Photo Courtesy: The print

ಅರ್ಬಾಜ್ ಮುಲ್ಲಾ ಎಂಬ ಮುಸ್ಲಿಂ ಯುವಕನನ್ನು ಬರ್ಬರವಾಗಿ ಕೊಲೆಗೈದು, ತಲೆ ಮತ್ತು ಕಾಲುಗಳನ್ನು ಕತ್ತರಿಸಿ ಬೆಳಗಾವಿ ಜಿಲ್ಲೆಯ ಖಾನಪುರದ ರೈಲ್ವೆ ಹಳಿ ಮೇಲೆ ಎಸೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರಾಮ ಸೇನೆ ಹಿಂದೂಸ್ತಾನ್ ಸಂಘಟನೆಯ ಮುಖ್ಯಸ್ಥ ಪುಂಡಲಿಕ್ ಮಹಾರಾಜ್ ಮುಟ್ಗೇಕರ್ ಸೇರಿದಂತೆ ಒಟ್ಟು 10 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಅವರಲ್ಲಿ ಅರ್ಬಾಜ್ ಪ್ರೀತಿಸುತ್ತಿದ್ದ ಹುಡುಗಿಯ ಕುಟುಂಬಸ್ಥರು ಸೇರಿದ್ದಾರೆ.

ಸೆಪ್ಟಂಬರ್ 29 ರಂದು ಅರ್ಬಾಜ್ ಮುಲ್ಲಾ ಎಂಬ ಯುವಕನ ಛಿದ್ರವಾದ ಶವ ಪತ್ತೆಯಾಗಿತ್ತು. ಹಿಂದೂ ಯುವತಿಯನ್ನು ಪ್ರೀತಿಸುತ್ತಿದ್ದ ಕಾರಣಕ್ಕೆ ಅವರನ್ನು ಕೊಲೆಗೈಯಲಾಗಿದೆ ಮತ್ತು ಹುಡುಗಿಯ ಕುಟುಂಬಸ್ಥರು ಕೊಲೆಗೆ ಸುಪಾರಿ ನೀಡಿದ್ದಾರೆ ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದೇ ಆರೋಪವನ್ನು ಕೊಲೆ ನಡೆದ ದಿನದಿಂದಲೇ ಅರ್ಬಾಜ್ ತಾಯಿ ನಜೀಮ ಶೇಖ್ ಮಾಡಿದ್ದರು.

ಬೆಳಗಾವಿ ಜಿಲ್ಲೆಯ ಖಾನಾಪುರ ಪಟ್ಟಣದ ನಿವಾಸಿ ಅರ್ಬಾಜ್ ಅಫ್ತಾಬ್ ಮುಲ್ಲಾ (24) ಸೆಪ್ಟಂಬರ್ 28 ರಿಂದ ಕಾಣೆಯಾಗಿದ್ದನು ಎಂದು ಅವರ ಪೋಷಕರು ದೂರಿದ್ದರು. ಅವರ ತಾಯಿ ನಜೀಮ ಶೇಖ್ ‘ಶ್ರೀರಾಮಸೇನೆ ಹಿಂದೂಸ್ತಾನ್’ ಎನ್ನುವ ಸಂಘಟನೆಯ ಯುವಕರು ನನ್ನ ಮಗನಿಗೆ ಬೆದರಿಕೆ ಹಾಕಿದ್ದರು. ಹುಡುಗಿಯೊಂದಿಗೆ ಸೇರಿ ಹಣ ವಸೂಲಿ ಮಾಡಿದ್ದರು ಎಂದು ದೂರಿದ್ದರು.

2018ರಲ್ಲಿ ಶ್ರೀರಾಮ ಸೇನೆಯಿಂದ ಹೊರಬಂದು ಶ್ರೀರಾಮಸೇನೆ ಹಿಂದೂಸ್ತಾನ್ ಎಂಬ ಸಂಘಟನೆ ಕಟ್ಟಿಕೊಂಡಿದ್ದ ಪುಂಡಲಿಕ್ ಮಹಾರಾಜ್ ಮುಟ್ಗೇಕರ್ ಈ ಪ್ರಕರಣದ ಪ್ರಮುಖ ಆರೋಪಿ ಎನ್ನಲಾಗಿದೆ. ಹುಡುಗಿಯ ಪೋಷಕರಾದ ಶುಶೀಲ ಈರಪ್ಪ (42) ಮತ್ತು ಈರಪ್ಪ ಬಸವಣ್ಣಿ ಕುಂಬಾರ (54) ಅರ್ಬಾಜ್‌ನನ್ನು ಕೊಲೆಗೈಯಲು ಗುತ್ತಿಗೆ ಕೊಲೆಗಾರರನ್ನು ನೇಮಿಸಿಕೊಂಡಿದ್ದಾರೆ ಎಂದು ಪೊಲೀಸರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕುಥಬುದ್ಧಿನ್ ಅಲ್ಲಾಬಕ್ಷ್ (36), ಮಾರುತಿ ಪ್ರಹ್ಲಾದ್ (30), ಮಂಜುನಾಥ್ ತುಕಾರಾಂ (25), ಗಣಪತಿ ಜ್ಞಾನೇಶ್ವರ (27), ಪ್ರಶಾಂತ್ ಕಲ್ಲಪ್ಪ (28) ಮತ್ತು ಪ್ರವೀಣ್ ಶಂಕರ್ (28)  ಮತ್ತು ಶ್ರೀಧರ್ ಮಹದೇವದೋಣಿ (30) ಇತರ ಬಂಧಿತರಾಗಿದ್ದಾರೆ.

ದಿ ಟೆಲಿಗ್ರಾಫ್‌ನೊಂದಿಗೆ ಮಾತನಾಡಿರುವ ಉರ್ದು ಶಾಲೆಯ ಶಿಕ್ಷಕಿಯಾಗಿರುವ ನಜೀಮ ಶೇಖ್ “ನನ್ನ ಮಗ ಅರ್ಬಾಜ್, ಕುಂಬಾರ್ ಎಂಬುವವರ ಮಗಳನ್ನು ಪ್ರೀತಿಸುತ್ತಿರುವುದು ತಿಳಿದುಬಂದಿತ್ತು. ಆಗ ನಾನು ಅದನ್ನು ತಪ್ಪಿಸಲು ನಮ್ಮ ಮನೆಯಿಂದ ಖಾನಪುರದಿಂದ ಬೆಳಗಾವಿಗೆ ಬದಲಿಸಿದ್ದೆ. ಇದೆಲ್ಲ ಸರಿ ಬರುವುದಿಲ್ಲವೆಂದು ಬುದ್ದಿವಾದ ಹೇಳಿದ್ದೆ. ಆದರೆ ಒಂದು ದಿನ ಕುಂಬಾರ್‌ನೊಂದಿಗೆ ಶ್ರೀರಾಮ ಸೇನೆಯ ಪುಂಡಲಿಕ್ ಮಹಾರಾಜ್, ಬಿರ್ಜೆ ಎಂಬುವವರ ಬಂದು ನಮಗೆ ಧಮಕಿ ಹಾಕಿದರು. ಕೊಲೆ ಬೆದರಿಕೆ ಹಾಕಿದರು. ನನ್ನ ಮಗನ ಫೋನ್ ಕಿತ್ತುಕೊಂಡು ಎಲ್ಲಾ ನಂಬರ್ ಗಳನ್ನು ಡಿಲೀಟ್ ಮಾಡಿದ್ದರು” ಎಂದಿದ್ದಾರೆ.

ಆಗ ನನ್ನ ಮಗ ಆ ಹುಡುಗಿಯನ್ನು ಮರೆತಿದ್ದ. ಆದರೆ ಸೆಪ್ಟಂಬರ್ 26 ರಂದು ಪುಂಡಲಿಕ್ ಮಹಾರಾಜ್ ಬಂದು ನಮ್ಮಲ್ಲಿ ಮತ್ತೆ ಜಗಳ ಮಾಡಿದ್ದರು. ಈಗಾಗಲೇ ನನ್ನ ಮೇಲೆ 40 ಪ್ರಕರಣಗಳಿವೆ. ಇನ್ನೊಂದು ಆದರೆ ದೊಡ್ಡದೇನಲ್ಲ ಎಂದು ಬೆದರಿಸಿದ್ದ. ಅದೇ ಸಮಯಕ್ಕೆ ಆ ಹುಡುಗಿ ಫೋನ್ ಮಾಡಿ 7,000 ಹಣದ ಬೇಡಿಕೆ ಇಟ್ಟಿದ್ದಳು. ನಾವದನ್ನು ಪಾವತಿಸಿದೆವು. ನಂತರ ಮತ್ತೆ 90,000 ಬೇಡಿಕೆ ಇಟ್ಟಿದ್ದಳು. ಆಗ ನನ್ನ ಮಗ ತನ್ನ ಕಾರನ್ನು 70,000 ರೂಗೆ ಮಾರಿದ್ದ. ಆ ಹಣ ಎಲ್ಲಿಗೆ ಹೋಯಿತು ಎಂದು ತಿಳಿದಿಲ್ಲ, ನನ್ನ ಮಗನನ್ನೂ ಕಳೆದುಕೊಂಡೆ ಎಂದು ಅವರು ಕಣ್ಣೀರು ಹಾಕಿದ್ದಾರೆ.


ಇದನ್ನೂ ಓದಿ: ಉತ್ತರ ಪ್ರದೇಶ: ದಲಿತ ಬಾಲಕಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ, ಇಬ್ಬರ ಬಂಧನ

LEAVE A REPLY

Please enter your comment!
Please enter your name here