ಯುಎಇನಲ್ಲಿ ನಡೆಯುತ್ತಿರುವ ಟಿ-20 ವಿಶ್ವಕಪ್‌ ಟೂರ್ನಿಯ ಹನ್ನೆರಡರ ಹಂತದಲ್ಲಿ ಭಾನುವಾರ ಭಾರತ ಮತ್ತು ಪಾಕಿಸ್ತಾನ ತಂಡಗಳು ಸೆಣಸಾಡಿದವು. ಪಂದ್ಯದ ಆರಂಭಕ್ಕೂ ಮುನ್ನ ಬ್ಲಾಕ್‌ ಲೈವ್ಸ್‌ ಮ್ಯಾಟರ್ಸ್ Black Lives Matters ಚಳಿವಳಿಗೆ ಬೆಂಬಲ ಸೂಚಿಸಿ ಭಾರತ ಮತ್ತು ಪಾಕ್ ಕ್ರಿಕೆಟ್‌ ತಂಡಗಳು ಮಂಡಿಯೂರಿ ಗಮನ ಸೆಳೆದವು.

ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ಮುಂದಾಳತ್ವದಲ್ಲಿ ಭಾರತದ ಆಟಗಾರರು ಮಂಡಿಯೂರಿ ಚಳವಳಿಗೆ ಬೆಂಬಲ ಸೂಚಿಸಿದಾಗ ಪಾಕಿಸ್ತಾನದ ಆಟಗಾರರೂ ತಮ್ಮ ಎದೆಯ ಮೇಲೆ ಕೈಯಿಟ್ಟು ಅದಕ್ಕೆ ಬೆಂಬಲಿಸಿದ್ದಾರೆ. ಕ್ರೀಡಾಂಗಣದ ಹೊರಗೆ ಭಾರತದ ಆಟಗಾರರು ಬ್ಲಾಕ್‌ ಲೈವ್ಸ್‌ ಮ್ಯಾಟರ್ಸ್ ಎಂದಾಗ ಕ್ರೀಡಾಂಗಣದ ಒಳಗಿದ್ದ ರೋಹಿತ್ ಶರ್ಮ ಹಾಗೂ ಕೆ.ಎಲ್‌.ರಾಹುಲ್‌‌ ಮಂಡಿಯೂರಿದರು. ಪಾಕ್‌ ಆಟಗಾರರು ಎದೆಯ ಮೇಲೆ ಕೈಯಿಟ್ಟು ಗೌರವ ಸೂಚಿಸಿದರು.

ಪಂದ್ಯದ ನಂತರ ಈ ಕುರಿತು ಪ್ರತಿಕ್ರಿಯಿಸಿದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ, “Black Lives Matters ಚಳಿವಳಿಗೆ ಬೆಂಬಲ ಸೂಚಿಸುವ ಈ ನಿರ್ಧಾರವು ನಮ್ಮ ಮ್ಯಾನೇಜ್‌ಮೆಂಟ್ ಕಡೆಯಿಂದ ಬಂದಿತ್ತು. ಅದಕ್ಕೆ ನಾವು ಒಪ್ಪಿದ ನಂತರ ಪಾಕ್ ತಂಡ ಸಹ ಬೆಂಬಲಿಸುವುದಾಗಿ ತಿಳಿಸಿತು. ಈ ರೀತಿಯಾಗಿ ಗೌರವ ಸಲ್ಲಿಸಿದೆವು” ಎಂದಿದ್ದಾರೆ.

ಕಳೆದ ವರ್ಷ ಮೇ ತಿಂಗಳಿನಲ್ಲಿ ಆಫ್ರಿಕನ್‌-ಅಮೆರಿಕನ್‌ ಪ್ರಜೆ, ಕಪ್ಪು ವರ್ಣೀಯ ಜಾರ್ಜ್ ಪ್ಲಾಯ್ಡ್‌ ಅವರನ್ನು ಅಮೆರಿಕದ ಪೊಲೀಸ್‌ ಅಧಿಕಾರಿ ಡೆರೇಕ್‌ ಚೌವಿನ್‌ ಜನಾಂಗೀಯ ನಿಂದನೆ ಮಾಡಿ ಕೊಲೆ ಮಾಡಿದ್ದರು. ಮಂಡಿಯಿಂದ ಪ್ಲಾಯ್ಡ್ ಅವರ ಕತ್ತು ಹಿಸುಕಿ ಕೊಂದ ವಿಡಿಯೋ ವೈರಲ್ ಆಗಿತ್ತು. ಆಗ ಇಡೀ ವಿಶ್ವವೇ ಕಪ್ಪು ವರ್ಣಿಯರ ಪರ ನಿಂತು, ಆ ಕೊಲೆಯನ್ನು ಖಂಡಿಸಿತ್ತು. ಅಲ್ಲಿಂದ ಪಶ್ಚಾತಾಪದ ರೀತಿಯಲ್ಲಿ ಮಂಡಿಯೂರಿ ಕ್ಷಮೆ ಕೋರುವ, ಕಪ್ಪು ಜನರ ಪರ ನಿಲ್ಲುವ ಪದ್ಧತಿ ಜಾಲ್ತಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಭಾರತ ತಂಡವು ಮಂಡಿಯೂರಿದ್ದು, ಪ್ರಪಂಚದ ಗಮನ ಸೆಳೆದಿದೆ. ಬಹಳಷ್ಟು ಜನ ಈ ಪ್ರಯತ್ನವನ್ನು ಬೆಂಬಲಿಸಿದ್ದಾರೆ.

ಇದನ್ನೂ ಓದಿರಿ: ಮಂಡ್ಯದಲ್ಲಿ ಅಮಾನವೀಯ ಜಾತಿ ದೌರ್ಜನ್ಯ: ದಲಿತ ಯುವಕನ ಮೇಲೆ ಹಲ್ಲೆ, ಹಸುವಿಗೆ ಕಟ್ಟಿ ಮೆರವಣಿಗೆ

ಆದರೆ ಬೆಂಬಲದ ಜೊತೆಗೆ ಭಾರತದ ತಂಡದ ಈ ಕ್ರಮಕ್ಕೆ ಟೀಕೆ ಸಹ ಕೇಳಿಬಂದಿದೆ. ಬೇರೆ ದೇಶದಲ್ಲಿನ ಜನಾಂಗೀಯ ತಾರತಮ್ಯವನ್ನು ಖಂಡಿಸುವ ಭಾರತೀಯ ಕ್ರಿಕೆಟ್ ತಂಡ ತಮ್ಮದೇ ದೇಶದಲ್ಲಿ ಇಂದು ದಲಿತರ ಮೇಲೆ, ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ತಾರತಮ್ಯಕ್ಕೆ ಕುರುಡಾಗಿದೆ. ಇದು ಅವರ ಹಿಪೋಕ್ರಸಿಯ (ಆಷಾಢಭೂತಿತನ) ಭಾಗವಾಗಿದೆ ಎಂದು ಹಲವರು ಟೀಕಿಸಿದ್ದಾರೆ.

“ಕಪ್ಪು ವರ್ಣಿಯರ ಮೇಲಿನ ಬಿಳಿ ವರ್ಣಿಯರ (ಜನಾಂಗೀಯ) ದಾಳಿಯನ್ನು ಖಂಡಿಸಿ, ಜಗತ್ತಿನಾದ್ಯಂತ ನಡೆಯುತ್ತಿರುವ #BlackLivesMatter ಚಳವಳಿಗೆ ನಿನ್ನೆ ಭಾರತ ತಂಡ ಮಂಡಿಯೂರಿ ಬೆಂಬಲ ಸೂಚಿಸಿದ್ದು ತುಂಬಾ ಮೆಚ್ಚುವ ನಡೆಯಾಗಿದೆ. ಇದೇ ರೀತಿ ಭಾರತದಲ್ಲಿ ಜಾತಿಯ ಕಾರಣಕ್ಕಾಗಿ ನಡೆಯುತ್ತಿರುವ ದಲಿತರ ಮೇಲಿನ ದೌರ್ಜನ್ಯ, ದಬ್ಬಾಳಿಕೆಗಳನ್ನು ಖಂಡಿಸಿ ದೇಶದಾದ್ಯಂತ ನಡೆಯುವ #DalitLivesMatter ಚಳವಳಿಯನ್ನು ಬೆಂಬಲಿಸಬೇಕೆಂದು ನಮ್ಮ ಭಾರತ ತಂಡವನ್ನು ವಿನಂತಿಸಿಕೊಳ್ಳುತ್ತೇನೆ” ಎಂದು ದಲಿತ ಲೇಖಕ ಪ್ರಜ್ವಲ್ ಶಶಿ ತಗಡೂರು ಅವರು ಎಫ್‌ಬಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.

“ನಮ್ಮಲ್ಲಿಯೇ ದಲಿತರ ಮೇಲೆ, ಮುಸ್ಲಿಮರ ಮೇಲೆ, ಕೆಳಜಾತಿಯ ಹೆಂಗಸರ ಮೇಲೆ, ಮುಗ್ಧ ದಲಿತ ಪುಟ್ಟ ಹೆಣ್ಮಕ್ಕಳ ಮೇಲೆ ಆ ಪಾಟಿ ಅತ್ಯಾಚಾರ, ಕ್ರೌರ್ಯ, ಚಿತ್ರಹಿಂಸೆ, ಅವಮಾನ, ಮಾಬ್ ಲಿಂಚಿಂಗ್ ನಡೆಯುತ್ತಲೇ ಇರುವಾಗ ಇವರು ಎಲ್ಲಿ ಹೋಗಿದ್ದರು? ಆಗ ಇವರ ಮಂಡಿಗೆ ಏನಾಗಿರುತ್ತದೆ? ನಿಮ್ಮಂತ ಡಬಲ್ ಸ್ಟಾಂಡರ್ಡ್ ಸ್ವಾರ್ಥಿಗಳ ಸಪೋರ್ಟ್ ಕಪ್ಪು ಜನರಿಗೆ ಖಂಡಿತಾ ಬೇಡ…!” ಎಂದು ಆ ಶ್ರೀ ಕ ಪೋಸ್ಟ್‌ ಮಾಡಿದ್ದಾರೆ.

ಇದು ಹಿಪೋಕ್ರಸಿಯ ಪರಮಾವಧಿ ಎಂದು ನೆಟ್ಟಿಗರು ಟೀಕಿಸಿ‌ದ್ದಾರೆ. ಕವಯತ್ರಿ ಮೀನಾ ಕಂದಸ್ವಾಮಿ ಟ್ವೀಟ್ ಮಾಡಿ, “ಇದು ಭಾರತದ ಕ್ರಿಕೆಟರ್‌ಗಳ ಹಿಪೋಕ್ರಸಿ. ಇವರು ಒಮ್ಮೆಯೂ #ದಲಿತ್‌ ಲೈವ್ಸ್‌ ಮ್ಯಾಟರ್ಸ್, #ಮುಸ್ಲಿಂಲಿವ್ಸ್‌ಮ್ಯಾಟರ್ಸ್, #ಫಾರ್‍ಮರ್ಸ್‌‌ಲಿವ್ಸ್‌‌ಮ್ಯಾಟರ್ಸ್ ಎನ್ನಲಿಲ್ಲ” ಎಂದು ಆಕ್ಷೇಪ ಎತ್ತಿದ್ದಾರೆ.

“ಲಿಂಚಿಂಗ್‌ ನಡೆದಾಗ ನೀವು ಪ್ರತಿಕ್ರಿಯಿಸಲಿಲ್ಲ. ಹತ್ಯಾಕಾಂಡದ ಸಮಯದಲ್ಲಿ ನೀವು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ, ರೈತರನ್ನು ಕೊಂದಾಗ ಮಾತನಾಡಲಿಲ್ಲ, ಬೆಲೆ ಏರಿಕೆಯನ್ನು ಅಸಹಜವಾಗಿ ಏರಿಕೆ ಮಾಡಿದಾಗ ನೀವು ಮಾತನಾಡಲಿಲ್ಲ. ಈಗ ನಿಮಗೆ ಬ್ಲಾಕ್‌ಲಿವ್ಸ್‌ಮ್ಯಾಟರ್ಸ್ ಬೇಕೆ?” ಎಂದು ಸಂಗಮೇಶ್‌ ಎಂಬವರು ಪ್ರಶ್ನಿಸಿದ್ದಾರೆ.


 ಇದನ್ನೂ ಓದಿರಿ: ಬೆಳಗಾವಿ ಮುಸ್ಲಿಂ ಯುವಕನ ಕೊಲೆ ಪ್ರಕರಣ: ಶ್ರೀರಾಮ ಸೇನೆ ಮುಖಂಡ ಸೇರಿ 10 ಜನರ ಬಂಧನ

LEAVE A REPLY

Please enter your comment!
Please enter your name here