಇತ್ಯಾದಿಯಾಗಿ ಇವುಗಳೆಲ್ಲವನ್ನೂ ಇನ್ನು ಮುಂದೆ ಈ ವ್ಯವಸ್ಥೆಯಲ್ಲಿ ಸಂಗ್ರಹಿಸಲಾಗುತ್ತದೆ.

ಭೀಮ್, ಗೂಗಲ್ ಪೇ ಇತ್ಯಾದಿಗಳ ತರಹ, ನಿಮ್ಮದೊಂದು ಬ್ಯಾಂಕ್, ದಿನಸಿ ಅಂಗಡಿದವರದ್ದು ಮತ್ತೊಂದು ಬ್ಯಾಂಕ್, ಆದರೂ ಇಬ್ಬರು ಗೂಗಲ್ ಪೇ ಉಪಯೋಗಿಸಿ ಹಣ ಪಡೆಯುತ್ತೀರಿ. ಅದೇ ರೀತಿಯಲ್ಲಿ ಆರೋಗ್ಯ ಸೇವೆಗಳಿಗೆ ಕೂಡ ಆಪ್‌ಗ್‌ಳು ಬರುತ್ತವಂತೆ. ನಿಮಗೆ ಕಾಯಿಲೆ ಇದ್ದರೆ ಆ ಆಪ್‌ಗೆ ಹೋದರೆ ಅದು ವೈದ್ಯರ (ಆಲೋಪತಿ, ಹೋಮಿಯೋಪತಿ, ಆಯುರ್ವೇದ ಇತ್ಯಾದಿ ಎಲ್ಲ ಬಗೆಗಿನ ವೈದ್ಯರು) ಪಟ್ಟಿ, ವೈದ್ಯಕೀಯ ಪರೀಕ್ಷೆಗಳು ಮಾಡಲು ಲ್ಯಾಬ್‌ಗಳ ಪಟ್ಟಿ, ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳ ಪಟ್ಟಿ ಎಲ್ಲವೂ ತೋರಿಸುತ್ತದೆ. ಆನರು ಟಿಲಿಕನ್ಸಲ್ಟೇಷನ್ ಮಾಡಬಹುದಂತೆ, ಆನ್‌ಲೈನ್‌ನಲ್ಲಿ ಲ್ಯಾಬ್ ಟೆಸ್ಟ್ ಬುಕ್ ಮಾಡಬಹುದಂತೆ. ಒಮ್ಮೆ ಟೆಸ್ಟ್ ಆದನಂತರ ತಾವು ಫ಼ೈಲ್ ಹಿಡಿದು ವೈದ್ಯರ ಬಳಿ ಹೋಗಬೇಕಿಲ್ಲವಂತೆ, ಏಕೆಂದರೆ, ಅದು ’ಕ್ಲೌಡ್’ನಲ್ಲಿ (ಅಂತರ್ಜಾಲದಲ್ಲಿ ಶೇಖರವಾಗುವ ತಂತ್ರಜ್ಞಾನ) ಲಭ್ಯವಿರುತ್ತದೆ. ವೈದ್ಯರು ಅದನ್ನ ಅವರ ಆಪ್ ಮೂಲಕ ನೋಡಿ, ನಿಮಗೆ ಪ್ರೆಸ್ಕ್ರಿಪ್ಷನ್ ನೀಡುತ್ತಾರೆ. ಅದು ಸಹ ಕ್ಲೌಡ್‌ನಲ್ಲಿರುತ್ತದೆ. ಹೌದು ಈ ಕ್ಲೌಡ್‌ನಲ್ಲಿರೋ ಮಾಹಿತಿಯನ್ನು ಯಾರ್‍ಯಾರು ನೋಡಬಹುದು ಗೊತ್ತೆ? – ವಿಮೆ ಕಂಪನಿಗಳು, ಔಷದಿ ಕಂಪನಿಗಳು, ಸಾಫ಼್ಟ್ವೇರ್ ಕಂಪನಿಗಳು – ಎಲ್ಲರೂ.

ಈ ಯೋಜನೆಯ ಆರ್ಕಿಟೆಕ್ಟ್ ಆದ ’ಆಧಾರ್ ಖ್ಯಾತಿಯ ಆರ್.ಎಸ್.ಶರ್ಮರವರ ಪ್ರಕಾರ, ಈ ಯೋಜನೆಯ ಮುಖ್ಯ ಉದ್ದೇಶ “ಆರೋಗ್ಯ ಸೇವೆಗಳ ವಿತರಣೆಯನ್ನು ಇನ್ನಷ್ಟು ಬಲಗೊಳಿಸಿ, ಅದರ ಬೆಲೆಗಳನ್ನು ಕಡಿಮೆ ಮಾಡುವುದು ಹಾಗು ಸೇವೆಗಳನ್ನು ಶೀಘ್ರವಾಗಿ ಲಭ್ಯವಿರುವಂತೆ ಮಾಡಿ ಅದರ ಮೂಲಕ ದೇಶದ ಆರೋಗ್ಯ ಸೇವೆಗಳ ಗುಣಮಟ್ಟ ಹೆಚ್ಚಿಸುವುದು, ಎಲ್ಲರಿಗೂ ಲಭ್ಯವಿರುವಂತೆ ಮಾಡುವುದು ಹಾಗು ಕೈಗೆಟಕುವ ದರದಲ್ಲಿ ಅವು ಲಭ್ಯವಾಗುವಂತೆ ಮಾಡುವುದು”. ಮತ್ತೆಮತ್ತೆ ಸರ್ಕಾರ ಹೇಳಿರುವುದೇನೆಂದರೆ, ಈ ಯೋಜನೆಯಿಂದ ದೇಶದಲ್ಲಿ ’ಯೂನಿವರ್ಸಲ್ ಕವರೇಜ್’ ಲಭ್ಯವಾಗುತ್ತದೆಂದು, ಅಂದರೆ, ದೇಶದ ಪ್ರತಿ ನಿವಾಸಿಗಳಿಗೆ ಆರೋಗ್ಯ ಸೇವೆಗಳು ಲಭ್ಯವಾಗುತ್ತವೆಂಬುದು.

ಯೋಜನೆಯ ಅಗತ್ಯವೇನಿತ್ತು? ತನ್ನ ಗುರಿಗಳನ್ನು ಈ ಯೋಜನೆ ಹೇಗೆ ಸಾಧಿಸುತ್ತದೆ?

ಇಲ್ಲಿ ಎರಡು ಮುಖ್ಯ ಪ್ರಶ್ನೆಗಳಿವೆ – ಮೊದಲನೆಯದಾಗಿ, ಭಾರತದ ಆರೋಗ್ಯ ವ್ಯವಸ್ಥೆಯಲ್ಲಿರುವ ಮೂಲ ಸಮಸ್ಯೆಗಳೇನು ಹಾಗು ಅವುಗಳು ಈ ಕ್ರಾಂತಿಕಾರಿ ಯೋಜನೆಯಿಂದ ನಿವಾರಣೆಯಾಗುತ್ತವಾ? ಎಂದು.

ಎರಡನೆಯದಾಗಿ, ಈ ಡಿಜಿಟಲೈಸೇಷನ್‌ನಿಂದ ಭಾರತದಲ್ಲಿನ ಅರೋಗ್ಯ ಸೇವೆಗಳ ದುಬಾರಿ ಬೆಲೆ ಹೇಗೆ ಕಡಿಮೆಯಾಗುತ್ತವೆ ಮತ್ತು ಗುಣಮಟ್ಟ ಹೇಗೆ ಹೆಚ್ಚುತ್ತದೆ ಹಾಗು ಯೂನಿವರ್ಸಲ್ ಕವರೇಜ್ ಹೇಗೆ ಅಗುತ್ತದೆ? ಎಂದು.

ಭಾರತದ ರಾಷ್ಟ್ರೀಯ ಆರ್ಥಿಕ ಸಮೀಕ್ಷೆ (ಎಕನಾಮಿಕ್ ಸರ್ವೇ ಆಫ಼್ ಇಂಡಿಯ) ಪ್ರಕಾರ, ಆರೋಗ್ಯ ಸೇವೆಗಳ ಗುಣಮಟ್ಟ ಹಾಗು ಲಭ್ಯತೆಗೆ ಸಂಬಂಧಪಟ್ಟಂತೆ, 180 ದೇಶಗಳಲ್ಲಿ ಭಾರತ 145ನೆ ರ್‍ಯಾಂಕ್ ಹೊಂದಿತ್ತು. ಭಾರತದಲ್ಲಿ ಈಗಲೂ ಸಹ ಇನ್‌ಫ್ಯಾಂಟ್ ಮಾರ್ಟಾಲೆಟಿ ರೇಟ್ (ಹಸುಗೂಸುಗಳು ಸಾವನ್ನಪ್ಪುವ ದರ) ಕಾಂಬೋಡಿಯಾ, ಬಾಂಗ್ಲಾದೇಶ್ ಮುಂತಾದ ದೇಶಗಳಿಗಿಂತ ಹೆಚ್ಚಿದೆ. ಈಗಲೂ ಸಹ ಹುಟ್ಟಿದ ಪ್ರತಿ 1000 ಮಕ್ಕಳಲ್ಲಿ 32 ಮಕ್ಕಳು, ತಮ್ಮ 1 ವರ್ಷದ ವಯಸ್ಸಿನೊಳಗೆ ಸಾವನ್ನಪ್ಪುತಿದ್ದಾರೆ.

ಹಾಗೆಯೇ ಭಾರತದಲ್ಲಿ ಈಗಲೂ ಸಹ ಕೋಟ್ಯಂತರ ಜನ ವ್ಯಯಿಸುವ ಆರೋಗ್ಯ ಸೇವೆಗಳ ಮೇಲಿನ ವೆಚ್ಚದಿಂದ ಅವರ ಬಡತನ ಹೆಚ್ಚುತ್ತಿದೆ. 2011ರ ಒಂದು ವರದಿಯ ಪ್ರಕಾರ ಕಡು ಬಡತನದಿಂದ ತಪ್ಪಿಸಿಕೊಂಡು ಬಡತನ ರೇಖೆಯನ್ನು ದಾಟಿ ಬಂದವರಲ್ಲಿ, 5.5 ಕೋಟಿ ಭಾರತೀಯರು, ಆರೋಗ್ಯ ಸೇವೆಗಳ ಮೇಲೆ ಅತಿಹೆಚ್ಚು ಮೊತ್ತ ಭರಿಸಬೇಕಾಗಿ ಬಂದು ಒಂದೇ ವರ್ಷದಲ್ಲಿ ಪುನಃ ಬಡತನ ರೇಖೆಯ ಕೆಳಗೆ ಬಂದರು, ಮತ್ತೆ ಬಡವರಾದರು ಎನ್ನುತ್ತದೆ. ಇದಕ್ಕೆ ಮುಖ್ಯ ಕಾರಣ, ಭಾರತದಲ್ಲಿ ಸಾರ್ವಜನಿಕ ಆರೋಗ್ಯ ಸೌಲಭ್ಯಗಳು ಕಡಿಮೆ ಇದ್ದು, ಖಾಸಗಿ ಆರೋಗ್ಯ ಸೌಲಭ್ಯಗಳೇ ಹೆಚ್ಚಿರುವುದು. ಹಾಗಾಗಿ ಈ ಆರ್ಥಿಕ ಸಮೀಕ್ಷೆಯು, ಭಾರತದಲ್ಲಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಮೇಲೆ ಬಂಡವಾಳ ಹೂಡಿಕೆ (ಇನ್ವೆಸ್ಟ್‌ಮೆಂಟ್) ಜಿ.ಡಿ.ಪಿಯ ಕೇವಲ 1% ಇದ್ದು ಅದನ್ನ ಕನಿಷ್ಟ 2.5% – 3%ಕ್ಕೆ ಏರಿಸಬೇಕು ಎಂದು ಶಿಫಾರಸ್ಸು ಮಾಡಿತ್ತು.

ಹಾಗಾಗಿ ಭಾರತಕ್ಕೆ ಈಗ ಅಗತ್ಯವಿರುವುದು ಸಾರ್ವಜನಿಕ ಆರೋಗ್ಯ ಸೇವೆಗಳ ಬೃಹತ್ ವಿಸ್ತರಣೆ. ಅದನ್ನು ಮಾಡುವುದು ಬಿಟ್ಟು ಎಲ್ಲಾ ಆರೋಗ್ಯ ಸೇವೆಗಳನ್ನು ಒಂದು ಆಪ್‌ನಲ್ಲಿ ಸಿಗುವಂತೆ ಮಾಡಿ, ನಮ್ಮ ಮಾಹಿತಿಯನೆಲ್ಲ ಕಂಡಕಂಡವರಿಗೆ ಮಾರಿ, ಅದರಿಂದ ಸಾರ್ವಜನಿಕರ ಅರೋಗ್ಯ ಸುಧಾರಿಸುತ್ತದೆ ಎಂದರೆ ನಂಬುವುದು ಹೇಗೆ?

ಕೋವಿಡ್ ನಂತರ ಭಾರತದ ಆರೋಗ್ಯ ಸೇವೆಗಳಲ್ಲಿದ್ದ ಸಮಸ್ಯೆಗಳು ದೊಡ್ಡಮಟ್ಟದಲ್ಲಿ ಗೋಚರಿಸಿದ್ದು ಎಲ್ಲರಿಗೂ ಗೊತ್ತಿದೆ. ಎಷ್ಟೋ ಗ್ರಾಮೀಣ ಭಾಗಗಳಲ್ಲಿ ಪ್ರಾಥಮಿಕ ಆರೋಗ್ಯ ಸೇವೆಗಳೂ ಲಭ್ಯವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಆಪ್ ಇಟ್ಟುಕೊಂಡು ಏನು ಮಾಡುವುದು? ಖಾಸಗಿ ಆಸ್ಪತ್ರೆಗಳು ಜನರಿಗೆ ಸುಲಿಗೆ, ಮೋಸ ಮಾಡಿದ್ದಾರೆ/ಮಾಡುತ್ತಿದ್ದಾರೆ. ಇದರ ನಿಯಂತ್ರಣ ಹೇಗಾಗುತ್ತದೆ? ಇದರ ಬಗ್ಗೆ ಕಾಳಜಿ ವಹಿಸುವುದನ್ನು ಬಿಟ್ಟು ಆರೋಗ್ಯ ವ್ಯವಸ್ಥೆಯಲ್ಲಿ ಇನ್ನೂ ಹೆಚ್ಚಿನ ಖಾಸಗಿ ಕಂಪನಿಗಳನ್ನು ಈ ಯೋಜನೆಯ ಮೂಲಕ ತರಲು ಹೊರಟಿದ್ದಾರಲ್ಲ, ಇದು ಹೇಗೆ ಸರಿ?

ಕಾನೂನು ಹಾಗು ಸಂವಿಧಾನ ಉಲ್ಲಂಘನೆ

ನಿಮ್ಮ ಒಪ್ಪಿಗೆ ಇಲ್ಲದೆ ನಿಮ್ಮ ಮಾಹಿತಿ ಯಾರಿಗೂ ಕೊಡುವುದಿಲ್ಲವೆಂದು ಘೋಷಿಸುತ್ತಾರೆ. ಅದರೆ ನಂಬುವುದು ಹೇಗೆ? ಯೋಜನೆಯು ಪೈಲಟ್ ಹಂತದಲ್ಲಿರಬೇಕಾದರೇ, ಯಾರಿಗೂ ಹೇಳದೆಕೇಳದೆ, ಕೋವಿಡ್ ಲಸಿಕೆ ತೆಗೆದುಕೊಳ್ಳಲು ಆಧಾರ್ ಸಂಖ್ಯೆ ನೀಡಿರುವವರಿಗೆಲ್ಲ, ಹೆಲ್ತ್ ಐ.ಡಿ ಸೃಷ್ಟಿಸಿಬಿಟ್ಟರು! ಇದು ಸರ್ವೋಚ್ಚ ನ್ಯಾಯಾಲಯ ನೀಡಿದ ಕೆ.ಎಸ್.ಪುಟ್ಟುಸ್ವಾಮಿ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ, 9 ನ್ಯಾಯಾಧೀಶರು ನೀಡಿದ ತೀರ್ಪಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಮೊದಲನೆಯದಾಗಿ ನಮ್ಮ ಒಪ್ಪಿಗೆ ಇಲ್ಲದೆ ನಮಗೆ ಹೆಲ್ತ್ ಐ.ಡಿ ತಯಾರಾಗಿದೆ. ನಮ್ಮ ಬಗ್ಗೆ ಮಾಹಿತಿ ಅವರ ಬಳಿ ಇದೆ. ಎರಡನೆಯದಾಗಿ ಆ ತೀರ್ಪಿನಲ್ಲಿ ಹೇಳಿರುವಂತೆ, ಆರೋಗ್ಯ ಮಾಹಿತಿಯು ’ಸೆನ್ಸಿಟಿವ್ ಪರ್ಸನಲ್ ಡೇಟಾ’, ಅದನ್ನು ಸಂಗ್ರಹಿಸುವ ಮುನ್ನ ಅದರ ನಿಯಂತ್ರಣಕ್ಕೆ ಕಾನೂನು ಬೇಕು ಎಂದು ಆದೇಶಿಸಲಾಗಿತ್ತು. ಆದರೆ ಇದನ್ನು ನಿಯಂತ್ರಿಸುವ ಯಾವುದೇ ಕಾನೂನು ಸದ್ಯಕ್ಕಿಲ್ಲ. ಇದನ್ನು ನಿಯಂತ್ರಿಸಬಹುದಾಗಿದ್ದ ’ಪರ್ಸನಲ್ ಡೇಟಾ’ ಪ್ರೊಟೆಕ್ಷನ್ ಬಿಲನ್ನು ಸಹ ಸಂಸತ್ತಿನಲ್ಲಿ ಮಂಡಿಸಲಾಗಿಲ್ಲ. ಹಾಗಾಗಿ ಈ ಮಾಹಿತಿಯನ್ನು ಸಂಗ್ರಹಿಸಿ, ಯಾವುದೇ ರೀತಿಯಲ್ಲಿ ಹಂಚುವುದೇ ಕಾನೂನುಬಾಹಿರ.

ಇಷ್ಟಕ್ಕೂ, ಆರೋಗ್ಯ ಸಂವಿಧಾನದ ರಾಜ್ಯ ಪಟ್ಟಿಯಲ್ಲಿರುವುದು. ಹಾಗಾಗಿ ಆರೋಗ್ಯಕ್ಕೆ ಸಂಬಂಧಪಟ್ಟಂಥೆ ತೀರ್ಮಾನಗಳು ರಾಜ್ಯಗಳಿಗೆ ಬಿಟ್ಟಿದ್ದು. ಇಲ್ಲಿ ರಾಜ್ಯಗಳಿಗೆ ಊ/ಉಹೂ ಎನ್ನಲೂ ಸಹ ಅವಕಾಶವಿರಲಿಲ್ಲ. ಈ ಯೋಜನೆಗಳ ಕರಡು ಭಾರತೀಯ ಭಾಷೆಗಳಲ್ಲಿ ಎಂದಿಗೂ ಲಭ್ಯವಿರಲಿಲ್ಲ. ಕಳೆದ ವರ್ಷವೇ, ಕರಡು ಆರೋಗ್ಯ ಮಾಹಿತಿ ನಿರ್ವಹಣೆ ನೀತಿ (ಹೆಲ್ತ್ ಡೇಟಾ ಮ್ಯಾನೇಜ್ಮೆಂಟ್ ಪಾಲಿಸಿ) ಬಿಡುಗಡೆಯಾದಾಗ, ಇದು ಏಕೆ ಭಾರತೀಯ ಭಾಷೆಗಳಲ್ಲಿ ಲಭ್ಯವಿಲ್ಲ ಎಂದು ಹಲವಾರು ಸಂಘಟನೆಗಳು ಸರ್ಕಾರವನ್ನು ಪ್ರಶ್ನಿಸಿದ್ದವು. ರಾಷ್ಟ್ರೀಯ ಆರೋಗ್ಯ ಮಾಹಿತಿ ನಿರ್ವಹಣೆ ನೀತಿ ಅಗತ್ಯ ಇರಬಹುದು, ಆದರೆ ಅದನ್ನು ರಾಜ್ಯಗಳೊಂದಿಗೆ, ಆರೋಗ್ಯ ಹಕ್ಕುಗಳ ಬಗ್ಗೆ ಕೆಲಸ ಮಾಡುವವರೊಂದಿಗೆ, ಜನಸಾಮಾನ್ಯರೊಂದಿಗೆ, ಶೋಷಿತ ಸಮುದಾಯಗಳ ಪ್ರತಿನಿಧಿಗಳೊಂದಿಗೆ ಚರ್ಚಿಸಿ ತರಬಹುದಲ್ಲವೇ? ಅದುಬಿಟ್ಟು ಕೇಂದ್ರ ಸರ್ಕಾರ ಏಕಪಕ್ಷೀಯವಾಗಿ ಇದನ್ನೇಕೆ ರೂಪಿಸಬೇಕು? ಇದು ಸಂವಿಧಾನದ ಪ್ರಧಾನ ಆಶಯವಾದ ಒಕ್ಕೂಟ ವ್ಯವಸ್ಥೆಯ ಉಲ್ಲಂಘನೆಯಾಗಿದೆ.

ಈ ಯೋಜನೆ ಇನ್‌ಕ್ಲೂಸಿವ್ ಅಲ್ಲ

ಒಂದು ಕಡೆ ಈ ಯೋಜನೆಯಲ್ಲಿ ತಮ್ಮ ಭಾಗವಹಿಸುವಿಕೆ ತಮಗೆ ಬಿಟ್ಟಿದ್ದು ಅಂತಾರೆ. ಇನ್ನೊಂದು ಕಡೆ, ಕೇಂದ್ರ ಯೋಜನೆಗಳ ಫಲಾನುಭವಿಗಳೆಲ್ಲರೂ ಹೆಲ್ತ್ ಐ.ಡಿ ನೀಡಲೇಬೇಕು ಅನುತ್ತಾರೆ. ಇದು ಹೇಗೆ ವಾಲಂಟರಿಯಾಗುತ್ತದೆ? ದೇಶದಲ್ಲಿ ಆಧಾರ್ ಇಲ್ಲದೇ ಕೋಟ್ಯಂತರ ಜನಕ್ಕೆ ಪಡಿತರ ವ್ಯವಸ್ಥೆಯ ಆಹಾರದಿಂದ ವಂಚಿತರಾಗಿದ್ದಾರೆ. ಇನ್ನು ಮುಂದೆ ಹೆಲ್ತ್ ಐ.ಡಿಯಿಂದ ಇದೇ ರೀತಿ ಆಗುವುದಿಲ್ಲ ಅನ್ನುವುದಕ್ಕೆ ಖಾತ್ರಿಯೇನು?

ಎಲ್ಲಕ್ಕಿಂತ ಮುಖ್ಯ ಆತಂಕವೆಂದರೆ, ಈ ಯೋಜನೆಯಡಿ ವಿಮೆ ಕಂಪನಿಗಳಿಗೆ ನಮ್ಮ ಬಗ್ಗೆ ಮಾಹಿತಿ ದೊರಕುವುದು. ಆಸ್ಪತ್ರೆಗಳು ಏನೇನು ಮಾಹಿತಿ ಕೊಡುತ್ತವೆ, ಅದು ಸರಿಯಾಗಿದೆಯೆ ಎಂದು ಸಹ ಖಾತರಿಪಡಿಸಲು ನಮ್ಮೆಲ್ಲರಿಂದಲೂ ಸಾಧ್ಯವಾಗುವುದಿಲ್ಲ. ಈ ಕಾರಣದಿಂದ ನಮ್ಮ ವಿಮೆ ಪ್ರೀಮಿಯಮ್‌ಗಳು ಕಡಿಮೆ ಆಗುತ್ತವೆ ಎಂಬ ಅವರ ಆಶ್ವಾಸನೆಯನ್ನು ನಂಬುವುದಾದರೂ ಹೇಗೆ? ನಮ್ಮ ಮಾಹಿತಿಯನ್ನು ಬಳಸಿಕೊಂಡು ವಿಮೆಯನ್ನು ಹೆಚ್ಚಿಸುವ ಸಾಧ್ಯತೆ ಇದೆ ಎಂದು ಅನೇಕ ತಜ್ಞರು ಎಚ್ಚರಿಸುತ್ತಾರೆ.

ಯಾರಿಗೆ ಅನಾರೋಗ್ಯವಿದೆಯೋ ಅವರು ಅನೇಕ ಬಾರಿ ಆಸ್ಪತ್ರೆಗೆ ಹೋಗುತ್ತಾರೆ, ಹಾಗಾಗಿ ಅವರ ಬಗ್ಗೆ ಹೆಚ್ಚುಹೆಚ್ಚು ಮಾಹಿತಿ ವ್ಯವಸ್ಥೆಯಲ್ಲಿರುತ್ತದೆ. ಇದರಿಂದ ಅವರ ವಿಮೆ ಪ್ರೀಮಿಯಮ್ ಹೆಚ್ಚಾಗುತ್ತದೆಯೋ ಅಥವಾ ಕಡಿಮೆ ಆಗುತ್ತದೆಯೋ? ಹಾಗಾಗಿ ಯಾರಿಗೆ ನಿಜವಾಗಲು ತಪಾಸಣೆ, ಆರೋಗ್ಯ ಸೇವೆ ಬೇಕಾಗುತ್ತದೆಯೋ ಅವರಿಗೆ ಅದು ಸಿಗದೆ ಹೋಗಬಹುದು.

ಸರ್ಕಾರವೂ ಸಾರ್ವಜನಿಕ ವ್ಯವಸ್ಥೆ ವಿಸ್ತರಿಸುವುದನ್ನು ಬಿಟ್ಟು, ವಿಮೆಯೋಜನೆಗಳಿಂದ ಸೇವೆಗಳನ್ನು ನೀಡಲು ಹೊರಟಿರುವಾಗ, ಜನಸಾಮಾನ್ಯರ ಮತ್ತು ಬಡಬಗ್ಗರ ದೃಷ್ಟಿಯಿಂದ ಇದು ಅಪಾಯಕಾರಿ ಬೆಳವಣಿಗೆಯಲ್ಲದೆ ಮತ್ತೇನು?

ಯಾರದೋ ಡೇಟಾ, ಯಾರಿಗೋ ಹಬ್ಬ!

ನಮ್ಮ ಒಪ್ಪಿಗೆ ಇಲ್ಲದೆ ನಮ್ಮ ಮಾಹಿತಿಯನ್ನು ಯಾರ ಜೊತೆಗೂ ಹಂಚಿಕೊಳ್ಳುವುದಿಲ್ಲವೆಂದು ಸರ್ಕಾರವು ಪದೇಪದೇ ಹೇಳುತ್ತಿದೆ. ಆದರೆ ಯೋಜನೆಯ ಮೂಲ ಸ್ಪೂರ್ತಿಯಾದ ನಂದನ್ ನಿಲೇಕಣಿಯವರು ಹೇಳಿರುವುದೀನೆಂದರೆ – ಆರೋಗ್ಯ ಮಾಹಿತಿಯನ್ನು ಮಾರಿಬಿಡಿ. ಅದರಿಂದ ಬರುವ ಹಣವನ್ನು ಆರೊಗ್ಯ ಸೇವೆಗಳಿಗೆ, ಸಾಲ ಪಡೆಯುವುದಕ್ಕೆ, ಜನರ ಕಲ್ಯಾಣಕ್ಕಾಗಿ ಉಪಯೋಗಿಸಿ ಎಂದು. ಈ ಒಂದು ಉದ್ದೇಶ ಇಟ್ಟುಕೊಂಡು ವ್ಯವಸ್ಥೆ ಸಿದ್ಧಪಡಿಸಿದ ಮೇಲೆ ನಿಜವಾಗಲು ನಮ್ಮ ಮಾಹಿತಿ ಭದ್ರವಾಗಿರುತ್ತದೆ ಎಂದು ಅನಿಸುತ್ತದೆಯೆ?

ಇಷ್ಟಕ್ಕೂ ನಮ್ಮ ದೇಶದಲ್ಲಿ ಇಂತಹ ಡಿಜಿಟಲ್ ವ್ಯವಸ್ಥೆಯ ಬಗ್ಗೆ ಎಲ್ಲರಿಗೂ ಮಾಹಿತಿ ಇಲ್ಲದಿರಬಹುದು. ಆಗ ಆಸ್ಪತ್ರೆಗಳು ನಿಜವಾಗಿಯೂ ನಮ್ಮ ಒಪ್ಪಿಗೆ ಪಡೆದೇ ಮಾಹಿತಿ ಹಂಚುತ್ತಾರೆ ಎಂದು ಯಾರಿಗಾದರು ನಂಬಿಕೆ ಇದೆಯೆ?

ಈ ಯೋಜನೆಯಡಿಯಲ್ಲಿ ಸೇವೆಗಳನ್ನು ನೀಡುವುದು ಸರ್ಕಾರವಲ್ಲ – ಖಾಸಗಿ ಕಂಪನಿಗಳು. ಸಾಫ್ಟ್‌ವೇರ್ ಕಂಪನಿಗಳಿಗೆ ಇದು ಜಾಕ್‌ಪಾಟ್. ಆನ್‌ಲೈನ್ ಫಾರ್ಮ ಕಂಪನಿಗಳಿಗೂ ಸಹ. ಈ ಯೋಜನೆ ಪ್ರಕಟವಾದ ಮೂರು ದಿವಸಗಳ ನಂತರ ಅಂಬಾನಿ ಗ್ರೂಪ್‌ನವರು ನೆಟ್ ಮೆಡ್ಸ್ ಎಂಬ ಔಷಧ ಮಾರಾಟ ಕಂಪನಿಯಲ್ಲಿ 620 ಕೋಟಿ ಹೂಡಿ 60% ಸ್ಟೇಕ್ ಪಡೆದರು. ಈ ಯೋಜನೆಯು ’ಹೆಲ್ತ್ ಕೇರ್ ಸೆಕ್ಟರ್’ಗೆ  ’ಸುವರ್ಣಾವಕಾಶ’ವೆಂದು ಈಗಾಗಲೆ ಹೇಳಲಾಗಿದೆ.

ಮುಂದೇನು?

ಈ ಯೋಜನೆಯ ಹಲವು ಅಂಶಗಳ ಬಗ್ಗೆ ಅನೇಕ ಸಂಘಟನೆಗಳು ತಮ್ಮ ಆತಂಕ ಮತ್ತು ವಿರೋಧವನ್ನು ದಾಖಲಿಸಿವೆ. ಆದರೆ ಈ ಯೋಜನೆಯ ಅಗತ್ಯತೆಯ ಬಗ್ಗೆಯೇ ಮುಖ್ಯ ಪ್ರಶ್ನೆಯನ್ನು ಎತ್ತಬೇಕಾಗಿದೆ. ಈ ಲೇಖನದ ಜೊತೆಗಿರುವ, ಈ ಯೋಜನೆ ಏನು ಮಾಡುತ್ತದೆ ಎಂಬ ಚಿತ್ರಗಳನ್ನು ನೋಡಿ. ಇದು ನಮ್ಮ ಭಾರತದ ಮೂಲ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುತ್ತದೆ ಎನಿಸುತ್ತದೆಯೆ? ಕೊನೆ ಪಕ್ಷ ಇಂತಹ ಜಟಿಲವಾದ ವ್ಯವಸ್ಥೆಯ ಬಗ್ಗೆ ಜನರು ತಮ್ಮ ಅಭಿಪ್ರಾಯ ದಾಖಲಿಸುವುದು ಹೇಗೆ, ಅವರು ಅರ್ಥ ಮಾಡಿಕೊಳ್ಳುವುದು ಹೇಗೆ? ಯಾವುದಕ್ಕೂ ಸ್ಪಷ್ಟತೆಯಿಲ್ಲ.

ಈ ವ್ಯವಸ್ಥೆ ಖಾಸಗಿಯವರ ಲಾಭಕ್ಕೆ ಬಂದಿರುವುದು ಎಂಬುದು ಮೇಲ್ನೋಟಕ್ಕೇ ಸ್ಪಷ್ಟವಾಗಿ ಗೋಚರಿಸುತ್ತದೆ. ವಿಮೆ ಕಂಪನಿಗಳು, ಡೇಟಾವನ್ನು ಬಂಡವಾಳವನ್ನಾಗಿಸಿಕೊಂಡಿರುವ ಅನೇಕ ಕಂಪನಿಗಳು, ಖಾಸಗಿ ಆರೋಗ್ಯ ಕ್ಷೇತ್ರ – ಇವರೆಲ್ಲರಿಗೂ ಲಾಭವಾಗುವ ಯೋಜನೆಯಿದು. ಇದು ಕಾಯಂ ಆಗಿ ಜಾರಿಯಾದರೆ ಕೋಟ್ಯಂತರ ಅವಕಾಶವಂಚಿತ ಜನರನ್ನು ಆರೋಗ್ಯ ಸೇವೆಗಳಿಂದ ವಂಚಿಸಲಿದೆ. ನಮಗೆ ಬೇಕಾಗಿರುವುದು ಉತ್ತಮ ಸಾರ್ವಜನಿಕ ಆರೋಗ್ಯ ವ್ಯವಸ್ಥೆ. ಇಂತಹ ಕಾನೂನುಬಾಹಿರ ವ್ಯವಸ್ಥೆಯನ್ನು ಸಂಪೂರ್ಣವಾಗಿ ತಿರಸ್ಕರಿಸಿ, ಸರ್ವರಿಗೂ ಉಚಿತ, ಗುಣಮಟ್ಟ ಆರೋಗ್ಯ ಒದಗಿಸಿ ಎಂದು ಗಟ್ಟಿಯಾಗಿ ಕೇಳಬೇಕಿದೆ.

ವಿನಯ್ ಕೂರಗಾಯಲ ಶ್ರೀನಿವಾಸ

ವಿನಯ್ ಕೂರಗಾಯಲ ಶ್ರೀನಿವಾಸ
ವಕೀಲರು ಮತ್ತು ಬೀದಿ ವ್ಯಾಪಾರಿಗಳ ಸಂಘದ ಮುಖಂಡರು. ಆಲ್ಟರ್‍ನೇಟಿವ್ ಲಾ ಫೋರಂನಲ್ಲಿ ತೊಡಗಿಸಿಕೊಂಡಿರುವ ವಿನಯ್ ಹಲವು ಹೋರಾಟಗಳಲ್ಲಿ ಭಾಗಿಯಾಗಿರುವುದಲ್ಲದೆ, ಸಂವಿಧಾನದ ಪ್ರಚಾರಕ್ಕಾಗಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.


ಇದನ್ನೂ ಓದಿ: ಲಖಿಂಪು‌ರ್‌ ಹತ್ಯಾಕಾಂಡ: ಬುಧವಾರ ವಿಚಾರಣೆ ನಡೆಸಲಿರುವ ಸುಪ್ರೀಂಕೋರ್ಟ್

1 COMMENT

  1. ಹೆಲ್ತ್ ಐಡಿ ಬಗ್ಗೆ ನನಗೆ ಮೊದಲೇ ಅನುಮಾನ ಇತ್ತು, ಅದು ನಿಜವಾಗಿದೆ. ಅತ್ಯಗತ್ಯ ಆರೋಗ್ಯ ಸೇವೆಯನ್ನು ಪ್ರಜೆಗಳಿಗೆ ತಲುಪಿಸುವ ಪರಿಯಾಗಿ ಈ ಐಡಿ ರೂಪಿಸಿರುವರೆ? ಖಂಡಿತ ಇಲ್ಲ. ಈ ಸರ್ಕಾರ ಮಾಡುತ್ತಿರುವುದೆಲ್ಲಾ ಪ್ರೈವೇಟ್ ಲೂಟಿಗೆ ಬೇಕಾದ ಬೇಸ್ ವರ್ಕ್, ಅಷ್ಟೇ!

LEAVE A REPLY

Please enter your comment!
Please enter your name here